Sunday, August 9, 2026
Sunday, August 9, 2026
Home Blog Page 175

Klive Special Article ಬದಲಾಗುವುದೆಂದರೆ… ಮ್ಯಾಜಿಕ್ ಅಲ್ಲ

0

ಲೇ; ಎಸ್.ಪಿ.ಶ್ವೇತಾ.
ಶೃಂಗೇರಿ.

Klive Special Article ಬದಲಾವಣೆ ಜಗತ್ತಿನ ನಿಯಮ.
ಹುಟ್ಟಿದ ಕ್ಷಣದಿಂದ ಕೊನೆಯ ಉಸಿರಿನವರೆಗೂ ಜೀವನದ ಪ್ರತಿಯೊಂದು ಹಂತವೂ ಬದಲಾವಣೆಯಲ್ಲೇ ಸಾಗುತ್ತದೆ. ಮನುಷ್ಯನು ಮಗು ಆಗಿ ಹುಟ್ಟಿ, ಬಾಲ್ಯ–ಯೌವನ–ಮುಪ್ಪು–ವೃದ್ಧಾಪ್ಯ ಎಂಬ ಹಂತಗಳನ್ನು ದಾಟುತ್ತಾ ದೈಹಿಕವಾಗಿಯೂ, ಮಾನಸಿಕವಾಗಿಯೂ ನಿರಂತರವಾಗಿ ಬದಲಾಗುತ್ತಾನೆ. ಬೆಳವಣಿಗೆಯೊಂದಿಗೆ ಆಹಾರಶೈಲಿ, ಇಷ್ಟ–ಅನಿಷ್ಟಗಳು, ಅಭಿರುಚಿಗಳು ಎಲ್ಲವೂ ಬದಲಾಗುತ್ತವೆ. ಬಾಲ್ಯದಲ್ಲಿ ಇಷ್ಟವಿರದ ಆಹಾರವೂ, ದೊಡ್ಡವನಾದಾಗ ಇಷ್ಟವಾಗುವುದು ಸಹಜ, ಬಾಲ್ಯದಲ್ಲಿ ಇಷ್ಟ ಪಡುತ್ತಿದ್ದ ಭೋಜನಗಳು ಕೂಡಾ ದೇಹಕ್ಕೆ ಅಹಿತ ಅನ್ನಿಸುವುದು ಕೂಡಾ ಸಹಜ

ಮಣ್ಣಿನಲ್ಲಿ ಬಿತ್ತಿದ ಬೀಜ ಮೊದಲು ಸಸಿಯಾಗಿ, ನಂತರ ಗಿಡವಾಗಿ, ಕೊನೆಗೆ ಮರವಾಗಿ ಹಣ್ಣು–ಹೂವುಗಳನ್ನು ಕೊಡುತ್ತದೆ. ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಋತುಬದಲಾವಣೆಗೆ ತಕ್ಕಂತೆ ಎಲೆಗಳನ್ನು ಉದುರಿಸಿ, ಮತ್ತೆ ಹೊಸ ಚಿಗುರುಗಳನ್ನು ಸೃಷ್ಟಿಸುತ್ತದೆ. ಉದುರಿದ ಎಲೆಗಳಿಗೂ ಲೆಕ್ಕವಿಲ್ಲ, ಹೊಸ ಎಲೆಗಳಿಗೂ ಲೆಕ್ಕವಿಲ್ಲ. ಮರವು ಉದುರಿದ ಎಲೆಗಳಿಗಾಗಿ ಅಳುವುದಿಲ್ಲ; ವಸಂತದ ಚಿಗುರುಗಳು ಹಳೆಯದನ್ನು ಮರೆಮಾಡುತ್ತವೆ. ಬದಲಾವಣೆ ಸಹಜ.
ಬದಲಾವಣೆಯ ಎರಡು ಮುಖಗಳು

