ಎಸ್ ಐ ಆರ್ ಪ್ರಕ್ರಿಯೆ ವೇಳಾಪಟ್ಟಿ ಅವಧಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ನಾಗರಿಕರು ಈ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್. ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಆವರಣದಲ್ಲಿ ಭಾರತೀಯ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026” ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
2002ರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತಂಕ ಬೇಡ:
ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳನ್ನು ನೀಡಿದ ಅವರು, ಮತದಾರರ ನೋಂದಣಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಜುಲೈ 29 ರಿಂದ ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದೆ.
2002 ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ನಿಮ್ಮ ಕುಟುಂಬದ ಸದಸ್ಯರ ಹೆಸರು ಇದ್ದಲ್ಲಿ ಅವರ ಸೂಕ್ತ ದಾಖಲೆಗಳನ್ನು ನೀಡಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಕುಟುಂಬಸ್ಥರ ಹೆಸರು 2002 ರ ಪಟ್ಟಿಯಲ್ಲಿ ಇಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ತಹಸೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಕರೆದಾಗ ಸೂಚಿತ 11 ಅಧಿಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ನೋಂದಣಿ ಮಾಡಿಕೊಳ್ಳಬಹುದು. ಈ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುವರ್ಣ ವಿ. ನಾಯಕ್, ಮುಖ್ಯ ಯೋಜನಾಧಿಕಾರಿ ಹನುಮಾ ನಾಯಕ್, ಸ್ವೀಪ್ ರಾಜ್ಯ ಮಟ್ಟದ ತರಬೇತುದಾರರಾದ ನವೀದ್ ಅಹ್ಮದ್ ಪರ್ವೇಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಸ್ ಐ ಆರ್ ಪ್ರಕ್ರಿಯೆ ವೇಳಾಪಟ್ಟಿ ಅವಧಿ ಆಗಷ್ಟ್ 8 ವರೆಗೆ ವಿಸ್ತರಣೆ
Style Dance Group ಶಿವಮೊಗ್ಗದ ಸ್ಟೈಲ್ಡಾನ್ಸ್ ಗ್ರೂಪ್ ನ ನೃತ್ಯ ಪ್ರದರ್ಶನ: ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ
Style Dance Group ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ ಆಯೋಜಿಸಿದ್ದ ವಿಶ್ವದಾಖಲೆಯ ನೃತ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ನಿರಂತರವಾಗಿ 2 ಗಂಟೆ 8 ಸೆಕೆಂಡ್‌ಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ನೋಬಲ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.
ಈ ವಿಶ್ವದಾಖಲೆ ಪ್ರಯತ್ನಕ್ಕಾಗಿ ಹಲವು ದಿನಗಳಿಂದ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿದ್ದರು ಎಂದು ಸಂಸ್ಥೆಯ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ವಿವಿಧ ಶೈಲಿಯ ನೃತ್ಯಗಳನ್ನು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕ್ರೀಡಾಂಗಣದಲ್ಲಿ ಪೋಷಕರು, ನೃತ್ಯಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಂಡವನ್ನು ಹುರಿದುಂಬಿಸಿದರು.
Style Dance Group ಕಾರ್ಯಕ್ರಮದಲ್ಲಿ ಶಾಸಕ ಧನಂಜಯ ಸರ್ಜಿ, ಉಪಾಧ್ಯಕ್ಷ ಈ ವಿಶ್ವಾಸ್ , ಕಾಯ೯ದಶಿ೯ ಸಿಂಪ್ಲೆಕ್ಸ್ ರಮೇಶ್ , ಯುವ ನಾಯಕರಾದ ಶರತ್ ಮರಿಯಪ್ಪ ,ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ನಿದೇ೯ಶಕ ಉಮೇಶ್ , ಕ್ರೀಡಾ ಇಲಾಖೆ ನಿದೇ೯ಶಕ ರೇಖ್ಯಾ ನಾಯಕ್, ನೊಬಲ್ ವಡ್೯ ರೆಕಾಡ್೯ ಸ೦ಸ್ಥೆಯ ಜಿಲ್ಲಾ ನಿದೇ೯ಶಕರಾದ ಎಸ್ ಕೃಷ್ಣಮೂತಿ೯ , ಮತ್ತು ನೃತ್ಯ ಸ೦ಸ್ಥೆಯ ಮುಖ್ಯಸ್ಥರಾದ ಶಶಿಕುಮಾರ್ , ನೃತ್ಯ ಸ೦ಸ್ಥೆಯ ವ್ಯವಸ್ಥಾಪಕರಾದ ವಿನಯ್ , ನೃತ್ಯ ನಿದೇ೯ಶಕರಾದ ಸೃಜನ್ ಉಪಸ್ಥಿತರಿದ್ದರು.
ಪ.ಜಾ/ ಪ.ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯಮ ಸ್ಥಾಪಿಸಲು ಸಹಾಯಧನ ಸೌಲಭ್ಯ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಶಿವಮೊಗ್ಗ ತಾಲೂಕು ಕಛೇರಿಯು ಈ ಸೌಲಭ್ಯವನ್ನು ಒದಗಿಸುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಘಟಕ ವೆಚ್ಚದ ಶೇ. 70 ರಷ್ಟು ಅಥವಾ ಗರಿಷ್ಠ ₹5.00 ಲಕ್ಷಗಳ ಸಹಾಯಧನ ಸಿಗಲಿದೆ.
ಪದವಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರು : 31-07-2026 ರೊಳಗೆ ಅರ್ಜಿ ಸಲ್ಲಿಸಬಹುದು.
ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ತಾಲೂಕು ಕಛೇರಿ ಇಲ್ಲಿ
ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಕಛೇರಿ ವೇಳೆಯಲ್ಲಿ ನೇರವಾಗಿ ಭೇಟಿ ನೀಡಿ ಅರ್ಜಿ ನಮೂನೆ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480843194 ಅನ್ನು ಸಂಪರ್ಕಿಸುವಂತೆ ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1), ಇವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಶ್ರೀಮತಿ ಚನ್ನಮ್ಮ ನಿಧನ
ಮಾಜಿ ಪ್ರಧಾನಿ ,ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು ನಿಧನರಾಗಿದ್ದಾರೆ.
ವಯೋಸಹಜ ಉಸಿರಾಟದ ತೊಂದರೆಯಿಂದಾಗಿ ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ವೈದ್ಯಕೀಯ ನೆರವಿಗೆ ಪ್ರತಿಸ್ಪಂದಿಸದೆ ಶ್ರೀಮತಿ ಚನ್ನಮ್ಮನವರು ಅಸು ನೀಗಿದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕರ್ನಾಟಕದ ಪ್ರಥಮ ರಾಜಕಾರಣಿ ಹಿರಿಯ ದೇವೇಗೌಡರು ಯಾವುದೇ ಅಧಿಕಾರ,
ಪ್ರತಿಷ್ಠಿತ ಸ್ಥಾಮಾನಗಳನ್ನ ಹೊಂದಿದ್ದರೂ ಶ್ರೀಮತಿ ಚನ್ನಮ್ಮನವರು ತಮ್ಮ ಸರಳತನದಿಂದಲೇ ಬಾಳುವೆ ಮಾಡಿದವರಾಗಿದ್ದರು.
ಉನ್ನತ ಹುದ್ದೆಗೆ ಬರುವ ಮುಂಚಿನದಿನಗಳಲ್ಲಿ
ಗುತ್ತಿಗೆದಾರರರಾಗಿದ್ದ ದೇವೇಗೌಡರಿಗೆ ನೈತಿಕ ಬೆಂಬಲವಾಗಿ ನಿಂತಿದ್ದರು. ಆರು ಮಕ್ಕಳತಾಯಿ, ತುಂಬು ಕುಟುಂಬದಲ್ಲಿ ಮಕ್ಕಳೆಲ್ಲರಿಗೂ ಸಮನಾದ ಮಮತೆ ತೋರಿಸಿ ಬೆಳೆಸಿದರು.
