Monday, August 3, 2026
Monday, August 3, 2026
Home Blog Page 2062

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ರಾಜತಾಂತ್ರಿಕ ಕಛೇರಿ

0

ಬೆಂಗಳೂರಿನಲ್ಲಿ ಕಾನ್ಸುಲೇಟ್ ಜನರಲ್ ಅನ್ನು ಸ್ಥಾಪಿಸಲಾಗುತ್ತಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಬೆಂಗಳೂರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಕೇಂದ್ರವಾಗಿದೆ, ನಾವು ಅದರ ಭಾಗವಾಗಲು ಬಯಸುತ್ತೇವೆ. ಇದು ಭಾರತದ ಮೂರನೇ ಒಂದು ಭಾಗದಷ್ಟು ಯುನಿಕಾರ್ನ್ ಕಂಪನಿಗಳಿಗೆ ನೆಲೆಯಾಗಿದೆ. ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಹೊಸ ಮಿಷನ್ ಭಾರತದಲ್ಲಿನ ನಮ್ಮ ರಾಜತಾಂತ್ರಿಕ ಅಸ್ತಿತ್ವವನ್ನು ಐದು ಹುದ್ದೆಗಳಿಗೆ ವಿಸ್ತರಿಸಲಿದೆ ಎಂದು ಬೆಂಗಳೂರು ಟೆಕ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಅವರು ಹೇಳಿದರು.
ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಮಾರಿಸ್ ಪೇನ್ ಅವರು, ಹೊಸ ಕಾನ್ಸುಲೇಟ್ ಜನರಲ್ “ಭಾರತದ ರೋಮಾಂಚಕ ಆವಿಷ್ಕಾರಕರು, ತಂತ್ರಜ್ಞರು ಮತ್ತು ಉದ್ಯಮಿಗಳಿಗೆ ಆಸ್ಟ್ರೇಲಿಯಾದ ಸಂಬಂಧಗಳನ್ನು ಗಾಢಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಆಸ್ಟ್ರೇಲಿಯನ್ ವ್ಯವಹಾರವನ್ನು ಬೆಂಬಲಿಸುತ್ತದೆ ಎಂದು ಪೇನ್ ಹೇಳಿದರು. ಮುಂದಿನ ಶತಕೋಟಿ ಇಂಟರ್ನೆಟ್ ಬಳಕೆದಾರರು ಭಾರತದಲ್ಲಿರುತ್ತಾರೆ ಎಂದು ಅಂದಾಜಿಸಲಾಗಿದೆ ಮತ್ತು ಬೆಂಗಳೂರಿನ ಕೇಂದ್ರಿತ ಭಾರತದ ಡಿಜಿಟಲ್ ಆರ್ಥಿಕತೆಯು 2025 ರ ವೇಳೆಗೆ US $ 1 ಟ್ರಿಲಿಯನ್‌ಗೆ ಬೆಳೆಯಲಿದೆ ಎಂದು ಅವರು ಹೇಳಿದರು.
ಮಾರಿಸನ್ ಭಾರತೀಯ ಮತ್ತು ಆಸ್ಟ್ರೇಲಿಯನ್ನರ ಸ್ನೇಹವನ್ನು ಉಲ್ಲೇಖಿಸಿದರು ಮತ್ತು ಕ್ವಾಡ್ ಲೀಡರ್ಸ್ ಡೈಲಾಗ್ ಮೂಲಕ ದೇಶಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್‌ನೊಂದಿಗೆ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಇದು ನಮ್ಮ ಪ್ರದೇಶದ ಬಹುದೊಡ್ಡ ಸವಾಲುಗಳನ್ನು ಎದುರಿಸುವಲ್ಲಿ ಧನಾತ್ಮಕ ಬದಲಾವಣೆಯನ್ನು ಮಾಡಬಹುದು ಎಂದರು. ಭಾರತದಲ್ಲಿ ವಿಮರ್ಶಾತ್ಮಕ ಮತ್ತು ಉದಯೋನ್ಮುಖ ತಂತ್ರಜ್ಞಾನಕ್ಕಾಗಿ ಹೊಸ ಆಸ್ಟ್ರೇಲಿಯಾ-ಭಾರತದ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದರು. ಇದು ಆಸ್ಟ್ರೇಲಿಯಾ ಮತ್ತು ಭಾರತೀಯ ತಂತ್ರಜ್ಞರು, ನೀತಿ ಅಭ್ಯಾಸಕಾರರು ಮತ್ತು ಶಿಕ್ಷಣ ತಜ್ಞರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಹೇಳಿದರು.

