Wednesday, February 4, 2026
Wednesday, February 4, 2026
Home Blog Page 1885

ಮತ್ತೆ ,ಮಳೆ ಹುಯ್ಯಲಿದೆ

0

ರಾಜ್ಯದ ವಿವಿದೆಡೆ ಗುಡುಗು ಸಿಡಿಲು ಸಹಿತ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನವೆಂಬರ್ 1ರಿಂದ 4ರವರೆಗೆ ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ ಈ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 2ರಿಂದ ಭಾರಿ ಮಳೆಯಾಗಲಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸೇರಿದಂತೆ ಸಾಧಾರಣ ಮಳೆಯಾಗಬಹುದು. ನವೆಂಬರ್ 5 ರಿಂದ ರಾಜ್ಯಾದ್ಯಂತ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕನ್ನಡದ ಸ್ಥಾನ ಅನನ್ಯ ಮತ್ತು ವಿಶ್ವಮಾನ್ಯ : ಸಚಿವ ಕೆ.ಎಸ್. ಈಶ್ವರಪ್ಪ

0

ಶಿವಮೊಗ್ಗದ ಡಿ.ಎ.ಆರ್ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.”ನವೆಂಬರ್ ತಿಂಗಳು ಬಂತೆಂದರೆ ಕನ್ನಡ ನಾಡಿನಾದ್ಯಂತ ಎಲ್ಲರ ಮನೆ ಮನಗಳಲ್ಲಿ ಸಂಭ್ರಮ ಪುಟಿದೇಳುತ್ತದೆ. ವಿಶ್ವದೆಲ್ಲೆಡೆ ಪಸರಿಸಿರುವ ಕನ್ನಡಿಗರು ಇಂದು ಸಂಭ್ರಮದಿಂದ ಕನ್ನಡದ ಹಬ್ಬವನ್ನು ಆಚರಿಸುತ್ತಿದ್ದಾರೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ, ಇಲ್ಲಿನ ಆಚರಣೆ ಎಲ್ಲವೂ ಅನನ್ಯವಾಗಿದ್ದು ವಿಶ್ವಮಾನ್ಯವಾಗಿದೆ” ಎಂದರು.


ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿ ಗಳ ಸಮಾಗಮವಾಗಿದೆ. ಮೌರ್ಯರು, ಕದಂಬರು, ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫ ಅವರಂಥ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಜಗಜ್ಯೋತಿ ಬಸವಣ್ಣನವರಂಥ ವಚನಕಾರರು ಮತ್ತು ಹಲವಾರು ದಾರ್ಶನಿಕರು ಬಾಳಿ ಬದುಕಿದ ನೆಲ ಹೆಮ್ಮೆಯ ಕನ್ನಡ ನಾಡು.
ಧರ್ಮ ಸಹಿಷ್ಣತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು. ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಜನ ಸಾಹಿತ್ಯ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
     ಈ ವರ್ಷ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡಿರುವುದು ಅತ್ಯಂತ ಸಂತಸದ ವಿಚಾರ. ಈ ಅಮೃತ ಮಹೋತ್ಸವವನ್ನು ದೇಶಾದ್ಯಂತ ಒಂದು ವರ್ಷ ಕಾಲ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿವಿಧ ಜನಪರ, ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರೂ ಕೂಡ ಇದಕ್ಕೆ  ಕೈಜೋಡಿಸಿರುವುದು ರಾಷ್ಟ್ರಪ್ರೇಮ ಮತ್ತು ಕಲ್ಯಾಣದ ದ್ಯೋತಕವಾಗಿದೆ.
   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ನಮ್ಮದು. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ವಾತಂತ್ರ್ಯದ ಅಮೃತೋತ್ಸವದ ಸವಿನೆನಪಿಗೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಅಮೃತ ಗ್ರಾಮ ಪಂಚಾಯತ್ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯ 32  ಗ್ರಾಮ ಪಂಚಾಯತ್‍ಗಳನ್ನು ಆಯ್ಕೆ ಮಾಡಲಾಗಿದ್ದು, ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಜಿಲ್ಲಾ ಪಂಚಾಯತ ಸಿಇಒ ವೈಶಾಲಿ , ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಣ್ಣ ಕತೆ : ಸುಂದರ ಸುಚೇತನ್

