Thursday, August 13, 2026
Thursday, August 13, 2026
Home Blog Page 245

Bannanje 90- Vishwa Namana ಜನವರಿ 4. ಶಿವಮೊಗ್ಗದಲ್ಲಿ”ಬನ್ನಂಜೆ 90- ವಿಶ್ವನಮನ” ಕಾರ್ಯಕ್ರಮ.

0

Bannanje 90- Vishwa Namana ನಾಡು ಕಂಡ ಶ್ರೇಷ್ಠ ವಿದ್ವಾಂಸ , ಅಪ್ರತಿಮ ಉಪನ್ಯಾಸಕಾರ , ಕವಿ, ಪತ್ರಕರ್ತ , ವಿದ್ಯಾ ವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಬಹುಮುಖಿ ವ್ಯಕ್ತಿತ್ವವನ್ನು ಸ್ಮರಿಸುವ ಬನ್ನಂಜೆ 90 ವಿಶ್ವನಮನ” ಶಿವಮೊಗ್ಗದಲ್ಲಿ ಬರುವ ಭಾನುವಾರ (04/01/2026) ಸಂಜೆ 4ರಿಂದ ರಾತ್ರಿ 9ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಬನ್ನಂಜೆ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ , ಬನ್ನಂಜೆ ಅಭಿಮಾನಿ ಬಳಗ , ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್ ಹಾಗು ಅನೇಕ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗವಿದೆ

Bannanje 90- Vishwa Namana ಸಾಂಸ್ಕೃತಿಕ ಲೋಕದ ಅನೇಕ ಪ್ರಮುಖರು ಈ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ .
ಬನ್ನಿ, ಕೊಂಚ ಹೊತ್ತು ಬನ್ನಂಜೆಯವರ ವಾಜ್ಮಯ ಪ್ರಪಂಚದಲ್ಲಿ ವಿಹರಿಸೋಣ… ಕಾರ್ಯಕ್ರಮದ ನಂತರ ಸಹಭೋಜನ ಮಾಡೋಣ

Hulikal Ghat ಹುಲಿಕಲ್ ಘಾಟಿಯಲ್ಲಿ ಖಾಸಗಿ ಬಸ್ ಅಪಘಾತ: ಮಗು ಸಾವು, ಮೂವರ ಸ್ಥಿತಿ ಗಂಭೀರ

0

Hulikal Ghat ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್
ಘಾಟಿಯಲ್ಲಿ ಖಾಸಗಿ ಬಸ್‌ ಅಪಘಾತ ಸಂಭವಿಸಿ ಮಗುವೊಂದು ಸಾವಿಗೀಡಾಗಿದೆ.
ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಯ ಬಸ್‌
ಹುಲಿಕಲ್‌ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂ
ಆಗಿದೆ.
ಅಪಘಾತದಲ್ಲಿ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಶರೀಫಾ ಬಿ (57), ಇಮಾಮ್ ಸಾಬ್ (73) ಹಾಗೂ ಸಫಾನ (28) ಗಾಯಗೊಂಡಿದ್ದಾರೆ.

Hulikal Ghat ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ರವಾನೆಮಾಡಲಾಗಿದೆ.
ಬೆಳಗಿನ ಜಾವ 3 ಗಂಟೆಗೆ ನಡೆದ ಘಟನೆ ಸಂಭವಿಸಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

Kuvempu ಕುವೆಂಪು ಅವರ ಗೀತೆಗಳು ಸಮಾಜದ ಓರೆಕೋರೆಗಳನ್ನ ತಿದ್ದುವಲ್ಲಿ ಯಶಸ್ವಿಯಾಗಿವೆ- ಶಾಂತಾ ಶೆಟ್ಟಿ

0

Kuvempu ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು ರವರ ಕೊಡುಗೆ ಅವಿಸ್ಮರಣೀಯ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು , ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ ಹೇಳಿದರು.

ಅವರು ಇಂದು ಕುವೆಂಪುರಂಗ ಮಂದಿರದ ಆವರಣದಲ್ಲಿ ರಾಷ್ಟ್ರಕವಿ ರಸ ಋಷಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕ ಹಾಗೂ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಗೀತಾ ಹಾಗೂ ಕವಿತೆ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುವೆಂಪು ಅವರ ಕ್ರಾಂತಿಕಾರಿ ಗೀತೆಗಳು ಹಾಗೂ ನಾಡಗೀತೆ ಇಂದಿಗೂ ಸಹ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿವೆ ಹಾಗೆ ಅವರ ಒಂದೊಂದು ಗೀತೆಗಳು ಸಹ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದರು.
ಹಾಗೆಯೇ ಈ ನಾಡು ಕಂಡ ಒಬ್ಬ ಶ್ರೇಷ್ಠ ಗಾಯಕ ಸಿ ಅಶ್ವಥ್ ಅವರ ಜನ್ಮದಿನವೂ ಕೂಡ. ಅವರ ಕನ್ನಡವೇ ಸತ್ಯ ಹಾಗೂ ಭಾವಗೀತೆ ಅನೇಕ ಗೀತೆಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿವೆ ಎಂದರು.

Kuvempu ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ ಹಾಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲಗಟ್ಟಿನ ಚಿಂತನೆಗಳನ್ನು ಕಡೆಗಣಿಸದ ವಿಶ್ವ ಮಾನವ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಧೀಮಂತ ಸಾಹಿತಿ ,ಕನ್ನಡದ ಎರಡನೇ ರಾಷ್ಟ್ರಕವಿ, ಪಂಪ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಇಂತಹ ಮೇರು ವ್ಯಕ್ತಿತ್ವ ಇರುವ ಕುವೆಂಪು ಅವರು ನಮ್ಮ ಜಿಲ್ಲೆಯವರೇ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ, ಕುವೆಂಪು ಅವರ ಗೀತೆಗಳು ಒಂದೊಂದು ಸಾಲುಗಳು ಸಹ ತುಂಬಾ ಅರ್ಥಪೂರ್ಣ ಎಂದರು.
ಕುವೆಂಪು ಅವರು ಕೇವಲ ಕವಿ ಸಾಹಿತಿಯಾಗಿ ಅಷ್ಟೇ ಅಲ್ಲದೆ ಸಾಮಾಜಿಕ ಧಾರ್ಮಿಕ ರಾಜಕೀಯ ಗುರು ಆಗಿ ಪರಿಸರದ ಪ್ರೇಮಿಯಾಗಿ ಮಾರ್ಗದರ್ಶಕರು ಚಿಂತಕರು ಆಗಿ ಸಾಹಿತ್ಯ ಕೃಷಿ ನಡೆಸಿದವರು ಅವರು ಹಾಕಿಕೊಟ್ಟ ಮಂತ್ರ ಮಾಂಗಲ್ಯ ಇಂದಿಗೂ ಸಹ ಜನಪ್ರಿಯತೆ ಪಡೆಯುವುದರ ಜೊತೆಗೆ ಪ್ರಸ್ತುತವಾಗಿದೆ
ಹಾಗೆ ಅವರ ತತ್ವ ಸಿದ್ಧಾಂತ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಇದೇ ಸಂದರ್ಭದಲ್ಲಿ ಕವಿ ಹಾಗೂ ಪರಿಷತ್ತಿನ ಸಂಚಾರಕರಾದ ಶೋಭಾ ಸತೀಶ್ ಅವರು ತಾವೇ ರಚಿಸಿದ ಕುವೆಂಪು ಕವನವನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಸದಸ್ಯರು ಪದಾಧಿಕಾರಿಗಳು ಕುವೆಂಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಿಂದು ವಿಜಯಕುಮಾರ್., ದಾಕ್ಷಾಯಿಣಿ, ರಾಜಕುಮಾರ್ ,
ರಮಾ ಸುಬ್ರಹ್ಮಣ್ಯ, ನಳಿನಾಕ್ಷಿ ರುದ್ರಪ್ಪ ಚೀಲೂರ್. ಸುಶೀಲ ಷಣ್ಮುಗಂ, ಲೀಲಾವತಿ, ಮಂಜು ನಾಯಕ್, ಹಾಗೂ ಗಾಯಕರು ಉಪಸ್ಥಿತರಿದ್ದರು

Madhu Bangarappa ವಿಶ್ವ ಮಾನವತೆ,ವೈಚಾರಿಕತೆ ಮತ್ತು ಕನ್ನಡಾಭಿಮಾನ ಕುವೆಂಪು ಸಾಹಿತ್ಯದ ವಿಶೇಷತೆ- ಮಧು ಬಂಗಾರಪ್ಪ.

