
ವಿಜಯಾ ಶ್ರೀಧರ ಈವರೆಗೆ 20 ಕೃತಿಗಳನ್ನು ,ರಚಿಸಿದ್ದಾರೆ. ಸಾಹಿತ್ಯ ಪರಿಷತ್ ನ ಬಹುಮಾನಗಳನ್ನು ಪಡೆದಿದ್ದಾರೆ. ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ರಾಗಿದ್ದಾರೆ.ಪ್ರತಿಷ್ಠಿತ ಕರ್ನಾಟಕ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಹದಿನಾಲ್ಕನೇ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ರಾಗಿ ಸಂಸ್ಥೆಯ ಬೆಳ್ಳಿಹಬ್ಬದ ಎರಡು ವರ್ಷ ಇವರ ಸಾಮಾಜಿಕ ಸೇವೆ ಗಣನೀಯ.
ಅಪ್ಪ-ಅಮ್ಮ ಮನೋವೈದ್ಯಕೀಯ ಸಮ್ಮೇಳನಕ್ಕೆ ಹೈದರಾಬಾದಿಗೆ ಹೊರಟಿದ್ದರು. “ನಾನು ನಿಮ್ಮ ಜೊತೆ ಬರುತ್ತೇನೆ” ಎಂದು ಪುಟ್ಟ ಮಗುವಿನಂತೆ ಹಟ ಮಾಡಿ ವಸಂತಿ ಅವರ ಜೊತೆ ಹೊರಟಿದ್ದಳು. “ನೀನು ಕಲಾವಿದೆ, ಅದು ಮನೋವೈದ್ಯರ ಸಮ್ಮೇಳನ, ಅಲ್ಲಿ ನಿನಗೇನು ಕೆಲಸ? ಬೇಡ” ಎಂದು ಗಂಡ-ಮಕ್ಕಳು ಹೇಳಿದ್ದರು. ಆದರೆ ಬಸಂತಿ “ಇಲ್ಲ , ನನಗೆ ಈ ಸಂಸಾರದಿಂದ ನಾಲ್ಕಾರು ದಿನ ರಜೆ ಬೇಕೇ ಬೇಕು. ಹೇಗೋ ಅತ್ತೆ ಮಾವ ಇದ್ದಾರೆ, ನಿನಗೂ ಮಕ್ಕಳಿಗೂ ರಜೆ ಇದೆ ಮನೆಯಲ್ಲೇ ಇರಿ” ಎಂದು ಒತ್ತಾಯ – ಪ್ರೀತಿಯಿಂದ ಗಂಡ ಮಕ್ಕಳನ್ನು ಒಪ್ಪಿಸಿ ಅಪ್ಪ – ಅಮ್ಮನ ಜೊತೆ ಹೈದರಾಬಾದಿಗೆ ಹಾರಿದ್ದಳು.
ಅಪ್ಪ ಮನೋವೈದ್ಯರು. ನಾನಾ ಗೋಷ್ಠಿಗಳಿಗೆ ಹಾಜರಾಗುತ್ತಿದ್ದರೆ ವಸಂತಿ, ಅಮ್ಮ ಪಾರ್ವತಿಯ ಜೊತೆ ಹೈದರಾಬಾದ್ ಸುತ್ತು ತೊಡಗಿದ್ದಳು. ಅಮ್ಮ ಮಗಳಿಗೆ ಹೈದರಾಬಾದ್ ಹೊಸದಲ್ಲ. ಹೈದರಾಬಾದ್ ನ ಚಾರ್ಮಿನಾರ್, ಅಲ್ಲಿಯ ಮುತ್ತಿನ ಆಭರಣಗಳು, ಗದ್ವಾಲ್ ಸೀರೆಗಳು, ಕರಾಚಿ ಬಿಸ್ಕೆಟ್ ಎಲ್ಲ ವಸಂತಿಗೆ ಬಹು ಪ್ರಿಯವಾಗಿದ್ದವು. ಅಪ್ಪ ಗೊತ್ತು ಮಾಡಿಕೊಟ್ಟ ಟ್ಯಾಕ್ಸಿಯ ಚಾಲಕ ಇನ್ನೂ ಎಳೆಯ ಯುವಕ! 22 ಅಥವಾ 23 ವರ್ಷಗಳಿರಬಹುದು. ಎತ್ತರದ ತೆಳು ದೇಹದ ಲಕ್ಷಣವಾದ ಹುಡುಗ.