ಸಾಮಾಜಿಕವಾಗಿ ಎಲ್ಲೂ ಪ್ರತಿಷ್ಠೆ ಪ್ರದರ್ಶನಗೈಯದೇ ಎಲೆಮರೆಯಕಾಯಂತಿದ್ದರು. ರಾಜ್ಯದ ಹಲವಾರು ರಾಜಕಾರಣಿಗಳಿಗೆ ಅವರು ಉಣ್ಣಲಿಕ್ಕಿದ “ತಾಯಿ” ಯೂ ಆಗಿದ್ದರು.ಮನೆಗೆ ಬಂದವರಿಗೆ ಆಶನವಿಕ್ಕುವ ಅವರ ಸ್ವಭಾವ ಮಾದರಿಯಾಗಿತ್ತು.
ಚನ್ನಮ್ಮನವರ ನಿಧನದ ಸುದ್ದಿ ತಿಳಿದ ಕೂಡಲೇ ದೇವೇಗೌಡರ ಮತ್ತು ಚನ್ನಮ್ಮನವರ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕೈಲಾಸವಾಸಿಗಳಾದ ಚನ್ನಮ್ಮನವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜುಲೈ20 ರಂದು ನಡೆಯಲಿದೆ.
ಸಾರ್ವಜನಿಕರ ಸಮಸ್ಯೆಗೆ ರೇಡಿಯೋ ಶಿವಮೊಗ್ಗ ಎಫ್.ಎಂ.ನಲ್ಲಿ ಪ್ರತಿ ಸ್ಪಂದಿಸಿದ ಶಾಸಕ ಚೆನ್ನಿ
ಇಂದು ಶಿವಮೊಗ್ಗದ ಹೆಮ್ಮೆಯ ಜನಪ್ರಿಯ ಎಫ್.ಎಂ. ವಾಹಿನಿಯಾಗಿರುವ ‘ರೇಡಿಯೋ ಶಿವಮೊಗ್ಗ’ (Radio Shivamogga) ಆಯೋಜಿಸಿದ್ದ ವಿಶೇಷ ಲೈವ್ ಸಂವಾದ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಅತ್ಯಂತ ಸಂತಸದಿಂದ ಪಾಲ್ಗೊಂಡಿದ್ದರು.
ಈ ನೇರ ಪ್ರಸಾರ ಸಂವಾದದ ಸಂದರ್ಭದಲ್ಲಿ ಕ್ಷೇತ್ರಾದ್ಯಂತ ಪ್ರೀತಿಯ ನಾಗರೀಕರು ಕರೆ ಮಾಡಿ ತಮ್ಮ ಬಡಾವಣೆಗಳ ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಇತರೆ ದೈನಂದಿನ ನಾಗರಿಕ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಹಂಚಿಕೊಂಡರು.
ಸಾರ್ವಜನಿಕರ ಪ್ರತಿಯೊಂದು ಕರೆಯನ್ನು ಅತ್ಯಂತ ಕಾಳಜಿಯಿಂದ ಸ್ವೀಕರಿಸಿದ ಶಾಸಕ ಚೆನ್ನಿ ಅವರು ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಶೀಘ್ರವಾಗಿ ಬಗೆಹರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಾಮಾಣಿಕ ಕ್ರಮ ಕೈಗೊಳ್ಳುವ ದೃಢ ಭರವಸೆಯನ್ನು ನೀಡಿದರು.
Klive Special Article ಬರದ ನೆರಳಿನಲ್ಲಿ ಬದುಕು ಲೇ: ವೈ.ಸಿ.ಸಂಪತ್ ಕುಮಾರ್
Klive Special Article ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ತೀವ್ರವಾದ ಬರಗಾಲದ ಪರಿಸ್ಥಿತಿ ತಲೆದೋರಿದ್ದು, ಜಲಮೂಲಗಳು ಬತ್ತಿ ಹೋಗುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಜಲಸಂರಕ್ಷಣೆ ಎಂಬುದು ಕೇವಲ ಒಂದು ಘೋಷಣೆಯಾಗುಳಿಯದೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಭೂಮಿಯ ಮೇಲೆ ಅಗಾಧವಾದ ನೀರಿದ್ದರೂ, ಅದರಲ್ಲಿ ಕೇವಲ ಶೇಕಡಾ 2.5 ರಷ್ಟು ಮಾತ್ರ ಸಿಹಿನೀರು ಲಭ್ಯವಿದೆ ಎಂಬ ಕಹಿ ಸತ್ಯವನ್ನು ನಾವಿಂದು ಅರಿಯಬೇಕಾಗಿದೆ. ಈ ಲಭ್ಯವಿರುವ ಅತ್ಯಲ್ಪ ಸಿಹಿನೀರಿನ ಮೂಲಗಳನ್ನು ಸಂರಕ್ಷಿಸುವುದು ಮತ್ತು ಮರುಬಳಕೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ನೀರು ಮಾನವನ ದೇಹವನ್ನು ಮತ್ತು ಜೀವಕೋಶಗಳನ್ನು ಪೋಷಿಸಿದರೆ, ಇಂಧನವು ಮಾನವ ನಾಗರಿಕತೆ ಹಾಗೂ ಆರ್ಥಿಕತೆಯ ಚಲನಶೀಲತೆಯನ್ನು ಕಾಯ್ದುಕೊಳ್ಳುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ.
ಪ್ರಸ್ತುತ ವರ್ಷದಲ್ಲಿ ಜಾಗತಿಕ ಹವಮಾನ ವೈಪರಿತ್ಯದ ತೀವ್ರ ಸ್ವರೂಪವಾದ ‘ಎಲ್ ನಿನೊ’ (El Nino) ಪ್ರಭಾವದಿಂದಾಗಿ ನಮ್ಮ ರಾಜ್ಯದಲ್ಲಿ ಅಭೂತಪೂರ್ವ ಹವಾಮಾನ ಏರುಪೇರುಗಳು ಉಂಟಾಗಿವೆ. ವಾಡಿಕೆಯಂತೆ ಬರಬೇಕಾದ ಮಳೆಯು ಕೈಕೊಟ್ಟಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳು ಭೀಕರ ಬರಗಾಲದ ಕರಾಳ ನೆರಳಿಗೆ ತುತ್ತಾಗಿವೆ. ಜಲಾಶಯಗಳಲ್ಲಿ ನೀರಿನ ಮಟ್ಟ ತಳ ತಲುಪಿದ್ದು, ಕೃಷಿ ಕ್ಷೇತ್ರ ಮತ್ತು ದೈನಂದಿನ ಜೀವನ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಸಂಪನ್ಮೂಲಗಳಾದ ಜಲ (ನೀರು) ಮತ್ತು ಇಂಧನ (ಶಕ್ತಿ) ಸಂರಕ್ಷಣೆ ಕೇವಲ ಆಯ್ಕೆಯಾಗಿ ಉಳಿದಿಲ್ಲ, ಬದಲಿಗೆ ಅದು ನಮ್ಮ ಬದುಕಿನ ಉಳಿವಿಗಾಗಿ ಅತ್ಯಂತ ತುರ್ತಾಗಿ ಮಾಡಬೇಕಾದ ಕರ್ತವ್ಯವಾಗಿದೆ.
ಜಲ ಚಕ್ರ ಮತ್ತು ಅಂತರ್ಜಲದ ಮಹತ್ವ
ನಿಸರ್ಗವು ಜಲ ಚಕ್ರದ (Hydrological Cycle) ಮೂಲಕ ಮಳೆ, ಭಾಷ್ಪೀಕರಣ, ಮತ್ತು ಇಂಗುವಿಕೆಯ ಪ್ರಕ್ರಿಯೆಗಳಿಂದ ಜಲಮೂಲಗಳನ್ನು ಸದಾ ಜೀವಂತವಾಗಿಟ್ಟಿರುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಕೃತಿಯ ಅತಿ ದೊಡ್ಡ ಕೊಡುಗೆ ಎಂದರೆ ಅಂತರ್ಜಲದ ಪದರಗಳು (Aquifers). ಭೂಮಿಯ ಒಳಗಿರುವ ಈ ನೈಸರ್ಗಿಕ ಜಲಶೇಖರಣಾ ವ್ಯವಸ್ಥೆಯು ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಆಧಾರವಾಗಿದೆ. ಬರಗಾಲದ ಸಮಯದಲ್ಲಿ ಮೇಲ್ಮೈ ಜಲಮೂಲಗಳು ಒಣಗಿದಾಗ ನಮಗೆ ನೆರವಾಗುವುದು ಇದೇ ಅಂತರ್ಜಲ. ಆದ್ದರಿಂದ, ಮಳೆನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲವನ್ನು ಮರುಪೂರಣ ಮಾಡುವುದು ಅತಿ ಮುಖ್ಯವಾಗಿದೆ.
