Monday, March 9, 2026
Monday, March 9, 2026
Home Blog Page 380

Sahyadri Narayana Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳಾ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ

0

Sahyadri Narayana Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಆರೋಗ್ಯ ಸೇವೆಯಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವೈದ್ಯರು ಹಾಗೂ ಆರೊಗ್ಯ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ನಿರ್ಮಲ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ನಿರ್ಮಲಾ ಎಚ್.ಟಿ, ಜ್ಯೋತಿ ಪಾಲಿ ಕ್ಲಿನಿಕ್ನ ಸ್ತ್ರೀರೋಗ ತಜ್ಞೆ ಡಾ. ವಿಮಲಾ ಶೆಟ್ಟಿ, ಶಿವಮೊಗ್ಗ ಐಎಂಎ ಮಹಿಳಾ ವೈದ್ಯರ ಘಟಕದ ಅದ್ಯಕ್ಷೆ ಸ್ತ್ರೀರೋಗ ತಜ್ಞೆ ಡಾ. ವಿಶಾಲಾಕ್ಷಿ ಮೂಗಿ, ಕೋಟೆ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿ ರೂಪಾ ಎಚ್.ಜಿ, ಹಾಗೂ ಆಶಾ ಕಾರ್ಯಕರ್ತೆ ಭಾಗ್ಯ ಬಿ.ಆರ್. ಸನ್ಮಾನ ಸ್ವೀಕರಿಸಿದರು.

ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಕುಟುಂಬ ಮತ್ತು ಮಕ್ಕಳ ಕ್ಷೇಮಕ್ಕೆ ಆದ್ಯತೆ ಕೊಡುತ್ತಾರೆ. ಆದರೆ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಗಮನಕ್ಕೆ ತೆಗೆದುಕೊಳ್ಳುವುದು ಅಗತ್ಯ, ಇದರಿಂದ ಅವರು ತಮ್ಮ ಕುಟುಂಬದ ಜನರನ್ನು ಚೆನ್ನಾಗಿ ನೋಡಿಕೊಳ್ಳಲು ಮತ್ತು ತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಯಶಸ್ವಿಯಾಗಲು ಸಾಧ್ಯ, ಎಂದು ಡಾ. ವಿಶಾಲಕ್ಷಿ ಮೂಗಿ ಹೇಳಿದರು.

ಡಾ. ವಿಶಾಲಕ್ಷಿ ಅವರು, “ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ, ಕೆಲವೊಮ್ಮೆ ಪುರುಷರಿಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಆರೋಗ್ಯವನ್ನು ಕಡೆಗಣಿಸಿದರೆ, ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯವಾಗದು. ಮಹಿಳೆಯರು ಆರೋಗ್ಯವಂತರಾಗಿದ್ದರೆ, ಅವರು ದೇಶವನ್ನೇ ಆಳುವ ಸಾಮರ್ಥ್ಯ ಹೊಂದಿರುತ್ತಾರೆ,” ಎಂದು ತಿಳಿಸಿದರು. ಮಹಿಳಾ ದಿನಾಚರಣೆಯ ಮಹತ್ವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು; ಮಹಿಳಾ ಹಕ್ಕುಗಳ ಮತ್ತು ಶಿಕ್ಷಣದ ಬಗ್ಗೆ ನಿರಂತರ ಜಾಗೃತಿಯ ಅಗತ್ಯವಿದೆ. “ಶಿಕ್ಷಣದಿಂದ ಜ್ಞಾನ ಬರುತ್ತದೆ, ಮಹಿಳೆ ಶಿಕ್ಷಣ ಪಡೆದರೆ ಮಾತ್ರ ತನ್ನ ಹಕ್ಕುಗಳನ್ನು ಅರಿತುಕೊಳ್ಳಬಲ್ಲಳು” ಎಂದರು.

Sahyadri Narayana Hospital ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಎಸ್‌ ಎಂ ಎನ್‌ ಎಚ್ನ ವೈದ್ಯಕೀಯ ಆಂಕೋಲೊಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ, ಮಹಿಳೆಯರು ಪ್ರತಿದಿನವೂ ಕನಿಷ್ಠ 30 ನಿಮಿಷ ವ್ಯಾಯಾಮಕ್ಕೆ ಮುಡಿಪಾಗಬೇಕೆಂದು ಸಲಹೆ ನೀಡಿದರು. ಅವರು ದಿನನಿತ್ಯದ ಕೆಲಸಗಳ ಕಾರಣಗಳನ್ನು ನೀಡದೆ, ಆರೋಗ್ಯಕ್ಕಾಗಿ ಕೆಲವು ಬದಲಾವಣೆಗಳನ್ನು ಅಥವಾ ಕೆಲವು ತ್ಯಾಗಗಳನ್ನು ಮಾಡಿ ಇದಕ್ಕಾಗಿ ಸಮಯ ಹೊಂದಿಸ ಬೇಕೆಂದು ಹೇಳಿದರು. “ಒಂದು ಧಾರಾವಾಹಿ ನೋಡುವುದನ್ನು ತ್ಯಜಿಸುವದರ ಮೂಲಕ ಅಥವಾ ಅರ್ಧ ಗಂಟೆ ಬೇಗ ಎದ್ದು ವ್ಯಾಯಾಮ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸೂರ್ಯ ನಮಸ್ಕಾರ ಅಥವಾ ನೆಲದ ಮೇಲೆ ಮಾಡುವ ಸರಳ ವ್ಯಾಯಾಮಗಳು ಕೂಡ ಉತ್ತಮ ಆಯ್ಕೆಯಾಗಬಹುದು” ಎಂದು ಅವರು ಸಲಹೆ ನೀಡಿದರು. ಅದರೊಂದಿಗೆ, ಮಹಿಳೆಯರು ತಮ್ಮ ನಾಯಕತ್ವದ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕೆಂದು, ಅವಕಾಶ ಬಂದಾಗ ಅದನ್ನು ಸ್ವೀಕರಿಸಬೇಕೆಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ. ಜಾನ್, ಡಾ. ರೇಖಾ ಟಿ.ಎಸ್, ಡಾ. ರಶ್ಮಿ ವೈಧ್ಯ, ಡಾ. ನಿವೇದಿತಾ ಹೆಗಡೆ, ಡಾ. ಆಶಾಶ್ರಿ ಉಪಾಧ್ಯ, ಡಾ. ಮಿಸ್ಬಾ ಎಚ್. ನಜಮ್, ಡಾ. ರಶ್ಮಿ ಎಚ್, ಡಾ. ಸ್ಮಿತಾ ಟಿ.ಎಂ, ಡಾ. ಸುಜಾತಾ ಕೆ. ಮಾರ್ಕೇಟಿಂಗ್‌ ಜನರಲ್‌ ಮ್ಯಾನೇಜರ್‌ ರಾಜಸಿಂಗ್ ಎಸ್.ವಿ., ಮಾರ್ಕೆಟಿಂಗ್‌ ಮ್ಯಾನೇಜರ್‌ ಶೈಲೇಶ್ ಎಸ್.ಎನ್., ಮತ್ತಿತರರು ಭಾಗವಹಿಸಿದರು.

ಇದಲ್ಲದೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆ.ಸಿ.ಐ ಕ್ಲಬ್, ಹೊಯ್ಸಳ ಕ್ಲಬ್, ಧರ್ಮಸ್ಥಳ ಸಂಘ, ಶಾಶ್ವತಿ ಮಹಿಳಾ ಸಂಘ, ಸಹ್ಯಾದ್ರಿ ಮಹಿಳಾ ಪಟ್ಟಣ ಬ್ಯಾಂಕ್ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

International Women’s Day ಸೈಲ್-ವಿಐಎಸ್‌ಎಲ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0


International Women’s Day ಮಾರ್ಚ್ 08, 2025 ರಂದು ಫ್ಯಾಕ್ಟರಿ ಮೀಟಿಂಗ್‌ಹಾಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳೆಯರು ಮತ್ತು ಬಾಲಕಿಯರಿಗಾಗಿ: ಹಕ್ಕುಗಳು, ಸಮಾನತೆ ಮತ್ತು ಸಬಲತೆ’ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು.

ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ತಮ್ಮ ಭಾಷಣದಲ್ಲಿ ವಿಐಎಸ್‌ಎಲ್‌ನ ಮಹಿಳಾ ಸಮುದಾಯದ ಪ್ರಮುಖ ಸಾಧನೆಗಳನ್ನು ಪ್ರಸ್ತಾಪಿಸುತ್ತಾ ಸಮಾಜಕ್ಕೆ ಮತ್ತು ಕಾರ್ಖಾನೆಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಹಾಗೆಯೇ, ಸೈಲ್-ವಿಐಎಸ್‌ಎಲ್ ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುವ ಮೂಲಕ ಅವರು ತಮ್ಮ ಸಮಾಥ್ಯವನ್ನು ಪ್ರದರ್ಶಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಡಾ|| ಸುಶ್ಮಾ, ಡಾ|| ಶೋಭ, ಶ್ರೀಮತಿಯವರಾದ ಅಪರ್ಣ, ನಾಗರತ್ನ, ಅಮೃತಾ, ರಕ್ಷಿತಾ, ಕುಸುಮ, ಪ್ರೇಮ ಭಾಯಿ, ಗಿರಿಜಾ, ಅಮಿತಾ, ಮಂಜುಶ್ರೀ, ರಮ್ಯ, ಮತ್ತು ತ್ರಿವೇಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶ್ರೀಮತಿ ಶೋಭ ಶಿವಶಂಕರನ್ ಮತ್ತು ಶ್ರೀ ಜೆ.ಜಗದೀಶ್ ರವರೂ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಾರ್ಚ್ 5ರಂದು ಮಹಿಳಾ ಉದ್ಯೋಗಿಗಳಿಗೆ ಮತ್ತು ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ವಿನೋದದ ಆಟಗಳನ್ನು ಆಯೋಜಿಸಲಾಗಿತ್ತು ಮತ್ತು ಪ್ರಶಸ್ತಿ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.

ಡಾ|| ಸುಶ್ಮಾ ಮತ್ತು ಡಾ|| ಶೋಭ ರವರು ಮಹಿಳೆಯರ ಆರೋಗ್ಯ ಸಂಬಂಧಿ ವಿಷಯದ ಕುರಿತು ವಿಐಎಸ್‌ಎಲ್ ನ ಮಹಿಳಾ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರೊಂದಿಗೆ ದಿನಾಂಕ 7ಮತ್ತು 8 ಮಾರ್ಚ್ ರಂದು ಸಂವಾದವನ್ನು ನಡೆಸಿಕೊಟ್ಟರು.

