Monday, August 10, 2026
Monday, August 10, 2026
Home Blog Page 189

ಮಲೆನಾಡ ಕೋಗಿಲೆ ರಾಘಣ್ಣನವರಿಗೆ ಕರ್ನಾಟಕ ಸಂಘದಿಂದ ಗೌರವ ಸದಸ್ಯತ್ವ ಪ್ರದಾನ

0

ವಿಶೇಷ ಲೇಖನ:
ವಿನಯ್, ಶಿವಮೊಗ್ಗ

ಹೊಸನಗರ ತಾಲ್ಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ರಾಘಣ್ಣನವರಿಗೆ ಕರ್ನಾಟಕ ಸಂಘದ ಗೌರವ ಸದಸ್ಯತ್ವ ನೀಡಿ ಗೌರವಿಲಾಯಿತು. ಖ್ಯಾತ ವಿದ್ವಾಂಸರಾದ ಡಾ. ಶಾಂತರಾಮ ಪ್ರಭು ರಾಘಣ್ಣನವರಿಗೆ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಶಂಕರನಾರಾಯಣ ಶಾಸ್ತಿçಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿಗಳಾದ ವಿನಯ್ ಶಿವಮೊಗ್ಗ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಾಗಣ್ಣನವರ ಸ್ವರ ಸಂಯೋಜನೆಯ ಭಾವಗೀತೆಗಳನ್ನು ಶ್ರೀಮತಿ ಮಾನಸ ಶಿವರಾಮಕೃಷ್ಣ, ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಅಂಬಿಕಾ ದೇವರಾಜ್ ಮುಂತಾದ ಕಲಾವಿದರು ಹಾಡಿದರು.