ವರ್ಚುವಲ್ ವಾಟರ್ (ಅಗೋಚರ ಜಲ) ಮತ್ತು ನಮ್ಮ ಜವಾಬ್ದಾರಿ
ನಾವು ದಿನನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಉತ್ಪಾದನೆಯ ಹಿಂದೆ ದೊಡ್ಡ ಪ್ರಮಾಣದ ನೀರು ವ್ಯಯವಾಗಿರುತ್ತದೆ, ಇದನ್ನು ‘ವರ್ಚುವಲ್ ವಾಟರ್’ ಅಥವಾ ಅಗೋಚರ ಜಲ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಕೃಷಿ ಉತ್ಪನ್ನಗಳು ಮತ್ತು ಉಡುಪುಗಳ ತಯಾರಿಕೆಗೆ ಅಪಾರ ಪ್ರಮಾಣದ ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆಗುರುತುಗಳು (Water Footprint) ಕಾರಣವಾಗಿರುತ್ತವೆ. ಈ ಕಾರಣದಿಂದಾಗಿ, ಯಾವುದೇ ವಸ್ತುವನ್ನು ವ್ಯರ್ಥ ಮಾಡುವ ಮುನ್ನ ಅದರ ಹಿಂದೆ ಬಳಕೆಯಾದ ನೀರಿನ ಮೌಲ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು.
ಏನಿದು ಹಸಿರು, ನೀಲಿ ಮತ್ತು ಬೂದು ಜಲದ ಹೆಜ್ಜೆಗುರುತುಗಳು (Water Footprint)?
ಹಸಿರು ನೀರು (Green Water) : ಇದು ಮಳೆಯ ಮೂಲಕ ಮಣ್ಣಿನಲ್ಲಿ ಸಂಗ್ರಹವಾಗಿ, ಗಿಡಮರಗಳು ಮತ್ತು ಬೆಳೆಗಳ ಬೆಳವಣಿಗೆಗೆ ನೇರವಾಗಿ ಬಳಕೆಯಾಗುವ ತೇವಾಂಶವಾಗಿದೆ. ಅರಣ್ಯೀಕರಣ ಮತ್ತು ಮಣ್ಣಿನ ತೇವಾಂಶ ರಕ್ಷಣೆ ಇದಕ್ಕೆ ಪೂರಕವಾಗಿದೆ.
ನೀಲಿ ನೀರು (Blue Water) : ನದಿಗಳು, ಕೆರೆಗಳು ಹಾಗೂ ಭೂಮಿಯೊಳಗಿನ ಅಂತರ್ಜಲ ಮೂಲಗಳಿಂದ ನಾವು ಕುಡಿಯಲು, ಕೃಷಿಗೆ ಮತ್ತು ಕೈಗಾರಿಕೆಗೆ ಬಳಸುವ ಸಿಹಿನೀರು ಇದಾಗಿದೆ. ಬರಗಾಲದಲ್ಲಿ ಇದರ ಮೇಲೆಯೇ ಅತಿ ಹೆಚ್ಚು ಒತ್ತಡ ಬೀಳುತ್ತದೆ.
Klive Special Article ಬೂದು ನೀರು (Grey Water) : ಮಾನವನ ಬಳಕೆಯಿಂದ ಕಲುಷಿತಗೊಂಡ ನೀರನ್ನು ಮರುಬಳಕೆಗೆ ಯೋಗ್ಯವಾಗಿಸಲು ಬೇಕಾಗುವ ಸಿಹಿನೀರಿನ ಪ್ರಮಾಣವನ್ನು ಇದು ಸೂಚಿಸುತ್ತದೆ. ತ್ಯಾಜ್ಯನೀರಿನ ವೈಜ್ಞಾನಿಕ ನಿರ್ವಹಣೆ ಇದರ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಸಮಗ್ರ ಜಲಸಂಪನ್ಮೂಲ ಅಭಿವೃದ್ಧಿ (Integrated Water Resource Development) :
ಬರಗಾಲದ ದೀರ್ಘಕಾಲೀನ ನಿಯಂತ್ರಣಕ್ಕಾಗಿ ಕೇವಲ ನೀರನ್ನು ಉಳಿಸುದಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಮಳೆನೀರು ಕೊಯ್ಲು, ಮೇಲ್ಮೈ ಜಲಮೂಲಗಳಾದ ಕೆರೆ-ನದಿಗಳ ಹೂಳೆತ್ತುವುದು ಮತ್ತು ಅಂತರ್ಜಲದ ಮರುಪೂರಣವನ್ನು ಸಮಾನವಾಗಿ ಕೈಗೊಳ್ಳಬೇಕು. ಇವೆಲ್ಲವು ಜಲ ಸಂರಕ್ಷಣೆಯ ವಿಧಗಳಾಗಿವೆ.
ಸಂಸ್ಕರಣೆ ಮತ್ತು ಪೂರೈಕೆ : ಬಳಸಿದ ನೀರನ್ನು ಗಡಸು ನೀರು (Wastewater) ಸಂಸ್ಕರಣಾ ಘಟಕಗಳ ಮೂಲಕ ಶುದ್ಧೀಕರಿಸಿ ಮರುಪರಿಚಲನೆಗೆ ತರಬೇಕು.
ಸಮುದಾಯದ ಪಾಲ್ಗೊಳ್ಳುವಿಕೆ (Stakeholder Engagement) : ಸರ್ಕಾರದ ನೀತಿಗಳು ಮತ್ತು ನಿಯಮಗಳμÉ್ಟೀ ಅಲ್ಲದೆ ಸಾರ್ವಜನಿಕರು, ರೈತರು ಮತ್ತು ಕೈಗಾರಿಕೋದ್ಯಮಿಗಳು ಒಟ್ಟಾಗಿ ಜಲಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು.
ದೈನಂದಿನ ಜೀವನದಲ್ಲಿ ಅಳವಡಿಸಬಹುದಾದ ಸೂಕ್ಷ್ಮ ಬದಲಾವಣೆಗಳು :
ಗೃಹ ಬಳಕೆಯಲ್ಲಿ ಜಾಗೃತಿ : ಬಟ್ಟೆ ತೊಳೆಯುವ ಯಂತ್ರ (Washing Machine) ಹಾಗೂ ಪಾತ್ರೆ ತೊಳೆಯುವ ಯಂತ್ರಗಳನ್ನು ಅವುಗಳ ಸಂಪೂರ್ಣ ಸಾಮಥ್ರ್ಯಕ್ಕೆ ತಕ್ಕಂತೆ ಬಟ್ಟೆ/ಪಾತ್ರೆಗಳು ಸೇರಿದಾಗ ಮಾತ್ರ ಚಾಲನೆ ಮಾಡಬೇಕು. ಇದರಿಂದ ನೂರಾರು ಲೀಟರ್ ನೀರು ಉಳಿತಾಯವಾಗುತ್ತದೆ. ಅಲ್ಲದೇ ಒಮ್ಮೆ ಬಳಸಿದ ನೀರನ್ನು ತರಕಾರಿ ತೊಳೆಯಲು, ಗಿಡಗಳಿಗೆ ಉಣಿಸಲು ಅಥವಾ ಶೌಚಾಲಯಗಳಲ್ಲಿ ಮರುಬಳಕೆ ಮಾಡಬೇಕು. ಕೈಗಾರಿಕೆ ಮತ್ತು ಕೃಷಿ ವಲಯದಲ್ಲಿ ಸಂಸ್ಕರಿಸಿದ ತ್ಯಾಜ್ಯನೀರನ್ನು ಬಳಸುವುದರಿಂದ ತಾಜಾ ಸಿಹಿನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಸ್ನಾನದ ಪದ್ಧತಿ : ಶವರ್‍ಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ, ಮಿತವಾಗಿ ನೀರನ್ನು ಬಳಸುವುದರಿಂದ ದೈನಂದಿನ ಜಲ ವ್ಯಯವನ್ನು ತಡೆಯಬಹುದು.