ಹೈದರಾಬಾದಿನ ವಿಶಿಷ್ಟವಾದ ಪಾಯಿಜಾಮ – ಕುರ್ತಾ ಹಾಕಿರುತ್ತಿದ್ದ. ಇಂಗ್ಲಿಷ್- ಹಿಂದಿ ಮಾತನಾಡುತ್ತಿದ್ದ. ಇಡೀ ಹೈದರಾಬಾದನ್ನು ನಾಲ್ಕು ದಿನಗಳಲ್ಲಿ ಸುತ್ತಿಸಿದ್ದ, “ಹುಡುಗ ಸಭ್ಯ. ನನಗಿಂತ ಸಣ್ಣವನು, ಆದರೂ ಆಗಾಗ ನನ್ನನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತಿದ್ದಾನೆ” ಎಂದು ವಸಂತಿಗೆ ಅನಿಸುತ್ತಿತ್ತು. ನನಗೇನು? ನಾನು ಮದುವೆಯಾಗಿ ಎರಡು ಮಕ್ಕಳ ತಾಯಿ” ಎಂದು ಸಂಕೋಚ ಬಿಟ್ಟು ವಸಂತಿಯೂ ನಗುತ್ತಿದ್ದಳು, ಮಾತನಾಡುತ್ತಿದ್ದಳು.
ಪಾರ್ವತಿಗೂ ಈ ಹುಡುಗ ಇಷ್ಟವಾಗಿದ್ದ. ಆ ಸುಂದರ ಹುಡುಗನ ಹೆಸರು ಸುಚೇತನ್! ಎಂಥ ಚಂದದ ಹೆಸರು!! ಎಂದು ಉದ್ಗಾರ ತೆಗೆದಿದ್ದಳು.
“ಮೇಡಂ, ಚಾರ್ ಮಿನಾರ್ ನೋಡಿದ್ದೀರಿ. ಆದರೆ ಪಕ್ಕದ ಮಸೀದಿಯೇ ನೋಡಿಲ್ಲ ಅಲ್ಲವೇ? ಬನ್ನಿ”, ಎಂದು ಕರೆದೊಯ್ದಿದ್ದ. ಮಸೀದಿ ಮುಂದಿನ ಸಂಗಮರಿ ಕಲ್ಲು ಹಾಸಿಗೆ ತೋರಿಸುತ್ತ “ಇದರ ಮೇಲೆ ಒಂದು ಕ್ಷಣ ಕುಳಿತುಕೊಳ್ಳಿ, ಅಂದರೆ ಮತ್ತೆ ಹೈದರಾಬಾದಿಗೆ ಬರುವ ಹಾಗೆ ಆಗುತ್ತದೆ” ಎಂದಿದ್ದ. ವಸಂತಿ ನಗುತ್ತ ಅದರ ಮೇಲೆ ಕುಳಿತಿದ್ದಳು. ಸುಚೇತನ್ ಮುಖದಲ್ಲಿ ತೃಪ್ತಿಯ ನಗು. ಪಾರ್ವತಿ ಮಾತ್ರ ಎಲ್ಲಿಗೂ ತಿರುಗಲು ಸಾಧ್ಯವಿಲ್ಲ, ಮನೆಯೇ ಸಾಕು, ಎಲ್ಲೂ ಕೂಡ್ರುವುದು ಬೇಡ” ಎಂದು ನಕ್ಕಿದ್ದಳು.
ಅಲ್ಲಿಂದ ಹೊರಬಂದು ಚಾರ್ಮಿನಾರ್ ಸುತ್ತಲೂ ಮುತ್ತಿನ ಬಳೆ, ಹಾರ, ಹರಳುಗಳು ಕೂಡಿಸಿದ ಬಳೆಗಳು, ಚೂಡಿದಾರ್ ಸೆಟ್ ಗಳು ಕೊಳ್ಳುವಾಗಲೂ, ಸುಚೇತನ್ ತಾನೇ ಮುಂದಾಗಿ ಉರ್ದುವಿನಲ್ಲೇ ಮಾತನಾಡುತ್ತಾ, ಚೌಕಾಸಿ ಮಾಡುತ್ತಿದ್ದ. ಹಿಂದೊಮ್ಮೆ ಸಮ್ಮೇಳನಕ್ಕೆ ಬಂದ ಅತಿಥಿಗಳನ್ನು ತಾನು ಹೇಗೆ ಇಲ್ಲಿ ನಡೆದ ಗಲಾಟೆಯಲ್ಲಿ ರಕ್ಷಣೆ ಮಾಡಿದೆ ಎಂದು ವಿವರಿಸಿದ್ದ.
