Tuesday, March 17, 2026
Tuesday, March 17, 2026
Home Blog Page 1505

ಸಮಾಜವಾದಿ ಗೋಪಾಲಗೌಡರ ಜನ್ಮ ಶತಮಾನೋತ್ಸವ

0

ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾಕೋಶ ಆಶ್ರಯದಲ್ಲಿ ನಡೆದ ಸಮಾಜವಾದಿ ನೇತಾರ ದಿ.ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಸಪ್ತಾಹ ಉದ್ಘಾಟನಾ ಸಮಾರಂಭ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅವರು ಸಪ್ತಾಹ ಸಮಾರಂಭ ಉದ್ಘಾಟಿಸಿದರು.

ಕುವೆಂಪು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ನಮ್ಮ ಗುರುಗಳಾದ ಪ್ರೊ.ಜೆ.ಎಸ್. ಸದಾನಂದ ಅವರು ದಿ.ಶಾಂತವೇರಿ ಗೋಪಾಲಗೌಡರ ಜೀವನ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಆಶಯ ನುಡಿ ನುಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಕ್ಷೇಮಾಪಾಲನಾ ಅಧಿಕಾರಿ ಆರ್.ಕೆ. ವಿನಯ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕೆ.ಟಿ. ನಾಗೇಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ್, ಉಪನ್ಯಾಸಕರಾದ ಸಕಲೇಶ್ ಹುಲ್ಮಾರ್, ಹರಿಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಎಂ. ನವೀನ್ ಕುಮಾರ್, ತಾಲ್ಲೂಕು ಪದಾಧಿಕಾರಿಗಳಾದ ಬಿ.ಎನ್. ಸುನೀಲ್ ಕುಮಾರ್, ಎಸ್.ಎನ್. ನರಸಿಂಹಸ್ವಾಮಿ, ಕಾಳಿಂಗರಾವ್, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ದೇಶಿಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿಗೆ 86 ನೇ ಸ್ಥಾನ

0

ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿರುವ 2022ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‌ಐಆರ್‌ಎಫ್) ನಲ್ಲಿ ಕುವೆಂಪು ವಿಶ್ವವಿದ್ಯಾಲಯವು 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ ಐದನೇ ವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಕಳೆದ ಬಾರಿಯಂತೆಯೇ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.

ದೇಶದ 4100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.44ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ವಿಶ್ವವಿದ್ಯಾಲಯಗಳ ಪೈಕಿ 86ನೇ ಸ್ಥಾನ ಪಡೆದಿದೆ. 2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ 86ನೇ ರ‍್ಯಾಂಕ್ ಪಡೆಯುವುದರೊಂದಿಗೆ, ಕೋವಿಡ್-19 ಮತ್ತು ವಿವಿಯ ಸುಮಾರು 10 ಪ್ರಾಧ್ಯಾಪಕರು ನಿವೃತ್ತರಾದ ಕಾರಣದಿಂದ ಉನ್ನತ ಶಿಕ್ಷಣದ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದ್ದರೂ, ಟಾಪ್ 100ರೊಳಗೆ ಸ್ಥಾನ ಪಡೆದುಕೊಂಡಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶಾದ್ಯಂತ (4100) ಶಿಕ್ಷಣ ಸಂಸ್ಥೆಗಳು ಶ್ರೇಣೀಕರಣಕ್ಕೆ ಒಳಪಟ್ಟಿವೆ.

ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕ್ರಮವಾಗಿ 33 ಮತ್ತು 64ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದಿವೆ.

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದ್ದು, ಈಗ ಏಳನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

