ಆನಂದಪುರಂದಲ್ಲಿ ಕೊರೋನಾ ನಿರ್ಬಂಧ ತೆರವು ಹಿನ್ನಲೆಯಲ್ಲಿ ಭಾನುವಾರ ಆನಂದಪುರ ಸಮೀಪದ ನರಸೀಪುರದ ಖ್ಯಾತ ನಾಟಿ ವೈದ್ಯ ದಿವಂಗತ ನಾರಾಯಣ ಮೂರ್ತಿ ಕುಟುಂಬಸ್ಥರು ಔಷಧ ವಿತರಣಾ ಕಾರ್ಯ ಪುನಾರಂಭಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಸುಮಾರು ಆರು ನೂರಕ್ಕೂ ಹೆಚ್ಚು ಜನರು ಸಾಮಾಜಿಕ ಅಂತರದ ಸರತಿ ಸಾಲಿನಲ್ಲಿ ನಿಂತು ಔಷಧಿಯನ್ನು ಪಡೆದುಕೊಂಡರು.
ಹುತಾತ್ಮರ ಸಚ್ಚಾರಿತ್ರ್ಯ ಸನ್ನಡತೆ ಪಾಲಿಸೋಣ
ಭಾರತದ ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಇನ್ನು ಮುಂತಾದ ಮಹನೀಯರು ಬಲಿದಾನ ನೀಡಿದ್ದಾರೆ. ಆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳು ಸದಾ ನಮ್ಮನ್ನು ಜಾಗ್ರತ ಸ್ಥಿತಿಯಲ್ಲಿಡಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ” ದೇಶಕ್ಕಾಗಿ ನಾವಿಂದು ಪ್ರಾಣವನ್ನು ಕೊಡಬೇಕಾಗಿಲ್ಲ. ಆದರೆ, ಸಚ್ಚಾರಿತ್ರೆ ಹಾಗೂ ಸನ್ನಡತೆಯಿಂದ ತಮ್ಮ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ದುಡಿಯಬೇಕು. ಸದೃಢ ದೇಶ ಕಟ್ಟಲು ನೆರವಾಗಬೇಕಿದೆ ಎಂದು ತ್ಯಾಗರಾಜ್ ಅವರು ತಿಳಿಸಿದ್ದಾರೆ.
ಭಾರತದ ಸರ್ವಜನಾಂಗದ ಕಲ್ಯಾಣದ ಬಗ್ಗೆ ಸದಾ ಚಿಂತಿಸುತ್ತಿದ್ದ ಗಾಂಧೀಜಿ, ಜಾತಿ ಮತದಿಂದಾಚೆಗೆ ಎಲ್ಲರಿಗೂ ಸಮಪಾಲು ಮತ್ತು ಸಮಾನ ಅವಕಾಶ ನೀಡುವಂತೆ ಬಲವಾಗಿ ಪ್ರತಿಪಾದಿಸಿದರು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ. ವಿರುಪಾಕ್ಷ, ಡಾ. ಗಜಾನನ ಪ್ರಭು, ಮತ್ತು ಡಾ. ರವೀಂದ್ರಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಕಾಲೇಜುಗಳು ಇಂದಿನಿಂದ ಆರಂಭ
ರಾಜ್ಯಾದ್ಯಂತ ಇಂದಿನಿಂದ ನೈಟ್ ಕರ್ಫ್ಯೂ ಅಂತ್ಯಗೊಳ್ಳಲಿದೆ. ಬಹುತೇಕ ಸಹಜಸ್ಥಿತಿ ಮರಳಲಿದೆ. ಕೊರೊನಾ ಸೋಂಕು ಹೆಚ್ಚಾಗಿದ್ದ ಕಾರಣಕ್ಕೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಪುನರಾರಂಭಗೊಂಡಿದೆ.
ಕೊರೋನಾ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯಲು ಆಡಳಿತ ಮಂಡಳಿಗಳು ಸಜ್ಜಾಗಿವೆ. ಈ ಮಧ್ಯೆ, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಭಾನುವಾರ ಬೆಂಗಳೂರಿನಲ್ಲಿ 11, 938 ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 28,264 ಪ್ರಕರಣಗಳು ಹಾಗೂ 68 ಸಾವು ವರದಿಯಾಗಿದೆ.
ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಿಗಿಂತ, ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗುವ ಅವರ ಸಂಖ್ಯೆ ಹೆಚ್ಚಾಗಿದೆ.
