ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಂದಾಗಿ ಸ್ಥಗಿತಗೊಂಡಿದ್ದ ದಸರಾ ವೈಭವ ಈ ವರ್ಷ ಮತ್ತೆ ಮರುಕರಳಿಸಿದ್ದು ಇಂದು ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ಪ್ರಾಣಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ ,ಚಂಡೆ,ಮದ್ದಳೆ ಹಾಗೂ ಮಲ್ಲಕಂಬ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವ ಮೂಲಕ ಯೋಗ ಮಾಡಲಾಯಿತು. ನಂತರ ಯೋಗ ವಿದ್ಯಾರ್ಥಿಗಳಿಂದ ಟ್ರಾಕ್ಟರ್ ನಲ್ಲಿ ಮಲ್ಲಕಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಅತ್ಯಾಚಾರಿಗೆ ಹತ್ತು ವರ್ಷ ಜೈಲು
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಪ್ರಾಪ್ತೆ ಮೇಲೆ 2019ರಲ್ಲಿ ಅತ್ಯಾಚಾರ ಎಸಗಿದ್ದ ಮನ್ಸೂರ್ ಎಂಬ ವ್ಯಕ್ತಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ ಪೊಕ್ಸೋ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಯು ದಂಡದ ಮೊತ್ತ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸು ಆದೇಶ ಸಹ ಮಾಡಿದೆ.
ಮನ್ಸೂರ್ ಎಂಬ ವ್ಯಕ್ತಿ 16 ವರ್ಷದ ಅಪ್ರಾಪ್ತೆಯನ್ನು ಮನೆಗೆ ಟಿವಿ ನೋಡುವ ನೆಪದಲ್ಲಿ ಕರೆದು ಆಕೆ ಮೇಲೆ ಅತ್ಯಾಚಾರ ಎಸಗಿದ್ದ.
ಜೊತೆಗೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಬೀಡಿಯಿಂದ ಆಕೆಯ ಬಲಗೈ ಸುಟ್ಟಿದ್ದ.ಈ ಬಗ್ಗೆ 2019ರಲ್ಲಿ ಶಿವಮೊಗ್ಗ ಮಹಿಳಾಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದ ಪೋಲಿಸ್ ಅಧಿಕಾರಿ ಅಭಯಪ್ರಕಾಶ್ ಸೋಮನಾಳ್ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶ ದಯಾನಂದ್ ಅವರು ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾನೂನು ರೂಪಿಸಲು ಆಗ್ರಹ
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾನೂನು ರೂಪಿಸಲು ಆಗ್ರಹಿಸಿ ಮೂರುವರೆ ಸಾವಿರ ಕಿಲೋಮೀಟರ್ ಸೈಕಲ್ ಜಾಥ -ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ
ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ 3500 ಕಿ.ಮಿಟರ್ ಸೈಕಲ್ ಮುಖಾಂತರ ಸಂಚರಿಸಿ ರಾಜ್ಯದ ಎಲ್ಲಾ 31 ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುತ್ತಿರುವ ಬೆಂಗಳೂರಿನ ಕಿರಣ್ ಎಂಬ ಯುವಕ ಈಗಾಗಲೇ 19 ಜಿಲ್ಲೆಗಳಿಗೆ ಎರಡೂವರೆ ಸಾವಿರ ಕಿಲೋಮೀಟರ್ ಏಕಾಂಗಿ ಸೈಕಲ್ ಜಾಥ ಮೂಲಕ ಹೋಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಇಂದು ಬೆಳಗ್ಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಹೋರಾಟಗಾರ ಯುವಕನನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲೆಗೆ ಆತ್ಮೀಯವಾಗಿ ಬರಮಾಡಿಕೊಂಡು ಹೋರಾಟಕ್ಕೆ ಯುವ ಕಾಂಗ್ರೆಸ್ ನಿಂದ ಸಂಪೂರ್ಣವಾಗಿ ಬೆಂಬಲಿಸಿ ಮಹಾವೀರ ವೃತ್ತದಲ್ಲಿ ಪ್ರತಿಭಟಿಸಿ ನಂತರ ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ನಡಿಗೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ,ಬಿ.ಲೋಕೇಶ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ .ಕುಮರೇಶ್ , ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್ , INTCU ಜಿಲ್ಲಾಧ್ಯಕ್ಷ ಬಿ ಅರ್ಜುನ್ , INTCU ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಹಾಲ್ ಸಿಂಗ್, ಯುವ ಕಾಂಗ್ರೆಸ್ನ ಅರುಣ್ ನವುಲೆ ವೆಂಕಟೇಶ್ ಕಲ್ಲೂರು , ಪವನ್, ರಾಹುಲ್ ಸೀಗೆಹಟ್ಟಿ , ಮಧು, ದರ್ಶನ್ ರಾಹುಲ್ ಮಹಿಳಾ ಕಾಂಗ್ರೆಸ್ ನ ಗೀತಾ ಹಾಗೂ ಕಾರ್ಯಕರ್ತರು ಇತರರು ಇದ್ದರು.
