ಡಾ. ರಣದೀಪ್ ಗುಲೇರಿಯಾ ಅವರು ಟ್ವಿಟರ್ ಮೂಲಕ ಲಸಿಕಾಕರಣದ ಪಾತ್ರವೇನು, ಮತ್ತು ಭಾರತಕ್ಕೆ ಮುಂದಿರುವ ಮಾರ್ಗವೇನು ಎಂಬುವುದರ ಬಗ್ಗೆ ಹಾಗೂ ಲಸಿಕೆ ಪಡೆಯುವುದರಿಂದ ಯಾವ ಪ್ರಯೋಜನಗಳಿವೆ ಎಂದು ಸಾಮಾಜಿಕ ಜಾಲತಾಣವಾದ, ಕೇಂದ್ರ ಆರೋಗ್ಯ ಇಲಾಖೆಯ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಹುತಾತ್ಮ ಪೋಲಿಸರಿಗೆ ಗೌರವ ನಮನ
ಕರ್ತವ್ಯದ ಸಂದರ್ಭ ದೇಶಾದ್ಯಂತ ಮರಣವನ್ನಪ್ಪಿದ ಪೋಲಿಸರಿಗೆ ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾ ಪೋಲಿಸ್ ವತಿಯಿಂದ ನಮನ ಸಲ್ಲಿಸಲಾಯಿತು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೋಲಿಸರು ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಫಾ ಹುಸೇನ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿಗೆ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸೇರಿದಂತೆ ಹಲವು ಗಣ್ಯರು ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು. ಇದೇ ವೇಳೆ ಪೋಲಿಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮ ಪೋಲಿಸರಿಗೆ ಗೌರವ ಸಲ್ಲಿಸಿದರು.
ಬೆಳೆ ನಾಶ, ಖೇದಕರ: ಕೃಷಿ ಸಚಿವ ಬಿ.ಸಿ. ಪಾಟೀಲ್
ಹೀರೆಕೆರೂರು, ರಟ್ಟಿಹಳ್ಳಿ ತಾಲೂಕಿನ ತಿಂಗಳಗೊಂದಿ ಗ್ರಾಮದಲ್ಲಿ ಬಸವರಾಜ್ ಎಂಬ ಕೃಷಿಕರ ಬಾಳೆತೋಟವನ್ನು ದುಷ್ಕರ್ಮಿಗಳು ಘಾಸಿಗೊಳಿಸಿದ್ದಾರೆ. ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ, “ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ರೂರ ಮನಸ್ಸು ಉಳ್ಳವರು, ಬೆಳೆಯನ್ನು ನಾಶ ಮಾಡಿರುವುದು ಬೇಸರದ ಸಂಗತಿಯಾಗಿದೆ”. ಈ ವಿಷಯದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದೇನೆ, ಈ ಕೃತ್ಯಕ್ಕೆ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಮಲೆನಾಡಿನಾದ್ಯಂತ ಸೀಗೆಹುಣ್ಣಿಮೆ ಸಂಭ್ರಮ
ತಾಳಗುಪ್ಪ: ಇಂದು ಭೂಮಾತೆಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಹೋಬಳಿಯ ಎಲ್ಲೆಡೆ ರೈತರು ತಮ್ಮ ಜಮೀನಿನಲ್ಲಿ ಫಸಲು ಮೈ ತುಂಬಿದ ಈ ದಿನವನ್ನು ಪೂಜಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ಹುಣ್ಣಿಮೆಯ ಈ ದಿನ ಮಲೆನಾಡಿನ ರೈತರು ನಸುಕಿನಲ್ಲಿ ಎದ್ದು ವಿವಿಧ ಎಲೆಗಳ ಸೊಪ್ಪನ್ನು ಬೇಯಿಸಿ ಅದನ್ನು ತಮ್ಮ ಜಮೀನಿನಲ್ಲಿ ಎಲ್ಲೆಡೆ ಹಾಕುತ್ತಾರೆ. ಇದಕ್ಕೆ ಅಚ್ಚು ಬೀರುವುದು ಎನ್ನುತ್ತಾರೆ. ನಂತರ ಜಮೀನಿನಲ್ಲಿ ದೇವರ ಪ್ರತಿಷ್ಠಾಪಿಸಿ ಪೂಜೆ ಮಾಡಿ ಕಡುಬು ನೈವೇದ್ಯ ಮಾಡಿ ಅಲ್ಲಿಯೇ ಊಟ ಮಾಡುವ ಪದ್ದತಿ ಆಚರಿಸುತ್ತಾರೆ. ಕೃಷಿಕ ಹೀರೆಮನೆ ಬಾಲಚಂದ್ರರವರ ತೋಟದಲ್ಲಿ ಭೂ ಹುಣ್ಣಿಮೆಯನ್ನು ಆಚರಿಸಲಾಯಿತು. ನಮಗೆ ಅನ್ನ ನೀಡುತ್ತಿರುವ ಭೂಮಿತಾಯಿಗೆ ಕೃತಜ಼ತೆ ಸಲ್ಲಿಸುವ ಪರಿ ಇದಾಗಿದೆ. ವರದಿ ಕೃಪೆ: ಶ್ರೀ. ರಾಘವೇಂದ್ರ ಶರ್ಮಾ ತಲವಾಟ. ನಿರೂಪಣಾ ಧ್ವನಿ: ರಚನಾ.ಕೆ.ಆರ್
ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರ ಶ್ಲಾಘನೆ
ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನೂರಕ್ಕೆ ನೂರು ಪ್ರಮಾಣದಷ್ಟು ಜನಸಾಮಾನ್ಯರಿಗೆ ಸಹಾಯಕವಾಗಿದೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ, ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳಲ್ಲಿ 200ರೂ. ಗಳನ್ನು ಹೆಚ್ಚಿಸಲಾಗಿದೆ, ಹಾಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ನೆರವಾಗುವಂತೆ “ಭಾಗ್ಯ ಲಕ್ಷ್ಮೀ ಯೋಜನೆಯನ್ನು” ಜಾರಿಗೊಳಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಹಾಯಕವಾಗಿದೆ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ನಾವು ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡರು.
