Tuesday, March 17, 2026
Tuesday, March 17, 2026
Home Blog Page 1503

ಅಸಮಾನತೆಯ ಕಾಲದಲ್ಲಿ ಎಲ್ಲರಂತೆಹಡಪದಪ್ಪಣ್ಣ ಬದುಕಿ ತೋರಿಸಿದರು

0

ಹನ್ನೆರಡನೇ ಶತಮಾನದಲ್ಲಿ ಮೇಲು-ಕೀಳೆಂದು ಭುಗಿಲೆದ್ದಿದ್ದ ಅಸಮಾನತೆಯ ಸಮಾಜದಲ್ಲಿ ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದ ಹಡಪದ ಅಪ್ಪಣ್ಣ ತಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಬದುಕಿ ತೋರಿದ ಹಾಗೂ ವಿಶೇಷ ಕತೃತ್ವ ಶಕ್ತಿ ಹೊಂದಿದ್ದ ಮಹಾನ್ ಪುರುಷ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರ ಬಲಗೈ ಬಂಟನೆಂದೇ ಪ್ರಖ್ಯಾತರಾಗಿ, ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯಲ್ಲಿ ಪಾಲ್ಗೊಂಡವರು. ಹಡಪದರ ಮುಖವನ್ನು ಬೆಳಿಗ್ಗೆ ನೋಡಿದರೆ ಅಪಶಕುನ ಎಂಬ ಅಂದಿನ ಮನೋಭಾವನೆಯನ್ನು ಸಮಾಜದಿಂದ ಕಿತ್ತೊಗೆಯಲು ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿಸಿಕೊಂಡಿದ್ದರು. ಅಪ್ಪಣ್ಣ ವಿಶ್ವದ ಪ್ರಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.

ತಮ್ಮ ನಡೆ, ನುಡಿ ವಚನ ಸಾಹಿತ್ಯದ ಮೂಲಕ ಇಡೀ ಸಮಾಜ ಒಂದು ಎಂದು ಪ್ರತಿಪಾದಿಸಿದ ಇಂತಹ ಮಹಾನ್ ವ್ಯಕ್ತಿಯನ್ನು ನಾವೆಂದೂ ಮರೆಯುವ ಹಾಗಿಲ್ಲ ಎಂದರು.

ಜಾತಿವಾದವನ್ನು ದೂರ ಮಾಡಿ ನಾವೆಲ್ಲರೂ ಒಂದೇ ಎಂದು ಅಂದು ಬಸವಾದಿ ಶರಣರು ಒಟ್ಟಾಗಿ ಕೆಲಸ ಮಾಡಿದ್ದರು. ಆ ಕೆಲಸ ಅಷ್ಟು ಸುಲಭದ್ದಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಇಂತಹ ಸ್ಥಿತಿಯಲ್ಲಿ ನಾವೆಲ್ಲ ಇಂತಹ ಮಹಾನ್ ಪುರುಷರ ಆಚಾರ, ವಿಚಾರ, ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದು ಕಿವಿಮಾತು ಹೇಳಿದ ಅವರು ಹಡಪದ ಸಮಾಜದೊಂದಿಗೆ ತಾವು ಎಂದಿಗೂ ಇದ್ದು ಶಿಕ್ಷಣ ಮತ್ತಿತರೆ ಸೌಲಭ್ಯಗಳಿಗೆ ಸಹಕರಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಶಾಸಕಾದ ಆಯನೂರು ಮಂಜುನಾಥ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾನತೆಗಾಗಿ ಸಣ್ಣಪುಟ್ಟ ಸಮಾಜಗಳು ಒಟ್ಟಿಗೆ ಸೇರಿ ಬಸಣ್ಣನವರ ನೇತೃತ್ವದಲ್ಲಿ ಬಹಳ ದೊಡ್ಡ ಆಂದೋಲನವನ್ನು ಸೃಷ್ಟಿಸಿದ್ದ ಪ್ರಯತ್ನ ಇಂದಿಗೂ ಸಂಪೂರ್ಣ ಫಲ ಕೊಟ್ಟಿಲ್ಲ. ಇಂದಿಗೂ ತಾರತಮ್ಯ, ಮೇಲು-ಕೀಳು, ಕಂದಕಗಳು ಇದ್ದೇ ಇವೆ. ಅಂದು ಬಸವಣ್ಣ ಮಾಡಿದ್ದನ್ನು ಇಂದು ಸಾಧು ಸಂತರೂ ಮಾಡುವ ಧೈರ್ಯ ಮಾಡುತ್ತಿಲ್ಲ. ಬದಲಾಗಿ ಜಾತಿ ಒಳಗೆ ಜಾತಿ ಮಾಡುತ್ತಾ ಜಾತಿ ಉಪ ಜಾತಿಗಳಾಗಿ ಮಾರ್ಪಡುತ್ತಿರುವುದು ದುರಂತ.

