Wednesday, March 18, 2026
Wednesday, March 18, 2026
Home Blog Page 1502

ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭ

0

ಭಾರತದ 15 ನೇ ರಾಷ್ಟ್ರಪತಿ ಚುನಾವಣೆಯೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಅಧಿವೇಶನದಲ್ಲಿ, ಕೇಂದ್ರವು ಪತ್ರಿಕಾ ನೋಂದಣಿ ನಿಯತಕಾಲಿಕಗಳ ಮಸೂದೆ ಸೇರಿದಂತೆ 24 ಮಸೂದೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ಈ ಅವಧಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಕಂಟೋನ್ಮೆಂಟ್‌ ಮಸೂದೆ, ಮಲ್ಟಿ ಸ್ಟೇಟ್ ಕೋ-ಅಪರೇಟಿವ್‌ ಸೊಸೈಟೀಸ್‌ ಮಸೂದೆ, ತಮಿಳುನಾಡು ಮತ್ತು ಛತ್ತೀಸ್‌ಘಡದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಗೆ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 24 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಅಷ್ಟೇ ಅಲ್ಲದೇ, ಉಭಯ ಸದನಗಳಲ್ಲಿ ಬಾಕಿ ಉಳಿದಿರುವ ಇತರೆ 8 ಮಸೂದೆಗಳು ಅನುಮೋದನೆಗೆ ಕಾಯುತ್ತಿದ್ದು, ಸಂಸತ್ತಿನಲ್ಲಿ ಮಂಡನೆಯಾಗಲಿವೆ ಎನ್ನಲಾಗಿದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಇಬ್ಬರು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 12 ರಂದು ಮುಕ್ತಾಯವಾಗಲಿದೆ.

ಇಸ್ಲಾಂ ಧರ್ಮವು ಚೀನೀಯ ದೃಷ್ಟಿಕೋನಕ್ಕೆ ಬದ್ಧವಾಗಿರಲಿ- ಜಿನ್ ಪಿಂಗ್

0

ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು. ದೇಶದಲ್ಲಿನ ಎಲ್ಲ ಧರ್ಮಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸಮಾಜವಾದಿ ಪರಿಕಲ್ಪನೆಗೆ ಹೊಂದಿಕೊಳ್ಳಬೇಕು. ಈ ತತ್ವವನ್ನು ಎತ್ತಿಹಿಡಿಯುವತ್ತ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚಿಸಿದ್ದಾರೆ.

ಚೀನೀ ರಾಷ್ಟ್ರಕ್ಕಾಗಿ ಸಮುದಾಯ ಪ್ರಜ್ಞೆಯನ್ನು ಗಟ್ಟಿಯಾಗಿ ಬೆಳೆಸಬೇಕು. ವಿವಿಧ ಜನಾಂಗಗಳ ನಡುವೆ ವಿನಿಮಯ, ಸಂವಹನ ಮತ್ತು ಏಕೀಕರಣ ಮನೋಭಾವವನ್ನು ಉತ್ತೇಜಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಲಡಾಖ್‌ಗೆ ಸಮೀಪದಲ್ಲಿರುವ ಷಿಜಿಯಾಂಗ್ ಪ್ರದೇಶಕ್ಕೆ ಭೇಟಿ ನೀಡಿರುವ ಜಿನ್‌ಪಿಂಗ್‌, ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಉಯಿಘರ್‌ ಮುಸ್ಲಿಮರ ಪ್ರತಿಭಟನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಚೀನಾದ ಭದ್ರತಾ ಪಡೆಗಳನ್ನು ಭೇಟಿಯಾದರು.

ಚೀನಾದಲ್ಲಿರುವ ಇಸ್ಲಾಂ ಧರ್ಮವು ದೃಷ್ಟಿಕೋನದಲ್ಲಿ ಚೀನೀ ಆಗಿರಬೇಕು. ಸಮಾಜವಾದಿ ಪರಿಕಲ್ಪನೆಯ ಸಮಾಜಕ್ಕೆ ಧರ್ಮಗಳು ಒಗ್ಗಿಕೊಳ್ಳಬೇಕು. ಈ ತತ್ವವನ್ನು ಎತ್ತಿಹಿಡಿಯಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು’ ಎಂದು ಅವರು ಅಧಿಕಾರಿಗಳಿಗೆ ಒತ್ತಾಯಿಸಿದರು.