ಕೋವಿಡ್ -19: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮವಾಗಿ, ಅನೇಕ ಮಕ್ಕಳು ಖಾಸಗಿ ಶಾಲೆಗಳನ್ನು ಬಿಟ್ಟು, ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ ಎಂದು ಶಿಕ್ಷಣ ವಾರ್ಷಿಕ ಸ್ಥಿತಿಗತಿ ವರದಿ ತಿಳಿಸಿದೆ.

ಪ್ರಥಮ್ ಎನ್.ಜಿ.ಒ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಇದನ್ನು ತಿಳಿಸಲಾಗಿದೆ. ಅದರಲ್ಲಿ ಕೋವಿಡ್-19 ಕಾರಣದಿಂದಾಗಿ ಅನೇಕ ಪೋಷಕರು ತಮ್ಮ ಕೆಲಸವನ್ನು ಕಳೆದುಕೊಂಡು, ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ಅವರು ವಲಸೆಹೋಗುವ ಅನಿವಾರ್ಯತೆ ಸೃಷ್ಟಿಯಾಯಿತು. ಮತ್ತೊಂದೆಡೆ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳು ಆನ್ಲೈನ್ ತರಗತಿಯ ಹೆಸರಿನಲ್ಲಿ ಹೊಸ ಲ್ಯಾಪ್ ಟ್ಯಾಪ್ ಅಥವಾ ಮೊಬೈಲ್ ಗಳನ್ನು ಖರೀದಿಗೆ ಒತ್ತಡ ಹೇರಿದ್ದರು. ಇಂತಹ ಸಂಕಷ್ಟ ಸಮಯದಲ್ಲಿ ಖಾಸಗಿ ಶಾಲೆಗೆ ಹಣ ಒದಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಪೋಷಕರು ಉಚಿತ ಹಾಗೂ ಅತ್ಯಂತ ಕಡಿಮೆ ಶುಲ್ಕ ಪಡೆದು ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ನಿರ್ಧರಿಸಿದ್ದಾರೆ.

2018ರಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಶೇ.64.3 ರಷ್ಟಿತ್ತು. 2020ರಲ್ಲಿ ಶೇ.65.58ಕ್ಕೆ ಏರಿಕೆಯಾಗಿದೆ. 2021ರಲ್ಲಿ ಪ್ರಮಾಣ ಶೇ.4.5 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. 2018ರಿಂದ 2021ರ ನಡುವೆ ಒಟ್ಟಾರೆಯಾಗಿ ದೇಶದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಶೇ.6 ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

ಬೆಂಗಳೂರು ತಂತ್ರಜ್ಞಾನದ ತೊಟ್ಟಿಲು: ಅಶ್ವತ್ಥನಾರಾಯಣ

0

ಬೆಂಗಳೂರು ತಂತ್ರಜ್ಞಾನ ಶೃಂಗ- 2021ರ ಕಾರ್ಯಕ್ರಮ ಕುರಿತಂತೆ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು `ಕೋವಿಡ್ ಪಿಡುಗಿನ ನಂತರ ಅಭಿವೃದ್ಧಿಯ ಮಾನದಂಡಗಳು ಬದಲಾಗಿದ್ದು, ರಾಜ್ಯವು ಈ ಪರಿಸ್ಥಿತಿಯನ್ನು ತಂತ್ರಜ್ಞಾನದ ಬಲದಿಂದ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ’ ಎಂದರು.

ಉದ್ದಿಮೆಗಳ ಬೆಳವಣಿಗೆಗೆ ಸರಕಾರವು ಹಲವು ಅನುಕೂಲಕರ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಐಟಿ, ಬಿಟಿ, ಯೂನಿಕಾರ್ನ್ ಉದ್ದಿಮೆಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದೆ. ನೀತಿ ಆಯೋಗದ ಸಮೀಕ್ಷೆಯಲ್ಲಿ ರಾಜ್ಯವು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಟಿ ರಫ್ತಿನಲ್ಲಿ ಕರ್ನಾಟಕವು ದೇಶದ ಶೇ.40ರಷ್ಟು ಕೊಡುಗೆಯ ಸಿಂಹಪಾಲನ್ನು ನೀಡುತ್ತಿದೆ ಎಂಬುದರ ಬಗ್ಗೆ ಗಮನಸೆಳೆದರು.