International Women’s Day ಸೈಲ್-ವಿಐಎಸ್‌ಎಲ್ ರಾಂಚಿಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಮತ್ತು ವಿಐಎಸ್‌ಎಲ್‌ನ ಮಹಿಳಾ ಕಾರ್ಮಿಕರು ಭಾಗವಹಿಸಿ ಸೈಲ್ ಅಧ್ಯಕ್ಷರು ಮತ್ತು ಸೈಲ್ ಬೊರ್ಡ್ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಉಚಿತವಾಗಿ ಹೈಬ್ರೀಡ್ ತಳಿಯ ಪಪಾಯ ಮತ್ತು ನುಗ್ಗೆ ಸಸಿಗಳನ್ನು ಮಹಿಳಾ ಕಾರ್ಮಿಕರು ವಿತರಿಸಲಾಯಿತು.

ಡಾ|| ಶೋಭ, ವೈಧ್ಯಾಧಿಕಾರಿ, ವಿಐಎಸ್‌ಎಲ್ ಆಸ್ಪತ್ರೆ ಕಾರ್ಯಕ್ರಮವನ್ನು ನಿರೂಪಿಸಿದರು, ಸಿಬ್ಬಂದಿ, ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.

S.N.Chennabasappa ಶಿವಮೊಗ್ಗದ ಪುರದಾಳ್ ಕ್ರಾಸ್ ನಲ್ಲಿ ಸಿರಿಮಲ್ಲಿಗೆ ನಿವಾಸಿಗಳ ಸಂಘ ಉದ್ಘಾಟನೆ

0

S.N.Chennabasappa ಶಿವಮೊಗ್ಗದ ಸಾಗರ ರಸ್ತೆಯ ಪುರದಾಳ್ ‌ಕ್ರಾಸ್ ನಲ್ಲಿ ಸಿರಿಮಲ್ಲಿಗೆ ನಿವಾಸಿಗಳ ಸಂಘ ವು ಉದ್ಘಾಟನೆಗೊಂಡಿತು. ಶಿವಮೊಗ್ಗ ನಗರ ವಿಧಾಸಭಾ ಕ್ಷೇತ್ರದ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ ಅವರು ಉದ್ಘಾಟಿಸಿದರು.
ಬಡಾವಣೆಯ ಫಲಕಕ್ಕೆ ಪುಷ್ಪಾರ್ಚನೆ
ಮಾಡಿ, ಉದ್ಯಾನವನದಲ್ಲಿ ಸಸಿ ನೆಟ್ಟು ನೀರೆರೆದರು.
ನಂತರ ಮಾತನಾಡಿದ ಶಾಸಕರು
ನಿವಾಸಿಗಳ ಸಂಘಕ್ಕೆ ಎಲ್ಲರೀತಿಯ ನೆರವು ಮತ್ತು‌ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನ ಸಿರಿಮಲ್ಲಿಗೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಡಾ.ಸುಧೀಂದ್ರ ಅವರು ವಹಿಸಿದ್ದರು. ಸಂಘದ ಗೌರವಾಧ್ಯಕ್ಷರಾದ ಅಧ್ಯಕ್ಷ ಚಂದ್ರಕಾಂತ್,ಓಂಕಾರಪ್ಪ ,ಉಪಾಧ್ಯಕ್ಷ ದೇವರಾಜ್ ಕಾರ್ಯದರ್ಶಿ ಶ್ರೀಧರ್ ಉಪಸ್ಥಿತರಿದ್ದರು

Kateel Ashok Pai Memorial Institute ಆಶಾ ಕಾರ್ಯಕರ್ತೆಯರು ಸಮಾಜ ಸ್ವಾಸ್ಥ್ಯದ ಹರಿಕಾರರು – ಡಾ.ಶಿವಕುಮಾರ್

0

Kateel Ashok Pai Memorial Institute ಮಾನಸ ಟ್ರಸ್ಟ್ ನ ಕಟೀಲ ಅಶೋಕ್ ಪೈ ಸ್ಮಾರಕ ಕಾಲೇಜು ,ಸಮಾಜಕಾರ್ಯ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಈ ದಿನ ಕೊನಗವಳ್ಳಿ ಗ್ರಾಮ ಪಂಚಾಯಿತಿಯ ಸೇವಾಲಾಲ್ ನಗರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಜನ ಆಶ ಕಾರ್ಯಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರು ಸ್ತ್ರೀ ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥರು ಆಗಿರುವ ಡಾ. ಶಿವಕುಮಾರ್ ರವರು ಮಾತನಾಡುತ್ತಾ ಆಶಾ ಕಾರ್ಯಕರ್ತರು ಸಮಾಜದ ಸ್ವಾಸ್ಥ್ಯದ ಹರಿಕಾರರಿದ್ದಂತೆ ಎಂದು ತಿಳಿಸಿದರು.

ವಿಶ್ವ ಮಹಿಳಾ ದಿನಾಚರಣೆಯನ್ನು ಕೊನೆಗವಳ್ಳಿ ಗ್ರಾಮ ಪಂಚಾಯಿತಿಯ ಎಂಟು ಜನ ಆಶಾ ಕಾರ್ಯಕರ್ತರನ್ನು ಗೌರವಿಸುವ ಮೂಲಕ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯ ಎಂದು ಅವರು ತಿಳಿಸಿದರು.

ಸನ್ಮಾನವನ್ನು ಸ್ವೀಕರಿಸಿದ ಆಶಾ ಕಾರ್ಯಕರ್ತರ ಪರವಾಗಿ ಸೇವಾಲಾಲ್ ನಗರದ ಸುಮಿತ್ರಾ ಬಾಯಿಯವರು ಮಾತನಾಡುತ್ತಾ ಆಶಾ ಕಾರ್ಯಕರ್ತರನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನವರು ಗುರುತಿಸಿರುವುದು ಅತ್ಯಂತ ಸಂತೋಷವನ್ನು ತಂದಿದೆ. ಆಶಾ ಕಾರ್ಯಕರ್ತರು ಕರೋನಕಾಲದಲ್ಲಿ ಕೂಡ ನಿಷ್ಕಲ್ಮಶವಾಗಿ ಧೈರ್ಯದಿಂದ ಸೇವೆಯನ್ನು ಸಲ್ಲಿಸಿರುತ್ತೇವೆ ,ಏಕೆಂದರೆ ಸಮಾಜದ ಆರೋಗ್ಯ ನಮ್ಮ ಬಹಳ ಮುಖ್ಯವಾದಂತಹ ಕರ್ತವ್ಯ ಎಂದು ನಾವು ಭಾವಿಸುತ್ತೇವೆ. ಆದರೆ ಹೆಚ್ಚು ವಿದ್ಯಾಭ್ಯಾಸ ಇಲ್ಲದ ಗ್ರಾಮೀಣ ಹಿನ್ನೆಲೆಯುಳ್ಳ ನಮ್ಮನ್ನು ಇಲ್ಲಿಯವರೆಗೂ ಯಾರೂ ಗುರುತಿಸಿರುವುದಿಲ್ಲ .ಇಂತಹ ಸಂದರ್ಭದಲ್ಲಿ ಮಾನಸ ಸಂಸ್ಥೆ ನಮ್ಮನ್ನು ಗುರುತಿಸಿರುವುದು ಬಹಳ ಸಂತೋಷವೆನಿಸುತ್ತದೆ. ನಾವೆಲ್ಲರೂ ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ವತಿಯಿಂದ ಕೊನೆಗವಳ್ಳಿಯ ಸೇವಾಲಾಲ್ ನಗರದಲ್ಲಿ ಮಹಿಳಾ ಆರೋಗ್ಯ ತಪಾಸಣೆ, ಹಿಮೋಗ್ಲೋಬಿನ್ ರಕ್ತ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ,ಆರೋಗ್ಯ ಅರಿವು ಜಾಥ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಕಾರ್ಯಕ್ರಮ ಎಲ್ಲವನ್ನು ಅತ್ಯಂತ ಸಂಭ್ರಮದಿಂದ ದಿನಾಂಕ 8/3 2,2025 ರಂದು ಆಚರಿಸಲಾಯಿತು.

ನೂರಾರು ವಿದ್ಯಾರ್ಥಿಗಳು ,ಮಹಿಳೆಯರು ಈ ಜಾಥದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣಗೊಳಿಸಿದರು .ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಅಧ್ಯಕ್ಷತೆಯನ್ನು ವಹಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಮಾನತೆಯ ಧ್ಯೇಯವನ್ನು ಅರಿಯಲು ಹಾಗೂ ಸಾಧನೆಯನ್ನು ಮಾಡಿದ ಮಹಿಳೆಯರನ್ನು ಗುರುತಿಸಲು ಆಚರಿಸಲಾಗುತ್ತಿದೆ ಎಂದು ತಿಳಿಸುತ್ತಾ ಮಾನಸ ಸಂಸ್ಥೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಈ ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯು ಪ್ರಾಮುಖ್ಯತೆಯನ್ನು ಹೊಂದಿರುತ್ತಾಳೆ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾಕ್ಟರ್ ನಿರಂಜನ್ ,ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಕಾರ್ಯದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ, ಉಪನ್ಯಾಸಕಿ, ನಾನ್ಸಿ ಪಿಂಟೊ, ಹಲವಾರು ವೈದ್ಯರು, ಗ್ರಾಮದ ಹಿರಿಯರಾದ ಶ್ರೀಮತಿ ಗೌರಿ ಬಾಯಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಾನಸಿಕ ಆರೋಗ್ಯದ ಕುರಿತು ಅರಿವು ಹಾಗೂ ಆಪ್ತ ಸಮಾಲೋಚನೆಯನ್ನು ಈ ದಿನ ನಡೆಸಲಾಯಿತು. ಕಾರ್ಯಕ್ರಮವನ್ನು ಕುಮಾರಿ ಸ್ಪೂರ್ತಿ ನಿರೂಪಿಸಿದರು ಸ್ವಾಗತವನ್ನು ಮಂಜುನಾಥ ಸ್ವಾಮಿ ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ನಡೆಸಿದರು ಸ್ಪರ್ಧೆಗಳನ್ನು ನಾನ್ಸಿ ಪಿಂಟೊ ನಡೆಸಿಕೊಟ್ಟರು.

ಕುಮಾರಿ ಚಂದನ ಪ್ರಾರ್ಥಿಸಿ ಕುಮಾರಿ ಮಂಜುಳಾ ವಂದನಾರ್ಪಣೆಯನ್ನು ಸಲ್ಲಿಸಿದರು .

