ಅಭಿನಯ ಸರಸ್ವತಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದ ಪ್ರತಿಭಾವಂತನ ಕಣ್ಮರೆ ಊಹಾತೀತ.
ಪುನೀತ್ ಅಭಿನಯದ
ಚಿತ್ರಗಳು ಒಂದಲ್ಲ ಒಂದು ಸಾಮಾಜಿಕ ಸಂದೇಶ ಹೊತ್ತಿದ್ದವು.
ಅದಲ್ಲದೆ ಇತ್ತೀಚೆಗೆ
ಸ್ಪರ್ಧಾತ್ಮಕ ಪರೀಕ್ಷೆಗೆ
ವಿದ್ಯಾರ್ಥಿಗಳನ್ನ ತರಬೇತಿಗೊಳಿಸಲು
ಕೇಂದ್ರವನ್ನೂ ಆರಂಭಿಸಿದ್ದರು. ಸಾಮಾಜಿಕ ಸೇವೆಗೆ
ದೊಡ್ಮನೆಯನ್ನ ಅಣಿಗೊಳಿಸಿದ್ದರು.
ಅವರಲ್ಲಿ ಅನೇಕ ಸೇವಾಕಲ್ಪನೆಗಳಿದ್ದವು.ಅವು ಮೂರ್ತರೂಪಕ್ಕೆ ಬರುವ ಮುನ್ನವೇ
ಮೃತ್ಯು ಅವರನ್ನ ಸೆಳೆದದ್ದು.ಅತ್ಯಂತ
ದುದೃಷ್ಟಕರ.
ಪುನೀತ್ ನಟನೆಯೇ ಅಲ್ಲದೆ ನಮ್ಮ ಹೃದಯವನ್ನ ಗೆದ್ದ
ವರ್ಣಮಯ ಕಾರ್ಯಕ್ರಮ, ಕನ್ನಡದ ಕೋಟ್ಯಾಧಿಪತಿ
ನಿಜಕ್ಕೂ ಸ್ನೇಹ,ಪ್ರೀತಿ,ಮಮತೆ,ಅಭಿಮಾನ ತುಂಬಿ
ಈ ಕಾರ್ಯಕ್ರಮ
ನಡೆಸಿಕೊಟ್ಟಿರುವುದು
ಕನ್ನಡಿಗರು ಮರೆಯುವಂತಿಲ್ಲ.
ನಡೆಸಿದ ಖಾಸಗಿ ಚಾನಲ್ ಕೋಟಿ ಗಳಿಸಿತೋ ಗೊತ್ತಿಲ್ಲ.
ಆದರೆ ನಮ್ಮಂತಹ
ಕೋಟಿ ಹೃದಯಗಳನ್ನ ಗೆದ್ದ
ಅಭಿಮಾನದ ಅಧಿಪತಿ ,ಪುನೀತ್.
ಇದು ಅನನ್ಯ, ಅಪರೂಪ.
ಪುನೀತ್, ಮತ್ತೊಮ್ಮೆ ಹುಟ್ಟಿ ಬಾ…
ಎಂದು ದಯಾಮಯನಲ್ಲಿ
ನಮ್ಮದೆಲ್ಲರದ್ದೂ
ಹೃದಯದುಂಬಿದ
ಕೋರಿಕೆ.
ಪುನೀತ್ ನಿಮ್ಮ ಹಠಾತ್ ಅಗಲಿಕೆಗೆ
ಕೆ-ಲೈವ್ ಮೀಡಿಯ
ಕಂಬನಿಗೆರೆಯುತ್ತದೆ.
“ಅಪ್ಪು”ಗೆ ಸ್ಪಂದನೆ ಹಾರ
ನಾಡ ಪ್ರೇಮ ಹೊಮ್ಮಿಸಿದ ಗೀತ ಗಾಯನ
ಕನ್ನಡದ ಅಭಿಮಾನವನ್ನ ನಾಡಿನಾದ್ಯಂತ ಪ್ರವಹಿಸುವ ಸಲುವಾಗಿ ಎಲ್ಲೆಡೆ ಕನ್ನಡ ಗೀತೆಗಳ ಗಾಯನವನ್ನು ಏರ್ಪಡಿಸಲಾಗುತ್ತಿದೆ. ಕನ್ನಡ ಪ್ರೀತಿ, ಅಭಿಮಾನ ನಾಡಪ್ರೇಮ ಸ್ಫುರಿಸುವ ನಿಟ್ಟಿನಲ್ಲಿ ಈ ಗೀತಗಾಯನ ಪ್ರಮುಖ ಪಾತ್ರವಹಿಸಲಿದೆ. ಅಂತೇ ಶಿವಮೊಗ್ಗದಲ್ಲಿ ಗಮನ ಸೆಳೆದ ವಿಶೇಷ ಗೀತ ಗಾಯನ..