0

Madhu Bangarappa ವಿಶ್ವಮಾನವ ಸಂದೇಶ, ವೈಚಾರಿಕತೆ ಮತ್ತು ಕನ್ನಡ ಭಾಷಾಭಿಮಾನ ಕುವೆಂಪುರವರ ಸಾಹಿತ್ಯದ ವಿಶೇಷತೆಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬಣ್ಣಿಸಿದರು.
ಅವರು ಇಂದು ತೀರ್ಥಹಳ್ಳಿ ಸಮೀಪದ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನೋತ್ಸವದ ನಿಮಿತ್ತ ಆಚರಿಸಲಾಗುವ ವಿಶ್ವಮಾನದ ದಿನಾಚರಣೆಯಂದು ಖ್ಯಾತ ಕವಿಗಳಿಗೆ ನೀಡಲಾಗುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕನ್ನಡದ ಮೇರು ಕವಿ ಕುವೆಂಪುರವರಿಗೆ ಹಾಗೂ ಹಿರಿಯ ನಟ ಡಾ ರಾಜಕುಮಾರ್ ಅವರಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್. ಬಂಗಾರಪ್ಪನವರು ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕುವೆಂಪುರವರ ಜನ್ಮಸ್ಥಳ ಕುಪ್ಪಳಿಯಲ್ಲಿ ಪ್ರತಿ ವರ್ಷ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನ ಇಚ್ಚಿಸಿದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿದ್ವತ್ ಜನರ ಸಮ್ಮುಖದಲ್ಲಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಆಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೂಡಲಾಗುವುದು. ಕುವೆಂಪು ಅವರ ಸ್ಮರಣಾರ್ಥ ಏರ್ಪಡಿಸಲಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತಾರೂಢ ಸರ್ಕಾರಗಳು ಸಕಾಲಿಕವಾಗಿ ಸ್ಪಂದಿಸಿವೆ ಎಂದರು.
ಸಂದ್ಯಾಕಾಲದಲ್ಲಿ ಮೈಸೂರಿನಲ್ಲಿದ್ದ ಕವಿ ಕುವೆಂಪು ಅವರು ತಮ್ಮ ಹುಟ್ಟೂರು ಹಿರೇಕೂಡಿಗೆಗೆ ಹೋಗುವ ಇಂಗಿತವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್.ಬಂಗಾರಪ್ಪ ಅವರಲ್ಲಿ ಅರುಹಿದರು. ಎಸ್.ಬಂಗಾರಪ್ಪ ಅವರು ಕೂಡಲೇ ವಿಶೇಷ ಹೆಲಿಕ್ಯಾಪ್ಟರ್‌ಒಂದನ್ನು ಸಿದ್ಧಪಡಿಸಿ, ಹಿರೇಕೂಡಿಗೆಗೆ ಹೋಗಿಬರುವಂತೆ ಹಾಗೂ ತಮ್ಮ ಹೆಸರಿನಲ್ಲಿ ಶಂಕರಘಟ್ಟದಲ್ಲಿ ಆರಂಭಿಸಿರುವ ವಿಶ್ವವಿದ್ಯಾಲಯವನ್ನು ನೋಡಿಬರುವಂತೆ ಮನವಿ ಮಾಡಿದ್ದರು ಎಂಬುದು ಕವಿಗಳ ಮೇಲೆ ಬಂಗಾರಪ್ಪ ಅವರಿಗೆ ಇದ್ದ ಕಾಳಜಿ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಕುವೆಂಪು ಸಾಹಿತ್ಯದ ವಿಶೇಷ ಮಹತ್ವದ ಸಂಗತಿಗಳನ್ನು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಕನ್ನಡ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಮೊದಲ ಜ್ಞಾನಪೀಠ ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಮೂಲಕ ಕನ್ನಡಕ್ಕೆ ರಾಷ್ಟ್ರಕವಿ ಬಿರುದು ತಂದುಕೊಟ್ಟಿದ್ದು ಕುವೆಂಪು. ಅವರ ಅವಿರತ ಹಾಗೂ ಮೌಲಿಕ ಸಾಹಿತ್ಯಕೃಷಿಯಿಂದಾಗಿ ಕನ್ನಡ ಸಮೃದ್ಧ ಮತ್ತು ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು.
ಜಾತಿ, ಮತ, ಧರ್ಮ, ಭೇದಗಳಿಲ್ಲದ ಸರ್ವೋದಯದ ಮಾನವತಾವಾದವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು ಕುವೆಂಪು. ಅವರ ‘ವಿಶ್ವಮಾನವ’ ಕಲ್ಪನೆ ಸರ್ವೋತ್ಕೃಷ್ಟವಾದುದು. ಅವರು ಸಾಮಾಜಿಕ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಮೌಲ್ಯಗಳನ್ನು ಮರು-ವ್ಯಾಖ್ಯಾನಿಸಲು ಪ್ರೇರೇಪಿಸಿದರು. ಪಾಶ್ಚಾತ್ಯ ಸಾಹಿತ್ಯದ ಪ್ರಭಾವವಿದ್ದರೂ, ಕನ್ನಡತನವನ್ನು ಉಳಿಸಿದವರಲ್ಲಿ ಕುವೆಂಪು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು. ಕುವೆಂಪುರವರ ಸಾಹಿತ್ಯವು ಆಧುನಿಕತೆ, ಮಾನವೀಯತೆ ಮತ್ತು ಕನ್ನಡದ ಭಾಷಾ ಸೌಂದರ್ಯದ ಮಹಾನ್ ಸಂಗಮವಾಗಿದೆ ಮಾತ್ರವಲ್ಲ ಕನ್ನಡ ಸಾಹಿತ್ಯವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದೆ. ಇಂತಹ ಜಗದಕವಿ, ಯುಗದ ಕವಿ, ಕನ್ನಡದ ಮೇರುಕವಿ ಪುಟ್ಟಪ್ಪನವರು ಜನಿಸಿದ ನೆಲದಲ್ಲಿ ನಾವಿದ್ದೇವೆ ಎಂಬುದೇ ಸಂಭ್ರಮದ ಸಂಗತಿ ಎಂದರು.
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ಮಹತ್ವ ಸಾರಿದ ಕುವೆಂಪು ಅವರ ಆಶಯದಂತೆ ಮಾನವೀಯತೆ, ಮನುಷ್ಯತ್ವವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೇ ನೀತಿ ಶಿಕ್ಷಣವನ್ನು ಪ್ರಸಕ್ತ ಸಾಲಿನಿಂದ ಬೋಧಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಕನ್ನಡ ಭಾಷೆಯ ಉಳಿವು-ವಿಕಾಸ, ಶಿಕ್ಷಣಕ್ಕೆ ಒತ್ತು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಪ್ರಸಕ್ತ ಆಡಳಿತಾರೂಢ ಸರ್ಕಾರ ಶಿಕ್ಷಣಕ್ಕಾಗಿ ಪ್ರತಿ ವರ್ಷ 50000ಕೋಟಿ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದ ಅವರು, ಒಂದರಿಂದ ಹತ್ತನೆ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು,ಗಾಂಧೀಜಿಯವರ ಸಪ್ತಪಾತಕಗಳು ಮತ್ತು ಧ್ಯಾನಸ್ಥ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ. ಅಂತೆಯೇ ಜಾತ್ಯಾತೀತ ಭಾವವನ್ನು ಪ್ರತಿಬಿಂಬಿಸುವ ಸಂವಿಧಾನದ ಪೀಠಿಕೆಯನ್ನು ಅಚ್ಚು ಹಾಕಿಸಲು ಉದ್ದೇಶಿಸಲಾಗಿದೆ ಎಂದರು.
ಪ್ರತಿಷ್ಟಾನದಿಂದ ನೀಡಲಾಗುವ 2025ರ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ ಬಾಜನರಾದ ಕೊಂಕಣಿ ಮತ್ತು ಮರಾಠಿ ದ್ವಿಭಾಷಾ ಕವಿ ಮಹಾಬಳೇಶ್ವರ ಸೈಲ್‌ಅವರು ಕೃತಜ್ಞತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಕುವೆಂಪು ಅವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕವಾಗಿದೆ ಎಂದರು.
ಕುವೆಂಫು ನಾಡುನುಡಿಯನ್ನು ಪ್ರೀತಿಸಿದವರು, ಅವರ ಕೃತಿ ನಮ್ಮೆಲ್ಲರ ಕಿರೀಟಪ್ರಾಯವಾಗಿದೆ. ರಾಮಾಯಣ ಕೃತಿಯಲ್ಲಿ ಊರ್ಮಿಳೆಯ ಪಾತ್ರದ ಕುರಿತು ಕವಿ ಕುವೆಂಪು ಅವರು ವಿಶೇಷ ಬೆಳಕು ಚೆಲ್ಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಎಲ್ಲರಲ್ಲೂ ವಿಶ್ವಪ್ರೇಮ, ಪ್ರಕೃತಿ ಪ್ರೇಮವನ್ನು ಬೆಳೆಸಿದ್ದಾರೆ. ರಾಮಾಯಣ ದರ್ಶನಂ ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಅವು ಗದ್ಯಮಹಾಕಾವ್ಯಗಳೇ ಆಗಿವೆ. ಅವರ ವೈಚಾರಿಕ ನಿಲುವು ನಮಗೆಲ್ಲರಿಗೂ ಜೀವನ ವಿಧಾನಗಳಾಗಿವೆ ಎಂದರು.

