ಅಧಿಕಾರಿಗಳಲ್ಲಿಯೂ ಕೃಷಿ ಬಗ್ಗೆ ಆಸಕ್ತಿ ರೈತೋಪಯೋಗಿ ಭಾವನೆಯಿರುವುದು ಹೆಮ್ಮೆಯ ವಿಷಯವೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದಿಂದ ಕೃಷಿ ಇಲಾಖೆ,ಕೃಷಿಕ ಸಮಾಜದ ಸಹಯೋಗದಲ್ಲಿ “ಸಾವಯವ ಮತ್ತು ಸಿರಿಧಾನ್ಯ” ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಕೆಎಎಸ್ ಅಧಿಕಾರಿಗಳೆಲ್ಲ ನಮ್ಮ ಮಣ್ಣಿನ ಮಕ್ಕಳೇ.ಅಧಿಕಾರಿಗಳಲ್ಲಿಯೂ ಕೃಷಿ ಅದರಲ್ಲಿಯೂ ಸಿರಿಧಾನ್ಯ ಸಾವಯವ ಬಗ್ಗೆ ಆಸಕ್ತಿ ಬಂದಿರುವುದು ಸಂತಸದ ವಿಚಾರ.ಸಿರಿಧಾನ್ಯದ ಸಿರಿತನ ಹೆಚ್ಚುತ್ತಿದೆ.ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಆಹಾರದ ಸಿದ್ಧ ಔಷಧಿಯಾಗಿದೆ.ಸಾವಯವ ಬಿಟ್ಟು ಹೆಚ್ಚು ರಾಸಾಯನಿಕ ವಸ್ತು ಬಳಕೆಯಿಂದ ರೈತರು ಹೆಚ್ಚು ಆರೋಗ್ಯಕ್ಕೆ ಖರ್ಚು ಮಾಡುವಂತಹ ಸ್ಥಿತಿ ಉದ್ಭವಿಸಿದೆ.ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಸಿಗುತ್ತಿದ್ದು,ಸರ್ಕಾರ ಕೂಡ ಈ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಹುಪಯೋಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು. ಕೃಷಿ ಖುಷಿಯಾಗಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕೆಂದರು.
ಮೇಳದಲ್ಲಿ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿನಿಗಳು ಪ್ರದರ್ಶನಕ್ಕಿಟ್ಟ ಸಾವಯವ ಕೋಕಮ್ ಸೇರಿದಂತೆ ಮತ್ತಿತ್ತರ ಸಿರಿಧಾನ್ಯದ ಖಾದ್ಯಗಳ ಸ್ವಾದಿಸಿ ಪ್ರೋತ್ಸಾಹಿಸಿದರು.
ಕೋವಿಡ್ 19 ಲಾಕ್ ಡೌನ್ ಬಳಿಕ ಕಾಲೇಜುಗಳ ಪುನರಾರಂಭಿಸಲು ರಾಜ್ಯ ಸರ್ಕಾರ ಕೋವಿಡ್ ನ ಮೊದಲನೇ ಡೋಸ್ ಲಸಿಕೆಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಕಡ್ಡಾಯವಾಗಿ ಪಡೆದಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.
ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಬಿ ಕಕ್ಕಿಲಾಯ ಹಾಗೂ ಮತ್ತಿತರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವೈದ್ಯ ಶ್ರೀನಿವಾಸ್ ಮತ್ತು ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಲಸಿಕೆ ನೇತೃತ್ವದ ವಿಭಾಗೀಯ ನ್ಯಾಯಪೀಠ ‘ಈ ವಿಚಾರದಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ವಿಲೇವಾರಿ ಮಾಡಿದೆ.
ರಾಜ್ಯ ಸರ್ಕಾರ ‘ಲಸಿಕೆ ಕಡ್ಡಾಯ ಮಾಡಿ 2010ರ ಜುಲೈ 16ರಂದು ಹೊರಡಿಸಿರುವ ಸುತ್ತೋಲೆ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಹೊಸ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಿರುವಾಗ ಸರ್ಕಾರ ಏನೂ ಮಾಡಿಲ್ಲ ಎಂಬ ಆಕ್ಷೇಪವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಹೇಳಿದೆ.
