ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್‍ಸಿಂಗ್ ಅವರು ಜಲಾಶಯದ ಬಳಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್ ಅವರು ಸುಮಾರು 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅವಧಿಗೆ ಮುಂಚೆ ಅಣೆಕಟ್ಟು ತುಂಬಿದ್ದು,ಸಂತಸದ ವಿಷಯ ಎಂದರು.
ವಿಜಯನಗರ,ಕೊಪ್ಪಳ,ಬಳ್ಳಾರಿ,ರಾಯಚೂರು ಜಿಲ್ಲೆಗಳ ರೈತರು ಬೆಳೆಗಳು ಸಮೃದ್ಧವಾಗಿ ಬೆಳೆದು ಅವರ ಬಾಳಲ್ಲಿ ಸಂತೋಷ ತರಲಿ ಮತ್ತು ಪ್ರತಿ ವರ್ಷವೂ ಇದೇ ತರಹ ಉತ್ತಮ ರೀತಿಯಲ್ಲಿ ಮಳೆ ಆಗಿ ಯಾವುದೇ ತರಹ ಹಾನಿ ಉಂಟಾಗದೇ ಅಣೆಕಟ್ಟು ಭರ್ತಿಯಾಲಿ ಎಂದು ಹಂಪಿಯ ವಿರುಪಾಕ್ಷೇಶ್ವರನನ್ನು ಪ್ರಾರ್ಥಿಸಿ ಗಂಗಾಮಾತೆಗೆ ಬಾಗಿನ ಸಮರ್ಪಿಸಿದ್ದೇವೆ ಎಂದರು.
ತುಂಗಭದ್ರೆ ಯಾವುದೇ ರೀತಿಯ ಹಾನಿ ಮಾಡದೇ ಶಾಂತವಾಗಿ ಹರಿದು ಸಮುದ್ರ ಸೇರಲಿ ಎಂದು ಹೇಳಿದ ಸಚಿವ ಸಿಂಗ್ ಅವರು ತುಂಗಾಭದ್ರಾ ಜಲಾಶಯದಲ್ಲಿನ ನೀರು ಎರಡು ಬೆಳೆಗೆ ಆಗಲಿದೆ; ನಿರಂತರ ತುಂಗಾಭದ್ರಾ ಜಲಾಶಯ ತುಂಬುತ್ತಿರಲಿ ಎಂದರು.

ಅಂಜನಾದ್ರಿಯ ಬೆಟ್ಟದ ಸಮಗ್ರ ಅಭಿವೃದ್ಧಿಗೆ 60 ಎಕರೆ ಜಾಗದ ಅವಶ್ಯಕತೆ ಇದ್ದು, ಮೊದಲನೇ ಹಂತದಲ್ಲಿ ಪ್ರವಾಸಿಗರಿಗೆ ಶೌಚಾಲಯ, ಸ್ನಾನಗೃಹ, ಪಾರ್ಕಿಂಗ್, ಪ್ರವಾಸಿಗರ ಕೊಠಡಿ, ವಾಣಿಜ್ಯ ಮಳಿಗೆಗಳು ಸೇರಿದಂತೆ ಇನ್ನೀತರ ಸೌಕರ್ಯಗಳನ್ನು ಒಳಗೊಂಡ ನೀಲನಕ್ಷೆಯನ್ನು ಸಿದ್ದಪಡಿಸಿ ಇವುಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಟ್ಟಡಗಳಿಗೆ ಕಾಂಕ್ರೀಟ್ ಬಳಸದೇ ಕೇರಳದ ಜಟಾಯು ತರಹ ವಾಸ್ತುಶಿಲ್ಪಶೈಲಿಯಲ್ಲಿ ನಿರ್ಮಿಸುವ ಉದ್ದೇಶದಿಂದ ಪರಿಣಿತ ವಾಸ್ತುಶಿಲ್ಪತಜ್ಞರಿಂದ 15 ದಿನದೊಳಗೆ ನೀಲನಕ್ಷೆ ಸಿದ್ದಪಡಿಸಲು ಪರಿಣಿತ ವಾಸ್ತುಶಿಲ್ಪತಜ್ಞರ ಏಜೆನ್ಸಿಯನ್ನು ಆಹ್ವಾನಿಸಿಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಸಂಗಣ್ಣಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ತುಂಗಭದ್ರ ಮಂಡಳಿ ಕಾರ್ಯದರ್ಶಿ ನಾಗಮೋಹನ ಸೇರಿದಂತೆ ಅಧಿಕಾರಿಗಳು ಇದ್ದರು.