ಐಪಿಎಲ್ ಹದಿನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಗಳ ರೋಚಕ ಗೆಲುವು ಪಡೆದು. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ಚೆನ್ನೈ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ದು, KKR ಗೆ ಮೂರನೇ ಬಾರಿಯ ಚಾಂಪಿಯನ್ ಕನಸು ಬಂಗ ಬಾಗಿದೆ. ಇದರಿಂದ KKR ತಂಡದ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿದೆ.
ಚೆನ್ನೈ ತಂಡ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು ಗೆಲುವಿನ ಗುರಿ ಬೆನ್ನತ್ತಿದ್ದ KKR ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಗೆಲುವು ಪಡೆಯಲು ವಿಫಲವಾಗಿದೆ.
ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ CSK ತಂಡಕ್ಕೆ ಕಾರಣದಿಂದಾಗಿ 10 ಕೋಟಿ ರೂ. ಲಭಿಸಿದೆ. ಪ್ರತಿಬಾರಿಯೂ ಈ ಸಲ ಕಪ್ ನಮ್ದೇ ಎಂದು ಆಸೆ ಹುಟ್ಟಿಸಿ ಕೊನೆ ವೇಳೆ ಅಭಿಮಾನಿಗಳಲ್ಲಿ ಹತಾಶೆ ಮೂಡಿಸಿರುವ RCB ತಂಡವು ಈ ಬಾರಿಯೂ ಸೆಮಿಫೈನಲ್ ತಲುಪಿ ದುರದೃಷ್ಟ ಫೈನಲ್ ತಲುಪುವಲ್ಲಿ ಎಡವಿದ್ದಾರೆ ಎಲಿಮಿನೇಟರ್ ನಲ್ಲಿ ಸೋತ RCB ಮತ್ತು ದೆಹಲಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್ ನಲ್ಲಿ ಸೋತ ತಂಡಕ್ಕೆ 4.375 ಕೋಟಿ ಪಡೆದಿದೆ.
CSKಗೆ ಐಪಿಎಲ್ ಚಾಂಪಿಯನ್ ಕಿರೀಟ
ಕೋಟಿಗೊಬ್ಬ 3ಗೆ ಚಿತ್ರ ರಸಿಕರಿಂದ ಸಡಗರದ ಸ್ವಾಗತ
ಕೋವಿಡ್ ಎರಡನೇ ಅಲೆ ಬಳಿಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಆಯುಧ ಪೂಜೆಯೆಂದು ತೆರೆಕಾಣಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರಪ್ರದರ್ಶನ ಗೊಳ್ಳದೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ವಿಜಯದಶಮಿಯಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.
ಶಿವಮೊಗ್ಗ ಹೆಚ್ ಪಿ ಸಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ಚಿತ್ರ ತೆರೆಕಂಡಿದ್ದು ಕಿಚ್ಚ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಇಂದು ಆರಂಭ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಂದಾಯ ಇಲಾಖೆಯಿಂದ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಕೊರೋನ ಕಾರಣದಿಂದಾಗಿ ಸ್ಥಗಿತಗೊಂಡಿತ್ತು.
ಕೊರೋನ ಕಡಿಮೆಯಾದ ಬಳಿಕ ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ಪುನರಾರಂಭಗೊಂಡಿದೆ. ಗಾಜನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಚಾಲನೆ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.
ಗಗನದಲ್ಲಿ ಬೆರಗು…!
ಆಕಾಶದಲ್ಲಿ ದಿನನಿತ್ಯ ಒಂದಲ್ಲ ಒಂದು ರೀತಿಯ ಸೊಜಿಗ ನಡೆಯುತ್ತಿರುವುದನ್ನ ನಾವೆಲ್ಲಾ ನೋಡಿದ್ದೆವೆ. ಹಾಗೆಯೆ ಮತ್ತೊಂದು ವಿಸ್ಮಯ ಘಟಿಸಿದೆ. ಅಂತಹ ವಿಭಿನ್ನ ಚಮತ್ಕಾರ ಮೂಡಿದೆ. ಸೂರ್ಯನ ಸುತ್ತ ಸಪ್ತ ವರ್ಣಗಳ ವೃತ್ತಾಕಾರದ ಕಾಮನಬಿಲ್ಲು ಗೋಚರವಾಗಿದ್ದು ನಾಗರೀಕರಲ್ಲಿ ವಿಸ್ಮಯದ ಜೊತೆಗೆ ಪುಳಕಿತರನ್ನಾಗಿಸಿತು!
