ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಐಪಿಎಲ್ ಪಂದ್ಯಾವಳಿಯು ಕ್ರಿಕೆಟ್ ಪ್ರಿಯರನ್ನು ಸದಾ ಮನ ತಣಿಸುತ್ತಿದೆ. ಕ್ರಿಕೆಟ್ ಆಟಗಾರರ ಪ್ರತಿಭೆಯನ್ನು ಗುರುತಿಸುವ ಕೆಲಸ ಐಪಿಎಲ್ ನಲ್ಲಿ ಸಾರ್ಥಕವಾಗಿ ನಡೆಯುತ್ತಿದೆ. ಇದರಲ್ಲಿ ಅತ್ಯಂತ ಸ್ವಾರಸ್ಯ ಮತ್ತು ಕುತೂಹಲದ ವಿಷಯ ಎಂದರೆ ಆಟಗಾರರ ಹರಾಜು ಪ್ರಕ್ರಿಯೆ. ಈ ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಇಂತಿಷ್ಟು ವರ್ಷ ಹರಾಜಿನಲ್ಲಿ ಪಡೆದ ಕಂಪನಿ ಅಥವಾ ತಂಡವನ್ನು ಪ್ರತಿನಿಧಿಸಿ ಆಡುವುದು ಒಂದು ಶರತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ಖ್ಯಾತ ಉದ್ಯಮಿಗಳು, ಶ್ರೀಮಂತರು, ಅಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಸಹ ತಂಡಕ್ಕೆ ಆಟಗಾರರನ್ನು ಖರೀದಿಸುವ ಪರಿಪಾಠ ನಡೆದು ಬಂದಿದೆ.
ಸಿನಿಮಾ ತಾರೆಯರಾದ ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್ ಅವರ ಸಾಲಿಗೆ ಈಗ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಸೇರಿದ್ದಾರೆ ಎಂದು ಮಾಧ್ಯಮಗಳು ಸುಳಿವು ನೀಡಿವೆ. ಕ್ರಿಕೇಟ್ ಜನಪ್ರಿಯ ಕ್ರೀಡೆಯಾಗಿ ಹಲವರಲ್ಲಿ ಉತ್ಸಾಹ ತುಂಬುತ್ತದೆ. ಕೆಲವರಲ್ಲಿ ಅಷ್ಟೇ ವ್ಯಸನವನ್ನೂ ಉಂಟು ಮಾಡುತ್ತದೆ. ಹಣ, ಕೀರ್ತಿ ಹಾಗೂ ಪ್ರತಿಷ್ಠೆಗಾಗಿ ನಡೆಸುವ ಕ್ರೀಡೆಯಾಗಿ ಐಪಿಎಲ್ ಪಂದ್ಯಾವಳಿ ಮಾರ್ಪಟ್ಟಿದೆ.
ತಾಲೂಕು ಪಂಚಾಯಿತಿ, ವೀರಶೈವ ಲಿಂಗಾಯತ,ಹಾಗೂ ಪಂಚಮಸಾಲಿ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.
ಶಿಕಾರಿಪುರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ದೀಪ ಬೆಳಗುವುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ” ಸ್ವಾತಂತ್ರ್ಯಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜಾರಮರ. ನಮ್ಮದೇ ನಾಡು, ನಮಗೆ ನಾವೇ ಸಾಮ್ರಾಟರು ಎಂದು, ಬ್ರಿಟಿಷರ ಆದೇಶವನ್ನು ಉಲ್ಲಂಘಿಸಿ ಅವರ ವಿರುದ್ಧ ಹೋರಾಡಿದವರು ರಾಣಿ ಚೆನ್ನಮ್ಮ. ಆಕೆಯ ದೇಶ ಪ್ರೇಮ, ಕರ್ತವ್ಯನಿಷ್ಠೆ, ಸಾಹಸಮಯವಾಗಿದೆ. ಜೀವನಕ್ಕೆ ಎಲ್ಲಾ ಕಾಲಕ್ಕೂ ಆದರ್ಶವಾಗಿದೆ” ಎಂದು ನುಡಿದರು. ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಕವಿರಾಜ್, ಸಿ.ಎಂ. ಸಿದ್ದೇಶ್, ಚಂದ್ರಪ್ಪ, ರುದ್ರಮುನಿ,ನೀಲಮ್ಮ,ರುದ್ರೇಶ್, ಮತ್ತಿತರರು ಉಪಸ್ಥಿತರಿದ್ದರು.