0

ವಿಜಯಾ ಶ್ರೀಧರ ಈವರೆಗೆ 20 ಕೃತಿಗಳನ್ನು ,ರಚಿಸಿದ್ದಾರೆ. ಸಾಹಿತ್ಯ ಪರಿಷತ್ ನ ಬಹುಮಾನಗಳನ್ನು ಪಡೆದಿದ್ದಾರೆ. ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ರಾಗಿದ್ದಾರೆ.ಪ್ರತಿಷ್ಠಿತ ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಹದಿನಾಲ್ಕನೇ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ರಾಗಿ ಸಂಸ್ಥೆಯ ಬೆಳ್ಳಿಹಬ್ಬದ ಎರಡು ವರ್ಷ ಇವರ ಸಾಮಾಜಿಕ ಸೇವೆ ಗಣನೀಯ.

ಅಪ್ಪ-ಅಮ್ಮ ಮನೋವೈದ್ಯಕೀಯ ಸಮ್ಮೇಳನಕ್ಕೆ ಹೈದರಾಬಾದಿಗೆ ಹೊರಟಿದ್ದರು. “ನಾನು ನಿಮ್ಮ ಜೊತೆ ಬರುತ್ತೇನೆ” ಎಂದು ಪುಟ್ಟ ಮಗುವಿನಂತೆ ಹಟ ಮಾಡಿ ವಸಂತಿ ಅವರ ಜೊತೆ ಹೊರಟಿದ್ದಳು. “ನೀನು ಕಲಾವಿದೆ, ಅದು ಮನೋವೈದ್ಯರ ಸಮ್ಮೇಳನ, ಅಲ್ಲಿ ನಿನಗೇನು ಕೆಲಸ? ಬೇಡ” ಎಂದು ಗಂಡ-ಮಕ್ಕಳು ಹೇಳಿದ್ದರು. ಆದರೆ ಬಸಂತಿ “ಇಲ್ಲ , ನನಗೆ ಈ ಸಂಸಾರದಿಂದ ನಾಲ್ಕಾರು ದಿನ ರಜೆ ಬೇಕೇ ಬೇಕು. ಹೇಗೋ ಅತ್ತೆ ಮಾವ ಇದ್ದಾರೆ, ನಿನಗೂ ಮಕ್ಕಳಿಗೂ ರಜೆ ಇದೆ ಮನೆಯಲ್ಲೇ ಇರಿ” ಎಂದು ಒತ್ತಾಯ – ಪ್ರೀತಿಯಿಂದ ಗಂಡ ಮಕ್ಕಳನ್ನು ಒಪ್ಪಿಸಿ ಅಪ್ಪ – ಅಮ್ಮನ ಜೊತೆ ಹೈದರಾಬಾದಿಗೆ ಹಾರಿದ್ದಳು.
ಅಪ್ಪ ಮನೋವೈದ್ಯರು. ನಾನಾ ಗೋಷ್ಠಿಗಳಿಗೆ ಹಾಜರಾಗುತ್ತಿದ್ದರೆ ವಸಂತಿ, ಅಮ್ಮ ಪಾರ್ವತಿಯ ಜೊತೆ ಹೈದರಾಬಾದ್ ಸುತ್ತು ತೊಡಗಿದ್ದಳು. ಅಮ್ಮ ಮಗಳಿಗೆ ಹೈದರಾಬಾದ್ ಹೊಸದಲ್ಲ. ಹೈದರಾಬಾದ್ ನ ಚಾರ್ಮಿನಾರ್, ಅಲ್ಲಿಯ ಮುತ್ತಿನ ಆಭರಣಗಳು, ಗದ್ವಾಲ್ ಸೀರೆಗಳು, ಕರಾಚಿ ಬಿಸ್ಕೆಟ್ ಎಲ್ಲ ವಸಂತಿಗೆ ಬಹು ಪ್ರಿಯವಾಗಿದ್ದವು. ಅಪ್ಪ ಗೊತ್ತು ಮಾಡಿಕೊಟ್ಟ ಟ್ಯಾಕ್ಸಿಯ ಚಾಲಕ ಇನ್ನೂ ಎಳೆಯ ಯುವಕ! 22 ಅಥವಾ 23 ವರ್ಷಗಳಿರಬಹುದು. ಎತ್ತರದ ತೆಳು ದೇಹದ ಲಕ್ಷಣವಾದ ಹುಡುಗ.