Madhu Bangarappa ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆಯನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಕುಪ್ಪಳಿ ಎಲ್ಲಾ ಭಾಷಿಕರ ಒಕ್ಕೂಟವಾಗಿ ಪ್ರತಿಬಿಂಬಿತವಾಗಿದೆ. ಡಾ.ಶರತ್‌ಅನಂತಮೂರ್ತಿ, ಕುವೆಂಪು ವಿವಿ ಕುಲಪತಿಗಳು, ಶಂಕರಘಟ್ಟ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುವೆಂಪು ಪ್ರತಿಷ್ಟಾನದ ಅ‍ಧ್ಯಕ್ಷ ಡಾ.ಬಿ.ಎಲ್.ಶಂಕರ್‌ ಅವರು ಮಾತನಾಡಿ, ಕವಿಶೈಲ, ಕುಪ್ಪಳಿಯ ವಿಕಾಸಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ. ವರ್ಷಕ್ಕೆ ಮೂರ್ನಾಲ್ಕು ಲಕ್ಷ ಜನ ಭೇಟಿ ನೀಡುವ ಪ್ರವಾಸಿ ತಾಣವಾಗಿ ಕವಿಮನೆ ಪ್ರಸಿದ್ಧಿ ಪಡೆದಿದೆ. ಪೂರ್ಣಚಂದ್ರ ತೇಜಸ್ವಿಯವರ ಸಲಹೆಯಂತೆ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌ಅವರು ಕವಿಮನೆಯ ಸುತ್ತಮುತ್ತಲ ಪ್ರದೇಶವನ್ನು ಕುವೆಂಪು ಜೈವಿಕ ಅರಣ್ಯ ಪ್ರದೇಶ ಎಂದು ಘೋಷಿಸಿದರು. ಈ ಸ್ಥಳ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತದಂತೆ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕುವೆಂಪು ಕಲಾಕ್ಷೇತ್ರದ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ಮುಂದಾಗಿದ್ದಾರೆ. ಆದಾಗ್ಯೂ ಇನ್ನೂ 8-9ಕೋಟಿ. ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲು ಸಹಕಾರ ನೀಡಬೇಕು. ಕುವೆಂಪು ವಿರಚಿತ ನಾಡಗೀತೆಯನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ, ಕಮ್ಮಟಗಳು, ಪ್ರಬಂಧ ಸ್ಪರ್ಧೆಗಳು ನಡೆಯುವಂತಾಗಬೇಕೆಂದವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶಯದಂತೆ ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ನೀಡಿದ ಮಾನವೀಯತೆಯ ಸಂದೇಶ ಎಲ್ಲರಿಗೂ ಎಲ್ಲಾ ಕಾಲಕ್ಕೂ ಪ್ರೇರಣದಾಯಿಯಾಗಿದೆ ಎಂದರು.
ಜಾತಿ ಇಂದು ಎಲ್ಲಾ ನಾಯಕರ ಊರುಗೋಲಾಗಿದೆ. ತತ್ವ ಸಿದ್ಧಾಂತಗಳ ಬದಲಾಗಿ ಜಾತಿ ವ್ಯವಸ್ಥೆ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಅರಿತು ನಡೆಯುವ ಅಗತ್ಯವಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು ಅವರು ಕುವೆಂಪು ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೃತಿಯಿಂದಾದ ಭಾಗಗಳ ಚಿತ್ರಗಳನ್ನು ಮುದ್ರಿಸಿದ 2026ರ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌, ರಾಷ್ಟ್ರಕವಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ, ದೇವಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗಿರಿಜಾ ಕುಮಾರ್‌, ದೇವಂಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಹೆಚ್.ಪಿ.ಸರೋಜ, ನಾಗರಾಜ ಟಿ.ಎಸ್., ಪ್ರತಿಷ್ಟಾನದ ಸಮಕಾರ್ಯದರ್ಶಿ ಕಡಿದಾಳ್‌ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ಯು.ಹೆಚ್.‌ಸೇರಿದಂತೆ ನಾಡಿನ ಹಿರಿಯ ಕವಿ-ಕಲಾವಿದರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Kuvempu ವಿಚಾರ ಕ್ರಾಂತಿಯ ಸ್ಫುರಣೆ. ಕುವೆಂಪು ಒಳ ಚಿಂತನೆಯ ಹರಿವು.ಲೇ- ಡಾ.ರವಿ.ಎಂ.ಸಿದ್ಲಿಪುರ.

0

Kuvempu ಯುಗಚೇತನ, ರಸಋಷಿ ಕುವೆಂಪು ಅವರ ಜನ್ಮದಿನವು ಕೇವಲ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವಷ್ಟೇ ಅಲ್ಲ; ಅದು ವೈಚಾರಿಕತೆಯ ದೀಪವನ್ನು ಹಚ್ಚಿ, ಅಜ್ಞಾನದ ಕತ್ತಲೆಯನ್ನು ಸರಿಸಿ, ನಾಡಿನ ಚೇತನವನ್ನು ಎಚ್ಚರಿಸುವ ಪವಿತ್ರ ದಿನವಾಗಿದೆ. ಕುವೆಂಪು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಅದಮ್ಯ ಶಕ್ತಿ, ಒಂದು ಪ್ರಚಂಡ ವೈಚಾರಿಕ ಆಂದೋಲನ ಮತ್ತು ಅಧ್ಯಾತ್ಮದ ಉನ್ನತ ಶಿಖರ. ಅವರ ಬದುಕು ಮತ್ತು ಬರಹಗಳು ಕೇವಲ ಸಾಹಿತ್ಯದ ಸರಕುಗಳಲ್ಲ, ಬದಲಿಗೆ ಅವು ಬದುಕನ್ನು ಕಟ್ಟಿಕೊಡುವ, ದಾರಿತಪ್ಪಿದ ಸಮಾಜಕ್ಕೆ ಬೆಳಕು ನೀಡುವ ದೀವಿಗೆಗಳು. ಇಂದು ನಾವು ಕೇವಲ ಅವರ ಕವಿತೆಗಳನ್ನು ಹಾಡಿ ಹೊಗಳುವುದಷ್ಟೇ ಸಾಲದು; ಅವರು ತಮ್ಮ ಬರಹಗಳಲ್ಲಿ ಪ್ರತಿಪಾದಿಸಿದ ಪ್ರಖರವಾದ ವಿಚಾರಧಾರೆಗಳನ್ನು, ಯುವಜನತೆಗೆ ನೀಡಿದ ಕರೆಗಳನ್ನು ಮತ್ತು ಶಿಕ್ಷಣ ಹಾಗೂ ಸಂಸ್ಕೃತಿಯ ಕುರಿತಾದ ಅವರ ದಿಕ್ಸೂಚಿಗಳನ್ನು ಮನನ ಮಾಡಿಕೊಳ್ಳುವುದು ಅತ್ಯಗತ್ಯ. ಅವರ ಕೃತಿಗಳಲ್ಲಿ ಹರಡಿರುವ ಚಿಂತನೆಗಳು ಇಂದಿನ ತಲ್ಲಣದ ಬದುಕಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲವು.