Urban Development Department ಸಿರಿಮಲ್ಲಿಗೆ ನಿವಾಸಿಗಳ ಸಂಘ ಉದ್ಘಾಟನೆ

0

Urban Development Department ಶಿವಮೊಗ್ಗದ‌ಲ್ಲಿ ಸಾಗರ ರಸ್ತೆಯ ಪುರದಾಳ್ ಕ್ರಾಸ್ ನಲ್ಲಿ‌ ತಾ.09-03-25ರ ಭಾನುವಾರ ಸಿರಿಮಲ್ಲಿಗೆ ನಿವಾಸಿಗಳ ಸಂಘ ಉದ್ಘಾಟನೆ ಆಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಶಿವಮೊಗ್ಗ ನಗರ ವಿಧಾನ ಸಭಾ ಸದಸ್ಯ ಶ್ರೀ ಎಸ್.ಎನ್.ಚನ್ನಬಸಪ್ಪ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಚ್.ಎಸ್.ಸುಂದರೇಶ್, ಜಿಲ್ಲಾಧಿಕಾರಿ ಶ್ರೀಗುರುದತ್ತ ಹೆಗಡೆ, ಜಿಲ್ಲಾ ರಕ್ಚಣಾಧಿಕಾರಿ ಶ್ರಿಜಿ.ಕೆ.ಮಿಥುನ್ ಕುಮಾರ್
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರದ ಶ್ರೀಮತಿ ಕವಿತಾ ಯೋಗಪ್ಪನವರ್ , ಮತ್ತು ಕೃಷಿನಗರ ಬಡಾವಣೆ ಅಧ್ಯಕ್ಷ ಶ್ರೀ ಮಂಜಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಕೆ ಲೈವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ ಅವರು ಅಧ್ಯಕ್ಷತೆ ವಹಿಸುವರು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ , ಶ್ರೀ ಕೆ.ವಿ.ವಸಂತಕುಮಾರ್
ವಿಶೇಷ ಉಪನ್ಯಾಸ ನೀಡಲಿದ್ದಾರೆ.

CM Siddharamaih ವಿತ್ತೀಯ ಶಿಸ್ತು ಪಾಲನೆ ಜೊತೆಗೆ ಬಡವರ ,ಮಹಿಳೆಯರ ,ಶೋಷಿತರ ಏಳಿಗೆಗೆ ಬಜೆಟ್ ನಲ್ಲಿ ಪ್ರಾಶಸ್ತ್ಯ ನೀಡಿದ್ದೇನೆ- ಸಿಎಂ ಸಿದ್ದರಾಮಯ್ಯ

0

CM Siddharamaih 1) 2025-26ರ ಆಯವ್ಯಯವು ನಾನು ಮಂಡಿಸಿರುವ 16ನೇ ಆಯವ್ಯಯವಾಗಿದೆ. ನಾನು ಈವರೆಗೂ ಮಂಡಿಸಿರುವ ಪ್ರತಿ ಆಯವ್ಯಯದಲ್ಲಿಯೂ ವಿತ್ತೀಯ ಶಿಸ್ತನ್ನು ಪಾಲಿಸುವುದರ ಜೊತೆಗೆ ಬಡವರ, ಮಹಿಳೆಯರ, ಶೋಷಿತರ, ದುರ್ಬಲ ವರ್ಗದವರ ಏಳಿಗೆಗೆ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತೇನೆ. ಅಲ್ಲದೆ, ರಾಜ್ಯದ ಆರ್ಥಿಕ ಪ್ರಗತಿಗಾಗಿ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿರುತ್ತೇನೆ. ನಾನು ಮಂಡಿಸಿರುವ ಈ ೧೬ನೇ ಆಯವ್ಯಯವು ಇದೇ ಧ್ಯೇಯದೊಂದಿಗೆ ರೂಪಿತವಾಗಿದೆ.
2) ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸ್ವೀಕೃತವಾಗುವ ರಾಜಸ್ವವು ಗಣನೀಯವಾಗಿ ಕಡಿಮೆಯಾಗಿದೆ. ಜಿ.ಎಸ್.ಟಿ ಪರಿಹಾರ ನಿಲ್ಲಿಸಿರುವುದರಿಂದ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿರುವುದರಿಂದ, ಕೇಂದ್ರ ಸರ್ಕಾರ ವಿಧಿಸುವ ಸೆಸ್‌ ಮತ್ತು ಸರ್‌ ಚಾರ್ಜ್‌ ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದ ಕಾರಣ ಮತ್ತು ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸ್ಸು ಮಾಡಿದ ವಿಶೇಷ ಅನುದಾನವನ್ನು ಬಿಡುಗಡೆ ಮಾಡದ ಕಾರಣ ರಾಜ್ಯಕ್ಕೆ 2,53,287 ಕೋಟಿ ರೂ.ಗಳ ರಾಜಸ್ವ ನಷ್ಟವಾಗಿರುತ್ತದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆಗೆ ಎದೆಗುಂದದೆ, ಸ್ವಂತ ಸಂಪನ್ಮೂಲವನ್ನು ಕ್ರೋಢೀಕರಿಸುವ ಮೂಲಕ ರಾಜ್ಯದ ವೆಚ್ಚ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿರುತ್ತದೆ.
3) 2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳಾಗಿರುತ್ತದೆ. ಮೊದಲ ಬಾರಿಗೆ ನಮ್ಮ ರಾಜ್ಯದ ಆಯವ್ಯಯ ಗಾತ್ರ ೪ ಲಕ್ಷ ಕೋಟಿ ರೂ. ಗಳ ಗಡಿ ದಾಟಿರುವುದು, ಒಂದು ಹೊಸ ಮೈಲುಗಲ್ಲು. 2024-25ನೇ ಸಾಲಿನ ಆಯವ್ಯಯಕ್ಕೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಆಯವ್ಯಯ ಗಾತ್ರವು ಶೇ.10.3 ರಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಆಯವ್ಯಯ ಗಾತ್ರವು ಗಣನೀಯವಾಗಿ ಹೆಚ್ಚಳವಾಗಿದೆ. 2022-23ರಲ್ಲಿ 2,65,720 ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರವು 2025-26ರ ಆಯವ್ಯಯದಲ್ಲಿ 4,09,549 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಆಯವ್ಯಯ ಗಾತ್ರವು ಶೇ.54ರಷ್ಟು ಹೆಚ್ಚಳವಾಗಿದೆ.
4) ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಲ್ಲಿ ವಿಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು ಹಾಗೂ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬ ನಕಾರಾತ್ಮಕ ಧೋರಣೆ ವ್ಯಕ್ತಪಡಿಸಿದರು. ಆದರೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ಅನುದಾನ ಒದಗಿಸುವ ಮೂಲಕ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುತ್ತೇವೆ. 2025-26ನೇ ಆಯವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 51,034 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ವಿಪಕ್ಷದವರು ಈಗ ತಾವು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯದ ಮಾದರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ.
CM Siddharamaih 5) ಬಂಡವಾಳ ಯೋಜನೆಗಳಿಗೆ ಗಣನೀಯ ಹಂಚಿಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿಯನ್ನು ಒದಗಿಸುವ ಕಾರಣಕ್ಕೆ 2025-26ನೇ ಸಾಲಿನ ಆಯವ್ಯಯವು ಮಹತ್ವಪೂರ್ಣವಾಗಿದೆ. ಬಂಡವಾಳ ಯೋಜನೆಗಳಿಗೆ ನೀಡಿರುವ ಒಟ್ಟು ಅನುದಾನವು (Gross) 2024-25ರಲ್ಲಿ ಅಂದಾಜಿಸಿದ್ದ 56,492 ಕೋಟಿ ರೂ.ಗಳಿಂದ
2025-26ನೇ ಸಾಲಿನಲ್ಲಿ 83,200 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 47.3 ರಷ್ಟು ಹೆಚ್ಚಳವನ್ನು ಕಂಡಿದೆ. ಬಂಡವಾಳ ವೆಚ್ಚದ ಈ ಹೆಚ್ಚಳವು ಐತಿಹಾಸಿಕ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಇದು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (GSDP) ಶೇ. 2.32 ರಷ್ಟಿದೆ. ಕಳೆದ ವರ್ಷ ಇದು ಶೇ. 1.99 ರಷ್ಟಿತ್ತು. GSDP ಹೆಚ್ಚಳಕ್ಕೆ ಅನುಗುಣವಾಗಿ ರಾಜ್ಯದ ಬಂಡವಾಳವನ್ನು ಸಹ ಹೆಚ್ಚಿಸಲಾಗಿದೆ. ಕರ್ನಾಟಕವನ್ನು ದೇಶದ ನಂ. 1 ಆರ್ಥಿಕತೆಯನ್ನಾಗಿ ಮಾಡುವತ್ತ ನಾವು ದಿಟ್ಟ ಹೆಜ್ಜೆಯಿಟ್ಟಿದ್ದೇವೆ. 2025-26ನೇ ಸಾಲಿನಲ್ಲಿ ಪ್ರಮುಖವಾಗಿ ನೀರಾವರಿ, ರಸ್ತೆ ಅಭಿವೃದ್ಧಿ, ಮೂಲಭೂತ ಸೌಕರ್ಯ ಮತ್ತು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
6) ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2024-25ನೇ ಸಾಲಿನ ಆಯವ್ಯಯದಲ್ಲಿನ ಅಂದಾಜು 11.11 ಲಕ್ಷ ಕೋಟಿ ರೂ.ಗಳಿಂದ 2025-26ನೇ ಸಾಲಿನಲ್ಲಿ 11.21 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಿರುತ್ತದೆ. ಕಳೆದ ಸಾಲಿಗೆ ಹೋಲಿಸಿದರೆ 9,979 ಕೋಟಿ ರೂ.ಗಳು ಅಂದರೆ ಕೇವಲ ಶೇ. 0.9ರಷ್ಟು ಮಾತ್ರ ಹೆಚ್ಚಳವಾಗಿರುತ್ತದೆ. ಅಲ್ಲದೆ, ರಾಜ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರವು ಸಮರ್ಪಕವಾಗಿ ಹಣ ಹಂಚಿಕೆಯನ್ನು ಮಾಡಲು ವಿಫಲವಾಗಿದೆ.
7) ರಾಜ್ಯ ರಾಜಧಾನಿಯ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು, ಮುಂದಿನ ಮೂರು ವರ್ಷಗಳಲ್ಲಿ ರೂ. 54,000 ಕೋಟಿ ಹೂಡಿಕೆಯೊಂದಿಗೆ 120 ಕಿ.ಮೀ. ಫ್ಲೈಓವರ್ ಮತ್ತು ಗ್ರೇಡ್ ಸೆಪರೇಟರ್, ಕಾಲುವೆಗಳ ಬಫರ್ ವಲಯಗಳ ಉದ್ದಕ್ಕೂ 320 ಕಿ.ಮೀ. ಹೊಸ ರಸ್ತೆಗಳು, ಹೆಚ್ಚು ವಾಹನ ಸಾಮರ್ಥ್ಯವಿರುವ ರಸ್ತೆಗಳ ಸುಧಾರಣೆ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್‌ನಂತಹ ಯೋಜನೆಗಳನ್ನು ಕೈಗೊಳ್ಳಲ್ಲಿದ್ದೇವೆ. ಇದಲ್ಲದೆ, ಬೆಂಗಳೂರಿಗೆ 27,000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ Peripheral Ring Road ಮತ್ತು ವಾಹನ ದಟ್ಟಣೆಯನ್ನು ಕಡಿಮೆ ಮಾಡಲು 40,000 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಸುರಂಗ ರಸ್ತೆಯನ್ನು ನಿರ್ಮಿಸಲಾಗುವುದು. 2025-26ನೇ ಸಾಲಿನಲ್ಲಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಒದಗಿಸಲಾಗುವ ಅನುದಾನವನ್ನು
ರೂ. 3,000 ಕೋಟಿಗಳಿಂದ ರೂ. 7,000 ಕೋಟಿಗಳಿಗೆ ಹೆಚ್ಚಿಸಲಾಗಿದೆ.
8) ಬೆಂಗಳೂರು ಹೊರತು ಪಡಿಸಿ, ಇತರೆ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1,000 ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್‌ ಕಾರ್ಯಕ್ರಮ -LEAP ಪ್ರಾರಂಭಿಸಲಾಗುವುದು. 2025-26ರಲ್ಲಿ ಈ ಯೋಜನೆಗೆ 200 ಕೋಟಿ ರೂ. ಅನುದಾನ ಒದಗಿಸಲಾಗುವುದು.
9) ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರಾಜಸ್ವ ನಷ್ಟವಾಗಿದ್ದರೂ ಸಹ ನಾನು ಮಂಡಿಸಿರುವ ಈ ಆಯವ್ಯಯದಲ್ಲಿ ರಾಜಸ್ವ ಕೊರತೆಯನ್ನು 2024-25ರಲ್ಲಿ ಅಂದಾಜಿಸಿದ್ದ 27,354 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.96) ಎದುರಾಗಿ 2025-26ನೇ ಸಾಲಿನಲ್ಲಿ 19,262 ಕೋಟಿ ರೂ.ಗಳಿಗೆ (ಜಿ.ಎಸ್.ಡಿ.ಪಿ ಯ ಶೇ.0.63) ಕಡಿಮೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸುವುದರೊಂದಿಗೆ ಹಾಗು ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಅತಿಥಿ ಶಿಕ್ಷಕರು ಹಾಗೂ ಪದವಿ ಪೂರ್ವ ಉಪನ್ಯಾಸಕರ ಗೌರವಧನ ಮತ್ತು ಪತ್ರಕರ್ತರು, ಕಲಾವಿದರು, ಕುಸ್ತಿಪಟುಗಳ ಮಾಸಾಶನ ಹೆಚ್ಚಿಸಿ ಇತರೆ ಕಲ್ಯಾಣ ಕಾರ್ಯಕ್ರಮಗಳಿಗೂ ಅಗತ್ಯ ಅನುದಾನ ಒದಗಿಸಲಾಗಿದೆ. ಅಂತೆಯೇ ಹಿಂದೂ, ಜೈನ್‌ ಮತ್ತು ಸಿಖ್‌ ಧರ್ಮದ ಅರ್ಚಕರು, ಪೇಶ್‌ ಇಮಾಮ್‌, ಮೋಜನ್‌ಗಳ ಗೌರವಧನ ಹೆಚ್ಚಿಸಲು ಸಹ ಈ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಈ ಎಲ್ಲಾ ವೆಚ್ಚ ನಿರ್ವಹಣೆ ಮಾಡುವುದರ ಜೊತೆಗೆ ಈ ಸಾಲಿನಲ್ಲಿ ರಾಜಸ್ವ ಕೊರತೆಯನ್ನು ಕಡಿಮೆ ಮಾಡಿರುವುದು ಹೆಮ್ಮೆಯ ಸಂಗತಿ. ಅಲ್ಲದೆ, ಮುಂದಿನ ವರ್ಷಗಳಲ್ಲಿ ನಮ್ಮ ಸರ್ಕಾರವು ರಾಜಸ್ವ ಹೆಚ್ಚುವರಿಯನ್ನು ಸಾಧಿಸಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
10) ಆರ್ಥಿಕ ಬೆಳವಣಿಗೆಯ ಹಿತದೃಷ್ಟಿಯಿಂದ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿದರೂ ಸಹ ನಮ್ಮ ಸರ್ಕಾರವು ವಿತ್ತೀಯ ಶಿಸ್ತನ್ನು ಉಲಂಘಿಸಿರುವುದಿಲ್ಲ. 2025-26ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇ.2.95ರಷ್ಟು ಅಂದಾಜಿಸಲಾಗಿರುತ್ತದೆ. ವಿತ್ತೀಯ ಕೊರತೆ ಹಾಗು ಒಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದಲ್ಲಿ ಸೂಚಿಸಿರುವ ಮಿತಿಯೊಳಗೆ ಪಾಲನೆ ಮಾಡಲಾಗಿರುತ್ತದೆ.