ಚರ್ಮಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಬೇಕು
ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಆರ್.ಸತ್ಯನಾರಾಯಣ್, ತ್ರಿಮತಸ್ಥ ಚರ್ಮಕಾರರು ಹಲವು ಹೆಸರುಗಳಿಂದ ಕರೆಯಲ್ಪಡುತ್ತಿದ್ದು ಸುಮಾರು ೧೯ ಕ್ಕೂ ಹೆಚ್ಚು ಜಾತಿಗಳನ್ನು ಇದು ಒಳಗೊಂಡಿದೆ. ರಾಜ್ಯದಲ್ಲಿ ಸುಮಾರು ೧೮ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಒಂದು ಪ್ರತ್ಯೇಕ ಜಾತಿ ಇದಾಗಿದ್ದು. ಶರಣರ ಅನುಯಾಯಿಗಳಾಗಿದ್ದು ರಾಜಕೀಯ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಚರ್ಮಕಾರರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರು.
ಆಧುನಿಕತೆಗೆ ಸಿಕ್ಕು ಚರ್ಮಕಾರರ ಕುಲಕಸುಬು ಅವಸಾನದತ್ತ ಸಾಗಿದೆ. ಶಿಕ್ಷಣ ಮಟ್ಟವು ಇಲ್ಲದ್ದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ಬಲಿಷ್ಟ ಜಾತಿಗಳ ಸ್ಪರ್ಧೆಯಿಂದ ನಮ್ಮ ಜಾತಿ ಮುಖ್ಯವಾಹಿನಿಗೆ ಬರುವುದು ಕಷ್ಟವಾಗಿದೆ. ಸುಮಾರು ೧೦ ಲಕ್ಷ ಯುವಕರು ಉಧ್ಯೋಗವಿಲ್ಲದೆ ಇದ್ದಾರೆ. ಆದ್ದರಿಂದ ಸರ್ಕಾರ ಚರ್ಮಕಾರರಿಗೆ ಒಂದು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದರು.
ವೇತನವಿಲ್ಲದೆ ಎಂಎಸ್‌ಐಎಲ್ ನೌಕರರ ಪರದಾಟ
ಕೊರೊನಾ, ಪ್ರವಾಹ, ಬರ ಯಾವುದೇ ಇದ್ದರೂ ಸರಕಾರಕ್ಕೆ ಆದಾಯ ತಂದುಕೊಡುವ ಏಕಮಾತ್ರ ಇಲಾಖೆ ಅಬಕಾರಿ. ಕೋವಿಡ್ ಸಂದರ್ಭದಲ್ಲೂ ಆದಾಯ ಗುರಿ ತಲುಪಿದ ಇಲಾಖೆ ತನ್ನ ಅಧೀನದಲ್ಲಿ ಕೆಲಸ ಮಾಡುವ ಎಂಎಸ್‌ಐಎಲ್ ಮಳಿಗೆ ನೌಕರರಿಗೆ ಐದು ತಿಂಗಳಿನಿಂದ ವೇತನ ನೀಡಿಲ್ಲ ಎಂದರೆ ನಂಬಲೇ ಬೇಕು .ಹೌದು
ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳಿವೆ. ಪ್ರತಿ ಮಳಿಗೆಯಲ್ಲೂ ಕನಿಷ್ಠ ಮೂರರಿಂದ ನಾಲ್ಕು ಮಂದಿ ನೌಕರರಿದ್ದಾರೆ. ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಂಬಳವಿಲ್ಲದೇ ದಿನ ದೂಡುವಂತಾಗಿದೆ. ಸರಕಾರ ಅಧೀನ ಸಂಸ್ಥೆಯಾಗಿರುವುದರಿಂದ ಉದ್ಯೋಗ ಭದ್ರತೆ, ವೇತನ, ಪಿಎಫ್, ಇಎಸ್‌ಐ ಸೌಲಭ್ಯ ಸಿಗುತ್ತದೆ ಎಂದು ಸಾವಿರಾರು ಯುವಕರು ಕೆಲಸಕ್ಕೆ ಸೇರಿದ್ದಾರೆ. ಕೇವಲ 9500 ರೂ.ಗೆ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ದುಡಿಯುವ ಇವರಿಗೆ ಈ ವೇತನ ಕೊಡದೆ ಸತಾಯಿಸಲಾಗುತ್ತಿದೆ.