ಮೈಸೂರು ಜಿಲ್ಲೆಯಲ್ಲಿ 10, ದಕ್ಷಿಣ ಕನ್ನಡ 7, ಚಿತ್ರದುರ್ಗ 3, ತುಮಕೂರು 4, ಚಾಮರಾಜನಗರ, ಕಲ್ಬುರ್ಗಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆ, ಮಂಡ್ಯ ಇಲ್ಲಿ ತಲಾ 2, ಗದಗ, ರಾಮನಗರ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್: ಶುಲ್ಕ ಹೆಚ್ಚಳವಿಲ್ಲ
ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಶುಲ್ಕವನ್ನು ಹೆಚ್ಚಳ ಮಾಡುತ್ತದೆ ಎಂಬ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆದಿದೆ. ಈ ಬಗ್ಗೆ ಸರ್ಕಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಯಾವುದೇ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿದೆ.
ಪ್ರಸ್ತುತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ರವಾನಿಸಲಾಗಿದೆ ಹಾಗೂ ಈ ಶುಲ್ಕದ ವಿವರಗಳನ್ನು ಅಧಿಕೃತ ವೆಬ್ ನಲ್ಲಿ ಪ್ರಕಟಿಸಲಾಗಿದೆ. ಯಾವುದೇ ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅವಕಾಶ ಮಾಡಿಲ್ಲ.
ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಕಟಿಸಿರುವ ಶುಲ್ಕದ ವಿವರ ಹೀಗಿದ್ದು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಎಂಬಿಬಿಎಸ್ ಕೋರ್ಸ್ ವರ್ಷಕ್ಕೆ 1,28,746 ರೂ. ನಿಗದಿಪಡಿಸಿದೆ. ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರವೇಶ ಶುಲ್ಕ 59,800 ರೂ. ನಿಗದಿ ಮಾಡಲಾಗಿದೆ ಹಾಗೂ ದಂತ ವೈದ್ಯಕೀಯ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗೆ ವಾರ್ಷಿಕ 83,356 ರೂ. ನಿಗದಿ ಪಡಿಸಲಾಗಿದೆ.
ಕಳೆದ ವರ್ಷವೇ ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಸರ್ಕಾರಿ ಕೋಟಾದ ಸೀಟುಗಳ ಶುಲ್ಕದಲ್ಲಿ ಶೇ.30 ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು. ಯುಜಿಸಿ ನಿಟ್ 2021ನೇ ಸಾಲಿನ ವೈದ್ಯಕೀಯ ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಜನವರಿ 29ರಿಂದ ಕೌನ್ಸಿಲಿಂಗ್ ಪ್ರಾರಂಭವಾಗಿದ್ದು, ಫೆಬ್ರವರಿ 7ಕ್ಕೆ ಮುಕ್ತಾಯವಾಗಲಿದೆ ಎಂದು ತಿಳಿದುಬಂದಿದೆ
ಅಧಿಕ ಡಿಜಿಟಲ್ ಲೈಬ್ರರಿ ಹೊಂದಿದೆ ಶಿವಮೊಗ್ಗ ಜಿಲ್ಲೆ-ಸಚಿವ ಈಶ್ವರಪ್ಪ
ಗ್ರಾಮಮಟ್ಟದಲ್ಲಿ ಓದಿಗೆ ಪ್ರೋತ್ಸಾಹ ನೀಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗುವವರಿಗೆ ಅನುಕೂಲ ಕಲ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಲು ಒತ್ತುಕೊಡಲಾಗಿದೆ.
ಇದರ ಭಾಗವಾಗಿ ಈಗಾಗಲೇ ರಾಜ್ಯಾದ್ಯಂತ 1,885 ಡಿಜಿಟಲ್ ಗ್ರಂಥಾಲಯಗಳನ್ನು ತೆರೆಯಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡ್ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಕಾಗಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಬೆಂಗಳೂರು ಬಳಿಯ ರಾಜಾನುಕುಂಟೆಯಲ್ಲಿ ಎನಿಸಿರುವ ಡಿಜಿಟಲ್ ಮತ್ತು ಪುಸ್ತಕ ಗ್ರಂಥಾಲಯ ಗಮನಸೆಳೆದಿವೆ. ದಿನಾ ಓದಲು ಬರುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆವೂ ಇರುವುದು ಗಮನಾರ್ಹ.
ಪಂಚಾಯಿತಿ ಮಟ್ಟದ ಗ್ರಂಥಾಲಯಗಳು ಕನ್ನಡದ ರಾಯಭಾರಿಗಳಾಗಬೇಕು. ಕನ್ನಡ ಪುಸ್ತಕದ ಸಂಗ್ರಹವು ಓದುಗರನ್ನು ಸೆಳೆಯುವಂತಿರಬೇಕು. ಇದಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.