ಕರ್ನಾಟಕ ರಾಜೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಆಯೋಜಿಸಲಾಗಿದ್ದ ವಿಶೇಷ ಗೀತ ಗಾಯನ ಕಾರ್ಯಕ್ರಮವು ನಾಗರೀಕರ ಗಮನ ಸೆಳೆಯಿತು.
ನೂರಾರು ಜನರು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ಬಾರಿಸು ಕನ್ನಡ ಡಿಂಡಿಮ’, ‘ಜೋಗದ ಸಿರಿ ಬೆಳಕಿನಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಗೀತೆಗಳನ್ನು ಹಾಡಿದರು. ಅರುಣ್ ಕುಮಾರ್ ನೇತೃತ್ವದ ತಂಡ ಗೀತಾ ಗಾಯನ ನಡೆಸಿಕೊಟ್ಟಿತು.
ಈ ಸಂದರ್ಭದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸೇರಿದಂತೆ ಅಧಿಕಾರಿಗಳು, ಉಪಸ್ಥಿತರಿದ್ದರು
ರಜನಿಕಾಂತ್ ಆರೋಗ್ಯ ವ್ಯತ್ಯಯ
ಸೂಪರ್ ಸ್ಟಾರ್ ನಟ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದೆ. ಅನಾರೋಗ್ಯದ ನಿಮಿತ್ತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಲಾಗಿದ್ದು, ರಜನಿಕಾಂತ್ ಅವರಿಗೆ ಕೋರೊನಾ ಪರೀಕ್ಷೆ ಸಹ ಮಾಡಿದ್ದಾರೆ. ಅವರ ರಿಪೋರ್ಟ್ ನೆಗೆಟಿವ್ ಬಂದಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ನ.5ಕ್ಕೆ ಪ್ರಧಾನಿ ಕೇದಾರನಾಥ್ ಭೇಟಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 5ರಂದು ಕೇದಾರನಾಥಕ್ಕೆ ಭೇಟಿ ನೀಡುವರು. ಅಲ್ಲಿ ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಲಿದ್ದಾರೆ.
ಅದರೊಂದಿಗೆ ಶ್ರೀ ಆದಿಶಂಕರಾಚಾರ್ಯ ಪ್ರತಿಮೆಯನ್ನು ಸಹ ಅನಾವರಣ ಮಾಡಲಿರುವ ಪ್ರಧಾನಿ,ಅನೇಕ ಪ್ರಮುಖ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
2013ರ ಪ್ರವಾಹದಲ್ಲಿ ಹಾನಿಗೊಳಗಾಗಿದ್ದ ಸಮಾಧಿಯನ್ನು ಮರುನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ ಮೇಲ್ವಿಚಾರಣೆ ನಡೆಸುತ್ತಿರುವ ಪ್ರಧಾನಿಯವರ ಮಾರ್ಗದರ್ಶನದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸರಸ್ವತಿ ಅಷ್ಟಪಥ್ ನಲ್ಲಿ ಪೂರ್ಣಗೊಂಡ ಮತ್ತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪ್ರಧಾನಮಂತ್ರಿಯವರು ಪರಿಶೀಲಿಸಲಿದ್ದಾರೆ.
ಪ್ರಧಾನಮಂತ್ರಿಯವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಷ್ಟಪಥದ ಸರಸ್ವತಿ ರಿಟೇರಿಂಗ್ ವಾಲ್ ಮತ್ತು ಘಾಟ್ ಗಳು, ತೀರ್ಥ ಪುರೋಹಿತ್ ಮನೆಗಳು ಹಾಗೂ ಮಂದಾಕಿನಿ ನದಿಯ ಶೆಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.