  • ನೈಸರ್ಗಿಕವಾಗಿ ಆಗುವ ಬದಲಾವಣೆ
  • ಕೃತಕವಾಗಿ ಆಗುವ ಬದಲಾವಣೆ
    ಮಗು ಅಳುವುದರಿಂದ ಆರಂಸಿ, ಅಂಬೆಗಾಲು ಹಾಕುವುದು, ನಿಲ್ಲುವುದು, ಓಡುವುದು, ಮಾತನಾಡುವುದು, ನಗುವುದು, ಹಾಡುವುದು—ಇವೆಲ್ಲವೂ ಸಕಾರಾತ್ಮಕ ಬದಲಾವಣೆಗಳು. ಇವು ಹೆತ್ತವರ ಮನಸ್ಸಿಗೆ ಸಂತೋಷ ತರುತ್ತವೆ. ಆದರೆ ಬೆಳೆದ ಮಗು, ಕೆಲವೊಮ್ಮೆ ಅಪ್ಪ–ಅಮ್ಮನಿಗೆ ನೋವು ಕೊಡಲು ಕಲಿಯುತ್ತದೆ—ಇದು ನಕಾರಾತ್ಮಕ ಬದಲಾವಣೆ. ದೈಹಿಕ ಬದಲಾವಣೆಗಳು ಸಹಜವಾದರೂ, ಮಾನಸಿಕ ಬದಲಾವಣೆಗಳು ಹೆತ್ತವರ ಮನಸ್ಸಿಗೆ ನೋವು ತರಬಹುದು.
    ಮಗು ಬೆಳೆದಂತೆ ಗೆಳೆಯರ ಬಳಗ ಬದಲಾಗುತ್ತದೆ. ಕೊನೆಗೆ ಬಾಲ್ಯದ ಗೆಳೆಯರನ್ನೇ ಮರೆತುಬಿಡುವಷ್ಟು ಬದಲಾವಣೆ ಸಂಭವಿಸುತ್ತದೆ. ಹೊಸ ನೀರು ಬಂದು ಹಳೆಯ ನೀರನ್ನು ಕೊಚ್ಚಿ ಹೋಗುವಂತೆ, ಹಳೆಯ ಸ್ನೇಹಿತರ ಜೊತೆಗೆ ಕಳೆದ ಕ್ಷಣಗಳನ್ನೇ ವ್ಯವಹಾರಿಕ ರೀತಿಯಲ್ಲಿ ಮರೆತುಬಿಡುತ್ತದೆ, ಆದರೆ ಒಂದು ಪ್ರಶ್ನೆ—ಇಂತಹ ಬದಲಾವಣೆಗಳು ಜೀವನಕ್ಕೆ ಅಗತ್ಯವೇ?
    ಶಾಲೆ, ಕಾಲೇಜು, ಉದ್ಯೋಗ, ವಿವಾಹ, ವೃದ್ಧಾಪ್ಯ—ಪ್ರತಿ ಹಂತದಲ್ಲೂ ಹೊಸ ಗೆಳೆಯರು ಸಿಗುತ್ತಾರೆ. ಪ್ರತಿಯೊಬ್ಬರೂ ಜೀವನಕ್ಕೆ ಒಂದೊಂದು ಪಾಠ. ಆದರೆ “ಬದಲಾವಣೆ ಜಗದ ನಿಯಮ” ಎಂದು ಹೇಳಿ ಗಂಡ–ಹೆಂಡತಿ, ಮಕ್ಕಳು, ಗೆಳೆಯರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಸಕಾರಾತ್ಮಕ ಬದಲಾವಣೆ ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
    ಬದಲಾವಣೆಯ ಮಿತಿಗಳು
    “ಹೊಸತನ ತರ್ತೀನಿ” ಎಂದು ಎಲ್ಲವನ್ನೂ ಬದಲಾಯಿಸುವುದು ಮೂರ್ಖತನ. ಹಳೆಯವರನ್ನು ಮನೆಯಿಂದ ಹೊರಹಾಕಿ ಹೊಸತನವನ್ನು ಕಟ್ಟಲಾಗುವುದಿಲ್ಲ. ಬಡವನು ಶ್ರೀಮಂತನಾಗಬಹುದು; ಶ್ರೀಮಂತನು ಬಡವನಾಗಬಹುದು. ಸಿರಿತನ–ಬಡತನ ಎರಡೂ ಜೀವನದ ಪಾಠ.
    ಸಂಬಂಧಗಳು ಬದಲಾವಣೆಯ ಹೊಡೆತಕ್ಕೆ ಒಳಗಾಗಬಹುದು. ಸಿರಿತನ ಬಂದಾಗ ಕೆಲವರು ಹತ್ತಿರವಾಗಬಹುದು; ಕಷ್ಟ ಬಂದಾಗ ಕೆಲವರು ದೂರವಾಗಬಹುದು. ಸಿರಿತನದ ಅಹಂಕಾರದಲ್ಲಿ ಬೇರೆಯವರನ್ನು ನಿಕೃಷ್ಟವಾಗಿ ನೋಡಬಾರದು, ಸಂಬಂಧಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದೇ ನಿಜವಾದ ವ್ಯಕ್ತಿತ್ವ.
    ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ, ಸಂಬಂಧಗಳನ್ನು ಸಮತೋಲನದಿಂದ ನಿಭಾಯಿಸುವವನೇ ಮಾದರಿ ವ್ಯಕ್ತಿ.
    ಬದಲಾವಣೆ ಯಾಕಾಗಿ?
    Klive Special Article ಬದಲಾವಣೆ ಸಹಜವಾಗಿರಬೇಕು; ನಾವು ಬದಲಾವಣೆಯ ಹಿಂದೆ ಓಡಬಾರದು. ಮನಸ್ಸಿಗೆ ನೋವು ಬಂದಾಗ ತನ್ನಿಂದ ತಾನೇ ಮನಸು ಶಕ್ತಿ ತಳೆದು ಗಟ್ಟಿಯಾಗುತ್ತದೆ, ಕ್ರೂರಿಯೂ ಮನಸ್ಸು ಮಾಡಿದರೆ ಒಳ್ಳೆಯವನಾಗಬಹುದು; ಒಳ್ಳೆಯವನು ಕೆಟ್ಟ ಸಂಗದಿಂದ ಕ್ರೂರಿಯಾಗಬಹುದು.
    ಆದರೆ ಬದಲಾವಣೆ ಯಾಕಾಗಿ ಮಾಡುತ್ತಿದ್ದೇವೆ ಎಂಬ ಪ್ರಶ್ನೆ ಮೊದಲು ಮನಸ್ಸಿನಲ್ಲಿ ಮೂಡಬೇಕು.
    ನಮ್ಮಲ್ಲಿ ಆಗುವ ಬದಲಾವಣೆ ಜಗದ ಹಿತಕ್ಕಾಗಿ ಇದೆಯೇ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಬೇಕು,
    ನಮ್ಮ ಬದಲಾವಣೆಯಿಂದ ಇತರರಿಗೆ ಒಳಿತಾಗಬೇಕು; ದುಃಖ ತರಬಾರದು.

ಹಿಂದಿನ ಕಾಲದಲ್ಲಿ ಒಂದು ರೀತಿಯ ಜೀವನವಿತ್ತು; ಇಂದಿನ ಕಾಲದಲ್ಲಿ ಬೇರೆ. ಶಿಕ್ಷಣ, ಹಣದ ಮೌಲ್ಯ, ವೇಷಭೂಷಣ, ಆಹಾರ—ಎಲ್ಲವೂ ಬದಲಾಗಿದೆ. ತುಂಬಿದ ಕುಟುಂಬಗಳು ಕಡಿಮೆಯಾಗಿವೆ; ಹೊಂದಾಣಿಕೆ ಕಷ್ಟವಾಗಿದೆ. ಹೆಣ್ಣು–ಗಂಡು ಇಬ್ಬರೂ ಸಮಾನರು; ಇಬ್ಬರೂ ದುಡಿಯುವ ಕಾಲ ಬಂದಿದೆ. ಹೆಣ್ಣಿನ ಶೋಷಣೆ ಕಡಿಮೆಯಾಗುತ್ತಿದೆ. ವಿಶ್ಲೇಷಣೆ ಮಾಡುತ್ತ ಹೋದರೆ ಸಕಾರಾತ್ಮಕ ಮತ್ತು ನಕಾರಾತ್ಮಕ ಬದಲಾವಣೆ ಎರಡೂ ಕಣ್ಣಿಗೆ ಕಾಣುತ್ತವೆ. ಆದರೆ “ಹೊಸತನ” ಎಂಬ ಹೆಸರಿನಲ್ಲಿ ಪ್ರತಿಯೊಂದನ್ನೂ ಬದಲಾಯಿಸುವ ಹುಚ್ಚು ಬರಬಾರದು.
ನಗು -ನಗುತ್ತಾ ಬದಲಾವಣೆಯನ್ನು ಸ್ವೀಕರಿಸಿ,
ಸಕಾರಾತ್ಮಕ ಬೆಳವಣಿಗೆಯೊಂದಿಗೆ ಜೀವನವನ್ನು ಸುಂದರವಾಗಿ ಸಾಗಿಸೋಣ .

ಅಂತರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು

0

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈ ಭಾರತ್ ಶಿವಮೊಗ್ಗ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 08 ರಂದು ನೇಹರು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
13 ವರ್ಷದಿಂದ 18 ವರ್ಷವರೆಗಿನವರಿಗೆ ವೈಯಕ್ತಿಕ ವಿಭಾಗದಲ್ಲಿ ಅಥ್ಲೆಟಿಕ್ 100 ಮೀ,200 ಮೀ,400 ಮೀ ಓಟ. 18 ವರ್ಷ ಮೇಲ್ಪಟ್ಟ 12 ಜನರನ್ನೊಳಗೊಂಡ ತಂಡಗಳಿಗೆ ಥ್ರೋಬಾಲ್.18 ವರ್ಷ ಮೇಲ್ಪಟ್ಟ 8 ಜನರ ತಂಡಗಳಿಗೆ ಹಗ್ಗ ಜಗ್ಗಾಟ ಸ್ಪರ್ಧೆ. 18 ವರ್ಷ ಮೇಲ್ಪಟ್ಟವರಿಗೆ ವೈಯಕ್ತಿಕ ವಿಭಾಗದಲ್ಲಿ ಸ್ಲೋ ಬೈಕ್ ರೇಸ್. 18 ರಿಂದ 25 ವರ್ಷದವರಿಗೆ ವೈಯಕ್ತಿಕ ವಿಭಾಗದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಸಮ್ಮಿಲನ(ಇಂಡೋ ವೆಸ್ಟರ್ನ್)ಫ್ಯಾಷನ್ ಶೋ. 20 ರಿಂದ 40 ವರ್ಷದವರಿಗೆ ಭಾರತೀಯ ಸಂಪ್ರದಾಯ ಉಡುಗೆಗಳು ಮತ್ತು 18 ವರ್ಷ ಮೇಲ್ಪಟ್ಟವರಿಗೆ ಭಾರತೀಯ ಐತಿಹಾಸಿಕ ರಾಣಿಯರು ಕುರಿತು ಫ್ಯಾಷನ್ ಶೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಿಜೇತರಿಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವವರು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಆಧಾರ್ ಕಾರ್ಡ್ ಅಥವಾ ಧೃಡೀಕರಣ ಪತ್ರದೊಂದಿಗೆ ನೆಹರೂ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿ, ದೂ.ಸಂ.:9353084822,8771397714 ನ್ನು ಭೇಟಿ ನೀಡಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಹಿಳೆ ಸಾವು: ವಾರಸುದಾರರ ಪತ್ತೆಗೆ ಮನವಿ

0

ಸುಮಾರು 45 ರಿಂದ 50 ವರ್ಷದ ಮಂಜಮ್ಮ ಕೋಂ ರಾಜಪ್ಪ, ವಾಸ ಮಾರ್ನಮಿಬೈಲು, ಶಿವಮೊಗ್ಗ, ಈಕೆಯು ಗರ್ತಿಕೆರೆ ಗ್ರಾಮದಲ್ಲಿ‌ ಟಾರ್ಪಲ್ ಕಟ್ಟಕೊಂಡು ಒಬ್ಬಳೇ ವಾಸವಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಳು.‌ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಜನವರಿ 07 ರಂದು ಮೃತಪಟ್ಟಿರುತ್ತಾಳೆ.
ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ರಿಪ್ಪನ್ ಪೇಟೆ ಪೋಲಿಸ್ ಠಾಣೆ ಉಪ ನಿರೀಕ್ಷಕರು ದೂ.ಸಂ.:8277983045./9480803365, ಹೊಸನಗರ ವೃತ್ತ ಪೊಲೀಸ್ ನಿರೀಕ್ಷಕರು ದೂ.ಸಂ.:08185-221544/9480803337 ಹಾಗೂ ತೀರ್ಥಹಳ್ಳಿ ಉಪ ವಿಭಾಗ ಉಪಾಧೀಕ್ಷರು ದೂ.ಸಂ.:08181-220388 ನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

MESCOM ಸಾಗರ; ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ. 04 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಶಾಖಾಹಾರಿ ಚಲನಚಿತ್ರಕ್ಕೆ ” ಕಪ್ಪುವನಿತೆ” ಪುರಸ್ಕಾರ

0

ಶಿವಮೊಗ್ಗ ಜಿಲ್ಲೆ ಹೆಮ್ಮೆ ಪಡಬಹುದಾದ ಮತ್ತೊಂದು ಸುದ್ದಿ‌ ಶಿವಮೊಗ್ಗದ ಕೀಳಂಬಿ ಮೀಡಿಯ ಕಂಪನಿ ನಿರ್ಮಾಣದ ಸಿನಿಮಾ “ಶಾಖಾಹಾರಿ” ಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಅವಾರ್ಡ್ ಲಭಿಸಿದೆ. ದಕ್ಷಿಣ ಭಾರತದ ಭಾಷಾ ಚಿತ್ರಗಳಲ್ಲಿ ಕನ್ನಡ ವಿಭಾಗದಲ್ಲಿ” ಕಪ್ಪುವನಿತೆ” ( BlackLady)ಪುರಸ್ಕಾರ ಶಾಖಾಹಾರಿ ಚಲನಚಿತ್ರಕ್ಕೆ ಸಿಕ್ಕಿದೆ.

ಕೊಚ್ಚಿಯಲ್ಲಿ ನಡೆದ 70 ನೇ ಫಿಲ್ಮ್ ಫೇರ್ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ನಿರ್ಮಾಪಕರಾದ
ರಾಜೇಶ್ ಕೀಳಂಬಿ ಈ ಪ್ರಶಸ್ತಿ ಸ್ವೀಕರಿಸಿದರು.