“ಮೇಲೆ ನೀಲಿ ಆಗಸ ……. ಕೆಳಗೆ ತಾಯಿ ಭೂಮಿ….. ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ”?!
ನಮ್ಮ ರಾಘಣ್ಣ ಹಾರ್ಮೋನಿಯಂ ಹಿಡಿದು ಕಣ್ಮುಚ್ಚಿ ಮೇಲಿನ ಸಾಲುಗಳನ್ನು ಜೀವ ತುಂಬಿ ಹಾಡುತ್ತಿದ್ದರೆ ಅದು ನಿಜಕ್ಕೂ ಹಂಗಿರದ ಆನಂದದ ಪ್ರಪಂಚ. ರಾಘಣ್ಣ ಅಸಲಿಗೆ ಈ ಹಂಗಿನ ಪ್ರಪಂಚದಲ್ಲಿ ಹಂಗಿಲ್ಲದೆ ಬದುಕಿದ ಕಲಾವಿದ . ಇಂದಿನದು ಇಂದಿಗೆ , ನಾಳೆ ನೋಡಿದರಾಯಿತು ಎಂಬ ನಿಶ್ಚಿಂತೆಯ ನೆರಳಿನಲ್ಲೇ ಬದುಕು ಕಟ್ಟಿಕೊಂಡ ಮುಗ್ಧ ಜೀವ. ಯವತ್ತೋ, ಎಲ್ಲೋ ಪ್ರೇರಣೆ ಪಡೆದು ಬರೆದ ಯಾವುದೋ ಕವಿಯ ಸಾಲುಗಳನ್ನು ಕೇಳುಗರೆದೆಯಲ್ಲಿ ಬಿತ್ತಿ ಅದು ಅವರದೇ ಭಾವವೇನೋ ಎಂಬಂತೆ ತಮ್ಮ ಹಾಡಿನಿಂದ ಕಟ್ಟಿಕೊಡುವ ಹಾಡುಗಾರ ಸಾಮಾನ್ಯದ ಕಲಾವಿದನಲ್ಲ ….. ರಾಘಣ್ಣ, ಪು. ತಿ. ನ ಸಾಲುಗಳನ್ನು ಹಾಡುತ್ತಿದ್ದರೆ ಗೋಕುಲದ ದರ್ಶನವಾಗುತ್ತದೆ. ಕುವೆಂಪು ಸಾಲುಗಳನ್ನು ಹಾಡುತ್ತಿದ್ದರೆ , ಮಲೆನಾಡ ಪ್ರಕೃತಿಯ ರಮ್ಯತೆ ಕಣ್ಣ ಮುಂದೆ ಸುಳಿಯುತ್ತದೆ. ಇದು ರಾಘಣ್ಣನಂತಹ ಬಲು ಅಪರೂಪದ ಕಲಾವಿದನ ಸತ್ವಶುದ್ಧಿ ! ಹಾಡಿನ ಅನಂದ ಹಾಡು ಹಾಡುವ ಕಲಾವಿದನದೋ? ಕೇಳುವ ಪ್ರೇಕ್ಷಕನದೋ?! ಇದೊಂದು ವಿಪರೀತ ಪ್ರಶ್ನೆಯೇ! ಅದೆಷ್ಚೋ ಬಾರಿ ಹಾಡುವವರು ಹಾಡುತ್ತಾರೆ ಕೇಳುವವರು ಕೇಳುವಂತೆ ಇರುತ್ತಾರೆ.. ರಾಘಣ್ಣ ಹಾಡಿದರೆ ಅದೊಂದು ಭಾವಾನುಭೂತಿ! ಇಲ್ಲಿ ಹಾಡುವವ-ಕೇಳುವವ ಇಬ್ಬರೂ ಕಳೆದು ಹೋಗುವಷ್ಚು ಭಾವ ಸಂಮೃದ್ಧಿ !! ಕವಿ ಓ.S. ಲಕ್ಷ್ಮೀನಾರಾಯಣ ಭಟ್ಟರ ಸಾಲಿನಂತೆ…“ನಾನು ಹಾಡುವುದು ನನಗೆಂದು.. ಎದೆ ಭಾರ ಇಳಿಯಲೆಂದು. ಎಲ್ಲ ಮರೆತು ಈ ಹಾಡ ಕೇಳುತಿಹ ನಿಮ್ಮ ಪ್ರೀತಿಗೆಂದು” ಇದು ಪರಸ್ಪರ ಪ್ರೀತಿಯ ಅವಿನಾಭಾವ. ರಾಘಣ್ಣ ದುಡ್ಡಿಗಾಗಿ ಹಾಡಿದ ಕಲಾವಿದನಲ್ಲ. ಹಾಗಾಗಿಯೇ ಅವರು ಮಲೆನಾಡ ಹಕ್ಕಿಯಾಗಿಯೇ ಉಳಿದವರು. ಮನಸ್ಸು ಮಾಡಿದ್ದರೆ ರಾಜಧಾನಿ ಸೇರಿ ದುಡ್ಡು ಮಾಡಬಹುದಿತ್ತು ಆದರೆ ಈ ಹಾಡುವ ಜೋಗಿಗೆ ಅದಾವುದರ ಪರಿವಿರಲಿಲ್ಲ. ಲಕ್ಷ್ಮೀ ಕಾಲು ಮುರಿದುಕೊಂಡು ಮನೆಯಲ್ಲೇ ಇರಲಿಲ್ಲವಾದರೂ ನಂಬಿದ ಗಾನ ಸರಸ್ವತಿ ರಾಘಣ್ಣನ ಕೈ ಬಿಡಲೇ ಇಲ್ಲ. ಮಲೆನಾಡಿಗರ ಭಾವಶುದ್ಧಿಯಲ್ಲಿ ರಾಘಣ್ಣನ ಪಾತ್ರ ದೊಡ್ಡದು. ನಮ್ಮ ನಡುವೆ ಭಾವಗೀತೆಗಳನ್ನು ಆನಂದಿಸುವ-ಆಸ್ವಾದಿಸುವ ದೊಡ್ಡ ವರ್ಗವನ್ನು ಹುಟ್ಟುಹಾಕಿದ ಹಿರಿಮೆ ರಾಘಣ್ಣನದು. ತನ್ನ ಅದ್ಭುತ ರಾಗ ಸಂಯೋಜನೆಗಳ ಮೂಲಕ ಅದೆಷ್ಟೋ ಕವಿ ಕಾವ್ಯಗಳು ಜನರಿಂದ ಜನರಿಗೆ ತಲುಪಿಸಿ ತಾನು ಏನೂ ಮಾಡಿಲ್ಲವೆಂಬತೆ ಸುಮ್ಮನಿರುವ ರಾಘಣ್ಣ ನಿಜವಾಗಿಯೂ “ ಭಾವ ತುಂಬಿಸಿದ ಮೌನ ಸಾಧಕ” ಈ ಮಾತಿನಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ರಾಘಣ್ಣನಿಗೆ ಈಗ ಸುಮಾರು ೯೦ರ ಆಸುಪಾಸು. ಒಂದು ಹಾಡು ಹಾಡಿ ಎಂದು ಒಬ್ಬನೇ ಒಬ್ಬ ಅಭಿಮಾನಿ ಕೋರಿಕೊಂಡರೂ ತನ್ಮಯತೆಯಿಂದ ಹಾಡುವ ನಿರಾಡಂಬರ ವ್ಯಕ್ತಿ. 90 ವರ್ಷ ಸಂದರೂ ಇನ್ನೂ ಕೇಳುಗರ ಎದೆಯನ್ನಾಳುತ್ತಿರುವ ಗಾನಧಣಿ ! ರಾಘಣ್ಣನಂತಹ ನಿಗರ್ವಿ ಕಲಾವಿದ ಸಮಾಜದ ಆಸ್ತಿ …ಅದೆಷ್ಟೋ ಅನಂದದ ಕ್ಷಣಗಳನ್ನು ಹಿಂತಿರುಗಿಸಲಾರದ ಸಾಲದಂತೆ ಕೊಟ್ಟ ರಾಘಣ್ಣನಂತಹ ಕಲಾವಿದನಿಗೆ ಶಿವಮೊಗ್ಗೆಯ ಪ್ರತಿಷ್ಠಿತ ಕರ್ನಾಟಕ ಸಂಘದ ಗೌರವ ಸದಸ್ಯತ್ವವನ್ನು ನೀಡುತ್ತಿರುವುದು ಅತ್ಯಂತ ಸಂತೋಷ ಹಾಗೂ ಸಮಾಧಾನದ ವಿಷಯ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ & ಭದ್ರಾವತಿಯಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ

0

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ನಗರ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಸಿಸಿ, ಭದ್ರಾವತಿ ಸಿಎಂಸಿ, ಸಾಗರ ಸಿಎಂಸಿ ಮತ್ತು ಸೊರಬ ಟಿಎಂಸಿ ಗಳಲ್ಲಿ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿ ಇರುವ ಅಭ್ಯರ್ಥಿಗಳು https://www.karnatakaone.gov.in / public/Franchisee Terms ರ ಮೂಲಕ ಮಾ. 02 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Brahmakumari Ishwari University ಧ್ಯಾನವು ಮನಸ್ಸಿನ ಏಕಾಗ್ರತೆ ಹೆಚ್ಚಿಸುತ್ತದೆ- ಬ್ರಹ್ಮಕುಮಾರಿ ಸ್ವಾತಿ

0

Brahmakumari Ishwari University ಪ್ರತಿ ದಿನ ಧ್ಯಾನ ಅಭ್ಯಾಸ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ನೆಮ್ಮದಿ ಪಡೆಯಲು, ಆಂತರಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು.

ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಒತ್ತಡಮುಕ್ತ ಜೀವನಕ್ಕಾಗಿ ಶಿವಯೋಗ ಶಿಬಿರದಲ್ಲಿ ಮಾತನಾಡಿ, ಧ್ಯಾನ ಎಂದರೆ ಮನಸ್ಸಿನ ಏಕಾಗ್ರತೆ, ಶಾಂತತೆ ಆಗಿದ್ದು, ಧ್ಯಾನವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆಲೋಚನೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ತಿಳಿಸಿದರು.