ಅಂತೂ ನಾಲ್ಕು ದಿನಗಳ ಪ್ರವಾಸ ಮುಗಿಯುವಾಗ ಈ ಸುಚೇತನ್ ಪಾರ್ವತಿ – ವಸಂತಿಗೆ ತುಂಬಾ ಪ್ರಿಯನಾಗಿದ್ದ. ತಿರುಗಿ ಬೆಂಗಳೂರಿಗೆ ಹೊರಡುವ ದಿನ ತಾಜ್ ಹೋಟೆಲ್ ನಿಂದ ವಿಮಾನ ನಿಲ್ದಾಣಕ್ಕೆ ಬಿಡಲು ಸುಚೇತನ್ ನೇ ಬಂದಿದ್ದ. ವಿಮಾನ ನಿಲ್ದಾಣದಲ್ಲಿ ಅವನನ್ನು ಬೀಳ್ಕೊಡುವಾಗ ಅವನಿಗೆ ಕೊಡಲು ಹಣ್ಣಿನ ದೊಡ್ಡ ಬುಟ್ಟಿ, ಸಮ್ಮೇಳನದಲ್ಲಿ ಸಿಕ್ಕ ಹಲವಾರು ಕಾಣಿಕೆಗಳನ್ನು ತೆಗೆದಿಟ್ಟಿದ್ದರು. ವಿಮಾನ ನಿಲ್ದಾಣಕ್ಕೆ ಬಿಟ್ಟು, ಹೊರಡುವ ವೇಳೆ ಬಂದಿತ್ತು. ಪಾರ್ವತಿ-ವಸಂತಿ ಸುಚೇತನ್ ಗೆ ವಿದಾಯ ಹೇಳಿ ಕಾಣಿಕೆ ನೀಡುವ ಮೊದಲೇ ಅನಿರೀಕ್ಷಿತವಾಗಿ ಆತ, ಒಂದು ಬಳೆಗಳ ರಟ್ಟಿನ ಪೆಟ್ಟಿಗೆ ವಸಂತಿಗೆ ನೀಡುತ್ತಾ ನುಡಿದಿದ್ದ. “ಹಿಂದಿನ ವರ್ಷ ಹಾರ್ಟ್ ಪ್ರಾಬ್ಲಮ್ ದಿಂದ ನನ್ನ ಒಬ್ಬಳೇ ದೀದಿ ತೀರಿಕೊಂಡಳು. ಹೀಗೆ, ನಿಮ್ಮ ಹಾಗೆ ಇದ್ದಳು. ಅವಳಿಗೆ ಬಳೆಗಳು ಅಂದರೆ ತುಂಬಾ ಇಷ್ಟ. ಚಾರ್ ಮಿನಾರ್ ಬಳಿ ಹೋದರೆ ಬಳೆ ತಾ ಅಂತ ಪೀಡಿಸುತ್ತಿದ್ದಳು”. ವಸಂತಿ ಹಾಗೂ ಪಾರ್ವತಿ ,ಶಂಕರ ಏನೂ ಮಾತನಾಡಲಾಗದೆ ಮೂಕರಂತೆ ನಿಂತಿದ್ದರು. ಹಣ್ಣುಗಳು ತುಂಬಿದ ಬುಟ್ಟಿ, ಉಳಿದ ಕಾಣಿಕೆಗಳನ್ನು ಸುಚೇತನ್ ನೀಡುವಾಗಲೂ ವಸಂತಿ -ಪಾರ್ವತಿಯರ ಕಣ್ಣಲ್ಲಿ ನೀರು! ಸುಚೇತನ್ ನೀಡಿದ್ದ ಬಹು ಅಮೂಲ್ಯವಾದ ವಾತ್ಸಲ್ಯದ ಬಳೆಗಳ ಮುಂದೆ ಎಲ್ಲವೂ ಕಡಿಮೆ ಅಂದೇ ಅನಿಸುತ್ತಿತ್ತು. “ಸುಚೇತನ್ – ಸುಂದರ ಸುಚೇತನ್ ಮತ್ತೆ ಸಿಗೋಣ!” ಎನ್ನುತ್ತಾ ವಸಂತಿ ಹಾಗೂ ಪಾರ್ವತಿ, ಶಂಕರನನ್ನು ಹಿಂಬಾಲಿಸಿ ವಿಮಾನವನ್ನೇರಿದ್ದರು.