1.1) ಆಯವ್ಯಯ ಗಾತ್ರ

11) 2025-26ನೇ ಸಾಲಿನ ಆಯವ್ಯಯ ಗಾತ್ರವು 4,09,549 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25ನೇ ಸಾಲಿನ ಆಯವ್ಯಯ ಗಾತ್ರವು 3,71,383 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ 2025-26ನೇ ಸಾಲಿನ ಆಯವ್ಯಯ ಗಾತ್ರವು ಶೇ.10.3ರಷ್ಟು ಬೆಳವಣಿಗೆಯೊಂದಿಗೆ 38,166 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

12) ಒಟ್ಟು ವೆಚ್ಚದಲ್ಲಿ 3,11,739 ಕೋಟಿ ರೂ.ಗಳ ರಾಜಸ್ವ ವೆಚ್ಚವಾಗಿರುತ್ತದೆ. 2024-25ಕ್ಕೆ ಹೊಲಿಸಿದರೆ ಶೇ.7.3 ರಷ್ಟು ಹೆಚ್ಚಳವಾಗಿದೆ. ಬಂಡವಾಳ ವೆಚ್ಚ (Gross) ಕಳೆದ ಸಾಲಿಗೆ ಹೋಲಿಸಿದರೆ ಶೇ.47.3 ರಷ್ಟು ಹೆಚ್ಚಳವಾಗಿದೆ.

ವೆಚ್ಚ ಕೋಟಿ ರೂ.ಗಳು
ವಿವರಗಳು
2024-25
ಆಯವ್ಯಯ
2025-26 ಆಯವ್ಯಯ
24-25 ರ ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ರಾಜಸ್ವ ವೆಚ್ಚ
2,90,531
3,11,739
21,207 (7.3%)
ಬಂಡವಾಳ ವೆಚ್ಚ (Gross)
56,492
83,200
26,707 (47.3%)
ಸಾರ್ವಜನಿಕ ಋಣ
24,974
26,474
1,500 (6.0%)

1.2) ವಿತ್ತೀಯ ಸ್ಥಿತಿ:

13) 2025-26ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ರಾಜಸ್ವ ಕೊರತೆಯು 19,262 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು 90,428 ಕೋಟಿ ರೂ.ಗಳಾಗಿದ್ದು, ಜಿ.ಎಸ್.ಡಿ.ಪಿಯ ಶೇಕಡ 2.95ರಷ್ಟಿದೆ. 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಯು 7,64,655 ಕೋಟಿ ರೂ.ಗಳು ತಲುಪುವ ನಿರೀಕ್ಷೆಯಿದ್ದು, ಜಿ.ಎಸ್.ಡಿ.ಪಿಯ ಶೇಕಡ 24.91ರಷ್ಟಿದೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002 ಸೂಚಿಸಿರುವ ಮಾನದಂಡದಂತೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿಯ ಶೇಕಡ 3 ಹಾಗು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿಯ ಶೇಕಡ 25ರ ಮಿತಿಯೊಳಗೆ ಪಾಲನೆ ಮಾಡಲಾಗಿರುತ್ತದೆ

14) 2025-26ನೇ ಸಾಲಿನಲ್ಲಿ ರಾಜ್ಯವು ಪಡೆಯುವ ಒಟ್ಟು ಸಾಲವು 1,16,000 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

1.3) ಸ್ವೀಕೃತಿಗಳು:

15) 2025-26ನೇ ಸಾಲಿನಲ್ಲಿ ಸಾಲ ಸೇರಿದಂತೆ ಒಟ್ಟು ಸ್ವೀಕೃತಿಗಳು 4,08,647 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದು ಕಳೆದ ಸಾಲಿಗೆ ಹೊಲಿಸಿದರೆ 39,973 ಕೋಟಿ ರೂ.ಗಳಷ್ಟು (ಶೇ.10.8) ಹೆಚ್ಚಳವಾಗಿದೆ. 2025-26ರ ಆಯವ್ಯಯದಲ್ಲಿ ಒಟ್ಟು ರಾಜಸ್ವ ಸ್ವೀಕೃತಿಯು 2,92,477 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜಸ್ವ ಸ್ವೀಕೃತಿಯಲ್ಲಿ 29,299 ಕೋಟಿ ರೂ.ಗಳಷ್ಟು (ಶೇ.11.1) ಹೆಚ್ಚಳವಾಗಿದೆ.
ಸ್ವೀಕೃತಿಗಳು ಕೋಟಿ ರೂ.ಗಳು
ವಿವರಗಳು
2024-25
ಆಯವ್ಯಯ
2025-26
ಆಯವ್ಯಯ
24-25 ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ರಾಜಸ್ವ ಸ್ವೀಕೃತಿಗಳು
2,63,178
2,92,477
29,299 (11.1%)
ಬಂಡವಾಳ ಸ್ವೀಕೃತಿಗಳು
(ಸಾಲ ಒಳಗೊಂಡಂತೆ)
1,05,496
1,16,170
10,674 (10.1%)
ಒಟ್ಟು
3,68,674
4,08,647
39,973 (10.8%)

16) ರಾಜ್ಯದ ರಾಜಸ್ವ ಸ್ವೀಕೃತಿಯು ತೆರಿಗೆ ರಾಜಸ್ವ, ತೆರಿಗೆಯೇತರ ಸ್ವೀಕೃತಿಗಳು, ಕೇಂದ್ರ ಸರ್ಕಾರದ ಸಹಾಯಾನುದಾನ ಮತ್ತು ತೆರಿಗೆ ಪಾಲನ್ನು ಒಳಗೊಂಡಿದೆ. ಸ್ವಂತ ತೆರಿಗೆ ರಾಜಸ್ವದ ಸ್ವೀಕೃತಿಗಳನ್ನು 2,08,100 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. 2024-25ನೇ ಸಾಲಿಗೆ ಹೊಲಿಸಿದರೆ ಸ್ವಂತ ತೆರಿಗೆ ರಾಜಸ್ವವು 18,207 ಕೋಟಿ ರೂ.ಗಳಷ್ಟು (ಶೇ.9.6) ಹೆಚ್ಚಳವಾಗಿದೆ. ತೆರಿಗೆಯೇತರ ಸ್ವೀಕೃತಿಗಳಿಂದ 16,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.22.2 ರಷ್ಟು ಹೆಚ್ಚಳವಾಗಿದೆ. 2025-26ರಲ್ಲಿ ಕೇಂದ್ರ ಸರ್ಕಾರದ ತೆರಿಗೆಯ ಪಾಲು 51,877 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿರುತ್ತದೆ.