ಗಣಪತಿ ಪೂಜೆಯೊಂದಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭಗೊಂಡಿತು.
ನಾಟಕೋತ್ಸವದ ಕಾರ್ಯಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿ ಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭಾಧ್ಯಕ್ಷರಾದ ಶ್ರೀ ಭಾಸ್ಕರ್ ರಾವ್ ಮತ್ತು ಅಭ್ಯಾ ಗತ ರೆಲ್ಲರು ಸೇರಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ನಾಟಕೋತ್ಸವದ ಪ್ರಮುಖ ಭಾಗವಾದ ‘ಶ್ರೀ ಗಜಾನನ ಹೆಗಡೆ ಪ್ರಶಸ್ತಿ’ ಪುರಸ್ಕೃತರಾದ ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ ಯವರನ್ನು ಡಾ.ಜಿ.ಕೆ. ಹೆಗಡೆ, ಹರಿಕೆರೆಯವರು ಅಭಿನಂದನಾ ನುಡಿಗೈದರು. ಶ್ರೀ ಕಪ್ಪೆಕೆರೆ ಭಾಗವತರು ಭಾಗವತ ಘರಾಣಿಯನ್ನು ಪ್ರಶಂಶಿಸುತ್ತಾ, ಅವರು ಮೇಳದಲ್ಲಿ ಮಾಡಿದ ವಿಶಿಷ್ಟ ಶೈಲಿಯನ್ನು ಕೊಂಡಾಡಿದರು.
ಭಾಗವತಿಕೆಯಲ್ಲಿ ಪರಿಪೂರ್ಣತೆ ಇರುವ ಇವರು ಚಂಡೆ, ಮದ್ದಳೆ ವಾದನ ಮತ್ತು ನೃತ್ಯ ಶೈಲಿಯಲ್ಲಿ ಇವರ ಪಾಂಡಿತ್ಯವನ್ನು ಕೊಂಡಾಡಿದರು. ‘ಶ್ರೀ ಗಜಾನನ ಹೆಗಡೆ ಪ್ರಶಸ್ತಿ’ ಯನ್ನು ಸಂಭ್ರಮದ ವೇದಿಕೆಯಲ್ಲಿ ಸ್ವೀಕರಿಸಿ ಮಾತನಾಡಿದ ಶ್ರೀ ಸುಬ್ರಾಯ ಭಾಗವತ, ಕಪ್ಪೆಕೆರೆಯವರು ಪರಂಪರಾಗತ ಭಜನೆ ಮಾಡುವುದರಿಂದ ಆರಂಭಗೊಂಡ ನನ್ನ ಕಲಾ ಸೇವೆ ಇಡಗುಂಜಿ ಮೇಳದ ಸಂಪರ್ಕದಿಂದ ಭಾಗವತಿಕೆಯನ್ನು ಬದ್ಧತೆಯಲ್ಲಿ ಸ್ವೀಕರಿಸಿ, ಶಿಸ್ತುಬದ್ಧವಾಗಿ ಅಧ್ಯಯನ ಮಾಡಿ, ಸಮಾಜ ಗುರುತಿಸಿ, ಗಜಾನನ ಹೆಗಡೆ ವೇದಿಕೆಯಲ್ಲಿ ಅವರ ಹೆಸರಿನಲ್ಲಿ ಇರುವ ಪ್ರಶಸ್ತಿ ಸ್ವೀಕರಿಸುವ ಭಾಗ್ಯ ಬಂದದ್ದು ನನ್ನ ಕಲಾಸೇವೆಯ ಪಥದ ಅನನ್ಯತೆಯ ಸಂಕೇತ ಎಂದು ಅಭಿಪ್ರಾಯಪಟ್ಟರು.
ಕಲಾವಿದರು ಸಮಾಜದ ಸ್ವತ್ತಾಗಿದ್ದರೂ, ಪ್ರೇಕ್ಷಕರ ಬದಲಾದ ಭಾವ ತರಂಗಗಳಿಗೆ ಸಮೀಕರಿಸುವ ಕಲಾಭಿನಯ ಪರಂಪರೆಗೆ ತೊಡಕಾಗಿ ಶಾಸ್ತ್ರೀಯತೆ ಬಂಗ ಬರುವ ಸಾಧ್ಯತೆ ಕಾಣುತ್ತಿದೆ ಎಂಬ ಎಚ್ಚರಿಕೆಯ ಅಭಿಪ್ರಾಯಪಟ್ಟರು.
ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟಕೋತ್ಸವ ಸಮ್ಮಾನ ಸಾಹಿತಿಗಳಾದ ಶ್ರೀ ಎಲ್. ಆರ್. ಭಟ್, ಯಕ್ಷಗಾನ ಸಂಶೋಧಕರಾದ ಡಾ. ಪಾದೇಕಲ್ಲು ವಿಷ್ಣುಭಟ್, ಸಾಹಿತಿಗಳಾದ ಶ್ರೀ ಸುಮುಖಾನಂದ ಜಳವಳ್ಳಿ, ಮದ್ದಳೆ ವಾದಕರಾದ ಶ್ರೀ ಮಂಜುನಾಥ ಭಂಡಾರಿ ಅವರಿಗೆ ನೀಡಿ ಗೌರವಿಸಲಾಯಿತು. ಯಕ್ಷಗಾನದ ಸಂಭಾಷಣೆಯು ಸಾಹಿತ್ಯದ ಭಾಗ ಇಂದುಶ್ರೀ ಸುಮುಖಾನಂದ ಜಳವಳ್ಳಿ ಅಭಿಪ್ರಾಯಪಟ್ಟರು.
ಡಾ. ಪಾದೇಕಲ್ಲು ವಿಷ್ಣು ಭಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾ ಯಕ್ಷಗಾನ ಎಂಬ ಕಲೆಯು ಹಲವು ಆಯಾಮಗಳಿಗೆ ಸಂಶೋಧನೆಗೆ ಪೂರಕ ಎಂದರು ಅಭ್ಯಾಗತರಿಗೆ ಉಪಸ್ಥಿತರಿದ್ದ ಪೋಕ್ ಲ್ಯಾಂಡ್ ಅಧ್ಯಕ್ಷರಾದ ಡಾ.ವಿ. ಜಯರಾಜನ್ ಅವರು ಇಡಗುಂಜಿ ಮೇಳ ಕಲಿಯ ಒಂದು ಘರಾಣೆ ಎಂದರು. ಶ್ರೀ ನಾರಾಯಣ ಯಾಜಿಯವರು ಮಾತನಾಡುತ್ತಾ ಇಡಗುಂಜಿ ಮೇಳದ ಕಲಾವಿದರಾದ ಶ್ರೀ ಶ್ರೀರಾಮ ಹೆಗಡೆ, ಶ್ರೀ ಗಜಾನನ ಹೆಗಡೆ, ಶ್ರೀ ಮಹಾಬಲ ಹೆಗಡೆ ಎಲ್ಲರೂ ಕಲಾ ರಂಗಭೂಮಿಯಲ್ಲಿ ತಮ್ಮದೇ ಅನನ್ಯತೆಯನ್ನು ಮೆರೆದು ವಿಶಿಷ್ಟತೆಯನ್ನು ಸಲ್ಲಿಸಿದವರೆಂದರು.
ಶ್ರೀ ಶಿವಾನಂದ ಹೆಗಡೆಯವರು ವಂದಿಸಿದರು.
ರಾಷ್ಟ್ರೀಯ ನಾಟ್ಯೋತ್ಸವ
ಶ್ರೀ. ಬಿ.ಎಮ್.ಭಟ್ , ಶ್ರೀ ಸುಧೀಶ್ ನಾಯಕ್ ಹಾಗೂ ಶ್ರೀ ಎಲ್.ಎಮ್. ಹೆಗಡೆ ಕೆರೆಮನೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಯೋತಿ ಹೆಗಡೆ, ಶಿರಶಿ ಅವರು ರುದ್ರವೀಣೆಯನ್ನು ಪ್ರಸ್ತುತ ಪಡಿಸಿದರು.