ರಾಜ್ಯವು ಮುಂಬರುವ ದಿನಗಳಲ್ಲಿ ಬಯೋಎಕಾನಮಿಯಲ್ಲೂ ದೇಶಕ್ಕೆ ಅಗ್ರ ಸ್ಥಾನವನ್ನು ಅಲಂಕರಿಸುವಂತೆ ಮಾಡಲಿದೆ. ಜೀವವಿಜ್ಞಾನವನ್ನು ಉತ್ತೇಜಿಸಲು ಸದ್ಯದಲ್ಲೇ ಎಲಿಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.

ಜ್ಞಾನದ ಬೆಳವಣಿಗೆಯಿಂದ ದೇಶದ ಸುಧಾರಣೆ : ಉಪರಾಷ್ಟ್ರಪತಿ

0

ಬೆಂಗಳೂರು: ಆಧುನಿಕ ತಂತ್ರಜ್ಞಾನ, ನಾವೀನ್ಯತೆ , ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೆ ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು.

‘ಭವಿಷ್ಯವನ್ನು ಮುನ್ನಡೆಸು’ (ಡ್ರೈವಿಂಗ್ ದ ನೆಕ್ಸ್ಟ್) ಘೋಷವಾಕ್ಯದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ನವೆಂಬರ್ 17ರಂದು ಉದ್ಘಾಟಿಸಿ ಮಾತನಾಡಿದ ಅವರು, `ಐ.ಟಿ. ಮತ್ತು ಬಿ.ಟಿ.ಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು (ಡ್ಯೂಟಿ) ಮೈಗೂಡಿಸಿಕೊಂಡಾಗ ದೇಶವು ಶಕ್ತಿಶಾಲಿಯಾಗಿ (ಮೈಟಿ) ಹೊರಹೊಮ್ಮುತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು’ ಎಂದರು.

ಜಗತ್ತು ಈಗ ಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದ್ದು, ಕೋವಿಡ್ ನಂತರ ಡಿಜಿಟಲೀಕರಣಗೊಳ್ಳುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಗಳು ಎಷ್ಟೇ ಚೆನ್ನಾಗಿದ್ದರೂ ಅಂತಿಮವಾಗಿ ತಂತ್ರಜ್ಞಾನದ ಲಾಭಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸಬೇಕಾದ್ದು ಮುಖ್ಯ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದನ್ನು ಸಾಧಿಸಿಕೊಂಡು ಬಂದಿದೆ. ತಂತ್ರಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬುದೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯೂ ಆಗಿದೆ ಎಂದರು.

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಎಂದು ನಾಯ್ಡು ನುಡಿದರು.

ನಿರ್ದಿಷ್ಟವಾಗಿ ಬೆಂಗಳೂರು ಮತ್ತು ಒಟ್ಟಾರೆ ಭಾರತ ದೇಶವು ಅತ್ಯಂತ ಕ್ರಿಯಾಶೀಲವಾಗಿವೆ. ಇದಕ್ಕೆ ತಕ್ಕಂತೆ ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಾರವಾದ `ಹಂಚಿಕೊಳ್ಳುವಿಕೆ ಮತ್ತು ಇನ್ನೊಬ್ಬರ ಬಗ್ಗೆ ಗಮನ ಹರಿಸುವಿಕೆ (ಕಾಳಜಿ)’ ಎರಡನ್ನೂ ನಾವು ತಂತ್ರಜ್ಞಾನದ ಧಾರೆಗಳ ಮೂಲಕ ಮುಂದುವರಿಸಿಕೊಂಡು ಹೋಗಬೇಕು. ತಾಂತ್ರಿಕತೆ ಹಾಗೂ ನಾವೀನ್ಯತೆಯು ಅಂತಿಮ ಸಮಾಜದಲ್ಲಿ ಸಂತೋಷವನ್ನುಂಟು ಮಾಡುವ ಉದ್ದೇಶ ಹೊಂದಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಬೆಂಗಳೂರು ಮತ್ತು ಒಟ್ಟಾರೆಯಾಗಿ ರಾಜ್ಯದಲ್ಲಿ ಮನುಷ್ಯನ ಪ್ರತಿಭೆಯ ವಿಕಸನಕ್ಕೆ ತಕ್ಕ ವಾತಾವರಣವಿದ್ದು, ಉದ್ಯಮಗಳ ಬೆಳವಣಿಗೆಗೆ ಪೂರಕವಾದ ರಚನಾತ್ಮಕ ನೀತಿಗಳಿವೆ. ಪ್ರತಿಯೊಂದು ಉದ್ಯಮವನ್ನೂ ರಾಜ್ಯವು ಮುಕ್ತವಾಗಿ ಸ್ವಾಗತಿಸಲಾಗುವುದು’ ಎಂದರು.

ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ ಎಂದು ವಿವರಿಸಿದರು.

ಹೊಸ ಕರ್ನಾಟಕದಿಂದ ಹೊಸ ಭಾರತವನ್ನು ಕಟ್ಟಬಹುದು. ಪ್ರಧಾನಿ ನೀಡಿರುವ ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸು ನನಸಾಗಬೇಕು. ಮೇಕ್ ಇನ್ ಕರ್ನಾಟಕ’ದ ಮೂಲಕ ನಾವು `ಮೇಕ್ ಇನ್ ಇಂಡಿಯಾ’ವನ್ನು ಸಾಕಾರಗೊಳಿಸಬೇಕು. ಯಶಸ್ಸು ಎಂಬುದು ಸಾಧನೆಯ ಒಂದಂಶ ಮಾತ್ರ. ಹೀಗಾಗಿ ಯಶಸ್ಸಿಗಿಂತ ಸಾಧನೆ ಮುಖ್ಯವಾಗಿದ್ದು, ತಂತ್ರಜ್ಞಾನ ವಲಯದಲ್ಲಿರುವವರು ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು. ತಂತ್ರಜ್ಞಾನವು ಕೊನೆಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು.

ಉದ್ದಿಮೆಗಳ ಬೆಳವಣಿಗೆಗೆ ಸರಕಾರವು ಹಲವು ಅನುಕೂಲಕರ ನೀತಿಗಳನ್

ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಗಳ ಮುಖ್ಯಸ್ಥರಾದ ಕ್ರಮವಾಗಿ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಷಾ ಮತ್ತು ಪ್ರಶಾಂತ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಕಿಂಡ್ರೆಲ್ ಕಂಪನಿಯ ಸಿಇಓ ಮಾರ್ಟಿನ್ ಶ್ರೋಟರ್ ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ಮೂಲಕ ಮಾತನಾಡಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡದಲ್ಲೇ ಸರಾಗವಾಗಿ ತಮ್ಮ ಭಾಷಣ ಆರಂಭಿಸಿ, ಕೆಲಸಾಲುಗಳನ್ನು ಮಾತನಾಡಿ ಗಮನ ಸೆಳೆದರು. ಬಳಿಕ ಅವರು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಸಮಾಜಮುಖಿ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ನವದೆಹಲಿ ಮಾಲಿನ್ಯ, ಸುಪ್ರೀಂ ವಿಚಾರಣೆ

0

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಕಡ್ಡಾಯವಾಗಿ ಮಾಲಿನ್ಯ ತಡೆಯಲು ಹಲವು ಕಠಿಣ ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿದೆ.

“ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿ ಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಅಗತ್ಯವಸ್ತುಗಳ ಸಾಗಾಣಿಕೆ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶೇ.50 ರಷ್ಟು ಹಾಜರಾತಿ ಮುಂತಾದ ನಿಯಮಗಳನ್ನು ರೂಪಿಸಲಾಗಿದೆ,” ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ ಗೆ ತಿಳಿಸಿದರು.

ಕಳೆದ ವರ್ಷ ಮಾಲಿನ್ಯದಿಂದಾಗಿ 54 ಸಾವಿರ ಜನ ಮೃತಪಟ್ಟಿದ್ದರು. ದೆಹಲಿ ಮಾಲಿನ್ಯದಿಂದಾಗಿ ಒಂದು ಲಕ್ಷ ಕೋಟಿ ರೂಪಾಯಿ ವಾರ್ಷಿಕ ನಷ್ಟವಾಗಿದೆ.

ದೆಹಲಿ ಸರ್ಕಾರವು ಮುಂದಿನ ಆದೇಶದವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಕಟ್ಟಡ ಕಾಮಗಾರಿಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ. ಸಾರ್ವಜನಿಕ ಸಾರಿಗೆ ಬಳಕೆ ಪ್ರೋತ್ಸಾಹಿಸಲು 1000 ಖಾಸಗಿ ಬಸ್ಸುಗಳನ್ನು ಬಾಡಿಗೆ ಪಡೆಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಅಫಿಡೆವಿಟ್ ಪರಿಶೀಲಿಸಿದ ಸುಪ್ರೀಂಕೋರ್ಟ್ ನವೆಂಬರ್ 24ರಂದು ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಲಿಖಿಂಪುರ -ಖೇರಿ ತನಿಖೆ ನ್ಯಾ.ರಾಕೇಶ್ ಕುಮಾರ್ ನೇಮಕ