ಸಂಬಳ ಯಾಕಿಲ್ಲ?
ಎಂಎಸ್‌ಐಎಲ್ ಮಳಿಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ನೇರವಾಗಿ ಇಲಾಖೆಗೆ ಒಳಪಡುವುದಿಲ್ಲ. ಇವರನ್ನು ರಾಜ್ಯಮಟ್ಟದ ಖಾಸಗಿ ಮ್ಯಾನ್ ಪವರ್ ಏಜೆನ್ಸಿ ಮೂಲಕ ಸಂಬಳ ನೀಡಲಾಗುತ್ತಿದೆ. ಎರಡು ವರ್ಷದ ಅವಧಿಗೆ ಟೆಂಡರ್ ಪಡೆಯುವ ಗುತ್ತಿಗೆದಾರ ಇವರಿಗೆ ಸಂಬಳ, ಪಿಎಫ್, ಇಎಸ್‌ಐ ವ್ಯವಸ್ಥೆ ಮಾಡಬೇಕು. ಆದರೆ ಟೆಂಡರ್‌ದಾರ ವೇತನ ಪಾವತಿ ಮಾಡದೆ ಬಾಕಿ ಉಳಿಸಿಕೊಂಡ ಪರಿಣಾಮ ನೌಕರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬರೀ ವೇತನವಷ್ಟೇ ಅಲ್ಲದೇ ಒಂದೂವರೆ ವರ್ಷದಿಂದ ಪಿಎಫ್, ಇಎಸ್‌ಐ ಖಾತೆಗೆ ಹಣ ಕೂಡ ಜಮೆ ಮಾಡಿಲ್ಲ. ಇಎಸ್‌ಐ ಇದೆ ಎಂದು ಆಸ್ಪತ್ರೆಗೆ ಹೋದವರು ಶಾಕ್ ಆಗಿದ್ದಾರೆ. ಕಷ್ಟಪಟ್ಟು ದುಡಿದರೂ ಬೆಲೆ ಇಲ್ಲ, ಈ ಬಗ್ಗೆ ಕೇಳಿದರೆ ನಿಮಗೆ ಎಲ್ಲಿ ಸಂಬಳ ನೀಡುತ್ತಾರೋ ಅಲ್ಲಿಗೆ ಹೋಗಿ ಅನ್ನುತ್ತಾರೆ.ಕೋವಿಡ್ ಸಮಯದಲ್ಲಿ ಕೆಲಸದಿಂದ ತೇಗೆಯುತ್ತಿತುವುದೇ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಎಲ್ಲಿಗೆ ಹೋಗಿ ಕೆಲಸ ಹುಡುಕುವುದು ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಕೈಗೆ ಸಿಗುವುದು 9500 ರೂ. ಸಂಬಳ. ಅದನ್ನೂ ಸರಿಯಾಗಿ ಕೊಡುತ್ತಿಲ್ಲ.
