Friday, February 27, 2026
Friday, February 27, 2026
Home Blog Page 1602

ಜೀವನದ ಕೊನೆಯ ದಿನಗಳು ಆರೋಗ್ಯ ಕ್ಷೇತ್ರಕ್ಕೆ ಮೀಸಲು-ರತನ್ ಟಾಟಾ

0

ಅಸ್ಸಾಂ ನ ದಿಬುಗಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಅರ್ಬುದ ರೋಗ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನೆರವೇರಿತು.

ಈ ಕೇಂದ್ರವು ಆಸ್ಸಾಂ ಕ್ಯಾನ್ಸರ ಕೇರ ಫೌಂಡೇಶನ, ಟಾಟಾ ಟ್ರಸ್ಟ ಮತ್ತು ಆಸ್ಸಾಂ ಸರಕಾರದ ಜಂಟಿ ಸಹಯೋಗದಿಂದ ನಿರ್ಮಿಸಲ್ಪಟ್ಟಿದೆ.

ಕಾರ್ಯಕ್ರಮದಲ್ಲಿ ಉದ್ಯಮಿ ರತನ ಟಾಟಾ ಅವರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಅರೋಗ್ಯ ಕ್ಷೇತ್ರಕ್ಕೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುವಾಗ ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲೂ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಪ್ರೊ.ಬಿ.ತಿಪ್ಪೆಸ್ವಾಮಿ ಅವರಿಗೆ ವಿಜಿಎಸ್ ಟಿ ಶ್ರೇಷ್ಠ ಸಂಶೋಧನಾ ಪ್ರಶಸ್ತಿ

0

ಕುವೆಂಪು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ತಿಪ್ಪೇಸ್ವಾಮಿ ಅವರು ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ (ವಿಜಿಎಸ್‌ಟಿ) ನೀಡುವ ಪ್ರತಿಷ್ಠಿತ ಶ್ರೇಷ್ಠ ಸಂಶೋಧನಾ ಪ್ರಕಟಣಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಜವಾಹರ್‌ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಪ್ರಶಸ್ತಿ ಪ್ರದಾನ ಮಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಜಾಗತಿಕ ಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಪಠ್ಯಾಧಾರಿತ ಪಾಠ ಪ್ರವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಸಮಾಜಕ್ಕೆ ಉಪಯುಕ್ತವಾಗುವಂತಹ ಅನ್ವಯಿಕ ಸಂಶೋಧನೆಗಳನ್ನು ಕೈಗೊಳ್ಳಬೇಕು. ಇಂಥಹಾ ಸಮಾಜಮುಖಿ ಸಂಶೋಧನೆ ಕೈಗೊಂಡಿರುವ ಪ್ರಶಸ್ತಿ ವಿಜೇತರು ಅಭಿನಂದನಾರ್ಹರು ಎಂದರು.

ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ರಾಮಸಾಗರ ಗ್ರಾಮದ ಗುಂಡ ಬಸಯ್ಯ ಮತ್ತು ಪಾಪಮ್ಮ ಅವರ ಪುತ್ರರಾದ ಪ್ರೊ. ಬಿ. ತಿಪ್ಪೇಸ್ವಾಮಿ ಈ ಹಿಂದೆ ಯುಜಿಸಿ ನೀಡುವ ಸರ್ ಸಿ. ವಿ. ರಾಮನ್ ಪೋಸ್ಟ್ ಡಾಕ್ಟರಲ್ ಫೆಲೋಷಿಪ್ ಪಡೆದು ಅಮೆರಿಕಾದ ನಾರ್ಥ್ ಕೆರೊಲಿನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಉನ್ನತ ಸಂಶೋಧನೆ ಕೈಗೊಂಡಿದ್ದಾರೆ.

ಕಳೆದ 16 ವರ್ಷಗಳಿಂದ ಸ್ನಾತಕೋತ್ತರ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ತಿಪ್ಪೇಸ್ವಾಮಿ ಅವರ ಸಾಧನೆ ಇತರ ಅಧ್ಯಾಪಕರಿಗೆ ಮಾದರಿಯಾಗಲಿ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮತ್ತು ಕುಲಸಚಿವೆ ಜಿ. ಅನುರಾಧ ಅಭಿನಂದಿಸಿದ್ದಾರೆ.

ಮದುವೆ ನೋಡಲು ಬಂದವರನಾಗಿ ತಾಳಿ ಕಟ್ಟಿದ!