ಹೈದರಾಬಾದಿನ ವಿಶಿಷ್ಟವಾದ ಪಾಯಿಜಾಮ – ಕುರ್ತಾ ಹಾಕಿರುತ್ತಿದ್ದ. ಇಂಗ್ಲಿಷ್- ಹಿಂದಿ ಮಾತನಾಡುತ್ತಿದ್ದ. ಇಡೀ ಹೈದರಾಬಾದನ್ನು ನಾಲ್ಕು ದಿನಗಳಲ್ಲಿ ಸುತ್ತಿಸಿದ್ದ, “ಹುಡುಗ ಸಭ್ಯ. ನನಗಿಂತ ಸಣ್ಣವನು, ಆದರೂ ಆಗಾಗ ನನ್ನನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತಿದ್ದಾನೆ” ಎಂದು ವಸಂತಿಗೆ ಅನಿಸುತ್ತಿತ್ತು. ನನಗೇನು? ನಾನು ಮದುವೆಯಾಗಿ ಎರಡು ಮಕ್ಕಳ ತಾಯಿ” ಎಂದು ಸಂಕೋಚ ಬಿಟ್ಟು ವಸಂತಿಯೂ ನಗುತ್ತಿದ್ದಳು, ಮಾತನಾಡುತ್ತಿದ್ದಳು.
ಪಾರ್ವತಿಗೂ ಈ ಹುಡುಗ ಇಷ್ಟವಾಗಿದ್ದ. ಆ ಸುಂದರ ಹುಡುಗನ ಹೆಸರು ಸುಚೇತನ್! ಎಂಥ ಚಂದದ ಹೆಸರು!! ಎಂದು ಉದ್ಗಾರ ತೆಗೆದಿದ್ದಳು.
“ಮೇಡಂ, ಚಾರ್ ಮಿನಾರ್ ನೋಡಿದ್ದೀರಿ. ಆದರೆ ಪಕ್ಕದ ಮಸೀದಿಯೇ ನೋಡಿಲ್ಲ ಅಲ್ಲವೇ? ಬನ್ನಿ”, ಎಂದು ಕರೆದೊಯ್ದಿದ್ದ. ಮಸೀದಿ ಮುಂದಿನ ಸಂಗಮರಿ ಕಲ್ಲು ಹಾಸಿಗೆ ತೋರಿಸುತ್ತ “ಇದರ ಮೇಲೆ ಒಂದು ಕ್ಷಣ ಕುಳಿತುಕೊಳ್ಳಿ, ಅಂದರೆ ಮತ್ತೆ ಹೈದರಾಬಾದಿಗೆ ಬರುವ ಹಾಗೆ ಆಗುತ್ತದೆ” ಎಂದಿದ್ದ. ವಸಂತಿ ನಗುತ್ತ ಅದರ ಮೇಲೆ ಕುಳಿತಿದ್ದಳು. ಸುಚೇತನ್ ಮುಖದಲ್ಲಿ ತೃಪ್ತಿಯ ನಗು. ಪಾರ್ವತಿ ಮಾತ್ರ ಎಲ್ಲಿಗೂ ತಿರುಗಲು ಸಾಧ್ಯವಿಲ್ಲ, ಮನೆಯೇ ಸಾಕು, ಎಲ್ಲೂ ಕೂಡ್ರುವುದು ಬೇಡ” ಎಂದು ನಕ್ಕಿದ್ದಳು.
ಅಲ್ಲಿಂದ ಹೊರಬಂದು ಚಾರ್ಮಿನಾರ್ ಸುತ್ತಲೂ ಮುತ್ತಿನ ಬಳೆ, ಹಾರ, ಹರಳುಗಳು ಕೂಡಿಸಿದ ಬಳೆಗಳು, ಚೂಡಿದಾರ್ ಸೆಟ್ ಗಳು ಕೊಳ್ಳುವಾಗಲೂ, ಸುಚೇತನ್ ತಾನೇ ಮುಂದಾಗಿ ಉರ್ದುವಿನಲ್ಲೇ ಮಾತನಾಡುತ್ತಾ, ಚೌಕಾಸಿ ಮಾಡುತ್ತಿದ್ದ. ಹಿಂದೊಮ್ಮೆ ಸಮ್ಮೇಳನಕ್ಕೆ ಬಂದ ಅತಿಥಿಗಳನ್ನು ತಾನು ಹೇಗೆ ಇಲ್ಲಿ ನಡೆದ ಗಲಾಟೆಯಲ್ಲಿ ರಕ್ಷಣೆ ಮಾಡಿದೆ ಎಂದು ವಿವರಿಸಿದ್ದ.
