ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ, ಪ್ರಪಂಚದಾದ್ಯಂತ ಮಂಕಿಪಾಕ್ಸ್ ರೋಗದ ಅಪಾಯವೂ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ನೆಟ್‌ವರ್ಕ್ ಈ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಅಂಕಿಅಂಶಗಳ ಪ್ರಕಾರ, ಇದುವರೆಗೆ 58 ದೇಶಗಳಲ್ಲಿ 3,417 ರೋಗಿಗಳು ದೃಢಪಟ್ಟಿದ್ದಾರೆ. ಇದರ ಮೊದಲ ಪ್ರಕರಣವನ್ನ ಮೇ 6 ರಂದು ಬ್ರಿಟನ್‌ನಲ್ಲಿ ಪತ್ತೆಹಚ್ಚಲಾಗಿತ್ತು ಎಂದು ತಿಳಿದುಬಂದಿದೆ.
WHN ಎನ್ನುವುದು ಹಲವಾರು ದೇಶಗಳ ನೂರಾರು ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಸಂಪರ್ಕ ಹೊಂದಿರುವ ನೆಟ್‌ವರ್ಕ್ ಆಗಿದೆ. ಇದು ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗವನ್ನು ಗುರುತಿಸಿ ಪರಿಹರಿಸುವ ಕೆಲಸ ಮಾಡುತ್ತದೆ.
ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಬೇಕೆ ಎಂಬುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಸಭೆ ನಡೆಸಿದೆ. ಹೀಗೆ ಘೋಷಿಸಿದಲ್ಲಿ ಮಂಗನ ಕಾಯಿಲೆಯ ಸೋಂಕನ್ನು ತಪ್ಪಿಸಲು ವಿಶ್ವದಾದ್ಯಂತ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.
WHN ತನ್ನ ಹೇಳಿಕೆಯಲ್ಲಿ WHO ಮಂಕಿಪಾಕ್ಸ್ ಮೇಲೆ ಜಾಗತಿಕ ಕ್ರಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಈ ಸೋಂಕಿನಿಂದ ಜಗತ್ತನ್ನು ರಕ್ಷಿಸಲು ಇದು ಸರಿಯಾದ ಸಮಯ ಎಂದು ನೆಟ್ವರ್ಕ್ ಹೇಳಿದೆ.
ಮಂಕಿಪಾಕ್ಸ್ ಯುರೋಪ್ ಸೇರಿದಂತೆ ಅನೇಕ ಖಂಡಗಳಲ್ಲಿ ಹರಡಿದೆ. ಇಲ್ಲಿಯವರೆಗೆ, ಬ್ರಿಟನ್‌ನಲ್ಲಿ ಸುಮಾರು 800 ಪ್ರಕರಣಗಳು ವರದಿಯಾಗಿವೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಪ್ರಕಾರ, ಯುಕೆಯಲ್ಲಿ ಕೇವಲ 5 ದಿನಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳಲ್ಲಿ 40% ಹೆಚ್ಚಳವಾಗಿದೆ. ಜೂನ್ 16 ರವರೆಗೆ 574 ಪ್ರಕರಣಗಳು ದಾಖಲಾಗಿದ್ದರೆ, ಜೂನ್ 20 ರ ವೇಳೆಗೆ ಈ ಸಂಖ್ಯೆ 793 ಕ್ಕೆ ಏರಿದೆ.
ಯುಕೆ ನಂತರ ಸ್ಪೇನ್, ಜರ್ಮನಿ ಮತ್ತು ಪೋರ್ಚುಗಲ್‌ನಲ್ಲಿ ಮಂಕಿಪಾಕ್ಸ್‌ನ ಹೆಚ್ಚಿನ ಪ್ರಕರಣಗಳಿವೆ. ಇಲ್ಲಿಯವರೆಗೆ ಒಬ್ಬ ರೋಗಿ ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.