ಬರಗಾಲ ನಿರ್ವಹಣೆಗೆ ಜಲಸಂರಕ್ಷಣೆಯ ತಂತ್ರಗಳು :
ನಮ್ಮ ಭೂಮಿಯ ಮೇಲಿನ ಒಟ್ಟು ಜಲಸಂಪನ್ಮೂಲದಲ್ಲಿ ಶೇಕಡಾ 96.5 ರಷ್ಟು ಭಾಗ ಸಮುದ್ರದ ಉಪ್ಪು ನೀರಾಗಿದ್ದು, ಸಿಹಿನೀರಿನ ಪ್ರಮಾಣ ಅತ್ಯಲ್ಪ ಇರುವುದರಿಂದ, ಪ್ರತಿ ಹನಿಯೂ ಅಮೂಲ್ಯವಾಗಿದೆ. ಬರಗಾಲವನ್ನು ಗೆಲ್ಲಲು ಜಲಸಂರಕ್ಷಣೆಯೇ ಏಕೈಕ ಮಾರ್ಗವಾಗಿದೆ.
ರಾಜ್ಯದಲ್ಲಿ ತಲೆದೂರಿರುವ ಈ ಭೀಕರ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಕೆಳಗಿನ ಸರಳ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
ಮಳೆನೀರು ಕೊಯ್ಲು ಮತ್ತು ಇಂಗುಗುಂಡಿಗಳು : ಮನೆಯ ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯನ್ನು ಸಂಗ್ರಹಿಸಬೇಕು ಅಥವಾ ಇಂಗುಗುಂಡಿಗಳ ಮೂಲಕ ಅಂತರ್ಜಲಕ್ಕೆ ಸೇರಿಸಬೇಕು.
ಆಧುನಿಕ ನೀರಾವರಿ ಪದ್ಧತಿ : ಕೃಷಿಯಲ್ಲಿ ಸಾಂಪ್ರದಾಯಿಕವಾಗಿ ನೀರು ಹರಿಸುವ ಬದಲಿಗೆ ಹನಿ ನೀರಾವರಿ (Drip Irrigation) ಮತ್ತು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಗರಿಷ್ಠ ನೀರನ್ನು ಉಳಿಸಬಹುದು.
ದೈನಂದಿನ ಜೀವನದಲ್ಲಿ ಜಾಗೃತಿ : ನಲ್ಲಿಗಳಲ್ಲಿ ಸೋರುವಿಕೆಯನ್ನು ತಕ್ಷಣವೇ ಸರಿಪಡಿಸಬೇಕು, ಹಲ್ಲುಜ್ಜುವಾಗ ಅಥವಾ ಮುಖ ತೊಳೆಯುವಾಗ ನಲ್ಲಿಯನ್ನು ಅನಗತ್ಯವಾಗಿ ತೆರೆದಿಡಬಾರದು. ಗಿಡಗಳಿಗೆ ಮುಂಜಾನೆ ಅಥವಾ ಸಂಜೆ ವೇಳೆ ನೀರು ಹರಿಸುವುದರಿಂದ ಭಾಷ್ಪೀಕರಣದಿಂದ ವ್ಯರ್ಥವಾಗುವ ನೀರನ್ನು ತಡೆಯಬಹುದು.
ತಂತ್ರಜ್ಞಾನದ ಬಳಕೆ : ಆಧುನಿಕ ಡಿಜಿಟಲ್ ವಾಟರ್ ಮೀಟರ್‍ಗಳು ಮತ್ತು ಕಡಿಮೆ ನೀರು ಬಳಸುವ ನಲ್ಲಿಗಳ (Low-flow fixtures) ಅಳವಡಿಕೆಯಿಂದ ನೀರಿನ ಬಳಕೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು.
ನೀರು ಕೇವಲ ಜೀವ ಜಗತ್ತಿನ ಉಸಿರಷ್ಟೇ ಅಲ್ಲ, ಅದು ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆಯ ಮೂಲಾಧಾರವಾಗಿದೆ. ಬರಗಾಲವು ನಮಗೆ ನಿಸರ್ಗ ನೀಡುತ್ತಿರುವ ಎಚ್ಚರಿಕೆಯ ಗಂಟೆಯಾಗಿದೆ. ಇಂದಿನ ಜಲಕ್ಷಾಮದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ನಾಗರಿಕನೂ ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸುವ ಸಂಕಲ್ಪ ಮಾಡಬೇಕಾಗಿದೆ. ನೆನಪಿಡಿ, ಇಂದು ನಾವು ಉಳಿಸುವ ಪ್ರತಿಯೊಂದು ನೀರಿನ ಹನಿಯೂ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ.
ಇಂಧನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಬ್ದಾರಿ
ಇಂದು ನಾವು ಎದುರಿಸುತ್ತಿರುವ ಭೀಕರ ಬರಗಾಲವು ಕೇವಲ ನೀರಿನ ಅಭಾವವನ್ನು ಮಾತ್ರವಲ್ಲದೆ, ಇಂಧನ ಮತ್ತು ವಿದ್ಯುತ್ ಬಿಕ್ಕಟ್ಟನ್ನೂ ಸೃಷ್ಟಿಸಿದೆ. ಜಲವಿದ್ಯುತ್ ಉತ್ಪಾದನೆ ಕುಂಠಿತಗೊಂಡಿರುವುದರಿಂದ, ಇಂಧನವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಂಧನ ಸಂರಕ್ಷಣೆ ಎಂದರೆ ಕೇವಲ ಹಣ ಉಳಿಸುವುದಲ್ಲ, ಅದು ದೇಶದ ಸಂಪನ್ಮೂಲವನ್ನು ಕಾಯ್ದಿರಿಸುವುದು ಮತ್ತು ಪರಿಸರವನ್ನು ರಕ್ಷಿಸುವುದಾಗಿದೆ.
ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ವೇಗವಾಗಿ ಬಳಸುತ್ತಿದ್ದೇವೆ ಎಂಬುದಕ್ಕೆ ‘ಅರ್ಥ್ ಓವರ್‍ಶೂಟ್ ಡೇ’ ಒಂದು ಪ್ರಮುಖ ಜಾಗತಿಕ ಸೂಚಕವಾಗಿದೆ. ಇಡೀ ವರ್ಷದಲ್ಲಿ ಭೂಮಿಯು ಮರು ಉತ್ಪತ್ತಿ ಮಾಡಬಹುದಾದ ಒಟ್ಟು ಸಂಪನ್ಮೂಲಗಳನ್ನು ಮಾನವ ಕುಲವು ಆ ವರ್ಷದ ಯಾವ ದಿನಾಂಕದ ವೇಳೆಗೆ ಸಂಪೂರ್ಣವಾಗಿ ಬಳಸಿ ಮುಗಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಸಂಪನ್ಮೂಲಗಳ ಅತಿಯಾದ ಬಳಕೆ : ಪ್ರಸ್ತುತ ಜಾಗತಿಕವಾಗಿ ಮಾನವಕುಲವು ಪ್ರಕೃತಿಯ ಪುನರುತ್ಪಾದನಾ ಸಾಮಥ್ರ್ಯಕ್ಕಿಂತ ಶೇಕಡಾ 80 ರಷ್ಟು ವೇಗವಾಗಿ ಸಂಪನ್ಮೂಲಗಳನ್ನು ಬಳಸುತ್ತಿದೆ. ಅಂದರೆ ನಾವು ಬದುಕಲು ಪ್ರಸ್ತುತ 1.8 ಭೂಮಿಗಳ (1.8 Earths) ಅಗತ್ಯವಿದೆ.
ನಮ್ಮ ದೇಶದಲ್ಲಿ ಇಂದಿಗೂ ಹೆಚ್ಚಿನ ವಿದ್ಯುತ್ ಅನ್ನು ಕಲ್ಲಿದ್ದಲು ಮತ್ತು ಅನಿಲದಂತಹ ಇಂಧನಗಳನ್ನು ಬಳಸಿ (ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ) ಉತ್ಪಾದಿಸಲಾಗುತ್ತದೆ. ಬರಗಾಲದ ಸಮಯದಲ್ಲಿ ಜಲವಿದ್ಯುತ್ ಕೊರತೆಯನ್ನು ನೀಗಿಸಲು ಈ ಇಂಧನಗಳ ಮೇಲೆ ಒತ್ತಡ ಹೆಚ್ಚುತ್ತದೆ.