ದಿನಬಳಕೆ ವಸ್ತುಗಳ ಬೆಲೆ ಕೂಡ ಗಗನಕ್ಕೆ ಏರುತ್ತಿದೆ. ಟೆಂಡರ್‌ದಾರನಿಗೆ ಹೆಚ್ಚಿನ ಹಣ ಸಿಗುತ್ತದೆ. ಆದರೆ ನೌಕರರಿಗೆ ಸಿಗುವುದು ಬಿಡಿಗಾಸು. ಪಿಎಫ್, ಇಎಸ್‌ಐ ಸೌಲಭ್ಯ ಸಿಗದಿದ್ದರೆ ಇಷ್ಟು ಕಡಿಮೆ ಸಂಬಳ. ಅಂಗಡಿಯಲ್ಲಿ ಬಿಲ್‌ನಲ್ಲಿ ಕೊಂಚ ವ್ಯತ್ಯಾಸವಾದರೂ ಅದು ನೌಕರನ ಮೇಲೆ ಬರುತ್ತದೆ. ಅವೆಲ್ಲವನ್ನು ಸಹಿಸಿಕೊಂಡಿದ್ದೇವೆ. ಎಷ್ಟೋ ಕಡೆ ಎಂಆರ್‌ಪಿಗಿಂತ ಹೆಚ್ಚಿನ ದರ ಪಡೆಯುತ್ತಾರೆ. ಇದರಲ್ಲಿ ಅಧಿಕಾರಿಗಳು ಸಹ ಪಾಲುದಾರರು. ಇವೆಲ್ಲವನ್ನು ನಾವ್ಯಾರು ಪ್ರಶ್ನಿಸುವಂತಿಲ್ಲ. ನಾವೇನಾದರೂ ಹೆಚ್ಚು ಮಾತನಾಡಿದರೆ ಕೆಲಸದಿಂದ ತೆಗೆದು ಹಾಕುತ್ತಾರೆ. ಇಲ್ಲ ದೂರದ ಮಳಿಗೆಗೆ ಹಾಕುತ್ತಾರೆ. ಇವೆಲ್ಲವನ್ನು ಸಹಿಸಿಕೊಳ್ಳುತ್ತೇವೆ. ಸಂಬಳ ಮಾತ್ರ ಪ್ರತಿ ತಿಂಗಳು ಹಾಕಿದರೆ ಸಾಕು ಎಂಬುದು ಹೆಸರು ಹೇಳಲಿಚ್ಛಿಸದ ನೌಕರನ ಆರೋಪ.
ಪ್ರತಿ ಮಳಿಗೆಯಿಂದ ಪ್ರತಿದಿನ ಕನಿಷ್ಠ 50 ಸಾವಿರ, 3 ಲಕ್ಷದವರೆಗೂ ವಹಿವಾಟು ನಡೆಯುತ್ತದೆ. ಎಂಆರ್‌ಪಿಒ ದರಕ್ಕೆ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಾರೆ.
ಕೈಕೊಟ್ಟ ಟೆಂಡರ್‌ದಾರ-
ಎರಡು ವರ್ಷ ಅವಧಿಗೆ ಗುತ್ತಿಗೆ ಪಡೆದಿದ್ದ ಟೆಂಡರ್‌ದಾರ ಒಂದೂವರೆ ವರ್ಷ ಪೂರೈಸಿದ್ದು ವೇತನ ಬಾಕಿ ಉಳಿಸಿಕೊಂಡಿದ್ದಾನೆ. ಪಿಎಫ್, ಇಎಸ್‌ಐ ಕೂಡ ಬಾಕಿ ಉಳಿಸಿಕೊಂಡ ಪರಿಣಾಮ ಅವರನ್ನು ಕೈಬಿಟ್ಟು ಬೇರೊಬ್ಬರಿಗೆ ಟೆಂಡರ್ ನೀಡಲಾಗಿದೆ. 10 ದಿನದೊಳಗೆ ಸಮಸ್ಯೆ ಬಗೆಹರಿಯಲಿದೆ ಎಂಬುದು ನಿರ್ದೇಶಕರೊಬ್ಬರ ಅಭಿಪ್ರಾಯ
ವಿಜಯೇಂದ್ರ ತನ್ನಪಾಡಿಗೆ ತಾನು ಸಂಘಟನೆಯ ಕೆಲಸ ಮಾಡುತ್ತಿದ್ದಾನೆ – ಸಂಸದ ಬಿ.ವೈ ರಾಘವೇಂದ್ರ
ವಿಜಯೇಂದ್ರ ತನ್ನಪಾಡಿಗೆ ತಾನು ಸಂಘಟನೆಯ ಕೆಲಸ ಮಾಡುತ್ತಿದ್ದಾನೆ – ಸಂಸದ ಬಿ.ವೈ ರಾಘವೇಂದ್ರ
ವಿಜಯೇಂದ್ರ ಜನಪ್ರತಿನಿಧಿಯಾಗಿ ಗುರುತಿಸಿಕೊಳ್ಳದೇ ತನ್ನ ಪಾಡಿಗೆ ತಾನು ಸಂಘಟನೆಯ ಕೆಲಸ ಮಾಡುತ್ತಿದ್ದಾನೆ ಎಂದು ಸಂಸದ ಹಾಗೂ ವಿಜಯೇಂದ್ರ ಅಣ್ಣನಾಗಿರುವ ಬಿ ವೈ ರಾಘವೇಂದ್ರ ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ವಿಜಯೇಂದ್ರ ಅವರಿಗೆ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆಯಾಗುತ್ತಿರುವ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು. ಯಡಿಯೂರಪ್ಪನವರಾಗಿರಲಿ, ವಿಜಯೇಂದ್ರ ಆಗಲಿ ಎಲ್ಲಿಯೂ ಈ ಕುರಿತು ಹೇಳಿಕೊಂಡಿಲ್ಲ. ಅಪೇಕ್ಷೇನೂ ಪಟ್ಟಿಲ್ಲ, ವಿಜಯೇಂದ್ರ ಅವನ ಪಾಡಿಗೆ ಅವನು ಸಂಘಟನೆಯಲ್ಲಿ ಸಂಘಟನೆಯ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನೂ ನಿನ್ನೆ ಶಿರಸಿಯಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರ ಕುರಿತು ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡಿ ಮೂರು ಬಾರಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ.