ವಿಶ್ವವಿದ್ಯಾಲಯದ ರ‍್ಯಾಂಕಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ, ಎನ್ ಐ ಆರ್ ಎಫ್ ಮೌಲ್ಯಮಾಪನದ ಅವಧಿಯಲ್ಲಿ ಕೊರೋನಾ ನಂತರ ಮಹಾಮಾರಿ ಶೈಕ್ಷಣಿಕ ಸಂಸ್ಥೆಗಳನ್ನು ಕಳೆಗುಂದಿಸಿತ್ತು. ಜೊತೆಗೆ ವಿವಿಯ ಕಲಾ, ವಿಜ್ಞಾನ ವಿಭಾಗಗಳಲ್ಲಿ ಸುಮಾರು 10 ಮಂದಿ ಹಿರಿಯ ಪ್ರಾಧ್ಯಾಪಕರು ಸೇವೆಯಿಂದ ನಿವೃತ್ತರಾಗಿದ್ದು, ಅವರ ಸಂಶೋಧನಾ ಉತ್ಪಾದಕತೆ ಮತ್ತು ಕೊಡುಗೆಗಳು ರ‍್ಯಾಂಕಿಂಗ್ ನಿರ್ಣಯದಲ್ಲಿ ಪರಿಗಣನೆಯಾಗಿಲ್ಲ. ಆದಾಗ್ಯೂ ವಿವಿಯು ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಕುಲಸಚಿವರಾದ ಜಿ. ಅನುರಾಧ ಪ್ರತಿಕ್ರಿಯಿಸಿ, ದೇಶದ ಪ್ರತಿಶ್ಠಿತ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಗ್ರಾಮೀಣ ಭಾಗದ ಸರ್ಕಾರಿ ಸಂಯೋಜಿತ ವಿಶ್ವವಿದ್ಯಾಲಯ ಹಾಗೂ ಕೇವಲ 3 ದಶಕಗಳ ಹಿನ್ನಲೆಯುಳ್ಳ ಸಂಸ್ಥೆಯೊಂದು ಸತತ ನಾಲ್ಕು ವರ್ಷಗಳಿಂದ ನೂರರ ಪಟ್ಟಿಯೊಳಗೆ ಸ್ಥಾನ ಪಡೆಯುತ್ತಾ ಬಂದಿರುವುದು ಸಂತಸದ ವಿಚಾರ. ಶೈಕ್ಷಣಿಕ, ಆಡಳಿತಾತ್ಮಕ ವಿಚಾರಗಳಲ್ಲಿ ಇನ್ನಷ್ಟು ಸುಧಾರಣೆ ತಂದು ರ‍್ಯಾಂಕಿಂಗ್ ಉತ್ತಮಪಡಿಸಲಾಗುತ್ತದೆ ಎಂದಿದ್ದಾರೆ.

ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಮಾನದಂಡಗಳು: ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ ಫ್ರೇಂವರ್ಕ್ ಐದು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಶ್ರೇಣೀಕರಣ ನೀಡುತ್ತದೆ. ರ‍್ಯಾಂಕಿಂಗ್‌ಗೆ ಒಳಪಡುವ ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೋಧನೆ, ಕಲಿಕೆಗಾಗಿ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳ ಸೌಲಭ್ಯ, ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ವೃತ್ತಿಪರ ಚಟುವಟಿಕೆಗಳು, ಕೋರ್ಸ್ಗಳ ಮೂಲಕ ಸಂಸ್ಥೆ ಸೃಷ್ಟಿಸುತ್ತಿರುವ ಉದ್ಯೋಗಾವಕಾಶ ಮತ್ತು ಪರೀಕ್ಷೆಯ ಉತ್ತೀರ್ಣದ ಪ್ರಮಾಣ ಸೇರಿದಂತೆ ಉನ್ನತ ಶಿಕ್ಷಣದ ಫಲಿತಾಂಶ, ಶೈಕ್ಷಣಿಕ ಸಂಸ್ಥೆಯ ಮೂಲಕ ನಡೆಯುತ್ತಿರುವ ವಿಸ್ತರಣೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಚಟುವಟಿಕೆಗಳು ಮತ್ತು ಸಂಸ್ಥೆಯ ಕುರಿತು ಸಿಬ್ಬಂದಿ, ಸಂಶೋಧಕರು, ಸಾರ್ವಜನಿಕರ ಗ್ರಹಿಕೆ ಮತ್ತು ಅಭಿಪ್ರಾಯ, ಈ ಐದು ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಿ ಶ್ರೇಣೀಕರಣ ನೀಡಲಾಗುತ್ತದೆ.