ರಾಜಸ್ವ ಸ್ವೀಕೃತಿಗಳು ಕೋಟಿ ರೂ.ಗಳು
ವಿವರಗಳು
2024-25
ಆಯವ್ಯಯ
2025-26
ಆಯವ್ಯಯ
24-25 ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ಸ್ವಂತ ತೆರಿಗೆಳು
1,89,893
2,08,100
18,207 (9.6%)
ಸ್ವಂತ ತೆರಿಗೇತರ ರಾಜಸ್ವ
13,500
16,500
3,000 (22.2%)
ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು
44,485
51,877
7,391 (17%)
ಕೇಂದ್ರ ಸರ್ಕಾರದಿಂದ ಸಹಯಾನುದಾನ
15,300
16,000
700 (4.6%)
ಒಟ್ಟು
2,63,178
2,92,477
29,299 (11%)

17) ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಮತ್ತು ಮೋಟಾರು ವಾಹನ ತೆರಿಗೆಗಳು ರಾಜ್ಯದ ಪ್ರಮುಖ ಸ್ವಂತ ತೆರಿಗೆಗಳಾಗಿವೆ. ಇತರೆ ತೆರಿಗೆಗಳಿಗೆ ಹೋಲಿಸಿದರೆ ವಾಣಿಜ್ಯ ತೆರಿಗೆಯಿಂದ ಅತಿ ಹೆಚ್ಚು ತೆರಿಗೆ ಸಂಗ್ರಹಣೆಯಾಗುತ್ತದೆ. 2025-26ರ ಆಯವ್ಯಯ ಅಂದಾಜಿನಲ್ಲಿ ಪ್ರಮುಖ ತೆರಿಗೆಗಳ ಅಂದಾಜು ಕೆಳಕಡಂತಿದೆ.

                                                    ಕೋಟಿ ರೂ.ಗಳಲ್ಲಿ

ರಾಜ್ಯದ ಪ್ರಮುಖ ತೆರಿಗೆಗಳ ವಿವರ

ರಾಜ್ಯದ ಪ್ರಮುಖ ತೆರಿಗೆಗಳು
2024-25ರ ಆಯವ್ಯಯ
2025-26ರ ಆಯವ್ಯಯ
24-25 ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ
ವಾಣಿಜ್ಯ ತೆರಿಗೆ
1,10,000
1,20,000
10,000 (9.1%)
ಅಬಕಾರಿ ತೆರಿಗೆ
38,525
40,000
1,475 (3.8%)
ನೋಂದಣಿ ಮತ್ತು ಮದ್ರಾಂಕ
26,000
28,000
2,000 (7.7%)
ಮೋಟಾರು ವಾಹನ ತೆರಿಗೆ
13,000
15,000
2,000 (15.4%)

18) ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರವು ರಾಜಧನದ ಜೊತೆಗೆ ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸಬಹುದಾಗಿದೆ. ಅಲ್ಲದೆ, ವಿಧನಾಮಂಡಲದಲ್ಲಿ ಈ ಕುರಿತ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ಹಿನ್ನಲೆಯಲ್ಲಿ 2025-26ನೇ ಸಾಲಿಗೆ ಖನಿಜಗಳ ಮೇಲೆ ವಿಧಿಸುವ ತೆರಿಗೆಯಿಂದ 3,000 ಕೋಟಿ ರೂ.ಗಳ ತೆರಿಗೆ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.

19) 2025-26 ರ ಆಯವ್ಯಯ ಅಂದಾಜಿನಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಗ್ಯಾರಂಟಿ ಯೋಜನೆಗಳು

2025-26ರ ಅಯವ್ಯಯ ಅಂದಾಜು
(ರೂ.ಕೋಟಿಗಳಲ್ಲಿ)
ಗೃಹ ಜ್ಯೋತಿ
10,100
ಅನ್ನ ಭಾಗ್ಯ
6,426
ಶಕ್ತಿ
5,300
ಯುವನಿಧಿ
600
ಗೃಹ ಲಕ್ಷ್ಮಿ
28,608
ಒಟ್ಟು
51,034

20) 2025-26 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌರ್ಕಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರೂ.ಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

1.4) ಅನುಸೂಚಿತ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (SCSP/TSP) ಗೆ ಹಂಚಿಕೆ

21) 2024-25 ರಲ್ಲಿ 39,121 ಕೋಟಿ ರೂ.ಗಳನ್ನು SCSP/TSP ಗೆ ಹಂಚಿಕೆ ಮಾಡಲಾಗಿತ್ತು. 2025-26 ರ ಆಯವ್ಯಯದಲ್ಲಿ SCSP/TSP ಗೆ 42,018 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2025-26 ರಲ್ಲಿ SCSP/TSP ಹಂಚಿಕೆಯು 2,897 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

1.5) ಮಹಿಳಾ ಉದ್ದೇಶಿತ ಆಯವ್ಯಯ

22) 2025-26 ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 94,084 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. 2024-25 ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 86,372 ಕೋಟಿ ರೂ.ಗಳನ್ನು ಅಂದಾಜಿಸಲಾಗಿತ್ತು. 2024-25ರ ಆಯವ್ಯಯಕ್ಕೆ ಹೋಲಿಸಿದರೆ 2025-26ರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಗಾತ್ರವು 7,711 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

1.6) ಮಕ್ಕಳ ಉದ್ದೇಶಿತ ಆಯವ್ಯಯ
23) ಸದೃಢ ಆರ್ಥಿಕತೆ ಮತ್ತು ಸಮಾಜವನ್ನು ನಿರ್ಮಿಸುವಲ್ಲಿ ಮಕ್ಕಳ ಪ್ರಾಮುಖ್ಯತೆಯನ್ನು ಗುರುತಿಸಿ, 2025-26 ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯಕ್ಕೆ 62,033 ಕೋಟಿ ರೂ.ಗಳನ್ನು ನೀಡಲಾಗಿದೆ. 2024-25 ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯಕ್ಕೆ 55,933 ಕೋಟಿ ರೂ.ಗಳನ್ನು ಅಂದಾಜಿಸಲಾಗಿತ್ತು. 2024-25ರ ಆಯವ್ಯಯಕ್ಕೆ ಹೋಲಿಸಿದರೆ 2025-26ರಲ್ಲಿ ಮಕ್ಕಳ ಉದ್ದೇಶಿತ ಆಯವ್ಯಯ ಗಾತ್ರವು 6,100 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

ಅನುಬಂಧ-1
ವಿವರಗಳು
2024-25
2025-26
24-25
ಆಯವ್ಯಯಕ್ಕೆ ಹೋಲಿಸಿದರೆ ಹೆಚ್ಚಳ

ಆಯವ್ಯಯ
ಆಯವ್ಯಯ

ಆಯವ್ಯಯದ ಗಾತ್ರ
3,71,383
4,09,549
38,166 (10.3%)
ರಾಜಸ್ವ ಸ್ವೀಕೃತಿಗಳು
2,63,178
2,92,477
29,299 (11.1%)
ಸಾಲಗಳು
1,05,246
1,16,000
10,754 (10.2%)
ರಾಜಸ್ವ ವೆಚ್ಚ
2,90,531
3,11,739
21,207 (7.3%)
ಬಂಡವಾಳ ವೆಚ್ಚ (Gross)
56,492
83,200
26,707 (47.3%)
ಸಾಲ ಮರುಪಾವತಿ
24,974
26,474
1,500 (6.0%)
ವಿತ್ತೀಯ ಕೊರತೆ
82,981
90,428