ಸೂರ್ಯನ ಸುತ್ತಲು ಮೂಡಿದ್ದ ಬಣ್ಣಗಳ ಉಂಗುರಾಕೃತಿಯ ಖಗೋಳ ವಿಸ್ಮಯವು, ನಾಗರೀಕರ ಕಣ್ಮನ ಸೆಳೆಯಿತು. ಜೊತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಕೆಲವರು ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದರಿಂದ ಈ ದೃಶ್ಯಗಳು ಸಾಕಷ್ಟು ವೈರಲ್ ಆಗಿದೆ.
ಕಾರಣವೇನು?: ಖಗೋಳಶಾಸ್ತ್ರಜ್ಞರ ಪ್ರಕಾರ, ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದಾಗ ಸೂರ್ಯನ ಕಿರಣಗಳಿಂದ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುತ್ತದೆ. ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಬರುವಾಗ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲಿನ ಏಳು ಬಣ್ಣಗಳು ಮೂಡಲು ಕಾರಣವಾಗುತ್ತದೆ. ಈ ಅಪರೂಪದ ಖಗೋಳ ವಿದ್ಯಮಾನಕ್ಕೆ 22 ಹ್ಯಾಲೋ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ.
ಮಳೆ ಮುನ್ಸೂಚನೆ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರಾಕೃತಿ ಗೋಚರವು, ಭಾರೀ ಮಳೆಯ ಮುನ್ಸೂಚನೆ ನೀಡುತ್ತದೆ ಎಂದು ಕೆಲ ಖಗೋಳ ತಜ್ಞರು ಅಭಿಪ್ರಾಯಪಡುತ್ತಾರೆ. ಮುಂದಿನ ಒಂದೆರೆಡು ದಿನಗಳಲ್ಲಿ ವ್ಯಾಪಕ ವರ್ಷಧಾರೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳುತ್ತಾರೆ.
ತಪ್ಪುಗಳನ್ನು ಎತ್ತಿ ತೋರಿಸುವ ಮಾಧ್ಯಮಗಳನ್ನು ಗೌರವಿಸಿ – ಬಿ.ಎಸ್. ವೈ
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳು ಸಮಾಜದ ಕುಂದುಕೊರತೆಗಳ ಮೇಲೆ ಬೆಳಕು ಚಲ್ಲುತ್ತಿದೆ.ಸಮಾಜದಲ್ಲಿನ ಆಗುಹೋಗುಗಳನ್ನು ಆಳುವವರಿಗೆ ತಿಳಿಸುವ ಕೆಲಸಗಳನ್ನು ಪತ್ರಿಕಾರಂಗ ಮಾಡುತ್ತಿವೆ ಎಂದರು.
ನಮ್ಮ ತಪ್ಪುಗಳನ್ನು ಎತ್ತಿತೋರಿಸುವ ಮಾದ್ಯಮಗಳನ್ನು ನಾವು ಗೌರವದಿಂದ ಕಾಣಬೇಕು ಎಂದ ಅವರು ಪತ್ರಿಕೆಗಳಿಗೆ ಓದುಗರು ನಿಜವಾದ ಮಾಲೀಕರು. ವೃತ್ತಿ ಹಿರಿಮೆ ಕಾಪಾಡಿಕೊಳ್ಳಲು ಪತ್ರಕರ್ತರು ಹೆಚ್ಚಿನ ಗಮನಕೊಡಬೇಕು ಎಂದರು.
ಗೃಹ ಸಚಿವ ಆರಗ ಜ್ಙಾನೇಂದ್ರ ಮಾತನಾಡಿ, ಸಂವಹನ ಮಾನವನ ಜೀವನದಲ್ಲಿ ಅವಶ್ಯಕತೆ ಇದೆ ಎಂದರು.
ದೃಷ್ಯ ಮಾದ್ಯಮಗಳ ವೈಭವೀಕರಣದಿಂದ ಮುದ್ರಣ ಮಾಧ್ಯಮ ನೇಪತ್ಯಕ್ಕೆ ಸರಿಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಮುದ್ರಣ ಮಾಧ್ಯಮ ತನ್ನ ಓದುಗರನ್ನು ಹೆಚ್ಚಿಸಿಕೊಂಡಿರುವುದು ಶ್ಲಾಘನೀಯ ಎಂದರು.
ನಕಲಿ ಪತ್ರಕರ್ತರ ನಡುವೆ ಅಸಲಿ ಪತ್ರಕರ್ತರು ಗುರುತಿಸಿಕೊಳ್ಳುವುದು ಕಷ್ಟವಾಗಿದೆ. ನಮ್ಮ ಸರ್ಕಾರ ಪತ್ರಕರ್ತರಿಗೆ ಸಾಕಷ್ಟು ಸೌಲಭ್ಯ ನೀಡಿದೆ ಎಂದರು.