ವೈಶಷ್ಟ್ಯವೆಂದರೆ ಕತೆ ಶಿವಮೊಗ್ಗದ ಗಿರೀಶ್, ನಿರ್ದೆಶನ
ಶಿವಮೊಗ್ಗದ ಸಂದೀಪ್ ಸುಂಕದ್, ಸಂಪೂರ್ಣ ಶಿವಮೊಗ್ಗ ಜಿಲ್ಲೆಯ ನಿಸರ್ಗದಲ್ಲಿಯೇ ಚಿತ್ರೀಕರಣಗೊಂಡ ಹೆಮ್ಮೆ ಈ ಚಿತ್ರದ್ದಾಗಿದೆ. ನಿರ್ಮಾಣ ಸಂಸ್ಥೆ ಕೂಡ ಶಿವಮೊಗ್ಗದ ನೆಹರು ರಸ್ತೆಯಲ್ಲಿ ಕಾರ್ಯಶೀಲವಾಗಿದೆ.
ಯುವ ನಿರ್ದೇಶಕ ಸಂದೀಪ್ ಸುಂಕದ್ ಅವರೂ ಕೂಡ ಈ ವರ್ಣಮಯ ಸಮಾರಂಭದಲ್ಲಿ ಭಾಗವಹಿಸಿ ಪ್ರತಿಷ್ಠಿತ ಫಿಲ್ಮ್ ಫೇರ್ ಪುರಸ್ಕಾರದ ಆನಂದ ಅನುಭವಿಸಿದರು.
ಕನ್ನಡದಲ್ಲಿ ಚಿತ್ರಮಾಡಲು ಕತೆಗಳೇ ಇಲ್ಲವೆಂದಿಲ್ಲ. ಇರುವ ಕತೆಯನ್ನೇ ಮತ್ತಷ್ಟೂ ಸಿನಿಮಾ ಮಾಧ್ಯದಲ್ಲಿ ನಿರೂಪಿಸುವ ಕಲೆಗಾರಿಕೆ ಈಗ ಮುಖ್ಯ. ಅಂತಹ ಕೌಶವಲನ್ನ ಯುವ ನಿರ್ದೇಶಕ ಸಂದೀಪ್ ಸುಂಕದ್ ತೋರಿಸಿದ್ದಾರೆ. ಕತೆ ನಡೆಯುತ್ತಲೇ ಪ್ರೇಕ್ಷಕನನ್ನ ಫ್ರೇಮಿಂದ ಫ್ರೇಮಿಗೆ ತುದಿಗಾಲಲ್ಲಿ ನಿಲ್ಲಿಸುತ್ತದೆ.ಅಂತಹ ಕುತೂಹಲ ಕಾಯ್ದುಕೊಳ್ಳುವ ಚಿತ್ರಕತೆ ಸೊಗಸಾಗಿ ಹೆಣೆಯಲಾಗಿದೆ.
ಹಿರಿಯ ನಟ ರಂಗಾಯಣ ರಘು ,ತಮ್ಮ ಎಂದಿನ ಪಾತ್ರಗಳ ಅಚ್ಚಿನಿಂದ ಹೊರಬಂದು ,ಭಾವನಾತ್ಮಕ
ಪಾತ್ರದಲ್ಲಿ ಜೀವಂತಿಕೆ ತುಂಬಿ ನಟಿಸಿದ್ದಾರೆ. ಅವರ ಸಿನಿರಂಗದ ಪಯಣದಲ್ಲಿ “ ಶಾಖಾಹಾರಿ” ಒಂದು ಅನನ್ಯ ಸಾಧನೆಯ ಮೈಲುಗಲ್ಲೆಂದೇ ನಿಸ್ಸಂದೇಹ ಭಾವಿಸಬಹುದು. ಛಾಯಾಗ್ರಹಣದಲ್ಲಿ ವಿಶ್ವಜಿತ್ ರಾವ್ ಚಾಕಚಕ್ಯತೆ ಕಾಣಬಹುದು. ಗ್ರಾಮೀಣ ಕ್ಯಾಂಟೀನ್ ಸಿನಿಮಾದ ಹೃದಯ ಭಾಗ. ಈ ಸೆಟಿಂಗ್ ಮತ್ತು ಚಿತ್ರಕತೆಯ ಓಟಕ್ಕೆ ಅವರ ಕ್ಯಾಮರಾ ಹಿಂಬಾಲಿಸಿದೆ.
ಇದಕ್ಕೆ ಚಿತ್ರಕಥೆಯೇ ನಾಯಕ.ಅದಕ್ಕೆ ಪೋಷಕವಾಗಿ ಅಭಿನಯ‌ನೀಡಿ ರಂಗಾಯಣ ರಘು ಅಪೂರ್ವ ನಟನಾ
ಸಾಮರ್ಥ್ಯ ಮೆರೆದಿದ್ದಾರೆ. ರಾಜ್ಯದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಂದರ್ಭ ಬೇರೆನೂ ಮ್ಯಾಜಿಕ್ ನಡೆಯದಿದ್ದರೆ
ಉತ್ತಮ ನಟ ಪ್ರಶಸ್ತಿ‌ ರಂಗಾಯಣ ರಘು ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.
ಸಬ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಸಹಜ ನಟ ಗೋಪಾಲ ಕೃಷ್ಣ ದೇಶಪಾಂಡೆ ಪ್ರಬುದ್ಧ ಅಭಿನಯ. ಕತೆಯನ್ನ, ಕುತೂಹಲವನ್ನ ನಟನೆಯೊಂದಿಗೆ ಸಲೀಸಾಗಿ ಎಳೆದೊಯ್ಯುವ ಪ್ರಯತ್ನ ಫಲಿಸಿದೆ.
ಮಿಕ್ಕಂತೆ ಸಣ್ಣಪುಟ್ಟ ಪಾತ್ರಗಳಲ್ಲಿ ಬಿಡಿಬಿಡಿಯಾಗಿ ನಟಿಸಿರುವ ಕಲಾವಿದರೂ ತಮಗೆ ನೀಡಿದ ಅವಕಾಶ ಸಾರ್ಥಕಪಡಿಸಿಕೊಂಡಿದ್ದಾರೆ.

ಹಾಡುಗಳಂತೂ ಇಂಪಾಗಿವೆ. ಸಂಗೀತ ನಿರ್ದೇಶನದಲ್ಲೂ ಶಾಖಾಹಾರಿ ರಸಿಕರು ಕಿವಿಗೊಟ್ಟು ಆಲಿಸುವಂತೆ ಮಾಡಿದೆ. “ಎಲ್ಲೋ ಸುರಿದಾ ಮಳೆ.” ನಿನ್ನನಗಲಿ ಇರಲಾರೆನೊ” ಮುಂತಾದ ಹಾಡುಗಳು ಗುನುಗುವಂತೆ ಮಾಡುತ್ತವೆ. ಸಂಗೀತ ನೀಡಿದ ಮಯೂರ್ ಅಂಬೇಕಲ್ ಭರವಸೆ ಮೂಡಿಸಿದ್ದಾರೆ. ಸ್ವತಃ ಅವರೇ ಹಾಡಿರುವ ಹಾಡು ಭವಿಷ್ಯದ ಹಿನ್ನೆಲೆ ಗಾಯಕ ಅವರ ಮೂಲಕ
ಆವಿರ್ಭವಿಸುವ ಸೂಚನೆಗಳಿವೆ.

ಕೀಳಂಬಿ ಮೀಡಿಯ ಶಿವಮೊಗ್ಗೆಯ ಕೂಸು. ಈಗಾಗಲೇ “ಶಾಖಾಹಾರಿ” ಸಿನಿಮಾದ ಚೊಚ್ಚಲ ನಿರ್ಮಾಪಕರಿಗೆ ನೀಡುವ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನ. ನಿರ್ಮಾಪಕ ರಾಜೇಶ್ ಕೀಳಂಬಿ ಮುಡಿಗೇರಿಸಿದ್ದಾರೆ.
ಅಂಬೆಗಾಲಿಡುವಾಗಲೇ ಮಾಧ್ಯಮದ ಹೆಜ್ಜೆಗುರುತು ಮೂಡಿಸಿದೆ.
ಸಿನಿಮಾ ಜಗತ್ತಿನ ಚಟುವಟಿಕೆಗಳಿಗೆ ಮಲೆನಾಡಿನ ಶಿವಮೊಗ್ಗವನ್ನ ಕೇಂದ್ರವಾಗಿಸಲಿ.ಮತ್ತಷ್ಟು ಪ್ರತಿಭೆಗಳು
ಈ ಮೂಲಕ ಸ್ಯಾಂಡಲ್ ವುಡ್ ಗೆ
ನೆಗೆಯುವ “ಚಿಮ್ಮು ಹಲಗೆ”ಯಾಗಲಿ.