ಧ್ಯಾನವು ಒತ್ತಡ, ಆತಂಕ, ಖಿನ್ನತೆ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಧ್ಯಾನವು ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿ ನೀಡುತ್ತದೆ. ಧನಾತ್ಮಕ ಆಲೋಚನೆ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಕಿ ಬೇಬಿ ಷಡಕ್ಷರಿ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆಲೋಚನೆಗಳ ಮೊತ್ತವೇ ವ್ಯಕ್ತಿತ್ವ. ಈಗಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಅನಾರೋಗ್ಯ ಆಗಿಸುತ್ತವೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.

ಜೆಎನ್‌ಎನ್‌ಸಿಇ ಪ್ರಾಧ್ಯಾಪಕ ನಾಗೇಶ್ ಮಾತನಾಡಿ, ಒತ್ತಡಯುತ ಜೀವನಶೈಲಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಧನಾತ್ಮಕ ಆಲೋಚನೆಗಳು ಅತ್ಯಂತ ಮುಖ್ಯ. ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಎಂದು ಹೇಳಿದರು.

Brahmakumari Ishwari University ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒತ್ತಡಮುಕ್ತ ಜೀವನ ನಡೆಸಲು ಧ್ಯಾನ ಶಿಬಿರಗಳು ಅತ್ಯಂತ ಸಹಕಾರಿಯಾಗುತ್ತವೆ. ಪ್ರತಿ ದಿನ ಸ್ವಲ್ಪ ಸಮಯ ಯೋಗ, ಧ್ಯಾನ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಬಿಂದು ವಿಜಯಕುಮಾರ್, ರುದ್ರಪ್ಪ ಚಿಲೂರ್, ಆರ್ ಮನೋಹರ್, ನಾಗೇಶ್, ಶಿಕ್ಷಕ ಶಿವಣ್ಣಗೌಡ, ಬ್ಯಾಂಕ್ ಮ್ಯಾನೇಜರ್ ಸಿದ್ದು, ವಕೀಲ ವರಲಕ್ಷ್ಮೀ, 45ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಈಶ್ವರೀಯ ವಿಶ್ವ ವಿದ್ಯಾಲಯದ ಸದಸ್ಯರು ಉಪಸ್ಥಿತರಿದ್ದರು.

Shivamogga Rangayana “ಸ್ವಾತಂತ್ರ್ಯದ ಓಟ” ನಾಟಕ ಕುರಿತು ಮಾತಾಡಿ, ಉದ್ಘಾಟಿಸಿದ ಅಂಕಣಕಾರ ಬಿ.ಚಂದ್ರೇಗೌಡ

0

Shivamogga Rangayana ಶಿವಮೊಗ್ಗ ರಂಗಾಯಣವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮೊಹಮ್ಮದ್ ಕುಂಞ ಅವರ ‘ಸ್ವಾತಂತ್ರ‍್ಯದ ಓಟ’ ಕಾದಂಬರಿಯನ್ನು ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶನ ನೀಡಲು ಫೆ.17 ರಂದು ಬೆಳಿಗ್ಗೆ 11.00 ಲಂಕೇಶ್ ಪತ್ರಿಕೆಯ ವರದಿಗಾರರು ಮತ್ತು ಖ್ಯಾತ ಅಂಕಣಕಾರ ಬಿ.ಚಂದ್ರೇಗೌಡ ಇವರು ಸ್ವಾತಂತ್ರ‍್ಯದ ಓಟ ಕಾದಂಬರಿಯ ಕುರಿತು ಮಾತಾನಾಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ‘ಸ್ವಾತಂತ್ರ‍್ಯದ ಓಟ’ ನಾಟಕ ನಿರ್ದೇಶಕಾರದ ನಟರಾಜ್ ಹೊನ್ನವಳ್ಳಿ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ ಸಾಗರ, ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ., ಕಲಾವಿದರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಸೀಗೆಹಟ್ಟಿಯಿಂದ ಪ್ರಕಾಶ್ ಎಂಬ ವ್ಯಕ್ತಿ ನಾಪತ್ತೆ