ಅಂತೂ ನಾಲ್ಕು ದಿನಗಳ ಪ್ರವಾಸ ಮುಗಿಯುವಾಗ ಈ ಸುಚೇತನ್ ಪಾರ್ವತಿ – ವಸಂತಿಗೆ ತುಂಬಾ ಪ್ರಿಯನಾಗಿದ್ದ. ತಿರುಗಿ ಬೆಂಗಳೂರಿಗೆ ಹೊರಡುವ ದಿನ ತಾಜ್ ಹೋಟೆಲ್ ನಿಂದ ವಿಮಾನ ನಿಲ್ದಾಣಕ್ಕೆ ಬಿಡಲು ಸುಚೇತನ್ ನೇ ಬಂದಿದ್ದ. ವಿಮಾನ ನಿಲ್ದಾಣದಲ್ಲಿ ಅವನನ್ನು ಬೀಳ್ಕೊಡುವಾಗ ಅವನಿಗೆ ಕೊಡಲು ಹಣ್ಣಿನ ದೊಡ್ಡ ಬುಟ್ಟಿ, ಸಮ್ಮೇಳನದಲ್ಲಿ ಸಿಕ್ಕ ಹಲವಾರು ಕಾಣಿಕೆಗಳನ್ನು ತೆಗೆದಿಟ್ಟಿದ್ದರು. ವಿಮಾನ ನಿಲ್ದಾಣಕ್ಕೆ ಬಿಟ್ಟು, ಹೊರಡುವ ವೇಳೆ ಬಂದಿತ್ತು. ಪಾರ್ವತಿ-ವಸಂತಿ ಸುಚೇತನ್ ಗೆ ವಿದಾಯ ಹೇಳಿ ಕಾಣಿಕೆ ನೀಡುವ ಮೊದಲೇ ಅನಿರೀಕ್ಷಿತವಾಗಿ ಆತ, ಒಂದು ಬಳೆಗಳ ರಟ್ಟಿನ ಪೆಟ್ಟಿಗೆ ವಸಂತಿಗೆ ನೀಡುತ್ತಾ ನುಡಿದಿದ್ದ. “ಹಿಂದಿನ ವರ್ಷ ಹಾರ್ಟ್ ಪ್ರಾಬ್ಲಮ್ ದಿಂದ ನನ್ನ ಒಬ್ಬಳೇ ದೀದಿ ತೀರಿಕೊಂಡಳು. ಹೀಗೆ, ನಿಮ್ಮ ಹಾಗೆ ಇದ್ದಳು. ಅವಳಿಗೆ ಬಳೆಗಳು ಅಂದರೆ ತುಂಬಾ ಇಷ್ಟ. ಚಾರ್ ಮಿನಾರ್ ಬಳಿ ಹೋದರೆ ಬಳೆ ತಾ ಅಂತ ಪೀಡಿಸುತ್ತಿದ್ದಳು”. ವಸಂತಿ ಹಾಗೂ ಪಾರ್ವತಿ ,ಶಂಕರ ಏನೂ ಮಾತನಾಡಲಾಗದೆ ಮೂಕರಂತೆ ನಿಂತಿದ್ದರು. ಹಣ್ಣುಗಳು ತುಂಬಿದ ಬುಟ್ಟಿ, ಉಳಿದ ಕಾಣಿಕೆಗಳನ್ನು ಸುಚೇತನ್ ನೀಡುವಾಗಲೂ ವಸಂತಿ -ಪಾರ್ವತಿಯರ ಕಣ್ಣಲ್ಲಿ ನೀರು! ಸುಚೇತನ್ ನೀಡಿದ್ದ ಬಹು ಅಮೂಲ್ಯವಾದ ವಾತ್ಸಲ್ಯದ ಬಳೆಗಳ ಮುಂದೆ ಎಲ್ಲವೂ ಕಡಿಮೆ ಅಂದೇ ಅನಿಸುತ್ತಿತ್ತು. “ಸುಚೇತನ್ – ಸುಂದರ ಸುಚೇತನ್ ಮತ್ತೆ ಸಿಗೋಣ!” ಎನ್ನುತ್ತಾ ವಸಂತಿ ಹಾಗೂ ಪಾರ್ವತಿ, ಶಂಕರನನ್ನು ಹಿಂಬಾಲಿಸಿ ವಿಮಾನವನ್ನೇರಿದ್ದರು.

ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ: ಸಂಸದ ಬಿ.ವೈ.ಆರ್

0

ಶಿಕಾರಿಪುರ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಆಡಳಿತ ತಾಲೂಕು, ಪಂಚಾಯತ್ ಪುರಸಭೆ, ವಿವಿಧ ಇಲಾಖೆಗಳು ಹಾಗೂ ಕನ್ನಡ ಯುವಕರ ಸಂಘ, ವಿವಿಧ ಸಂಘಟನೆಗಳು ಶಿಕಾರಿಪುರ ತಾಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ಬಿವೈ ರಾಘವೇಂದ್ರ ಅವರು ಧ್ವಜಾರೋಹಣ ನೆರವೇರಿಸಿದರು.
” ನಮ್ಮ ಅನ್ನ ಕೊಡುವ ಭಾಷೆ ಕನ್ನಡ ಇಂತಹ ಪುಣ್ಯದ ಭೂಮಿ ಕನ್ನಡ ನಾಡು. ಭಾಷೆ, ನಾಡು,ನುಡಿಗೆ ಹೆಚ್ಚಿನ ಕೆಲಸವನ್ನು ಮಾಡೋಣ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಕ್ಕೆ ಮೊದಲ ಆದ್ಯತೆ ಕೊಡುತ್ತೇವೆ. ಜೊತೆಗೆ ಮುಂದಿನ ದಿನದಲ್ಲಿ ಶಿವಮೊಗ್ಗವು ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಪ್ರವಾಸೋದ್ಯಮದಲ್ಲಿ ಅನೇಕ ಕೊಡುಗೆ ನೀಡಲಿದೆ. ನಮ್ಮ ಜಿಲ್ಲೆಯನ್ನು, ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ” ಎಂದು ಮಾನ್ಯ ಸಂಸದ ಬಿವೈ ರಾಘವೇಂದ್ರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕವಿರಾಜ್, ಎಂ. ಎ. ಡಿ. ಬಿ. ಅಧ್ಯಕ್ಷರಾದ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚನ್ನವೀರಪ್ಪ. ಟಿ. ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಟಿ -20 “ಕಿವಿ” ಹಿಂಡಿಸಿಕೊಂಡ ಭಾರತ