ಹಾಗಾಗಿ, ಆ ದಿಕ್ಕಿನಲ್ಲಿಯೇ ಮುಂದುವರಿಯುವ ಅಪೇಕ್ಷೆ ಇದೆ ಎಂದರು. ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗದೆ ಎಂಟು ತಾಲೂಕಿಗೆ ಸೇವೆ ಮಾಡುವ ಅವಕಾಶ ಹಾಗೂ ಆಶೀರ್ವಾದ ಜನ ಮಾಡಿದ್ದಾರೆ. ಹಾಗಾಗಿ, ನಾನು ಲೋಕಸಭಾ ಸದಸ್ಯನಾಗಿಯೇ ಸೇವೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ಉಮೇಶ ಮನೆಯ ಮೇಲಿನ ಐಟಿ ದಾಳಿಯ ಕುರಿತು ಮಾತನಾಡಿದ ಸಂಸದ ರಾಘವೇಂದ್ರ ಅವರು, ಐಟಿ ದಾಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ. ಉಮೇಶ್ ಅವರು ಅನೇಕ ವರ್ಷಗಳಿಂದ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ತನಿಖೆ ನಡೆಯುತ್ತಿದೆ, ಐಟಿ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.
ಉಪಚುನಾವಣೆ ಗೆಲುವು ನಮ್ಮದೆ- ಸಚಿವ ಕೆ.ಎಸ್ ಈಶ್ವರಪ್ಪ
ಚುನಾವಣೆ ಎಂದರೆ ಬಿಜೆಪಿ ಗೆಲುವು- ಸಚಿವ ಕೆ.ಎಸ್ ಈಶ್ವರಪ್ಪ
ಚುನಾವಣೆ ಎಂದರೆ ಬಿಜೆಪಿ ಗೆಲವು, ಎರಡು ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುತ್ತೆ ಅಂತ ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ನಡೆದಂತಹ ಎಲ್ಲಾ ಉಪ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ ಅದರಂತೆ ಮೊನ್ನೆ ನಡೆದಂತಹ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಹ ನಾವು ಗೆದ್ದಿದ್ದೇವೆ. ಹಾಗಾಗಿ ಚುನಾವಣೆ ಎಂದರೆ ಬಿಜೆಪಿ ಗೆಲುವು ಎಂದರು. ಯಾಕೇ ನಾವು ಎಲ್ಲಾ ಚುನಾವಣೆಯಲ್ಲಿ ಗೇಲ್ತವೆ ಎಂದರೆ ಪಕ್ಷದ ಸಂಘಟನೆ ಬೂತ್ ಮಟ್ಟದ ವರೆಗೂ ವ್ಯವಸ್ಥಿತವಾಗಿದೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರು ನಾವು ಚುನಾವಣೆ ಎದುರಿಸಲು ತಯಾರಿದ್ದೇವೆ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಾಗೂ ಬಸವರಾಜ್ ಬೊಮ್ಮಯಿ ಅವರು ರಾಜ್ಯದಲ್ಲಿ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಹಾಗೂ ವಿಶ್ವವೇ ಮೆಚ್ಚುವಂತ ಮೋದಿಯವರ ನಾಯಕತ್ವದ ಆಧಾರದಲ್ಲಿ ನಾವು ಗೇವಿ ಎಂದರು.ಎರಡು ಉಪ ಚುನಾವಣಾ ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಯುತ್ತಿದೆ ಎಂದು ತಿಳಿಸಿದರು.