ಸೊರಬ : ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸುಳ್ಳು ಆಶ್ವಾಸನೆಗಳು ಹಾಗೂ ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದು, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸವ್ಯಕ್ತಪಡಿಸಿದರು.
ತಾಲೂಕಿನ ಕುಬಟೂರು ಗ್ರಾಮದ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಈ ಹಿಂದೆ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಆದರೆ, ಈ ಬಾರಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಇದೆ. ಜೆಡಿಎಸ್ ಅಲ್ಪ ಸಂಖ್ಯಾತರ ಮತಗಳನ್ನು ಇಬ್ಬಾಗಿಸಲು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ ವಿನಃ, ನೇರ ಸ್ಪರ್ಧೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಜನತೆ ಒಲವು ಹೊಂದಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೆದಿನ ಬರುತ್ತದೆ ಎಂದು ಮನ್ ಕೀ ಬಾತ್‍ನಲ್ಲಿ ಹೇಳುತ್ತಾರೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯ ಕುರಿತು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಾ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಸಾಲವನ್ನು ತೀರಿಸಲಾಗುತ್ತಿದೆ. ತೆರಿಗೆಯಿಂದ ಸಂಗ್ರಹವಾದ ಹಣವನ್ನು ಅಭಿವೃದ್ಧಿ ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಸಹ ಬಾಂಡ್‍ಗಳ ಮೂಲಕ ಸಾಲ ಮಾಡಲಾಗಿತ್ತು. ಪ್ರಸ್ತುತ ಒಂದು ಲಕ್ಷದ ಮೂವತ್ತು ಸಾವಿರ ಕೋಟಿ ರೂ., ಸಾಲವನ್ನು ತೀರಿಸುತ್ತೇವೆ ಎಂದು 23 ಲಕ್ಷ ಕೋಟಿ ರೂ., ಸಂಗ್ರಹಿಸಿದ್ದಾರೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‍ಗೆ 125 ರೂ., ಇತ್ತು. ಆಗ ಪೆಟ್ರೋಲ್ 69.70 ರೂ., ಹಾಗೂ ಡಿಸೇಲ್ ಬೆಲೆ 47 ರೂ., ಇತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‍ಗೆ 80 ರೂ., ಇರುವಾಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಇದರ ಜೊತೆಗೆ 414 ರೂ., ಇದ್ದ ಅಡುಗೆ ಅನಿಲದ ಬೆಲೆ 980 ರೂ., ಆಗಿದ್ದು, ಜನತೆಗೆ ಹೊರೆಯಾಗುತ್ತಿದೆ. ಈ ನಡುವೆ ಸಚಿವರೊಬ್ಬರು ತೈಲಗಳ ಬೆಲೆ ಏರಿಕೆಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದ ಎಂದ ಅವರು, ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ವಸತಿ ರಹಿತರಿಗೆ ಒಂದೇ ಒಂದು ಮನೆಯನ್ನೂ ನೀಡಿಲ್ಲ. ಈ ಕುರಿತು ಮುಖ್ಯಮಂತ್ರಿಗಳನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ ಎಂದರು.
