Saturday, February 28, 2026
Saturday, February 28, 2026
Home Blog Page 1592

ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ

0

ಆರ್ಥಿಕವಾಗಿ ದಿವಾಳಿ ಹೊಂದಿರುವ ಶ್ರೀಲಂಕಾದಲ್ಲಿ 5 ವಾರಗಳಲ್ಲಿ 2ನೇ ಬಾರಿಗೆ ದ್ವೀಪರಾಷ್ಟ್ರದಲ್ಲಿ ನಿನ್ನೆ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಅಧ್ಯಕ್ಷ ಗೊಟಬೊಯ ರಾಜಪಕ್ಷ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ರಾಜಪಕ್ಷ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಿ, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿ ವಿವರಿಸಿದೆ.

ಪ್ರಸ್ತುತ ರಾಜಪಕ್ಷ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ ಪಾರ್ಲಿಮೆಂಟ್ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಅಂಗಡಿ, ಮುಂಗಟ್ಟು, ಸಾರಿಗೆಯನ್ನು ಬಂದ್ ಮಾಡಿದೆ. ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷ ಗೊಟಬೊಯ ವಕ್ತಾರ ತಿಳಿಸಿದ್ದಾರೆ.

ರಾಜಪಕ್ಷ ವಿರುದ್ಧ ದಂಗೆ ಎದ್ದಿರುವ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರನ್ನು ಬಂಧಿಸಿ ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೇ ದೀರ್ಘಕಾಲದವರೆಗೆ ಜೈಲಿನಲ್ಲಿಡುವ ಅಧಿಕಾರವನ್ನು ತುರ್ತುಪರಿಸ್ಥಿತಿ ಘೋಷಿಸಿ, ಭದ್ರತಾ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ದೇಶಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ತುರ್ತು ಸೇವೆ ಮತ್ತು ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆ ಸುಗಮವಾಗಿ ನಡೆಯಲು ಅಧ್ಯಕ್ಷ ಗೊಟಬೊಯ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ತುರ್ತುಪರಿಸ್ಥಿತಿ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಸಾಂವಿಧಾನಿಕ ಹಕ್ಕಲ್ಲ-ಕೋರ್ಟ್

0

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.

2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದ ಮುಸ್ಲಿಂ ಮುಖಂಡ ಇರ್ಫಾನ್ ಆಜಾನ್ಗಾಗಿ ಧೋರನ್ಪುರ ಗ್ರಾಮದ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ಕೋರಿದ್ದರು.

ನ್ಯಾಯಮೂರ್ತಿ ವಿವೇಕ್ ಕುಮಾರ್ ಬಿರ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ಅವರಿದ್ದ ನ್ಯಾಯಪೀಠವು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಕಾನೂನು ಹೇಳುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯ ವಿಚಾರವಾಗಿ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಿಡಿ ಹೊತ್ತಿಕೊಂಡಿದೆ. ಈಚೆಗಷ್ಟೇ ಉತ್ತರ ಪ್ರದೇಶದಲ್ಲೂ ಸಹ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ 17,000 ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಪ್ರಮಾಣವನ್ನು ಮಿತಗೊಳಿಸುವಂತೆ ಸೂಚನೆ ನೀಡಿತ್ತು.

ತೈವಾನ್ ಮೇಲೆ ಚೀನಾ ದಾಳಿ ಸಂಭವನೀಯ ಎಚ್ಚರಿಕೆ

0

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ನಡೆಸುತ್ತಿರುವಂತೆ, ಒಂದು ವೇಳೆ ಚೀನಾ ತಮ್ಮ ಮೇಲೆ ಆಕ್ರಮಣ ಮಾಡಿದರೆ ವಿಶ್ವದ ರಾಷ್ಟ್ರಗಳು ಕ್ರಮ ಕೈಗೊಳ್ಳಲಿವೆ ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ಅವರು ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿವೆ.

