MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಮತ್ತು ತುರ್ತು ಕ್ರಮಗಳನ್ನು ತೆಗದುಕೊಳ್ಳುವ ಸಲುವಾಗಿ ಫೆ.20 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರ ಕಚೇರಿ, ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗ, ಬಾಲರಾಜ್ ಅರಸ್ ರಸ್ತೆ, ರೈಲ್ವೇ ಸ್ಟೇಷನ್ ಹತ್ತಿರ, ಮೆಸ್ಕಾಂ, ಶಿವಮೊಗ್ಗ ಇಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು ಈ ವ್ಯಾಪ್ತಿಯ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದೆಂದು ಮೆಸ್ಕಾಂ ತಿಳಿಸಿದೆ.
ಶಿಕಾರಿಪುರದಲ್ಲಿ ಬೈಕ್ ಡಿಕ್ಕಿಯಾಗಿ ಪೊಲೀಸ್ ಸಿಬ್ಬಂದಿಗೆ ಗಾಯ.
ಶಿಕಾರಿಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಗೆ ಬೈಕ್ ನಲ್ಲಿ ಯುವಕರು – ಡಿಕ್ಕಿ ಹೊಡೆದ ಘಟನೆ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಳುವನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಪಾರ್ಕಿಂಗ್ ಲಾಟ್ ನಲ್ಲಿ ವಾಹನ ತೆಗೆಸುತ್ತಿದ್ದ ಶಂಕರ್ ಎಂಬ ಪೊಲೀಸ್ ಗೆ
ಬೈಕ್ ನಲ್ಲಿದ್ದ ಬರುತ್ತಿದ್ದ ಮೂವರು ಸವಾರು ಬೈಕ್ ನಿಂದ ಡಿಕ್ಕಿ ಹೊಡೆದಿದ್ದಾರೆ.
ಕುಡಿದು ವಾಹನ ಚಲಾಯಿಸುತ್ತಿದ್ದ ಯುವಕರನ್ನು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ನೃತ್ಯ ಮತ್ತು ಚಲನೆಯ ಚಿಕಿತ್ಸಾ ಶಿಬಿರಗಳು ಮಕ್ಕಳಿಗೆ ಉಪಯುಕ್ತ- ನ್ಯಾ. ದೀಪಾ
ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲನ್ಯಾಯ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಫೆ. 13 ರಂದು ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ನೃತ್ಯ ಮತ್ತು ಚಲನೆಯ ಚಿಕಿತ್ಸಾ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ನಡೆಯಿತು.
ಡಾ.ಕೆ.ಎಸ್.ಪವಿತ್ರಾರ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ 3 ತಿಂಗಳುಗಳ ಕಾಲ ಕಲಿತ ನೃತ್ಯ ಚಲನೆಯ ವಿವಿಧ ಅಂಶಗಳನ್ನು ಮಕ್ಕಳು ಪ್ರದರ್ಶಿಸಿದರು.
ಬಾಲನ್ಯಾಯ ಮಂಡಳಿಯ ಅಧ್ಯಕ್ಷರು ಮತ್ತು ಹಿರಿಯ ನ್ಯಾಯಾಧೀಶರಾದ ಶ್ರೀಮತಿ ದೀಪಾ ರವರು ಕಾರ್ಯಕ್ರಮ ಉದ್ಘಾಟಿಸಿ ಇಂತಹ ಶಿಬಿರಗಳು ಅಪೇಕ್ಷಣೀಯ. ಮಕ್ಕಳ ಸಾಮರ್ಥ್ಯವನ್ನು ಹತ್ತು ಹಲವು ರೀತಿಗಳಲ್ಲಿ ಬೆಳೆಸುತ್ತವೆ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ ಇಂತಹ ಪ್ರಯತ್ನಗಳನ್ನು ಎಲ್ಲಾ ಬಾಲಮಂದಿರಗಳಿಗೂ ವಿಸ್ತರಿಸಬೇಕಾದ ಅವಶ್ಯಕತೆಯ ಬಗ್ಗೆ ಗಮನಸೆಳೆದರು.