ಸಾಂಸ್ಕೃತಿಕ ಅಸ್ಮಿತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಎಲ್ಲಾ ಜನಾಂಗಗಳಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ದೊರೆಯಬೇಕು ಎಂದಿದ್ದಾರೆ. ಆ ಮೂಲಕ ಅವರು ಚೀನಾ ಗುಣಲಕ್ಷಣಗಳಾದ ಮಾತೃಭೂಮಿ, ಚೀನೀ ರಾಷ್ಟ್ರ, ಚೀನೀ ಸಂಸ್ಕೃತಿ, ಕಮ್ಯುನಿಸ್ಟ್ ಪಕ್ಷ, ಸಮಾಜವಾದದೊಂದಿಗೆ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಧರ್ಮಗಳ ಅನುಯಾಯಿಗಳ ಸಾಮಾನ್ಯ ಧಾರ್ಮಿಕ ಅಗತ್ಯಗಳನ್ನು ಖಾತ್ರಿಪಡಿಸಬೇಕು ಮತ್ತು ಅವರು ಪಕ್ಷ ಮತ್ತು ಸರ್ಕಾರಕ್ಕೆ ನಿಕಟವಾಗಬೇಕು ಎಂದು ಅವರು ತಿಳಿಸಿದರು.
ಚೀನಾದಲ್ಲಿನ ಇಸ್ಲಾಂ ಧರ್ಮವು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನೀತಿಗಳೊಂದಿಗೆ ನಿಲ್ಲಬೇಕೆಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಉಯಿಘರ್‌ ಮುಸ್ಲಿಮರನ್ನು ಚೀನಾ ದೊಡ್ಡ ಪ್ರಮಾಣದ ರಾಜಕೀಯ ಮರುಶಿಕ್ಷಣದ ಶಿಬಿರಗಳಲ್ಲಿ ಇರಿಸಿ, ಹಿಂಸಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಚೀನಾ ಅದನ್ನು ನಿರಾಕರಿಸುತ್ತಿದೆ.

ಮೈದುಂಬಿದ ಜಲಪಾತ ಜನಭರಿತ ಜೋಗ

0

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೋಗ ಜಲಪಾತವು ತುಂಬಿ ಹರಿಯುತ್ತಿದೆ. ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ಭಾನುವಾರದಂದು ಜನದಟ್ಟನೆ ಹೆಚ್ಚಾಗಿತ್ತು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಭೋರ್ಗರೆಯುತ್ತಿದೆ.
ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಕಲ್ಲು ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಪ್ರವಾಸಿಗರು ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ವೀಕ್ಷಿಸಿದರು.

ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಕೊಡಗಿನ ಅಬ್ಬಿ ಜಲಪಾತದ ಸೌಂದರ್ಯ ಇಮ್ಮಡಿಗೊಂಡಿದ್ದು, ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತದತ್ತ ಆಗಮಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ ಪಾಲ್ಸ್‌, ಗೊಡಚಿನಮಲ್ಕಿ ಜಲಪಾತಗಳನ್ನು ವೀಕ್ಷಿಸಲು ಸಹ ಭಾನುವಾರ ಸಾವಿರಾರು ಪ್ರವಾಸಿಗರು ದಾಂಗುಡಿಯಿಟ್ಟಿದ್ದರು.

ಆದರೆ ಪ್ರವಾಸಿಗರು ಸೆಲ್ಫಿ, ಫೋಟೋ, ವಿಡಿಯೋಗಳಿಗಾಗಿ ಅಪಾಯಕಾರಿ ಸ್ಥಳಕ್ಕೆ ತೆರಳುತ್ತಿದ್ದುದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇನ್ನು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭಾನುವಾರ 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು. ಕೆಲವು ಪ್ರವಾಸಿಗರು ತಮ್ಮ ಜೀವವನ್ನೂ ಲೆಕ್ಕಿಸದೆ ನದಿಯಲ್ಲಿ ಈಜಾಡಿದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 4 ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.

ಇದೇ ವೇಳೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯ, ಗಗನಚುಕ್ಕಿ ಜಲಪಾತ ನೋಡಲು ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಆಫ್ಘನಿಸ್ತಾನಕ್ಕೆ ಆರ್ಥಿಕ ನೆರವಿಗೆ ವಿಶ್ವಸಂಸ್ಥೆಯ ಬ್ಯಾಂಕ್ ಒಪ್ಪಿಗೆ

0

ಅಫ್ಘಾನಿಸ್ತಾನದ 8 ವಲಯ ಹಾಗೂ 34 ಪ್ರಾಂತಗಳಿಗೆ ಮಾನವೀಯ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉಪಕ್ರಮ ಕೈಗೊಳ್ಳಲು ನೆರವಾಗುವ 20 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ಮತ್ತು ವಿಶ್ವಬ್ಯಾಂಕ್ ಸಹಿ ಹಾಕಿದೆ.

ಆರ್ಥಿಕ ಪುನರುಜ್ಜೀವನ ಮತ್ತು ದುರ್ಬಲ ಸಮುದಾಯಗಳನ್ನು ಬೆಂಬಲಿಸುವಲ್ಲಿ ದಶಕಗಳ ಅನುಭವ ಮತ್ತು ಪರಿಣತಿಯ ಹಿನ್ನೆಲೆಯಲ್ಲಿ ಯುಎನ್ಡಿಪಿ 400 ಎನ್ಜಿಒ ಹಾಗೂ ಸಿಎಸ್‌ಒಗಳನ್ನು ಅದರ ಸಾಮರ್ಥ್ಯ ಮತ್ತು ಯೋಜನಾ ವಿನ್ಯಾಸದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು ಎಂದು ವಿಶ್ವಸಂಸ್ಥೆ ಹೇಳಿದೆ.