ಶ್ರೀ ಗುರುಮೂರ್ತಿ ವೈದ್ಯ ಇವರು ಪಖವಾಜ್ ದಲ್ಲಿ ಸಾಥ್ ನೀಡಿದರು. ಫೋನ್ ಲ್ಯಾಂಡ್ ಕೇರಳ, ಶ್ರೀ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ಒಟ್ಟನ್ ತುಳ್ಳಾಲ್ ಮತ್ತು ‘ ಶೀತಂಕನ್ ತುಳ್ಳಾಲ್’ ನೃತ್ಯ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ನೃತ್ಯ ನಿಕೇತನ, ನಂತರ ಕೊಡವೂರು ತಂಡದವರಿಂದ ‘ನಾರಸಿಂಹ’ (ಒಳಿತಿನ ವಿಜಯದ ಕಥನ) ವೃತ್ತಿ ರೂಪಕವು ಪ್ರದರ್ಶಿಸಲ್ಪಟ್ಟಿತು.
ಅಪೂರ್ವ ಪೂರ್ವ ಸ್ಮರಣಿ ಗೋಷ್ಠಿ: ದಿನಾಂಕ -05-12-2021 ರ ಬೆಳಿಗ್ಗೆ 10:30 ನಡೆದ ಅಪೂರ್ವ ಪೂರ್ವ ಸ್ಮರಣೆ ಗೋಷ್ಠಿಯಲ್ಲಿ ಪ್ರೊ. ಎಂ. ಎ. ಹೆಗಡೆ, ಶಿರಸಿ ಇವರ ಬಗ್ಗೆ ಶ್ರೀ ದಿವಾಕರ ಹೆಗಡೆ, ಸದಸ್ಯರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಅವರು, ಅವರ ವ್ಯಕ್ತಿತ್ವ ಹಾಗೂ ಕಲೆಯ ಬಗೆಗಿನ ಒಲವನ್ನು ಹೇಳುತ್ತಾ ಕಲೆಯಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡೂ ಇರಬೇಕು. ಪರಂಪರೆ ಮತ್ತು ತಂತ್ರ ಎರಡು ಮುಖ್ಯ ಎಂಬ ಅವರ ಆಶಯವನ್ನು ಹೇಳಿದರು. ನಂತರ ವಿದ್ವಾನ್ ಶ್ರೀ ಉಮಾಕಾಂತ ಭಟ್ ಕೆರೆಕೈ, ವಿದ್ವಾಂಸರು, ಅರ್ಥಧಾರಿಗಳು ಮಾತನಾಡುತ್ತಾ ಅವರ ಜೀವನಶೈಲಿ ,ಕಲೆಯ ಬಗೆಗಿನ ಅವರ ಅಗಾಧ ಜ್ಞಾನವನ್ನು ವಿವರಿಸಿದರು.
ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು ಆದ ಡಾ. ಎಂ. ಪ್ರಭಾಕರ ಜೋಶಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಎಂ. ಎ. ಹೆಗಡೆಯವರ ವ್ಯಕ್ತಿತ್ವ ಹಾಗೂ ಭಾಷಾ ಶುದ್ಧತೆಯನ್ನು ನೆನಪು ಮಾಡಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಕೆರೆಮನೆ ಶಿವಾನಂದ ಹೆಗಡೆ ಯವರ ವಂದನಾರ್ಪಣೆ ಮಾಡಿದರು.