0

ಉತ್ತರಪ್ರದೇಶದ ಲಿಖಿಂಪುರ-ಖೇರಿ ಹಿಂಸಾಚಾರ ಪ್ರಕರಣದ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲು ನಿರ್ಧರಿಸಲಾಗಿತ್ತು.
ಈಗ ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ನೇಮಿಸಿದೆ. ಇವರು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರು.
ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್,ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಾಜ್ಯ ಸರ್ಕಾರ ನೀಡಿದ ಐಪಿಎಸ್ ಅಧಿಕಾರಿಗಳ ಹೆಸರನ್ನು ಪರಿಗಣಿಸಿ ಅದರಲ್ಲಿ ಮೂವರು ಅಧಿಕಾರಿಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡದ ಭಾಗವಾಗಿ ನೇಮಿಸಿದೆ. ಈ ಕುರಿತು ಶೀಘ್ರದಲ್ಲೇ ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಮಾದಕ ವ್ಯಸನ ಜನಜಾಗೃತಿ ಅಭಿಯಾನ

0

ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಶಿಸ್ತು ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದಲ್ಲಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನುಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021 ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಅಡಿಪಾಯ ತುಂಬ ಸದೃಢವಾಗಿರಬೇಕು. ಅವರಿಗೆ ಉತ್ತಮ ಸಾಮಾಜಿಕ ವಾತಾವರಣ, ಶಿಕ್ಷಣ, ಆರೋಗ್ಯ ಒದಗಿಸಬೇಕು. ಆಗ ಇಡೀ ಕುಟುಂಬ, ಸಮಾಜದ ಬೆಳವಣಿಗೆ ಸಾಧ್ಯ. ಹಾಗೂ ವಿದ್ಯಾರ್ಥಿಗಳು ಕೂಡ ಶಿಸ್ತು ಮತ್ತು ಪರಿಶ್ರಮದಿಂದ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಮಾದಕ ವಸ್ತುಗಳ ಸೇವನೆ ಒಂದು ಫ್ಯಾಷನ್ ಎಂಬಂತೆ ಬಿಂಬಿಸಿ, ಮಾದಕ ದ್ರವ್ಯಗಳನ್ನು ತುಂಬಾ ಆಕರ್ಷಕ ಪ್ಯಾಕೆಟ್‍ಗಳನ್ನು ಮಾಡಿ ಮಕ್ಕಳನ್ನು, ಹದಿಹರೆಯದವರನ್ನು ಸೆಳೆಯಲಾಗುತ್ತಿದೆ. ಶಾಲಾ ಹಂತದಲ್ಲಿಯೇ ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸುವುದು ಬಹು ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಬೀಡಿ, ಸಿಗರೇಟ್ ಇತರೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರ ದುಷ್ಪರಿಣಾಮ ತೀವ್ರವಾಗಿದ್ದು ಅದರಿಂದ ಹೊರಬರುವುದು ಕೂಡ ಅತ್ಯಂತ ಕಷ್ಟವಾಗಿರುತ್ತದೆ. ಹಾಗೂ ಈ ಮಾದಕ ವಸ್ತುಗಳನ್ನು ಕೊಳ್ಳಲು ಅವಶ್ಯಕವಾದ ಹಣಕ್ಕಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹ ಮಕ್ಕಳು ತೊಡಗುವ ಸಾಧ್ಯತೆ ಇದ್ದು ಇಂತಹ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಬೆಲೆ ಕೂಡ ಸಿಗುವುದಿಲ್ಲ. ಆದ್ದರಿಂದ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಅಧ್ಯಯನನಿರತರಾಗಿ ಉನ್ನತ ಮಟ್ಟದ ಹುದ್ದೆಗಳಿಗೇರಬೇಕು. ದಯಮಾಡಿ ಯಾವುದೇ ಮಕ್ಕಳು ಈ ದ್ರವ್ಯಗಳನ್ನು ಮುಟ್ಟಬಾರದು ಎಂದು ತಿಳಿ ಹೇಳಿದರು.
ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸಮಾಜದ ಬೆಳೆವಣಿಗೆ ವಿಷಯವನ್ನು ಆಧರಿಸಿ ರಚಿಸಿರುವ ಚಿತ್ರಕಲೆ ಮತ್ತು ಪ್ರಬಂಧಗಳು ಪ್ರಬುದ್ಧವಾಗಿವೆ. ದುಷ್ಪರಿಣಾಮ ಕುರಿತು ಅವರ ಯೋಚನಾ ಲಹರಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದು, ಮಕ್ಕಳ ಸೃಜನಾತ್ಮಕತೆ ಎಲ್ಲರೂ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ ಅವರು ಜಾಗೃತಿ ಅಭಿಯಾನ ನಡೆಸಿದ ಪೊಲೀಸ್ ಇಲಾಖೆ ಮತ್ತು ವಿವಿಧ ಜಾಗೃತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.


ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್.ಬಿ.ಎಂ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಇದರ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 50 ಶಾಲೆಗಳಿಗೆ ಭೇಟಿ ನೀಡಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡು ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ.
ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾದಕ ದ್ರವ್ಯ ವಸನ ದುಷ್ಪರಿಣಾಮಗಳ ಕುರಿತು ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಮನೋಜ್ಞವಾಗಿ ವಿಷಯವನ್ನು ಚಿತ್ರಿಸಿದ್ದಾರೆ. ಇದಕ್ಕೆ ನಾನು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮನೋತಜ್ಞ ಡಾ.ಅರವಿಂದ್ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೂ ಇದೇ ವೇಳೆ ಮಾದಕ ದ್ರವ್ಯ ವ್ಯಸನ ಹೇಗೆ ಇಡೀ ಕುಟುಂಬವನ್ನು ತೊಂದರೆಗೀಡು ಮಾಡುತ್ತದೆ ಎಂಬ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಬಹುಮಾನ ವಿತರಣೆ : ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ 63 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್‍ಪಿ ಹೆಚ್.ಟಿ.ಶೇಖರ್, ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ಆಯುಕ್ತರ ಮಟ್ಟದ ಅಧಿಕಾರಿ ನೇಮಿಸಿ

0

ಶರಾವತಿ ವಿದ್ಯುತ್ ಯೋಜನೆ ನಾಡಿಗೇ ಬೆಳಕು ನೀಡಿತು.
ಆದರೆ ಮುಳುಗಡೆ ಪ್ರದೇಶದಲ್ಲಿದ್ದ ಜೀವಗಳಿಗೆ ಬಾಳನ್ನೇ ನೀಡಲಾಗಿಲ್ಲ.
ಮನೆಮಾರು ತ್ಯಾಗಮಾಡಿದವರು ಇನ್ನೂ ಅಲೆಮಾರಿಗಳಂತೆ ಪರಿಹಾರಕ್ಕಾಗಿ ಅಲೆಯುವಂತಾಗಿದೆ.
ಎಷ್ಟೋ ಕುಟುಂಬಗಳ ಹಿರಿಯರು ಪರಿಹಾರದ ಕನಸು ಕಾಣುತ್ತಲೇ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯ ಪರಿಹಾರ ಕುರಿತು ಹೊಸನಗರ ತಾಲೂಕಿನ ಮುಡುಗೊಪ್ಪ ದಲ್ಲಿ ಸಮಾಲೋಚನೆ ಸಭೆ ನಡೆಯಿತು.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಐದು ದಶಕಗಳು ಕಳೆದರೂ ಜೀವಂತವಾಗಿವೆ. ಚಕ್ರಾ, ಸಾವೇಹಕ್ಲು, ವಾರಾಹಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಜಿಲ್ಲಾಧಿಕಾರಿ ಅವರಿಗೆ ಇಡೀ ಜಿಲ್ಲೆಯನ್ನು ನಿಭಾಯಿಸುವ ಜೊತೆಗೆ ಈ ಬಗ್ಗೆಯೂ ಗಮನ ನೀಡುವುದು ಕಷ್ಟ. ಮುಳುಗಡೆ, ಪುನರ್ವಸತಿ, ಪರಿಹಾರ ಹೀಗೆ ಹಲವಾರು ಸಮಸ್ಯೆಗಳಿವೆ. ಕಂದಾಯ, ಅರಣ್ಯ, ಕೆಪಿಸಿ ಸಮನ್ವಯತೆ ಸಾಧಿಸಿಕೊಂಡು, ಸರ್ಕಾರದ ಮಟ್ಟದಲ್ಲಿ ನೇರವಾಗಿ ವ್ಯವಹರಿಸುವಂತೆ ಉನ್ನತ ಅಧಿಕಾರಿಯನ್ನು ನೇಮಿಸಬೇಕು ಎಂದು ನಗರದ ಹೋಬಳಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಒತ್ತಾಯಿಸಿದ್ದಾರೆ.