ಸುಮಾರು 130 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಯೋಜನೆ ಗಳನ್ನು ಪೂರ್ಣಗೊಳಿಸಲಾಗಿದೆ. ಸಂಗಮ್ ಘಾಟ್, ಪ್ರಥಮ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಅಷ್ಟಪಥ ಕ್ಯೂ ನಿರ್ವಹಣೆ ಮತ್ತು ಮಳೆ ಆಶ್ರಯ ಕೇಂದ್ರ, ಹಾಗೂ ಸರಸ್ವತಿ ನಾಗರಿಕ ಸೌಲಭ್ಯ ಕಟ್ಟಡ ಸೇರಿದಂತೆ 180 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅನೇಕ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಆರ್ಯನ್ : ಬೇಲ್ ಸಿಕ್ಕ ನಿಟ್ಟುಸಿರು
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಮೂರು ವಾರಗಳ ಸೆರೆವಾಸದ ಬಳಿಕ ಕೊನೆಗೂ ಬೇಲ್ ಸಿಕ್ಕಿದೆ.
ಮುಂಬೈ ಕಡಲಿನಲ್ಲಿ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಾ ಡ್ರಗ್ಸ್ ಬಳಸುವ ವೇಳೆ ಎನ್ ಸಿಬಿ ದಾಳಿಗೆ ಒಳಗಾಗಿ ಸಿಕ್ಕಿಬಿದ್ದ ಆರ್ಯನ್ ಖಾನ್ ಮತ್ತು ಇತರೆ ಇಬ್ಬರು ವ್ಯಕ್ತಿಗಳು ಅಕ್ಟೋಬರ್ 3 ರಿಂದ ಎನ್ ಸಿಬಿ ವಶದಲ್ಲಿದ್ದರು.
ಸುಧೀರ್ಘ ಮೂರು ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್. ಡಬ್ಲ್ಯೂ ಸಾಂಬ್ರೆ ಅವರು ಮೂವರು ಆರೋಪಿಗಳಿಗೆ ಜಾಮೀನು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಆರೋಪಿಗಳನ್ನು ಸದ್ಯ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಜಾಮೀನು ಸಿಕ್ಕಿರುವ ವಿಷಯವನ್ನು ಜೈಲು ಸಿಬ್ಬಂದಿ ತಿಳಿಸುತ್ತಿದ್ದಂತೆಯೇ ಮಂದಹಾಸ ಬೀರಿದ ಆರ್ಯನ್, ಜೈಲು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳಿಗೆ ಜಾಮೀನು ನೀಡಬೇಕಾದರೆ ಅವರಿಗೆ ಶರ್ಟು ವಿಧಿಸಬೇಕೆಂದು ಕೋರ್ಟ್ ಗೆ ಎನ್ ಸಿಬಿ ಮನವಿ ಮಾಡಿದೆ.
ಸೆಮಿಫೈನಲ್ ನತ್ತ ವೆಸ್ಟ್ ಇಂಡೀಸ್
ಟಿ-20 ವಿಶ್ವ ಕಪ್ ಟೂರ್ನಿಯ ಸೂಪರ್ -12 ರ A- ಗುಂಪಿನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾ ದೇಶದ ನಡುವೆ ಪಂದ್ಯ ನಡೆಯಿತು. ವೆಸ್ಟ್ ಇಂಡೀಸ್ ತಂಡ ಬಾಂಗ್ಲಾ ದೇಶದ ವಿರುದ್ಧ ಭರ್ಜರಿ ಜಯ ಗಳಿಸಿತು.
ಶಾರ್ಜಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.
ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮಿಯರ್ ಮತ್ತು ಆಂಡ್ರೆ ರಸೆಲ್ ಮುಂತಾದ ದಿಗ್ಗಜರ ಬೌಲಿಂಗ್ ವೈಫಲ್ಯದಿಂದ ವೆಸ್ಟ್ ಇಂಡೀಸ್ ತಂಡದ ರನ್ ರೇಟ್ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ ಕೈ ಹಿಡಿದವರು ನಿಕೋಲಸ್ ಪೂರನ್ 22 ಎಸೆತ ಗಳಲ್ಲಿ 40 ರನ್ ಗಳಿಸಿದ ಪೂರನ್ ಅವರ ರೋಚಕ ಬ್ಯಾಟಿಂಗ್ ನಿಂದ ಸವಾಲಿನ ಮೊತ್ತ ಕಲೆ ಹಾಕಿದರು.
ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರನ್ನ ಬಾಂಗ್ಲಾದೇಶದ ಬೌಲರ್ ಎರಡಂಕಿ ಮೊತ್ತ ಗಳಿಸುವಷ್ಟರ ಮೊದಲೇ ವಿಕೆಟ್ ತೆಗೆದು ವಾಪಸ್ ಕಳುಹಿಸಿದರು. ನಾಯಕ ಮಹಮ್ಮದ್ದುಲ್ಲ ಅವರ ನಿರ್ಧಾರ ಸಮರ್ಥಿಸಿಕೊಂಡು 3 ನೇ ಕ್ರಮಾಂಕದ ಬ್ಯಾಟಿಂಗ್ ಗೆ ಇಳಿದ ಕಾಸ್ಮಸ್ ಚೀಸ್ ಪಾದಾರ್ಪಣೆ ಪಂದ್ಯದಲ್ಲಿ ಬಹಳ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಆಸರೆಯಾದರು.
143 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಬಾಂಗ್ಲಾದೇಶ ಒಂದು ಹಂತದಲ್ಲಿ ಜಯ ಸಾಧಿಸುತ್ತ ಹೆಜ್ಜೆ ಹಾಕಿತ್ತು. ಆದರೆ, ನಂತರ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳ ಪ್ರಾಬಲ್ಯದಿಂದಾಗಿ ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 13 ರನ್ ಬೇಕಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಪ್ರಭಾವಶಾಲಿ ಬೌಲರ್ ಆದ ಆಂಡ್ರೆ ರಸಲ್, ಅವರ ರೋಮಾಂಚಕ ಬೌಲಿಂಗ್ ನಿಂದ ನಿಯಂತ್ರಿಸಿದರು.
ವೆಸ್ಟ್ ಇಂಡೀಸ್ ತಂಡದ ಎಲ್ಲಾ ಆಟಗಾರರಿಂದ ಉತ್ತಮ ಪ್ರದರ್ಶನದ ಪ್ರತಿಫಲವಾಗಿ ಬಾಂಗ್ಲಾದೇಶದ ವಿರುದ್ಧ 3 ರನ್ ಗಳಿಂದ ಜಯ ಸಾಧಿಸಿ ಸತತ ಎರಡು ಸೋಲಿನ ನಂತರ ಚೇತರಿಸಿಕೊಂಡು ಹಾಲಿ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ತೈಲ ಬೆಲೆ ಏರಿಕೆ ಅಗತ್ಯ ವಸ್ತುಗಳ ಧಾರಣೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆ ಅಗತ್ಯ ವಸ್ತುಗಳ ಧಾರಣೆ ಏರಿಕೆಗೆ ಕಾರಣ
ಲೇ :ಪ್ರೊ.ಬಿ.ಎಂ. ಕುಮಾರಸ್ವಾಮಿ , ಶಿವಮೊಗ್ಗ
ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ ಏಳು ಎಂಟು ತಿಂಗಳಿಂದ ವೇಗವಾಗಿ ಏರುತ್ತಿದೆ. ಅದರ ನೇರ ಪರಿಣಾಮವಾಗಿ ಎಲ್ಲ ಅಗತ್ಯ ವಸ್ತುಗಳ ಧಾರಣೆಗಳು ಏರುತ್ತಿವೆ ಜನಜೀವನ ಜರ್ಜರಿತವಾಗುತ್ತಿದೆ.
ತೈಲ ಬೆಲೆ ಏಕೆ ಏರುತ್ತಿದೆ?
ತೈಲ ಬೆಲೆ ಏರಿಕೆಗೆ ಮುಖ್ಯ ಮೂರು ಕಾರಣಗಳಿವೆ
*ಕಚ್ಚಾತೈಲದ ಬೆಲೆ ಏರಿಕೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರುತ್ತಿದೆ. 2020 ರ ಎಪ್ರಿಲ್ ನಲ್ಲಿ ಕಚ್ಚಾತೈಲದ ಬೆಲೆ 1ಬ್ಯಾರಲ್ ಗೆ (159 ಲೀಟರ್) 9 ಡಾಲರ್ ಇತ್ತು. 2021 ರ ಸೆಪ್ಟೆಂಬರ್ ಗೆ ಅದು 74.79 ಡಾಲರ್ ಆಗಿದೆ. ಅಕ್ಟೋಬರ್ 18 ರಂದು 84.84 ಡಾಲರ್ ಮುಟ್ಟಿತ್ತು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಇದು ಒಂದು ಕಾರಣ.