ತೈವಾನ್‌ ಕೂಡ ಪಾಶ್ಚಾತ್ಯ ರಾಷ್ಟ್ರಗಳ ನಿರ್ಧಾರವನ್ನು ಬೆಂಬಲಿಸಿದೆ. ರಷ್ಯಾದ ಮಿತ್ರ ರಾಷ್ಟ್ರ ಬೆಲಾರಸ್‌ ಜೊತೆಗಿನ ವಾಣಿಜ್ಯ ವ್ಯವಹಾರಕ್ಕೂ ಶುಕ್ರವಾರ ಕಡಿವಾಣ ಹಾಕಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಜೋಸೆಫ್ ವು, ಉಕ್ರೇನ್‌ ಮೇಲಿನ ರಷ್ಯಾದ ಅತಿಕ್ರಮಣ ಹಾಗೂ ಆ ರಾಷ್ಟ್ರಕ್ಕೆ ಬೆಂಬಲ ನೀಡುತ್ತಿರುವ ಬೆಲಾರಸ್‌ ನಡೆಯನ್ನು ಖಂಡಿಸುವ ಇತರ ದೇಶಗಳೊಂದಿಗೆ ನಿಲ್ಲುವುದು ತುಂಬಾ ಮುಖ್ಯವಾದದ್ದು ಎಂದಿದ್ದಾರೆ.

ಭವಿಷ್ಯದಲ್ಲಿ ಚೀನಾ ಸೇನೆಯಿಂದ ಇಂತಹ ಭೀತಿ ಎದುರಾದರೆ ಅಥವಾ ಅತಿಕ್ರಮಣ ನಡೆದರೆ, ಅಂತರರಾಷ್ಟ್ರೀಯ ಸಮುದಾಯ ತೈವಾನ್‌ಗೆ ಖಂಡಿತವಾಗಿಯೂ ಬೆಂಬಲ ನೀಡಲಿದೆ. ಇಂತಹ ಆಕ್ರಮಣಕಾರಿ ನಡೆಯ ವಿರುದ್ಧ ನಿರ್ಬಂಧಗಳನ್ನು ಹೇರಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಆದ್ದರಿಂದ, ತೈವಾನ್‌ ವಿಶ್ವ ಸಮುದಾಯದೊಂದಿಗೆ ನಿಂತಿದೆ ಮತ್ತು ಈ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ರಷ್ಯಾ ಸೇನೆ ಉಕ್ರೇನ್‌ ಮೇಲೆ ಫೆಬ್ರುವರಿಯಲ್ಲಿ ದಾಳಿ ಆರಂಭಿಸಿತ್ತು. ಇಂತಹದೇ ದಾಳಿಯನ್ನು ಚೀನಾ ಸೇನೆ ತನ್ನ ಮೇಲೆ ನಡೆಸಬಹುದು ಎಂದು ತೈವಾನ್‌ ಆರಂಭದಿಂದಲೂ ಎಚ್ಚರಿಸುತ್ತಾ ಬಂದಿದೆ.

ಸದ್ಯದಲ್ಲೇ G7 ರಾಷ್ಟ್ರಗಳ ನಾಯಕರು ಝೆಲೆನ್ಸ್ಕಿ ಭೇಟಿ- ಬೈಡೆನ್

0

ಉಕ್ರೇನ್‌ಗೆ ಹೆಚ್ಚುವರಿ ಫಿರಂಗಿ ಯುದ್ಧಸಾಮಗ್ರಿಗಳು, ರಾಡಾರ್‌ಗಳು ಮತ್ತು ಇತರ ಉಪಕರಣಗಳನ್ನು ಒದಗಿಸುವ ಭದ್ರತಾ ನೆರವಿನ ಮತ್ತೊಂದು ಪ್ಯಾಕೇಜ್ ಅನ್ನು ನಾನು ಘೋಷಿಸುತ್ತಿದ್ದೇನೆ ಎಂದು ಬಿಡೆನ್ ತಿಳಿಸಿದ್ದಾರೆ.

ಹಿರಿಯ ಯುಎಸ್ ಅಧಿಕಾರಿಯ ಪ್ರಕಾರ, ಪ್ಯಾಕೇಜ್ 25,000 155 ಎಂಎಂ ಫಿರಂಗಿ ಸುತ್ತುಗಳು, ಶತ್ರುಗಳ ಗುಂಡಿನ ಮೂಲವನ್ನು ಪತ್ತೆಹಚ್ಚಲು ಬಳಸುವ ಕೌಂಟರ್-ಆರ್ಟಿಲರಿ ರಾಡಾರ್‌ಗಳು, ಎಲೆಕ್ಟ್ರಾನಿಕ್ ಜ್ಯಾಮಿಂಗ್ ಉಪಕರಣಗಳು ಮತ್ತು ಬಿಡಿ ಭಾಗಗಳನ್ನು ಒಳಗೊಂಡಿದೆ.ಫಿರಂಗಿ ಯುದ್ಧಸಾಮಗ್ರಿಗಳು ಇತ್ತೀಚೆಗೆ ಸರಬರಾಜು ಮಾಡಿದ US ಹೊವಿಟ್ಜರ್‌ಗಳಿಗೆ ಮೀಸಲಾಗಿವೆ ಎಂದು ತಿಳಿಸಿದ್ದಾರೆ.