0

ಸೀಗೆಹಟ್ಟಿ ಗಣಪತಿ ದೇವಸ್ಥಾನದ ಎದುರು ಸ್ನೇಹ ಹೇರ್ ಡ್ರೆಸಸ್ ಶಾಪ್ ಮಾಲೀಕ ಪ್ರಕಾಶ್ ಜಿ.ಬಿ. ಎಂಬ 53 ವರ್ಷದ ವ್ಯಕ್ತಿ ಫೆ.11 ರಂದು ಅಂಗಡಿಯಿಂದ ಸಾಲದ ಸುಳಿಯಲ್ಲಿ ಸಿಲುಕಿ ಬೇಸರಗೊಂದು ಮನೆಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿಬಣ್ಣ, ದುಂಡುಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈತನ ಬಗ್ಗೆ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9480803345/ 9663919643 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Bharat Scouts and Guides ಪಿ.ಜಿ.ಆರ್.ಸಿಂಧ್ಯಾ ಅವರಿಗೆ ಗುಲಬರ್ಗಾ ವಿವಿಯ ಗೌರವ ಡಾಕ್ಟರೇಟ್

0

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರಿಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ.

ಫೆಬ್ರವರಿ 24ರಂದು ಬೆಳಗ್ಗೆ 10.30ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡುವರು.

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರಿಗೆ ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ. ಪ್ರಧಾನ ಆಯುಕ್ತ ಶಕುಂತಲಾ ಚಂದ್ರಶೇಖರ್, ಆಯುಕ್ತ ಎಸ್.ಜಿ.ಆನಂದ್, ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ವೀರೇಶಪ್ಪ, ರಾಜೇಶ್ ಅವಲಕ್ಕಿ, ಮಲ್ಲಿಕಾರ್ಜುನ್, ಚೂಡಾಮಣಿ ಈ ಪವಾರ್, ಲಕ್ಷ್ಮೀ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ವೇಣುಗೋಪಾಲ್, ಸರಸ್ವತಿ ನಾಗರಾಜ್ ಹಾಗೂ ಮಲೆನಾಡು ಓಪನ್ ಗ್ರೂಪ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ ಪದಾಧಿಕಾರಿಗಳು ಶುಭಾಶಯ ತಿಳಿಸಿದ್ದಾರೆ

Nijasharan Ambigara Chowdarya Development Corporation ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಸೌಲಭ್ಯ ಪ್ರಕಟಣೆ

0

Nijasharan Ambigara Chowdarya Development Corporation ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಜನರಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ಪೋರ್ಟೆಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಅಲೆಮಾರಿ/ಅರೆಅಲೆಮಾರಿ ಸಮುದಾಯ,, ಒಕ್ಕಲಿಗೆ, ಲಿಂಗಾಯತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ ಮತ್ತು ಇದರ ಉಪಜಾತಿ ಸಮುದಾಯಗಳನ್ನು ಹೊರತುಪಡಿಸಿ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯಕ್ಕೆ ಮಾತ್ರ ಸೇರಿದವರಾಗಿರಬೇಕು.
ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಕ್ ಪಾಸ್ ಪುಸ್ತಕದಲ್ಲಿಯೂ ಇರುವಂತೆ ಹೊಂದಾಣಿಕೆಯಾಗಬೇಕು. ಕುಟುಂಬದ ವಾರ್ಷಿಕ ವರಮಾನ 3.00 ಲಕ್ಷಗಳ ಒಳಗಿರಬೇಕು ಮತ್ತು ವಯಸ್ಸು 21 ರಿಂದ 45 ವರ್ಷ ಒಳಗಿನವರಾಗಿಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರು ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು. ಸರ್ಕಾರದ ವಿವೇಚನಾ ಕೋಟಾ/ನಿಗಮದ ಅಧ್ಯಕ್ಷರು/ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಲ್ಲಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್‌ಲೈನ್‌ನಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು.
Nijasharan Ambigara Chowdarya Development Corporation ಆಸಕ್ತರು ಸೇವಾಸಿಂಧು ಪೋರ್ಟಲ್ http://sevasindhukarnataka.gov.in ನ ಗ್ರಾಮ್ ಒನ್, ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಆನ್‌ಲೈನ್ ಮೂಲಕ ಮಾರ್ಚ್ 8 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದರೆ.
ಹೆಚ್ಚಿನ ಮಾಹಿತಿಗೆ ನಿಗಮದ ಜಾಲತಾಣ https://ambigaradevelopment.karnataka.gov.in ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಾಲರಾಜ್ ಅರಸ್ ರಸ್ಥೆ, ಕೆ.ಇ.ಬಿ. ಸರ್ಕಲ್ ಹತ್ತಿರ,ಶಿವಮೊಗ್ಗ. ದೂ,ಸಂ: 08182-229634 ನ್ನು ಸಂಪರ್ಕಿಸುವುದು