ಹಡಪದ ಸಮಾಜ ನಮ್ಮ ಸಮಾಜದ ಅವಿಭಾಜ್ಯ ಅಂಗ. ನಾವೆಲ್ಲ ಬಸವಣ್ಣನವರ ಸಂತತಿ. ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಸಂಗಾತಿ, ಅವರ ನೆರಳಿನಂತೆ ಓಡಾಡಿದವರು ಎಂದ ಅವರು ಇಂದು ಹಡಪದ ವೃತ್ತಿ ಕಡಿಮೆಯಾಗಿದೆ. ಮಕ್ಕಳು ವಿದ್ಯಾಭ್ಯಾಸ ಹೊಂದಿ ಮುಂದೆ ಬರುವುತ್ತಿರುವು ಸ್ವಾಗತಾರ್ಹ ವಿಷಯ. ಆರ್ಥಿಕವಾಗಿ ಹಿಂದುಳಿದ ಈ ಸಮಾಜಕ್ಕೆ ಸರ್ಕಾರ ಹೆಚ್ಚಿನ ಸವಲತ್ತು ನೀಡಲೆಂದು ಆಶಿಸಿದರು.

ಬಸವ ಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಡಪದ ಅಪಶಕುನ ಅಲ್ಲ. ಸಮಾಜವನ್ನು ಸ್ಪುರದ್ರೂಪಗೊಳಿಸುವ ಕಾಯಕಯೋಗಿ. ಹಡಪದ ಅಪಶಕುನವಲ್ಲವೆಂದು ಸಮಾಜಕ್ಕೆ ತೋರಿಸಲು ಬಸವಣ್ಣನವರು ಅಪ್ಪಣ್ಣನನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿಸಿಕೊಂಡು ಅಪ್ಪಣನನ್ನೇ ನೋಡುತ್ತಾ ವಿಶ್ವಗುರು ಆದರು. ಅತ್ಯಂತ ವಿವೇಕಶಾಲಿಯಾದ ಅಪ್ಪಣ್ಣ ಬಸವಣ್ಣನವರ ಬದುಕಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಪಾರಮಾರ್ಥಿಕ ಔನ್ನತ್ಯವನ್ನೂ ಸಾಧಿಸಿದರು. 250 ಕ್ಕೂ ಹೆಚ್ಚು ವಚನ ರಚಿಸಿದರು. ಹಾಗೂ ಬಸವಣ್ಣನವರ ಅಂತಿಮ ಕ್ಷಣಗಳನ್ನು ನೋಡಿದ ಪುಣ್ಯವಂತ ಅವರು ಎಂದು ನುಡಿದರು.

ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಶೋಷಣೆಗೆ ಒಳಗಾದ ಸಮಾಜದಲ್ಲಿ ನಮ್ಮ ಸಮಾಜ ಕೂಡ ಒಂದಾಗಿದ್ದು, ಜಾತಿ ಪದ್ದತಿ ತೊಡೆದು ಹಾಕುವುದು ಕಷ್ಟ. ಇಂತಹ ಸಂದರ್ಭದಲ್ಲಿ ವಿದ್ಯೆ, ಉತ್ತಮ ದುಡಿಮೆ, ಅಧಿಕಾರ ಮಾತ್ರ ಸಮಾನತೆ ತರಲು ಸಾಧ್ಯ. ಆದ ಕಾರಣ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.

ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ವೀರೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹಡಪದ ಅಪ್ಪಣ್ಣ ಅವರ ಬಾಲ್ಯ, ವಿದ್ಯಾಭ್ಯಾಸ, ಬಸವಣ್ಣನವರೊಂದಿಗಿನ ಜೀವನ, ಅವರು ರಚಿಸಿದ ವಚನಗಳ ಕುರಿತು ವಿವರಣೆ ನೀಡಿದರು.

ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಉಪ ಆಯುಕ್ತ ಶಂಕರ ಗನ್ನಿ, ಸದಸ್ಯರಾದ ವಿಶ್ವಾಸ್, ಜ್ಞಾನೇಶ್ವರ್ ಶಿವಮೊಗ್ಗ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್ ವೀರಭದ್ರಯ್ಯ, ಇತರೆ ಪದಾದಿಕಾರಿಗಳು, ಸಮಾಜದ ಮುಖಂಡರು, ಎಸಿ ಎಸ್.ಬಿ.ದೊಡ್ಡೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಇತರರು ಹಾಜರಿದ್ದರು.

ಬಿಸಿಯೂಟದಲ್ಲಿ ಮೊಟ್ಟೆ ನೀಡಲು ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್

0

ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯದ 1-8 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರಸ್ತುತ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ 1ರಿಂದ 8 ನೇ ತರಗತಿಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುತ್ತಿರುವ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ವಿಸ್ತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ವರ್ಷದಲ್ಲಿ 100 ದಿನ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ವಿತರಿಸಲು, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಅನುಮತಿ ಕೋರಿ ಶಿಕ್ಷಣ ಇಲಾಖೆ ಅರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.

ಆರ್ಥಿಕ ಸಂಕಷ್ಟ ಕೇವಲ ಶ್ರೀಲಂಕಾ ಒಂದೇ ಅಲ್ಲ ಇನ್ನೂ ಹಲವು ದೇಶಗಳಿವೆ

0

ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಹಾದಿಯಲ್ಲೇ 12 ರಾಷ್ಟ್ರಗಳು ಸಾಗಿವೆ ಎಂಬ ಆತಂಕಕಾರಿ ವರದಿ ತಿಳಿಸಿದೆ.

ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ನಾಗರಿಕರ ಆಕ್ರೋಶಕ್ಕೆ ಬೆದರಿ ಅಧ್ಯಕ್ಷರೇ ವಿದೇಶಕ್ಕೆ ಪಲಾಯನಗೈದಿದ್ದಾರೆ.

ಸಾಲದ ಸುಳಿಗೆ ಸಿಲುಕಿರುವುದು ಕೇವಲ ಶ್ರೀಲಂಕಾ ಮಾತ್ರವಲ್ಲ. ಸುಮಾರು 12 ರಾಷ್ಟ್ರಗಳು ಈ ಪರಿಸ್ಥಿತಿ ಎದುರಿಸುತ್ತಿವೆ. ರಷ್ಯಾ, ಲೆಬನಾನ್, ಸುರಿನೇಮ್, ಜಾಂಬಿಯಾ ದೇಶಗಳು ಸಾಲದ ಸುಳಿಗೆ ಸಿಲುಕಿವೆ. ಬೈಲೋರಷ್ಯಾ ಬಹುಪಾಲು ದುಸ್ಥಿತಿ ಎದುರಿಸುತ್ತಿದೆ.