ಶುಕ್ರವಾರದ ಹೊಸ ಪ್ಯಾಕೇಜ್ ಎಂದರೆ ಉಕ್ರೇನ್‌ಗೆ ಈ ಹಿಂದೆ ಅಧಿಕೃತ ನಿಧಿಯಿಂದ ಲಭ್ಯವಿರುವ ಉಳಿದ $250 ಎಲ್ಲವೂ ಖಾಲಿಯಾಗುತ್ತದೆ. $33 ಶತಕೋಟಿ ಉಕ್ರೇನ್ ಪ್ಯಾಕೇಜ್ ಅನ್ನು ಅಧಿಕೃತಗೊಳಿಸಲು ಬಿಡೆನ್ ಕಾಂಗ್ರೆಸ್ ಅನ್ನು ಒತ್ತಾಯಿಸುತ್ತಿದ್ದಾರೆ. ಇದು $ 20 ಶತಕೋಟಿ ಮಿಲಿಟರಿ ಸಹಾಯವನ್ನು ಒಳಗೊಂಡಿರುತ್ತದೆ ಮತ್ತು ಐದು ತಿಂಗಳವರೆಗೆ ಇರುತ್ತದೆ ಎಂದರು.

ಈಗಾಗಲೆ ಬಿಡೆನ್ ಆಡಳಿತವು ಈಗಾಗಲೇ $3.4 ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ. ಭಾರೀ ಫಿರಂಗಿಗಳಿಂದ ಹಿಡಿದು ಭುಜದ-ಹಿಡಿಯುವ ಸ್ಟಿಂಗರ್ ವಿಮಾನ ವಿರೋಧಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳವರೆಗೆ ಕಳಿಸಿದೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಪಾಶ್ಚಿಮಾತ್ಯ ಬೆಂಬಲವನ್ನು ಚರ್ಚಿಸಲು ಬಿಡೆನ್ ಮತ್ತು ಉಳಿದ G7 ನಾಯಕರು, ಜೊತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ಭೇಟಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕ್ರೀಡೆಗಳಿಂದ ಉತ್ಸಾಹ ಇಮ್ಮಡಿ-ಅನುರಾಧ

0

ಅದೊಂದು ವಿಶಿಷ್ಟವಾದ ಕ್ಷಣ. ಸದಾ ಬಿಡುವಿಲ್ಲದೆ ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರು ಕಡತಗಳ ಜಂಜಾಟದಿಂದ ಕೆಲ ಸಮಯ ದೂರವುಳಿದು ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಮನ ತಣಿಸಿಕೊಂಡ ಕ್ಷಣ. ಆಡಳಿತದ ಚುಕ್ಕಾಣಿ ಹಿಡಿದ ಮಹಿಳಾ ಅಧಿಕಾರಿ ಕೂಡ ಇದಕ್ಕೆ ಕೈಜೋಡಿಸಿದ ಕ್ಷಣ. ಇಂಥಹಾ ವಿಶಿಷ್ಟ ಸಂದರ್ಭಕ್ಕೆ ಸಾಕ್ಷಿಯಾಗಿದೆ. ಶನಿವಾರ ಕುವೆಂಪು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ನೌಕರರ ವೇದಿಕೆ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿ.

ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಕುಲಸಚಿವೆ ಜಿ. ಅನುರಾಧ, ಯಾವುದೇ ಇಲಾಖೆ ಅಥವಾ ಸಂಸ್ಥೆಯ ನೌಕರರು ತಮ್ಮ ಕಚೇರಿಯ ದೈನಂದಿನ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸುವ ನಿಟ್ಟಿನಲ್ಲಿ ಆಗಿಂದಾಗ್ಗೆ ಇಂಥಹಾ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳುವುದು ಅಗತ್ಯ. ಅದರಲ್ಲಿಯೂ ಮಹಿಳಾ ನೌಕರರು ಕಚೇರಿಯಲ್ಲಷ್ಟೇ ಅಲ್ಲ ಮನೆಗಳಲ್ಲಿಯೂ ಕೂಡ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ತಮ್ಮ ವೈಯುಕ್ತಿಕ ಖುಷಿಯನ್ನು ಬದಿಗಿಟ್ಟಿರುತ್ತಾರೆ. ಹಾಗಾಗಿ ಮಹಿಳಾ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಅವರ ದಕ್ಷತೆ ಹೆಚ್ಚಾಗುತ್ತದೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್ ಮಾತನಾಡಿ, ಕೋವಿಡ್ ನಂತರದ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಪಠ್ಯೇತರ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಮಹಿಳಾ ನೌಕರರು ಇಂಥಹಾ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮತ್ತೆ ಕ್ಯಾಂಪಸ್‌ನಲ್ಲಿ ಲವಲವಿಕೆ ತಂದಿದ್ದಾರೆ ಎಂದು ಹೇಳಿದರು.

ಕುಲಸಚಿವೆ ಜಿ. ಅನುರಾಧ ಉದ್ಘಾಟನಾ ಪಂದ್ಯದಲ್ಲಿ ಭಾಗಿಯಾಗಿ ಕೆಲ ಸಮಯ ಥ್ರೋಬಾಲ್ ಆಟವಾಡಿದ್ದು ಗಮನಸೆಳೆಯಿತು. ಮಹಿಳಾ ನೌಕರರ ನಾಲ್ಕು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಇಂದು ಸಂಜೆ ಫೈನಲ್ ಪಂದ್ಯಾವಳಿ ನಡೆಯಲಿದೆ. ದೈಹಿಕ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಜಾನನ ಪ್ರಭು, ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸುಶೀಲಾ, ರೇಖಾ, ಮಹೇಶ್, ಸಿದ್ದರಾಮ, ಮರಿಯಂಬಿ ಮತ್ತಿತರರು ಉಪಸ್ಥಿತರಿದ್ದರು.

ದೇಶದಾದ್ಯಂತ 190 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ

0

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 3,805 ಹೊಸ ಕೇಸುಗಳು ಪತ್ತೆಯಾಗಿದೆ, ನಿನ್ನೆ ಶುಕ್ರವಾರ ದೇಶದಲ್ಲಿ 3,545 ಕೋವಿಡ್ ಕೇಸುಗಳು ವರದಿಯಾಗಿದ್ದವು.

ಒಂದೇ ದಿನದಲ್ಲಿ 22 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,24,024ಕ್ಕೇರಿದೆ.

ಈಗ ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 4 ಕೋಟಿಯ 30 ಲಕ್ಷದ 98 ಸಾವಿರದ 743ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರದ 303 ಆಗಿದೆ. ಅದು ಒಟ್ಟಾರೆ ಕೇಸಿನ ಶೇ. 0.05ರಷ್ಟಿದೆ.

ದೇಶದಲ್ಲಿ ಕೋವಿಡ್ ನಿಂದ ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇ. 98.74ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಗುಣಮುಖ ಹೊಂದಿದವರ ಸಂಖ್ಯೆ 3,168 ಆಗಿದೆ. ಒಟ್ಟಾರೆಯಾಗಿ ಇದುವರೆಗೆ ಗುಣಮುಖರಾದವರ ಸಂಖ್ಯೆ 4 ಕೋಟಿಯ 25 ಲಕ್ಷದ 54 ಸಾವಿರದ 416 ಆಗಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 4 ಲಕ್ಷದ 87 ಸಾವಿರದ 544 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಕೊರೋನಾ ಪಾಸಿಟಿವ್ ದರ ಶೇ. 0.78ರಷ್ಟಾಗಿದೆ. ವಾರದಲ್ಲಿ ಕೊರೋನಾ ಪಾಸಿಟಿವ್ ದರ ಶೇ. 0.79ರಷ್ಟಿದೆ.