ರಾಜ್ಯದ ಉನ್ನತ ಶಿಕ್ಷಣದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 10ನೇ ಸ್ಥಾನ ಪಡೆದಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (1), ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (7), ಮೈಸೂರು ವಿಶ್ವವಿದ್ಯಾಲಯ (33), ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ (34), ಬೆಂಗಳೂರು ವಿಶ್ವವಿದ್ಯಾಲಯ (64), ಬೆಂಗಳೂರಿನ ಕ್ರೆಸ್ಟ್ ವಿವಿ (71), ಮಂಗಳೂರಿನ ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯ (75) ಸ್ಥಾನ ಪಡೆದಿವೆ. ಇನ್ನುಳಿದಂತೆ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ (72), ಮತ್ತು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ (79), ಕೆಎಲ್‌ಯ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (88), ಮಂಗಳೂರಿನ ಯೆನಪೊಯ ವಿವಿಗಳು (97) ಟಾಪ್ 100ರಲ್ಲಿರುವ ಕರ್ನಾಟಕದ ಇತರೆ ಶೈಕ್ಷಣಿಕ ಸಂಸ್ಥೆಗಳು.

ಪ್ರಧಾನಿ ಮೋದಿ ಕೊಲೆ ಸಂಚುಹೂಡಿದ ಈರ್ವರು ಪೊಲೀಸ್ ವಶಕ್ಕೆ

0

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕ ಘಟಕವನ್ನು ಭೇದಿಸಲಾಗಿದೆ. ಪಾಟ್ನಾದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇವರು ಜು.12 ರ ಪ್ರಧಾನಿ ಭೇಟಿ ಸಂದರ್ಭದಲ್ಲಿ ಹತ್ಯೆಯ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಅಲ್ಲದೇ, 2047ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.

ವರದಿಗಳ ಪ್ರಕಾರ ಇಬ್ಬರು ಭಯೋತ್ಪಾದಕರನ್ನು ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿಗೆ 15 ದಿನಗಳ ಮೊದಲು ಶಂಕಿತ ಭಯೋತ್ಪಾದಕರಿಗೆ ಫುಲ್ವಾರಿ ಷರೀಫ್‌ನಲ್ಲಿ ತರಬೇತಿ ನೀಡಲಾಗಿತ್ತು. ಜುಲೈ 6 ಹಾಗೂ 7 ರಂದು ಪ್ರಧಾನಿ ಮೋದಿಯನ್ನು ಗುರಿಯಾಗಿಸಲು ಸಂಚು ರೂಪಿಸಲು ಸಭೆಗಳನ್ನು ನಡೆಸಿದ್ದರು. ಖಚಿತ ಮಾಹಿತಿಯ ಮೇರೆ ಪುಲ್ವಾ ರಿಷರೀಫ್‌ ಕಛೇರಿಯ ಮೇಲೆ ಬಿಹಾರ ಪೋಲೀಸರು ದಾಳಿ ನಡೆಸಿ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಈ ವೇಳೆಯಲ್ಲಿ 2047 ಇಂಡಿಯಾ ಇಸ್ಲಾಮಿಕ್ ಇಂಡಿಯಾದ ಆಳ್ವಿಕೆಯ ಕಡೆಗೆ ಎಂದು ಬರೆದುಕೊಂಡಿದ್ದ ಕರಪತ್ರವು ದೊರಕಿದೆ. ಮತ್ತು ಹಲವು ಅನುಮಾನಾಸ್ಪದ ದಾಖಲೆಗಳೂ ಪತ್ತೆಯಾಗಿದೆ.

ಜೊತೆಗೆ ಪಿಎಫ್‌ಐ ಗೆ ಸಂಂದಿಸಿದ 25 ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಸಂಭಾವ್ಯ ಭಯೋತ್ಪಾದಕ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ದಳಕ್ಕೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ಪೊಲೀಸರು ಹಾಗೂ ಕೇಂದ್ರ ಏಜೆನ್ಸಿಗಳು ಜುಲೈ 11 ರಂದು ನಯಾ ಟೋಲಾ ಪ್ರದೇಶದ ಮೇಲೆ ದಾಳಿ ನಡೆಸಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಇತರ ಹಲವು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಯುವಕರು ಭಯೋತ್ಪಾದಕ ಸಂಚು ರೂಪಿಸಲು ತರಬೇತಿ ಪಡೆಯಲು ಈ ಸ್ಥಳಕ್ಕೆ ಬರುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಬಂಧಿತರಿಬ್ಬರೂ ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಅನೇಕ ಇಸ್ಲಾಮಿಕ್ ರಾಷ್ಟ್ರಗಳಿಂದ ದೇಶವಿರೋಧಿ ಅಭಿಯಾನ ನಡೆಸಲು ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಕರಾವಳಿಯಲ್ಲಿ ಮಳೆಹಾನಿ ಪರಿಹಾರದ ಬಗ್ಗೆ ಬೊಮ್ಮಾಯಿ ಸ್ಪಂದನ

0

ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಕಾರಣ ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.