ಕುವೆಂಪು ಅವರ ವ್ಯಕ್ತಿತ್ವವು ಮಲೆನಾಡಿನ ಹಸಿರು ಸಿರಿಯಷ್ಟೇ ರಮಣೀಯವೂ ಮತ್ತು ಸಹ್ಯಾದ್ರಿಯ ಬೆಟ್ಟಗಳಷ್ಟೇ ಗಂಭೀರವೂ ಆಗಿತ್ತು. ಅವರ ಸಾಹಿತ್ಯ ಕೃಷಿಯು ಕೇವಲ ಕಲ್ಪನೆಯ ವಿಲಾಸವಾಗಿರದೆ, ಅದು ಒಂದು ತಪಸ್ಸಾಗಿತ್ತು. ಅವರು ಹೇಳುವಂತೆ, ಸಾಹಿತ್ಯವೆಂಬುದು ಮನೋರಂಜನೆಯ ಸರಕಲ್ಲ, ಅದು ಆತ್ಮಶ್ರೀಯ ಸಾಧನೆಯ ಸೋಪಾನ. ಅದು ಅಜ್ಞಾನದ ಕತ್ತಲೆಯಲ್ಲಿ ತತ್ತರಿಸುತ್ತಿದ್ದ ಸಮಾಜವನ್ನು ಎಚ್ಚರಿಸುವ ರಣಕಹಳೆಯಾಗಬೇಕೆಂದು ಅವರು ಆಶಿಸಿದ್ದರು. ಅವರ ʻವಿಚಾರ ಕ್ರಾಂತಿಗೆ ಆಹ್ವಾನʼ ಕೃತಿಯಲ್ಲಿ ವ್ಯಕ್ತವಾಗಿರುವಂತೆ, ನಮ್ಮ ಸಮಾಜವು ಶತಮಾನಗಳಿಂದ ಮತ, ಮೌಢ್ಯ ಮತ್ತು ಕಂದಾಚಾರಗಳೆಂಬ ಕಬ್ಬಿಣದ ಸರಪಳಿಗಳಲ್ಲಿ ಬಂಧಿಯಾಗಿದೆ. ಯುವಜನತೆಯನ್ನು ಉದ್ದೇಶಿಸಿ ಅವರು ನೀಡಿದ ʻಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಕರೆ, ಇಂದಿಗೂ ಬೌದ್ಧಿಕ ಸ್ವಾತಂತ್ರ್ಯದ ಮೂಲಮಂತ್ರವಾಗಿದೆ. ಮನುಷ್ಯನಿಗೆ ʻಮತಿʼ ಅಥವಾ ಬುದ್ಧಿಯೇ ಅತ್ಯಂತ ದೊಡ್ಡ ಆಸ್ತಿ. ಆ ಮತಿಯನ್ನು ಯಾವುದೋ ಗುರು ಹೇಳಿದನೆಂದೋ, ಪುರಾತನ ಗ್ರಂಥಗಳಲ್ಲಿ ಬರೆದಿದೆಯೆಂದೋ ಅಥವಾ ಸಂಪ್ರದಾಯದ ಹೆಸರಿನಲ್ಲೋ ಅಡಿಯಾಳು ಮಾಡಬಾರದು ಎಂದು ಕುವೆಂಪು ಘಂಟಾಘೋಷವಾಗಿ ಸಾರಿದರು. ನಿರಂಕುಶ ಪ್ರಭುತ್ವದಂತೆ ನಿರಂಕುಶಮತಿಯು ವಿವೇಚನಾರಹಿತವಾದುದಲ್ಲ; ಬದಲಿಗೆ ಅದು ಸತ್ಯಾನ್ವೇಷಣೆಗೆ ತೆರೆದುಕೊಂಡ, ಸಂಯಮಪೂರ್ಣವಾದ ಮತ್ತು ವೈಜ್ಞಾನಿಕ ದೃಷ್ಟಿಯುಳ್ಳ ಜಾಗೃತ ಪ್ರಜ್ಞೆಯಾಗಿದೆ. ಯಾರು ತಮ್ಮ ಬುದ್ಧಿಯನ್ನು ಮತ್ತೊಬ್ಬರ ಪಾದದಡಿ ಒತ್ತೆಯಿಡುತ್ತಾರೋ ಅವರು ತಮ್ಮ ಆತ್ಮಶ್ರೀಯನ್ನೇ ಕಳೆದುಕೊಳ್ಳುತ್ತಾರೆ ಎಂಬುದು ಅವರ ಖಚಿತ ನಿಲುವಾಗಿತ್ತು.

ಕುವೆಂಪು ಅವರ ಮತ್ತೊಂದು ಪ್ರಮುಖ ಕಾಳಜಿ ಶಿಕ್ಷಣ ಮತ್ತು ಭಾಷಾ ಮಾಧ್ಯಮದ ಕುರಿತಾಗಿತ್ತು. ಇಂಗ್ಲಿಶ್ ಭಾಷೆಯ ವ್ಯಾಮೋಹದಲ್ಲಿ ಸಿಲುಕಿ ಕನ್ನಡದ ಕಂದಮ್ಮಗಳು ಅನುಭವಿಸುತ್ತಿದ್ದ ಯಾತನೆಯನ್ನು ಅವರು ತೀವ್ರವಾಗಿ ಖಂಡಿಸಿದರು. ಇಂಗ್ಲಿಶ್ ಎನ್ನುವುದು ಜ್ಞಾನಾರ್ಜನೆಗೆ ಒಂದು ಕಿಟಕಿ ಮಾತ್ರವಾಗಿರಬೇಕೇ ಹೊರತು, ಅದೇ ಮನೆಯೊಡೆಯನಾಗಬಾರದು ಎಂದು ಅವರು ಪ್ರತಿಪಾದಿಸಿದರು. “ಮಗುವಿನ ಬೆಳವಣಿಗೆಗೆ ಬೇಕಾಗಿರುವುದು ಒಂದು ಬಟ್ಟಲು ಹಾಲು. ಅದನ್ನು ಮಣಭಾರದ ಚಿನ್ನದ ಕಡಾಯಿಯಲ್ಲಿ ಹಾಕಿ ಕೊಟ್ಟರೆ, ಮಗು ಆ ಚಿನ್ನದ ಪಾತ್ರೆಯನ್ನು ಎತ್ತಲಾರದೆ ಅದರಡಿ ಸಿಕ್ಕಿ ನಲುಗುತ್ತದೆ” ಎಂಬ ಅವರ ಉಪಮೆ ಇಂದಿಗೂ ಪ್ರಸ್ತುತ. ಇಂಗ್ಲಿಶ್ ಎಂಬ ಚಿನ್ನದ ಕಡಾಯಿಯ ಭಾರಕ್ಕೆ ಸಿಲುಕಿ, ಜ್ಞಾನವೆಂಬ ಹಾಲನ್ನು ಕುಡಿಯಲಾಗದೆ ಎಷ್ಟೋ ಪ್ರತಿಭಾವಂತ ಗ್ರಾಮೀಣ ಮಕ್ಕಳು ಮತ್ತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ನೊಂದು ನುಡಿದಿದ್ದರು. ವಿಜ್ಞಾನವಾಗಲಿ, ತತ್ವಶಾಸ್ತ್ರವಾಗಲಿ, ಅದು ಕನ್ನಡದ ಮೂಲಕವೇ ಮಗುವಿನ ಮನಸ್ಸನ್ನು ತಲುಪಬೇಕು. ಆಗ ಮಾತ್ರ ಜ್ಞಾನವು ಬದುಕಿನ ಭಾಗವಾಗಲು ಸಾಧ್ಯ. ಪರಭಾಷೆಯ ಮೂಲಕ ಕಲಿಯುವ ವಿದ್ಯೆ ಕೇವಲ ಗಿಳಿಪಾಠವಾಗುತ್ತದೆಯೇ ಹೊರತು, ಅದು ರಕ್ತಗತವಾಗಿ ಸೃಜನಶೀಲತೆಯನ್ನು ಅರಳಿಸುವುದಿಲ್ಲ ಎಂಬುದು ಅವರ ಶಿಕ್ಷಣ ಮೀಮಾಂಸೆಯಾಗಿತ್ತು. ಇದೇ ಕಾರಣಕ್ಕಾಗಿಯೇ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಕನ್ನಡದಲ್ಲಿ ಪಠ್ಯಪುಸ್ತಕಗಳ ರಚನೆಗೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ಅವರು ಒತ್ತು ನೀಡಿದರು.