ಇನ್ನು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನವನ್ನು ತೆಗೆದುಕೊಂಡರೆ 190 ಕೋಟಿ ಲಸಿಕೆ ಡೋಸ್ ಗಳನ್ನು ಇದುವರೆಗೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಗುಟೆರಸ್ ಅವರ ಸಲಹೆಯನ್ನ ಅಂಗೀಕರಿಸಿದ ವಿಶ್ವಸಂಸ್ಥೆ

0

ರಷ್ಯಾ ಹಾಗೂ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಹೇಳಿಕೆಯನ್ನು ಭದ್ರತಾ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.

ಅವರ ಪ್ರಯತ್ನಗಳಿಗೆ ಮಂಡಳಿಯು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ.

ನಿನ್ನೆ ಶುಕ್ರವಾರದ ನಡೆದ ಕಿರು ಸಭೆಯಲ್ಲಿ ಅಂಗೀಕರಿಸಿದ ಹೇಳಿಕೆಯಲ್ಲಿ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಆಕ್ರಮಣವನ್ನು ಯುದ್ಧ , ಸಂಘರ್ಷ ಅಥವಾ ಆಕ್ರಮಣ ಎಂದು ಉಲ್ಲೇಖಿಸಿಲ್ಲ. ಏಕೆಂದರೆ, ಮಂಡಳಿಯ ಹಲವು ಸದಸ್ಯರು ರಷ್ಯಾವು ಉಲ್ಲೇಖಿಸಿದಂತೆ ಉಕ್ರೇನ್ ಮೇಲಿನ ದಾಳಿಯನ್ನು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆಯುತ್ತಿದ್ದಾರೆ.

ಆದರೆ, ಭದ್ರತಾ ಮಂಡಳಿಯಲ್ಲಿ ವಿಟೊ ಅಧಿಕಾರವನ್ನು ಹೊಂದಿರುವ ರಷ್ಯಾ, ಈ ಹಿಂದಿನ ಹೇಳಿಕೆ ಅಥವಾ ನಿರ್ಣಯಗಳನ್ನು ನಿರ್ಬಂಧಿಸಿದ ರೀತಿಯೇ ಇದನ್ನೂ ನಿರ್ಬಂಧಿಸುವ ಸಾಧ್ಯತೆ ಇದೆ.

ಉಕ್ರೇನ್‌ನಲ್ಲಿ ಶಾಂತಿ ಮತ್ತು ಭದ್ರತೆಯ ನಿರ್ವಹಣೆಯ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಎಲ್ಲಾ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಅಡಿಯಲ್ಲಿ, ತಮ್ಮ ಅಂತರರಾಷ್ಟ್ರೀಯ ವಿವಾದಗಳನ್ನು ಶಾಂತಿಯುತ ವಿಧಾನಗಳಿಂದ ಪರಿಹರಿಸುವುದಾಗಿ ಒಪ್ಪಿಗೆ ಸೂಚಿಸಿರುವುದನ್ನು ಪುನರುಚ್ಚರಿಸಲಾಯಿತು.

ಮಾಸ್ಕೋ ಮತ್ತು ಕೀವ್‌ಗೆ ಇತ್ತೀಚಿಗೆ ಭೇಟಿ ನೀಡಿದ್ದ ಗುಟೆರೆಸ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ನಾಗರಿಕರನ್ನು ಸ್ಥಳಾಂತರಿಸಲು ಅನುವುಮಾಡಿಕೊಡುವ ಕುರಿತಂತೆ ಮನವೊಲಿಸಿದ್ದರು. ಅದರಂತೆ, ಆಗ್ನೇಯ ಬಂದರು ನಗರವಾದ ಮರಿಯುಪೋಲ್ ಮತ್ತು ಅಜೋವ್ ಸ್ಟಾಲ್ ಉಕ್ಕಿನ ಘಟಕದಿಂದ ಜನರನ್ನು ಸ್ಥಳಾಂತರಿಸಲಾಗಿದೆ.

ನಟ ಮೋಹನ್ ಜುನೇಜ ನಿಧನ

0

ಹೆಸರಾಂತ ಹಾಸ್ಯ ಕಲಾವಿದ ಶ್ರೀಯುತ ಮೋಹನ್ ಜುನೇಜ ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ನಿನ್ನೆ ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲವು‌ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೋಹನ್ ಜುನೇಜಾ ಒಬ್ಬ ಭಾರತೀಯ ಚಲನಚಿತ್ರ ನಟ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮೋಹನ್ ಅವರು ಕೆಜಿಎಫ್ ಅಧ್ಯಾಯ 2 ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟಲ್ಲದೆ ಹಾಸ್ಯಕಲಾವಿದ ಎಂದು ಕೂಡ ಗುರುತಿಸಿಕೊಂಡಿದ್ದರು.

