ಗ್ರಾಮಮಟ್ಟದಲ್ಲಿ ಓದಿಗೆ ಪ್ರೋತ್ಸಾಹ ನೀಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗುವವರಿಗೆ ಅನುಕೂಲ ಕಲ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಲು ಒತ್ತುಕೊಡಲಾಗಿದೆ.
ಇದರ ಭಾಗವಾಗಿ ಈಗಾಗಲೇ ರಾಜ್ಯಾದ್ಯಂತ 1,885 ಡಿಜಿಟಲ್ ಗ್ರಂಥಾಲಯಗಳನ್ನು ತೆರೆಯಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡ್ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಕಾಗಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಬೆಂಗಳೂರು ಬಳಿಯ ರಾಜಾನುಕುಂಟೆಯಲ್ಲಿ ಎನಿಸಿರುವ ಡಿಜಿಟಲ್ ಮತ್ತು ಪುಸ್ತಕ ಗ್ರಂಥಾಲಯ ಗಮನಸೆಳೆದಿವೆ. ದಿನಾ ಓದಲು ಬರುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆವೂ ಇರುವುದು ಗಮನಾರ್ಹ.
ಪಂಚಾಯಿತಿ ಮಟ್ಟದ ಗ್ರಂಥಾಲಯಗಳು ಕನ್ನಡದ ರಾಯಭಾರಿಗಳಾಗಬೇಕು. ಕನ್ನಡ ಪುಸ್ತಕದ ಸಂಗ್ರಹವು ಓದುಗರನ್ನು ಸೆಳೆಯುವಂತಿರಬೇಕು. ಇದಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.
ಪಂಚಾಯಿತಿ ಗ್ರಂಥಾಲಯಗಳಲ್ಲಿ ಕನ್ನಡದ ಲೇಖಕರ ಪುಸ್ತಕಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರಶಾಂತ ಪರಿಸರದಲ್ಲಿ ಓದುವುದು ಉತ್ತಮ ಅನುಭವ. ಇದು ಜನರ ಅರಿವಿಗೆ ಬರುತ್ತಿದೆ. ಸಮುದಾಯದಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಹಾಗಾಗಿ ಹಳ್ಳಿಗಳಲ್ಲಿ ಸದ್ದಿಲ್ಲದೆ ಓದುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 2,383 ಸಾಮಾನ್ಯ ಗ್ರಂಥಾಲಯಗಳಿವೆ. ಜೊತೆಗೆ 1,885 ಡಿಜಿಟಲ್ ಲೈಬ್ರರಿ ತೆರೆಯಲಾಗಿದೆ. 13,04,000 ಮಕ್ಕಳು ನೋಂದಣಿ ಮಾಡಿಕೊಂಡು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಗ್ರಂಥಾಲಯದ ವಿಭಾಗದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆಯು 253 ಡಿಜಿಟಲ್ ಲೈಬ್ರರಿಗಳು ಹೊಂದುವ ಮೂಲಕ ರಾಜ್ಯದಲ್ಲೇ ಹೆಚ್ಚಿನ ಲೈಬ್ರರಿಗಳನ್ನು ಹೊಂದಿದ ಜಿಲ್ಲೆಯಾಗಿ ಹೊರಹೊಮ್ಮಿದೆ.