ವಿಕಲಾಂಗ ವ್ಯಕ್ತಿಗಳು ಸೇರಿದಂತೆ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಆರೋಗ್ಯ, ಶಿಕ್ಷಣ , ಕೃಷಿ ಮತ್ತು ಆಹಾರದ ಭದ್ರತೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಪ್ರವೇಶವನ್ನು ಹೆಚ್ಚಿಸುವ ಉದ್ದೇಶವನ್ನು ತ್ವರಿತ ಪರಿಣಾಮ ಯೋಜನೆಗಳು ಹೊಂದಿದೆ. ಅಫ್ಘಾನ್ನಲ್ಲಿ ದೀರ್ಘಾವಧಿಯ ಯುದ್ಧದ ಹಿನ್ನೆಲೆಯಲ್ಲಿ, ಎನ್ಜಿಒ ಹಾಗೂ ಸಿಎಸ್‌ಒಗಳು ಮಾನವೀಯ ಸೇವೆ ಮತ್ತು ಅಭಿವೃದ್ಧಿ ಚಟುವಟಿಕೆಯನ್ನು ದುರ್ಗಮ ಪ್ರದೇಶಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಫ್ಘಾನ್ನಲ್ಲಿನ ಎನ್ಜಿಒ ಹಾಗೂ ಸಿಎಸ್‌ಒ ಜತೆ ಒಗ್ಗಟ್ಟು ಮತ್ತು ಬೆಂಬಲವನ್ನು ತೋರಿಸಿರುವುದಕ್ಕೆ ಮತ್ತು ಅವುಗಳ ಪ್ರಗತಿಗೆ ನೆರವಾಗಿರುವುದಕ್ಕೆ ವಿಶ್ವಬ್ಯಾಂಕ್ಗೆ ಧನ್ಯವಾದಗಳು. ಈ ಯೋಜನೆಯ ಮೂಲಕ ಸಮುದಾಯಕ್ಕೆ ತ್ವರಿತವಾಗಿ ಮತ್ತು ಹೊಂದಿಕೊಳ್ಳುವ ರೀತಿಯಲ್ಲಿ ನೆರವಾಗುವ ಯುಎನ್ಡಿಪಿಯ ಆದ್ಯತೆಯನ್ನು ಇದು ಎತ್ತಿತೋರಿಸಿದೆ ಎಂದು ಯುಎನ್ಡಿಪಿ ಸ್ಥಾನಿಕ ಪ್ರತಿನಿಧಿ ಸುರಯೊ ಬುಝರ್ಕೋವ ಹೇಳಿದ್ದಾರೆ. ಅಫ್ಘಾನಿಸ್ತಾನ ಪುನರ್ರಚನೆ ಪ್ರತಿಷ್ಟಾನ, ದೇಣಿಗೆದಾರರು ಮತ್ತು ಅಂತರಾಷ್ಟ್ರೀಯ ಸಮುದಾಯದ ಕೋರಿಕೆಯ ಆಧಾರದಲ್ಲಿ ಅಫ್ಘಾನ್ನ ಜನತೆಯನ್ನು ಬೆಂಬಲಿಸುವ ಹೆಚ್ಚುವರಿ ವಿಧಾನವಾಗಿದೆ. ಆಯ್ದ ವಿಶ್ವಸಂಸ್ಥೆ ಏಜೆನ್ಸಿಗಳಿಗೆ ಹಾಗೂ ಅಂತರಾಷ್ಟ್ರೀಯ ಎನ್ಜಿಒಗಳಿಗೆ ಎಆರ್ಟಿಎಫ್ನ ಸ್ವೀಕಾರ-ಕಾರ್ಯಗತ ರೂಪದ 1 ಬಿಲಿಯನ್ ಡಾಲರ್ನಷ್ಟು ನಿಧಿಯನ್ನು ಒದಗಿಸುವುದಕ್ಕೆ ಈ ವಿಧಾನ ಮಾರ್ಗಸೂಚಿಯಾಗಿದೆ ಎಂದು ಯುಎನ್ಡಿಪಿ ಹೇಳಿದೆ.

ಉಪರಾಷ್ಡ್ರಪತಿ ಹುದ್ದೆಗೆ ಜಗದೀಪ್ ಧನ್ಕರ್ ಎನ್ ಡಿಎ ಪರ ಅಭ್ಯರ್ಥಿ

0

ಭಾರತೀಯ ಜನತಾ ಪಕ್ಷ ಉಪ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ರನ್ನು ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿರುವ ಜಗದೀಪ್ ಧಂಖರ್ ರನ್ನು ಉಪ ರಾಷ್ಟ್ರಪತಿ ಚುನಾವಣೆ ಎನ್ ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

ಪಶ್ಚಿಮ ಬಂಗಾಲದ ಹಾಲಿ ರಾಜ್ಯಪಾಲ ಜಗದೀಪ್‌ ಧನ್ಕರ್‌, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆಗಿನ ಮುಸುಕಿನ ಗುದ್ದಾಟದಿಂದಲೇ ಸುದ್ದಿಯಾದವರು.

ಮೂಲತಃ ರಾಜಸ್ಥಾನದವರಾದ ಧನ್ಕರ್‌ ಅವರು, 1951ರ ಮೇ 18ರಂದು ಕಿಥಾನಾ ಎಂಬ ಹಳ್ಳಿಯಲ್ಲಿ ಜನಿಸಿದವರು.
ಚಿತ್ತೋರ್‌ಘಡದ ಸೈನಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ ಜಗದೀಪ್‌, ಜೈಪುರದಲ್ಲಿರುವ ರಾಜಸ್ಥಾನ
ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರೈಸಿದ್ದಾರೆ.