ಸಮಿತಿಗೆ ಪ್ರಾದೇಶಿಕ ಆಯುಕ್ತ ಕೇಡರ್ ಅಧಿಕಾರಿಯನ್ನು ನೇಮಿಸಬೇಕು. ಅವರಿಗೆ ಅಧಿಕಾರ ಚಲಾಯಿಸುವ ಸ್ವತಂತ್ರವನ್ನು ನೀಡಬೇಕು. ತಾಲೂಕಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಈ ನಿರ್ಣಯವನ್ನು ತೆಗೆದುಕೊಂಡರು.

ಈ ಕಾರ್ಯಕ್ರಮದಲ್ಲಿ ರೈತ ಮುಖಂಡ ಜಿ.ವಿ. ರವೀಂದ್ರ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ನಿತಿನ್ ಮಳಲಿ, ರಾಜೇಶ್, ಎಸ್.ಎಂ ಹರೀಶ್ ಇನ್ನು ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಭತ್ತ, ಮೆಕ್ಕೆಜೋಳ ರಾಗಿಗೆ ಬೆಂಬಲ ಬೆಲೆ ಹೆಚ್ಚಿಸಿ

0

ರಾಜ್ಯ ಸರ್ಕಾರ ಬತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಖರೀದಿಗಾಗಿ ಎಲ್ಲೆಡೆ ಖರೀದಿ ಕೇಂದ್ರ ತರೆಯಬೇಕೆಂದು ರಾಜ್ಯ ರೈತಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದುಬಾರಿ ಕೂಲಿ, ರಸಗೊಬ್ಬರ, ಕೀಟನಾಶಕಗಳ, ಬೆಲೆ ಎರಡುಪಟ್ಟು ಹೆಚ್ಚಾಗಿದೆ. ರೈತರ ಜೀವನ ವೆಚ್ಚವೂ ಜಾಸ್ತಿಯಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಕಡಿಮೆಯಾಗುತ್ತಿದೆ. ರೈತರು ಬೆಳೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆ ಕಾರಣದಿಂದ ಅವರು ಬ್ಯಾಂಕ್ ಗಳ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಜೀವನ ನಿರ್ವಹಣೆಯ ದುರಸ್ತವಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪನವರು ಹೇಳಿದ್ದಾರೆ.
ಜಿಲ್ಲೆಯಲ್ಲಿ 78,000 ಹೆಕ್ಟೇರ್ ನಲ್ಲಿ ಭತ್ತ, 53,000 ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಹಾಗೂ ರಾಜ್ಯದಲ್ಲಿ 10.22 ಲಕ್ಷ ಹೆಕ್ಟೇರ್ ನಲ್ಲಿ ಭತ್ತ ,14.16 ಲಕ್ಷ ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಮತ್ತು 6.90 ನಲ್ಲಿ ರಾಗಿ ಬೆಳೆದಿದ್ದಾರೆ.
ಈ ವರ್ಷ ಉತ್ತಮ ಫಸಲು ಬಂದರೂ ಕುಯ್ಲು ಹಂತದಲ್ಲಿ ಬಂದ ಮಳೆಯಿಂದಾಗಿ ಕೈಗೆ ಸಿಕ್ಕಿದ್ದು, ಬಾಯಿಗೆ ಬರದಂತಾಗಿದೆ.
ಆದ್ದರಿಂದ ಮೆಕ್ಕೆಜೋಳ ಮತ್ತು ಭತ್ತದ ಧಾರಣೆ ಕುಸಿತ ವಾಗಿರುವುದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡೂ ಬೆಳೆಗಳಿಗೆ ರೂ.3 ಸಾವಿರ ಮತ್ತು ರಾಗಿಗೆ 4 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕೆಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ನಾಗರಾಜ್ ಗೆ ಮತ್ತೊಂದು ಪ್ರಶಸ್ತಿಯ ಗರಿ