ಖರೀದಿ ಮೊತ್ತದಲ್ಲಿ ಹೆಚ್ಚಳ, ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದಿಂದ ಸಾಲದ ಪ್ರಮಾಣ ಹೆಚ್ಚಳ, ಸಾಮಾನ್ಯವಾಗಿ 1000 ಪಾಯಿಂಟ್ಸ್ ಸಾಲ ಇದ್ದರೆ ಪರಿಸ್ಥಿತಿ ನಿಭಾಯಿಸಬಹುದು. ಆದರೆ, ಸುಮಾರು 12 ರಾಷ್ಟ್ರಗಳ ಸಾಲದ ಪ್ರಮಾಣ 400 ಶತಕೋಟಿ ದಾಟಿದೆ. ಅತೀ ಹೆಚ್ಚು ಸಾಲ ಮಾಡಿದ ದೇಶಗಳಲ್ಲಿ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿದೆ.150 ಶತಕೋಟಿ ಡಾಲರ್ ಸಾಲ ಮಾಡಿದೆ. ಇಕ್ವೆಡಾರ್ ಮತ್ತು ಈಜಿಪ್ಟ್‍ ಕ್ರಮವಾಗಿ 40 ಹಾಗೂ 45 ಶತಕೋಟಿ ಡಾಲರ್ ಸಾಲದ ಸುಳಿಗೆ ಸಿಲುಕಿವೆ.

ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್, ಟುನೆಶಿಯಾ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಮತ್ತು ವ್ಯಾಪಾರ ವಹಿವಾಟು ಸುಧಾರಿಸದೇ ಇದ್ದರೆ ಈ ರಾಷ್ಟ್ರಗಳು ಕೂಡ ಶ್ರೀಲಂಕಾ ಸ್ಥಿತಿಯನ್ನೇ ಎದುರಿಸುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

ಜನ್ಮದಿನಾಚರಣೆ ಬಗ್ಗೆ ಬಿಜೆಪಿ ಸಲ್ಲದ ಆಕ್ಷೇಪ-ಸಿದ್ಧರಾಮಯ್ಯ

0

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಟಾಚಾರಕ್ಕೆ ಪ್ರವಾಸ ಮಾಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಉಸ್ತುವಾರಿ ಸಚಿವರು ರಾಜಧಾನಿ ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಯಡಿಯೂರಪ್ಪ ತಮ್ಮ 75ನೆ ಹುಟ್ಟುಹಬ್ಬ ಆಚರಿಸಿಕೊಂಡ ವೇಳೆ ಬಿಜೆಪಿಯವರು ಆಕ್ಷೇಪವೆತ್ತಲಿಲ್ಲ. ಆದರೆ, ಇದೀಗ ನನ್ನ ಹುಟ್ಟುಹಬ್ಬ ಆಚರಣೆ ಬಗ್ಗೆ ಟೀಕೆ ಮಾಡುವುದು ಸಲ್ಲ. ಬಿಜೆಪಿಯವರಿಗೆ ಸಾಮರಸ್ಯ ಕೆಡಿಸುವುದೇ ಕೆಲಸ. ಅವರು ತಮ್ಮ ದ್ವಂದ್ವ ಮನೋಭಾವವನ್ನು ಕೈಬಿಡಬೇಕು. ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಅಮೃತ ಮಹೋತ್ಸವ ಪೂರ್ವಭಾವಿ ಸಭೆಗೆ ಡಿಕೆಶಿ ಬರುವ ಅಗತ್ಯವಿಲ್ಲ. ಅವರಿಗೆ ಆಗಸ್ಟ್ 3ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದರು.

ಬಿಜೆಪಿ ಸರಕಾರಕ್ಕೆ ರಾಜ್ಯದ ಜನರ ಬಗ್ಗೆ ಯಾವುದೇ ಕಳಕಳಿ ಇಲ್ಲ. ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಲವು ಜಿಲ್ಲೆಗಳ ಜನತೆ ಕಷ್ಟದಲ್ಲಿದ್ದು, ಶೀಘ್ರದಲ್ಲೇ ನಾನೂ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಲಿದ್ದೇನೆ ಎಂದು ಹೇಳಿದರು.