ಕಾನೂನು ಪದವಿ ಮುಗಿಸಿರುವ ನಂತರ ರಾಜಸ್ಥಾನ ಬಾರ್‌ ಕೌನ್ಸಿಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೈಪುರ ಮಹಾರಾಜ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಮತ್ತು ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. ಇವರ ಪತ್ನಿಯ ಹೆಸರು ಸುದೇಶ್‌ ಧನ್ಕರ್‌ ಹಾಗೂ ಓರ್ವ ಪುತ್ರಿ ಇದ್ದಾರೆ.
ರಾಜಸ್ಥಾನ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರುವ ಇವರು ಜನತಾ ದಳದ ಮೂಲಕ ರಾಜಕೀಯ ಪ್ರವೇಶಿಸಿದ್ದರು.

ಬಳಿಕ ಬಿಜೆಪಿ ಸೇರಿ ಇಲ್ಲಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
1989-91ರ ಅವಧಿಯಲ್ಲಿ ಜನತಾದಳದಿಂದ ಝುಂಝುನು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆಗ ಚಂದ್ರಶೇಖರ್‌ ಅವರು ಪ್ರಧಾನಿಯಾಗಿದ್ದು, ಅವರ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆಯ ಸಹಾಯಕ ಸಚಿವರಾಗಿದ್ದರು.

1993ರಿಂದ 98ರ ವರೆಗೆ ಕಿಶಾನ್‌ಘಡದ ವಿಧಾನಸಭೆ ಕ್ಷೇತ್ರದ ಸದಸ್ಯರಾಗಿದ್ದರು. 2019ರ ಜು. 30ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಇವರನ್ನು ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ನಿಯುಕ್ತಿಗೊಳಿಸಿದ್ದರು.

ಉಚಿತ ಕೊಡುಗೆ ನೀಡಿ ಮತಯಾಚನೆಅಪಾಯಕಾರಿ-ಮೋದಿ

0

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ರೇವರಿ ಸಂಸ್ಕೃತಿ’ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದು, ಉಚಿತ ಕೊಡುಗೆಗಳನ್ನ ನೀಡುವ ಮೂಲಕ ಮತ ಕೋರುವುದು ದೇಶದ ಅಭಿವೃದ್ಧಿಗೆ ‘ತುಂಬಾ ಅಪಾಯಕಾರಿ’ ಎಂದು ಹೇಳಿದರು.

ಅಂದ್ಹಾಗೆ, ‘ರೇವರಿ’ ಅಂದ್ರೆ ಉತ್ತರ ಭಾರತದಲ್ಲಿ ಸಿಗುವ ಜನಪ್ರಿಯ ಸಿಹಿತಿಂಡಿ ಹೆಸರು.
ಇಲ್ಲಿ 296 ಕಿ.ಮೀ ಉದ್ದದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿದ ನಂತ್ರ ಸಭಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಸಂಪರ್ಕದ ಕೊರತೆಯಿಂದಾಗಿ ಉತ್ತರ ಪ್ರದೇಶದ ಹಿಂದಿನ ವಿತರಣೆಗಳನ್ನ ತರಾಟೆಗೆ ತೆಗೆದುಕೊಂಡರು ಮತ್ತು ‘ಡಬಲ್ ಎಂಜಿನ್’ ಸರ್ಕಾರವು ಈಗ ವೇಗವಾಗಿ ಸುಧಾರಿಸುವ ಸಂಪರ್ಕದೊಂದಿಗೆ ರಾಜ್ಯದ ಪ್ರಮುಖ ಪರಿವರ್ತನೆಯನ್ನ ಖಚಿತಪಡಿಸುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ್ರ ನಾಯಕತ್ವದಲ್ಲಿ, ಉತ್ತರ ಪ್ರದೇಶವು ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಮತ್ತು ವೇಗವಾಗಿ ಸುಧಾರಿಸುವ ಸಂಪರ್ಕದೊಂದಿಗೆ ಪ್ರಮುಖ ಪರಿವರ್ತನೆಯನ್ನ ಕಾಣುತ್ತಿದೆ ಎಂದು ಮೋದಿ ಹೇಳಿದರು.

ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಮೂಲಕ ಚಿತ್ರಕೂಟದಿಂದ ದೆಹಲಿಗೆ ಹೋಗುವ ದೂರವನ್ನು ಮೂರ್ನಾಲ್ಕು ಗಂಟೆಗಳಷ್ಟು ಕಡಿಮೆ ಮಾಡಲಾಗಿದೆ, ಆದರೆ ಅದರ ಪ್ರಯೋಜನವು ಅದಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಇನ್ನು ಈ ಹಿಂದೆ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಪರ್ಕವನ್ನ ನೆನಪಿಸಿಕೊಳ್ಳುವಂತೆ ಜನರಿಗೆ ಹೇಳಿದರು. ಇನ್ನು ಇದೇ ವೇಳೆ ಉತ್ತರ ಪ್ರದೇಶದಲ್ಲಿ ‘ಡಬಲ್ ಇಂಜಿನ್ ಸರ್ಕಾರ ಮಾಡುತ್ತಿರುವ ಕೆಲಸವನ್ನ ಶ್ಲಾಘಿಸಿದರು.