ಶಿಬಿರದ ನಿರ್ದೇಶಕಿ ಮತ್ತು ಬಾಲ ನ್ಯಾಯ ಮಂಡಳಿಯ ಸದಸ್ಯೆ ಡಾ.ಕೆ.ಎಸ್.ಪವಿತ್ರ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ತಾಜುದ್ದೀನ್ ಖಾನ್, ಡಾ.ಪ್ರೀತಿ ಪೈ. ಡಾ.ಅರ್ಚನಾ ಭಟ್, ಶ್ರೀಮತಿ ಜ್ಯೋತಿಕಲಾ ಮತ್ತು ಬಾಲ ನ್ಯಾಯ ಮಂಡಳಿಯ ಸಿಬ್ಬಂದಿ ಭಾಗವಹಿಸಿ ಮಕ್ಕಳನ್ನು ಶ್ಲಾಘಿಸಿದರು.
District Consumer Disputes Redressal Commission ಕರ್ನಾಟಕ ಬ್ಯಾಂಕ್ ಸೇವಾ ನ್ಯೂನತೆ ದೂರು: ಪರಿಹಾರ ನೀಡಲು ಆದೇಶ
ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆ ನಾಗರಾಜ್ ಬಿ.ಎಂ. ಎಂಬುವವರು ಸಂತೇ ಕಡೂರು ಕೆನರಾ ಬ್ಯಾಂಕ್ ಶಾಖೆ, ಮಲ್ಲಿಗೆನಹಳ್ಳಿ ಲೀಡ್ ಬ್ಯಾಂಕ್ ಚೇರ್‌ಮನ್ ಮತ್ತು ಶಿವಮೊಗ್ಗ ಗೋಪಿಸರ್ಕಲ್ ಕರ್ನಾಟಕ ಬ್ಯಾಂಕ್ ಮೇನ್ ಬ್ರಾಂಚ್ ವ್ಯವಸ್ಥಾಪಕರು ಇವರುಗಳ ವಿರುದ್ಧ ಕರ್ನಾಟಕ ಬ್ಯಾಂಕ್‌ನ ರೂ. 5.50 ಲಕ್ಷ ಚೆಕ್‌ನ್ನು ಕೆನರಾ ಬ್ಯಾಂಕ್‌ಗೆ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000 ಗಳನ್ನು ಮಾತ್ರ ಜಮಾ ಮಾಡಿ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲರ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2024ರ ಜುಲೈನಲ್ಲಿ ಕೆನರಾ ಬ್ಯಾಂಕ್‌ನ ತಮ್ಮ ಖಾತೆಗೆ ರೂ. 5.50 ಲಕ್ಷ ಮೊತ್ತ ಕರ್ನಾಟಕ ಬ್ಯಾಂಕ್ ಚೆಕ್‌ನ್ನು ವರ್ಗಾವಣೆಗಾಗಿ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000/- ಗಳನ್ನು ಮಾತ್ರ ಜಮಾ ಮಾಡಿರುತ್ತಾರೆ. ಈ ಕುರಿತು ಅನೇಕ ಸಲ ಪತ್ರ ವ್ಯವಹಾರ ಮಾಡಿ ಉಳಿದ ಮೊತ್ತ 4,95,000/-ಗಳನ್ನು ಜಮಾ ಮಾಡುವಂತೆ ಕೇಳಿಕೊಂಡರೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರನ್ನು ದಾಖಲಿಸಿಕೊಂಡು ಮೂರು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ಕೆನರಾ ಬ್ಯಾಂಕ್ ತಮ್ಮ ತಕರಾರಿನಲ್ಲಿ ದೂರುದಾರರ ಚೆಕ್‌ನ್ನು ಕರ್ನಾಟಕ ಬ್ಯಾಂಕ್ ಶಾಖೆಗೆ ಚೆಕ್ ಮೊತ್ತವನ್ನು ಕಳುಹಿಸಲು ಸಲ್ಲಿಸಿದ್ದು, ಅಲ್ಲಿಂದ ರೂ. 55,000/- ಗಳನ್ನು ಮಾತ್ರ ಕಳುಹಿಸಿರುತ್ತಾರೆ. ಉಳಿಕೆ ವ್ಯತ್ಯಾಸದ ಮೊತ್ತವನ್ನು ಕಳುಹಿಸಲು ಪತ್ರ ಸಲ್ಲಿಸಿರುತ್ತೇವೆ. ಆದ್ದರಿಂದ ಕೆನರಾ ಬ್ಯಾಂಕ್‌ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ ಎಂದು ಹೇಳಿರುತ್ತಾರೆ.
ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಚೆಕ್‌ನ ಪೂರ್ಣ ಮೊತ್ತವನ್ನು ಖಾತೆಗೆ ಜಮಾ ಮಾಡದೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಕರ್ನಾಟಕ ಬ್ಯಾಂಕ್ ದೂರುದಾರರಿಗೆ ಚೆಕ್ ಅನ್ವಯದ ವ್ಯತ್ಯಾಸದ ಮೊತ್ತ ರೂ. 4,95,000/- ದಿ:21/02/2025ರಿಂದ ವಾರ್ಷಿಕ ಶೇ. 6ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಫೆ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.
Agnipath scheme ಅಗ್ನಿವೀರ್ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ
Agnipath scheme ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಶಿವಮೊಗ್ಗ, ದಾವಣಗೆರೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಸಕ್ತರು ಆನ್‌ಲೈನ್ ನೋಂದಣಿ ಪೊರ್ಟಲ್-WWW.JOININDINARMY.NIC.IN ರ ಮೂಲಕ ಏ. 01 ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Agnipath scheme ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂ. ಸಂ.: 0824-2458376, 7411497644 ಅಥವಾ WWW.JOININDINARMY.NIC.IN ಎಂಬ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ. ಭಾರತೀಯ ಸೇನೆಯಲ್ಲಿ ಆಯ್ಕೆ ವಿಧಾನವು ನ್ಯಾಯಯುತ ಮತ್ತು ಪಾರದರ್ಶಕವಾಗಿದ್ದು, ಅರ್ಹತೆ ಮತ್ತು ದೈಹಿಕ ಕ್ಷಮತೆ ಮೇರೆಗೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿನ ಆಯ್ಕೆ ಪ್ರಕ್ರಿಯೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್‌ಗಳಂತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಅವರು ತಿಳಿಸಿರುತ್ತಾರೆ.
Department of Kannada and Culture ಫೆ.19. ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಜಿಲ್ಲಾಡಳಿತದಿಂದ ಆಯೋಜನೆ
Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ಫೆ.19 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Department of Kannada and Culture ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗು ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ತೀರ್ಥಹಳ್ಳಿಯ ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಅಂಚೆ ಇಲಾಖೆಯ “ಮೌನ ಸಿಬ್ಬಂದಿ”ಯ ಸಾರ್ಥಕ ಸೇವೆಗೆ ಸನ್ಮಾನ
ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ್ ವರ್ಗದವರಿಗೆ ವಿಶೇಷ ಸನ್ಮಾನ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನವಲೆ ಇವರ ವತಿಯಿಂದ ಗುಡ್ಡಗಾಡುಗಳಲ್ಲಿ ಹಾಗೂ ಮಳೆ ಚಳಿ ಎಲ್ಲಾ ಸಮಯದಲ್ಲೂ ಪ್ರತಿಯೊಂದು ಮೂಲೆ ಮೂಲೆಗಳಿಗೆ ಹೋಗಿ ಯಾವ ಪಲಾಪೇಕ್ಷೆ ಇಲ್ಲದೆ ಸರಿಯಾದ ಸಮಯಕ್ಕೆ ಅಂಚೆ ಸೇವೆ ಸಲ್ಲಿಸುತ್ತಿರುವ ಸೈಲೆಂಟ್ ವರ್ಕರ್ಸ್ ಸೇವಾ ನಿರತ ಅಂಚೆ ಇಲಾಖೆಯ 70 ಜನ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ವರ್ಗದವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆ ವತಿಯಿಂದ ಎಲ್ಲರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ನೆನಪಿನ ಕಾಣಿಕೆಗಳು ಜೊತೆಗೆ ಶಾಲು ಹಾರ ಹಾಗೂ ಸಿಹಿ ಬಾಕ್ಸ್ಗಳನ್ನು ನೀಡಿ ತಿಲಕ ಇಟ್ಟು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸ್ವಾತಿ ಮತ್ತು ಶಾಸಕರಾದ ಚನ್ನಬಸಪ್ಪ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ. ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್. ರೋಟರಿ ಜಿ ವಿಜಯಕುಮಾರ್. ಮನೋಹರ್ ಆರ್ . ಪಿ ರುದ್ರೇಶ್. ಡಾ ತಿಪ್ಪೇಶ್. ಮಲ್ಲೇಶಪ್ಪ. ಡಾಕ್ಟರ್ ಆಕಾಶ್ ಹೊಸ್ತೋಟ. ರಾಜಣ್ಣ. ಬಿಕೆ ವಿಜಯಲಕ್ಷ್ಮಿ ರಾಘು. ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಅಣ್ಣಂದಿರು ಅಕ್ಕಂದಿರು ಅಂಚೆ ಕಚೇರಿಯ ಅಧಿಕರಾದ ಎಂ ಕುಮಾರಸ್ವಾಮಿ. ಡಾಕ್ಟರ್ ಪ್ರಸನ್ನ ಬಸವರಾಜಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನಿತರು ಭಾವ ಪರವಶರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
H.S. Sundaresh ಅಂತರ್ಜಲ ಕಾಪಿಡಲು ಶಿವಮೊಗ್ಗದ ಕೆರೆಗಳ ಅಭಿವೃದ್ಧಿ ನಮ್ಮ ಗುರಿ- ಹೆಚ್.ಎಸ್.ಸುಂದರೇಶ್
H.S. Sundaresh ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ಸಾಗರ ರಸ್ತೆಯ ಶಿವಪ್ಪನಾಯಕ ಕೆರೆಯ ಜೀರ್ಣೋದ್ಧಾರ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿ ವರ್ಗದವರೊಂದಿಗೆ ಇಂದು, (ತಾ. 17-2-26) ರಂದು ಭೇಟಿ ನೀಡಿದ್ದರು.
ಶಿವಮೊಗ್ಗ ಮತ್ತು ಸುತ್ತಮುತ್ತ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೆರೆಗಳ ಅಭಿವೃದ್ಧಿ ಪ್ರಸ್ತಾವನೆ ಇದೆ. ಹೀಗಾಗಿ ಸದ್ಯ ಸಾಗರ ರಸ್ತೆಯಲ್ಲಿ ಸಿರಿಮಲ್ಲಿಗೆ ವಸತಿ ಸಂಘಕ್ಕೆ ಹೊಂದಿಕೊಂಡಂತೆ ಇರುವ ಕೆರೆಯ ಅಭಿವೃದ್ಧಿಯ ಯೋಜನೆಯೂ ಸೇರಿದೆ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ,ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಿರಿಮಲ್ಲಿಗೆ ವಸತಿ ಸಂಘದ ಜಯಕಮಲ್ ಮತ್ತು ಮಲ್ಲಿಗೆ ನಗರ ಬಡಾವಣೆಗಳ ಪಾರ್ಕ್
ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತಕ್ಕೆ ಹೋಗಿದೆ ಎಂದು ಹೇಳಿದರು.
ಆದಷ್ಟು ಶೀಘ್ರ ಕೆರೆ ಮತ್ತು ಪಾರ್ಕ್ ಕಾಮಗಾರಿ ಆರಂಭಿಸಿ, ಈ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಯಿಂದ ಸುತ್ತಲ ಹತ್ತು ಬಡಾವಣೆಯಲ್ಲಿ ವಾಸಿಸುವ ಸಾರ್ವಜನಿಕರಿಗೆ ವಿನೋದ ವಿಹಾರ ತಾಣವಾಗಿ ಕಂಗೊಳಿಸುವಲ್ಲಿ ಸೂಡಾ ಕೊಡುಗೆಯಾಗಿ ಇಲ್ಲಿ ವಸತಯಿರುವ ಸಮುದಾಯಕ್ಕೆ ನೀಡಲಿ, ಸುಂದರೇಶ್ ಅವರ ಅಧಿಕಾರಾವಧಿಯಲ್ಲೇ ಈ ಜನೋಪಯೋಗಿ ಕಾರ್ಯ ಪೂರ್ಣವಾಗುವಂತಾಗಲಿ ಎಂದು ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷ ಡಾ.ಸುಧೀಂದ್ರ ಹಾರೈಸಿ ಮಾತನಾಡಿದರು.