0

ನಮ್ಮಲ್ಲಿ ಒಂದು ಮಾತಿದೆ ಕಾಲ ಯಾರಿಗೂ ಕಾಯೋದಿಲ್ಲ.!
ಆ ಸಮಯಕ್ಕೆ ಏನು ಆಗಬೇಕು ಅಂತ ಇರುತ್ತೋ ಅದೇ ಆಗುತ್ತದೆ.
ಯಾವುದನ್ನು ಯಾರೂ ತಪ್ಪಿಸೋಕೆ ಆಗೋದಿಲ್ಲ.

ನೋಡಿ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೊಂದು ಉದಾಹರಣೆ.
ಏಪ್ರಿಲ್ ಇಪ್ಪತ್ತೆರಡ ರಂದು ಮದುವೆ ನಡೆಯೋದಿತ್ತು.ಮಲ್ಕಾಪುರ ಪಾಂಗ್ರಾ ಗ್ರಾಮದಲ್ಲಿ ಭರ್ಜರಿ ಚಪ್ಪರ,ಶಾಮಿಯಾನ,ವಾದ್ಯಮೇಳ
ರುಚಿರುಚಿಯಾದ ತಿಂಡಿ ನಂತರ ಭೂರಿ ಭೋಜನ ಏರ್ಪಾಡಾಗಿತ್ತು.
ಅಪರಾಹ್ನ ನಾಕು ಗಂಟೆಗೆ ಮುಹೂರ್ತ. ವಧು ಸಿಂಗಾರ ಮಾಡಿಕೊಂಡು ರೆಡಿ!.
ಆದರೆ ವರ ಬಂದೇ ಇಲ್ಲ! ಹುಡುಕಾಡಿದರು. ಎಲ್ಲಿ ಹುಡುಕಿದರೂ ಇಲ್ಲ.ನಾಪತ್ತೆ !
ಕನ್ಯಾಪಿತೃಗಳ ಗೋಳು ಹೇಳತೀರದು. ಸುಮಾರು ಹೊತ್ತು ಕಾದರು. ವರನ ಬಂಧುಗಳ ಬಳಿಯೂ ವರನ ಮಾಹಿತಿಯಿಲ್ಲ!.
ಕೊನೆಗೆ ಬೇಸತ್ತ ಹೆಣ್ಷಿನ ತಂದೆ.
ಮದುವೆಗೆ ಬಂದಿದ್ದ ಬಂಧುಗಳಲ್ಲಿ ಎಲಿಜಿಬಲ್ ಬ್ಯಾಚಲರ್ ನನ್ನ ಆರಿಸಿದರು. ಮಗಳಿಗೆ ಸಮಾಧಾನ ಹೇಳಿ ಒಪ್ಪಿಸಿದರು.
ಅಕಸ್ಮಿಕ ಆಮಂತ್ರಣದಿಂದ ವರನ ಪಟ್ಟ ಪಡೆದ ಯುವಕ ತಾಳಿ ಕಟ್ಠೇ ಬಿಟ್ಟ. ಮದುವೆ ನಡೆದೇ ಹೋಯಿತು. ಎಲ್ಲರೂ ಸಿಹಿ ಊಟಮಾಡಿ ಸಂತೋಷಪಟ್ಟರು.

ರಾತ್ರಿ ಎಂಟುಗಂಟೆಗೆ ಒಂದು ಗುಂಪು ಮದುವೆ ಮಂಟಪದೊಳಕ್ಕೆ ನುಗ್ಗಿತು.
ಆ ಗುಂಪಿನಲ್ಲಿ ಒರಿಜಿನಲ್ ವರ ಇದ್ದ. ಆದರೆ ಅವನಾಗಲೇ ಮದ್ಯಹೀರಿ ಅಮಲಿನಲ್ಲಿ ಓಲಾಡುತ್ತಿದ್ದ.