13ರಾಜ್ಯಗಳಲ್ಲಿ ಉದ್ಯೋಗ ಖಾತ್ರಿಯೋಜನೆ ಫಲಾನುಭವಿಗಳ ಸಂಖ್ಯೆ ಕುಸಿತ

0

ಗ್ರಾಮೀಣ ಪ್ರದೇಶಗಳಲ್ಲೂ ಉತ್ಪಾದನೆ ಮತ್ತು ಸೇವಾ ವಲಯಗಳ ಉತ್ತಮ ಕಾರ್ಯಕ್ಷಮತೆ ಹೆಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಆದಾಯವು ಹೆಚ್ಚುತ್ತಿದೆ. ಹಾಗಾಗಿ ಸರ್ಕಾರದ ಸಹಾಯದ ಮೇಲಿನ ಅವರ ಅವಲಂಬನೆಯೂ ಕೊನೆಗೊಳ್ಳುತ್ತಿದೆ ಎನ್ನಲಾಗಿದೆ.

ಅದರಂತೆ, ಹಣಕಾಸು ಸಚಿವಾಲಯದ ವರದಿಯ ಪ್ರಕಾರ, ಉಚಿತ ಪಡಿತರವನ್ನ ತೆಗೆದುಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನು ಇದಷ್ಟೇ ಅಲ್ಲದೇ MGNREGA ಅಡಿಯಲ್ಲಿ ಕೆಲಸ ಹುಡುಕುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಕೊರೊನಾ ಅವಧಿಯಲ್ಲಿ, MGNREGA ಅಡಿಯಲ್ಲಿ ಕೆಲಸ ಹುಡುಕುವ ಜನರ ಸಂಖ್ಯೆ ಅದರ ಉತ್ತುಂಗವನ್ನ ತಲುಪಿತ್ತು. ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ 2022-23ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುವ ಉಚಿತ ಆಹಾರ ಧಾನ್ಯಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಶೇಕಡಾ 89ರಷ್ಟು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಈ ವರ್ಷ ಶೇಕಡಾ 81ಕ್ಕೆ ಇಳಿದಿದೆ.

ಕೇವಲ 84 ದಶಲಕ್ಷ ಟನ್ ಮಾತ್ರ ವಿತರಣೆ
ಸಚಿವಾಲಯದ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ಉಚಿತ ಪಡಿತರ ಕಾರ್ಯಕ್ರಮದಡಿ 128 ಲಕ್ಷ ಟನ್ ಅಕ್ಕಿ ಮತ್ತು ಗೋಧಿಯನ್ನ ಹಂಚಿಕೆ ಮಾಡಲಾಗಿದೆ. ಉಚಿತ ಪಡಿತರ ಪಡೆಯುವಲ್ಲಿ ಜನರ ಕಡಿಮೆ ಆಸಕ್ತಿಯಿಂದಾಗಿ, ಕೇವಲ 84 ಲಕ್ಷ ಟನ್ʼಗಳನ್ನು ಮಾತ್ರ ವಿತರಿಸಲಾಗಿದೆ.

ಕಳೆದ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ 123 ಲಕ್ಷ ಟನ್ ಗೋಧಿ ಮತ್ತು ಅಕ್ಕಿಯನ್ನ ಹಂಚಿಕೆ ಮಾಡಲಾಗಿದ್ದು, ಈ ಪೈಕಿ 110 ಲಕ್ಷ ಟನ್ ಗೋಧಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ.
ಎಫ್.ಸಿ.ಐಯಲ್ಲಿ ಒಂದೂವರೆ ಪಟ್ಟು ಹೆಚ್ಚು ಸ್ಟಾಕ್
ಎಫ್‌ಸಿಐನ ಗೋದಾಮಿನಲ್ಲಿ ಆಹಾರ ಧಾನ್ಯಗಳ ಅಗತ್ಯಕ್ಕಿಂತ 1.5 ಪಟ್ಟು ಹೆಚ್ಚು ದಾಸ್ತಾನಿದೆ ಮತ್ತು ರಾಜ್ಯಗಳು ತಮ್ಮ ಕೋಟಾದ ಆಹಾರ ಧಾನ್ಯಗಳ ಶೇಕಡಾ 20ರಷ್ಟನ್ನು ಮಾತ್ರ ತೆಗೆದುಕೊಳ್ಳುತ್ತಿವೆ.

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ, ರಾಜ್ಯಗಳು ತಮ್ಮ ಹಂಚಿಕೆಯ ಶೇಕಡಾ 20.3 ರಷ್ಟು ಮಾತ್ರ ತೆಗೆದುಕೊಂಡವು. ಏಪ್ರಿಲ್ 2020ರಿಂದ ಸರ್ಕಾರವು 80 ಕೋಟಿ ಜನರಿಗೆ ಉಚಿತ ಪಡಿತರವನ್ನ ನೀಡುತ್ತಿದೆ. ಈ ಯೋಜನೆ ಮುಂದಿನ ಸೆಪ್ಟೆಂಬರ್ʼವರೆಗೆ ಮುಂದುವರಿಯಲಿದೆ.