ನೆರೆ ಪರಿಹಾರಕ್ಕೆ ಕೂಡಲೇ ಕರಾವಳಿ ಜಿಲ್ಲೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.

ಮಳೆ ಹಾನಿ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಮಳೆಗೆ ರಾಜ್ಯದಲ್ಲಿ 32 ಜೀವ ಹಾನಿಯಾಗಿದೆ. 5 ಜನ ಕಾಣೆಯಾಗಿದ್ದಾರೆ. 34 ಮಂದಿ ಗಾಯಗೊಂಡಿದ್ದಾರೆ. ಸುಮಾರು 300 ಜನರನ್ನು ರಕ್ಷಿಸಲಾಗಿದೆ. ನಾಲ್ಕು ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ತಂಡಗಳು ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಕರಾವಳಿಯಲ್ಲಿ ಮಳೆಯಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 355 ಹೆಕ್ಟೇರ್ ತೋಟ, ಬೆಳೆ ನಾಶವಾಗಿದೆ. ದಕ್ಷಿಣ ಕನ್ನಡದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437, ಉಡುಪಿಯಲ್ಲಿ 196 ಸೇರಿ 1,062 ಮನೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 727 ಕಿ.ಮೀ, ಉತ್ತರ ಕನ್ನಡ 500 ಕಿ.ಮೀ, ಉಡುಪಿ 960 ಕಿ.ಮೀ ಸೇರಿ 2,187 ಕಿ.ಮೀ ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಹಾನಿಗೊಳಗಾಗಿವೆ. 5,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. 168 ಸೇತುವೆಗಳಿಗೆ ಹಾನಿಯಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಭೂಕಂಪನ, ಭೂಕುಸಿತದ ಕುರಿತು ಅಮೃತ ವಿವಿಯವರು ಅಧ್ಯಯನ ಮಾಡುತ್ತಿದ್ದಾರೆ. ವರದಿ ಬಂದ ಕೂಡಲೇ ಸರ್ಕಾರ ಪರಿಹಾರ ನೀಡಲು ಸಿದ್ಧವಿದೆ. ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ರೂ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಾಣ ಮಾಡುವ ಚಿಂತನೆ ಇದೆ. ತಡೆಗೋಡೆ ನಿರ್ಮಾಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ. ಸರಿಯಾದ ಅಧ್ಯಯನ ಮಾಡಿ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗುತ್ತದೆ. ಶಾಶ್ವತ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವಡೆ ವ್ಯಾಪಕ ಮಳೆ ಜನಜೀವನ ಅಸ್ತವ್ಯಸ್ತ

0

ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದಾರೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಹಲವೆಡೆ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಶಾಲಾ,ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಶೃಂಗೇರಿ, ಕೊಪ್ಪ ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಬಿಇಓ ರಾಘವೇಂದ್ರ ತಿಳಿಸಿದ್ದಾರೆ. ಮೂಡಿಗೆರೆಯಲ್ಲಿ ಬಿರುಗಾಳಿ ಮಳೆಗೆ ಬೃಹತ್ ಮರಗಳು ಬಿದ್ದಿವೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಹುಬ್ಬಳ್ಳಿ,ಧಾರವಾಡ, ಕೊಪ್ಪಳ, ಬೀದರ್, ಕಲಬುರ್ಗಿ, ಬೆಳಗಾವಿ ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲಿಯೂ ಬೆಳಗಾವಿಯಲ್ಲಿ 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ. ಸೇತುವೆಗಳು ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ, ಬೆಳಗಾವಿ ತಾಲೂಕು ಕೇಂದ್ರ, ಖಾನಪುರ ಸೇರಿದಂತೆ ಹಲವು ತಾಲೂಕುಗಳಲ್ಲಿ ಶಾಲಾ,ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಭಾರತದ ಯುವಶಕ್ತಿಯ ಬಗ್ಗೆ ಜಗತ್ತೇ ದೊಡ್ಡ ನಿರೀಕ್ಷೆಯಿರಿಸಿದೆ-ಮಂಜುನಾಥ್