ವೆಲ್ ಡನ್ . ಸಂದೀಪ್ ಸುಂಕದ್, ರಾಜೇಶ್ ಕೀಳಂಬಿ. ಫಿಲ್ಮ್ ಫೇರ್ ಅಂಗಳದಲ್ಲಿ ಶೋಭಾಯಮಾನವಾಗಿ
ಅನಾವರಣ ಆಗಿದ್ದೀರಿ.ನಿಮಗೆ ಶಿವಮೊಗ್ಗ ಚಿತ್ರ ರಸಿಕರ ಪರವಾಗಿ
ಕಂಗ್ಯಾಟ್ಸ್.

ವೈಜ್ಞಾನಿಕ ಆವಿಷ್ಕಾರಗಳಿಂದ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯ :ಡಾ. ಎ.ಎಸ್ ಕಿರಣ್ ಕುಮಾರ್

0

ನೂತನ ವೈಜ್ಞಾನಿಕ ಆವಿಷ್ಕಾರಗಳಿಂದ ಜನರಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಅವರ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯವಾಗಲಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷರಾಗಿದ್ದ ಡಾ. ಎ.ಎಸ್ ಕಿರಣ್ ಕುಮಾರ್ ಅವರು ಹೇಳಿದರು.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ ಸನ್ನಿಧಿ ಚರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಏರ್ಪಡಿಸಲಾಗಿದ್ದ ನಾನು ವಿಜ್ಞಾನಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅನಾದಿ ಕಾಲದಿಂದ ಇಂದಿನ ಆಧುನಿಕ ಯುಗದವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅತ್ಯಂತ ಮಹತ್ವದ್ದಾಗಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದ್ದು, ಚಂದ್ರಯಾನ-೧ ರ ಮೂಲಕ ಚಂದ್ರನ ಮೇಲೆ ನೀರಿನ ಅಣುಗಳನ್ನು ಪತ್ತೆ ಹಚ್ಚಿದೆ ಮಾತ್ರವಲ್ಲ ಮಂಗಳಯಾನದ ಮೊದಲ ಯತ್ನದಲ್ಲೇ ಯಶಸ್ಸು ಕಂಡಿರುವುದು ಭಾರತದ ಹೆಗ್ಗಳಿಕೆಯಾಗಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತವು ಬಾಹ್ಯಾಕಾಶ (ಚಂದ್ರಯಾನ, ಮಂಗಳಯಾನ) ಮಾಹಿತಿ ತಂತ್ರಜ್ಞಾನ ರಕ್ಷಣಾ ಸಂಶೋಧನೆಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಇಸ್ರೋ ಕಡಿಮೆ ವೆಚ್ಚದ ತಂತ್ರಜ್ಞಾನದ ಮೂಲಕ ವಿಶ್ವದಲ್ಲೇ ಐದನೇ ಬಾಹ್ಯಾಕಾಶ ಶಕ್ತಿಯಾಗಿ ಗುರುತಿಸಿಕೊಂಡಿದೆ. ಮಂಗಳಯಾನದ ಮೊದಲ ಪ್ರಯತ್ನದಲ್ಲಿ ಭಾರತಕ್ಕೆ ಭವ್ಯ ಯಶಸ್ಸು ದೊರೆತಿರುವುದು ಬಾರತೀಯರೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ. ಇದರಿಂದಾಗಿ ಜಗತ್ತು ಭಾರತದತ್ತ ನೋಡುವಂತಾಗಿದೆ ಎಂದರು.
ರಕ್ಷಣಾ ವಿಷಯವನ್ನು ಹೊರತುಪಡಿಸಿ, ಇತರೆ ಅಭಿವೃದ್ಧಿ ಪರ ವಿಷಯಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಾಗುತ್ತಿರುವುದು ಭಾರತದಲ್ಲಿ ಮಾತ್ರವಾಗಿದೆ. ಸಿಂಧೂರದಲ್ಲಿ ಭಾರತ ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಾಗಿದೆ. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಕ್ಷಮತೆ ಸಾಧಿಸಿದೆ. ಅಮೇರಿಕಾದಂತಹ ರಾಷ್ಟ್ರಗಳು ಭಾರತದ ಸಾಧನೆಯನ್ನು ಪ್ರಶಂಸಿಸಿವೆ ಎಂದರು.
ನೆಲ, ಜಲ ಮತ್ತು ಆಹಾರ ವಿಷಯದ ವಿಷಯಗಳಲ್ಲಿ ಸ್ವಾಮ್ಯತ್ವ ಸಾಧನೆಗೆ ಮುಂದಾಗಿದ್ದಾರೆ. ಸ್ವಾಮ್ಯತ್ವ ಬೆಳೆಸಿಕೊಂಡವರು ಮಾತ್ರ ವ್ಯವಸ್ಥೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ ಎಂದವರು ನುಡಿದರು.
ಭಾರತದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಅಳವಡಿಸಿಕೊಳ್ಳುವಲ್ಲಿ ಹೊಸಹೆಜ್ಜೆ ಇರಿಸಿದೆ. ತಂತ್ರಜ್ಞಾನ ನಾವು ತೆಗೆದುಕೊಳ್ಳುವ ಔಷಧ, ನಾವು ತಿನ್ನುವ ಆಹಾರ, ನಾವು ದರಿಸುವ ಬಟ್ಟೆ ಮತ್ತು ಸಂವಹನ ಇವೆಲ್ಲವೂ ವಿಜ್ಞಾನದ ಬಳಕೆಯ ಮೂಲಕ ಸಾಧ್ಯವಾಗಿದೆ. ಜಗತ್ತನ್ನು ರೂಪಿಸುವ, ಪ್ರಗತಿ ಮತ್ತು ನಾವೀನ್ಯತೆಯ ಹಿಂದಿನ ಪ್ರೇರಕ ಶಕ್ತಿ ವಿಜ್ಞಾನವಾಗಿದೆ ಎಂದರು.
ಅಮೇರಿಕಾ ದೇಶವು ಉಡಾಯಿಸಿದ ಉಪಗ್ರಹವನ್ನು ಬಳಸಿಕೊಂಡು ಬಾಹ್ಯಾಕಾಶ ತಂತ್ರಜ್ಞಾನ ದೇಶಕ್ಕೆ ಸಂಪರ್ಕ ಸಾಧನವಾಗಿ ಬಳಸುವುದು ಸಾಧ್ಯ ಎಂದು 1975ರಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಒಂದು ಕಾಲದಲ್ಲಿ ದೇಶದ ಜನರಿಗೆ ಆಹಾರ, ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವುದು ದುಸ್ತರ ಎನ್ನುವಂತ ಕಾಲವಿತ್ತು. ಅಂತಹ ಕಾಲದಲ್ಲಿ ನೆರೆಯ ರಾಷ್ಟ್ರಗಳು ಬಾಹ್ಯಾಕಾಶ ತಲುಪುವ ಪ್ರಯತ್ನದಲ್ಲಿದ್ದವು ಎಂದರು.
ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯಿಂದಾಗಿ ದೇಶಕ್ಕೆ 10-15000ಕೋಟಿ ರೂ.ಗಳ ಉಳಿತಾಯವಾಗಿದೆ. ಸಮುದ್ರದಲ್ಲಿ ಮೀನುಗಾರರಿಗೆ ಹವಾಮಾನ, ನೀರಿನ ಸಮಸ್ಯೆ, ಅಲೆಗಳು, ಜಲಚರಗಳು, ಸಮಸ್ಯೆ-ಸವಾಲುಗಳು ಮತ್ತಿತರ ಎಚ್ಚರಿಕೆಯ ಸಂದೇಶಗಳನ್ನು ಸ್ಥಳೀಯ ಭಾಷೆಯಲ್ಲಿ ದೊರೆತಿದೆ ಎಂದ ಅವರು, ವಿಜ್ಞಾನಿ ತಂತ್ರಜ್ಞಾನಿಗಳಿಗೆ ಕ್ಷಮತೆ ಹೆಚ್ಚಿಸಬೇಕು. ಇದರಿಂದಾಗಿ ಅವರು ಸವಾಲಿನ ಕಾರ್ಯಕ್ಕೆ ಮುಂದಾಗುವಂತಾಗಬೇಕೆಂದವರು ನುಡಿದರು.
ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಮಾತನಾಡಿ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನರಲ್ಲಿನ ಮೌಢ್ಯ ಮತ್ತು ಕಂದಾಚಾರಗಳನ್ನು, ಅವೈಜ್ಞಾನಿಕ ವಿಷಯಗಳನ್ನು ಜನಮಾನಸದಿಂದ ಹೊರಹಾಕುವುದು, ಬಾಲ್ಯವಿವಾಹದಂತಹ ಅನಿಷ್ಟಗಳನ್ನು ಹೊರದೂಡಿ, ವೈಜ್ಞಾನಿಕವಾದ, ತಾರ್ಕಿಕವಾಗಿ ಖಚಿತವಾದ ವಿಷಯಗಳನ್ನು ಜನರಿಗೆ ತಲುಪಿಸುವುದು ಅರಿವು ಕೇಂದ್ರಗಳು ಮತ್ತು ಶಾಲೆಗಳಿಂದ ಸಾಧ್ಯ ಎಂಬುದನ್ನರಿತು ದೇಶ, ರಾಜ್ಯದಲ್ಲಿಯೇ ಮೊದಲ ಬಾರಿಗೆ ನಾನು ವಿಜ್ಞಾನಿ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ನಾಲ್ಕು ದಿನಗಳ ಅವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರ ಮತ್ತು ಪೌಷ್ಠಿಕತೆ, ಪರಿಸರದಲ್ಲಿ ಗುರುತಿಸಲಾಗುತ್ತಿರುವ ವಿಜ್ಞಾನ ವಿಷಯಗಳು, ದೂರದರ್ಶಕ ತಯಾರಿಕೆ ಮತ್ತು ಬಾಹ್ಯಾಕಾಶಗಳ ವೀಕ್ಷಣೆ ಮತ್ತು ಮಕ್ಕಳು ಮತ್ತು ಸಾರ್ವಜನಿಕರಿಗೆ ವಿಜ್ಞಾನ ವಿಷಯಗಳಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ ಕೆ.ಆರ್., ಸನ್ನಿಧಿ ಚರ್ಚ್ ಇನ್ಸ್ಟಿಟ್ಯೂಟಿನ ಮುಖ್ಯಸ್ಥ ಫಾ.ಪಿಂಟೋ ಮುಂತಾದವರು ಉಪಸ್ಥಿತರಿದ್ದರು.