ಇಂಧನ ಸಂರಕ್ಷಣೆ (Energy Conservation): ಮಹತ್ವ ಮತ್ತು ಲಾಭಗಳು :
ಇಂಧನ ಸಂರಕ್ಷಣೆ ಎಂದರೆ ದಕ್ಷ ತಂತ್ರಜ್ಞಾನಗಳು, ಜವಾಬ್ದಾರಿಯುತ ನಡವಳಿಕೆ ಹಾಗೂ ಆಪ್ಟಿಮೈಸ್ಟ್ ಪ್ರಕ್ರಿಯೆಗಳ ಮೂಲಕ ಇಂಧನದ ಅನಗತ್ಯ ಬಳಕೆಯನ್ನು ಕಡಿಮೆ ಮಾಡುವುದಾಗಿದೆ. ಇದರಿಂದ ಮೂರು ಪ್ರಮುಖ ವಲಯಗಳಲ್ಲಿ ಅಪಾರ ಲಾಭಗಳಿವೆ.
ಪರಿಸರ ಸಂಬಂಧಿ ಲಾಭಗಳು (Environmental Benefits) : ಹಸಿರುಮನೆ ಅನಿಲಗಳ (GHG) ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ವಾಯು ಮಾಲಿನ್ಯವನ್ನು ನಿಯಂತ್ರಿಸಿ, ಶುದ್ಧ ಗಾಳಿಯನ್ನು ಒದಗಿಸುತ್ತದೆ. ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲದಂತಹ ಸೀಮಿತ ಪಳೆಯುಳಿಕೆ ಇಂಧನ ಮೀಸಲುಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸುತ್ತದೆ.
ಆರ್ಥಿಕ ಲಾಭಗಳು (Economic Benefits) : ಗೃಹಬಳಕೆ ಮತ್ತು ಕೈಗಾರಿಕೆಗಳಲ್ಲಿ ವಿದ್ಯುತ್ ಹಾಗೂ ಇಂಧನ ವೆಚ್ಚಗಳನ್ನು ನೇರವಾಗಿ ತಗ್ಗಿಸುತ್ತದೆ. ಉದ್ಯಮಗಳಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿ, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಸಾಮಾಜಿಕ ಲಾಭಗಳು (Social Benefits) : ದೇಶದ ಇಂಧನ ಭದ್ರತೆ ಮತ್ತು ಸ್ವಾವಲಂಬನೆಯನ್ನು ಸುಧಾರಿಸುತ್ತದೆ. ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರೋಗ್ಯಕರ ಪರಿಸರವನ್ನು ನಿರ್ಮಿಸುತ್ತದೆ.
ನೆಟ್ ಝೀರೋ ಎನರ್ಜಿ (Net Zero Energy) ಮತ್ತು ಭಾರತದ ಗುರಿಗಳು :
ಒಂದು ಕಟ್ಟಡ ಅಥವಾ ಸೌಲಭ್ಯವು ವಾರ್ಷಿಕವಾಗಿ ತನಗೆ ಬೇಕಾದಷ್ಟು ನವೀಕರಿಸಬಹುದಾದ ಇಂಧನವನ್ನು ಸ್ವತಃ ತಾನೇ ಉತ್ಪಾದಿಸಿ, ಹೊರಗಿನಿಂದ ಪಡೆಯುವ ಇಂಧನದ ಪ್ರಮಾಣವನ್ನು ಶೂನ್ಯವಾಗಿಸುವುದನ್ನು ‘ನೆಟ್ ಝೀರೋ ಎನರ್ಜಿ’ (NZE) ಎನ್ನಲಾಗುತ್ತದೆ.
ಭಾರತ ಸರ್ಕಾರವು ತನ್ನ ಹವಾಮಾನ ಕ್ರಿಯೆಯ ಅಂಗವಾಗಿ ‘ಪಂಚಾಮೃತ’ (Panchamrit) ತತ್ವಗಳನ್ನು ಅಳವಡಿಸಿಕೊಂಡಿದ್ದು, 2030 ರ ವೇಳೆಗೆ 500 GW ಪಳೆಯುಳಿಕೆಯೇತರ (Non-Fossil) ಇಂಧನ ಸಾಮಥ್ರ್ಯ ಸಾಧಿಸುವುದು. ಹಾಗೂ ದೇಶದ ಒಟ್ಟು ಇಂಧನ ಅಗತ್ಯದ ಶೇಕಡಾ 50 ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ (Renewable Sources) ಪಡೆಯುವುದು. ಕಾರ್ಬನ್ ತೀವ್ರತೆಯನ್ನು ಶೇಕಡಾ 45 ಕ್ಕಿಂತ ಕಡಿಮೆ ಮಾಡುವುದು ಮತ್ತು 2070 ರ ವೇಳೆಗೆ ಸಂಪೂರ್ಣವಾಗಿ ನೆಟ್-ಝೀರೋ (Net-Zero) ಇಂಗಾಲದ ಹೊರಸೂಸುವಿಕೆಯನ್ನು ತಲುಪುವ ಗುರಿಗಳನ್ನು ಹೊಂದಿದೆ:
ಇಂಧನ ಸಂರಕ್ಷಣಾ ಕ್ರಮಗಳು :
ಬರಗಾಲದ ಆರ್ಥಿಕ ಹೊರೆ ಮತ್ತು ಪರಿಸರದ ತಾಪಮಾನ ಏರಿಕೆಯನ್ನು ತಡೆಯಲು ಇಂಧನ (ಪೆಟ್ರೋಲ್/ಡೀಸೆಲ್) ಉಳಿಸುವುದು ಅನಿವಾರ್ಯ.
ಬಳಕೆಯಲ್ಲಿಲ್ಲದ ವಿದ್ಯುತ್ ಉಪಕರಣಗಳನ್ನು ಕಡ್ಡಾಯವಾಗಿ ಆಫ್ ಮಾಡಿ :
ಬಳಕೆಯಲ್ಲಿಲ್ಲದಿದ್ದಾಗ ವಿದ್ಯುತ್ ದೀಪಗಳು, ಫ್ಯಾನ್‍ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಡ್ಡಾಯವಾಗಿ ಆಫ್ ಮಾಡಿ. ಹಳೆಯ ಪ್ರಕಾಶಮಾನ ಬಲ್ಬುಗಳ ಬದಲಿಗೆ ಅತ್ಯಂತ ಕಡಿಮೆ ವಿದ್ಯುತ್ ಬಳಸುವ LED ಬಲ್ಬುಗಳನ್ನು ಬಳಸಿ. ಹಗಲಿನ ವೇಳೆಯಲ್ಲಿ ನೈಸರ್ಗಿಕ ಸೂರ್ಯನ ಬೆಳಕು ಮತ್ತು ಗಾಳಿಯ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಿ. ಹವಾನಿಯಂತ್ರಣಗಳ (AC) ತಾಪಮಾನವನ್ನು ಯಾವಾಗಲೂ 24 ಡಿಗ್ರಿಯಿಂದ 26ರ ನಡುವೆ ಇರಿಸಿ. ರೆಫ್ರಿಜರೇಟರ್‍ಗಳ ಬಾಗಿಲನ್ನು ಅನಗತ್ಯವಾಗಿ ತೆರೆದಿಡಬೇಡಿ ಮತ್ತು ಅವುಗಳನ್ನು ನಿಯಮಿತವಾಗಿ ಸುಸ್ಥಿತಿಯಲ್ಲಿ ನಿರ್ವಹಿಸಿ.
ವಿದ್ಯುತ್ ಉಪಕರಣಗಳ ಖರೀದಿ- ದಕ್ಷತೆಗೆ ಅದ್ಯತೆ ನೀಡಿ :
ವಿದ್ಯುತ್ ಉಪಕರಣಗಳನ್ನು ಖರೀದಿಸುವಾಗ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ನೀಡುವ ಸ್ಟಾರ್ ಲೇಬಲ್‍ಗಳನ್ನು ಗಮನಿಸುವುದು ಅತ್ಯಗತ್ಯ. ಹೆಚ್ಚಿನ ಸ್ಟಾರ್ ರೇಟಿಂಗ್ ಇದ್ದಷ್ಟೂ ವಿದ್ಯುತ್ ಉಳಿತಾಯ ಹೆಚ್ಚಾಗಿರುತ್ತದೆ. ವಾರ್ಷಿಕ ಇಂಧನ ಬಳಕೆ (AEC) ಕಡಿಮೆ ಇದ್ದಷ್ಟೂ ಮತ್ತು ಏರ್ ಕಂಡೀಷನರ್‍ಗಳಲ್ಲಿ ISEER ರೇಟಿಂಗ್ ಹೆಚ್ಚಿನ ಮಟ್ಟದಲ್ಲಿದ್ದಷ್ಟೂ ಇಂಧನ ದಕ್ಷತೆ ಉತ್ತಮವಾಗಿರುತ್ತದೆ.
ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ :
ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಗಳಾದ ಬಸ್ ಅಥವಾ ಮೆಟ್ರೋ ಬಳಕೆಗೆ ಆದ್ಯತೆ ನೀಡಬೇಕು. ಒಂದೇ ಕಡೆ ಕೆಲಸಕ್ಕೆ ಹೋಗುವವರು ಒಟ್ಟಿಗೆ ಒಂದೇ ವಾಹನದಲ್ಲಿ ಪ್ರಯಾಣಿಸುವುದರಿಂದ ಇಂಧನ ಮತ್ತು ಹಣ ಎರಡೂ ಉಳಿಯುತ್ತದೆ. ಟ್ರಾಫಿಕ್ ಸಿಗ್ನಲ್‍ಗಳಲ್ಲಿ 30 ಸೆಕೆಂಡ್‍ಗಿಂತ ಹೆಚ್ಚು ಕಾಯಬೇಕಾಗಿ ಬಂದಾಗ ವಾಹನದ ಎಂಜಿನ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
ಅಡುಗೆ ಮನೆಯಲ್ಲಿ ಇಂಧನ ಬಳಕೆಯ ಬಗ್ಗೆ ನಿಗಾವಹಿಸಿ :
ನಮ್ಮ ದೈನಂದಿನ ಜೀವನದಲ್ಲಿ ಅಡುಗೆ ಅನಿಲ (LPG) ಪ್ರಮುಖ ಇಂಧನವಾಗಿದೆ. ಇದನ್ನು ವ್ಯವಸ್ಥಿತವಾಗಿ ಬಳಸುವ ಮೂಲಕ ಉಳಿತಾಯ ಮಾಡಬಹುದು. ಪ್ರೆಶರ್ ಕುಕ್ಕರ್ ಬಳಸುವುದರಿಂದ ಅಡುಗೆಯನ್ನು ಬೇಗನೆ ಬೇಯಿಸುವುದಲ್ಲದೆ, ಶೇಕಡಾ 30 ರಷ್ಟು ಗ್ಯಾಸ್ ಉಳಿತಾಯ ಮಾಡಬಹುದಾಗಿದೆ. ಅಡುಗೆಗೆ ಮುನ್ನ ತರಕಾರಿ ಹೆಚ್ಚುವುದು, ಮಸಾಲೆ ಅರೆಯುವುದು ಮುಂತಾದ ಕೆಲಸಗಳನ್ನು ಮೊದಲೇ ಮುಗಿಸಿ, ನಂತರ ಒಲೆ ಹಚ್ಚಿ. ಅಡುಗೆ ಮಾಡುವಾಗ ಪಾತ್ರೆಗಳನ್ನು ಮುಚ್ಚಿಡುವುದರಿಂದ ಶಾಖ ವ್ಯರ್ಥವಾಗುವುದಿಲ್ಲ.
ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ :
ಬರಗಾಲದ ಸಮಯದಲ್ಲಿ ಸೂರ್ಯನ ತಾಪ ಹೆಚ್ಚಿರುತ್ತದೆ. ಈ ಸೌರಶಕ್ತಿಯನ್ನು (Solar Energy) ನಮಗೆ ಪೂರಕವಾಗಿ ಬಳಸಿಕೊಳ್ಳಬಹುದು. ಮನೆಗಳ ಮೇಲೆ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ರೂಫ್‍ಟಾಪ್ ಅಳವಡಿಸುವುದರಿಂದ ವಿದ್ಯುತ್ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಬರಗಾಲದ ಈ ಕಠಿಣ ದಿನಗಳಲ್ಲಿ “ಇಂದಿನ ಉಳಿತಾಯವೇ ನಾಳಿನ ಇಂಧನ” ಎಂಬ ಮಂತ್ರವನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ. ಸಣ್ಣ ಬದಲಾವಣೆಗಳು ದೊಡ್ಡ ಬದಲಾವಣೆಗೆ ನಾಂದಿಯಾಗಬಲ್ಲವು.
ಎಲ್ ನಿನೊ ಹಾಗೂ ಬರಗಾಲದಂತಹ ಪ್ರಕೃತಿಯ ಸವಾಲುಗಳು ನಮ್ಮ ಮುಂದಿರುವಾಗ, ನಾವು ನಮ್ಮ ದೈನಂದಿನ ನಡವಳಿಕೆಯಲ್ಲಿ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯವಾಗಿದೆ. ಜಲ ಮತ್ತು ಇಂಧನವನ್ನು ವ್ಯರ್ಥ ಮಾಡುವುದು ದೇಶದ ಪ್ರಗತಿ ಹಾಗೂ ಪರಿಸರಕ್ಕೆ ದ್ರೋಹ ಬಗೆದಂತೆ. ನಾವೆಲ್ಲರೂ ಇಂದಿನಿಂದಲೇ ಜವಾಬ್ದಾರಿಯುತವಾಗಿ ಸಂಪನ್ಮೂಲಗಳನ್ನು ಬಳಸಿ, ನಮ್ಮ ಮುಂದಿನ ಪೀಳಿಗೆಗೆ ಸುಸ್ಥಿರ ಹಾಗೂ ಹಸಿರು ಭವಿಷ್ಯವನ್ನು ಉಡುಗೊರೆಯಾಗಿ ನೀಡಲು ಸಂಕಲ್ಪ ಮಾಡೋಣ.
ವಿಶೇಷ ಲೇಖನ- ವೈ.ಸಿ. ಸಂಪತ್ ಕುಮಾರ್
ಮುಖ್ಯ ವರದಿಗಾರರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೆಂಗಳೂರು.
ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ವಿನೂತನ ” ಪಾಡ್ ಕಾಸ್ಟ್ ” ಕಾರ್ಯಕ್ರಮ
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜುಲೈ 17 ರಂದು ಇನ್ಸ್ಪೈರ್(Inspire’) ಇಗ್ನೈಟ್ ಮೈಂಡ್ ಅಂಡ್ ಇಗ್ನೈಟ್ ಪಾಸಿಟಿವಿಟಿ ಎಂಬ ಘೋಷವಾಕ್ಯದೊಂದಿಗೆ ವಿನೂತನ ಆನ್‌ಲೈನ್ ಪಾಡ್‌ಕಾಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಲ್ಕು ಕಲ್ಯಾಣ ಇಲಾಖೆಗಳ 114 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳ ಸುಮಾರು 9,235 ಪಿಯುಸಿ, ಪದವಿ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಡಿಯೋ ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಾಂತಪ್ಪ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು:
ಪದವಿ ಹಂತದಲ್ಲೇ ಸಿದ್ಧತೆ: ವಿದ್ಯಾರ್ಥಿಗಳು ಪ್ರಥಮ ಪದವಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು.
ದೀರ್ಘಕಾಲದವರೆಗೆ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ 3 ಗಂಟೆಯ ನಂತರ ಸ್ವಲ್ಪ ವಿರಾಮ ತಗೆದುಕೊಂಡು ಓದುವುದರ ಅಗತ್ಯತೆಯನ್ನು ತಿಳಿಸಿದರು.
ಗುಂಪು ಅಧ್ಯಯನ ಹಾಗೂ ತರಬೇತಿ: ಗ್ರೂಪ್ ಸ್ಟಡಿ (ಗುಂಪು ಅಧ್ಯಯನ) ಮತ್ತು ಆನ್‌ಲೈನ್ ಕೋಚಿಂಗ್‌ನ ಮಹತ್ವ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆ ಮತ್ತು ಶಿಸ್ತುಪಾಲನೆ ಹೇಗಿರಬೇಕು, ನೆಗೆಟಿವ್ ಮಾರ್ಕಿಂಗ್ ಇರುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ ಮತ್ತು ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಳಸಿಕೊಳ್ಳುವ ವಿಧಾನಗಳ ಬಗ್ಗೆಯೂ ಈ ಕಾರ್ಯಕ್ರಮದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ವಿಶೇಷ ಆನ್‌ಲೈನ್ ಪಾಡ್‌ಕಾಸ್ಟ್ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್ ಹೇಮಂತ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ ಎಸ್. ಜಿ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶೋಭಾ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ರಾಘವೇಂದ್ರ ಅವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
D.K. Shivakumar ಬರದ ಬಿಕ್ಕಟ್ಟು: ರಾಜ್ಯದ ಯಾವುದೇ ಒಬ್ಬ ನಾಗರಿಕ ಅಥವಾ ಮೂಕ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಿ- ಡಿ.ಕೆ.ಶಿವಕುಮಾರ್
D.K. Shivakumar ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಬರ ಪರಿಸ್ಥಿತಿ, ಮಳೆಗಾಲ, ಕುಡಿಯುವ ನೀರು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು.