ರೂಪಾಯಿ ಡಾಲರ್ ವಿನಿಮಯ ದರ ಕುಸಿತ
ರೂಪಾಯಿನ ಡಾಲರ್ ವಿನಿಮಯ ದರ ಕುಸಿತ ಇನ್ನೊಂದು ಕಾರಣ. ಈ ವರ್ಷದ ಅಕ್ಟೋಬರ್ 4 ರಂದು ಡಾಲರ್ ಗೆ ರೂಪಾಯಿ 74.31 ಇದ್ದ ವಿನಿಮಯ ದರ 13 ರಂದು ಡಾಲರ್ ಗೆ ರೂಪಾಯಿ 75.26 ದಾಟಿ ಹೋಗಿದೆ. ಡಾಲರ್ ದುಬಾರಿಯಾದಂತೆ ಆಮದಾಗುವ ಕಚ್ಚಾ ತೈಲದ ಬೆಲೆಯೂ ರುಪಾಯಿ ನಲ್ಲಿ ಸಹಜವಾಗಿ ಏರುತ್ತಿದೆ.
ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ
ಪೆಟ್ರೋಲ್ ಡೀಸೆಲ್ ದರಗಳ ವಿಪರೀತ ಏರಿಕೆಗೆ ಮೂರನೆಯ ಹಾಗೂ ಅತ್ಯಂತ ಪ್ರಮುಖ ಕಾರಣ, ತೆರಿಗೆಗಳು. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಡೀಸೆಲ್ ಮೇಲೆ ಬೇರೆ ಬೇರೆ ತೆರಿಗೆಗಳನ್ನು ವಿಧಿಸುತ್ತವೆ. ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ ಹಾಕಿದರೆ, ರಾಜ್ಯ ಸರ್ಕಾರಗಳು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹಾಕುತ್ತವೆ. ಅದರದರ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ. ತೈಲ ಬೆಲೆಯ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಹೊರೆ ಎಷ್ಟಿದೆ ಎಂದರೆ, ಬೆಲೆಯ ಶೇ.60 ಪಾಲು ತೆರಿಗೆಯೇ. ಪೆಟ್ರೋಲಿಯಂ ಸಚಿವಾಲಯದ ವರದಿಯ ಪ್ರಕಾರ 2014 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಮೂಲ ಬೆಲೆಯ ಶೇಕಡ 34 ರಷ್ಟಿತ್ತು. ಫೆಬ್ರುವರಿ 2021 ರ ಹೊತ್ತಿಗೆ ತೆರಿಗೆ ಹೊರೆ ಶೇ. 60 ಕ್ಕೆ ಏರಿತ್ತು ( ಕೇಂದ್ರ ತೆರಿಗೆ ಶೇ. 37 ಹಾಗೂ ರಾಜ್ಯ ತೆರಿಗೆ ಶೇಕಡ 23).
ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ದರ ಕಡಿಮೆ ಮಾಡುವುದು ಒಂದೇ ದಾರಿ.
ಪೆಟ್ರೋಲ್ ಡೀಸೆಲ್ ಪ್ರಧಾನ ಸಾರಿಗೆ ಇಂಧನಗಳಾಗಿದ್ದರಿಂದ ಅವುಗಳ ಬೆಲೆ ಏರಿಕೆಯೇ ಸಕಲ ಸರಕು-ಸೇವೆಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವುದಕ್ಕೆ ತೈಲ ಬೆಲೆ ಏರಿಕೆ ಪ್ರಮುಖ ಕಾರಣ ಎನ್ನಬಹುದು.
ಪೆಟ್ರೋಲ್ ಡಿಸೇಲ್ ಗಳ ತೆರಿಗೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ಪ್ರಾರಂಭವಾಗಿದೆ. ಜಿ.ಎಸ್ ಟಿ ಯಲ್ಲಿ ಅತಿ ಹೆಚ್ಚಿನ ತೆರಿಗೆ ದರ ಶೇಕಡಾ 28. ಐಷಾರಾಮಿ ವಸ್ತುಗಳ ಮೇಲೆ ಈ ತೆರಿಗೆ ವಿಧಿಸಲಾಗುತ್ತದೆ. ಪೆಟ್ರೋಲ್ ಡೀಸೆಲ್ ಗೆ ತೆರಿಗೆ ವಿಧಿಸಿದರೂ ಸಹ ಅವುಗಳ ಬೆಲೆ ಶೇಕಡ 50ರಷ್ಟು ಕಡಿಮೆಯಾಗುತ್ತದೆ.