ಮುಹೂರ್ತಕ್ಕೆ ಬರಬೇಕಾದವನು.ಗೆಳೆಯರೊಂದಿಗೆ ಬಾರಿನಲ್ಲಿ ಕುಣಿದುಕುಪ್ಪಳಿಸಿ ಮದುವೆಗೆ ಬರುವುದನ್ನೇ ಮರೆತಿದ್ದ.
ವಿಷಯ ಗೊತ್ತಾಯಿತು.
ಸಮಯಕ್ಕೆ ಸರಿಯಾಗಿ ಬಂದಿದ್ರೆ
ಗೃಹಸ್ಥನಾಗುತ್ತಿದ್ದೆ ಎಂದು ಅಮಲು
ಇಳಿದ ಮೇಲೆ ಜ್ಞಾನೋದಯವಾಯಿತು.ಕಾಲ ಮೀರಿತ್ತು. ಗೊತಗತಾಗಿದ್ದ ಸುಂದರಿ ಕೈತಪ್ಪಿದ್ದಕ್ಕೆ ವಿಲವಿಲ ಒದ್ದಾಡಿದ.
ಮತ್ತೆ ವರ ನಾಗೇ ಉಳಿದ.

ಟೈಮಿಗೆ ಬೆಲೆ ಕೊಟ್ರೆ
ಅದೂ ನಮಗೆ ಬೆಲೆ ಕೊಡತ್ತೆ ಅಲ್ವೆ?

ವಿಶ್ವಸಂಸ್ಥೆ ಕಾರ್ಯದರ್ಶಿ ಉಕ್ರೇನ್ ಭೇಟಿ ವೇಳೆ ರಷ್ಯ ಬಾಂಬ್ ದಾಳಿ

0

ಕಳೆದೆರಡು ತಿಂಗಳಿನಿಂದ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ, ಶುಕ್ರವಾರದಂದು ಉಕ್ರೇನ್‌ ರಾಜಧಾನಿಯ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್‌ ಅವರು ಕೀವ್‌ಗೆ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಆ ನಗರದ ಮೇಲೆ ರಷ್ಯಾ ದಾಳಿ ನಡೆಸುವ ಮೂಲಕ ತನ್ನ ಉದ್ಧಟತನ ಪ್ರದರ್ಶಿಸಿದೆ ಎಂದು ತಿಳಿದುಬಂದಿದೆ.

ರಷ್ಯಾದ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್‌ಕಿ ಹಾಗೂ ಗುಟೆರಸ್‌ ಅವರ ನಡುವಿನ ಸಭೆ ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಕೀವ್‌ ನಗರದ ಮೇಲೆ ದಾಳಿ ನಡೆಸಲಾಗಿದೆ. ಸಭೆ ನಡೆದ ಪ್ರಾಂತದಲ್ಲಿ ಯಾವುದೇ ದಾಳಿ ಆಗಿಲ್ಲ. ಹೀಗಾಗಿ ಗುಟೆರಸ್‌ ಹಾಗೂ ಅವರೊಂದಿಗಿದ್ದ ವಿಶ್ವಸಂಸ್ಥೆಯ ಕೆಲವು ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಹಲವು ದಶಕಗಳ ಹಿಂದೆಯೇ ನಿರ್ಮಾಣಗೊಂಡಿರುವ ರಷ್ಯಾ- ಭಾರತ ಬಾಂಧವ್ಯದಿಂದ ಎರಡೂ ದೇಶಗಳ ಅನಿವಾರ್ಯತೆಗಳು ಪರಸ್ಪರ ಪೂರ್ಣಗೊಂಡಿವೆ.

ಇಂಥದ್ದೇ ಒಂದು ಶಾಶ್ವತ ಸಂಬಂಧವನ್ನು ಭಾರತ ದೊಂದಿಗೆ ಸ್ಥಾಪಿಸಲು ಅಮೆರಿಕ ಪ್ರಯ ತ್ನಿಸುತ್ತಿದೆ. ಆ ನಿಟ್ಟಿನಲ್ಲಿ, ಚರ್ಚೆಗಳು ಮುಂದುವರಿದಿವೆ” ಎಂದು ಅವರು ಹೇಳಿದ್ದಾರೆ.

ಭಾರತವು ತನ್ನ ಆವಶ್ಯಕತೆಗನುಗುಣವಾಗಿ ರಷ್ಯಾದೊಂದಿಗೆ ಅತ್ಯುತ್ತಮ ವಾಣಿಜ್ಯ ಸಂಬಂಧವನ್ನು ದಶಕಗಳ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದೆ.

ಅಂಥದ್ದೊಂದು ಗಟ್ಟಿಯಾದ ವಾಣಿಜ್ಯ ನಂಟನ್ನು ಈ ಹಿಂದೆ ಸ್ಥಾಪಿಸಲು ಅಮೆರಿಕದಿಂದ ಸಾಧ್ಯವಾಗಿಲ್ಲ ಎಂದು ಅಮೆರಿಕದ ಗೃಹ ಸಚಿವ ಅಂತೋನಿ ಬ್ಲಿಂಕನ್‌ ಹೇಳಿದ್ದಾರೆ.