0

ಪ್ರಪಂಚದಲ್ಲೇ ಅತ್ಯಧಿಕ ಪ್ರಮಾಣದಲ್ಲಿರುವ ಭಾರತದ ಯುವ ಶಕ್ತಿಯ ಬಗ್ಗೆ ಜಗತ್ತೇ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದು ಭಾರತದ ಯುವಕ-ಯುವತಿಯರು ಮನಸ್ಸು ಮಾಡಿದರೆ ಭವಿಷ್ಯದಲ್ಲಿ ಜಗತ್ತನ್ನೇ ಆಳಬಹುದು ಎಂಬುದನ್ನು ನಾವು ನಿಜಮಾಡಿ ತೋರಿಸಬೇಕಾಗಿದೆ, ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಭವಿಷ್ಯ ದೊಂದಿಗೆ ಜಾಗತಿಕ ನಿರೀಕ್ಷೆಯನ್ನೂ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅಭಿಪ್ರಾಯಪಟ್ಟರು.

ಅವರಿಂದು ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿಕೊಳ್ಳುವಾಗ ತಮ್ಮ ಹಿತವನ್ನಷ್ಟೇ ಅಲ್ಲ ಜಗತ್ತಿನ ಹಿತವನ್ನೂ ಗಮನದಲ್ಲಿಟ್ಟು ಮುಂದಡಿ ಇಡಬೇಕಿದೆ. ಇದಕ್ಕಾಗಿ ನಾಯಕತ್ವ ಗುಣವನ್ನು ವಿದ್ಯಾರ್ಥಿದೆಸೆಯಿಂದಲೇ ರೂಢಿಸಿಕೊಳ್ಳಬೇಕಿದೆ. ನಾಯಕತ್ವ ಗುಣ ಎಂದರೆ ಕೇವಲ ಆಳುವುದು ಎಂದಲ್ಲ, ಆಳಾಗಲೂ ಸಿದ್ಧವಿರಬೇಕು, ಮುಖ್ಯವಾಗಿ ಮನಸ್ಸು ಹರಿಬಿಡದೇ ಬುದ್ಧಿಯ ನಿಯಂತ್ರಣದಲ್ಲಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ.ಜಿ.ಎನ್.ಹೆಚ್.ಕುಮಾರ್ ರವರು ಶ್ರದ್ಧೆಯಿಂದ ಓದಿದರೆ ಯಶಸ್ಸು ಸಾಧ್ಯ, ಓದಿನಲ್ಲಿ ಆಸಕ್ತಿ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರು ಶೈಕ್ಷಣಿಕ ಜೀವನದಲ್ಲಿ ಸೌಲಭ್ಯ, ಸುಖ ಮುಖ್ಯವಲ್ಲ, ಅಧ್ಯಯನವೇ ಮುಖ್ಯ, ಪ್ರತಿಭಾವಂತರ ಸಾಧನೆಯಿಂದ ಪ್ರೇರೇಪಣೆಗೊಂಡು ಪ್ರತಿ ವಿದ್ಯಾರ್ಥಿಯೂ ಸಾಧನೆ ಮಾಡಬೇಕೆಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಪ್ರಸಾದ್ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತವನ್ನು ವಿದ್ಯಾರ್ಥಿ ನಾಗರಾಜ ಸಿ.ಇ. ಕೋರಿದರು, ತರಗತಿ ಪ್ರತಿನಿಧಿಗಳ ಪರಿಚಯವನ್ನು ವಿದ್ಯಾರ್ಥಿ ಷಣ್ಮುಖಪ್ಪ ಮಾಡಿದರು. ಉಪನ್ಯಾಸಕ ಸಮಿತಿಗಳ ಪರಿಚಯವನ್ನು ಉಪನ್ಯಾಸಕರ ಕಾರ್ಯದರ್ಶಿ ಸುರೇಖಾ ಜಗದೀಶ್ ಮಾಡಿದರು.

ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ನಿಧಿ ಸಿ.ಆರ್. ಮಾಡಿದರೆ ಬಹುಮಾನಿತರ ಹೆಸರುಗಳನ್ನು ವಿದ್ಯಾರ್ಥಿ ಆದರ್ಶ ಬಿ. ವಾಚಿಸಿದರು. ದಿವ್ಶಾಶ್ರೀ ಕೆ.ಪಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಆದಿತ್ಯ ಎಂ.ಜೆ. ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ವಿದ್ಯಾರ್ಥಿನಿಯರಾದ ತೇಜು ಮತ್ತು ಝೋಹಾ ಖಾನಂ ನಡೆಸಿಕೊಟ್ಟರು.

ಕಾಲೇಜಿನ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.

ಹಂಪಿ ತಾಣಕ್ಕೆ ಧಕ್ಕೆಯಾಗದಂತೆ ಪ್ರವಾಸಿಗರಿಗೆ ಸೌಲಭ್ಯ-ಆನಂದ್ ಸಿಂಗ್

0

ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಮಹಾಯೋಜನೆ(ಮಾಸ್ಟರ್ ಪ್ಲಾನ್)ಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್ ಅವರು ಈಗ ಸಿದ್ದಪಡಿಸಲಾಗಿರುವ ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಮಹಾಯೋಜನೆ(ಮಾಸ್ಟರ್ ಪ್ಲಾನ್)ಅಡಿ ಹಂಪಿಯ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಶ್ವಪರಂಪರೆ ಪ್ರದೇಶದ ಸಂರಕ್ಷಣೆ,ನಿರ್ವಹಣೆ ಹಾಗೂ ಅಭಿವೃದ್ಧಿಯ ಹಿನ್ನೆಲೆಯಲ್ಲಿ ದೆಶದಲ್ಲಿಯೇಮೊಟ್ಟ ಮೊದಲ ಬಾರಿಗೆ ರಚಿತವಾದ ವೈಶಿಷ್ಟ್ಯವಾದ ಪ್ರಾಧಿಕಾರ ಹವಾಮಾ ಆಗಿದೆ ಎಂದು ಬಣ್ಣಿಸಿದ ಸಚಿವ ಸಿಂಗ್ ಅವರು ಹವಾಮಾ ವ್ಯಾಪ್ತಿಯಡಿ ಪ್ರತಿ ಕಂದಾಯ ಗ್ರಾಮಗಳಿಗೆ 10 ಹೋಂಸ್ಟೇಗೆ ಅನುಮತಿ ಸೇರಿದಂತೆ ಇನ್ನೀತರ ಅಂಗಳು ಹವಾಮಾ ಮಹಾಯೋಜನೆಯ ಕರಡುವಿನಲ್ಲಿದೆ;ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು,27ರವರೆಗೆ ಸಲ್ಲಿಕೆಗೆ ಅವಕಾಶವಿದೆ ಎಂದರು.

ಮಹಾಯೋಜನೆಯ ಕರಡುವಿಗೆ ಸಂಬಂಧಿಸಿದಂತೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಶೀಘ್ರ ಸರಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಸೂಚನೆ ನೀಡಿದರು.
ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಅವರು ಮಹಾಯೋಜನೆಯ ಕರಡುವಿನಲ್ಲಿರುವ ಕೆಲ ಅಂಶಗಳ ಕುರಿತು ಆಕ್ಷೇಪಣೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರಿಗೆ ಇದೇ ಸಂದರ್ಭದಲ್ಲಿ ಸಲ್ಲಿಸಿದರು.

ಹವಾಮಾ ಆಯುಕ್ತ ಸಿದ್ದರಾಮೇಶ್ವರ ಅವರು ಮಾತನಾಡಿ ಹಮಾವಾ ಅಡಿ 41.80 ಚ.ಕಿ.ಮೀ ಕೋರ್ ಝೋನ್ ಮತ್ತು ಬಫರ್ ಮತ್ತು ಫೆರಿಫೆರಲ್ ಝೋನ್ 191.65 ಚ.ಕಿ.ಮೀ ಸೇರಿದಂತೆ ಒಟ್ಟು 236.45ಚ.ಕಿ.ಮೀ ವಿಸ್ತೀರ್ಣವಿದೆ. ವಿಜಯನಗರ ಜಿಲ್ಲೆಯ 14 ಗ್ರಾಮಗಳು ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 15 ಗ್ರಾಮಗಳು ಇದರ ವ್ಯಾಪ್ತಿಗೆ ಸೇರುತ್ತವೆ ಎಂದು ಅವರು ವಿವರಿಸಿದರು.