ಆದರೆ ಇದಕ್ಕೆ ಕೇಂದ್ರ ಸರಕಾರವಾಗಲೀ, ಯಾವುದೇ ರಾಜ್ಯ ಸರ್ಕಾರವಾಗಲೀ ಸಿದ್ಧವಿಲ್ಲ. ಕಾರಣ ಎರಡೂ ಸರ್ಕಾರಗಳಿಗೆ ಅದು ಪ್ರಮುಖ ಆದಾಯ ಮೂಲ.
2020 – 21 ರಲ್ಲಿ ಕೇಂದ್ರಕ್ಕೆ ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯಿಂದ ಬಂದ ಆದಾಯ 3.35 ಲಕ್ಷ ಕೋಟಿ ರೂಪಾಯಿ. 2019 -20 ರಲ್ಲಿ ಕೇವಲ 1.78 ಲಕ್ಷ ಕೋಟಿ ರೂಪಾಯಿ.
ಕರ್ನಾಟಕ ಸರ್ಕಾರಕ್ಕೆ ತೆರಿಗೆಯಿಂದ 2020- 21 ರ ಮೊದಲ ಆರು ತಿಂಗಳಲ್ಲಿ ಬಂದ ಆದಾಯ ರೂಪಾಯಿ 6,492 ಕೋಟಿ. 2021 22 ರ ಇದೇ ಅವಧಿಯಲ್ಲಿ ರೂಪಾಯಿ 9,723 ಕೋಟಿ ಆದಾಯ ಬಂದಿದೆ.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಮೊಳಗಿದ ಕನ್ನಡ ಕಹಳೆ
ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಮಿತ್ತ ಜಿಲ್ಲಾದ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಆಯೋಜಿಸಿದ್ದ ಲಕ್ಷಾಂತರ ಕಂಠಗಳಲ್ಲಿ ಗೀತ ಗಾಯನ ಎಲ್ಲರ ಕಣ್ಮನ ಸೆಳೆಯಿತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಶಿವಮೊಗ್ಗ ಡಿಸಿ ಕಚೇರಿ, ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ 9 ಸ್ಥಳಗಳಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಶ್ವೇತವರ್ಣದ ವಸ್ತ್ರವನ್ನು ಧರಿಸಿ, ವಿವಿಧ ತಂಡಗಳು ಗೀತ ಗಾಯನವನ್ನು ಪ್ರಸ್ತುತಪಡಿಸಿದರು.
ರಾಷ್ಟ್ರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ರಚನೆಯ ಜೋಗದ ಸಿರಿ ಬೆಳಕಿನಲ್ಲಿ, ಮತ್ತು ಹಂಸಲೇಖ ಅವರ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಶಿವಮೊಗ್ಗ ಮಹಾನಗರಪಾಲಿಕೆ ಸಹಯೋಗದಲ್ಲಿ ಶಿವಪ್ಪ ನಾಯಕ ಮಾಲ್ನಲ್ಲಿ ಸಾಮೂಹಿಕ ಗೀತಗಾಯನ ನೆರವೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗದರ್ಶನ ಮತ್ತು ಇತರೆ ಸಹಯೋಗದೊಂದಿಗೆ ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಗಿ, ಸರ್ಕಾರ ನಿಗದಿಪಡಿಸಿದ ಮೂರು ಕನ್ನಡ ಗೀತೆಗಳ ಗಾಯನ ನಂತರ ಸಮಾಪ್ತಿಗೊಂಡಿತು.

ವಿಶ್ವವಿಖ್ಯಾತ ಜೋಗ ಜಲಪಾತದ ಎದುರು ವಸುಧ ಶರ್ಮ ಮತ್ತು ತಂಡದವರು ಕೆ ಎಸ್ ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯನ್ನು ಪ್ರಸ್ತುತಪಡಿಸಿದರು. ಇಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಪಾಲ್ಗೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.
ಕನ್ನಡ ನಾಡು, ನುಡಿ ಗಾಯನಕ್ಕೆ ಜೋಗ ಜಲಪಾತದ ಸೌಂದರ್ಯ ಮಾರು ಹೋದಂತೆ ಭಾಸವಾಗುತ್ತಿತ್ತು.