ಗ್ರಾಪಂ ಮಟ್ಟದಲ್ಲಿ ವಿವೇಕಾನಂದ ಯುವಕ ಸಂಘ ರಚನೆ

0

ರಾಜ್ಯ ಸರ್ಕಾರ ಯುವ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ.

ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೊಂದು ಸ್ವಾಮಿ ವಿವೇಕಾನಂದ ಹೆಸರಿನ ಸಂಘಗಳನ್ನು ರೂಪಿಸಿ, ಯುವಕರ ಸ್ವಾವಲಂಬನೆ, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲು ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಯೋಜನೆ ರೂಪಿಸಲಿದೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಕ್ರೀಡಾ ಸಚಿವ ನಾರಾಯಣಗೌಡ, ರಾಜ್ಯದ ಪ್ರತಿ ಗ್ರಾಮಪಂಚಾಯಿತಿಗೊಂದು ಯುವ ಸಂಘಗಳನ್ನು ಸ್ಥಾಪಿಸಿ, ಯುವಕರಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿ, ಯುವಸಮುದಾಯಕ್ಕೆ ನಾಯಕತ್ವದ ಗುಣ, ನಿರುದ್ಯೋಗ ನಿವಾರಣೆಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಅಗತ್ಯ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ರಾಜ್ಯಾದ್ಯಂತ ಈಗಾಗಲೇ ಜಾರಿಯಲ್ಲಿರುವ ಯುವಸ್ಪಂದನಾ ಯೋಜನೆಯಡಿ ಈ ಸಂಘಗಳನ್ನು ರಚಿಸಿ, ಯುವಕರಿಗೆ ಅಗತ್ಯ ತರಬೇತಿ, ಆರ್ಥಿಕ ಚಟುವಟಿಕೆಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ವಹಿಸಿದೆ.

ನನ್ನ ಕುಟುಂಬವನ್ನೇ ಸೆರೆ ಹಿಡಿಯಲು ರಷ್ಯ ಪ್ರಯತ್ನಿಸಿತು- ಝೆಲೆನ್ಸ್ಕಿ

0

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ರಷ್ಯಾದ ಪಡೆಗಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಸೆರೆ ಹಿಡಿಯಲು ತುಂಬಾ ಸಮೀಪಕ್ಕೆ ಬಂದಿದ್ದವು ಎಂದು ಹೇಳಿದ್ದಾರೆ.

ಉಕ್ರೇನ್ ಯುದ್ಧದ ಆರಂಭಿಕ ದಿನಗಳ ತೀವ್ರತೆಯನ್ನು ನೆನಪಿಸಿಕೊಳ್ಳುತ್ತಾ ಅವರು ಟೈಮ್ ನಿಯತಕಾಲಿಕೆಯೊಂದಿಗೆ ಮಾತನಾಡುವಾಗ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಾನು ಮತ್ತು ಪತ್ನಿ ಒಲೆನಾ ಝೆಲೆನ್‌ಸ್ಕಿ, ಮಲಗಿದ್ದ 17 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ಎಬ್ಬಿಸಿ ಬಾಂಬ್ ದಾಳಿ ಆರಂಭವಾಗಿದೆ ಎಂದು ಹೇಳಿದ್ದೆವು ಎಂದು ಆ ಭೀಕರ ಕ್ಷಣಗಳನ್ನು ನೆನಪಿಸಿಕೊಂಡ ಝೆಲೆನ್‌ಸ್ಕಿ, ಆಗ ಹೊರಗಡೆ ಶಬ್ಧ ಜೋರಾಗಿತ್ತು. ಅಲ್ಲಿ ಸ್ಫೋಟಗಳು ಸಂಭವಿಸಿದ್ದವು’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ವೇಳೆಗಾಗಲೇ ತನ್ನನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಕಚೇರಿಗಳು ಸುರಕ್ಷಿತ ಸ್ಥಳವಲ್ಲ ಎಂದು ಶೀಘ್ರದಲ್ಲೇ ಸ್ಪಷ್ಟವಾಯಿತು. ಅವರನ್ನು ಮತ್ತು ಅವರ ಕುಟುಂಬದವರನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ರಷ್ಯಾದ ಪಡೆಗಳು ಕೀವ್‌ಗೆ ಧುಮುಕಿರುವುದಾಗಿ ನನಗೆ ಮಾಹಿತಿ ದೊರಕಿತು ಎಂದು ತಿಳಿಸಿದ್ದಾರೆ.