ರೈತರ ಹತ್ಯೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಮೌನ ಪ್ರತಿಭಟನೆ
ಉತ್ತರ ಪ್ರದೇಶದ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್ ನೇತೃತ್ವದಲ್ಲಿ ನಗರದ ಗಾಂಧಿ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ಕೇಂದ್ರದ ಬಿಜೆಪಿ ಸರ್ಕಾರದ ಗೃಹ ಖಾತೆ ಸಹಾಯಕ ಸಚಿವರಾದ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ವಾಹನವನ್ನು ನುಗ್ಗಿಸಿದ ಪರಿಣಾಮ ನಾಲ್ವರು ರೈತರು ಹತ್ಯೆಯಾಗಿದ್ದರು. ಹಾಗಾಗಿ ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ರೈತರ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ,ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ,ಕಾಂಗ್ರೆಸ್ ಮುಖಂಡರಾದ ವೈ.ಹೆಚ್ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೋವಿಡ್‍ನಿಂದ ಮೃತರಾದವರಿಗೆ ಘೋಷಿತ ಪರಿಹಾರಧನ ನೀಡಲು ಕ್ರಮ : ಕೆ.ಬಿ.ಶಿವಕುಮಾರ್
ಕೋವಿಡ್-19 ಸೋಂಕಿನಿಂದ ಮೃತ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರವು ಈಗಾಗಲೇ ಘೋಷಿಸಿರುವ ಆರ್ಥಿಕ ನೆರವನ್ನು ಒದಗಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರರು ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಿಂದ ಏರ್ಪಡಿಸಲಾಗಿದ್ದ ಕೋವಿಡ್ ಮೃತ ಕುಟಂಬಕ್ಕೆ ಆರ್ಥಿಕ ನೆರವು ಒದಗಿಸುವುದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ, ಬೆಳೆ, ಆಸ್ತಿ, ಜನ-ಜಾನುವಾರು ಹಾನಿಗಳ ಕುರಿತ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ಸರ್ಕಾರವು ಜಿಲ್ಲೆಯಲ್ಲಿ ಕೋವಿಡ್‍ನಿಂದ ಮೃತರಾದ ವ್ಯಕ್ತಿಗಳಲ್ಲಿ ಮೊದಲ ಹಂತದಲ್ಲಿ 1064ಜನ ಮೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೃತರ ಕುಟುಂಬದ ಸದಸ್ಯರು ನೆರವಿಗಾಗಿ ಅರ್ಜಿ ಸಲ್ಲಿಸುವವರೆಗೆ ಕಾಯದೇ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರ ಮನೆಗೆ ಧಾವಿಸಿ, ಅವರಿಂದ ಅರ್ಜಿ ಹಾಗೂ ಮಾಹಿತಿ ಪಡೆದು, ಆನ್‍ಲೈನ್ ಮೂಲಕ ಮಾಹಿತಿ ಉನ್ನತೀಕರಿಸಿ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದರು.
ಮೃತರ ಕುಟುಂಬವು ಬಿ.ಪಿ.ಎಲ್. ಕುಟುಂಬ ವ್ಯಾಪ್ತಿಗೊಳಪಟ್ಟಿದ್ದರೆ ರಾಜ್ಯ ಸರ್ಕಾರವು ಒಂದು ಲಕ್ಷ ರೂ.ಗಳ ಆರ್ಥಿಕ ನೆರವು ಹಾಗೂ ಕೇಂದ್ರ ಸರ್ಕಾರವು ಕೋವಿಡ್‍ನಿಂದ ಮೃತರಾದ ಎಲ್ಲಾ ಕುಟುಂಬಗಳಿಗೆ ರೂ.50,000/-ಗಳ ನೆರವು ಒದಗಿಸಲಿದೆ. ಈ ಪರಿಹಾರಧನ ಪಡೆಯಲು ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ಇನ್ನಾದರೂ ವಿಳಂಬಕ್ಕೆ ಅವಕಾಶ ಕೊಡದೆ ಈ ತಿಂಗಳ ಮಾಸಾಂತ್ಯದೊಳಗಾಗಿ ಮಾಹಿತಿಯನ್ನು ಸಂಗ್ರಹಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಾಕೀತು ಮಾಡಿದರು.
ಆನ್‍ಲೈನ್‍ನಲ್ಲಿ ಮಾಹಿತಿ ತುಂಬಲು ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಮೃತ ವ್ಯಕ್ತಿಯು ಹೊರಗಿನ ಜಿಲ್ಲೆಯವರಾಗಿದ್ದಲ್ಲಿ ಅಂತಹವರು ತಮ್ಮ ಮೂಲ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ,ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ,ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ್, ಆರ್.ಸಿ.ಹೆಚ್.ಅಧಿಕಾರಿ ಡಾ,ನಾಗರಾಜ್‍ನಾಯ್ಕ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