ಕೊಪ್ಪಳ ಜಿಲ್ಲೆಯ 15 ಗ್ರಾಮಗಳು ಮತ್ತು ವಿಜಯನಗರ ಜಿಲ್ಲೆಯ 14 ಗ್ರಾಮಗಳಲ್ಲಿ ನಡೆಸುತ್ತಿದ್ದ ಅನಧಿಕೃತ ರೆಸಾರ್ಟ್‍ಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ,ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ವಿಜಯನಗರ ಎಸ್.ಪಿ ಡಾ.ಅರುಣ್ ಕೆ, ಕೊಪ್ಪಳ ಎಸ್.ಪಿ ಅರುಣಾಂಗ್ಷು ಗಿರಿ, ವಿಜಯನಗರ ಜಿ.ಪಂ. ಸಿಇಒ ಹರ್ಷಲ್ ಬೋಯೇರ್ ನಾರಾಯಣರಾವ್ ಮತ್ತಿತರರು ಇದ್ದರು.

ನಂತರ ಹೊಸಪೇಟೆಗೆ 24*7 ನಿರಂತರ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಸಚಿವ ಆನಂದಸಿಂಗ್ ಅವರು ನಡೆಸಿದರು.

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಹಿರಿಯ ಐಎಎಸ್ ಅಧಿಕಾರಿಗಳಾದ ಮೋಹನ್ ರಾಜ್, ದೀಪಾ ಚೋಳನ್,ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮತ್ತಿತರರು ಇದ್ದರು.

ಭದ್ರಾ ಜಲಾಶಯ ಭರ್ತಿ ಜನತೆಗೆ ಮುನ್ನೆಚ್ಚರಿಕೆ

0

ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತದೆ.

ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜು.15ರೊಳಗೆ ಭರ್ತಿ ಆಗಿರುವುದು ಅಚ್ಚುಕಟ್ಟು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಭದ್ರಾವತಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳ ಜೀವನಾಡಿ ಆಗಿರುವ ಭದ್ರಾ ಜಲಾಶಯ ನಿರೀಕ್ಷೆ ಮೀರಿ ಅವಧಿಗೆ ಮುನ್ನವೇ ಭರ್ತಿಯಾಗಿದೆ.

186 ಅಡಿ ಪೂರ್ಣಮಟ್ಟದ ಡ್ಯಾಮ್ ನಲ್ಲಿ ಈಗ ನೀರಿನ ಮಟ್ಟ 183.50 ಅಡಿಗೆ ತಲುಪಿದೆ. ಒಳ ಹರಿವು 43 ಸಾವಿರ ಕ್ಯೂಸೆಕ್ ಇರುವುದರಿಂದ ಭರ್ತಿಗೆ ಇನ್ನೂ ಎರಡೂವರೆ ಅಡಿ ಬಾಕಿ ಇರುವಂತೆ ಗೇಟ್ ಗಳನ್ನು ತರೆದು ನದಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
ತಗ್ಗು ಪ್ರದೇಶಗಳಲ್ಲಿನ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಇಲಾಖೆ ತಿಳಿಸಿದೆ.

ಮಳೆಹಾನಿ ಪರಿಶೀಲನೆ ಸಾಗರಕ್ಕೆ ಸಚಿವರ ಭೇಟಿ

0

ಸಾಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ನಾರಾಯಣ ಗೌಡ ರವರೊಂದಿಗೆ, ಸಾಗರದ ಬಸವನ ಹೊಳೆ ಡ್ಯಾಂ ಗೆ ಭೇಟಿ ನೀಡಿ, ಪರಿಶೀಲಿಸಿದರು.