ಪಂಚಾಯಿತಿ ಗ್ರಂಥಾಲಯಗಳಲ್ಲಿ ಕನ್ನಡದ ಲೇಖಕರ ಪುಸ್ತಕಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರಶಾಂತ ಪರಿಸರದಲ್ಲಿ ಓದುವುದು ಉತ್ತಮ ಅನುಭವ. ಇದು ಜನರ ಅರಿವಿಗೆ ಬರುತ್ತಿದೆ. ಸಮುದಾಯದಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಹಾಗಾಗಿ ಹಳ್ಳಿಗಳಲ್ಲಿ ಸದ್ದಿಲ್ಲದೆ ಓದುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 2,383 ಸಾಮಾನ್ಯ ಗ್ರಂಥಾಲಯಗಳಿವೆ. ಜೊತೆಗೆ 1,885 ಡಿಜಿಟಲ್ ಲೈಬ್ರರಿ ತೆರೆಯಲಾಗಿದೆ. 13,04,000 ಮಕ್ಕಳು ನೋಂದಣಿ ಮಾಡಿಕೊಂಡು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗ್ರಂಥಾಲಯದ ವಿಭಾಗದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಯು 253 ಡಿಜಿಟಲ್ ಲೈಬ್ರರಿಗಳು ಹೊಂದುವ ಮೂಲಕ ರಾಜ್ಯದಲ್ಲೇ ಹೆಚ್ಚಿನ ಲೈಬ್ರರಿಗಳನ್ನು ಹೊಂದಿದ ಜಿಲ್ಲೆಯಾಗಿ ಹೊರಹೊಮ್ಮಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ:ವಿಶೇಷ ಚೇತನ ವ್ಯಕ್ತಿಗೆ ಕಾಲು ಮುರಿತ
ಸ್ಮಾರ್ಟ್ ಸಿಟಿ ಇಂದಾಗಿ ಶಿವಮೊಗ್ಗ ನಗರದ ಎಲ್ಲೆಡೆ ರಸ್ತೆಗಳಲ್ಲಿ ಗುಂಡಿ ಕಾಣುತ್ತಿದೆ. ಅಲ್ಲದೆ ಈ ಗುಂಡಿಗಳಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಕೂಡ ಅಧಿಕವಾಗಿದೆ. ಇದೀಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷಕ್ಕೆ ಅಂಧನೊಬ್ಬ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇಮಾಂಸಾಬ್ ಇನಾಂದಾರ್ ಎಂಬುವವರು ಹುಟ್ಟಿನಿಂದ ಅಂಧರಾಗಿದ್ದು, ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ ಎರಡನೇ ಡಿವಿಜನ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದಿನಂತೆ ಕುವೆಂಪು ರಂಗಮಂದಿರದ ಬಳಿ ತೆರಳುತ್ತಿದ್ದ ವೇಳೆ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಇಮಾಮ್ ಸಾಬ್ ಇನಾಂದಾರ್ ಅವರು ಮಾತನಾಡಿ “ನಾನು ಪ್ರತಿದಿನ ಓಡಾಡುವ ರಸ್ತೆ ಅದು ಹೊಸದಾಗಿ ಗುಂಡಿ ತೆಗೆದಿದ್ದಾರೆ. ನಾನು ಸ್ಟಿಕ್ ಇಟ್ಟು, ಎಡಗಾಲು ಮುಂದಿಟ್ಟು ನೇರವಾಗಿ ಗುಂಡಿಯೊಳಗೆ ಬಿದ್ದು ತೊಡೆ ಭಾಗದಲ್ಲಿ ಭಾರಿ ನೋವಾಯಿತು” ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭದಿಂದಲೂ ಸಾರ್ವಜನಿಕರಿಗೆ ದಿನನಿತ್ಯ ಒಂದಲ್ಲಾ ಒಂದು ಕಿರಿಕಿರಿ ಯಿಂದಾಗಿ ಜನರು ರೋಸಿಹೋಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸುವರೇ ಕಾದುನೋಡಬೇಕಾಗಿದೆ.
ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಮಂಡನೆ
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ಇದರ ಜೊತೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.