ಕನ್ನಡ ಪತ್ರಿಕೆಗಳು, ಮಾಧ್ಯಮಗಳು ಇಂದು ಸಾಹಿತ್ಯಕ್ಕೆ ಆಶ್ರಯ ನೀಡುತ್ತಿವೆ. ಇದು ಉತ್ತಮ ಬೆಳವಣಿಗೆ ಎಂದು ಧರ್ಮಸ್ಥಳ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಖಡ್ಗದಿಂದ ವಿಶ್ವವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಸಾಹಿತ್ಯದಿಂದ ಸಾಧ್ಯ. ಪ್ರತಿಯೊಬ್ಬ ಕನ್ನಡಿಗನೂ ಭಾರತೀಯನಾಗಿ, ಶಾಂತಿ ಬಯಸುವ ವಿಶ್ವಮಾನವರಾಗಿ ಬೆಳೆಯಬೇಕು ಎಂದರು. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ , ಡಾ. ಗಜಾನನ ಶರ್ಮ ಸಾಗರ,ಡಾ.ಪಿ. ಚಂದ್ರಿಕಾ ಚಿತ್ರದುರ್ಗ, ಡಾ.ಕೆ.ಪಿ. ಪುತ್ತರಜು ಬೆಂಗಳೂರು ವಿಶೇಷ ಉಪನ್ಯಾಸ ನೀಡಿದರು. ಎಸ್ ಡಿ ಎಂಇ ಸೊಸೈಟಿ ಉಜಿರೆಯ ಪ್ರಾಜೆಕ್ಟ್ ಡೈರೆಕ್ಟರ್ ಡಿ. ಶ್ರೇಯಸ್ ಕುಮಾರ್ ಉದ್ಘಾಟಕರ ಸನ್ಮಾನ ಪತ್ರ ವಾಚಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಅಧ್ಯಕ್ಷರ ಸನ್ಮಾನಪತ್ರ ವಾಚಿಸಿದರು. ಹೇಮಾವತಿ ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ರಾಜೇಂದ್ರಕುಮಾರ್, ನೀತಾ ರಾಜೇಂದ್ರಕುಮಾರ್, ಶ್ರದ್ಧಾ ಅಮಿತ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಖಾಸಗೀಕರಣವಾಗುತ್ತಿರುವ ಎರ್ ಇಂಡಿಯಾದ ಉಳಿದ ಆಸ್ತಿಗಳು ಮತ್ತು ಉತ್ತರದಾಯಿತ್ವವನ್ನು ನಿರ್ವಹಿಸಲಿರುವ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಕಂಪನಿಗೆ 62 ಸಾವಿರ ಕೋಟಿ ರೂಪಾಯಿಗಳನ್ನು ಸೇರ್ಪಡೆಗೊಳಿಸಲು ಸರಕಾರ ಸಂಸತ್ತಿನ ಅನುಮೋದನೆ ಕೋರಿದೆ. ಹೆಚ್ಚುವರಿ ವೆಚ್ಚದಲ್ಲಿ ರಸಗೊಬ್ಬರ ಸಬ್ಸಿಡಿಗೆ 58,430 ಕೋಟಿ ರೂಪಾಯಿ ರಪ್ತು ಉತ್ತೇಜನಕ್ಕೆ ಪ್ರೋತ್ಸಾಹ ಧನವಾಗಿ 22,039 ಕೋಟಿ ರೂಪಾಯಿ, ನರೇಗಾ ಸೇರಿದಂತೆ ಗ್ರಾಮೀಣಾಭಿವೃದ್ಧಿಗೆ ನೆರವನ್ನು ಒಳಗೊಂಡಿದೆ. ಪ್ರಸ್ತುತ ಸಾಲಿಗೆ ಹೆಚ್ಚುವರಿ 3.73 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಇದು ಸೇರಲಿದೆ.
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆರಾಗಿರುವ ಗೀತಾ ಗೋಪಿನಾಥ್ ಅವರು ಮುಂದಿನ ತಿಂಗಳು ಐಎಂಎಫ್ ನ ಎರಡನೇ ಪ್ರಮುಖ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಮೆರಿಕದ ಪೌರತ್ವ ಪಡೆದಿರುವ ಗೀತಾ ಗೋಪಿನಾಥ್ ಅವರು ಮೂಲತಃ ಮೈಸೂರಿನವರು. ಗೀತಾ ಗೋಪಿನಾಥ್ ಅವರು ಜನವರಿಯಲ್ಲಿ ಹಾರ್ವರ್ಡ್ ವಿವಿಗೆ ಮರು ಸೇರ್ಪಡೆಯಾಗುವ ಇಂಗಿತವನ್ನು ಕಳೆದ ಅಕ್ಟೋಬರ್ ನಲ್ಲಿ ವ್ಯಕ್ತಪಡಿಸಿದ್ದರು. ಆದರೆ ಅಚ್ಚರಿಯ ವಿದ್ಯಮಾನದಲ್ಲಿ ಅವರು ಐಎಂಎಫ್ ನಲ್ಲಿಯೇ ಉನ್ನತ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಗೀತಾ ಗೋಪಿನಾಥ್ ಅವರು ಐಎಂಎಫ್ ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗ ಇದೆ ಹುದ್ದೆಯಲ್ಲಿರುವ ಜೆಫ್ರಿ ಒಕಾಮೊಟೊ ಅವರ ಬದಲಿಗೆ ನಿಯುಕ್ತಿಯಾಗಿದ್ದಾರೆ. ಇದರೊಂದಿಗೆ ಐಎಂಎಫ್ ನ ಮೊದಲ ಎರಡು ಹುದ್ದೆಗಳು ಮಹಿಳೆಯರ ಪಾಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ ವೇಳೆ ರೈತರು ಮೃತಪಟ್ಟಿದ್ದಾರೆ. ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ಬಳಿ ಗುರುತ್ವ ರೈತರ ಮಾಹಿತಿ ಇಲ್ಲದಿದ್ದರೆ ತಾವು ಒದಗಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ರೈತರು ಮೃತಪಟ್ಟಿರುವ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಇದನ್ನು ಖಂಡಿಸಿರುವ ರಾಹುಲ್ ಗಾಂಧಿ ದ್ವಿತೀಯ ರೈತರ ಪೂರ್ಣ ಪಟ್ಟಿ ಹಾಗೂ ಕೆಲವು ದಾಖಲೆಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಬಳಿ ಸದ್ಯ ನೂರು ಸಂತ್ರಸ್ತ ಕುಟುಂಬಸ್ಥರ ಹೆಸರಿದೆ. ಅದು ಕೂಡ ಪಂಜಾಬ್ ಹೊರತಾಗಿ ಇತರೆ ರಾಜ್ಯಗಳಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರ ಮಾಹಿತಿ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿಯೂ ಮೃತ ರೈತರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದೂ ಕೇಂದ್ರ ಸರ್ಕಾರ ಮಾತ್ರ ತನ್ನ ಬಳಿ ಪ್ರತಿಭಟನೆ ವೇಳೆ ರೈತರು ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕೋವಿಡ್ – 90 ಬಿಕ್ಕಟ್ಟಿನ ನಂತರ ದೇಶದಲ್ಲಿ ವ್ಯಾಪಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಡಿಜಿಟಲೀಕರಣ ಕಂಡುಬರುತ್ತಿದೆ. ಕೌಶಲ್ಯವಿರುವ ಟೆಕ್ಕಿಗಳಿಗೆ ಬೇಡಿಕೆ ಉಂಟಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಐಟಿ, ಬಿಪಿಒ ವಲಯದಲ್ಲಿ ದುಡಿಯುವ ವೃತ್ತಿಪರರ ಸಂಖ್ಯೆ 80 ಲಕ್ಷದಿಂದ ಒಂದು ಕೋಟಿಗೆ ಏರಿಕೆಯಾಗಲಿದೆ. ಸ್ಟಾರ್ಟಪ್ ಗಳೂ ಭವಿಷ್ಯದ ದಿನಗಳಲ್ಲಿ ವಿಪುಲ ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ. ಈಗ 45 ಲಕ್ಷ ಮಂದಿ ಐಟಿ, ಬಿಪಿಒ ವಲಯದಲ್ಲಿ ದುಡಿಯುತ್ತಿದ್ದಾರೆ. ಈ 45 ಲಕ್ಷ ಮಟ್ಟಕ್ಕೆ ಬರಲು 14ವರ್ಷ ಬೇಕಾಗಿದೆ. ಆದರೆ ಇನ್ನು ಕೆಲವು ವರ್ಷಗಳಲ್ಲಿ ಅಥವಾ ದಶಕದಲ್ಲಿ ಇದು ಇಮ್ಮಡಿ ಆಗಬಹುದು ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ಅವರು ತಿಳಿಸಿದ್ದಾರೆ. ತಂತ್ರಜ್ಞಾನ ವಲಯದ ಕಂಪನಿಗಳು ಬಿಡಿಭಾಗಗಳ ಉತ್ಪಾದನೆ, ಸಾರಿಗೆ, ಆಹಾರ , ರಿಟೇಲ್ ವಲಯದಲ್ಲಿ ಹೇರಳ ಉದ್ಯೋಗವಕಾಶ ಸೃಷ್ಟಿಸುತ್ತಿವೆ ಎಂದರು. ಯುಪಿಐ ಪೇಮೆಂಟ್ ಪದ್ಧತಿಯನ್ನು 2016ರ ಮೇ ನಲ್ಲಿ ಆರಂಭಿಸಲಾಯಿತು. 