S.N. Channabasappa ಇಂದಿರಾ ಹಾಗೂ ಅಪೂರ್ವ ಬಡಾವಣೆಗಳ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಚಾಲನೆ

0

S.N. Channabasappa ಶಿವಮೊಗ್ಗ ನಗರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ವಾರ್ಡ್ ಸಂಖ್ಯೆ 05ರಲ್ಲಿ ಬರುವ ಇಂದಿರಾ ಬಡಾವಣೆ ಮತ್ತು ಅಪೂರ್ವ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, “ನಗರದ ಪ್ರತಿಯೊಂದು ಬಡಾವಣೆಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಇಂದಿರಾ ಮತ್ತು ಅಪೂರ್ವ ಬಡಾವಣೆಗಳ ನಿವಾಸಿಗಳ ದೀರ್ಘಕಾಲದ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು, ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ,” ಎಂದು ತಿಳಿಸಿದರು.

S.N. Channabasappa ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಪ್ರಮುಖರಾದ ಮಲ್ಲಿಕಾರ್ಜುನ, ಹರೀಶ್, ಮಾಲತೇಶ್, ಪುರಲೆ ನಾಗರಾಜ್, ಆನಂದ್ ಹಾಗೂ ಬಡಾವಣೆಯ ಹಿರಿಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.

ಜನತಾ ಶಾಲೆಗೆ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ

0

ಶಿವಮೊಗ್ಗ ತಾಲೂಕಿನ ಮಲವಗೊಪ್ಪದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2025-26ನೇ ಸಾಲಿನ ಪುಷ್ಠಿ ಯೋಜನೆ ಅಡಿಯಲ್ಲಿ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಸಿಕ್ಕಿದೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ರವರೆಗೆ 42 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ, ಅವೋಪ ಸಂಸ್ಥೆ, ಪ್ರೇರಣಾ ಮಹಿಳಾ ಸಂಘ, ಭಜನಾ ಮಂಡಳಿ, ಅಪರಂಜಿ ಜ್ಯೂಯಲ್ಸ್ ಹೀಗೆ ಹತ್ತು ಹಲವಾರು ಸಂಸ್ಥೆಗಳು ನೆರವು ನೀಡಿವೆ.