ಮಂಗಳವಾರ 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕಾಗದರಹಿತ ಡಿಜಿಟಲ್ ಬಜೆಟ್ ಮಂಡನೆಯಾಗಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 490 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ
ಶಿವಮೊಗ್ಗ ಜಿಲ್ಲೆಯಲ್ಲಿ 490 ಕೋವಿಡ್ ಪೋಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 361 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
219 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನ ಪ್ರಕರಣ ಸೇರಿದಂತೆ 2,081 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ ಹಾಗೂ ಒಬ್ಬರು ಕೋವಿಡ್ ಸೋಂಕಿನಿಂದ ಭಾನುವಾರ ಮೃತಪಟ್ಟಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ 58ಮಂದಿ, ಡಿಸಿಹೆಚ್ ಸಿ 24, ಖಾಸಗಿ ಆಸ್ಪತ್ರೆಯಲ್ಲಿ 10, ಹೋಂ ಐಸೋಲೇಷನ್ ನಲ್ಲಿ 2,529 ಮತ್ತು ಟ್ರಿಯೇಜ್ ನಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,633 ಸಕ್ರಿಯ ಪ್ರಕರಣಗಳಿವೆ.
ಶಿವಮೊಗ್ಗ 168, ಭದ್ರಾವತಿ 85, ತೀರ್ಥಹಳ್ಳಿ 34, ಶಿಕಾರಿಪುರ 70, ಸಾಗರ 57, ಹೊಸನಗರ 34, ಸೊರಬ 29, ಹೊರಜಿಲ್ಲೆಯ 13 ಮಂದಿಗೆ ಪಾಸಿಟಿವ್ ಬಂದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ 138 ವರದಿಗಳು ಪಾಸಿಟಿವ್ ಬಂದಿವೆ ಎಂದು ತಿಳಿದುಬಂದಿದೆ.
ನಿರಂತರ ಜ್ಯೋತಿ:ಲೋಪದ ಬಗ್ಗೆ ತನಿಖಾ ಸಮಿತಿ ರಚನೆ
ರಾಜ್ಯ ಸರ್ಕಾರ ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ಉಂಟಾಗಿರುವ ಲೋಪಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಸಮಿತಿಯನ್ನು ರಚಿಸಿದ್ದು ವರದಿ ಸಲ್ಲಿಸಲು 30 ದಿನಗಳ ಗಡುವನ್ನು ನೀಡಿದೆ.
ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮೆಸ್ಕಾಂನ ಶಿವಮೊಗ್ಗ ವ್ಯಾಪ್ತಿಯಲ್ಲಿ ನಡೆದ ನಿರಂತರ ಜ್ಯೋತಿ ಕಾಮಗಾರಿ ಅನುಷ್ಠಾನದಲ್ಲಿ ನಡೆದಿರುವ ನ್ಯೂನತೆ ಹಾಗೂ ಲೋಪದ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಿ ಆದೇಶವನ್ನು ಹೊರಡಿಸಿದ್ದಾರೆ.
ಈ ಸಮಿತಿಯನ್ನು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಪ್ರೆಸಿಡೆಂಟ್ ಭಾಗದ ನಿವೃತ್ತ ನಿರ್ದೇಶಕ ಕೆ ವಿ ಶಿವಕುಮಾರ್, ತಾಂತ್ರಿಕ ವಿಭಾಗದ ಮ್ಯಾನೇಜರ್ ಬಿ.ಆರ್.ಮಂಜುನಾಥ್, ಕೆಪಿಟಿಸಿಎಲ್ ಯಂತ್ರಣ ಅಧಿಕಾರಿ ಕೆ.ಜಿ.ಅನಿತಾ ಈ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು ಯೋಜನೆಯಲ್ಲಿನ ಅವ್ಯವಹಾರ ಹಾಗೂ ನಡೆದಿರುವ ನ್ಯೂನ್ಯತೆಗಳ ಬಗ್ಗೆ ನಿರಂತರ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಫಲವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಈ ಕುರಿತಂತೆ ಜನವರಿ ಒಂದರಂದು ಜಿಲ್ಲೆಯ ಸಚಿವರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಅಧಿಕಾರಿಗಳನ್ನು ಇಂಧನ ಸಚಿವರು ತರಾಟೆಗೆ ತೆಗೆದುಕೊಂಡಿದ್ದರು.
ನಿರಂತರ ಜ್ಯೋತಿ ಕಾಮಗಾರಿಗಳ ಮೇಲುಸ್ತುವಾರಿಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಭದ್ರಾವತಿ ಗ್ರಾಮೀಣ ಉಪವಿಭಾಗ ಘಟಕ 1ರ ಕಿರಿಯ ಎಂಜಿನಿಯರ್ ಬಾಲಕೃಷ್ಣ ಶಿವಮೊಗ್ಗ ಕಾರ್ಯ ಮತ್ತು ಪಾಲನಾ ವೃತ್ತ ಎಂ. ಆರ್.ಟಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಮದನ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರು ಈ ಪ್ರಕರಣದ ಪೂರ್ಣ ತನಿಖೆಗೆ ಆದೇಶಿಸಿದ್ದಾರೆ.