ನೀರಾವರಿ ಆಧರಿತ ಕೃಷಿಗೆ ಸಾಲಸೌಲಭ್ಯ ಹೆಚ್ಚಿಸಿ- ಅಮಿತ್ ಶಾ

0

ನೀರಾವರಿ, ಇತರೆ ಮೂಲಸೌಕರ್ಯ ಸೇರಿದಂತೆ ಕೃಷಿ ವಲಯಕ್ಕೆ ಹೆಚ್ಚು ಹೆಚ್ಚು ದೀರ್ಘಾವಧಿಯ ಸಾಲಗಳನ್ನು ಒದಗಿಸುವಂತೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಗೆ(ಎಆರ್‌ಡಿಬಿ) ಸಹಕಾರ ಸಚಿವ ಅಮಿತ್‌ ಶಾ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಕೃಷಿ ಅಭಿವೃದ್ಧಿ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರವು ದೇಶದ ಸಹಕಾರಿ ಸಂಘಗಳ ಡೇಟಾಬೇಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಕೃಷಿ ವಲಯವನ್ನು ಸುಧಾರಿಸದೇ ರೈತರ ಆದಾಯ ಹೆಚ್ಚಿಸಲು ಸಾಧ್ಯವಿಲ್ಲ. ಹೀಗಾಗಿ, ನೀರಾವರಿ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಲ ನೀಡಲು ಸಹಕಾರಿ ಬ್ಯಾಂಕುಗಳು ಆದ್ಯತೆ ನೀಡಬೇಕು ಎಂದಿದ್ದಾರೆ.

ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿಯಿರುವ ಸಾಲಮನ್ನಾ ಬಗ್ಗೆ ಚಿಂತನೆ- ಸಿಎಂ

0

ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನ ನಡೆಸಲು ಸರಕಾರ ಮುಂದಾಗಿದ್ದು, ಶೀಘ್ರ ಆದೇಶ ಹೊರಡಿಸಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಶ್ವಕರ್ಮ ಬಂಧುಗಳ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನದ (ಕುಲಶಾಸ್ತ್ರ ಅಧ್ಯಯನ) ಅಗತ್ಯ ಇದೆ. ಇದು ಆ ಸಮುದಾಯದ ಬೇಡಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗುವುದು. ಈ ಕ್ರಮ
ದಿಂದ ಸಮುದಾಯಕ್ಕೆ ಮುಂಬರುವ ದಿನಗಳಲ್ಲಿ ಸಾಕಷ್ಟು ಅನುಕೂಲ ಆಗಲಿದೆ ಎಂದು ಅವರು ತಿಳಿಸಿದರು.

ಅರಮನೆ ಮೈದಾನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಮ್ಮಿ ಕೊಂಡಿದ್ದ ವಿಶ್ವಕರ್ಮ ಸಮಾಜದ ಮುಖಂಡರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಂಸ್ಥೆ ರಚನೆ
ವಿಶ್ವಕರ್ಮ ಸಮುದಾಯದ ‘ಪಂಚಕಸಬು’ಗಳ ಸ್ಥಿತಿಗತಿ, ಅವುಗಳ ಆಧುನೀಕರಣ ಮತ್ತಿತರ ವಿಷಯಗಳ ಮೇಲೂ ಬೆಳಕು ಚೆಲ್ಲಲು ವಿಶ್ವಕರ್ಮ ಸಂಸ್ಥೆ ರಚನೆಗೆ ಆದೇಶಿಸಲಾಗಿದೆ.

ಚಿತ್ರಕಲಾ ಪರಿಷತ್ತಿನ ಮಾದರಿಯಲ್ಲಿ ಪಠ್ಯವನ್ನೂ ರಚಿಸಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗಾಗಿ ಎರಡು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ ಅವರು, ರಾಜ್ಯದಲ್ಲಿ ಅಪೂರ್ಣಗೊಂಡ ಸಮುದಾಯದ ಭವನಗಳನ್ನು ಪೂರ್ಣಗೊಳಿಸಲೂ ಕ್ರಮ ಕೈಗೊಳ್ಳಲಾಗುವುದು.

ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ ಸುಮಾರು 82 ಕೋಟಿ ರೂ. ಸಾಲ ಮನ್ನಾ ಮಾಡುವ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ವಲಯಕ್ಕೆ ಪೂರಕವಾಗಿ ₹ 23 ಸಾವಿರ ಕೋಟಿ ಮೌಲ್ಯದ ಯೋಜನೆ ಪ್ರಸ್ತಾವನೆ ಸ್ವೀಕೃತ

0

ಕೃಷಿ ವಲಯಕ್ಕೆ ಪೂರಕವಾದ ವಿನೂತನ ಯೋಜನೆಗಳಿಗೆ ಹಣಕಾಸು ಸೌಲಭ್ಯ ಒದಗಿಸುವ ಕೇಂದ್ರದ ಕೃಷಿ ಮೂಲಸೌಕರ್ಯ ನಿಧಿ’ ಅಡಿ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಒಟ್ಟಾರೆ 23 ಸಾವಿರ ಕೋಟಿ ಮೊತ್ತದ ವಿವಿಧ ಪ್ರಕಾರದ ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, ಈ ಪೈಕಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಪರಿಗಣನೆ ಹಂತದಲ್ಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದರು.

ಶೈತ್ಯಾಗಾರ, ಗೋದಾಮುಗಳು ಸೇರಿದಂತೆ ಕೊಯ್ಲೋತ್ತರ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2020ರಲ್ಲಿ ಈ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಿದೆ.

ಇದರಡಿ ಬ್ಯಾಂಕ್‌ಗಳ ಮೂಲಕ ಒಂದು ಲಕ್ಷ ಕೋಟಿ ರೂ.ವರೆಗೂ ಹಣಕಾಸು ನೆರವು ನೀಡಲು ಅವಕಾಶ ಇದೆ. ಇದರಲ್ಲಿ ಈವರೆಗೆ 23 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇದರಲ್ಲಿ 13 ಸಾವಿರ ಕೋಟಿ ಮೊತ್ತದ ಯೋಜನೆಗಳು ಅನುಮೋದನೆಯ ಹಲವು ಹಂತಗಳಲ್ಲಿದ್ದು, ಈ ಪೈಕಿ ಒಂಬತ್ತು ಸಾವಿರ ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಬ್ಯಾಂಕ್‌ಗಳ ಮೂಲಕ ಹಣ ಬಿಡುಗಡೆ ಆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದವರಾರೂ ದೊಡ್ಡ ಕಂಪೆನಿಗಳ ಮಾಲಿಕರಲ್ಲ. ರೈತರು, ರೈತ ಉತ್ಪಾದಕ ಸಂಘಗಳಾಗಿವೆ. ವಿನೂತನ ಯೋಜನೆಗಳಿಗೆ ಈ ನಿಧಿ ಅಡಿ ವೇದಿಕೆ ಕಲ್ಪಿಸಲಾಗುತ್ತದೆ. ಬ್ಯಾಂಕ್‌ಗಳ ಮೂಲಕ ಕನಿಷ್ಠ ಬಡ್ಡಿದರ (ಶೇ. 3)ದಲ್ಲಿ ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಯೋಜನೆ ಅವಧಿ 2025-26ರವರೆಗೆ ಇರಲಿದೆ ಎಂದರು.

ನಮ್ಮ ಪಕ್ಷ ಚುನಾವಣೆಗೆ ತಯಾರಿದೆ- ಶಿವಕುಮಾರ್

0

ವಿಧಾನಸಭೆ ಚುನಾವಣೆಯು ಯಾವಾಗ ನಡೆದರೂ ಎದುರಿಸಲು ನಾವು ಸಿದ್ಧವಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಮಾಧ್ಯಮಮಿತ್ರರೊಂದಿಗೆ ಡಿಕೆ ಶಿವಕುಮಾರ್ ಅವರು ಮಾತನಾಡಿದರು.

ಅವಧಿಗೂ ಮುನ್ನವೇ ಚುನಾವಣೆ ಸಾಧ್ಯತೆ ಇದೆ ಎಂಬ ವಂದಂತಿ ಇದೆ. ಬಿಜೆಪಿಯವರು ಸಿದ್ಧತಾ ಕಾರ್ಯಾಗಾರ ನಡೆಸಿದ್ದಾರೆ.