ರಾಜಸ್ವ ಕೊರತೆ
27,354
19,262

ಒಟ್ಟು ಬಾಕಿ ಇರುವ ಹೊಣೆಗಾರಿಕೆಗಳು
6,65,095
7,64,655

ಜಿ.ಎಸ್.ಡಿ.ಪಿ
28,61,929
30,70,103

ವಿತ್ತೀಯ ಕೊರತೆ
(ಜಿ.ಎಸ್.ಡಿ.ಪಿ ಯ ಶೇಕಡವಾರು)
2.90%
2.95%

ರಾಜಸ್ವ ಕೊರತೆ
(ಜಿ.ಎಸ್.ಡಿ.ಪಿ ಯ ಶೇಕಡವಾರು)
0.96%
0.63%

ಒಟ್ಟು ಬಾಕಿ ಇರುವ ಹೊಣೆಗಾರಿಕೆಗಳು
(ಜಿ.ಎಸ್.ಡಿ.ಪಿ ಯ ಶೇಕಡವಾರು)
23.24%
24.91%

2025-26ರ ಆಯವ್ಯಯದ ಪ್ರಮುಖ ಘೋಷಣೆಗಳು

  • ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 428 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ.
  • ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ
  • ರಾಜ್ಯದ GI ಟ್ಯಾಗ್‌ ಹೊಂದಿದ ಹಾಗೂ ದೇಸಿ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸಲು ಬೀಜ ಬ್ಯಾಂಕ್ ಸ್ಥಾಪನೆ.
  • ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿಯಡಿ ೫೨,೦೦೦ ಬೆಳೆಗಾರರಿಗೆ ೪೨೬ ಕೋಟಿ ಸಹಾಯಧನ ಒದಗಿಸಲು ಕ್ರಮ
  • 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಣೆ ಗುರಿ.
  • ಎತ್ತಿನಹೊಳೆ ಯೋಜನೆ ಅಡಿ ಎಲ್ಲಾ ಎಂಟು ವಿಯರ್‌ಗಳಲ್ಲಿ ಲಭ್ಯವಾಗುವ ನೀರನ್ನು ಕಾಲುವೆಯ ಸರಪಳಿ:241 ಕಿ.ಮೀ ವರೆಗೆ ಹರಿಸಲು ಕ್ರಮ.
  • ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರದಿಂದಲೇ ಅಗತ್ಯ ಅನುದಾನ; 2,611 ಕೋಟಿ ರೂ. ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಯಡಿ 30 ಕೆರೆ ತುಂಬಿಸಿ 1.77 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಸೃಜನೆ.
  • ಎತ್ತಿನಹೊಳೆ ಯೋಜನೆಯಡಿ ಮಧುಗಿರಿ ತಾಲ್ಲೂಕಿನ 45 ಹಾಗೂ ಕೊರಟಗೆರೆ ತಾಲ್ಲೂಕಿನ 62 ಕೆರೆ ತುಂಬಿಸುವ ಯೋಜನೆ 553 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ
  • 2025-26 ರಲ್ಲಿ 2 ಸಾವಿರ ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳ ಪ್ರಾರಂಭ.
  • ಎಡಿಬಿ ನೆರವಿನಲ್ಲಿ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭಿಸಲು ಕ್ರಮ.
  • ಪ್ರಾಥಮಿಕ ಹಂತದಿಂದ ಪಿಯು ಹಂತದವರೆಗಿನ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ನೀಡುತ್ತಿರುವ ಮಾಸಿಕ ಗೌರವಧನ ತಲಾ 2 ಸಾವಿರ ರೂ. ಹೆಚ್ಚಳ.
  • ಬಿಸಿಯೂಟ ತಯಾರಿಕೆ ಸಿಬ್ಬಂದಿ ಗೌರವಧನ 1ಸಾವಿರ ರೂ. ಹೆಚ್ಚಳ.
  • ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂ‍ಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಗೆ ವಿಶ್ವಬ್ಯಾಂಕ್‌ ನೆರವಿನ 2500 ಕೋಟಿ ರೂ. ವೆಚ್ಚದ ಯೋಜನೆ ಜಾರಿ.
  • ನರ ವೈಜ್ಞಾನಿಕ ಖಾಯಿಲೆಗಳಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (KaBHI) ಯೋಜನೆ ಈ ವರ್ಷ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಣೆ; 20 ಕೋಟಿ ರೂ. ಅನುದಾನ.
  • ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣ;
  • ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಒಟ್ಟು 873 ಕೋಟಿ ರೂ. ವೆಚ್ಚದಲ್ಲಿ ಯೋಜನೆಗಳ ಜಾರಿ.
  • 100 ಕೋಟಿ ರೂ. ವೆಚ್ಚದಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡುವ ʻಗೃಹ ಆರೋಗ್ಯʼ ಯೋಜನೆ ರಾಜ್ಯಾದ್ಯಂತ ವಿಸ್ತರಣೆ.
  • ಆಶಾ ಕಾರ್ಯಕರ್ತೆಯರ ತಂಡಾಧಾರಿತ ಗೌರವಧನ 1 ಸಾವಿರ ರೂ. ಹೆಚ್ಚಳ.
  • ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 297 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಕ್ರಮ.
  • ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ
    100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರ ಪ್ರಾರಂಭ.
  • ತಲಾ 100 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಮತ್ತು ಕಲಬುರಗಿಯ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ಮಾದರಿಯ ಸಂಸ್ಥೆಗಳ ಸ್ಥಾಪನೆ.
  • ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ.
  • ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1 ಸಾವಿರ ರೂ. ಹಾಗೂ ಸಹಾಯಕಿಯರ ಗೌರವಧನ 750 ರೂ. ಹೆಚ್ಚಳ.
  • ಸಕ್ಷಮ ಅಂಗನವಾಡಿ ಯೋಜನೆಯಡಿ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು 175 ಕೋಟಿ ರೂ. ನೆರವು.
  • ಪ್ರಗತಿ ಕಾಲೋನಿ ಯೋಜನೆಯಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 222 ಕೋಟಿ ರೂ. ಅನುದಾನ.
  • ಒಟ್ಟು 61 ಕ್ರೈಸ್‌ ವಸತಿ ಶಾಲೆಗಳಿಗೆ 1,292 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹಾಗೂ 213 ಕೋಟಿ ರೂ. ವೆಚ್ಚದಲ್ಲಿ ಕ್ರೈಸ್‌ ವಸತಿ ಶಾಲೆಗಳಿಗೆ ಶೈಕ್ಷಣಿಕ ಮೂಲಸೌಕರ್ಯ.
  • ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 2025-26 ನೇ ಸಾಲಿನಲ್ಲಿ 488 ಕೋಟಿ ರೂ. ಅನುದಾನ ನಿಗದಿ.
  • ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಮೂಲಸೌಕರ್ಯ ವಂಚಿತ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ.
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ
    422 ಕೋಟಿ ರೂ. ಅನುದಾನ.
  • ಮತ್ತು ಅರೆಅಲೆಮಾರಿ ಜನಾಂಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ.
  • ಪ್ರಸ್ತುತ 250 ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ಮಾದರಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಅನುದಾನ.
  • ಅನ್ನಭಾಗ್ಯ ಯೋಜನೆಯಡಿ, ಸಹಾಯಧನದ ಬದಲಾಗಿ, 5 ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಣೆ; 4.21 ಕೋಟಿ ಫಲಾನುಭವಿಗಳಿಗೆ ಅನುಕೂಲ.
  • 80 ವರ್ಷ ಮೇಲ್ಪಟ್ಟ ಹಿರಿಯವರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ʻಅನ್ನ ಸುವಿಧಾʼ ಯೋಜನೆ 75 ವಯಸ್ಸು ಮೇಲ್ಪಟ್ಟ ಹಿರಿಯ ನಾಗರಿಕರು ಇರುವ ಮನೆಗಳಿಗೂ ವಿಸ್ತರಣೆ.
  • ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ AHP ಮನೆಗಳ ಫಲಾನುಭವಿಗಳಿಗೆ “Interest subvention” ಯೋಜನೆ ಜಾರಿ.
  • ನೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ, ನೀಡುವ Ex-gratia ಮೊತ್ತ 1.5 ಲಕ್ಷ ರೂ.ಗೆ ಹೆಚ್ಚಳ ಮತ್ತು ಕೆಲಸದ ಸ್ಥಳದಲ್ಲಿ ಮರಣ ಹೊಂದುವ ಕಾರ್ಮಿಕರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತ 8 ಲಕ್ಷ ರೂ.ಗೆ ಹೆಚ್ಚಳ.
  • ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಮಂಡಳಿಯ ಫಲಾನುಭವಿಗಳು 5 ಲಕ್ಷ ರೂ.ಗಳ ಚಿಕಿತ್ಸೆ ಮಿತಿಯನ್ನು ಪೂರ್ಣಗೊಳಿಸಿದ್ದಲ್ಲಿ ಮಂಡಳಿಯಿಂದ ಹೆಚ್ಚುವರಿಯಾಗಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಕ್ರಮ.
  • ಮಧುಗಿರಿ, ಇಂಡಿ, ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ನೂತನ GTTC ಸ್ಥಾಪನೆ.
  • ಗ್ರಾಮೀಣ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸುವ 5200 ಕೋಟಿ ರೂ. ವೆಚ್ಚದ ಪ್ರಗತಿ ಪಥ ರಸ್ತೆ ಯೋಜನೆ ಪ್ರಸ್ತುತ ಸಾಲಿನಿಂದ ಅನುಷ್ಠಾನ.
  • ಜಲ ಜೀವನ್‌ ಮಿಷನ್‌ ಯೋಜನೆಗೆ ಪ್ರಸ್ತುತ ಸಾಲಿನಲ್ಲಿ 6,050 ಕೋಟಿ ರೂ. ಅನುದಾನ.
  • ʻಕಲ್ಯಾಣ ಪಥʼ ಯೋಜನೆಯಡಿ 1 ಸಾವಿರ ಕೋಟಿ ರೂ. ಮೊತ್ತದ 286 ಕಾಮಗಾರಿ ಶೀಘ್ರ ಪೂರ್ಣ.
  • ಮೂಲಭೂತ ಸೌಕರ್ಯ ನಿರ್ವಹಣೆಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಆಧಾರಿತ ಮೊಬೈಲ್ ಮತ್ತು ವೆಬ್ ತಂತ್ರಾಂಶ ಅಭಿವೃದ್ಧಿ.
  • ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೊತ್ತದ ಯೋಜನೆ
  • ಬಿ.ಬಿ.ಎಂ.ಪಿ.ಯ ವತಿಯಿಂದ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮಗಳಿಂದಾಗಿ 4556 ರೂ.ಕೋಟಿಗಳ ಆದಾಯ ಗಳಿಕೆ. ಜಾಹೀರಾತು ಉಪ-ವಿಧಿಗಳು 2025ರ ಅನುಷ್ಠಾನದಿಂದ ವಾರ್ಷಿಕ 750 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.
  • 40000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸುರಂಗ ಮಾರ್ಗ (‌Tunnel) ಕಾರಿಡಾರ್‌ ನಿರ್ಮಾಣಕ್ಕೆ ಸರ್ಕಾರದಿಂದ ಬಿ.ಬಿ.ಎಂ.ಪಿಗೆ 19 ಸಾವಿರ ಕೋಟಿ ರೂ. ಗ್ಯಾರಂಟಿ ಒದಗಿಸಲಾಗುವುದು.
  • ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 40.50 ಕಿ.ಮಿ. ಉದ್ದದ ಡಬಲ್‌-ಡೆಕ್ಕರ್‌ ಮೇಲು ಸೇತುವೆಯನ್ನು 8916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
  • “ಬ್ರ್ಯಾಂಡ್ ಬೆಂಗಳೂರು” ಯೋಜನೆಯಡಿ, 1,800 ಕೋಟಿ ರೂ. ಮೊತ್ತದ ೨೧ ಯೋಜನೆಗಳಿಗೆ ಅನುಮೋದನೆ. 413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.
  • ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.
  • ಮಹಾನಗರ ಪಾಲಿಕೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ UIDF ಮೂಲಕ 600 ಕೋಟಿ ರೂ. ಅನುದಾನ.
  • ರಾಮನಗರ ಮತ್ತು ಉಲ್ಲಾಳಕ್ಕೆ 705 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿ.
  • ಅಮೃತ್‌-2.0 ಯೋಜನೆಯಡಿ 233 ಕುಡಿಯುವ ನೀರು ಯೋಜನೆ ಅನುಷ್ಠಾನ.
  • ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ 319 ಕೋಟಿ ರೂ. ಅನುದಾನ ಬಿಡುಗಡೆ.
  • 2025-26ನೇ ಸಾಲಿನಲ್ಲಿ, ರೈಲ್ವೇ ಯೋಜನೆಗಳಿಗೆ 600 ಕೋಟಿ ರೂ. ಮೀಸಲು.
  • ಬೆಂಗಳೂರು ಉಪನಗರ ರೈಲ್ವೆ ಯೋಜನೆ 15,767 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
  • ದೇವನಹಳ್ಳಿಯಲ್ಲಿ 407 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್‌ ಅಭಿವೃದ್ಧಿ.
  • 1,೮೫0 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ೨,೫೭೦ ಕಿ.ಮೀ. ಜಿಲ್ಲಾ ರಸ್ತೆಗಳನ್ನು ರೂ. ೪,೮೪೮ ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಕ್ರಮ.
  • ಕೆಶಿಪ್‌-4 ಯೋಜನೆಯಡಿ 5,736 ಕೋಟಿ ರೂ. ವೆಚ್ಚದಲ್ಲಿ 875 ಕಿ.ಮೀ ಉದ್ದದ ೧೧ ರಸ್ತೆಗಳನ್ನು ಅಭಿವೃದ್ದಿಗೊಳಿಸಲು ಕ್ರಮ.
  • “ಗೃಹ ಜ್ಯೋತಿ” ಯಡಿ ಇದುವರೆಗೆ 9657 ಕೋಟಿ ರೂ. ಸಹಾಯಧನ ನೀಡಿದ್ದು, ಈ ವರ್ಷ 10,100 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  • ನೀರಾವರಿ ಪಂಪ್‌ಸೆಟ್‌ ವಿದ್ಯುತ್‌ ಸರಬರಾಜಿಗೆ ಸಹಾಯಧನದಡಿ 33.84 ಲಕ್ಷ ಪಂಪ್‌ಸೆಟ್‌ಗಳಿಗೆ 16,021 ಕೋಟಿ ರೂ. ನೆರವು.
  • ಪಿಪಿಪಿ ಮಾದರಿಯಲ್ಲಿ 1,846 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ.
  • ಗಂಗಾ ಕಲ್ಯಾಣ ಯೋಜನೆಯಡಿ 25,971 ಕೊಳವೆ ಬಾವಿಗಳ ಹಾಗು 6,887 ಕುಡಿಯುವ ನೀರಿನ ಯೋಜನೆಗಳ ವಿದ್ಯುದೀಕರಣ, 1.94 ಲಕ್ಷ ವಿತರಣಾ ಪರಿವರ್ತಕಗಳ ಅಳವಡಿಕೆ.
  • 21911 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ Foxconn ಸಂಸ್ಥೆಗೆ ಮೊಬೈಲ್‌ ಫೋನ್ ಗಳ ಉತ್ಪಾದನಾ ಫಟಕಕ್ಕೆ 6970 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕ ನೀಡಲು ಕ್ರಮ. ಇದರಿಂದ 50ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ.
  • MSME ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ MSME ನೀತಿ ಜಾರಿ.
  • ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆ
  • ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.