ನೈಋತ್ಯ ಮುಂಗಾರು ನಮಗೆ ತೀವ್ರವಾಗಿ ಕೈಕೊಟ್ಟಿದೆ. ಪ್ರಸ್ತುತ ಮುಂಗಾರು ಬಿತ್ತನೆ ಗುರಿಯು ಕೇವಲ ಶೇಕಡಾ 34 ರಷ್ಟು ಮಾತ್ರ ತಲುಪಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ವ್ಯಾಪಕ ಬೆಳೆ ಹಾನಿಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಶೇಕಡಾ 34 ರಷ್ಟಕ್ಕೆ ಕುಸಿದಿದ್ದು, ಅಂತರ್ಜಲ ಮಟ್ಟವೂ ಸಹ ತೀವ್ರವಾಗಿ ಆಳಕ್ಕೆ ಕುಸಿಯುತ್ತಿದೆ ಎಂದರು.
ರಾಜ್ಯದ ಯಾವುದೇ ಒಬ್ಬ ನಾಗರಿಕನಿಗೆ ಅಥವಾ ಮೂಕ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಪರಮೋಚ್ಚ ಕರ್ತವ್ಯವಾಗಿದೆ. ಇಡೀ ಆಡಳಿತ ಯಂತ್ರವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ಲೋಪದೋಷಗಳಾದರೆ ಅದಕ್ಕೆ ನೇರವಾಗಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
ತುರ್ತು ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯೇ ಇಲ್ಲ. ನಿಮ್ಮ ಜಿಲ್ಲೆಗಳಿಗೆ ಅಗತ್ಯವಿರುವ ಹಣವನ್ನೂ ಕೊಟ್ಟಿದ್ದೇವೆ ಮತ್ತು ನಿರ್ಣಯ ಕೈಗೊಳ್ಳುವ ಅಧಿಕಾರವನ್ನೂ ನೀಡಿದ್ದೇವೆ. ಹಾಗಾಗಿ ಯಾವುದೇ ನೆಪವಿಲ್ಲದೇ, ತಳಮಟ್ಟದಲ್ಲಿ ಕೆಲಸದ ಪ್ರತ್ಯಕ್ಷ ರಿಸಲ್ಟ್‌ಗಳು ಮಾತ್ರ ಬೇಕು. ಎಲ್ಲಾ ಪರಿಹಾರ ಕ್ರಮಗಳಲ್ಲಿ ಶೇ. 100 ರಷ್ಟು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಬರ ಪರಿಸ್ಥಿತಿಯ ವೈಜ್ಞಾನಿಕ ಅಧ್ಯಯನಕ್ಕಾಗಿ ಕೇಂದ್ರದ ತಂಡವನ್ನು ತಕ್ಷಣವೇ ಕಳುಹಿಸುವಂತೆ ಮತ್ತು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
ಸಣ್ಣ ಮತ್ತು ಅತಿ ಸಣ್ಣ ರೈತರ ಸಂಪೂರ್ಣ ವಿವರಗಳನ್ನು ‘ಫ್ರೂಟ್ಸ್’ (FRUITS) ತಂತ್ರಾಂಶದ ಮೂಲಕ ಸಿದ್ಧವಾಗಿಟ್ಟುಕೊಂಡು, ಪ್ರತಿಯೊಂದು ಪರಿಹಾರವೂ ತಳಮಟ್ಟದ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಥವಾ ತಾಂತ್ರಿಕ ಲೋಪದಿಂದ ಯಾವುದೇ ಒಬ್ಬ ರೈತನಿಗೆ ಬೆಳೆವಿಮೆ ಸಿಗದೆ ಇರುವುದು ಅಥವಾ ಪರಿಹಾರ ವಂಚಿತವಾಗುವ ಸ್ಥಿತಿ ಉದ್ಭವಿಸಲೇಬಾರದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ಮಾಡಿಸುವಂತೆ ಪ್ರೇರೇಪಿಸಿ ಹಾಗೂ ಬೆಳೆಹಾನಿ ಸಮೀಕ್ಷೆಯನ್ನು ನಿಯಮಾನುಸಾರ ತಕ್ಷಣವೇ ಪೂರ್ಣಗೊಳಿಸಿ ಎಂದು ಹೇಳಿದರು.
ನಮ್ಮ ಮೊದಲ ಮತ್ತು ಪ್ರಧಾನ ಆದ್ಯತೆ ಕುಡಿಯುವ ನೀರು. ರಾಜ್ಯದ ಯಾವುದೇ ಹಳ್ಳಿ ಅಥವಾ ನಗರದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಬಾರದು. ಸ್ಥಳೀಯ ನೀರಿನ ಮೂಲಗಳಿಲ್ಲದಿದ್ದರೆ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್‌ಗಳ ಮೂಲಕ ತಕ್ಷಣವೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ. ಆದರೆ, ನೀರು ಸರಬರಾಜು ಮಾಡುವ ಮುನ್ನ ಕಡ್ಡಾಯವಾಗಿ ಅದರ ಗುಣಮಟ್ಟ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಿ. ಅಸ್ತಿತ್ವದಲ್ಲಿರುವ ಜಲಮೂಲಗಳು ಕಲುಷಿತವಾಗದಂತೆ ರಕ್ಷಿಸಿ ಮತ್ತು ಮಳೆನೀರು ಎಲ್ಲೂ ಪೋಲಾಗದಂತೆ ತಡೆಯಲು ಸಾರ್ವಜನಿಕರಲ್ಲಿ ಮಳೆನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸಿ ಎಂದರು.
D.K. Shivakumar ಮಾನವರಷ್ಟೇ ಅಲ್ಲದೆ, ಜಾನುವಾರುಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ. ಅಗತ್ಯವಿರುವ ಕಡೆಗಳಲ್ಲೆಲ್ಲ ತಕ್ಷಣವೇ ಮೇವಿನ ಬ್ಯಾಂಕ್‌ಗಳು ಹಾಗೂ ಗೋಶಾಲೆಗಳನ್ನು ತೆರೆಯಿರಿ. ಹಸಿವು ಮತ್ತು ನೀರಡಿಕೆಯಿಂದ ರಾಜ್ಯದಲ್ಲಿ ಒಂದೇ ಒಂದು ಜಾನುವಾರು ಕೂಡ ಸಾಯಬಾರದು.
ಸರ್ಕಾರದ ಎಲ್ಲಾ ಪರಿಹಾರ ಕ್ರಮಗಳು ಜನರನ್ನು ನೇರವಾಗಿ ತಲುಪಬೇಕು. ಬರದ ತೀವ್ರತೆಯ ಬಿಸಿ ಸಾಮಾನ್ಯ ಜನರಿಗೆ ತಟ್ಟದ ಹಾಗೆ ಅವರನ್ನು ಆಡಳಿತ ಯಂತ್ರವು ಕೈಹಿಡಿಯಬೇಕು. ತಳಮಟ್ಟದಲ್ಲಿ ಆಡಳಿತ ಕಾರ್ಯವೈಖರಿ ಚುರುಕಾಗಬೇಕು ಎಂದು ತಿಳಿಸಿದರು.