ನಮ್ಮ ನೆಚ್ಚಿನ ವರಕವಿ ದ.ರಾ. ಬೇಂದ್ರೆಯವರ ಜನ್ಮದಿನ
ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು 31/01/1896ರಲ್ಲಿ ಧಾರವಾಡದ ಶಿರಹಟ್ಟಿಯಲ್ಲಿ ಜನಿಸಿದರು.
ಅವರ ಕಾಲೇಜು ಶಿಕ್ಷಣವು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಮುಗಿಸಿದರು. 1918ರಲ್ಲಿ ಬಿ.ಎ.ಪದವಿಯನ್ನು ಪಡೆದರು.
ಕೆಲವು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1935ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.
ಅವಧೂತ ಕವಿ, ರಸಋಷಿ, ವರಕವಿ ಶ್ರೇಷ್ಠ ಕವಿ ಹೀಗೆ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಪ್ರೀತಿ, ಪ್ರಣಯ, ಪ್ರೇಮದ ವಿವಿಧ ಮುಖಗಳನ್ನು ಪರಿಚಯಿಸುವ ಅವರ ಕವಿತೆಗಳು ಎಲ್ಲರನ್ನೂ ತಮ್ಮತ್ತ ಸೆಳೆಯುತ್ತವೆ. ಬೇಂದ್ರೆಯವರ ಕವಿತೆಗಳು ಇಂದಿಗೂ ಕಾವ್ಯ ದೃಷ್ಟಿಯಿಂದ ಗಮನಾರ್ಹವಾಗಿಯೇ ಇವೆ.
ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿಯೂ ಅನನ್ಯ ಸೇವೆ ಸಲ್ಲಿಸಿದ್ದರು.
ಅವರು 1942ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಒಪ್ಪೊತ್ತಿನ ಶಿಕ್ಷಕರಾದರು.
1944ರಲ್ಲಿ ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು.
1956ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು.
ಮುಂಬಯಿಯಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
1930ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ಜೀವನ ಮಾಸಪತ್ರಿಕೆ ಮತ್ತು ಜಯಕರ್ನಾಟಕ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದರು.
ಬೇಂದ್ರೆ ಅವರಿಗೆ 1968ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.
1976ರಲ್ಲಿ ಕಾಶಿಯ ವಿದ್ಯಾಪೀಠವೂ ಗೌರವ ಡಾಕ್ಟರೇಟ್ ನೀಡಿತು. ಕೇಂದ್ರ ಸರ್ಕಾರ 1968ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ಇವರಿಗೆ ಸಂದಿದೆ.
1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರಿಗೆ ನೀಡಲಾಯಿತು.
ಇವರ ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತರೆ, ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು.
ಬೇಂದ್ರೆಯವರ ಕವನಗಳು, ಕನ್ನಡದ ಜನರನ್ನು ಮಂತ್ರಮುಗ್ಧರನ್ನಾಗಿಸಿವೆ.
ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ 25 ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ), ನರಬಲಿ, ತುತ್ತಿನ ಚೀಲ, 33 ಕೋಟಿ , ಮಾಯಾ ಕಿನ್ನರಿ, ಇವೆಲ್ಲವೂ ಬೇಂದ್ರೆಯವರ ಪ್ರಮುಖ ಕೃತಿಗಳಾಗಿವೆ. ಗಂಗಾವತರಣ ಕವಿತೆ “ಇಳಿದು ಬಾ ತಾಯಿ” ಇವರ ಸುಪ್ರಸಿದ್ಧ ಕವಿತೆಗಳಲ್ಲಿ ಒಂದಾಗಿದೆ. ಗೆಳೆಯ ಶಂಕರದೇವ, ಗುರು ದೇವರಂತ ಕವಿತೆಗಳು ಶ್ರೇಷ್ಠ ವ್ಯಕ್ತಿತ್ವ ಪರಿಚಯಿಸುವಂಥವು.+
ಅಂಬಿಕಾತನಯದತ್ತ ಕಾವ್ಯನಾಮದಿಂದ ಪ್ರಸಿದ್ಧರಾದ ಬೇಂದ್ರೆಯವರು 26-10-1982ರಲ್ಲಿ ಮುಂಬಯಿನಲ್ಲಿ ನಿಧನರಾದರು.