ದೇಶದಲ್ಲಿ ಸತ್ಯವನ್ನು ನುಡಿಯಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಲಖಿಮ್‍ಪುರದಲ್ಲಿ ರೈತರ ಪ್ರತಿಭಟನೆಯ ಮೇಲೆ ಕೇಂದ್ರ ಸಚಿವರ ಪುತ್ರನ ಕಾರು ಹರಿಸಿದ ಸಂದರ್ಭದಲ್ಲಿ ರೈತರಿಗೆ ಸಾಂತ್ವಾನ ಹೇಳಲು ತೆರಳಿದ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಲಾಗುತ್ತದೆ. ಬಿಜೆಪಿಯ ವಿರುದ್ಧ ಮಾತನಾಡುವವರ ಮೇಲೆ ಐಟಿ-ಇಡಿ ದಾಳಿ ಮಾಡಿಸುವುದು. ಸತ್ಯವನ್ನು ನುಡಿದ ಮಾಧ್ಯಮಗಳಿಗೆ ನೊಟೀಸ್ ನೀಡುವುದು ಮಾಡುತ್ತಿರುವ ಬಿಜೆಪಿಗೆ ಜನತೆ ತಕ್ಕ ಉತ್ತರ ನೀಡಲಿದ್ದು, ಪ್ರಸ್ತುತ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ, ವಿಪ ಸದಸ್ಯ ಆರ್. ಪ್ರಸನ್ನ ಕುಮಾರ್, ಡಾ. ರಾಜನಂದಿನಿ, ಉಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಮಹಾದೇವಪ್ಪ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಸಿ. ಪಾಟೀಲ್, ಅಣ್ಣಪ್ಪ ಹಾಲಘಟ್ಟ, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಮಂಜುನಾಥ ಕುಬಟೂರು, ಸೇರಿದಂತೆ ಇತರರಿದ್ದರು.
ಈವರೆಗೂ ರೈಟ್ ಪರ್ಸ್‍ನ್ ರಾಂಗ್ ಪಾರ್ಟಿಯಲ್ಲಿದ್ದರು. ರಾಜ್ಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ರೈಟ್ ಪರ್ಸ್‍ನ್ ರೈಟ್ ಪಾರ್ಟಿಗೆ ಸೇರಿದಂತಾಗಿದೆ. ಕಾಂಗ್ರೆಸ್ ಎಲ್ಲಾ ನಾಯಕರಿಗೂ ಸ್ಥಾನ ಮಾನಗಳನ್ನು ನೀಡುತ್ತದೆ. ತಾವು ಈ ಹಿಂದೆ ಕಾಂಗ್ರೆಸ್ ಸೇರಿದಾಗ ಯಾವ ಹುದ್ದೆ ನೀಡುವರು ಎಂದು ಕಾರ್ಯಕರ್ತರು ಮತ್ತು ಮಾಧ್ಯಮದವರು ಪ್ರಶ್ನಿಸುತ್ತಿದ್ದರು. ಆದರೆ, ಮುಖ್ಯಮಂತ್ರಿ ಸ್ಥಾನವನ್ನೇ ನೀಡಲಿಲ್ಲವೇ ಎಂದು ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆಯ ನಂತರದ ಸ್ಥಾನಮಾನದ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಎಚ್.ಡಿ. ದೇವೇಗೌಡರು ಮಾತ್ರ ಕಟ್ಟಲಿಲ್ಲ. ನಾನು ಸೇರಿ ಅನೇಕ ನಾಯಕರು ಸೇರಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಜೆಡಿಎಸ್ ಪಕ್ಷ ಜೆಡಿಎಸ್ ಪಕ್ಷವಾಗಿ ಉಳಿದಿಲ್ಲ. ಕುಟುಂಬದ ಪಕ್ಷವಾಗಿದ್ದು ಜೆಡಿಎಫ್ ಆಗಿದೆ. ಎಫ್ ಅಂದರೆ ಫ್ಯಾಮಿಲಿ ಪಾರ್ಟಿ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಸಂವಿಧಾನದ ಬಗ್ಗೆ ಗೌರವವನ್ನು ಹೊಂದಿಲ್ಲ. ಕಾಂಗ್ರೆಸ್‍ನಿಂದ ಮಾತ್ರ ಅಹಿಂದ ಹಾಗೂ ಬಡವರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಜ್ಯಾತ್ಯಾತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಆಂತರಿಕ ಕೋಮುವಾದಿ ಪಕ್ಷ ಎಂದು ಕುಟುಕಿದರು.