ಸಾಗರ ಪ್ರವಾಸಿ ಮಂದಿರದಲ್ಲಿ, ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನೆಡೆಸಿ, ಅತಿವೃಷ್ಠಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ, ಮನೆ ಹಾನಿ, ರಸ್ತೆ-ಸೇತುವೆ, ಜಾನುವಾರು ಹಾನಿಗಳಿಗೆ ಪರಿಹಾರ ಕಲ್ಪಿಸಿಕೊಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ DC, CEO, AC, ತಹಶೀಲ್ದಾರರು, EO, BEO, ನಗರಸಭೆ ಆಯುಕ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

ತುಂಗಭದ್ರಾ ಜಲಾಶಯ ಭರ್ತಿ ಹೆಚ್ಚುವರಿ ನೀರು ಬಿಡುಗಡೆ

0

ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್‍ಸಿಂಗ್ ಅವರು ಜಲಾಶಯದ ಬಳಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್ ಅವರು ಸುಮಾರು 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅವಧಿಗೆ ಮುಂಚೆ ಅಣೆಕಟ್ಟು ತುಂಬಿದ್ದು,ಸಂತಸದ ವಿಷಯ ಎಂದರು.

ವಿಜಯನಗರ,ಕೊಪ್ಪಳ,ಬಳ್ಳಾರಿ,ರಾಯಚೂರು ಜಿಲ್ಲೆಗಳ ರೈತರು ಬೆಳೆಗಳು ಸಮೃದ್ಧವಾಗಿ ಬೆಳೆದು ಅವರ ಬಾಳಲ್ಲಿ ಸಂತೋಷ ತರಲಿ ಮತ್ತು ಪ್ರತಿ ವರ್ಷವೂ ಇದೇ ತರಹ ಉತ್ತಮ ರೀತಿಯಲ್ಲಿ ಮಳೆ ಆಗಿ ಯಾವುದೇ ತರಹ ಹಾನಿ ಉಂಟಾಗದೇ ಅಣೆಕಟ್ಟು ಭರ್ತಿಯಾಲಿ ಎಂದು ಹಂಪಿಯ ವಿರುಪಾಕ್ಷೇಶ್ವರನನ್ನು ಪ್ರಾರ್ಥಿಸಿ ಗಂಗಾಮಾತೆಗೆ ಬಾಗಿನ ಸಮರ್ಪಿಸಿದ್ದೇವೆ ಎಂದರು.

ತುಂಗಭದ್ರೆ ಯಾವುದೇ ರೀತಿಯ ಹಾನಿ ಮಾಡದೇ ಶಾಂತವಾಗಿ ಹರಿದು ಸಮುದ್ರ ಸೇರಲಿ ಎಂದು ಹೇಳಿದ ಸಚಿವ ಸಿಂಗ್ ಅವರು ತುಂಗಾಭದ್ರಾ ಜಲಾಶಯದಲ್ಲಿನ ನೀರು ಎರಡು ಬೆಳೆಗೆ ಆಗಲಿದೆ; ನಿರಂತರ ತುಂಗಾಭದ್ರಾ ಜಲಾಶಯ ತುಂಬುತ್ತಿರಲಿ ಎಂದರು.

ಅಂಜನಾದ್ರಿಯ ಬೆಟ್ಟದ ಸಮಗ್ರ ಅಭಿವೃದ್ಧಿಗೆ 60 ಎಕರೆ ಜಾಗದ ಅವಶ್ಯಕತೆ ಇದ್ದು, ಮೊದಲನೇ ಹಂತದಲ್ಲಿ ಪ್ರವಾಸಿಗರಿಗೆ ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆಯನ್ನು ಸಿದ್ದಪಡಿಸಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಟ್ಟಡಗಳಿಗೆ ಕಾಂಕ್ರೀಟ್ ಬಳಸದೇ ಕೇರಳದ ಜಟಾಯು ತರಹ ವಾಸ್ತುಶಿಲ್ಪಶೈಲಿಯಲ್ಲಿ ನಿರ್ಮಿಸುವ ಉದ್ದೇಶದಿಂದ ಪರಿಣಿತ ವಾಸ್ತುಶಿಲ್ಪತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲು ಪರಿಣಿತ ವಾಸ್ತುಶಿಲ್ಪತಜ್ಞರ ಏಜೆನ್ಸಿಯನ್ನು ಆಹ್ವಾನಿಸಿಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಸಂಗಣ್ಣಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ತುಂಗಭದ್ರ ಮಂಡಳಿ ಕಾರ್ಯದರ್ಶಿ ನಾಗಮೋಹನ ಸೇರಿದಂತೆ ಅಧಿಕಾರಿಗಳು ಇದ್ದರು.