0

ಸಂಗೀತ, ನೃತ್ಯ, ನಾಟಕದಂತೆಯೇ ಫೋಟೋಗ್ರಫಿಗೂ ಕೂಡ ತನ್ನದೇ ಆದ ಮಹತ್ವವಿದೆ. ಫೋಟೋಗ್ರಫಿ ಎನ್ನುವುದು ಒಂದು ಅದ್ಭುತ ಕಲೆ. ಇದು ಸುಲಭವಾಗಿ ಎಲ್ಲರಿಗೂ ದಕ್ಕುವುದಿಲ್ಲ. ಈ ಸುಂದರ ಫೋಟೊಗ್ರಫಿ ಕಲೆಯ ಮಾಂತ್ರಿಕ ಶಿವಮೊಗ್ಗದ ನಾಗರಾಜ್. ಈಗಾಗಲೇ ಖ್ಯಾತ ವೃತ್ತಪತ್ರಿಕೆ ಗಳಲ್ಲಿ ಅವರ ಸಾವಿರಾರು ಛಾಯಾಚಿತ್ರಗಳು ನೋಡುಗರ ಕಣ್ಸೆಳೆದಿವೆ. ಛಾಯಾಚಿತ್ರ ಕಲೆಯನ್ನ ಕರಗತ ಮಾಡಿಕೊಂಡಿರುವ ನಾಗರಾಜ್ ಅವರನ್ನ ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಪ್ರಸ್ತುತ ಇವರು ಪುಣೆಯ ದ ಫೋಟೋಗ್ರಫಿಕ್ ಸೊಸೈಟಿ(ಪಿ.ಎಸ್.ಪಿ.) ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪುರಸ್ಕೃತರಾಗಿದ್ದಾರೆ. ಪಿ.ಎಸ್.ಪಿ. ನಡೆಸಿದ ಈ ಸ್ಪರ್ಧೆಯಲ್ಲಿ ದೇಶದ ನೂರಾರು ಛಾಯಾ ಚಿತ್ರಗ್ರಾಹಕರು ಸ್ಪರ್ಧಿಸಿದ್ದರು. ಇವರಲ್ಲಿ ಶಿವಮೊಗ್ಗ ನಾಗರಾಜ್ ಎರಡನೇ ಬಹುಮಾನ ಪಡೆದಿದ್ದಾರೆ. ಪೆಂಡಮಿಕ್(ಸಾಂಕ್ರಾಮಿ ರೋಗಗಳು) ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದು, ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬನನ್ನು ಅವಸರವಾಗಿ ಆಸ್ಪತ್ರೆಗೆ ಸಾಗಿಸುವ ಮತ್ತು ಆ ವ್ಯಕ್ತಿಯ ಸಂಬಂಧಿಕರ ಆತಂಕದ ಚಿತ್ರವನ್ನು ಇವರು ಸೆರೆಹಿಡಿದಿದ್ದರು. ಇದೊಂದು ಮಾನವೀಯತೆಯ ಚಿತ್ರವಾಗಿತ್ತು. ಇದನ್ನು ಮಾನ್ಯ ಮಾಡಿದ ತೀರ್ಪುಗಾರರ ತಂಡವು ನಾಗರಾಜ್ ಅವರಿಗೆ ಈ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯ ಮೊತ್ತ ಹಾಗೂ ಪದಕವನ್ನು ನಾಗರಾಜ್ ಈಗಾಗಲೇ ಪಡೆದಿದ್ದಾರೆ. ಶಿವಮೊಗ್ಗ ನಾಗರಾಜ್ ಈಗಾಗಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಈ ಹಿಂದೆ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಭಾರತ ಸೇರಿದಂತೆ ಹಲವು ಛಾಯಾಗ್ರಾಹಕ ಸಂಸ್ಥೆಗಳು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ರಾಜ್ಯ, ರಾಷ್ಟ್ರಕ್ಕೂ ಗೌರವ ತಂದುಕೊಟ್ಟಿದ್ದಾರೆ. ನಾಗರಾಜ್ ಮೂಲತಃ ಪರಿಸರ ಛಾಯಾಗ್ರಾಹಕರಾಗಿದ್ದಾರೆ. ಪತ್ರಿಕೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರು ತೆಗೆದ ಹಕ್ಕಿಗಳ ಫೋಟೋಗಳು ಯುಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ಹೆಸರು ಮಾಡಿವೆ. ಅನೇಕ ಬಾರಿ ಛಾಯಾ ಚಿತ್ರ ಪ್ರದರ್ಶನ ನಡೆಸಿದ ನಾಗರಾಜ್ ಅವರ ಕ್ಯಾಮೆರಾದ ಕಣ್ಣಿನಲ್ಲಿ ಪ್ರೀತಿ, ಅಂತಃಕರಣ, ವಿಸ್ಮಯ ಚೆಲುವು, ಮಾನವೀಯತೆ ಬಡತನ, ರಾಜಕೀಯ ಸೇರಿದಂತೆ ಹಲವು ವಿಷಯ ಅಡಕವಾಗಿದ್ದು, ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ. ಫೋಟೋಗ್ರಫಿ ಕ್ಷೇತ್ರದಲ್ಲಿ ಇವರು ಮತ್ತಷ್ಟು ಎತ್ತರಕ್ಕೆ ಬೆಳೆಯಲ್ಲಿ ಎಂದು ಕೆ ಲೈವ್ ಬಳಗ ಹಾರೈಸುತ್ತದೆ.