ಶಾಹಿ ಗಾರ್ಮೆಂಟ್ಸ್ ವತಿಯಿಂದ ಸಿಎಸ್‌ಆರ್ ಫಂಡ್‌ನಲ್ಲಿ ಶಾಲೆ ಅಂದ ಹೆಚ್ಚಿಸಿದ್ದಾರೆ. ಇಲಾಖೆ ನೀಡುವ ಅನುದಾನ ಶಾಲೆಯಲ್ಲಿ ಸದ್ಭಳಕೆ ಆಗುತ್ತಿದೆ. ಪ್ರತಿಭಾ ಕಾರಂಜಿ, ಕಲಿಕಾ ಹಬ್ಬಗಳಲ್ಲಿ ಶಾಲೆ ಮಕ್ಕಳು ಭಾಗವಹಿಸಿ ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ.

ದಾನಿಗಳ ನೆರವಿನಿಂದ ಮಕ್ಕಳಿಗೆ ಭರತನಾಟ್ಯ ಕಲಿಸಲಾಗುತ್ತಿದೆ. ಮಕ್ಕಳ ಕಲಿಕೆ, ಸಹಪಠ್ಯ ಚಟುವಟಿಕೆಯಲ್ಲಿ ಮಕ್ಕಳ ಭಾಗವಹಿಸುವಿಕೆ ಉತ್ತಮವಾಗಿದೆ. ಮಕ್ಕಳ ದಸರಾ, ಗಣರಾಜ್ಯ ದಿನ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಶಾಲೆಯ ಮಕ್ಕಳು ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮಲವಗೊಪ್ಪದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ತುಳಸಿ ಅಡಿಗ ತಿಳಿಸಿದ್ದಾರೆ.

ಮೃತ ಸಂಕೇತ ಪೋಷಕರಿಗೆ ರೂ. 15 ಲಕ್ಷ ಪರಿಹಾರಧನ ನೀಡಿ ಸಿ.ಎಂ. ಸಾಂತ್ವನ

0

ಇತ್ತೀಚಿಗೆ ಅಹಿತಕರ ಘಟನೆಯೊಂದರಲ್ಲಿ ಮೃತನಾದ ವಿದ್ಯಾರ್ಥಿ ಸಂಕೇತ್‌ನ ಪೋಷಕರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಲ್ಲಿ ಸಾಂತ್ವನ ಹೇಳಿ ಸಂತೈಸಿದರಲ್ಲದೇ 15ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ವಿತರಿಸಿದರು.
ಅವರು ತರೀಕೆರೆಯ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಅಮೇರಿಕಾ ಮದ್ಯಪ್ರಾಚ್ಯ ರಾಷ್ಟ್ರಗಳ ನಡುವೆ ತಾರಕಕ್ಕೇರಿರುವ ಯುದ್ಧದಿಂದಾಗಿ ಇರಾನ್‌ನ ಮುಖ್ಯಸ್ಥ ಮೃತರಾಗಿರುವ ವಿಷಯವನ್ನು ಕೇಳಿ ತಿಳಿದಿದ್ದೇನೆ. ಈ ಘಟನೆ ಸಂಭವಿಸಬಾರದಾಗಿತ್ತು. ಮೃತ ಖಮೈನಿ ಅವರ ಆತ್ಮಕ್ಕೆ ಚಿರಶಾಂತಿ ಬಯಸುವುದಾಗಿ ತಿಳಿಸಿದ ಅವರು, ಅಮೇರಿಕಾ ಅ‍ಧ್ಯಕ್ಷರು ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ವಿಶ್ವಶಾಂತಿಯ ಬಗ್ಗೆ ಸದಾ ಮಾತನಾಡುವ ಅವರು, ಯುದ್ಧಕ್ಕೆ ಹಾತೊರೆಯುತ್ತಿರುವ ದ್ವಿಮುಖ ನೀತಿ ಸರಿಯಲ್ಲ ಎಂದರು.
ಈ ಅನಿರೀಕ್ಷಿತವಾಗಿ ಆರಂಭವಾಗಿರುವ ಈ ಯುದ್ದದಿಂದಾಗಿ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನೇಕ ಜನ ಸಕಾಲದಲ್ಲಿ ತಮ್ಮ ನಿರೀಕ್ಷೆಯಂತೆ ಪ್ರಯಾಣ ಮುಂದುವರೆಸಲಾದೇ ಆತಂಕದಲ್ಲಿದ್ದಾರೆ. ದುಬೈನಲ್ಲಿ ಸುಮಾರು 35ಕ್ಕೂ ಹೆಚ್ಚಿನ ಜನ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಅಲ್ಲಿನ ಏರ್‌ಪೋರ್ಟ್‌ಗಳಲ್ಲಿ ವಿಮಾನಯಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಮುಂದಿನ 2-3 ದಿನಗಳಲ್ಲಿ ಯುದ್ಧದ ಕಾರ್ಮೋಡ ಸರಿದು ವಾತಾವರಣ ತಿಳಿಯಾಗಿ ಮೊದಲಿನಂತೆ ವಾತಾವರಣ ನಿರ್ಮಾಣಗೊಳ್ಳುವ ಆಶಯ ತಮಗಿದೆ ಎಂದ ಅವರು, ಹೊರದೇಶಗಳಲ್ಲಿ ಸಮಸ್ಯೆಯಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದೇನೆ. ಅಲ್ಲದೇ ಕೇಂದ್ರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕಿಸಿ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅವರೆಲ್ಲರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದ ಅವರು ರಾಜ್ಯದ ವಿಧಾನ ಪರಿಷತ್‌ಸದಸ್ಯ ಎಸ್.ಎಲ್.ಭೋಜೆಗೌಡ ಕುಟುಂಬದವರು ದುಬೈ ದೇಶದಲ್ಲಿ ಸುರಕ್ಷಿತವಾಗಿದ್ದು, ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿ ಸುರಕ್ಷಿತವಾಗಿರುವ ವಿಷಯ ತಿಳಿದುಕೊಂಡಿದ್ದೇನೆ. ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಮೃತ ಸಂಕೇತ್‌ನ ಕುಟುಂಬದವರಿಗೆ ಸರ್ಕಾರದಿಂದ ಅಗತ್ಯ ನೆರವು, ಸಹಕಾರ ನೀಡಲಾಗುವುದು. ಅಲ್ಲದೇ ಅವರ ಮನೆಗೆ ತೆರಳಿ ಸಾಂತ್ವನ ಹೇಳಲಾಗುವುದು ಎಂದರು.
ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರತಿದಿನ ಸಂಜೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ತರಗತಿಯ ನಂತರ ವಿದ್ಯಾರ್ಥಿಗಳು ಸಕಾಲದಲ್ಲಿ ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಬಗ್ಗೆ ಪೋಷಕರು ಗಮನಹರಿಸಬೇಕು. ಜಿಲ್ಲೆ, ರಾಜ್ಯ ಮಾತ್ರವಲ್ಲ ದೇಶದಾದ್ಯಂತ ಮಾದಕ ವಸ್ತುಗಳ ಸರಬರಾಜು, ಸಾಗಾಣಿಕೆ ಮತ್ತು ಬಳಕೆ ಬಗ್ಗೆ ನಿಯಂತ್ರಣ ಕಾರ್ಯಗಳಾಗಬೇಕು. ಇಂತಹ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪೊಲೀಸ್‌ವರಿಷ್ಠಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ ಆದರೆ, ಅವರನ್ನು ಕಠಿಣ ಶಿಕ್ಷೆಗೆ, ದಂಡನೆಗೆ ಗುರಿಪಡಿಸಬೇಕು ಎಂದ ಅವರು, ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಶಿಕ್ಷಕರೊಬ್ಬರ ಮೇಲೆ ಫೋಕ್ಸೋ ಪ್ರಕರಣವೊಂದು ದಾಖಲಾಗಿದೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿರುವುದು ಕಂಡುಬಂದಿದೆ. ಖಾಸಗಿ ವಾಹನಗಳ ಸುರಕ್ಷತಾ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಅವರು ತಿಳಿಸಿದರು.
ನಿನ್ನೆಯಷ್ಟೆ ದ್ವಿತೀಯ ಪಿ.ಯು.ಸಿ. ವಾರ್ಷೀಕ ಪರೀಕ್ಷೆಗಳು ಆರಂಭಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ವ್ಯವಸ್ಥಿತವಾಗಿ ಮುಂದುವರೆದಿದೆ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಶುಭ ಹಾರೈಸಿರುವುದಾಗಿ ಅವರು ತಿಳಿಸಿದರು.
1995ರ ನಂತರ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೊಳಪಡಿಸುವ ವಿಷಯವನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಲ್ಲದೇ ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಹಣಕಾಸು ಇಲಾಖೆಗೆ ಬಿಡುಗಡೆಗೆ ಕ್ರಮ ವಹಿಸಬೇಕಾಗುವುದು. ಈ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೇಗಹೆಚ್ಚಿಸಲು ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ನೂತನ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳುವ ಆಶಯ ತಮಗಿದೆ ಎಂದರು.
ಕರ್ನಾಟಕ ಪಬ್ಲಿಕ್‌ಶಾಲೆಗಳ ಉದ್ಘಾಟನೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಬಜೆಟ್‌ನಂತರದಲ್ಲಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಇದೇ ಅವಧಿಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