ಲೇಖಕ ಬಿಜಿಎಲ್ ಸ್ವಾಮಿ ಅಧ್ಯಯನ ಶಿಬಿರದ ಬಗ್ಗೆ ಮಾಹಿತಿ

0

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಿ.ಜಿ.ಎಲ್. ಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ದಿ: 27/05/2022 ರಿಂದ ದಿ: 29/05/2022 ರವರೆಗೆ 3 ದಿನಗಳ ‘ಬಿ.ಜಿ.ಎಲ್. ಸ್ವಾಮಿ ಸಾಹಿತ್ಯ ಮತ್ತು ನಿಸರ್ಗಾನುಭವ ಅಧ್ಯಯನ ಶಿಬಿರವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊನ್ನೆಮರಡುವಿನಲ್ಲಿ ಆಯೋಜಿಸಲಾಗಿದೆ.

ರಾಜ್ಯದ ಆಸಕ್ತ 20-40 ವರ್ಷದೊಳಗಿನವರು ದಿ: 13/05/2022 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿಗಧಿನ ನಮೂನೆ ಅರ್ಜಿಗಾಗಿ ಅಕಾಡೆಮಿ ವೆಬ್‍ಸೈಟ್ www.sahithyaacademy.karnataka.gov.in ನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-22211730 / 29601730 / 22106460 ಗಳನ್ನು ಸಂಪರ್ಕಿಸುವುದು.

ಅಣ್ವಸ್ತ್ರ ಪ್ರಯೋಗ ಮಾಡುವುದಿಲ್ಲ- ರಷ್ಯ

0

ಉಕ್ರೇನ್‌ ಮೇಲೆ ನಾವು ಅಣುಯುದ್ದ ಮಾಡೋದಿಲ್ಲ ಎಂದು ರಷ್ಯಾ ಹೇಳಿದೆ.

ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರ ಅಲೆಕ್ಸಿ ಜೇಸ್ತೇವ್‌ ಮಾತನಾಡಿ “ನಾವು ನಮ್ಮ ಈ ಮಿಲಿಟರಿ ಆಪರೇಷನ್‌ನಲ್ಲಿ ನ್ಯೂಕ್ಲಿಯರ್‌ ಅಸ್ತ್ರಗಳನ್ನು ಬಳಸುವುದಿಲ್ಲ. ಪಾಶ್ಚೀಮಾತ್ಯ ದೇಶಗಳು ನಮ್ಮ ವಿರುದ್ದ ಮಾಡುತ್ತಿರುವ ಅಪರಾಧಗಳು ಒಪ್ಪಿಕೊಳ್ಳುವಂತವಲ್ಲ ಎಂದು ಹೇಳಿದ್ದಾರೆ.

ಆದರೆ, ರಷ್ಯಾ ಈ ರೀತಿ ಎಷ್ಟೇ ಹೇಳಿದ್ರು ಕೂಡ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಉಕ್ರೇನ್‌ ಮೇಲೆ ಯುದ್ದ ಮಾಡುವ ಕೆಲವು ದಿನಗಳ ಮುಂಚೆ ಕೂಡ ನಾವು ಯಾವುದೇ ದಾಳಿ ಮಾಡಲ್ಲ ಅಂತಲೇ ಸದ್ದಿಲ್ಲದೇ ನುಗ್ಗಿತ್ತು ರಷ್ಯಾ ಎಂದು ತಿಳಿದುಬಂದಿದೆ.

ಪಾಶ್ಚೀಮಾತ್ಯ ದೇಶಗಳು ಸೇರಿದಂತೆ ಇಡೀ ವಿಶ್ವ, ಎಲ್ಲಿ ರಷ್ಯಾ ಈ ಕದನದಲ್ಲಿ ಅಣ್ವಸ್ತ್ರಗಳನ್ನು ಬಳಸುತ್ತದೆಯೋ ಎನ್ನುವ ಚಿಂತೆಗೀಡಾಗಿರುವ ಹೊತ್ತಿನಲ್ಲೇ ರಷ್ಯಾ ಈ ರೀತಿ ಹೇಳಿದೆ.