ಅವರಿಗೆ ಸೋಲುವ ಭಯವಿದೆ. ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶವಿದೆ. ಈ ಆಕ್ರೋಶ ಹೆಚ್ಚಾಗುವ ಮುನ್ನ ಚುನಾವಣೆಗೆ ಹೋಗುವ ಯೋಜನೆಯಲ್ಲಿ ಬಿಜೆಪಿಯವರಿದ್ದಂತಿದೆ. ನಾವೂ ತಯಾರಿದ್ದೇವೆ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರು, ಸಾಮಾನ್ಯ ಜನರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರ ನೋವನ್ನು ಗಮನಿಸಿ, ಶಾಂತಿಯ ತೋಟಕ್ಕೆ ಧಕ್ಕೆಯಾಗದಂತೆ ಸರ್ಕಾರ ಕೆಲಸ ಮಾಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆ ಸಂದರ್ಭ ನೀಡಿದ್ದ ಭರವಸೆಗಳನ್ನು ಬಿಜೆಪಿಯವರು ಈಡೇರಿಸಿಲ್ಲ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದೇವೆ. ಇದು ಬಿಜೆಪಿಯ ಅಸೂಯೆಗೆ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅವರ ಅಸೂಯೆಗೆ ಮದ್ದು ಕೊಡುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಜಲದರ್ಶಿನಿ ಅತಿಥಿ ಗೃಹದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳೊಂದಿಗೆ ಶಿವಕುಮಾರ್ ಚರ್ಚಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಡಿ.ರವಿಶಂಕರ್, ಹರೀಶ್ ಗೌಡ, ಕೆ.ಮರಿಗೌಡ, ಆಯೂಬ್ ಖಾನ್‌, ಕೂರ್ಗಳ್ಳಿ ಮಾದೇವ್, ಸೂರಜ್‌ ಹೆಗಡೆ, ಲಕ್ಷ್ಮಣ್, ಶ್ರೀನಾಥ್ ಬಾಬು, ಸುನಂದ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ರಾಷ್ಡ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಕನ್ನಡಿಗನ ಸಾಕ್ಷ್ಯಚಿತ್ರಆಯ್ಕೆ

0

ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನ ಕೇಂದ್ರ (ಇಎಂಆರ್‌ಸಿ)ದ ತಾಂತ್ರಿಕ ಸಿಬ್ಬಂದಿ ಕೆ.ಗೋಪಿನಾಥ್ ಅವರ ಸಾಕ್ಷ್ಯಚಿತ್ರಗಳು ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.

ಆ.22ರಿಂದ 26ರವರೆಗೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ಸಾಕ್ಷ್ಯಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಪ್ರಸಾ‌ರ ಸಂಸ್ಥೆಯು ಆಯೋಜಿಸುತ್ತಿದೆ.
ದೇಶದಾದ್ಯಂತ 71 ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

‘ದಿ ಫಸ್ಟ್ ಫೈಟ್’-ಇಂಡಿಯನ್ ಗ್ರೇ ಹಾರ್ನ್ ಬಿಲ್ ಪಕ್ಷಿ (ಮುಂಗಟ್ಟೆ ಪಕ್ಷಿ)ಯ ಜೀವನ ಶೈಲಿ ಕುರಿತಾದ ಸಾಕ್ಷ್ಯಚಿತ್ರವು 21 ನಿಮಿಷಗಳದಾಗಿದ್ದು, ಇಂಗ್ಲಿಷ್‌ ಭಾಷೆಯಲ್ಲಿದೆ. ‘ಲಿಕ್ವಿಡ್ ವೆಸ್ಟ್ ಮ್ಯಾನೆಜೈಂಟ್-ಸ್ವಚ್ಛ ಪರಿಸರ’ ಗೃಹ ಬಳಕೆಯ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಸುಲಭ ವಿಧಾನ ಕುರಿತಾದ ಸಾಕ್ಷ್ಯಚಿತ್ರವು 11 ನಿಮಿಷಗಳದಾಗಿದ್ದು, ಕನ್ನಡ ಭಾಷೆಯಲ್ಲಿದೆ. ಇವುಗಳಿಗೆ ಗೋಪಿನಾಥ್ ಛಾಯಾಗ್ರಹಣ, ಬರಹ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.