S. N. Channabasappa ಸಂಸ್ಕೃತಿ ಎಂಬುದು ಒಂದು ನಡವಳಿಕೆ : ಎಸ್ ಎನ್. ಚನ್ನಬಸಪ್ಪ

0

S. N. Channabasappa ಹಿಂದೂ ಮತ್ತು ಸಂಸ್ಕೃತಿ ಎಂಬುದು ಬೇರೆಯಲ್ಲ. ಸಂಸ್ಕೃತಿ ಎಂಬುದು ಒಂದು ಉತ್ತಮ ನಡವಳಿಕೆಯಾಗಿದೆ ಎಂದು ನಗರದ ವಿಧಾನಸಭಾ ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ, ಶಿವಮೊಗ್ಗ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಮನುಕುಲಕ್ಕೆ ತತ್ವ ಸಿದ್ಧಾಂತವನ್ನು ನೀಡಿ, ವಚನಗಳ ಮುಖಾಂತರ ಸಂಸ್ಕಾರವನ್ನು ಕೊಡುವಂತ ಕೆಲಸ ರೇಣುಕಾಚಾರ್ಯರು ಮಾಡಿದ್ದಾರೆ. ಗುರುಗಳು ಬರೇ ಮಠಕ್ಕೆ ಸೀಮಿತವಾಗದೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಮೂಲಕ ವಿಕಾಸಗೊಳಿಸುವಂತ ಕೆಲಸ ಮಾಡಬೇಕೆಂದು ತಿಳಿಸಿದರು.
ಮಾನವೀಯತೆ ಇದ್ದರೆ ಈ ಜಗತ್ತು ಚೆನ್ನಾಗಿರುತ್ತದೆ ಹಾಗೂ ಶಾಂತಿಯನ್ನು ಸಮಾಜದಲ್ಲಿ ಕಾಪಾಡಬಹುದು. ಮನುಷ್ಯನ ಮನಸ್ಸಿನಲ್ಲಿ ಪರಿಶುದ್ಧತೆ ಕಾಪಾಡಿದರೆ ಧರ್ಮದಲ್ಲಿ ವ್ಯತ್ಯಾಸವಿರದು ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಮಾತನಾಡಿ, ಇಂತಹ ಮಹಾನ್ ವ್ಯಕ್ತಿಗಳ ಜಯಂತಿ ಒಂದು ಸಮಾಜಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಆಚರಣೆ ಮಾಡಿದರೆ ಅವರ ತತ್ವಗಳು, ಸಂದೇಶಗಳು ಪ್ರತಿಯೊಬ್ಬರಿಗೆ ಮುಟ್ಟುತ್ತದೆ ಎಂದು. ಜನರು ಧರ್ಮಶ್ರದ್ಧೆ ಮತ್ತು ನಿಷ್ಠೆಯಿಂದ ಸಮಾಜದಲ್ಲಿ ಇರಬೇಕು ಎಂದರು.

S. N. Channabasappa ಜ್ಞಾನದೀಪ ಶಾಲೆಯ ಕನ್ನಡ ಉಪನ್ಯಾಸಕರಾದ ತುರುವನೂರು ಮಲ್ಲಿಕಾರ್ಜುನ ಎಂ ವಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾನವ ಧರ್ಮ ಶೇಷ್ಠ ವಾದದ್ದು ಎಂದು ಸಮಾಜಕ್ಕೆ 8 ನೇ ಶತಮಾನದಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಸಾರಿದ್ದರು. ದೇವರನ್ನು ದೇವಾಲಯಗಳಲ್ಲಿ ಹುಡುಕುವುದಕ್ಕಿಂತ ನಿಮ್ಮ ಮನಸ್ಸಿನಲ್ಲಿ ಹುಡುಕಬೇಕು ಎಂದು ಹೇಳಿದರು. ಜಾತಿ ಬೇಧ ತೋರದೆ ಸಮಾಜದ ಎಲ್ಲರನ್ನು ಸಮನಾಗಿ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರು ಡಾ. ಧನಂಜಯ ಸರ್ಜಿ, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿ ಪ್ರಕಾಶ್, ಜಂಗಮ ಸಮಾಜದ ಜಿಲ್ಲಾಧ್ಯಕ್ಷರು ಚಂದ್ರಯ್ಯ, ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷರು ಟಿ ಬಿ ಮಲ್ಲಿಕಾರ್ಜುನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.