ಉಕ್ರೇನ್‌ನ ಮಿಲಿಟರಿ ಗುಪ್ತಚರ ಸೇವೆಯ ಹಿರಿಯ ಅಧಿಕಾರಿ ಓಲೆಕ್ಸಿ ಅರೆಸ್ಟೋವಿಚ್, ಈ ದೃಶ್ಯವು ‘ವಿಚಿತ್ರವಾಗಿತ್ತು’ ಮತ್ತು ಝೆಲೆನ್‌ಸ್ಕಿ ಹೆಂಡತಿ ಮತ್ತು ಮಕ್ಕಳು ಇನ್ನೂ ಅಲ್ಲಿದ್ದಾಗ ರಷ್ಯಾದ ಪಡೆಗಳು ಎರಡು ಬಾರಿ ಕಾಂಪೌಂಡ್‌ಗೆ ದಾಳಿ ಮಾಡಲು ಯತ್ನಿಸಿದವು ಎಂದರು.

ಚಿಕ್ಕಮಗಳೂರು ಜಿಲ್ಲೆ ಬಗ್ಗವಳ್ಳಿಯ ಲೆ.ಬಿ.ಎಸ್.ರಾಜು ನಮ್ಮ ಸೇನಾ ಉಪಮುಖ್ಯಸ್ಥರು

0

ಕನ್ನಡಿಗರಾದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರು ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ನೇಮಕ ಆಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,
ಕನ್ನಡಾಂಬೆಯ ಹೆಮ್ಮೆಯ ಪುತ್ರ ಜನರಲ್ ರಾಜು ಅವರಿಗೆ ಶುಭವಾಗಲಿ, ಅವರ ಮುಂದಿನ ಎಲ್ಲ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಅವರು ಹಾರೈಸಿದ್ದಾರೆ.

ರಾಷ್ಟ್ರ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕದ ಪರಂಪರೆಯ ಇನ್ನೊಂದು ಗರಿ ಜನರಲ್ ಬಿ.ಎಸ್.ರಾಜು ಅವರು ಎಂದು ಶ್ಲಾಘಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದವರಾದ ಅವರು ಕಾಶ್ಮೀರದಲ್ಲಿ ನಡೆದ ಆಪರೇಷನ್ ಪರಾಕ್ರಮಸೇರಿ ಹಲವಾರು ಮಹತ್ವದ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ವಿದ್ಯುನ್ಮಾನ ವಲಯಕ್ಕೆ ಹೆಚ್ಚಿನ ಉತ್ತೇಜನ

0

ರಾಜ್ಯವು ಸಮರ್ಥವಾದ ಇ.ಎಸ್‌.ಡಿ.ಎಂ. ನೀತಿಯನ್ನು ಈಗಾಗಲೇ ಜಾರಿಗೆ ತಂದಿದೆ. ಸೆಮಿಕಂಡಕ್ಟರ್‌ ಉದ್ದಿಮೆಗಳಿಗೆ ಅಗತ್ಯ ಬಿದ್ದರೆ ಹೆಚ್ಚಿನ ಭೂಮಿಯನ್ನು ಒದಗಿಸಲು ಸಿದ್ಧ ಎಂದು ಐಟಿ ಮತ್ತು ಬಿಟಿ ಸಚಿವ ಡಾ| ಸಿ. ಎನ್‌. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರು ಖಾಸಗಿ ಹೊಟೇಲಿನಲ್ಲಿ ಆರಂಭವಾದ ಮೂರು ದಿನಗಳ ಪ್ರಪ್ರಥಮ “ಸೆಮಿಕಾನ್‌ ಇಂಡಿಯಾ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಈ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವ ಮೂಲಕ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಸರಕಾರವು ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಉದ್ದಿಮೆಗಳಿಗೆ ನೀಡುತ್ತಿರುವ ನೆರವಿನ ವ್ಯವಸ್ಥೆ ಬೇರೆಲ್ಲೂ ಇಲ್ಲ ಎಂದರು.