‘ದಿ ಜರ್ನಿ ಆಫ್ ಸಿಲ್ಕ್’- ರೇಷ್ಮೆ ಕೃಷಿ ಸಮಗ್ರ ಮಹಿತಿ ಮತ್ತು ಉಪಯೋಗಗಳ ಕುರಿತಾದ ಸಾಕ್ಷ್ಯಚಿತ್ರವು 15 ನಿಮಿಷಗಳದಾಗಿದ್ದು, ಇಂಗ್ಲಿಷ್‌ ಭಾಷೆಯದಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಸಂಶೋಧನೆ ಮತ್ತು ಬರಹವನ್ನು ಮೈಸೂರು ವಿಶ್ವವಿದ್ಯಾಲಯದ ರೇಷ್ಮೆ ಕೃಷಿ ವಿಜ್ಞಾನ ವಿಭಾಗದ ಡಾ.ಆರ್.ಎಸ್. ಉಮಾಕಾಂತ್ ಮಾಡಿದ್ದಾರೆ. ಕೆ.ಗೋಪಿನಾಥ್ ಛಾಯಾಗ್ರಹಣ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.

‘ಈ ಮೂರೂ ಸಾಕ್ಷ್ಯಚಿತ್ರಗಳು ಕಳೆದ ವರ್ಷ ನವದೆಹಲಿಯ ಸಿಇಟಿ-ಎನ್‌ಸಿಇಆರ್‌ಟಿ ಆಯೋಜಿಸಿದ್ದ 25ನೇ ಅಖಿಲ ಭಾರತ ಮಕ್ಕಳ ಶೈಕ್ಷಣಿಕ ಆಡಿಯೊ ಮತ್ತು ವಿಡಿಯೊ ಸಾಕ್ಷ್ಯಚಿತ್ರೋತ್ಸವ-2021ರಲ್ಲಿ 4 ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಇವುಗಳನ್ನು ನಿರ್ಮಿಸುವಲ್ಲಿ ಇಎಂಆರ್‌ಸಿ ನಿರ್ದೇಶಕ ಪ್ರೊ.ಎಚ್.ರಾಜಶೇಖರ್, ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪಾಲಿಮರ್ ಸೈನ್ಸ್ ವಿಭಾಗದ ಪ್ರೊ.ಆರ್.ಎಲ್.ಜಗದೀಶ್ ಸಹಕಾರ ನೀಡಿದ್ದಾರೆ ಎಂದು ಗೋಪಿನಾಥ್ ತಿಳಿಸಿದ್ದಾರೆ.

ಡಿಜಿಟಲ್ ಮಾಧ್ಯಮಗಳಿಗೆ ಅಂಕುಶ ಹಾಕಲುಕೇಂದ್ರದ ಚಿಂತನೆ

0

ಡಿಜಿಟಲ್ ಸುದ್ದಿ ಮಾದ್ಯಮಗಳ ನಿಯಂತ್ರಣದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಡಿಜಿಟಲ್ ಮಾಧ್ಯಮಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಜುಲೈ 18ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ‌‌. ಅಧಿವೇಶನದ ವೇಳೆ ವಿಧೇಯಕ ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯಿದೆ -2019ಕ್ಕೆ ತಿದ್ದುಪಡಿ ತರಲು ಕೇಂದ್ರವು ಚಿಂತನೆ ನಡೆಸಿದೆ. ಕಾಯ್ದೆ ಜಾರಿಗೆ ಬಂದರೆ ಡಿಜಿಟಲ್ ಮಾಧ್ಯಮಗಳಿಗೂ ನೊಂದಣಿ ಕಡ್ಡಾಯವಾಗಲಿದೆ.

ಇದರೊಂದಿಗೆ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಂತೆ ಡಿಜಿಟಲ್ ಸುದ್ದಿ ಮಾಧ್ಯಮಗಳು ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ನೊಂದಣಿ ರದ್ದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.