ಹೆಚ್.ಎಸ್ ದೊರೆಸ್ವಾಮಿ ಪ್ರಶಸ್ತಿ ಪುರಸ್ಕೃತ ಪ್ರಜಾವಾಣಿಯ ಹಿರಿಯ ಪತ್ರಕರ್ತ ಹನೀಫ್ ಮಾತನಾಡಿ, ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಪತ್ರಕರ್ತರ ನೆರವಿಗೆ ಬಂದಿರುವ ರಾಜ್ಯ ಕಾರ್ಯ ನಿರತ ಪತ್ರಕರ್ತರದ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ರಾಜ್ಯ ಆರ್ಯ ವೈಶ್ಯ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್ ಆರುಣ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ರವಿಕುಮಾರ್, ಮಾದ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಮತ್ತಿತರರು ಇದ್ದರು.
ವಾರ್ಷಿಕ ದತ್ತಿ ಪ್ರಶಸ್ತಿ ಪಡೆದವರು
ಡಿವಿಜಿ ಪ್ರಶಸ್ತಿಯನ್ನು ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕರಾದ ರವಿ ಹೆಗಡೆ ಅವರಿಗೆ, ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್, ಪ್ರಜಾವಾಣಿ, ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್. ಎನ್.ಅಶೋಕಕುಮಾರ್, ಸಂಪಾದಕರು,ಗೊಮ್ಮಟವಾಣಿ. ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು, ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು , ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್. ಶೆಣೈ, ಸಂಪಾದಕರು, ಕುಂದಪ್ರಭ, ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ ಮಂದಾರ, ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ :ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು, ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ. ರೇಖಾ, ಸಂಪಾದಕರು, ಹೊಸಪೇಟೆಟೈಮ್ಸ್,ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ,ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ, ಪ್ರಜಾವಾಣಿ, ಹುಬ್ಬಳ್ಳಿ ,ಎಂ. ನಾಗೇಂದ್ರರಾವ್ ಪ್ರಶಸ್ತಿ : ಎನ್.ಡಿ.ಶಾಂತಕುಮಾರ್ ವಿಜಯವಾಣಿ, ಶಿವಮೊಗ್ಗ, ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯಕರ್ನಾಟಕ ,ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್ ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು
ಸಂಘದ ವಿಶೇಷ ಪ್ರಶಸ್ತಿಗಳು:
ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು, ಮುನಿವೆಂಕಟೇಗೌಡ, ಹಿರಿಯ ಪತ್ರಕರ್ತರು ಕೋಲಾರ ,ಪ್ರಕಾಶ್ ರಾಮಜೋಗಿಹಳ್ಳಿ, ವಾರ್ತಾಭಾರತಿ, ಬೆಂಗಳೂರು,ಎಂ.ಕೆ. ರಾಘವೇಂದ್ರ ಮೇಗರವಳ್ಳಿ ವಿಜಯ ಕರ್ನಾಟಕದ ತೀರ್ಥಹಳ್ಳಿ ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಪ್ರಶಸ್ತಿ ಪ್ರಧಾನ ಮಾಡಿದರು.
ಕ್ರಿಕೆಟ್ ಪ್ರಿಯ ಬಿ.ಎಸ್.ವೈ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಐಪಿಎಲ್ ಪಂದ್ಯವನ್ನು ತಮ್ಮ ರಾಜಕೀಯ ಒತ್ತಡದ ನಡುವೆಯೂ ತಮ್ಮ ಕಾರಿನಲ್ಲಿ ಪಂದ್ಯ ವಿಕ್ಷೀಸಿರುವ ಪೋಟೋ ಈಗ ಭಾರಿ ವೈರಲ್ ಆಗಿದೆ.
ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿಗಳು ಐಪಿಎಲ್ ಪಂದ್ಯವನ್ನು ವಿಕ್ಷೀಸಿದ್ದಾರೆ .ಈ ಪೋಟೋ ಈಗ ಸಾಕಷ್ಟು ವೈರಲ್ ಆಗಿದ್ದು ರಾಜಕೀಯದ ಒತ್ತಡದ ನಡುವೆ ಕ್ರಿಕೆಟ್ ನೋಡಿರುವುದಕ್ಕೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ.
ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾ , ಗಮನ ಸೆಳೆದ ಮಲ್ಲಕಂಬ
ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಂದಾಗಿ ಸ್ಥಗಿತಗೊಂಡಿದ್ದ ದಸರಾ ವೈಭವ ಈ ವರ್ಷ ಮತ್ತೆ ಮರುಕರಳಿಸಿದ್ದು ಇಂದು ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ಪ್ರಾಣಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ ,ಚಂಡೆ,ಮದ್ದಳೆ ಹಾಗೂ ಮಲ್ಲಕಂಬ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವ ಮೂಲಕ ಯೋಗ ಮಾಡಲಾಯಿತು. ನಂತರ ಯೋಗ ವಿದ್ಯಾರ್ಥಿಗಳಿಂದ ಟ್ರಾಕ್ಟರ್ ನಲ್ಲಿ ಮಲ್ಲಕಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಅತ್ಯಾಚಾರಿಗೆ ಹತ್ತು ವರ್ಷ ಜೈಲು
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಅಪ್ರಾಪ್ತೆ ಮೇಲೆ 2019ರಲ್ಲಿ ಅತ್ಯಾಚಾರ ಎಸಗಿದ್ದ ಮನ್ಸೂರ್ ಎಂಬ ವ್ಯಕ್ತಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ ಪೊಕ್ಸೋ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಯು ದಂಡದ ಮೊತ್ತ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸು ಆದೇಶ ಸಹ ಮಾಡಿದೆ.
ಮನ್ಸೂರ್ ಎಂಬ ವ್ಯಕ್ತಿ 16 ವರ್ಷದ ಅಪ್ರಾಪ್ತೆಯನ್ನು ಮನೆಗೆ ಟಿವಿ ನೋಡುವ ನೆಪದಲ್ಲಿ ಕರೆದು ಆಕೆ ಮೇಲೆ ಅತ್ಯಾಚಾರ ಎಸಗಿದ್ದ.
ಜೊತೆಗೆ ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಬೀಡಿಯಿಂದ ಆಕೆಯ ಬಲಗೈ ಸುಟ್ಟಿದ್ದ.ಈ ಬಗ್ಗೆ 2019ರಲ್ಲಿ ಶಿವಮೊಗ್ಗ ಮಹಿಳಾಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದ ಪೋಲಿಸ್ ಅಧಿಕಾರಿ ಅಭಯಪ್ರಕಾಶ್ ಸೋಮನಾಳ್ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶ ದಯಾನಂದ್ ಅವರು ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾನೂನು ರೂಪಿಸಲು ಆಗ್ರಹ
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕಾನೂನು ರೂಪಿಸಲು ಆಗ್ರಹಿಸಿ ಮೂರುವರೆ ಸಾವಿರ ಕಿಲೋಮೀಟರ್ ಸೈಕಲ್ ಜಾಥ -ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ
ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳನ್ನು ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ 3500 ಕಿ.ಮಿಟರ್ ಸೈಕಲ್ ಮುಖಾಂತರ ಸಂಚರಿಸಿ ರಾಜ್ಯದ ಎಲ್ಲಾ 31 ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುತ್ತಿರುವ ಬೆಂಗಳೂರಿನ ಕಿರಣ್ ಎಂಬ ಯುವಕ ಈಗಾಗಲೇ 19 ಜಿಲ್ಲೆಗಳಿಗೆ ಎರಡೂವರೆ ಸಾವಿರ ಕಿಲೋಮೀಟರ್ ಏಕಾಂಗಿ ಸೈಕಲ್ ಜಾಥ ಮೂಲಕ ಹೋಗಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಇಂದು ಬೆಳಗ್ಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು ಹೋರಾಟಗಾರ ಯುವಕನನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲೆಗೆ ಆತ್ಮೀಯವಾಗಿ ಬರಮಾಡಿಕೊಂಡು ಹೋರಾಟಕ್ಕೆ ಯುವ ಕಾಂಗ್ರೆಸ್ ನಿಂದ ಸಂಪೂರ್ಣವಾಗಿ ಬೆಂಬಲಿಸಿ ಮಹಾವೀರ ವೃತ್ತದಲ್ಲಿ ಪ್ರತಿಭಟಿಸಿ ನಂತರ ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ನಡಿಗೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ,ಬಿ.ಲೋಕೇಶ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ .ಕುಮರೇಶ್ , ಜಿಲ್ಲಾ ಕಾಂಗ್ರೆಸ್ ನ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್ , INTCU ಜಿಲ್ಲಾಧ್ಯಕ್ಷ ಬಿ ಅರ್ಜುನ್ , INTCU ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಹಾಲ್ ಸಿಂಗ್, ಯುವ ಕಾಂಗ್ರೆಸ್ನ ಅರುಣ್ ನವುಲೆ ವೆಂಕಟೇಶ್ ಕಲ್ಲೂರು , ಪವನ್, ರಾಹುಲ್ ಸೀಗೆಹಟ್ಟಿ , ಮಧು, ದರ್ಶನ್ ರಾಹುಲ್ ಮಹಿಳಾ ಕಾಂಗ್ರೆಸ್ ನ ಗೀತಾ ಹಾಗೂ ಕಾರ್ಯಕರ್ತರು ಇತರರು ಇದ್ದರು.