ಶಿವಮೊಗ್ಗ ಸಮೀಪದ ಮಂಡಗದ್ದೆ, ತುಂಗಾ ನದಿ ತೀರದ ಪಕ್ಷಿಧಾಮ. ಈ ಪ್ರದೇಶವು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ದೇಶ-ವಿದೇಶದ ವಿವಿಧ ಜಾತಿಯ ಪಕ್ಷಿಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಅಳಿವಿನಂಚಿನಲ್ಲಿದೆ. ಗಾಜಾನೂರಿನ ತುಂಗಾ ಹಿನ್ನೀರಿನ ಕಾರಣ,ಅಣೆಕಟ್ಟು ಎತ್ತರಿಸಿದ ಪರಿಣಾಮ, ಪಕ್ಷಿಧಾಮ ಪ್ರದೇಶವು ನೀರಿನಲ್ಲಿ ಮುಳುಗಿದೆ.ಹೀಗಾಗಿ ಕಳೆದ ಇಪ್ಪತ್ತು ವರ್ಷಳಿಂದ ಅಳಿವಿನಂಚಿನಲ್ಲಿದೆ.
ಅಲ್ಲಿರುವ ಹೊಳೆಲಕ್ಕಿ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ. ಅಲ್ಲಿ ಇಟ್ಟಂತಹ ಮೊಟ್ಟೆಗಳು ಮಳೆಗಾಲದಲ್ಲಿ ನೀರಿನ ರಭಸಕ್ಕೆ ತೇಲಿ ಹೋಗುತ್ತದೆ. ಇದರಿಂದ ಹಕ್ಕಿಗಳ, ಸಂತಾನಕ್ಕೆ ಧಕ್ಕೆ ಉಂಟಾಗಿದೆ. ಪ್ರವಾಸಿ ಆಕರ್ಷಣೆಯಾಗಿದ್ದ ಮಂಡಗದ್ದೆ ಪಕ್ಷಿಧಾಮ, ಹಕ್ಕಿಗಳ ವಿರಳತೆಯಿಂದಾಗಿ ತನ್ನ ನೈಸರ್ಗಿಕ ಸೊಬಗನ್ನು ಕಳೆದುಕೊಳ್ಳುವ ಹಂತದಲ್ಲಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದ ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಕ್ಷಿಧಾಮದ ಉಳಿವಿಗೆ ಕಾಳಜಿ ವ್ಯಕ್ತ ಪಡಿಸಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷಿಧಾಮದ ಅಭಿವೃದ್ಧಿಗೆ ಅಧಿಸೂಚನೆ ಘೋಷಿಸಲು ಪ್ರವಾಸೋಧ್ಯಮ ಇಲಾಖೆಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ.
ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಪ್ರಯುಕ್ತ ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ನಮ್ಮ ನಾಡಿನ ಶ್ರೇಷ್ಠ ಮಹಿಳೆಯಾದ ಕಿತ್ತೂರು ರಾಣಿ ಚೆನ್ನಮ್ಮನ ತ್ಯಾಗ ಬಲಿದಾನವನ್ನು ನಾವು ಸದಾ ಸ್ಮರಿಸಲೇಬೇಕು. ಇವರ ಸ್ಮರಣಾರ್ಥ ಬೆಳಗಾವಿಯಿಂದ ಬೆಂಗಳೂರುವರೆಗೆ ಚೆನ್ನಮ್ಮ ಜ್ಯೋತಿ ಬೆಳಗಿಸಿದ್ದು ನನ್ನ ಸೌಭಾಗ್ಯ. ಪ್ರಸ್ತುತ ಚೆನ್ನಮ್ಮನ ಪುತ್ಥಳಿಯನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಅವರ ದೀರ್ಘ ಪ್ರಯತ್ನವನ್ನು ನೆನಪಿಗೆ ತಂದುಕೊಂಡರು. ಈಗ ತಮ್ಮ ಪಾಲಿಗೆ ರಾಣಿ ಚೆನ್ನಮ್ಮ ಜಯಂತಿ ಉತ್ಸವ ಮಹತ್ತರ ಕಾರ್ಯ ನನ್ನ ಪಾಲಿಗೆ ಬಂದಿದೆ ಎಂದರು. ಕಿತ್ತೂರು ಪ್ರಾಧಿಕಾರಕ್ಕೆ ಈ ಹಿಂದೆ 8 ಕೋಟಿ ರೂ. ನೀಡಿ ಕೆಲಸ ಪ್ರಾರಂಭಿಸಲಾಗಿತ್ತು. ಈ ವರ್ಷ 50 ಕೋಟಿ ರೂಪಾಯಿಗಳ ಕ್ರಿಯಾಯೋಜನೆ ಅನುಮೋದನೆ ನೀಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಜುಗೌಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತು ಶಿವಾನಂದ ಮುತ್ತಣ್ಣನವರ್ ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳಲ್ಲಿ ಸುಮಾರು 20 ಸಾವಿರ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಶೀಘ್ರವೇ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರವರು ತಿಳಿಸಿದ್ದಾರೆ. ಬೆಂಗಳೂರು ನಗರದ ಜೆ.