2016ರ ಅಕ್ಟೋಬರ್ ವೇಳೆಗೆ 1 ಲಕ್ಷ ವರ್ಗಾವಣೆ ನಡೆದಿತ್ತು. ಕಳೆದ ಅಕ್ಟೋಬರ್ ನಲ್ಲಿ 403 ಕೋಟಿ ವರ್ಗಾವಣೆಗಳು ನಡೆದಿವೆ. ವರ್ಗಾವಣೆಯು ಮೌಲ್ಯ 100 ಶತಕೋಟಿ ಡಾಲರ್ ಗೆ ಜಿಗಿದಿದೆ ಎಂದರು. ಡಿಜಿಟಲೀಕರಣ ಹಾಗೂ ಯುಪಿಐ ಪೇಮೆಂಟ್ ಪದ್ಧತಿಯಿಂದ ಭವಿಷ್ಯದಲ್ಲಿ ಕಿರಾಣಿ ಸ್ಟೋರ್ ಗಳಿಗೂ ಸಾಲ ಸೌಲಭ್ಯ ಸಿಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಓಮಿಕ್ರಾನ್‌ನ ಪ್ರಸರಣವನ್ನು ಮೊಟಕುಗೊಳಿಸಲು ಲಾಕ್‌ಡೌನ್ ಹೇರುವುದನ್ನು ಕೊನೆಯ ಉಪಾಯವನ್ನಾಗಿ ಬಳಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಹೊಸ ಸೂಪರ್ ಮ್ಯುಟೆಂಟ್ ಓಮಿಕ್ರಾನ್ ಕೋವಿಡ್ ರೂಪಾಂತರವು ಸ್ಪೈಕ್ ಪ್ರೋಟೀನ್‌ನಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಈ ವೈರಸ್ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುತ್ತದೆ. ಓಮಿಕ್ರಾನ್ ವೈರಾಣು ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡಿದೆ.ಈಗ ಭಾರತ, ಶ್ರೀಲಂಕಾ, ಯುಎಸ್, ಆಸ್ಟ್ರೇಲಿಯಾ, ಬೆಲ್ಜಿಯಂ, ನೆದರ್ಲಂಡ್ ಮತ್ತು ಯುಕೆ ಸೇರಿದಂತೆ 24 ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ. ಯಾವುದೇ ಹೊಸ ರೂಪಾಂತರದ ಸೋಂಕು ಮತ್ತು ಅಸ್ತಿತ್ವದಲ್ಲಿರುವ ವೈರಸ್ ಮತ್ತು ಅದರ ರೂಪಾಂತರಗಳ ಪ್ರಸರಣವನ್ನು ತ್ವರಿತವಾಗಿ ಪತ್ತೆ ಹಚ್ಚಲು ಸೇವೆಯನ್ನು ಬಲಪಡಿಸುವುದು, ಮಾಪನಾಂಕ ನಿರ್ಣಯಿಸಿದ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಜಾರಿಗೊಳಿಸುವುದು ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದನ್ನು ಗಮನಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ. ಓಮಿಕ್ರಾನ್‌ನ ಪ್ರಸರಣ, ತೀವ್ರತೆ, ಮರು-ಸೋಂಕಿನ ಅಪಾಯ, ಪ್ರತಿ ರಕ್ಷಣಾ ಪಾರು ಸಂಭಾವ್ಯತೆಯನ್ನು ನಿರೀಕ್ಷಿಸಲು ಸಹ ಅಧ್ಯಯನಗಳು ನಡೆಯುತ್ತಿವೆ. ಪ್ರಾಥಮಿಕ ಪುರಾವೆಗಳು ಹೆಚ್ಚಿನ ಪ್ರಸರಣ ಮತ್ತು ಸಂಭಾವ್ಯ ಪ್ರತಿರಕ್ಷಣಾ ತಪ್ಪಿಸಿಕೊಳ್ಳುವಿಕೆಯನ್ನು ಸೂಚಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