H.S. Sundaresh ಸಿರಿಮಲ್ಲಿಗೆ ವಸತಿ ಸಂಘದ ಖಜಾಂಚಿ ಮಹೇಶ್ ಯಲಿಗಾರ್, ಹಿರಿಯ ಸಲಹೆಗಾರರುಗಳಾದ ಡಿ.ಎನ್.ಶ್ರೀಧರ ರಾವ್
ನಾಡಿಗ್ ಮತ್ತು ಶಿವಾಜಿರಾವ್, ಸೂಡಾ ಇಂಜಿನಿಯರ್ ಗಂಗಾಧರ ಸ್ವಾಮಿ ಮುಂತಾದ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
Kote Marikamba Devi ಶಿವಮೊಗ್ಗ ಮಾರಿಕಾಂಬ ಜಾತ್ರೆ: ಹಿನ್ನೆಲೆ ಮತ್ತು ಆಚರಣೆ ಹೇಗೆ?
Kote Marikamba Devi ಕೋಟೆ ಮಾರಿಕಾಂಬಾ ಜಾತ್ರೆಗೆ ಚಾಲನೆ ದೊರೆತಿದ್ದು, ಸಾರಾ ಹಾಕುವ ಮೂಲಕ ಧಾರ್ಮಿಕ ವಿಧಿವಿಧಾನ ಆರಂಭಗೊಂಡಿವೆ.
ಪ್ರಸಿದ್ಧ ಶಿವಮೊಗ್ಗ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು
ಫೆಬ್ರವರಿ 24ರಿಂದ 28ರವರೆಗೆ ಅತ್ಯಂತ ಸಡಗರದಿಂದ ನಡೆಯಲಿದೆ.
ಜಾತ್ರೆಯ ಹಿನ್ನೆಲೆ ಸಾರಾ ಹಾಕುವ ಅಥವಾ ಅಂಕೆ ಹಾಕುವ ಕಾರ್ಯಕ್ರಮವು ನಡೆಯಿತು.
ಸಮಿತಿಯ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿದ್ದು,
ಆಟೋ ರಿಕ್ಷಾಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಪ್ರಚಾರ ಆರಂಭಗೊಂಡಿವೆ.
ಸಾರಾ ಹಾಕುವುದು ಎಂದರೆ ಅದು ದೇವಿಯ ಹೆಸರಿನಲ್ಲಿ ಇಡೀ ನಗರಕ್ಕೆ ವಿಧಿಸಲಾಗುವ ಒಂದು ಪವಿತ್ರ ಆಜ್ಞೆಯಾಗಿದೆ.
ಜಾತ್ರೆಯ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಮತ್ತು ಊರಿನ ಜನತೆಗೆ ಯಾವುದೇ ಸಂಕಷ್ಟಗಳು ಬರದಂತೆ ತಡೆಯಲು ಈ ಗಡಿ ನಿರ್ಣಯದ ಪದ್ಧತಿ.
ಕೆಳದಿ ಅರಸರ ಕಾಲದಿಂದಲೂ ನಡೆದುಬಂದಿರುವ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ.
Kote Marikamba Devi ಸಾರಾ ಹಾಕಿದ ನಂತರ ಗ್ರಾಮಸ್ಥರು ಊರು ಬಿಟ್ಟು ಹೋಗದಂತೆ ಮತ್ತು ಹೊರಗಿನವರು ಅಶುದ್ಧತೆಯಿಂದ ಬರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
DC Shivamogga ಫೆ.28 ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ: ಸಕಲ ಸಿದ್ಧತೆ ಮಾಡಿಕೊಳ್ಳಿ , ಅಧಿಕಾರಿಗಳಿಗೆ ಸೂಚನೆ- ಪ್ರಭುಲಿಂಗ ಕವಳಿಕಟ್ಟಿ
DC Shivamogga ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದರು.
ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಮತ್ತು ತಂಡಕ್ಕೆ ಸಲಹೆ-ಸೂಚನೆಗಳನ್ನು ನೀಡಲು ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯ ನಂತರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆಸಿದ ದ್ವಿತೀಯ ಪಿಯುಸಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 19,009 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರೆಗ್ಯೂಲರ್ ವಿದ್ಯಾರ್ಥಿಗಳು 17,755, ರಿಪೀಟರ್ ವಿದ್ಯಾರ್ಥಿಗಳು 871, ಖಾಸಗಿ- 380 ಮತ್ತು ಇಂಪ್ರೂವ್‌ಮೆAಟ್ -03 ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರಗಳು :- ಶಿವಮೊಗ್ಗ-17, ಭದ್ರಾವತಿ -06, ತೀರ್ಥಹಳ್ಳಿ- 03, ಹೊಸನಗರ -03 ಸಾಗರ -05, ಶಿಕಾರಿಪುರ-05, ಸೊರಬ-02 ಒಟ್ಟು 41 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆ ಪತ್ರಿಕೆ ವಿತರಕ ಮಾರ್ಗಗಳು -12 ಇವೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿ ಸದಸ್ಯ ಸಮಿತಿಯನ್ನು ನೇಮಿಸಿ ಆದೇಶಿಸಿದ್ದು, ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ.
ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ತ್ರಿ ಸದಸ್ಯ ಸಮಿತಿ ವಾಹನಕ್ಕೆ ಪೋಲಿಸ್ ಸಿಬ್ಬಂದಿ ನೇಮಿಸಲು ಹಾಗೂ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ನೀಡುವ ಬಗ್ಗೆ ಪೋಲಿಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಣಿಕೆ ಮಾಡುವ ವಾಹನಕ್ಕೆ ಜಿ.ಪಿ. ಎಸ್ .ಅಳವಡಿಸಿ ಮಾನಿಟರ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಠೇವಣೀಕರಿಸಿರುವ ಮತ್ತು ವಿತರಿಸುವ ಬಗ್ಗೆ 24*7 ಸಿ.ಸಿ.ಟಿ.ವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಳವಡಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇದ್ದು ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ನವರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ ತರಬೇತಿ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತಮ್ಮ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇಲಾಖೆಯಿಂದ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಜಾಗೃತದಳದ ಸಿಬ್ಬಂದಿಯನ್ನು ನೇಮಿಸಲಾಗುವುದು.
ವೆಬ್ ಕ್ಯಾಸ್ಟಿಂಗ್ : ವೆಬ್ ಕ್ಯಾಸ್ಟಿಂಗ್‌ಗಾಗಿ ಈಗಾಗಲೇ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ವೇಳೆಯಲ್ಲಿ ವೆಬ್ ಕ್ಯಾಸ್ಟಿಂಗ್‌ಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಆದ್ದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ನವರು ಕ್ರಮ ವಹಿಸಬೇಕು ಎಂದು ತಿಳಿಸಿದರು.
DC Shivamogga ದೂರದ ಊರುಗಳಿಂದ ಬರುವ, ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು. ಬಿಇಓ ಗಳು ಅಂತಹ ಊರುಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ : ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓ ಮತ್ತು ತಂಡದೊAದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಪಿಯುಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆಯುವಂತೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು. ಯಾವುದೇ ಗೊಂದಲ ಮತ್ತು ಭಯಕ್ಕೀಡಾಗದಂತೆ ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಪರೀಕ್ಷೆ ಕುರಿತು ಯಾವುದೇ ರೀತಿಯ ವದಂತಿಗಳು, ಸೋಷಿಯಲ್ ಮೀಡಿಯಾದಲ್ಲಿನ ನಕಲಿ ಸುದ್ದಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸಿಸಿ ಟಿವಿ, ವೆಬ್‌ಕಾಸ್ಟಿಂಗ್ ಮತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