ಪಿ.ನಗರ 1ನೇ ಹಂತದಲ್ಲಿ ನಿರ್ಮಿಸಲಾಗಿರುವ ಸಾರಕ್ಕಿ ಅಬ್ಬಯ್ಯ ರೆಡ್ಡಿ ಸ್ಮಾರಕ ಸರ್ಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು “ಕೋವಿಡ್ ಬಳಿಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನೂ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಯುಪಿಎಸ್ ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರಿಸಿದ್ದಾರೆ ಎಂದರು. ” ಪ್ರತಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ತಲಾ ಒಂದು ಮಾದರಿ ಶಾಲೆಗಳನ್ನು ನಿರ್ಮಿಸುವ ಗುರಿ ಇದೆ. ಕೋವಿಡ್ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರಕ್ಕೂ ಸಂಕಷ್ಟ ಎದುರಾಗಿದೆ. ಅದರಿಂದ ಹೊರಬರಲು ” ನಮ್ಮ ಶಾಲೆ, ನಮ್ಮ ಕೊಡುಗೆ ” ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಹೊಸ ಆಪ್ ಕೂಡ ಪರಿಚಯಿಸಲಿದ್ದೇವೆ” ಎಂದು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು, ಯುವ ಸಮೂಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಇದರಲ್ಲಿ ಬಹುಪಾಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶಿವಮೊಗ್ಗ ನಗರದ ಎಲ್ಲಾ ಕಡೆಗಳಲ್ಲಿಯೂ ಗಾಂಜಾ ದೊರೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಶಾಲೆಗಳು ಪ್ರಾರಂಭ ವಾಗದೇ ಇದ್ದುದ್ದರಿಂದ ಶಾಲಾ-ಕಾಲೇಜುಗಳ ಮೈದಾನದಲ್ಲಿ ಗುಂಪು-ಗುಂಪಾಗಿ ಗಾಂಜಾ ಸೇವನೆ ಮತ್ತು ಮಾರಾಟದ ಅವ್ಯಾವಹತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿದೆ. ಅಲ್ಲದೆ ಇನ್ನೂ ಅಭಿವೃದ್ಧಿಯಾಗದೇ ಇರುವ ಬಡಾವಣೆಗಳ ಖಾಲಿ ನಿವೇಶನದಲ್ಲಿ ಸಹ ಇದೇ ವಾತಾವರಣ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನಗರದ ಕೃಷಿ ಕಾಲೇಜು ಹತ್ತಿರ ಇರುವ ಬಡಾವಣೆಗಳಲ್ಲಿ ಪರಸ್ಥಳದ ವಿದ್ಯಾರ್ಥಿಗಳು ಹಾಗೂ ಯುವಕರು ಬಹು ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ. ಗಾಂಜಾ ಸೇವನೆಯ ಮತ್ತಿನಲ್ಲಿ ಯುವಕರ ಗುಂಪು ದಾರಿಹೋಕರ ಮೇಲೆ ಹಲ್ಲೆಗೈಯುತ್ತಿದೆ. ಜನರ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಪ್ರತಿಭಟಿಸಿದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಾರೆ.ಇಂತಹ ಘಟನೆಗಳು ಪ್ರತಿದಿನ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಎಲ್ಲಾ ಗಂಭೀರ ಸಂಗತಿಗಳನ್ನು ವಿಧಾನಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಶ್ರೀ ಆಯನೂರು ಮಂಜುನಾಥ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಗಮನ ಸೆಳೆದಿದ್ದಾರೆ. ಶೀಘ್ರ ಕ್ರಮ ತೆಗೆದುಕೊಳ್ಳಲುವಂತೆ ಒತ್ತಾಯಿಸಿದ್ದಾರೆ.
ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮಹಾನಗರಪಾಲಿಕೆ, ಪಶು ವೈದ್ಯಕೀಯ ಮಹಾವಿದ್ಯಾಲಯ, ಎನ್‍ಎಸ್‍ಎಸ್ ಘಟಕ, ರೋಟರಿ, ಶಿವಮೊಗ್ಗ ಪದವಿ ಪೂರ್ವ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶೀಪುರ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಅ.22 ರಂದು ಕಾಶಿಪುರದಲ್ಲಿ ಹಮ್ಮಿಕೊಳ್ಳಲಾಗಿರುವ ಸ್ವಚ್ಚ ಭಾರತ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ಉದ್ಘಾಟಿಸಿ ಮಾತನಾಡಿ, “ಸ್ವಚ್ಚ ಭಾರತದ ಕನಸು ಗಾಂಧೀಜಿಯವರ ಕಾಲದಿಂದ ಇದ್ದು, ಎಲ್ಲರೂ ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಬೇಕು. ಸ್ವಚ್ಚತೆಯು ಎಲ್ಲರ ಮನೆಗಳಿಂದ ಶುರುವಾಗಬೇಕು ” ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿಯವರು ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಪರಿಸರವನ್ನು ಸಚ್ಚವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರ ಜೊತೆಗೆ, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಿ, ರೋಗರುಜಿನಕ್ಕೆ ಕಾರಣವಾಗುತ್ತಿರುವುದರಿಂದ ಸಮರ್ಪಕ ವಿಲೇವಾರಿ” ಮಾಡಬೇಕೆಂದರು.ಮಹಾನಗರಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ್ ಮಾತನಾಡಿ ಪರಿಸರ ಜಾಗೃತಿ ಮೂಡಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಕಾಶಿಪುರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ಮತ್ತು ಜಾಗೃತಿ ಜಾಥಾ ನಡೆಸಲಾಯಿತು. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಲೆಕ್ಕಾಧಿಕಾರಿ ರಮೇಶ್, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ.ಪರಿಸರ ನಾಗರಾಜ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಕ್ಷೇತ್ರ ಪ್ರಚಾರ ಅಧಿಕಾರಿ ತುಕಾರಾಂಗೌಡ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥರಾವ್, ಕಾರ್ಯದರ್ಶಿ ಸತೀಶ್ಚಂದ್ರ, ಎನ್‍ಎಸ್‍ಎಸ್ ಅಧಿಕಾರಿಗಳಾದ ಧೂಳಪ್ಪ, ಡಾ.ವೆಂಕಟೇಶ್, ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯಕುಮಾರ್, ಪರಿಸರ ಪ್ರೇಮಿ ಟಿ.ಎಸ್.ಮಹಾದೇವಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹಾಲಾನಾಯ್ಕ್, ಯುವ ಕಾರ್ಯಕರ್ತ ಶೇಖ್ ಹಸನ್, ದುತೇಂದ್ರ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಶಿವಮೊಗ್ಗ ನಗರದಲ್ಲಿ ತಡರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ ಕಾರಣ ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ರಾಜ್ಯಾದ್ಯಂತ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆಯು ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರೊಂದಿಗೆ ಈ ಜಿಲ್ಲೆ ಗಳಲ್ಲಿ ಯಲ್ಲೊ ಅಲರ್ಟ್ ಎಚ್ಚರಿಕೆ ನೀಡಿದೆ.
ಭಾರತವು 100 ಕೋಟಿ ಕೋವಿಡ್- 19 ಲಸಿಕೆ ವಿತರಣೆಯಲ್ಲಿ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿ ಕೋವಿಡ್-19 ವಿರುದ್ಧ 100 ಕೋಟಿ ಲಸಿಕೆ ಸುರಕ್ಷಾ ಕವಚ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ಲಸಿಕೆ ತಯಾರಕರು, ಆರೋಗ್ಯ ಕಾರ್ಯಕರ್ತರು ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.