Kuvempu ಕುವೆಂಪು ಅವರ ಆಧ್ಯಾತ್ಮಿಕ ಬದುಕು ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಪ್ರಭಾವದಿಂದ ರೂಪುಗೊಂಡಿತ್ತು. ಅವರ ‘ಗುರುಗಳಾದ’ ಶ್ರೀ ರಾಮಕೃಷ್ಣರು ಮತ್ತು ವಿವೇಕಾನಂದರು ಅವರಿಗೆ ಕೇವಲ ಪೂಜ್ಯವಸ್ತುಗಳಾಗಿರಲಿಲ್ಲ, ಬದಲಿಗೆ ಬದುಕಿನ ದಾರಿದೀಪಗಳಾಗಿದ್ದರು. ಮೈಸೂರಿನ ರಾಮಕೃಷ್ಣ ಆಶ್ರಮದೊಂದಿಗಿನ ಅವರ ಒಡನಾಟ, ಅಲ್ಲಿನ ಸ್ವಾಮೀಜಿಗಳಾದ ಸಿದ್ದೇಶ್ವರಾನಂದರೊಂದಿಗಿನ ಸ್ನೇಹ, ಅವರ ಬದುಕಿನ ಗತಿಯನ್ನೇ ಬದಲಿಸಿತು. ಯುವಕನಾಗಿದ್ದಾಗ ಕುವೆಂಪು ಅವರಿಗೆ ಎದುರಾದ ಆಧ್ಯಾತ್ಮಿಕ ಜಿಜ್ಞಾಸೆಗಳಿಗೆ, ಬದುಕಿನ ತೊಳಲಾಟಗಳಿಗೆ ಉತ್ತರ ಸಿಕ್ಕಿದ್ದು ಈ ಗುರು ಪರಂಪರೆಯಿಂದ. ಅವರು ತಮ್ಮ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರ ಬಗ್ಗೆ ಹೊಂದಿದ್ದ ಅಪಾರ ಗೌರವ ಮತ್ತು ಪ್ರೀತಿ ಅವರ ವ್ಯಕ್ತಿತ್ವದ ವಿನಯಶೀಲತೆಯನ್ನು ತೋರಿಸುತ್ತದೆ. ಒಬ್ಬ ಮಹಾನ್ ಕವಿಯಾಗಿದ್ದರೂ, ತಮ್ಮ ಗುರುಗಳ ಎದುರು ಮಗುವಿನಂತೆ ವರ್ತಿಸುತ್ತಿದ್ದ ಅವರ ಸರಳತೆ ಎಲ್ಲರಿಗೂ ಮಾದರಿ.

ಕುವೆಂಪು ಅವರ ವಿಚಾರ ಕ್ರಾಂತಿಯು ಕೇವಲ ಬೌದ್ಧಿಕ ಕಸರತ್ತಾಗಿರಲಿಲ್ಲ. ಅದು ಸಮಾಜದ ತಳಹದಿಯನ್ನೇ ಅಲುಗಾಡಿಸಿ, ಅಲ್ಲಿನ ಕಲ್ಮಶಗಳನ್ನು ತೊಲಗಿಸುವ ಆಶಯವನ್ನು ಹೊಂದಿತ್ತು. ಜಾತಿ, ಮತ, ಪಂಥಗಳ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಅವರು ಉಗ್ರವಾಗಿ ಖಂಡಿಸಿದರು. “ಮತದ ಹೆಸರಿನಲ್ಲಿ, ಸಮಾಜದ ಕಟ್ಟುಕಟ್ಟಳೆಗಳ ಹೆಸರಿನಲ್ಲಿ, ದೈವ ಪಿಶಾಚಿ ಗ್ರಹಗಳ ಹೆಸರಿನಲ್ಲಿ ದುರ್ವ್ಯಯವಾಗುತ್ತಿರುವ ಸಂಪತ್ತನ್ನು ತಡೆಗಟ್ಟಿ, ಅದನ್ನು ಹೆಚ್ಚು ಅವಶ್ಯಕವಾಗಿರುವ ಮತ್ತು ಹೆಚ್ಚು ಉಪಯೋಗಕರವಾಗಿರುವ ಜೀವನ ಪಥಗಳಲ್ಲಿ ವಿನಿಯೋಗಿಸುವಂತೆ ಮಾಡಬೇಕು” ಎಂಬ ಅವರ ಮಾತುಗಳು ಧಾರ್ಮಿಕ ಮೌಢ್ಯದ ವಿರುದ್ಧದ ಅವರ ಸಿಟ್ಟನ್ನು ತೋರಿಸುತ್ತದೆ. ಪೂಜೆ, ಪುನಸ್ಕಾರಗಳಿಗಿಂತಲೂ ಮಿಗಿಲಾಗಿ ದೀನದಲಿತರ ಸೇವೆಯೇ ನಿಜವಾದ ದೈವಾರಾಧನೆ ಎಂದು ಅವರು ನಂಬಿದ್ದರು.

ಕುವೆಂಪು ಅವರ ಸಾಹಿತ್ಯದ ಮತ್ತೊಂದು ಮಹತ್ವದ ಮುಖವೆಂದರೆ ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ. ಇದು ಕೇವಲ ವಾಲ್ಮೀಕಿ ರಾಮಾಯಣದ ಭಾಷಾಂತರವಲ್ಲ, ಬದಲಿಗೆ ಇದೊಂದು ‘ದರ್ಶನ’. ಪ್ರಾಚೀನ ಕಾವ್ಯ ಪರಂಪರೆಯನ್ನು ಆಧುನಿಕ ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವದೊಂದಿಗೆ ಬೆರೆಸಿ ರಚಿಸಿದ ಅದ್ಭುತ ಕೃತಿ ಇದು. ಈ ಕೃತಿಯಲ್ಲಿ ಅವರು ಪ್ರತಿಯೊಂದು ಪಾತ್ರವನ್ನೂ ಹೊಸ ದೃಷ್ಟಿಯಲ್ಲಿ ನೋಡಿದ್ದಾರೆ. ರಾವಣನಂತಹ ಖಳನಾಯಕನನ್ನೂ ಕೂಡ ಗುಣಾತ್ಮಕವಾಗಿ ಪರಿವರ್ತಿಸಿ, ಅವನಲ್ಲಿನ ಅಸುರೀ ಶಕ್ತಿಯು ದೈವೀ ಶಕ್ತಿಗೆ ಶರಣಾಗುವಂತೆ ಚಿತ್ರಿಸಿದ್ದಾರೆ. ವಿಶ್ವಸಾಹಿತ್ಯದ ಮೇರು ಕೃತಿಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಈ ಮಹಾಕಾವ್ಯವು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಆದರೆ ಕುವೆಂಪು ಅವರಿಗೆ ಪ್ರಶಸ್ತಿಗಳಿಗಿಂತಲೂ ಮುಖ್ಯವಾಗಿದ್ದು ಕೃತಿಯು ಓದುಗನ ಮನಸ್ಸಿನಲ್ಲಿ ಉಂಟುಮಾಡುವ ಪರಿವರ್ತನೆ. “ರಾಮಾಯಣದರ್ಶನಂ ಓದುವುದೆಂದರೆ ಅದು ಕೇವಲ ಕಾವ್ಯ ವಾಚನವಲ್ಲ, ಅದೊಂದು ತಪಸ್ಸು” ಎಂದು ಅವರು ಭಾವಿಸಿದ್ದರು.