ಮಲೆನಾಡಿನ ಅಮೂಲ್ಯ ಸಿರಿ:
ಶಿವಮೊಗ್ಗ ಲಕ್ಕಿನಕೊಪ್ಪ ಸರ್ಕಲ್ ನಲ್ಲಿರುವ ಒಂದು ಅಪರೂಪ ವಸ್ತು ಸಂಗ್ರಹಾಲಯ, ನಮ್ಮ ಗಮನ ಸೆಳೆಯುತ್ತದೆ ಅದೇ “ಅಮೂಲ್ಯ ಶೋಧ”. ಇದರ ಹಿನ್ನೆಲೆ ಅತ್ಯಂತ ಕುತೂಹಲ. ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ಶ್ರೀ.ಹೆಚ್. ಖಂಡೋಬರಾವ್- ಯಶೋಧಮ್ಮರವರ ಪ್ರೇಮ ಸೌಧ. ಶ್ರೀ.ಹೆಚ್. ಖಂಡೋಬರಾವ್ ರವರು ಗತಿಸಿದ ತಮ್ಮ ಪತ್ನಿಯ ಪ್ರೇಮದ ಸಂಕೇತವಾಗಿ ಈ ಸಂಗ್ರಹಾಲಯವನ್ನು ರೂಪುಗೊಳಿಸಿದ್ದಾರೆ. 2008ರಲ್ಲಿ ಆರಂಭವಾದ ಈ ಅಮೂಲ್ಯ ಶೋಧ ಮಲೆನಾಡಿನ, ಅಷ್ಟೇಕೆ ಇಡೀ ನಾಡಿನಾದ್ಯಂತ ಇರುವ ಪುರಾತನ ವಸ್ತುಗಳ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ನಾಣ್ಯ ಸಂಗ್ರಹಕಾರಿಯಾಗಿಯು ಅತ್ಯಂತ ಪ್ರಸಿದ್ಧರಾಗಿರುವ ಖಂಡೋಬರಾವ್ ರವರು ಬಹುಮುಖಿ ಆಸಕ್ತಿಯ ಕೇಂದ್ರವಾದ ಈ ಅಮೂಲ್ಯ ಶೋಧ, ನಮ್ಮ ಮಲೆನಾಡಿನ ಮುಕುಟಕ್ಕೆ ಇಟ್ಟ ಕೀರ್ತಿ ಕಳಸವಾಗಿದೆ. ಇವರ ಈ ಕೊಡುಗೆಯನ್ನ ನಮ್ಮ ಮಲೆನಾಡಿನ ಆಸಕ್ತ ಬಳಗ ಮೆಚ್ಚಿ ಶ್ರೀ. ಹೆಚ್. ಖಂಡೋಬರಾವ್ ರವರಿಗೆ ಹಾರ್ಧಿಕವಾಗಿ, ಸತ್ಕಾರ, ಸನ್ಮಾನ,ಅಭಿಮಾನವನ್ನು ಅರ್ಪಿಸಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಏಕಾಂಗಿ ಪ್ರತಿಭಟನೆ
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್. ಎಸ್ ಗೌಡ ಅವರು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಪ್ರತಿದಿನದ ಅಗತ್ಯವಸ್ತುಗಳ ಬೆಲೆ ಏರಿಕೆ ಹಾಗೂ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಲೆಕ್ಟ್ರಾನಿಕ್ ವಾಹನಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಜೊತೆಗೆ ಬಿಪಿಎಲ್ ಕಾರ್ಡ್ ದಾರರಿಗೆ ಅಡಿಗೆ ಅನಿಲ, ಎಣ್ಣೆ, ಬೇಳೆಕಾಳುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಪ್ರವಾಸಿ ವಾಹನಗಳಿಂದ ಟ್ರಾಫಿಕ್ ಜಾಮ್
ದಸರಾ ಹಬ್ಬದ ಪ್ರಯುಕ್ತ ಸಾಲುಸಾಲಾಗಿ ರಜೆಗಳಿರುವುದರಿಂದ ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡಿದ್ದಾರೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಸಿಗಂದೂರು ಹಾಗೂ ಜೋಗ ಜಲಪಾತವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ. ಹೀಗಾಗಿ ಹೆಚ್ಚಾದ ಪ್ರವಾಸಿಗರ ವಾಹನಗಳಿಂದಾಗಿ ಸಾಗರದ ಎಲ್ಲಾ ರಸ್ತೆಗಳಲ್ಲೂ 2 ಗಂಟೆ ಯಿಂದ ಟ್ರಾಫಿಕ್ ಜಾಮ್ ಆಗಿದು, ಪ್ರಯಾಣಿಕರು ಪರದಾಡುವಂತಾಗಿದೆ. ಸಾಗರ ಬಸ್ ನಿಲ್ದಾಣದ ಬಳಿಯಿಂದ ಐಬಿ ಸರ್ಕಲ್ ಅವರಿಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ನಲ್ಲಿ ಸಾವಿರಾರು ವಾಹನಗಳು ಸಿಲುಕಿದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಇಂದು ಆರಂಭ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಂದಾಯ ಇಲಾಖೆಯಿಂದ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಕೊರೋನ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಕೊರೋನ ಕಡಿಮೆಯಾದ ಬಳಿಕ ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ಪುನರಾರಂಭಗೊಂಡಿದೆ. ಗಾಜನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಚಾಲನೆ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.