ಕೇಂದ್ರ ಸರಕಾರವು ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡುತ್ತಿದೆ. ರಾಜ್ಯವು ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದು, ವಿದ್ಯುನ್ಮಾನ ವಲಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ದೇಶದಲ್ಲಿ ಎಲೆಕ್ಟ್ರಾನಿಕ್‌ ಡಿಸೈನ್‌ ವಲಯದಲ್ಲಿ ಶೇ.40ರಷ್ಟು ಕಂಪೆನಿಗಳು ಬೆಂಗಳೂರು ನಗರದಲ್ಲಿ ನೆಲೆಗೊಂಡಿವೆ ಎಂದು ಅವರು ತಿಳಿಸಿದರು.

ಸುಮಾತ್ರಾ ದ್ವೀಪದಲ್ಲಿ ಚಿನ್ನದಗಣಿ ಕುಸಿದು 12 ಸಾವು

0

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಅನಧಿಕೃತ ಚಿನ್ನದ ಗಣಿಗಾರಿಕೆ ನಡೆಯುತ್ತದ್ದಾಗ ಭೂಕುಸಿತ ಸಂಭವಿಸಿದ್ದ 12 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಾಯಗೊಂಡ ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು 12 ಇತರ ಮಹಿಳೆಯರ ದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮರ್ಲಾನ್ ರಾಜಗುಕ್ಗುಕ್ ಹೇಳಿದರು.

ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯಯ ಹಳ್ಳಿಯೊಂದರಲ್ಲಿ ಸ್ಥಳೀಯ ಗ್ರಾಮದ ಮಹಿಳೆಯರು ಚಿನ್ನದ ಗಣಿಯ ವಯಯದಲ್ಲಿ ಸುಮಾರು 2 ಮೀಟರ್ (6.5 ಅಡಿ) ಆಳದ ಹೊಂಡ ತೆಗೆದು ನಿನ್ನೆ ಸಂಜೆ ಚಿನ್ನದ ಮೆತ್ತಿರುವ ಕಲ್ಲು ಹೊಡೆದು ಸಂಗ್ರಹಿಸುವ ವೇಳೆ ಭೂಕುಸಿತ ಉಂಟಾಗಿದೆ.

ಇಲ್ಲಿನ ಬೆಟ್ಟ ಗುಡ್ಡದಲ್ಲಿ ಚಿನ್ನದ ನಿಕ್ಷೇಪ ವಿದ್ದು ಅದನ್ನು ತೆಗೆಯಲು ಸ್ತಳೀಯರು ಅಪಾಯವನ್ನು ಲೆಕ್ಕಿಸದೆ ಸಾಂಪ್ರದಾಯಕವಾಗಿ ಸಣ್ಣ ಗಣಿಗಾರಿಕೆ ನಡೆಸುತ್ತಾರೆ. ಚಿನ್ನದ ಮುಖ್ಯ ಮೂಲವಾಗಿದ್ದ ಈ ಪ್ರದೇಶದಲ್ಲಿ ಅಕಾರಿಗಳು ಅಕ್ರಮ ಚಿನ್ನದ ಹೊಂಡಗಳನ್ನು ಮುಚ್ಚಿದ್ದಾರೆ ಆದರೂ ಇಂಡೋನೇಷ್ಯಾದಲ್ಲಿ ಅನೌಪಚಾರಿಕ ಗಣಿಗಾರಿಕೆ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ಹೆಚ್ಚಿನ ಅಪಾಯವಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಅಲ್ಪ ಜೀವನೋಪಾಯವನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿ 2019 ರಲ್ಲಿ ಉತ್ತರ ಸುಲವೆಸಿ ಪ್ರಾಂತ್ಯದ ಅಕ್ರಮ ಚಿನ್ನದ ಗಣಿಗಾರಿಕೆ ವೇಳೆ ಭೂಕುಸಿತ ಉಂಟಾಂಗಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಎಫ್ಎಂಸಿಜಿ ಕ್ಲಸ್ಟರ್ ನ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿ

0

ಧಾರವಾಡದಲ್ಲಿ ಎಫ್ ಎಂ ಸಿ ಜಿ ಕ್ಲಸ್ಟರ್ ನ್ನು ಅಭಿವೃದ್ಧಿಪಡಿಸಿ ಇಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಈ ಯೋಜನೆಯನ್ನು ಈ ವರ್ಷವೇ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತೇಜು, ಜೆ.ಎಸ್.ಗ್ರೂಪ್ ಆಫ್ ಕಂಪನಿ ಇವರ ವತಿಯಿಂದ ಆಯೋಜಿಸಿದ ನೂತನ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಣ್ಣದಾಗಿ ಪ್ರಾರಂಭಿಸಿದ ಉದ್ಯಮವನ್ನು ಇಂದು ರಾಷ್ಟ್ರಾದ್ಯಂತ ವಿಸ್ತರಿಸಿರುವ ತೇಜು ಉತ್ಪನ್ನಗಳ ಯಶೋಗಾಥೆ ಶ್ಲಾಘನೀಯ. ಯಾವುದೇ ಉದ್ಯಮ ಸಣ್ಣದಾಗಿ ಪ್ರಾರಂಭವಾದರೂ ನಮ್ಮ ಪರಿಶ್ರಮದಿಂದ ಅದು ಹೆಮ್ಮರವಾಗಿ ಬೆಳೆಯುತ್ತದೆ. 1990 ರ ಜಾಗತೀಕರಣದ ನಂತರ ವಿದೇಶಿ ಉತ್ಪನ್ನಗಳು ನಮ್ಮ ದೇಶಕ್ಕೆ ಬಂದಾಗ ,ನಮ್ಮ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಉಳಿಸಿಕೊಳ್ಳಲು ಬ್ರ್ಯಾಂಡ್ ನೇಮ್ ನ ಅವಶ್ಯಕತೆ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಬ್ರ್ಯಾಂಡ್ ನೇಮ್ ನಿಂದಾಗಿ ತೇಜು ಉತ್ಪನ್ನಗಳು ಯಶಸ್ವಿಯಾಗಿದೆ. . 4 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಕರ್ನಾಟಕದ ತೇಜು ಉತ್ಪನ್ನಗಳು ಪ್ರಸಿದ್ಧವಾಗಿರುವುದು ಹೆಮ್ಮೆಯ ವಿಷಯ ಎಂದರು.

ಕರ್ನಾಟಕ ಯುವಜನತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಂದು, ಆರ್ಥಿಕವಾಗಿ ಬೆಳೆಯಬೇಕು. ಸಣ್ಣದಾಗಿ ಪ್ರಾರಂಭಿಸಿದ ಉದ್ಯಮವನ್ನು ದೊಡ್ಡದಾಗಿ ಬೆಳೆಸಲು ಗುರಿ ಹಾಗೂ ಸಾಧನೆಯ ಛಲ ಇರಬೇಕು. ಇಂದು ಉತ್ಪನ್ನಗಳಿಗೆ ಬ್ರ್ಯಾಡಿಂಗ್ ಅತ್ಯವಶ್ಯ. ಪ್ಯಾಕೇಜಿಂಗ್ ಗೂ ಕೂಡ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಎಫ್ ಎಂ ಸಿ ಜಿ ವಿಭಾಗದಲ್ಲಿ ಬಹಳಷ್ಟು ಉದ್ಯೋಗ ಸೃಷ್ಟಿ ಸಾಧ್ಯವಿದೆ ಎಂದರು.

ಜನರಿಂದ ಜನರಿಗೋಸ್ಕರ ಇರುವ ಉದ್ಯಮಗಳು ದೇಶದ ಅವಶ‍್ಯಕತೆಯಾಗಿದೆ. ಕರ್ನಾಟಕ ಪ್ರಗತಿಪರ ರಾಜ್ಯ. ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ 180 ಅತ್ಯಾಧುನಿಕ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿದೆ. ಐಟಿ , ಬಿಟಿ ರಫ್ತು , ಉತ್ಪಾದನಾ ವಲಯಗಳಲ್ಲಿ ದೇಶದ ಗರಿಷ್ಟ ರಫ್ತಿನ ಪಾಲು ಕರ್ನಾಟಕ, ಬೆಂಗಳೂರಿನಿಂದ ಆಗುತ್ತಿದೆ. ಕರ್ನಾಟಕಕ್ಕೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಬೆಂಗಳೂರು ಮತ್ತು ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗ ಸೃಷ್ಟಿಯಾಗುತ್ತಿದೆ. ರಾಜ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಉದ್ಯಮ, ಉದ್ಯೋಗ, ತಂತ್ರಜ್ಞಾನ ಹಾಗೂ ಬಂಡವಾಳವನ್ನು ಹೂಡಲು ಉದ್ದಿಮೆದಾರರಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.