Bharat Scouts and Guides ಶಿವಮೊಗ್ಗದ ಸ್ಕೌಟ್ & ಗೈಡ್ಸ್ ಜಿಲ್ಲಾ ಆಯುಕ್ತರಾಗಿ ಶಕುಂತಲಾ ಚಂದ್ರಶೇಖರ್

0

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ 25 ವರ್ಷಗಳಿಂದ ನಿರಂತರವಾಗಿ ವಿವಿಧ ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸಿ ವೃತ್ತಿಯಲ್ಲಿ ಪ್ರಸಿದ್ಧ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶಕುಂತಲಾ ಚಂದ್ರಶೇಖರ್ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಶಿವಮೊಗ್ಗ ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಮಹತ್ತರ ಜವಾಬ್ದಾರಿ ವಹಿಸಿಕೊಂಡಿದ್ದು, ಎಲ್ಲ ಹಿರಿಯರ ಸಲಹೆ ಸಹಕಾರದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಲ್ಲ ಕಾರ್ಯಕ್ರಮಗಳನ್ನು ಕ್ರೀಯಾಶೀಲವಾಗಿ ನಡೆಸಿಕೊಂಡು ಹೋಗಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಾಜಿ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಸಾಕಷ್ಟು ಜನ ಹಿರಿಯರು ಕಟ್ಟಿ ಬೆಳೆಸಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದವರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲೇ ಸಂಸ್ಥೆಯು ಮಾದರಿ ಸಂಸ್ಥೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಪದಗ್ರಹಣ ಸಮಾರಂಭದಲ್ಲಿ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್, ಕೆ.ರವಿ, ಕಾರ್ಯದರ್ಶಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್, ರಾಜೇಶ್ ಅವಲಕ್ಕಿ, ವೈ.ಆರ್.ವೀರೇಶಪ್ಪ, ಪರಮೇಶ್ವರ್, ರಾಘವೇಂದ್ರ, ಮಲ್ಲಿಕಾರ್ಜುನ ಕಾನೂರ್, ಚೂಡಾಮಣಿ ಇ.ಪವಾರ್, ದೇವಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

International Women’s Day ಜಗತ್ತು ಆಧುನಿಕವಾದರೂ ಸಮಾಜದಲ್ಲಿ ಮಹಿಳೆಗೆ ಭದ್ರತೆಯಿಲ್ಲ- ನಂದಾ ಜಗದೀಶ್

0

International Women’s Day ತಂತ್ರಜ್ಞಾನದ ಜೊತೆಗೆ ಜಗತ್ತು ಆಧುನಿಕವಾದರೂ ಕೂಡ ಸಮಾಜದಲ್ಲಿ ಮಹಿಳೆಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ ಎಂದು ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ಅಧ್ಯಕ್ಷೆ ನಂದಾ ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ‌. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗುಡ್ ಲಕ್ ಆರೈಕೆ ಕೇಂದ್ರದ ಮಹಿಳಾ ನಿವಾಸಿಗಳಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಕಾರ್ಯಕ್ರಮಗಳು ರೂಪಿತವಾಗಬೇಕು. ಆದರೆ, ಎಷ್ಟೋ ಕಡೆಗೆ ಮಹಿಳೆ ಇಂದಿಗೂ ಕೂಡ ಸೂಕ್ತ ರಕ್ಷಣೆ ಸಿಗದೇ ನೊಂದು ಜೀವನ ಸಾಗಿಸುತ್ತಿದ್ದಾಳೆ.

ಅನೇಕ ಮನೆಗಳಲ್ಲಿ, ಕಚೇರಿಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಅಂತಹ ಮಹಿಳೆಯನ್ನು ಸಮಾಜದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಸರಿ ಅಲ್ಲ. ನೊಂದ ಮಹಿಳೆಯರು ಇಂಥಹ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ನೊಂದ ಮಹಿಳೆಯರಿಗೆ ಮನೋಬಲ ತುಂಬುತ್ತಿರುವುದು ಶ್ಲಾಘನೀಯ ಎಂದರು. ಪ್ರಸ್ತುತ ಜಾರಿಗೆ ತಂದಿರುವ ಕಾನೂನುಗಳು ಮಹಿಳೆಯರ ಪರವಾಗಿದ್ದು, ನೊಂದವರು ಸೂಕ್ತ ನ್ಯಾಯ ದೊರಕಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿವರ್ಷ ಜಾಗತಿಕವಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿ ಕುಟುಂಬ, ದೇಶದ ದೊಡ್ಡ ಸೈನಿಕ ಶಕ್ತಿ ಎಂದೇ ಮಹಿಳೆಯರನ್ನು ಬಣ್ಣಿಸಲಾಗುತ್ತದೆ. ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನವಾಗಿಯೂ ಈಗ ಈ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಬಿವಿಐ ಸಂಸ್ಥೆಯೂ ಕೂಡ ಮಹಿಳಾ ದನಾಚರಣೆಯಂದು ಸಹಾಯ ಹಸ್ತ ಚಾಚುತ್ತಿದೆ ಎಂದರು.

ಈ ವೇಳೆ ಬಿವಿಐ ಮಹಿಳಾ ಕಲ್ಯಾಣ ನಿರ್ದೇಶಕಿ ಕೋಮಲ್ ನವಲೆ, ಕಾರ್ಯದರ್ಶಿ ಸುನಿಲ್ ಗುಜ್ಜರ್, ಖಜಾಂಚಿ ಸ್ವಪ್ನ ಹರೀಶ್, ಅರ್ಚನಾ ನಾಜ್ರೆ, ಸುನಿಲ್, ಜಗದೀಶ್, ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್, ಶಿವಪ್ಪಗೌಡ, ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ್, ನಿರ್ದೇಶಕರಾದ ಸುರೇಶ್, ಜಿ. ವಿಜಯಕುಮಾರ್ ಸೇರಿದಂತೆ ಹಲವರಿದ್ದರು.