MESCOM ಶಿವಮೊಗ್ಗ ಅನುಪಿನ ಕಟ್ಟೆ ಸುತ್ತಮುತ್ತ ಫೆ.19 ರಂದು ವಿದ್ಯುತ್ ನಿಲುಗಡೆ

0

MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ಗಾಜನೂರು 11 ಕೆವಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿದ್ದು, ಅನುಪಿನಕಟ್ಟೆ, ಪುರದಾಳು, ಅಗಸವಳ್ಳಿ, ಕಲ್ಲೂರು, ಗೋವಿಂದರಾಜಪುರ, ಹನುಮಂತಾಪುರ, ಬೆಳ್ಳೂರು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 19 ಮತ್ತು 20 ರಂದು ಬೆಳಗ್ಗೆ 09.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

S.N. Channabasappa ಶಿವಮೊಗ್ಗ ನಗರದ ಒಂದನೇ ವಾರ್ಡಿನ ಜನಸಮಸ್ಯೆ ಬಗ್ಗೆ ಶಾಸಕರಿಂದ ಪರಿಶೀಲನೆ. ಅಧಿಕಾರಿಗಳಿಗೆ ಸೂಚನೆ

0

S.N. Channabasappa ಶಿವಮೊಗ್ಗ ನಗರದ 1ನೇ ವಾರ್ಡ್ ವ್ಯಾಪ್ತಿಯ ಆದರ್ಶ ಕಾಲೋನಿಯ ನಿವಾಸಿಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಂದು ಬೆಳಿಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡದೊಂದಿಗೆ ಬಡಾವಣೆಯ ನಿವಾಸಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಬಡಾವಣೆಯಲ್ಲಿ ವಿದ್ಯುತ್ ಏರುಪೇರಿನಿಂದಾಗಿ ಗೃಹೋಪಯೋಗಿ ವಸ್ತುಗಳು ಹಾನಿಯಾಗುತ್ತಿರುವುದು ಬಗ್ಗೆ ಮಾಹಿತಿ ಪಡೆದು ಇಂತಹ ತಾಂತ್ರಿಕ ದೋಷಗಳನ್ನು ಅಧಿಕಾರಿಗಳು ತಕ್ಷಣವೇ ಸರಿಪಡಿಸುವಂತೆ ಸೂಚಿಸಿದರು.

ಜೊತೆಗೆ, ಬಡಾವಣೆಯ ಪಾರ್ಕ್ ಅಭಿವೃದ್ಧಿಪಡಿಸುವುದು, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಬೀದಿ ದೀಪಗಳ ದುರಸ್ತಿ ಹಾಗೂ ಪ್ರಮುಖ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸುವ ಕಾರ್ಯಗಳನ್ನು ಕೂಡಲೇ ಆರಂಭಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

S.N. Channabasappa ಈ ಸಂದರ್ಭದಲ್ಲಿ ಪಾಲಿಕೆಯ ಇಂಜಿನಿಯರ್‌ಗಳು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು

ಭರಮಸಾಗರದಲ್ಲಿ ಭಕ್ತಿಪೂರ್ಣ ಶಿವರಾತ್ರಿ ಆಚರಣೆ

0

ಮಹಾಶಿವರಾತ್ರಿ ಅಂಗವಾಗಿ ಭರಮಸಾಗರದಲ್ಲಿ ಸ್ಥಾಪಿತವಾಗಿರುವ ಈಶ್ವರ ಸ್ವರೂಪದ ಶ್ರೀ ಸಿಬಾರ ಮೈಲಾರಲಿಂಗ ಸ್ವಾಮಿಗೆ ಭಕ್ತಿಭಾವಪೂರ್ಣ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.

