‘ಜಿಲ್ಲೆಯನ್ನು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಲು ಎಲ್ಲರೂ ಮುಂದಾಗಬೇಕು. ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ನಾಡು-ನುಡಿ ಬೆಳವಣಿಗೆಗಾಗಿ ಶ್ರಮಿಸಬೇಕು. ಶಾಲೆ ಮತ್ತು ಮನೆಯಂಗಳದಲ್ಲಿ ಸಾಹಿತ್ಯ ಪರಿಷತ್ತು ಚಟುವಟಿಕೆ ನಡೆಸೋಣ ಎಂದು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅವರು ಹೇಳಿದ್ದಾರೆ.
ಶಿಕಾರಿಪುರದ, ಗುರುಭವನದಲ್ಲಿ ನಡೆದ ಅಭಿನಂದನಾ ಸಮಾರಂಭ ಹಾಗೂ ಆಜೀವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ತಾಲೂಕು ಮಟ್ಟದಲ್ಲಿ ಸಾಹಿತ್ಯ ಪರಿಷತ್ ಚಟುವಟಿಕೆ ನಡೆಸಲು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಗತ್ಯವಾದ ಸಮಯವನ್ನು ಮೀಸಲಿಡಬೇಕು. ಅಂತವರು ಮಾತ್ರ ನಮ್ಮ ಜೊತೆ ಬರಬೇಕು. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಕೂಡ ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಆಜೀವ ಸದಸ್ಯರಾದ ಎಸ್.ಆರ್. ಕೃಷ್ಣಪ್ಪ, ಕಾನೂರು ನಾಗಪ್ಪ, ಚುರ್ಚಿಗುಂಡಿ ಪ್ರೊ. ಬಸವನಗೌಡ್ರು, ಸರ್ವಮಂಗಳಮ್ಮ, ಶಿರಳಕೊಪ್ಪ ಟಿ. ರಾಜಶೇಖರ್ ಮತ್ತು ನಿಜಲಿಂಗಪ್ಪ ಗೌಡ್ರು ಅವರನ್ನು ಸನ್ಮಾನಿಸಲಾಯಿತು.