ಜನರ ಸಂಖ್ಯೆ ಇಳಿಕೆ
ವರದಿಯ ಪ್ರಕಾರ, ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಜೂನ್‌ನಲ್ಲಿ MGNREGA ಅಡಿಯಲ್ಲಿ ಕೆಲಸ ಬಯಸುವ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಈ ಕುಸಿತವು ಕೃಷಿ ವಲಯದಲ್ಲಿ ಕಾರ್ಯನಿರ್ವಹಣೆಯ ಹೆಚ್ಚಳವನ್ನ ಪ್ರತಿಬಿಂಬಿಸುತ್ತದೆ. MGNREGA ಅಡಿಯಲ್ಲಿ, ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ವರ್ಷದ ಜೂನ್‌ನಲ್ಲಿ, MGNREGA ಅಡಿಯಲ್ಲಿ ಕಾರ್ಮಿಕರಿಗೆ ಪಾವತಿಸುವ ವೇತನವು ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಶೇಕಡಾ 9.2ರಷ್ಟು ಕುಸಿತವನ್ನು ದಾಖಲಿಸಿದೆ. 13 ರಾಜ್ಯಗಳಲ್ಲಿ MGNREGA ಅಡಿಯಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಕಡಿಮೆಯಾಗಿದೆ.

ಮಾನವನ ದುರಾಸೆಯಿಂದ ಪ್ರಕೃತಿಯ ನಾಶ-ಜಿ.ಯು. ಶಂಕರ್

0

ವಿಶ್ವ ಹಾವುಗಳ ದಿನಾಚರಣೆ ಪ್ರಯುಕ್ತ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗ ಹಾಗೂ ಅರಣ್ಯ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ವಿಶ್ವ ಹಾವುಗಳ ದಿನಾಚರಣೆ ಪ್ರಯುಕ್ತ ಹಾವುಗಳು ಮತ್ತು ಪರಿಸರ ಕುರಿತ ವಿಚಾರ ಸಂಕಿರಣವನ್ನು ಶ್ರೀ ಜಿ ಯು ಶಂಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಉದ್ಘಾಟಿಸಿ ಮಾನವನ ದುರಾಸೆಯಿಂದ ಪ್ರಕೃತಿಯ ನಾಶ ದಿನೇ ದಿನೇ ಹೆಚ್ಚಾಗುತ್ತಿದೆ ಹಾಗೂ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕೆಂದು ತಿಳಿಸಿದರು.

ಸಾರ್ವಜನಿಕರ ಸಹಕಾರ ಇಲ್ಲದೆ ಹೋದರೆ ಅರಣ್ಯ ಉಳಿಸುವುದು ಅರಣ್ಯ ಇಲಾಖೆಗೆ ಬಹಳ ಕಷ್ಟವಾಗುವುದು. ಸರ್ಕಾರ ಸುಸ್ಥಿರ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಡಾ. ನಾಗರಾಜ ಪರಿಸರ ಕಳೆದ 30 ವರ್ಷಗಳಲ್ಲಿ ಶೇಕಡ 60 ಜೀವ ವೈವಿಧ್ಯತೆ ನಾಶವಾಗಿರುವುದು ದಾಖಲಾಗಿದೆ, ಇದು ಬಹಳ ಆತಂಕಕಾರಿ ವಿಷಯ.

ಹಾವುಗಳು ಪರಿಸರ ಸಮತೋಲನದಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುವುದರೊಂದಿಗೆ ರೈತನ ಮಿತ್ರನಾಗಿ ಬೆಳೆಗಳನ್ನು ನಾಶ ಮಾಡುವ ಕೀಟಗಳನ್ನು ಮತ್ತು ಇಲಿಗಳನ್ನು ನಿಯಂತ್ರಿಸಿ ಸಹಕರಿಸುತ್ತಿವೆ. ಭಾರತದಲ್ಲಿ ನಿರ್ಲಕ್ಷದಿಂದ ಅತಿ ಹೆಚ್ಚು ಹಾವಿನ ಕಡಿತಕ್ಕೆ ಒಳಗಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅನೇಕ ಕಾರಣಗಳಿಂದ ಹಾವುಗಳನ್ನು ಕೊಲ್ಲುತ್ತಿದ್ದಾರೆ.

ಪರಿಸರದಲ್ಲಿ ಪ್ರತಿಯೊಂದು ಜೀವಿಯು ತುಂಬಾ ಅತ್ಯಮೂಲ್ಯ ಈ ನಿಟ್ಟಿನಲ್ಲಿ ಜೀವವೈವಿಧ್ಯತೆಯ ಪ್ರಾಮುಖ್ಯತೆ ಕುರಿತು ಹೆಚ್ಚು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ ಜೀವವೈವಿಧ್ಯದ ನಾಶ ಮಾನವನ ಸರ್ವನಾಶಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಎಚ್ಚರಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀ ಜಯಂತ್ ಬಾಬು ಉರಗಗಳ ಕುರಿತು ಡಾ.ನಾಗರಾಜ ಪರಿಸರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿದ್ದು ಈಗಾಗಲೇ 1700 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸಂರಕ್ಷಿಸಿರುವ ಇವರು ಶಿವಮೊಗ್ಗದ ಸುತ್ತಮುತ್ತ ಸಿಗುವ ವಿವಿಧ ಬಗೆಯ ಹಾವುಗಳ ಪರಿಚಯವನ್ನು ಚಿತ್ರಸಹಿತ ವಿವರಿಸಿ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದರು.

ಹಾವುಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿ ವಿಷಕಾರಿ ಹಾವು ಮತ್ತು ವಿಷಕಾರಿ ಅಲ್ಲದ ಹಾವುಗಳನ್ನು ಗುರುತಿಸುವುದು ಮತ್ತು ಹಾವು ಕಚ್ಚಿದ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನೆಲ್ಲ ಸಂಪೂರ್ಣವಾಗಿ ವಿವರಿಸಿ ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲಬೇಡಿ ತಕ್ಷಣ ಹತ್ತಿರದ ಉರಗ ತಜ್ಞರಿಗೆ ತಿಳಿಸಿ ಅವುಗಳನ್ನು ಉಳಿಸಿ ಎಂದು ತಿಳಿ ಹೇಳಿದರು.

ಎರಡು ವರ್ಷದಲ್ಲಿ 33 ಬಗೆಯ ಹಾವುಗಳನ್ನು ಗುರುತಿಸಲಾಗಿದ್ದು ಇನ್ನೂ ಸಂಶೋಧನಾ ಅವಧಿ ಮುಗಿಯುವವರೆಗೆ ಎಷ್ಟು ಸಿಗುವವೋ ಕಾದು ನೋಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ರಾಜೇಶ್ವರಿ. ಎನ್. ಮಾತನಾಡಿ ಪರಿಸರ ವಿಜ್ಞಾನ ವಿಭಾಗದಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಆಗುತ್ತಿರುವುದು ಬಹಳ ಸಂತೋಷ ವಿದ್ಯಾರ್ಥಿಗಳು ಇಲ್ಲಿ ಕಲಿತ ಎಲ್ಲ ವಿಷಯಗಳನ್ನು ತಿಳಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಆಗ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕತೆ ಬರುವುದು, ನಮ್ಮ ಪೂರ್ವಿಕರು ಪರಿಸರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು, ಹಾಗಾಗಿ ನಾಗಬನ, ಅಶ್ವತ ಕಟ್ಟೆ ಹೀಗೆ ಜೀವ ವೈವಿಧ್ಯತೆ ಉಳಿವಿಗಾಗಿ ಅನೇಕ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಪುರುಷೋತ್ತಮ್, ಡಾ. ಮಂಜುನಾಥ್, ಪ್ರೇಮ ಇನ್ನಿತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನ ಪ್ರಾರ್ಥಿಸಿ ತೇಜಸ್ವಿನಿ ಸ್ವಾಗತಿಸಿ, ಅಜಿತ್ ವಂದಿಸಿ, ಅಂಜಲಿ ನಿರೂಪಿಸಿದರು.

ಜವಳಿ ಪಾರ್ಕ್ ನಿಂದ ಹತ್ತುಸಾವಿರ ಜನಕ್ಕೆ ಉದ್ಯೋಗಲಭ್ಯ- ಸೀಎಂ

0

ಕಾಲ ಬದಲಾಗುತ್ತಿದೆ,ಭೂಮಿ ಎಷ್ಟಿದೇ ಅಷ್ಟೇ ಇದೆ, ಜನ ಹೆಚ್ಚಾಗುತ್ತಿದ್ದಾರೆ, ಭೂಮಿ ದೊಡ್ಡದು ಮಾಡಲು ಆಗಲ್ಲ, ಭೂಮಿಯನ್ನೇ ನೆಚ್ಚಿಕೊಂಡವರು ಬದುಕು ಬದಲಾಯಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಜವಳಿ ಪಾರ್ಕ್​​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸ್ವತಂತ್ರ ಬಂದಾಗ 33 ಕೋಟಿ ಜನರಿಗೆ ಆಹಾರ ನೀಡಲು ಆಗುತ್ತಿರಲಿಲ್ಲ. ರೈತ ಉಳಿದರೆ, ದೇಶ ಉಳಿಯುತ್ತದೆ. ಅವರ ಕುಟುಂಬ ಉಳಿದರೆ ದೇಶ ಉಳಿಯುತ್ತದೆ. ರೈತರ ಕುಟುಂಬದ ಆದಾಯ ಹೆಚ್ಚಾದರೆ ಎಲ್ಲರೂ ಸುಖವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ನಾನು ಅಧಿಕಾರಕ್ಕೆ ಬಂದಾಗ ಮೊದಲ ನಿರ್ಧಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತಂದಿರುವೆ. ವಿದ್ಯೆ ಮತ್ತು ಉದ್ಯೋಗ ನೀಡುವುದು ನನ್ನ ಮೊದಲ ಗುರಿ. ಇಲ್ಲಿ ಉದ್ಯೋಗ ಸೃಷ್ಟಿಯಾದರೆ, ಆರ್ಥಿಕ ಸಬಲೀಕರಣ ಹೊಂದುತ್ತಾರೆ. ಯಾರು ಹೆಚ್ಚು ಉದ್ಯೋಗ ನೀಡುತ್ತಾರೋ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಯಾವ ಮಹಿಳೆಯರ ದುಡ್ಡಿಗಾಗಿ ಬೇರೆಯವರು ಬಳಿ ಕೈ ಚಾಚದಂತ ಬದುಕು ನೀಡಲು ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ತಾಲೂಕಿನಲ್ಲೂ ಜವಳಿ ಪಾರ್ಕ್​​ ಸ್ಥಾಪನೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಒಟ್ಟು, ಈ ಕ್ಷೇತ್ರದಲ್ಲಿ 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಉದ್ಯಮಿಗಳಿಗೆ ರಪ್ತು ಮಾಡಲು ಹೆಚ್ಚಿನ ಅವಕಾಶಗಳು ಇವೆ. ರೈತರು ಬೆಳೆದ ಪದಾರ್ಥಗಳಿಗೆ ಸಂಸ್ಕರಣೆ ಮಾಡಿದರೆ ಹೆಚ್ಚಿನ ಲಾಭವಾಗಲಿದೆ. ಅದಕ್ಕಾಗಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು.