ಉದ್ಯೋಗ ಸೃಷ್ಡಿಸುವ ಉತ್ತಮ‌ ಬಜೆಟ್ – ಪ್ರದೀಪ್ ಎಲಿ

0

ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿಯಿಂದ ೨೦ಲಕ್ಷ ಉದ್ಯೋಗ ಸೃಷ್ಠಿಯಾಗಿರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ 13.688ಕೋಟಿಯ ಆರ್ಥಿಕ ನೆರವು ಮತ್ತು ಸಹಾಯ ನೀಡಿರುವುದು ಅಭಿನಂದನೀಯ ಎಂದು ಎಂಎಸ್‌ಎಂಇ ಸಮಿತಿ ಛೇರ್‌ಮನ್ ಪ್ರದೀಪ್ ಎಲಿ ಅವರು ತಿಳಿಸಿದ್ದಾರೆ.
ನಿನ್ನೆ ಮಂಡಿಸಿದ ಸರ್ಕಾರದ ಬಜೆಟ್‌ನಲ್ಲಿ 6.980ಕೋ. ರೂ. ಅನುದಾನ ಮೀಸಲಿಟ್ಟಿರುವುದರಿಂದ 50ಸಾವಿರ ಉದ್ಯೋಗ ಸೃಷ್ಠಿಗೆ ಸಹಕಾರಿ ಯಾಗಿದೆ. ಸಣ್ಣಕೈಗಾರಿಕೆಗಳಿಗೆ ಪ್ರೋತ್ಸಾ ಹಿಸಲು 185ಕೋಟಿ ನೀಡುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಗೆ ಹೊರ ರಾಜ್ಯಗಳು ಮತ್ತು ನೆರೆ-ಹೊರೆ ಜಿಲ್ಲೆಗಳಿಂದ ಬರುವ ಭಾರಿ ಟ್ರಾನ್ಸ್ಪೋರ್ಟ್ ಮತ್ತು ಟ್ರಕ್‌ಗಳ ನಿಲುಗಡೆಗೆ ಎಲ್ಲೂ ಸ್ಥಳಗಳಿಲ್ಲ ಅದಕ್ಕಾಗಿ ಬಹು ಬೇಡಿಕೆಯಾಗಿರುವ ಟ್ರಕ್ ಟರ್ಮಿನಲ್ ನಿರ್ಮಿಸಲು ಇದಕ್ಕೆ ಸಂಬಂಧಪಟ್ಟ ಇಲಾಖೆಯು ಸರ್ಕಾರಕ್ಕೆ ಒತ್ತಡ ತಂದು ಸ್ಥಳ ನಿಗದಿ ಮಾಡಲು ಒತ್ತಾಯಿಸಿದ್ದಾರೆ.
ಜೊತೆಗೆ ಶಿವಮೊಗ್ಗ ಜಿಲ್ಲೆಯ ಜೋಗ ಸೇರಿದಂತೆ ಇನ್ನಿತರ ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಇನ್ನಷ್ಠು ಅನುದಾನ ನೀಡಿದಲ್ಲಿ ವ್ಯಾಪಾರ ವಹಿವಾಟು ಕಾರ್ಯಗಳು ಹೆಚ್ಚು ವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಬಿರುಬೇಸಿಗೆಯಲ್ಲಿ ತಂಪು ರಾಗಿ ಗಂಜಿ ನೀಡುವ ಕಾಯಕದ “ಅಜ್ಜಿ” ಗೆ ಆತ್ಮೀಯ ಸಮ್ಮಾನ

0

ರೋಟರಿ ಧ್ಯೇಯ ವಕೇಷನಲ್ ಅವಾರ್ಡ್ ಮತ್ತು ಸ್ವಯಂ-ಮಹಿಳಾ ಉದ್ಯೋಗಿಗಳನ್ನು ಗುರುತಿಸುವ ಸಲುವಾಗಿ ಇಂದು ಪ್ರೀಡಂಪಾರ್ಕ್ ಬಳಿ ರಾಗಿಅಂಬ್ಲಿ ಮಜ್ಜಿಗೆ ಮಾರಾಟ ಮಾಡುವ, ಮೂಲತಃ ತಮಿಳುನಾಡಿನ ಶ್ರೀಮತಿ ಶಾಕುಂತಲಮ್ಮ (71) ಕೋಂ ದಿ:ಪಾಂಡುರಂಗ ರವರು ಪ್ರತಿದಿನ ವಾಯುವಿಹಾರಕ್ಕೆ ಆಗಮಿಸುವವರಿಗೆ ಹಾಗೂ ತಕ್ಷಣಕ್ಕೆ ಹಸಿವು ನೀಗಿಸಲು ಉತ್ತಮ ಆರೋಗ್ಯ ಪಾನಿಯ ಕೈಗೆಟುಕುವ ಬೆಲೆಗೆ ಮಾರಾಟಾಡುತ್ತ, ಈ ಬಿರುಬೇಸಿಗೆಯಲ್ಲಿ ದೇಹಕ್ಕೆ ತಂಪು ಎರೆಯುವ ರಾಗಿಗಂಜಿ- ಮಾವಿನ ಉಪ್ಪನಕಾಯಿ, ಮಜ್ಜಿಗೆ ಒಣ ಮೆಣಸಿನಕಾಯಿ ನೆಂಚ್ಚಿಗೆಗೆ ನೀಡುತ್ತಾ ತಮ್ಮ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವುದರೊಂದಿಗೆ, ಬಡ ನಾಗರೀಕರಿಗೆ ಅಮೃತ ನೀಡುವ ಕಾಯಕದಲ್ಲಿ ತೊಡಗಿದ್ದು ಇವರನ್ನು ಅವರು ಕಾಯಕ ಮಾಡುವ ಸ್ಥಳದಲ್ಲೆ ರೋಟರಿ ಜ್ಯುಬಿಲಿ ವತಿಯಿಂದ ಸನ್ಮಾನಿಸಲಾಯಿತು.

ಕಳೆದ ಐವತ್ತು ವರ್ಷದಿಂದ ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಕಾವೇರಿ ಟಿಫನ್ ಹೋಂ ನಡೆಸುತ್ತಿರುವ ಶ್ರೀಮತಿ ಚಂದ್ರಮತಿ (72) ಕೋಂ ಆನಂದ ಐತಾಳ್ ಮೂಲತಃ ಕುಂದಾಪುರದವರು ಚಿಕ್ಕ ಕ್ಯಾಂಟಿನ್ ಪ್ರಾರಂಭಿಸಿ ಜೀವನ ಕಟ್ಟಿ ಕೊಂಡ ಇವರು, ಅಂದು ಬೆಣ್ಣೆ ಖಾಲಿಗೆ ಪ್ರಸಿದ್ದಿ ಹೊಂದಿದ್ದರು. ಇಂದು ನಂದಿನಿ ಹಾಲಿನ ಮಾರಾಟ ಮಾಡುತ್ತ ಒಬ್ಬ ಮಗ, ಒಬ್ಬ ಮಗಳನ್ನು ಹೊಂದಿರುವ ಇವರು ಇಂದಿಗೂ ಬೆಳಿಗ್ಗೆ ಐದರಿಂದ ಬಡಾವಣೆಯ ಎಲ್ಲರ ಮನೆಯ ಕಾಫಿಗೆ ಹಾಲು ಒದಗಿಸುತ್ತಿದ್ದಾರೆ.

ಹೊಸಮನೆಯ ಎರಡನೇ ತಿರುವಿನ ಶ್ರೀಸತ್ಯನಾರಾಯಣ ಪ್ಲೋರ್ ಮಿಲ್ ಮಾಲಿಕರಾದ ಶ್ರೀಮತಿ ಲಕ್ಷ್ಮೀಬಾಯಿ (85) ಕೋಂ ದಿ.ನಾರಾಯಣ್ ರಾವ್ ಇವರು ಕಳೆದ ಅರವತ್ತು ವರ್ಷದಿಂದ ಹಿಟ್ಟಿನ ಗಿರಣಿ ನಡೆಸುತ್ತಾ ಮೂರು ಹೆಣ್ಣು ಮಕ್ಕಳಿಗೆ ಜೀವನ ಕಟ್ಟಿ ಕೊಟ್ಟಿರುತ್ತಾರೆ.

ಅಂದು ಹೊಸಮನೆ, ಸುತ್ತ ಮುತ್ತಲ ಗ್ರಾಮದ ಮನೆ ಮನೆಯಲ್ಲು ರೊಟ್ಟಿ, ಮುದ್ದೆ, ಸಂಬಾರ್ ಮಾಡಲು ಅವಶ್ಯಕವಾದ ನುಣುಪಾದ ಹಿಟ್ಟು ಹಾಕಿ ಕೊಡುತ್ತಾ, ಕಾರದ ಪುಡಿ ಸಂಬಾರ್ ಪುಡಿ ಮಾಡಿ ಕೊಡಲು ಪ್ರತೇಕ ಗಿರಣಿಹಾಕಿ ಮನೆಮಾತಾಗಿದ್ದಾರೆ.

ಶ್ರೀಮತಿ ಇಂದ್ರಾಬಾಯಿ (71) ಕೋಂ ನಾಗೇಶ್ ನಾಯಕ್ ಕಳೆದ ಐವತ್ತು ವರ್ಷದ ಹಿಂದೆ ಅನಾನೆಸ್, ಸೌತೆಕಾಯಿ ತುಂಡು ಮಾಡಿ, ನಿಂಬು ಸೋಡದಿಂದ ಬಡವರ ದಾಹ ತೀರಿಸುತ್ತಿದ್ದ ಇವರು ಇಂದು ಗೋಪಿ ವೃತ್ತದ ಬಳಿ ಅನಾನೆಸ್, ಕಲ್ಲಂಗಡಿ ಹಣ್ಣಿನ ಸಗಟು ವ್ಯಾಪಾರ ಮಾಡುತ್ತಾ, ರೈತರ ಹಾಗೂ ಚಿಕ್ಕ ವ್ಯಾಪಾರಿಗಳ ಕೊಂಡಿಯಾಗಿದ್ದಾರೆ. ಇಬ್ಬರು ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಜೀವನ ಕಟ್ಟಿ ಕೊಟ್ಟಿದ್ದಾರೆ.

ಹೀಗೆ ಸ್ವಂತ ಶ್ರಮದಿಂದ ಜೀವನ ಕಟ್ಟಿ ಕೊಂಡಿರುವ ಸ್ವ- ಉದ್ಯೋಗಿಗಳನ್ನು ಗುರ್ತಿಸಿ ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಗೌರವಿಸುವುದು ರೋಟರಿ ಕಾರ್ಯಕ್ರಮಗಳಲ್ಲಿ ಒಂದು. ಈ ಕಾರ್ಯವನ್ನು ನಗರದ ಏಳನೆ ಕ್ಲಬ್ ಆಗಿರುವ ರೋಟರಿ ಜ್ಯುಬಿಲಿಯ ಈ ವರ್ಷದ ವಿಶೇಷ ಅಧ್ಯಕ್ಷೆ ರೊ.ರೂಪ ಪುಣ್ಯಕೋಟಿ, ಕಾರ್ಯದರ್ಶಿ ರೊ.ಪ್ರಕೃತಿ ಮಂಚಾಲೆ ಇಬ್ಬರು ಮಹಿಳೆಯರು. ಈ ಸಾಲಿನ ವಿಶ್ವ ಮಹಿಳಾದಿನದ ಪ್ರಯುಕ್ತ ನಗರದ ಶ್ರಮಜೀವಿ ಮಹಿಳೆಯರನ್ನು ಅವರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಗೌರವಿಸಿ ನಗರದ ನಾಗರೀಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇವರೊಂದಿಗೆ ಮಾಜಿ ಅಧ್ಯಕ್ಷರಾದ ರೇಣುಕಾರಾಧ್ಯ, ವಾಗೇಶ್, ರಾಜಶೇಖರ್, ಲಕ್ಷ್ಮೀನಾರಾಯಣ್, ಭಾರದ್ವಾಜ್, ಸತ್ಯನಾರಾಯಣ ಸಹಕರಿಸಿದರು.