ಕುವೆಂಪು ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಮತ್ತೊಂದು ಗುಣವೆಂದರೆ ಅವರ ನಿಷ್ಠುರತೆ ಮತ್ತು ಸತ್ಯಪರತೆ. ಅವರು ಎಂದು ಯಾರ ಓಲೈಕೆಗೂ ಜಗ್ಗಿದವರಲ್ಲ. ಸತ್ಯವನ್ನು ಸತ್ಯವೆಂದೇ ಹೇಳುವ ಧೈರ್ಯ ಅವರಿಗಿತ್ತು. ಅಧಿಕಾರಕ್ಕಾಗಲೀ, ಹಣಕ್ಕಾಗಲೀ ಅಥವಾ ಕೀರ್ತಿಗಾಗಲೀ ಅವರು ತಮ್ಮ ತತ್ವಗಳನ್ನು ಬಲಿಕೊಡಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ʻಮಾನಸಗಂಗೋತ್ರಿʼಯ ನಿರ್ಮಾಣದ ಸಂದರ್ಭದಲ್ಲಿ ಅವರು ತೋರಿದ ದೂರದೃಷ್ಟಿ ಮತ್ತು ಛಲ ಅವರ ಆಡಳಿತಾತ್ಮಕ ದಕ್ಷತೆಗೆ ಸಾಕ್ಷಿಯಾಗಿದೆ. ಜ್ಞಾನದ ಗಂಗೆಯು ಪ್ರತಿಯೊಬ್ಬರ ಮನದಂಗಳವನ್ನು ತಲುಪಬೇಕು ಎಂಬ ಆಶಯದೊಂದಿಗೆ ಅವರು ‘ಪ್ರಸಾರಾಂಗ’ದ ಮೂಲಕ ಜ್ಞಾನ ಪ್ರಸಾರ ಕಾರ್ಯವನ್ನು ಕೈಗೊಂಡರು.

ಕುವೆಂಪು ಪ್ರತಿಪಾದಿಸಿದ ʻವಿಶ್ವಮಾನವ ಸಂದೇಶʼ ಅವರ ಸಮಗ್ರ ಚಿಂತನೆಯ ಸಾರವಾಗಿದೆ. ಮನುಷ್ಯನು ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುತ್ತಾನೆ, ಆದರೆ ಬೆಳೆಯುತ್ತಾ ಜಾತಿ, ಮತ, ದೇಶ, ಭಾಷೆಗಳ ಸಂಕೋಲೆಯಲ್ಲಿ ಸಿಲುಕಿ ಅಲ್ಪಮಾನವನಾಗುತ್ತಾನೆ. ಅವನನ್ನು ಮತ್ತೆ ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಮತ್ತು ಸಂಸ್ಕೃತಿಯ ಉದ್ದೇಶವಾಗಬೇಕು ಎಂಬುದು ಅವರ ಆಶಯವಾಗಿತ್ತು. ʻಓ ನನ್ನ ಚೇತನ, ಆಗು ನೀ ಅನಿಗೇತನʼ ಎಂಬ ಅವರ ಕವಿತೆಯ ಸಾಲುಗಳು, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸೀಮಿತ ಗುರುತುಗಳನ್ನು ಮೀರಿ ಅನಂತದ ಕಡೆಗೆ ಚಲಿಸಬೇಕೆಂಬ ಕರೆಯನ್ನು ನೀಡುತ್ತವೆ.

ಕುವೆಂಪು ಎಂದರೆ ಕೇವಲ ಕವಿಶೈಲದ ತುದಿಯಲ್ಲಿ ಕುಳಿತ ಕವಿ ಮಾತ್ರವಲ್ಲ, ಅವರು ಒಂದು ನಿತ್ಯ ಪ್ರೇರಣೆ. ಅವರ ಸಾಹಿತ್ಯವು ನಮಗೆ ಬದುಕನ್ನು ಪ್ರೀತಿಸುವುದನ್ನು ಕಲಿಸುತ್ತದೆ, ಅನ್ಯಾಯದ ವಿರುದ್ಧ ಸಿಡಿದೇಳುವುದನ್ನು ಕಲಿಸುತ್ತದೆ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯನು ಮನುಷ್ಯನನ್ನು ಪ್ರೀತಿಸುವುದನ್ನು ಕಲಿಸುತ್ತದೆ. ಅವರ ಜನ್ಮದಿನದಂದು ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ, ಅವರು ತೋರಿಸಿದ ʻವಿಚಾರ ಕ್ರಾಂತಿʼಯ ಹಾದಿಯಲ್ಲಿ ನಡೆಯುವುದು. ಜಾತಿ ಮತಗಳ ಬೇಲಿಯನ್ನು ಒಡೆದು, ಮೂಢನಂಬಿಕೆಗಳ ಕತ್ತಲೆಯಿಂದ ಹೊರಬಂದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ವಿಶ್ವಮಾನವರಾಗುವತ್ತ ಹೆಜ್ಜೆ ಇಡುವುದೇ ನಾವು ಅವರಿಗೆ ಅರ್ಪಿಸುವ ನಿಜವಾದ ʻಷಷ್ಟಿ ನಮನʼ. ಅವರು ಬೆಳಗಿಸಿದ ಜ್ಞಾನದ ಹಣತೆ ನಮ್ಮೆಲ್ಲರ ಹೃದಯಗಳಲ್ಲಿ ಸದಾ ಉರಿಯುತ್ತಿರಲಿ. ಅವರ ಗಂಭೀರ ಮತ್ತು ಉದಾತ್ತ ಚಿಂತನೆಗಳು ನಮ್ಮ ಬದುಕನ್ನು ಹಸನುಗೊಳಿಸಲಿ. ಈ ಯುಗಪುರುಷನ ಜನ್ಮದಿನದಂದು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಸಂಕಲ್ಪ ಮಾಡೋಣ.

ವಿಶ್ವಮಾನವ ದಿನಾಚರಣೆಯ ಶುಭಾಶಯಗಳು

ಡಾ. ರವಿ ಎಂ. ಸಿದ್ಲಿಪುರ

MESCOM ಡಿಸೆಂಬರ್ 30.ಶಿವಮೊಗ್ಗದಆರ್ ಎಂ.ಎಲ್. ನಗರದ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ.ಮೆಸ್ಕಾಂ ಪ್ರಕಟಣೆ.

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ 5ರ ವ್ಯಾಪ್ತಿಯ ಆರ್.ಎಂ.ಎಲ್. ನಗರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಡಿ. 30 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಕಿದ್ವಾಯಿ ಶಾಲೆ, ಅನ್ಸರ್ ಮಸೀದಿ, ಯುನಿಟಿ ಹಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾವರ್ಜಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Dr. C.V. Rudraradhya ಡಾ.ಸಿ.ವಿ.ರುದ್ರಾರಾಧ್ಯರಿಗೆ ಮೈಸೂರಿನಲ್ಲಿ “ಶಿಕ್ಷಕರ ಕಲ್ಯಾಣಿ‌ ಪ್ರಶಸ್ತಿ” ಪ್ರದಾನ.

0

Dr. C.V. Rudraradhya ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು, ಅಂತರಾಷ್ಟ್ರೀಯ ಸಂಸ್ಥೆ, ಹಲವು ವಿಧದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕಾರ್ಯ ಮಾಡುತ್ತಿದೆ.
ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ , ಸಂಸ್ಥಾಪಕ ಕಾರ್ಯಾಧ್ಯಕ್ಷರು, ಶ್ರೀ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಇವರು ಯೋಗ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅರ್ಪಿಸಿಕೊಂಡು ಸಾಧನೆಯ ಹಿಂದೆ ಇರುವ ತ್ಯಾಗ ಪರಿಶ್ರಮ ನಿಷ್ಠೆ ಮತ್ತು ಸಮಾಜಕ್ಕೆ ಆದರ್ಶವಾಗಿರುವ ಇವರ ಸೇವೆಯನ್ನು ಗುರುತಿಸಿ ಮೈಸೂರಿನಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಶರಣು ವಿಶ್ವ ವಚನ ಫೌಂಡೇಶನ್ ಅಂತರಾಷ್ಟ್ರೀಯ ಸಂಸ್ಥೆ ತನ್ನ ಹನ್ನೊಂದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದಲ್ಲಿ ಡಿಸೆಂಬರ್ 28ರಂದು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಕಲ್ಯಾಣಿ ಪ್ರಶಸ್ತಿ 2025 ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು ಇವರು ಪ್ರಧಾನ ಮಾಡಿದರು.

Dr. C.V. Rudraradhya ಈ ಸಂದರ್ಭದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶ್ರೀಯುತರಾದ ಎಸ್ ರುದ್ರೇಗೌಡರು ಮತ್ತು ಸದಸ್ಯರಾದ ಬಿ.ಸಿ ನಂಜುಂಡ ಶೆಟ್ಟರು, ಹೊಸ ತೋಟ ಸೂರ್ಯನಾರಾಯಣ, ಧನಂಜಯ ಸರ್ಜಿ ಕಲಗೋಡು ರತ್ನಾಕರ್, ಹಾಲಪ್ಪನವರು, ಬಿ.ವೈ. ಅರುಣದೇವಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೋಷಕ ಸಮಿತಿ ಸದಸ್ಯರು ಮತ್ತು ಶಿಷ್ಯ ವೃಂದದವರು ಅಭಿನಂದಿಸಿದ್ದಾರೆ

Sri Sri Prasannanatha Swamiji ಕೇವಲ ಅಂಕಗಳಿಗೆ ಓದಿನ ಉದ್ದೇಶವಾಗುವುದು ಬೇಡ. ಸಂಸ್ಕೃತಿ – ಸಂಸ್ಕಾರದ ಅರಿವಿರಲಿ-ಶ್ರೀ ಪ್ರಸನ್ನನಾಥಶ್ರೀ.

0

Sri Sri Prasannanatha Swamiji ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಪ್ರಸನ್ನನಾಥಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಶಿವಮೊಗ್ಗ ಗುರುಪುರ ಹೊರ ವಲಯದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಪೋಷಕರು ಹೇಳುವಂತಹ ಮಾತನ್ನು ಪಾಲಿಸಿದಾಗ ಉತ್ತಮ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳೆಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು.
ಪರೀಕ್ಷೆಯ ಸಮಯದಲ್ಲಾಗಲಿ ಇತರ ದಿನಗಳಲ್ಲಾಗಲಿ, ವಿದ್ಯಾರ್ಥಿ 8 ಗಂಟೆಗಳ ನಿದ್ರೆ ಅತ್ಯಾವಶ್ಯಕ, ಪರೀಕ್ಷೆಯ ಸಮಯದಲ್ಲಿ ಓದಿನ ಜೊತೆಗೆ ನಿದ್ರೆಯೂ ಇರಬೇಕು. ಪೋಷಕರು ಮಕ್ಕಳನ್ನು ವಿನಾಕಾರಣ ದೂಷಿಸುವುದಾಗಲಿ, ಮತ್ತೊಬ್ಬರೊಡನೆ ಹೋಲಿಸಿ ಶಿಕ್ಷಿಸುವುದಾಗಲಿ ಮಾಡಬಾರದು ಎಂದು ಕಿವಿಮಾತು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಗುರುಗಳಿದ್ದಾಗ ಮಾತ್ರ ಗುರಿ ತಲುಪಲು ಸಾಧ್ಯ,ನಮ್ಮ ಧರ್ಮ ಒಂದು ಮಹತ್ತರ ಮೈಲಿಗಲ್ಲನ್ನು ತಲುಪಿದೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 450ಕ್ಕೂ ಹೆಚ್ಚು ಎಲ್ಲಾ ಬಗೆಯ ಶಾಲಾ ಕಾಲೇಜುಗಳನ್ನು ನಡೆಸುತ್ತಿದ್ದು, ಸುಮಾರು ಒಂದು ಲಕ್ಷ ನಲವತ್ತು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಗುರುಗಳು ಮಾಡುತ್ತಿದ್ದಾರೆ. ನಿಜಕ್ಕೂ ಈ ವಿಷಯದಲ್ಲಿ ನಾವು ಧನ್ಯರು ಎಂದರು.ನಮ್ಮ ಮಕ್ಕಳಿಗೆ ಹಾಗೂ ಸಮಾಜಕ್ಕೆ ಬೇಕಾಗುವ ಒಂದು ಒಳ್ಳೆಯ ಸಂಸ್ಕೃತಿ, ಸಂಸ್ಕಾರ,ಆತ್ಮವಿಶ್ವಾಸ ಅದನ್ನು ನಿರಂತರವಾಗಿ ಸಮಾಜಕ್ಕೆ ಕೊಡುಗೆಯಾಗಿ ಕೊಡುತ್ತಾ ಬಂದಿದೆ.
ಮಕ್ಕಳ ಅಂತರಾಳವನ್ನು ಅರಿತು ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ನಕಾರಾತ್ಮಕ ವಿಚಾರಗಳನ್ನು ತೊಡೆದು ಹಾಕಿ ಒಳ್ಳೆಯ ಸಂಸ್ಕಾರಯುತ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ದೇಹದ ತೂಕ ಇಳಿಸಲು ವ್ಯಾಯಾಮ ಮಾಡಬೇಕು, ಮನಸ್ಸಿನ ಭಾರವನ್ನು ಇಳಿಸಲು ಧ್ಯಾನ ಮಾಡಬೇಕು, ನಿತ್ಯ ನಿರಂತರ ಪರಿಶ್ರಮ ಇದ್ದರೆ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
Sri Sri Prasannanatha Swamiji ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಇಲಾಖೆಯ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡುತ್ತಾ, ಪೋಷಕರು, ಶಿಕ್ಷಕರ ಜೊತೆಗೆ ಕೈಜೋಡಿಸಿದಾಗ ಮಾತ್ರ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು. ಶಿವಮೊಗ್ಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ ಆದರೆ ಶ್ರೀ ಆದಿಚುಂಚನಗಿರಿ ಸಂಸ್ಥೆಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಡುವಂತಹ ಶಾಲೆ ಇದೆ ಅಂದ್ರೆ ಅದು ಗುರುಪುರದ ಬಿಜಿಎಸ್ ಶಾಲೆಯಲ್ಲಿ ಮಾತ್ರ ಕಾಣಬಹುದು. ಇಲ್ಲಿ ಒಂದು ವಿಶೇಷವೇನೆಂದರೆ 200 ಮೀಟರ್ ಗ್ರೌಂಡಿನಲ್ಲಿ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚು ಹೊತ್ತು ಕೊಡುವುದನ್ನು ಕಾಣಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಮೆಸ್ಕಾಂ, ಕಾರ್ಯಪಾಲಕ ಅಭಿಯಂತರಾದ ವೀರೇಂದ್ರ ಹೆಚ್. ಆರ್. ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ರಾಷ್ಟ್ರಮತ್ತು ಅಂತರಾಷ್ಟ್ರ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಬಿಜಿಎಸ್ ಸಾಂಸ್ಕೃತಿಕ ಸಿರಿ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಇಂದಿನ ಆನ್ಲೈನ್ ಯುಗದಲ್ಲಿ ತಂದೆ ತಾಯಿಯರು ಅನಾಥರಾಗುತ್ತಿದ್ದಾರೆ. ಹಿರಿಯರು ನಿಜಕ್ಕೂ ವ್ಯವಸ್ಥೆಯಿಂದ ದೂರವಾಗುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದರು, ಮಕ್ಕಳು ದೂರದ ಎಲ್ಲೋ ಕೆಲಸಕ್ಕೆ ಎಂದು ಹೋಗಿರುತ್ತಾರೆ.ಆನ್ಲೈನ್ ವ್ಯವಸ್ಥೆಯಲ್ಲಿ ಗ್ಯಾಸ್,ನೀರು,ಊಟ, ಆಸ್ಪತ್ರೆ ಇತ್ಯಾದಿ ವ್ಯವಸ್ಥೆಯನ್ನು ಮಾಡುವಂತಹ ಈ ವ್ಯವಸ್ಥೆ ಹಿರಿಯರನ್ನು ಪ್ರೀತಿಯಿಂದ ವಂಚಿತರನ್ನಾಗಿ ಮಾಡಿದೆ.ಇಡೀ ಪ್ರಪಂಚ ಭಾರತದ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ ಆದರೆ ನಾವು ಸಂಸ್ಕೃತಿಯನ್ನೇ ಮರೆಯುವ ಹಂತಕ್ಕೆ ಹೋಗಿದ್ದೇವೆ. ಹಾಗಾಗಿ ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಗುರುಹಿರಿಯರನ್ನು ಗೌರವಿಸುವ,ರಕ್ಷಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮರೆಯದಿರಿ.

ನಾಗೇಂದ್ರ ಡಿ. ಕಂದಾಯ ವಿಭಾಗದ ಅಧಿಕಾರಿಗಳು, ಶಿವಮೊಗ್ಗ. ಮಹಾನಗರ ಪಾಲಿಕೆ.

Shimoga News ಶಿವಮೊಗ್ಗ ಜಿಲ್ಲಾ ವಿತರಕರ ಸಂಘ ನಿರಂತರ ಸಮಾಜಮುಖಿ- ಅಶ್ವಥ್ಥನಾರಾಯಣ ಶೆಟ್ಟಿ.

0

Shimoga News ಶಿವಮೊಗ್ಗ ಜಿಲ್ಲಾ ವಿತರಕರ ಸಂಘ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಅಶ್ವತ್ಥ್ ನಾರಾಯಣ ಶೆಟ್ಟಿ ಹೇಳಿದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಯೋಜಿತ ಸಂಘಗಳಲ್ಲಿ ಸಕ್ರಿಯ ಸಂಘವಾಗಿದೆ. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ ಎಂ.ಸಿ ಮಾತನಾಡಿ, ಆರು ವರ್ಷದಿಂದ ಕ್ಯಾಲೆಂಡರ್‌ಗಳನ್ನು 1,260 ವಿತರಕರಿಗೆ ನೀಡುತ್ತಿದ್ದ, ಸಂಘಕ್ಕೆ ಯಾವುದೇ ರೀತಿ ಆರ್ಥಿಕ ಹೊರೆಯಾಗದಂತೆ ಸದಸ್ಯ ವಿತರಕರುಗಳಲ್ಲಿಯೇ ಪ್ರಾಯೋಜಕತ್ವ ಪಡೆದು ಉಚಿತವಾಗಿ ನೀಡಲಾಗುತ್ತಿದೆ ಎಂದರು.

Shimoga News ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ನಮ್ಮ ಸಂಘವು ಹಿಂದೆ ನಡೆದ ಹಲವಾರು ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡಿದ್ದು, ಮುಂಬರುವ ದಿನಗಳಲ್ಲಿ ಅಗತ್ಯ ಸಹಕಾರ ನೀಡಲಾಗುವುದು.2026ರ ಫೆಬ್ರವರಿ 2ರಂದು ನಡೆಯುವ ವಿತರಕರ ದಿನಾಚರಣೆಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮನೋಹರ್, ವಿತರಕರ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ಬದ್ರಿನಾಥ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಮಹಮದ್ ಇಕ್ಬಾಲ್, ಸುರೇಂದ್ರನಾಥ್, ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ವೆಂಕಟೇಶ್, ಕುಮಾರ್, ಮೋಹನ್ ಕುಮಾರ್, ಮಹಾರುದ್ರಪ್ಪ, ಸಂಘದ ಸದಸ್ಯರು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Shimoga News ಸಿಎಸ್ಆರ್, ನಿಧಿಯಿಂದ ಖಾಸಗಿ ಕಂಪನಿಗಳು ಸರ್ಕಾರಿ ಶಾಲೆಗಳನ್ನ ಸುಧಾರಿಸಲಿ- ಭಗವಂತರಾವ್.

0

Shimoga News ಗ್ರಾಮೀಣ ಪ್ರದೇಶ ಮಕ್ಕಳು ಕೀಳರಿಮೆಯಿಂದ ಹೊರಬರಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಅಗತ್ಯ ಎಂದು ಜಿಲ್ಲಾ ಸರ್ವೋದಯ ಮಂಡಳಿ ಮಾಜಿ ಅಧ್ಯಕ್ಷ ಭಗವಂತ ರಾವ್ ಹೇಳಿದರು.

ಕರ್ನಾಟಕ ಸರ್ವೋದಯ ಮಂಡಲ ಶಿವಮೊಗ್ಗ ಜಿಲ್ಲಾ ಘಟಕ ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳು ಹಾಗೂ ಸಮುದಾಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿರುವ ಗಾಂಧಿ ಚಿಂತನೆ ಕುರಿತು ಜಾಗೃತಿ, ಸಂವಾದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಂಗವಾಗಿ ಮಾಚೇನಹಳ್ಳಿಯ ತುಂಗಾಭದ್ರಾ ಪ್ರೌಢಶಾಲೆ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಖಾಸಗಿ ಕಂಪನಿಗಳು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನಿಧಿಯನ್ನು ಸರ್ಕಾರಿಗಳ ಶಾಲೆಗಳ ಸುಧಾರಣೆಗೆ ಬಳಸುವ ಅಗತ್ಯವಿದೆ ಎಂದು ತಿಳಿಸಿದರು.

ಎಲ್ಲಾ ವೃತ್ತಿಗಳು ಸಮಾನ ಮೌಲ್ಯ ಹೊಂದಿವೆ. ಶ್ರಮದಾಯಕ ಜೀವನವು ಬದುಕಲು ಯೋಗ್ಯವಾದ ಜೀವನವಾಗಿದೆ. ಸರ್ಕಾರದ ಪ್ರಗತಿಯ ಪ್ರಯೋಜನಗಳು ಸಮಾಜದ ಬಡಜನರಿಗೆ ತಲುಪಬೇಕು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಸಮಾಜವನ್ನು ಸುಧಾರಿಸಲು ಮತ್ತು ಕಂಪನಿಗಳಿಗೆ ಸಕಾರಾತ್ಮಕ ಇಮೇಜ್ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಸೋಮಶೇಖರ್, ಸರ್ವೋದಯ ಮಂಡಳಿ ಉದ್ಡೇಶ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಅಹಿಂಸೆಯನ್ನು ಉತ್ತೇಜಿಸುವ ಮೂಲಕ ಎಲ್ಲರ ಕಲ್ಯಾಣ ಸಾಧಿಸುವುದು. ಗಾಂಧಿ ಆದರ್ಶಗಳು ಮರೆಯಾಗುತ್ತಿರುವ ಆಗುತ್ತಿರುವ ಈ ಸಂದಂರ್ಭದಲ್ಲಿ ಮಕ್ಕಳಲ್ಲಿ ಗಾಂಧೀಜಿ ಅವರ ಸರ್ವೋದಯ ತತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದರು.

Shimoga News ಸರ್ವೋದಯ ಮಂಡಳಿ ಜಿಲ್ಲಾ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಅವರ ಸತ್ಯ, ಶಾಂತಿ ಮತ್ತು ಸರಳತೆ, ಅಹಿಂಸೆ, ಸ್ವರಾಜ್ಯ ಮತ್ತು ಸ್ವದೇಶಿ ಬೋಧನೆಗಳ ಮೂಲಕ ಬದುಕಲು ಶಾಲಾ ಮಕ್ಕಳನ್ನು ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಾಲೆಗೆ ಕುರ್ಚಿ ಮಕ್ಕಳಿಗೆ, ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಯಿತು. ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಆರ್.ಮನೋಹರ್, ಖಜಾಂಚಿ ರುದ್ರಪ್ಪ, ಸದಸ್ಯರುಗಳು, ತುಂಗಾಭದ್ರಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸಿದ್ದೇಶ್ವರಪ್ಪ, ಸಂತೋಷ್ ಕುಮಾರ್, ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.