ಈ ವೇಳೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ ಸಿಇಓ ಮಹ್ಮದ್ ರೋಷನ್, ಸೇರಿದಂತೆ ಜವಳಿ ಇಲಾಖೆಯ ಅಧಿಕಾರಿಗಳು, ಟೆಕ್ಸ್ ಪೋರ್ಟ್ ಸಿಬ್ಬಂದಿಗಳು ಹಾಜರಿದ್ದರು.

ಮುರ್ಮು ಅವರಿಗೆ ಬೆಂಬಲ ಪ್ರಜಾಸತ್ತೆಯ ಹೆಗ್ಗಳಿಕೆ-ಎಚ್ ಡಿಕೆ

0

ರಾಷ್ಟ್ರಪತಿ ಚುನಾವಣೆಯ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ. ಈ ಬಗ್ಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಜನತಾ ದಳ ಪಕ್ಷ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕೊರೋನಾ ಪಾಸಿಟಿವ್‌ ಕಾರಣಕ್ಕೆ ನಾನು ವರ್ಚುಯಲ್‌ ವೇದಿಕೆ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಹೆಚ್​ಡಿ ದೇವೇಗೌಡರು ಪ್ರಧಾನಿಗಳಾಗಿದ್ದಾಗ ಮಹಿಳೆಯರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದರು. ಪ್ರಪ್ರಥಮ ಬಾರಿಗೆ ಆದಿವಾಸಿ ಮಹಿಳೆಯೊಬ್ಬರು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಮಾಜಿ ಪ್ರಧಾನಮಂತ್ರಿಗಳ ಆಶಯವೂ ಹೌದು. ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ತಮ್ಮ ಉಮೇದುವಾರಿಕೆ ಘೋಷಣೆಯಾದ ಮರುದಿನವೇ ದ್ರೌಪದಿ ಮುರ್ಮು ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಕೋರಿದ್ದರು.

ಬೆಂಗಳೂರಿಗೆ ಭೇಟಿ ನೀಡಿದ್ದಾಗ ಸ್ವತಃ ಅವರೇ ಗೌಡರ ನಿವಾಸಕ್ಕೆ ಭೇಟಿ ನೀಡಿ ಮತ ಕೇಳಿದ್ದರು ಎಂದು ತಿಳಿಸಿದರು.

ದ್ರೌಪದಿ ಮುರ್ಮು ಅವರ ವ್ಯಕ್ತಿತ್ವ, ಅವರ ಹಿನ್ನೆಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನಮ್ಮ ಪಕ್ಷ ಬೆಂಬಲ ಘೋಷಿಸಿದೆ. ಇಲ್ಲಿ ಪಕ್ಷಗಳ ಪ್ರಮೇಯವೇ ಇಲ್ಲ. ರಾಷ್ಟ್ರದ ಪರಮೋಚ್ಛ ಸಾಂವಿಧಾನಿಕ ಸ್ಥಾನ ರಾಷ್ಟ್ರಪತಿ ಪದವಿ. ಅದು ಪಕ್ಷ ರಾಜಕಾರಣದ ಚೌಕಟ್ಟನ್ನು ಮೀರಿದ ಹೊಣೆಗಾರಿಕೆ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಹೆಮ್ಮೆಯ 3 ಸೇನಾಪಡೆಗಳ ಮಹಾ ದಂಡನಾಯಕರಾಗಿ ಬುಡಕಟ್ಟು ಸಮುದಾಯದ ಓರ್ವ ಮಹಿಳೆಯೊಬ್ಬರು ಚುಕ್ಕಾಣಿ ಹಿಡಿಯುವುದು ಎಂದರೆ, ಅದು ಐತಿಹಾಸಿಕ ಗರಿಯೇ ಸರಿ. ಸಮಸ್ತ ಮಹಿಳೆಯರಿಗೆ ಮಾತ್ರವಲ್ಲ ಭಾರತ ಒಪ್ಪಿಕೊಂಡಿರುವ ಪ್ರಜಾಸತ್ತೆಯ ಹೆಗ್ಗಳಿಕೆಯೂ ಹೌದು ಎಂದು ಹೆಚ್​ಡಿಕೆ ಹೇಳಿದರು.