ಪ್ರತಿವರ್ಷದಂತೆ ಈ ವರ್ಷವೂ ನಾಡಿಗೇರ್ ಮನೆತನದವರಿಂದ ಭಕ್ತಿಪೂರ್ವಕವಾಗಿ ಸಾಂಗವಾಗಿ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.

ಭರಮಸಾಗರದ ಐತಿಹಾಸಿಕ ಕೆರೆಯನ್ನು ಬಿಚ್ಚುಗತ್ತಿ ಭರಮಣ್ಣ ನಾಯಕರು ನಿರ್ಮಿಸಿದ್ದರೆಂದು ಪ್ರಸಿದ್ಧಿ ಹೊಂದಿದ್ದು, ಅದರ ತಟದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ 2006ರಲ್ಲಿ ಈ ಪವಿತ್ರ ಸಿಬಾರ ಕಟ್ಟೆ ಪ್ರತಿಷ್ಠಾಪಿಸಲಾಯಿತು. ಭರಮಸಾಗರದ ದಿವಂಗತ ಶ್ರೀ ಭೀಮರಾವ್ ನಾಡಿಗೇರ್ ಹಾಗೂ ದಿವಂಗತ ಶ್ರೀ ಮಾಲತೇಶರಾವ್ ನಾಡಿಗೇರ್ ಅವರು ಲೋಕಕಲ್ಯಾಣಾರ್ಥವಾಗಿ ಈ ದೇವರ ಪ್ರತಿಷ್ಠಾಪನೆ ನಡೆಸಿದದ್ದು ವಿಶೇಷವಾಗಿದೆ.

ಅಂದಿನಿಂದಲೂ ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯುತ್ತಿವೆ.

ಈ ವರ್ಷದ ಮಹಾಶಿವರಾತ್ರಿ ಸಂದರ್ಭದಲ್ಲಿ ಮುಂಜಾನೆಯಿಂದಲೇ ವೇದಘೋಷಗಳ ನಡುವೆ ಅಭಿಷೇಕ, ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ವಿಶೇಷವಾಗಿ ರುದ್ರಪಠಣದೊಂದಿಗೆ ನಡೆದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.

ಶ್ರೀ ಮಲ್ಲಾರಿರಾವ್, ಶ್ರೀ ನಾಗಭೂಷಣರಾವ್, ಶ್ರೀ ವಿಜಯಕುಮಾರ, ಶ್ರೀ ಚಂದ್ರಶೇಖರ್ ಹಾಗೂ ಶ್ರೀ ಮುರುಳೀಧರ ನಾಡಿಗೇರ್ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದು ಧಾರ್ಮಿಕ ಭಾವನೆಯಲ್ಲಿ ತೊಡಗಿದರು.
ಸಂಜೆಯ ವೇಳೆಗೆ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಶಿವನಾಮಸ್ಮರಣೆ ಹಾಗೂ ಭಜನೆಗಳೊಂದಿಗೆ ಭಕ್ತಿಭಾವದ ವಾತಾವರಣ ನಿರ್ಮಾಣಗೊಂಡಿದ್ದು, ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಭಕ್ತಿಯುತವಾಗಿ ಸಮಾಪ್ತಿಗೊಂಡಿತು.
ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವ ಈ ಕಾರ್ಯಕ್ರಮ ಭರಮಸಾಗರದ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ಮತ್ತೊಮ್ಮೆ ಬೆಳಗಿತು.

ಮುರುಳೀಧರ್ ನಾಡಿಗೇರ್