ಈ ವಿಡಿಯೋ ಸಂವಾದ ಸಭೆಯಲ್ಲಿ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಸಚಿವರಾದ ಶ್ರೀ ರಾಮಲಿಂಗರೆಡ್ಡಿ, ಶ್ರೀ ಕೆ.ಜೆ. ಜಾರ್ಜ್, ಶ್ರೀ ಈಶ್ವರ್ ಖಂಡ್ರೆ, ಶ್ರೀ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿನ ಜೊತೆ ಪಠ್ಯೇತರ ಚಟುವಟಿಕೆ ಇರಲಿ. ಟೀವಿ,ಮೊಬೈಲ್ ಗೀಳಿನಿಂದ ದೂರ ಇರಿ- ಡಾ.ಆರ್.ಪ್ರತಿಭಾ
“ಭಾರತದ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಕಾಲೇಜಿನ ಶಂಕು ಸ್ಥಾಪನೆ ಮಾಡಿದ್ದು, ಅವರ ಪ್ರೇರಣೆಯಿಂದ ನೀವುಗಳು ಜೀವನ ನಡೆಸಬೇಕು.
ಗಾಂದೀಜಿ ಹಾಗೂ ಇತರೆ ಸ್ವತಂತ್ರ ಹೋರಾಟಗಾರರ ಪುಸ್ತಕಗಳನ್ನು ಓದಬೇಕು. ಈ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿದ್ದ ಕವಿಶ್ರೇ಼ಷ್ಠ ಗೋಪಾಲಕೃಷ್ಣ ಅಡಿಗರು ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಚಂದ್ರಶೇಖರ ಕಂಬಾರ ಮತ್ತು ಜಿ.ಕೆ. ಗೋವಿಂದ ರಾವ್ ಇಂತಹ ಶ್ರೇಷ್ಠ ಉಪನ್ಯಾಸಕರು ಈ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವುದು ಕೂಡಾ ನಿಮಗೆ ಪ್ರೇರಣೆಯಾಗಲಿ.
ಈ ಕಾಲೇಜಿನಲ್ಲಿ ಉತ್ತಮ ಪರಿಸರ ಮತ್ತು ವಾತಾವರಣ ಇದೆ. ಗ್ರಂಥಾಲಯವೂ ಕೂಡಾ ಉತ್ತಮ ಪುಸ್ತಕಗಳನ್ನು ಹೊಂದಿದ್ದು, ಅದನ್ನೂ ಕೂಡಾ ತಾವು ಉಪಯೋಗಿಸಿಕೊಳ್ಳಬೇಕು. ನಿಮ್ಮ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಟಿ.ವಿ., ಮೊಬೈಲ್ ಇವುಗಳಿಂದ ನೀವು ದೂರ ಇರಿ. ಉತ್ತಮವಾದ ಹವ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ.
ಈಗಿನಿಂದಲೇ ನಿಮ್ಮ ಮುಂದಿನ ಗುರಿಯನ್ನು ಇಟ್ಟುಕೊಂಡು ಸತತ ಪರಿಶ್ರಮಪಡಿ. ಇದರಿಂದ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಉತ್ತಮ ಆರ್ಥಿಕತೆ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ಹೆಸರು, ಪದವಿ, ಪುರಸ್ಕಾರವನ್ನು ಪಡೆದುಕೊಂಡು ದೇಶದ ಆಸ್ತಿಯಾಗಿರಿ” ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ನಡೆಸುತ್ತಿರುವ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ. ಸೊಲಬಣ್ಣ ಶೆಟ್ಟಿ ಮಹಾವಿದ್ಯಾಲಯದ ಪ್ರಥಮ ವಷದ ಪದವಿ ವಿದ್ಯಾರಂಭ ಕಾಯಕ್ರಮವನ್ನು ಉಧ್ಘಾಟಿಸಿ ಸಾಗರದ ತಹಶೀಲ್ದಾರ್‌ರಾದ ಡಾ. ಪ್ರತೀಭಾ ಆರ್. ಇವರು ಮಾತನಾಡಿದರು.
ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಡಾ. ಪ್ರತೀಭಾ ಆರ್. ಇವರನ್ನು ಗೌರವಿಸಲಾಯಿತು.
ಕಾಯಕ್ರಮದ ಮೊದಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಇವರು ಎಲ್ಲರನ್ನೂ ಸ್ವಾಗತಿಸಿ ಉದ್ಘಾಟಕ ಪರಿಚಯವನ್ನು ಮಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಹೆಚ್. ಎಂ. ಶಿವಕುಮಾರ್ ಇವರು ಕಾಲೇಜು ನಡೆದು ಬಂದ ದಾರಿ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯದ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಆರ್. ಜಯಂತ್ ಇವರು ವಹಿಸಿದ್ದರು.
ಕೊನೆಯಲ್ಲಿ ಡಾ. ಹರ್ಷ ವಿಮನ್, ಕ್ರೀಡಾ ಮತ್ತು ಸಾಂಸೃತಿಕ ವೇದಿಕೆ ಸಂಚಾಲಕರು ಇವರು ವಂದಿಸಿದರು.
ಕಾಯಕ್ರಮದಲ್ಲಿ ಪ್ರತಿಷ್ಠಾನದ ಕೋಶಾಧ್ಯಕ್ಷರಾದ ಕೆ. ವೆಂಕಟೇಶ್, ಕವಲಕೋಡು, ದೈಹಿಕ ಶಿಕ್ಷಣ ನಿರ್ದೇಶಕರಾದ ಭರತ್ ರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
B.Y. Raghavendra ಲೇಖನಿ ಮೂಲಕ ಸಾಮಾಜಿಕ ತಪ್ಪು ತಿದ್ದುವ ಪತ್ರಕರ್ತರು ರಕ್ತದಾನಿಗಳಾಗಿ ಜೀವವುಳಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ- ಬಿ.ವೈ.ರಾಘವೇಂದ್ರ
B.Y. Raghavendra ಇಂದು ಭದ್ರಾವತಿಯ ಲಯನ್ಸ್ ಕ್ಲಬ್ ಸಭಾಂಗಣದ ‘ಡಿ.ವಿ.ಗುಂಡಪ್ಪ ವೇದಿಕೆ’ಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ, ಹಮ್ಮಿಕೊಳ್ಳಲಾಗಿದ್ದ “ಪತ್ರಿಕಾ ದಿನಾಚರಣೆ – 2026” ಹಾಗೂ “ಬೃಹತ್ ರಕ್ತದಾನ ಶಿಬಿರ” ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು.
ಇಂದಿನ ಮೊಬೈಲ್ ಹಾಗೂ ಡಿಜಿಟಲ್ ಯುಗದಲ್ಲಿ ಸುದ್ದಿಯ ವೇಗಕ್ಕಿಂತ ಅದರ ‘ವಿಶ್ವಾಸಾರ್ಹತೆ’ ಅತ್ಯಂತ ಮುಖ್ಯವಾಗುತ್ತದೆ. ಸತ್ಯ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯೇ ಪ್ರತಿಯೊಬ್ಬ ಪತ್ರಕರ್ತರ ಧೇಯವಾಗಬೇಕು ಎಂದು ಬಿ.ವೈ.ರಾಘವೇಂದ್ರ ನುಡಿದರು.
ಪತ್ರಿಕಾ ದಿನಾಚರಣೆಯ ಸವಿನೆನಪಿನಲ್ಲಿ ಸಮಾಜಮುಖಿ ಕಾರ್ಯವಾಗಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ಲೇಖನಿಯ ಮೂಲಕ ಸಮಾಜದ ಕುಂದುಕೊರತೆಗಳಿಗೆ ಚಿಕಿತ್ಸೆ ನೀಡುವ ಪತ್ರಕರ್ತರು, ರಕ್ತದಾನದ ಮೂಲಕ ಜೀವ ಉಳಿಸುವ ಸಂಕಲ್ಪ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಸಂಸದ ರಾಘವೇಂದ್ರ ಮೆಚ್ಚುಗೆಯ ಮಾತನಾಡಿದರು.
ಇದೇ ಸಂದರ್ಭದಲ್ಲಿ ದಶಕಗಳ ಕಾಲ ಸಮಾಜದ ಕಣ್ಣಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
B.Y. Raghavendra ಉಕ್ಕಿನ ನಗರಿ ಭದ್ರಾವತಿಯ ಪ್ರಗತಿಗೆ ಹಾಗೂ ನಮ್ಮ ಭಾಗದ ಪತ್ರಕರ್ತರ ಹಿತರಕ್ಷಣೆ ಮತ್ತು ಯೋಗಕ್ಷೇಮಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಬಿ.ವೈ.ರಾಘವೇಂದ್ರ ಕೊನೆಯಲ್ಲಿ ಆಶ್ವಾಸನೆ ನೀಡಿದರು.