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B – ಗುಂಪಿನಲ್ಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಿತು. ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಗಳಿಸಿತು.
ದುಬೈನ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 110 ರನ್ ಗಳಿಸಿತು. ಆರಂಭದಲ್ಲಿಯೇ ಆಘಾತಗೊಂಡ ಭಾರತ ತಂಡ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲ್ಲಿಲ್ಲ.
ದಿಡೀರ್ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡವನ್ನು ಕಂಡ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅಂಕಣ ಇಳಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ 23 ರನ್ ಗಳನ್ನ ಕಲೆ ಹಾಕಿದರು. ಹಾಗೆಯೇ ರವೀಂದ್ರ ಜಡೇಜಾ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸ್ ಸಿಡಿಸಿ, ಇವರಿಬ್ಬರ ಜೊತೆಯಾಟದಲ್ಲಿ ಕೆಲ ಕಾಲ ಪ್ರತಿ ಹೋರಾಟದಿಂದ ಹೆಚ್ಚು ರನ್ ಗಳಿಸಬಹುದು ಎಂಬ ಆಸೆ ಹೂಡಿತು.
ಅಂತೆ ಪಾಂಡೆ ಹಾಗೂ ಜಡೇಜಾ ಜೋಡಿ 6 ನೇ ವಿಕೆಟ್ ಗೆ 24 ರನ್ ಸೇರಿಸಿದರು. ಬೌಲ್ಟ್ ರವರ ಎಸೆತದಲ್ಲಿ ಗುಪ್ಟಿಲ್ ಸುಲಭವಾಗಿ ಕ್ಯಾಚ್ ಸಿಕ್ಕಿಸಿ ಹೊರ ನಡೆದರು.
ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ ಕಡೆಯ ಓವರ್ ನಲ್ಲಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿ ರನ್ ರೇಟ್ ಹೆಚ್ಚಳಕ್ಕೆ ಪ್ರಮುಖ ಕಾರಣರಾದರು.
110 ರನ್ ಗಳನ್ನ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ ಕೇವಲ 14.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಭಾರಿಸಿ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ವೇಗಿ ಟ್ರಂಪ್ ಬೌಲ್ಟ್ 20 ರನ್ ಗಳಿಗೆ 2 ವಿಕೆಟ್ ತೆಗೆದುಕೊಂಡರು. ಹಾಗೆಯೇ ಸ್ಪಿನ್ನರ್ ಇಶ್ ಸೋಧಿ 17 ರನ್ ಗಳಿಗೆ 2 ವಿಕೆಟ್ ತೆಗೆದುಕೊಂಡರು. ಇವರ ರೋಚಕ ಬೌಲಿಂಗ್ ನಿಂದ ವಿರಾಟ್ ಕೊಹ್ಲಿ ಬಳಗವು ನಲುಗಿ ಸತತ ಎರಡನೇ ಸೋಲನ್ನು ಕಂಡಿತು.
ನ್ಯೂಜಿಲೆಂಡ್ ತಂಡದ ಆಟಗಾರರ ಬೌಲಿಂಗ್ ಹಾಗೂ ಬ್ಯಾಟಿಂಗ್ ಇವೆರೆಡರ ಉತ್ತಮ ಪ್ರದರ್ಶನ ತೋರಿದ ಆಟಗಾರರು ಭಾರತ ತಂಡವನ್ನು ಬಹಳ ಸುಲಭವಾಗಿ ಸೋಲಿಸಿ ತಂಡದ ಗೆಲುವಿಗೆ ಕಾರಣರಾದರು .
ಕೀವಿಸ್ ತಂಡದ ನಿಕಟ ಬೌಲಿಂಗ್ ನ ಎದುರು ಭಾರತ ಬ್ಯಾಟ್ಸ್ ಮನ್ ಗಳ ಯಾವ ಆಟವು ನಡೆಯಲಿಲ್ಲ ಹಾಗಾಗಿ ಭಾರತಕ್ಕೆ ಸೆಮಿಫೈನಲ್ ನ ದಾರಿ ಬಹಳ ಕಠಿಣವಾಗಿದೆ.

ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅನುಮತಿ

0

ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳ ಮಾರಾಟ ಹಾಗೂ ಸಿಡಿಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ಆಚರಣೆ ಸಂಬಂಧ, ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ದೀಪಾವಳಿಯ ವೇಳೆ ಹಸಿರು ಪಟಾಕಿ ಗೆ ಮಾತ್ರ ಅವಕಾಶವಿದ್ದು, ಉಳಿದ ಇತರೆ ಸಿಡಿಮದ್ದುಗಳ ಮಾರಾಟಕ್ಕೆ ಅವಕಾಶವಿಲ್ಲ. ಹಸಿರು ಪಟಾಕಿಯ ಮಾರಾಟಕ್ಕೆ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ನವೆಂಬರ್ 1ರಿಂದ 10ರವರೆಗೆ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಧಿಕೃತ ಪರವನಾಗಿ ಪಡೆದವರಿಗೆ ಮಾತ್ರ ಹಸಿರು ಪಟಾಕಿ ಮಾರಲು ಅವಕಾಶ ಇದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪಟಾಕಿಗಳನ್ನು ಸಾರ್ವಜನಿಕ ವಸತಿ ಸ್ಥಳದಿಂದ ದೂರವಿರುವ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಬೇಕು. ಮಳೆಗೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹಾಗೂ ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುತ್ತಿರಬೇಕು. ಒಂದು ಮಾರಾಟ ಮಳಿಗೆಗೂ ಹಾಗೂ ಇನ್ನೊಂದು ಮಾರಾಟ ಮಳಿಗೆಗೂ 6 ಮೀಟರ್ ಅಂತರವಿರಬೇಕು. ಮಾರಾಟ ಮಳಿಗೆಗೆ ನಿತ್ಯವೂ ಸ್ಯಾನಿಟೈಸ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಸಿರು ಪಟಾಕಿಯನ್ನು ಹೊರತುಪಡಿಸಿ ಇನ್ಯಾವುದೇ ಪಟಾಕಿಯ ಮಾರಾಟ ಹಾಗೂ ಸಿಡಿಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ಈ ಹಸಿರು ಪಟಾಕಿ ಪರಿಸರ ಸ್ನೇಹಿ ಪಟಾಕಿಯಾಗಿದೆ. ಇದರಿಂದ ಶಬ್ದ ಮಾಲಿನ್ಯ ವಾಯು ಮಾಲಿನ್ಯ ಯಾವುದೇ ಪರಿಸರಕ್ಕೆ ಹಾನಿಯಾಗದ ಇರುವ ಕಾರಣದಿಂದ ಈ ಪಟಾಕಿ ಅತ್ಯಂತ ಸುರಕ್ಷಿತ ಮತ್ತು ಪರಿಸರಸ್ನೇಹಿ ಪಟಾಕಿಯಾಗಿದೆ.

ಹೊಸ ಶಿಕ್ಷಣ ನೀತಿಯಿಂದ, ಜಾಗತಿಕ ಗುಣಮಟ್ಟ

0

ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನ ಶಿಕ್ಷಣ ಕುರಿತು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಹೊಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದದ್ದು, ಈ ರೀತಿಯ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲಿದೆ ಅದಕ್ಕೆ ಸೂಕ್ತ ಕ್ರಮಗಳು ಅಗತ್ಯವಿದ್ದು, ನಮ್ಮಿಂದ ಅದು ಆರಂಭವಾಗಲಿ. 3 ದಶಕಗಳ ಬಳಿಕ ಕೇಂದ್ರ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ ಶಿಕ್ಷಣ ನೀತಿ ಇದಾಗಿದೆ. ಭಾರತೀಯ ಶೈಕ್ಷಣಿಕ ವ್ಯವಸ್ಥೆಗೆ ಜಾಗತಿಕ ಗುಣಮಟ್ಟವನ್ನು ತಂದುಕೊಡಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧ ಅವರು ‘ ನೂತನ ಶಿಕ್ಷಣ ನೀತಿಯನ್ನು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯಾವುದೇ ರೀತಿಯ ಗೊಂದಲಗಳು ಉಂಟಾದಲ್ಲಿ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಭೂಗರ್ಭಶಾಸ್ತ್ರ ವಿಭಾಗದ ಪ್ರೊ. ಸೈಯದ್ ಅಶ್ಫಕ್ ಅಹಮ್ಮದ್ ಅವರು ನೂ ತನ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ಪ್ರವೇಶ, ತರಗತಿಗಳು,ಪರೀಕ್ಷೆ, ಕ್ರೆಡಿಟ್ ಪಾಯಿಂಟ್ ಕುರಿತು ವಿವಿಧ ಕಾಲೇಜುಗಳಿಂದ ಆಗಮಿಸಿದ ಅಧ್ಯಾಪಕರುಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಐಕ್ಯೂಎಸಿ ನಿರ್ದೇಶಕ ಪ್ರೊ. ಹೆಚ್. ಎಸ್.ಜಯಣ್ಣ, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಅಧ್ಯಾಪಕರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