ಕನ್ನಡ ಉಳಿಸಿ ಬೆಳೆಸುತ್ತೇನೆ ಎನ್ನುವ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಉಪವಿಭಾಗಧಿಕಾರಿ ಡಾ.ಎಲ್. ನಾಗರಾಜ್ ಬೋಧಿಸಿದರು.
ಶಿವಮೊಗ್ಗ ಲೀಡ್ ಬ್ಯಾಂಕ್ ಕೆನರಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿ ಆಯೋಜಿಸಿದ್ದ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್ ಗಳ ಸಾಲಮೇಳದಲ್ಲೂ ಕನ್ನಡ ಡಿಂಡಿಮ ಬಾರಿಸಿತು.
T – 20 ಅಸಿಸ್ ಗೆಲುವಿನ ನಗೆ
ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A-ಗುಂಪಿನಲ್ಲಿರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಿತು. ಶ್ರೀಲಂಕಾ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಆಡಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಮಾಡಿತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 154 ರನ್ ಸಾಧಾರಣ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ ತಂಡ ಕೇವಲ 17 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ 7 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಲಂಕಾ ಇನ್ನಿಂಗ್ಸ್ ನ 3 ನೇ ಓವರ್ ನಲ್ಲಿಯೇ ಪ್ಯಾಟ್ – ಕಮಿನ್ಸ್ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಪಥುಮ್ – ನಿಸಾಂಕಾ 7 ರನ್ ಗಳಿಗೆ ಔಟಾದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 27 ರನ್ ಗಳಿಗೆ 2 ವಿಕೆಟ್ ತೆಗೆದರು.ಮತ್ತು ಪ್ಯಾಡ್ ಕಮಿನ್ಸ್ 34 ರನ್ ಗಳಿಗೆ 2 ವಿಕೆಟ್ ತೆಗೆದರು. ಹಾಗೆಯೇ ಸ್ಪಿನ್ನರ್ ಯಾಡಂ ಜಂಪಾ 12 ರನ್ ಗಳಿಗೆ 2 ವಿಕೆಟ್ ತೆಗೆದರು. ಇವರ ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಉತ್ತಮ ಮೊತ್ತ ಕಲೆಹಾಕದಂತೆ ತಡೆಯೊಡ್ಡಿದರು. ಆದರೆ ಅಂಕಣದಲ್ಲಿದ್ದ ಕುಶಾಲ ಪರೆಕಾ ಕೇವಲ 25 ಎಸೆತಕ್ಕೆ 35 ರನ್ ಗಳಿಸಿದರು. ಹಾಗೆಯೇ ಅವರೊಂದಿಗೆ ಸೇರಿಕೊಂಡು ಆಟ ಆಡಿದ ಅಸಲಂಕಾ 27 ಎಸೆತಕ್ಕೆ 35 ರನ್ ಗಳಿಸಿ ಇವರ ಜೊತೆಯಾಟದಲ್ಲಿ 63 ರನ್ ಸೇರಿಸಿ ರನ್ ರೇಟ್ ಹೆಚ್ಚಿಸಿದರು.
ಆದರೆ ಆಸ್ಟ್ರೇಲಿಯಾ ತಂಡದ ಬೌಲರ್ ಗಳಾದ ಸ್ಪಿನ್ನರ್ ಯಾಡಮ್ ಜಂಪಾ ಮತ್ತು ಮಿಚೆಲ್ ಸ್ಟಾರ್ಕ್ ಇವರ ರೋಮಂಚಕ ಬೌಲರ್ ನಿಂದ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡ ರನ್ ಗಳಿಕೆಯ ವೇಗ ಕಡಿಮೆ ಮಾಡಿಕೊಂಡಿತು.
ಅಂತೆಯೇ ನಂತರ ಅಂಕಣಕ್ಕೆ ಇಳಿದ ರಾಜಪಕ್ಸ ಔಟಾಗದೆ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 26 ರನ್ ಗಳ ಬಿರುಸಿನ ಬ್ಯಾಟಿಂಗ್ ನಿಂದಾಗಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಆದರೆ ಇವರೆಲ್ಲ ಎಷ್ಟೇ ಪ್ರಯತ್ನಿಸಿದರು ಗೆಲ್ಲಲು ಸಾಧ್ಯವಾಗದ ಕಾರಣ ಆಸ್ಟ್ರೇಲಿಯ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 17 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಭರ್ಜರಿ ಜಯ ಗಳಿಸಿತು.