ಎಂದಿನಂತೆ, ಬಿಎಂಟಿಸಿ ಬಸ್ ಸಂಚಾರ

0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ ಎಂ ಟಿ ಸಿ) ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಗಳ ಸಂಖ್ಯೆಯನ್ನು ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಎಲ್ಲಾ ಜನ ಜೀವನ ಸ್ಥಿತಿಯು ಸಹಜ ರೀತಿಯಲ್ಲಿ ಮೊದಲಿನಂತಾಗಿದೆ. ಇದೇ ರೀತಿ ಸಾರಿಗೆ ಬಸ್ ಗಳ ಸಂಖ್ಯೆಯಲ್ಲೂ ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ.
ಕೊರೋನಾ ಕಾರಣದಿಂದಾಗಿ ಸಾರಿಗೆ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ಈಗ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆ ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಕೋವಿಡ್ -19ರ ಎರಡನೇ ಅಲೆಯ ಸಮಯದಲ್ಲಿ ಕಾರಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಇತರ ಭಾಗಗಳ ನಡುವೆ ಕಾರ್ಯನಿರ್ವಹಿಸುವ ಬಿಎಂಟಿಸಿ ಯ ಬಸ್ ಗಳನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೇ ಎಲ್ಲಾ ಸ್ಥಿತಿ ಸಹಜವಾಗಿರುವ ಕಾರಣ, ಹಿಂದಿನಿಂದ ಸಾರಿಗೆ ಸೇವೆಗಳು ಆರಂಭಗೊಳ್ಳಲಿದೆ. ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯನಿರ್ವಹಿಸುವ ಬಸ್ ಗಳ ಸಂಖ್ಯೆಯನ್ನು 45 ರಿಂದ 58ಕ್ಕೆ ಹೆಚ್ಚಿಸಲಾಗಿದೆ.

‘ನಾವು ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ‘ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ಮಾಧ್ಯಮ ದಾರರಿಗೆ ತಿಳಿಸಿದರು.

ರಜನಿ ಕ್ಷೇಮವಿದ್ದಾರೆ ವದಂತಿ ನಂಬಬೇಡಿ

ಸೂಪರ್ ಸ್ಟಾರ್ ನಟ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಚೆನ್ನೈ ಆಸ್ಪತ್ರೆಗೆ ಆಗಮಿಸುತ್ತಿದ್ದರು.
ಈಗಾಗಲೇ ಸಾಕಷ್ಟು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಸ್ಪಷ್ಟನೆ ನೀಡಿದ್ದು, “ರಜನಿಕಾಂತ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ “ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ಅವರು ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದರು.

ರಿಪ್ಪನ್ ಪೇಟೆಯಲ್ಲಿ “ಅಪ್ಪು”ಗೆ ಗೌರವ ನಮನ

0

ನಟ ಪುನಿತ್ ರಾಜ್ ಕುಮಾರ್ ನಿನ್ನೆ ಅಕಾಲಿಕ ನಿಧನರಾದ್ದಾರೆ.ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಅಗಲಿದ ನಟನಿಗೆ ಗೌರವ ನಮನ ಸಲ್ಲಿಸಲಾಗಿದೆ.

ರಿಪ್ಪನ್ ಪೇಟೆಯಲ್ಲಿ ಔಷಧಿ ಮಳಿಗೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಮಳಿಗೆಗಳು, ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ವಾಹನ ಸಂಚಾರ, ಬಸ್ಸುಗಳ ಓಡಾಟಕ್ಕೆ ಯಾವುದೆ ಅಡ್ಡಿಯಾಗಿಲ್ಲ. ರಿಪ್ಪನ್ ಪೇಟೆ ಸರ್ಕಲ್’ನಲ್ಲಿ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ.