Wednesday, March 18, 2026
Wednesday, March 18, 2026
Home Blog Page 1499

ರಾಜ್ಯದಲ್ಲಿ ಕೋರೊನ ಸೋಂಕು ಏರಿಕೆ

0

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಲಾರಂಭಿಸಿದೆ. 1,478 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,866ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 1,229 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.42 ಲಕ್ಷ ಮೀರಿದೆ.

ಬೆಂಗಳೂರು ನಗರದಲ್ಲಿ 1,251 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 32, ಮೈಸೂರು 24, ಧಾರವಾಡ 18, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ತಲಾ 15, ಕೋಲಾರ 13, ಬಳ್ಳಾರಿಯಲ್ಲಿ 12, ಉತ್ತರ ಕನ್ನಡದಲ್ಲಿ 10, ತುಮಕೂರಿನಲ್ಲಿ 9, ದಕ್ಷಿಣ ಕನ್ನಡ, ಹಾಸನ, ಕಲಬುರಗಿ ಮತ್ತು ಉಡುಪಿಯಲ್ಲಿ ತಲಾ 8, ಚಾಮರಾಜನಗರ 7, ಕೊಡಗು, ಮಂಡ್ಯ, ಶಿವಮೊಗ್ಗ ಮತ್ತು ವಿಜಯಪುರದಲ್ಲಿ ತಲಾ 6, ಬೀದರ್ 4, ಚಿಕ್ಕಬಳ್ಳಾಪುರ 3, ದಾವಣಗೆರೆ, ಕೊಪ್ಪಳ ಮತ್ತು ರಾಮನಗರ ತಲಾ ಇಬ್ಬರು ಹಾಗೂ ಚಿತ್ರದರ್ಗು, ರಾಯಚೂರು ಮತ್ತು ಯಾದಗಿರಿ ತಲಾ ಒಬ್ಬರಂತೆ 1,478 ಸೋಂಕು ಪ್ರಕರಣಗಳು ವರದಿಯಾಗಿವೆ.

ಈವರೆಗೂ 40,089 ಸೋಂಕಿತರು ಸಾವಿಗೀಡಾಗಿದ್ದು, 39.90 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಲೋಗೋ ಬಿಡುಗಡೆ

0

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷೀ ಪ್ರಸಾದ್ ಅವರು ಲೋಗೋ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ತನ್ನದೇ ಪ್ರತ್ಯೇಕ ಲೋಗೋ ಹೊಂದುವ ಮೂಲಕ ಹಿರಿಮೆ ಹೆಚ್ಚಿಸಿಕೊಂಡಿದೆ ಎಂದರು.

ಪ್ರತಿಯೊಂದು ಸಂಘ-ಸಂಸ್ಥೆಗಳಿಗೆ ಲೋಗೋ ಜೀವಾಳ. ನಮ್ಮ ನಾಡಿಗೂ ಒಂದು ಲೋಗೋ ಇದೆ. ನಾವು ಹಾಕಿಕೊಳ್ಳುವ ಸಮವಸ್ತ್ರ ಕೂಡ ಒಂದು ಲೋಗೋ. ಲೋಗೊ ನಮ್ಮನ್ನು ನಾವು ಗುರುತಿಸಿಕೊಳ್ಳುವ ಸಂಕೇತ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಸಂಘ ತನ್ನದೇ ಆದ ಲೋಗೋ ಬಿಡುಗಡೆ ಮಾಡಿರುವುದು ಪತ್ರಕರ್ತರಿಗೆ ಸ್ಪೂರ್ತಿ ತುಂಬುವಂತೆ ಕೆಲಸ. ಸಂಘ ಮುಂದೆ ಯಶಸ್ವಿ ಹಾದಿಯಲ್ಲಿ ನಡೆಯಲಿ ಎಂದು ಆಶಿಸಿದರು.

ಪತ್ರಕರ್ತರ ಕೆಲಸ ಅಷ್ಟು ಸುಲಭವಾದದ್ದಲ್ಲ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಪತ್ರಕರ್ತರ ಸಮಯ ಪ್ರಜ್ಞೆ ಶ್ಲಾಘನೀಯ ಎಂದು ಬಣ್ಣಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ಮಾತನಾಡಿ, ಲೋಗೋ ಅಯಾ ಸಂಸ್ಥೆಯ ಪ್ರತಿಷ್ಠೆಯ ಪ್ರತೀಕ.
ಇದಕ್ಕೆ ಪೂರಕವಾಗಿ ತತ್ವ ಅಳವಡಿಸಿಕೊಂಡು ಸತ್ಯ, ನಿಖರತೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದ್ದತೆಯ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಆ ಸಂಘಟನೆ ತನ್ನ ಗುರಿಯನ್ನು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಲಿ ಎಂದು ಹಾರೈಸಿದರು.

ವಾರ್ತಾ ಇಲಾಖೆಯ ಹಿರಿಯ ವಾರ್ತಾಧಿಕಾರಿ ಶಫಿ ಸಾಸುದ್ದೀನ್ ಮಾತನಾಡಿ, ಯಾರಿಂದಲೂ ಲಾಭವನ್ನು ಅಪೇಕ್ಷೆ ಮಾಡದೆ ಪತ್ರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಪತ್ರಕರ್ತರ ಸಮಸ್ಯೆ ಬಗ್ಗೆ ಅರಿವಿರುವ ಗೋಪಾಲ್ ಯಡಗೆರೆ ಅವರು ಸಂಘದ ಅಧ್ಯಕ್ಷರಾಗಿರುವುದರಿಂದ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಂಘ ಬಲಿಷ್ಟವಾಗಿ ಬೆಳೆಯುವುದಲ್ಲಿ ಯಾವುದೇ ಎಂದು ಅನುಮಾನವಿಲ್ಲ ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಈ ಹಿಂದೆ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ನಿವೇಶ ಕೊಡಿಸುವ ವಿಚಾರ ಬಂದಾಗ ಜಿಲ್ಲೆಯಲ್ಲಿ ಪತ್ರಕರ್ತರ ಸಂಘ ಅಸ್ತಿತ್ವ ಇಲ್ಲದ ಕಾರಣ ಸಾಕಷ್ಟು ಅಡೆಚಣೆಗಳು ಆಗಿದ್ದವು.
ಆಗಿಂದ ಜಿಲ್ಲೆಯ ಪತ್ರಕರ್ತರನ್ನು ಒಗ್ಗೂಡಿಸಲು ಪತ್ರಕರ್ತರ ಸಂಘದವನ್ನು ಅಸ್ತಿತ್ವಕ್ಕೆ ತರಬೇಕು ಎಂಬುದು ನಮ್ಮ ಕನಸಾಗಿತ್ತು.
2 ದಶಕದ ಕನಸು ಈಗ ಗೋಪಾಲ್ ಯಡಗೆರೆ ಅವರ ನೇತೃತ್ವದ ಮೂಲಕ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಮಾತನಾಡಿ, ಸ್ಥಾನಮಾನ ಇದೆ ಎಂದು ಅಹಂಕಾರದಿಂದ ಬೀಗುವುದು ಮೂರ್ಖತನದ ಪರಮಾವಧಿ.

ಪತ್ರಕರ್ತರಾದ ನಾವು ಕಾರ್ಡ್ನಿಂದ ಗುರುತಿಸಿಕೊಳ್ಳದೇ, ಕಾರ್ಯದಿಂದ ಗುರುತಿಸಿಕೊಳ್ಳುವಂತ ಕೆಲಸ ಆಗಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಸಂಕಷ್ಟಕ್ಕೆ ನೆರವಾಗುವುದೇ ಸಂಘದ ಮುಖ್ಯ ಉದ್ದೇಶವಾಗಿದ್ದು, ನಂಬಿಕೆ, ಪ್ರೀತಿ, ವಿಶ್ವಾಸದಿಂದ ಸಂಘಟನೆ ಬಲ ಪಡಿಸಲಾಗುವುದು ಎಂದು ತಿಳಿಸಿದರು.

ಸಂಘದ ನಿರ್ದೇಶಕ ರಾಮಚಂದ್ರ ಗುಣಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ಚಂದ್ರಕಾಂತ್, ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಗುಂಡೂಮನೆ ಇದ್ದರು. ಸಂಘದ ಉಪಾಧ್ಯಕ್ಷರಾದ ಹುಲಿಮನೆ ತಿಮ್ಮಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೋ.ವ.ಮೋಹನಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಕಿರಣ್ ಕಂಕಾರಿ ವಂದಿಸಿದರು.

ಪಾಕ್ ಸರ್ಕಾರ ಆರ್ಥಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲ- ಇಮ್ರಾನ್

0

ಪಾಕಿಸ್ತಾನದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಏಪ್ರಿಲ್‌ನಲ್ಲಿ ಅಮೆರಿಕನ್ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಮೌಲ್ಯ 178 ರೂ. ಇತ್ತು. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಒಪ್ಪಂದದ ಹೊರತಾಗಿಯೂ ಈಗ ಮೌಲ್ಯ 224 ರೂ.ಗೆ ಕುಸಿದಿದೆ. ಇದು ಶರೀಫ್ ಕುಟುಂಬವು ಲೂಟಿ, ಅಕ್ರಮ ಹಣ ವರ್ಗಾವಣೆ ನಡೆಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಪ್ರಧಾನಿ ಶೆಹಬಾಜ್‌ ಷರೀಫ್‌ ವಿರುದ್ಧ ವಾಗ್ದಾಳಿ ನಡೆಸಿರುವ ತೆಹ್ರಿಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್, ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಪ್ರಧಾನಿ ಸಮರ್ಥರಲ್ಲ ಎಂದು ದೂರಿದ್ದಾರೆ.

ಇದಕ್ಕೆಲ್ಲ ಆಡಳಿತವನ್ನು ಬದಲಿಸಿ ಪಾಕಿಸ್ತಾನವನ್ನು ಈ ದುಸ್ಥಿತಿಗೆ ತಲುಪಿಸಿದ ಎಲ್ಲರೂ ಹೊಣೆಗಾರರು ಎಂದು ಹೇಳಿದರು.

ಕಳೆದೆರಡು ದಿನಗಳಲ್ಲಿ ಡಾಲರ್ ಎದುರಿಗೆ ಪಾಕಿಸ್ತಾನಿ ರೂಪಾಯಿ ಭಾರಿ ಕುಸಿತವನ್ನು ಕಂಡಿದೆ. ಇನ್ನೊಂದೆಡೆ ಪಾಕಿಸ್ತಾನದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ 1,500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ.

ಪಿಎಸ್ ಐ ಪ್ರಕರಣ ಮರು ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾ

0

ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ವಜಾಗೊಳಿಸಿದೆ.

ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಈಗಾಗಲೇ ಹೊರಡಿಸಿರುವ ಅಧಿಸೂಚನೆ ಅನುಸಾರವೇ ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎಲ್.ಎನ್. ಪವಿತ್ರಾ ಸೇರಿ 28 ಅಭ್ಯರ್ಥಿಗಳು ಕೆಎಟಿ ಮೆಟ್ಟಿಲೇರಿದ್ದರು.

ಅರ್ಜಿ ಕುರಿತು ಸರ್ಕಾರ ಮತ್ತು ಅಭ್ಯರ್ಥಿಗಳ ಪರ ವಕೀಲರ ವಾದ ಪ್ರತಿವಾದ ಆಲಿಸಿ, ಕಾಯ್ದಿರಿಸಿದ್ದ ಆದೇಶವನ್ನು ಮಂಗಳವಾರ ಪ್ರಕಟಿಸಿರುವ ಕೆಎಟಿಯ ನ್ಯಾಯಾಂಗ ಸದಸ್ಯ ಟಿ. ನಾರಾಯಣ ಸ್ವಾಮಿ ನೇತೃತ್ವದ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಹ್ಮಣ್ಯ, ದೊಡ್ಡ ಮಟ್ಟದಲ್ಲಿ ಹಗರಣ ನಡೆದಿದೆ. ಜೊತೆಗೆ, ನೇಮಕಾತಿ ಪ್ರಾಧಿಕಾರದ ಮೇಲೆಯೇ ಆರೋಪಗಳಿರುವ ಹಿನ್ನೆಲೆಯಲ್ಲಿ ಕಳಂಕಿತ ಮತ್ತು ಕಳಂಕಿತರಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆಗೆ ಆದೇಶಿಸಲಾಗಿದೆ ಎಂದು ವಿವರಿಸಿದ್ದರು. ಸರ್ಕಾರದ ವಾದ ಮಾನ್ಯ ಮಾಡಿರುವ ಕೆಎಟಿ ಅರ್ಜಿ ವಜಾಗೊಳಿಸಿದೆ.

ಗೋಟಬಯಗೆ ಗೋ ಬ್ಯಾಕ್ ಹೇಳಿದ ಸಿಂಗಾಪೂರ್ ಆಡಳಿತ

0

ಶ್ರೀಲಂಕಾವನ್ನು ಆರ್ಥಿಕವಾಗಿ ಮುಳುಗಿಸಿ ಜನರ ಆಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಸಿಂಗಾಪುರಕ್ಕೆ ಓಡಿ ಹೋದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಸಿಂಗಾಪುರ ಆಡಳಿತ ಬಿಗ್ ಶಾಕ್ ನೀಡಿದೆ.

ಸಿಂಗಾಪುರ ಬಿಟ್ಟು ತೆರಳುವಂತೆ ಗೊಟಬಯಗೆ ಸೂಚಿಸಿದೆ. ನೀವು ಪ್ರವಾಸಿ ವೀಸಾ ಮೇಲೆ ಬಂದಿದ್ದೀರಿ. ಅದನ್ನು ವಿಸ್ತರಿಸಲು ನಾವು ಸಿದ್ಧರಿಲ್ಲ. ನೀವಿನ್ನು ನಮ್ಮ ದೇಶದಿಂದ ಹೊರಡಬಹುದು ಎಂದು ಗೊಟಬಯಗೆ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮಧ್ಯೆ ಶ್ರೀಲಂಕಾದಲ್ಲಿ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಶಾಂತಿ ಭದ್ರತೆಯ ಕಾರಣ ನೀಡಿ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಹೇರಿದ್ದಾರೆ.

ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಡಳಿತಾರೂಢ ಪಕ್ಷ ಪೊಡುಜನ ಪೆರಮುನ ಚಿಂತನೆ ನಡೆಸಿದೆ. ಇದು ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪಕ್ಷ. ಹೀಗಾಗಿ ರನಿಲ್ ಗೆಲುವು ಖಚಿತ ಎನ್ನಲಾಗುತ್ತಿದೆ.

ಇನ್ನು ಪ್ರತೀವರ್ಷ ಶಿಕ್ಷಕರ ನೇಮಕಾತಿ-ಸಚಿವ ನಾಗೆಶ್

0

ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಂತೋಷದ ಸುದ್ದಿ ನೀಡಿದ್ದಾರೆ.

ಇನ್ನು ಮುಂದೆ ಪ್ರತಿ ವರ್ಷ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ, ಬಡ್ತಿ ಸೇರಿ ಅನೇಕ ಕಾರಣಗಳಿಂದ ಖಾಲಿಯಾಗಿರುವ ಶಿಕ್ಷಕರ ಹುದ್ದೆಗಳಿಗೆ ಇನ್ನು ಮುಂದೆ ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ವರ್ಷ ಶಿಕ್ಷಣ ಇಲಾಖೆಯಲ್ಲಿ ನಾಲ್ಕೈದು ಸಾವಿರ ಶಿಕ್ಷಕರು ನಿವೃತ್ತಿಯಾಗುತ್ತಾರೆ. ಖಾಲಿಯಾಗಿರುವ ಹುದ್ದೆಗಳನ್ನು ಆಯಾ ವರ್ಷವೇ ಭರ್ತಿಮಾಡುವ ಕುರಿತಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಅವರನ್ನು ಶಾಲೆಗೆ ನಿಯೋಜಿಸಲಾಗುತ್ತದೆ. ಈ ಪೈಕಿ ಕನಿಷ್ಟ 12 ಸಾವಿರ ಹುದ್ದೆಗಳಾದರೂ ಭರ್ತಿಯಾಗುವ ನಿರೀಕ್ಷೆ ಇದೆ. ನೇಮಕಾತಿ ಪೂರ್ಣಗೊಂಡ ಬಳಿಕ ಖಾಲಿ ಉಳಿಯುವ ಹುದ್ದೆಗಳಿಗೆ ಜನವರಿಯಲ್ಲಿ ಮತ್ತೆ ಸಿಇಟಿ ನಡೆಸಿ ಮತ್ತೊಂದು ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿಯಲ್ಲಿನ ಶಿವಮೊಗ್ಗ ಜಿಲ್ಲೆಯ ಹಳ್ಳಿಗಳ ಪಟ್ಟಿ

0

ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ.

ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ ಶಿವಮೊಗ್ಗ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ? ಎಂಬ ವಿವರ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಂದ್ರಿ, ದೊಡ್ಡ ಬಿಳಗೊಡು, ಅಲವಳ್ಳಿ, ಹುಲುಸಾಲೆ ಮಳವಳ್ಳಿ, ಹೊಲಗೊಡು, ಅಮಾಚಿ, ತೋಟದ ಕೊಪ್ಪ, ಹರಿದ್ರಾವತಿ, ಹೆಚ್.ಹುನಸವಳ್ಳಿ, ಮೆನಸೆ, ಮಸರೂರ್, ನೆಲಗಲಾಲೆ, ಕನಗೋಡು, ಗುಬ್ಬಿಗಾ, ಮೇಲಿನ ಸಂಪಲ್ಲಿ, ಚುರ್‍ಡಾ, ಬಸವಪುರ, ಮಜವನ, ನೇರಳ ಮನೆ, ಬಸವನಪುರ, ಬೆನವಳ್ಳಿ, ಅರಸಲು, ಸಿದಿಯಾಪುರ, ವೀರಭದ್ರಾಪುರ, ಕಾಚಿಗೇಬೈಲು, ಕಲಸೆಟ್ಟಿ ಕೊಪ್ಪ, ಕುಕಕಳಲೆ, ಹೊಸಕೊಪ್ಪ, ಜೆನಿ, ಬಿಲ್ಕಿ, ಅಂದಗೊಳಿ, ಹೀರೆಮೈತಿ, ಹಳೇತೋಟ, ಹಾರೋಹಿತ್ಲು, ಕಾಲ್ಕೊಪ್ಪ, ಕೋಟೆಶಿರೂರ್, ಮಳವಳ್ಳಿ, ಹೆಬ್ಬಿಗೆ, ಪುಣಾಜೆ, ನೀಲಕಂಠನ ತೋಟ, ತಮ್ಮಾದಿಕೊಪ್ಪ, ಅರಗೋಡಿ, ಮಳಲಿ, ಕೆಸರೆ, ಹೆಚ್ ಹೊನ್ನೆಕೊಪ್ಪ, ಕರಕೋಡು, ತರಿಗಾ, ಮಸಗಳ್ಳಿ, ಹರಂಬಳ್ಳಿ, ದುಮ್ಮ, ಕೊಳವಳ್ಳಿ, ಕಲಿಕಾಪುರ, ಮುಗಡ್ತಿ ಮುಳಗಡ್ಡೆ, ಕುಸಗುಂಡಿ, ಕಲಸೆ, ತಲಸೆ, ಮುತ್ತೂರ್, ಗುಬ್ಬಿಗಾ, ಕಾಲ್ಕೊಪ್ಪ, ಯಲಗಲ್ಲು, ಅದಗೋಡಿ, ಕಲ್ಲೂರು, ಕಾಗಜಿ, ಕರಿಗೆರಸು, ಬೇಲೂರು, ನಗೋಡಿ, ಹುಲಿಗಡ್ಡೆ, ಮಂಜಗಳಲೆ, ಕೆ ಕಣ್ಣೂರು, ಹೆಬ್ಬೂರ್‍ಲಿ, ಹೊಸೂರು, ಬಿದ್ದಹಳ್ಳಿ, ಬೆಹಳ್ಳಿ, ಕೆ ಕಣ್ಣೂರು, ಮಸಕಣಿ, ಶಾಕವಳ್ಳಿ, ಎಲ್. ಗುಡ್ಡೆಕೊಪ್ಪ, ವದಹೊಸಳ್ಳಿ, ಅಮೃತ, ಮಳಲಿ ಕೊಪ್ಪ, ಸವನತ್ತೂರ್, ಅರಮನೆ ಕೊಪ್ಪ, ಕಮ್ಮಾಚಿ, ಬಾಳೇಕೊಪ್ಪ, ಹೆಚ್. ಹೊನ್ನೆಕೊಪ್ಪ, ಕಟ್ಟಿನ ಹೊಳೆ, ದೊಬ್ಯಾಳು, ಮತಿಕೈ, ಬ್ರಹ್ಮನತರುವೆ, ಕೊಡುರು, ನೆಲ್ಲೂಂಡೆ, ತ್ರಿನಿವೆ, ಕೊಡಸೆ, ಆನೆಗಡ್ಡೆ, ಬ್ರಹ್ಮನವದ, ಬಸವನಬ್ಯಾನ, ಕಿನಂದೂರು, ತೊಗರೆ, ಬ್ಯಾಸೇ, ಮುಡುಗೊಪ್ಪ(ನಗರ), ಬಿಲ್ಲೋಡಿ, ಹಿಲುಕುಂಜಿ, ಕಲ್ಲುವಿಡಿ ಅಬ್ಬಿಗಳ್ಳ, ಮಳಲಿ, ಬೆಲ್ಲೂರು, ಕಿಲಂದೂರು, ಕಡಿಗ್ಗೇರೆ, ಕರಿಮನೆ, ಕಬಾಳೆ, ರ್‍ಯಾವೆ, ಅದಗೋಡಿ, ಕ್ಯಾರುಗುಂದ್ಧ, ಗಿಣಿಕಲ್ಲು, ಕೊಲವಾಡಿ, ನಿಡಗೋಡು, ಕಾವೇರಿ, ಸುಲಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೆಗದಳ್ಳಿ, ಹಲ್ತಿಗ, ಕೋರನಕೋಟೆ ಎಂಬ ಹಳ್ಳಿಗಳು ಬರುತ್ತದೆ.

ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಈ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಲಿದೆ.

ಕೇಂದ್ರ ಸರ್ಕಾರಕ್ಕೆ ಗಾಡ್ಗಿಲ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಲ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು.

ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

ದ್ರವರೂಪಿ ನ್ಯಾನೋ ಯೂರಿಯ: ರೈತರಿಗೆ ವರದಾನ-ಶಿವರಾಜ್ ಕುಮಾರ್

0

ನ್ಯಾನೋ ಯೂರಿಯಾ (ದ್ರವ) ಭಾರತ ಸರ್ಕಾರದ ರಸಗೊಬ್ಬರ ನಿಯಂತ್ರಣ ಕಾಯ್ದೆ 1985” ರಲ್ಲಿ ಸೇರ್ಪಡೆಯಾಗಿರುವ ಪ್ರಪಂಚದಲ್ಲಿಯೇ ಮೊಟ್ಟ ಮೊದಲ ನ್ಯಾನೋ ಗೊಬ್ಬರವಾಗಿದ್ದು ರೈತರ ಪಾಲಿಗೆ ವರದಾನವಾಗಿದೆ.

ಇದನ್ನು ಬಹಳ ವರ್ಷಗಳ ಸಂಶೋಧನೆಯ ನಂತರ ಗುಜರಾತ್‍ನ ಕಲೋಲ್‍ನಲ್ಲಿರುವ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ದಿಪಡಿಸಲಾಗಿದೆ. ಇದು ಶೇ.4 ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆ.ಜಿ. ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ.ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ರೈತರ ಹಣವು ಉಳಿಯುತ್ತದೆ.
ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20 ರಿಂದ 25 ಮಾತ್ರವೇ ಲಭ್ಯವಾಗುತ್ತಿದ್ದು, ಉಳಿದ ಪ್ರಮಾಣವು ವಿವಿಧ ರೀತಿಯಲ್ಲಿ ಬೆಳೆಗಳಿಗೆ ದೊರೆಯದೇ ನಷ್ಟವಾಗುತ್ತದೆ. ಆದರೆ ನ್ಯಾನೋ ಯೂರಿಯಾ ಗೊಬ್ಬರವು ಚಿಕ್ಕ ಗಾತ್ರದ ಕಣಗಳನ್ನು ಹೊಂದಿದ್ದು, (20-50nm) ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಿ ಶೇ.80 ರಷ್ಟು ಗೊಬ್ಬರವನ್ನು ಉಪಯೋಗಿಸಲ್ಪಡುತ್ತದೆ.

ಇದರಿಂದ ಸಸ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇದು ಸಸ್ಯದೊಳಗಿನ ಸಾರಜನಕ ಮತ್ತು ಇತರೆ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸಿ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಯೂರಿಯಾ ಬಳಕೆಯನ್ನು ಶೇ.50 ರಷ್ಟು ಕಡಿಮೆ ಮಾಡಿ ಬೆಳೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸುತ್ತದೆ. ಇದು ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟವನ್ನು ಕಾಪಾಡುವಲ್ಲಿ ಸಹಕರಿಸುತ್ತದೆ.

ನ್ಯಾನೋ ಯೂರಿಯಾವನ್ನು ಬಳಸುವ ವಿಧಾನ: ರೈತರು ತಮ್ಮ ಬೆಳೆಗೆ ಕೊಡುವ ಮೂಲ ಗೊಬ್ಬರ ಅಥವಾ ತಳಗೊಬ್ಬರದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಮೇಲು ಗೊಬ್ಬರವಾಗಿ 2 ರಿಂದ 4 ಮಿ.ಲೀ. ನ್ಯಾನೋ ಯೂರಿಯಾವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಿಸಬೇಕು. ಉತ್ತಮ ಫಲಿತಾಂಶಕ್ಕಾಗಿ 20 ರಿಂದ 25 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು.

ಮೊಳಕೆ ಒಡೆದ 30 ರಿಂದ 35 ದಿನಗಳ ನಂತರ ಅಥವಾ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ (ಸಕ್ರಿಯ ಬೆಳವಣಿಗೆ ಅಥವಾ ಕವಲೊಡೆಯುವ ಹಂತ) ಮೊದಲನೇ ಸಿಂಪಡಣೆ ಹಾಗೂ ಹೂ ಬರುವ ಮುಂಚಿತವಾಗಿ ಅಥವಾ 20 ರಿಂದ 25 ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಒಂದೂ ಶಾಲೆಯನ್ನ ಮುಚ್ಚುವುದಿಲ್ಲ- ನಾಗೇಶ್

0

ರಾಜ್ಯದಲ್ಲಿರುವ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ. ಆದರೆ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಪರ್ತಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿವೆ. ಅದರಲ್ಲಿ 13 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 25 ಮಕ್ಕಳಿಗಿಂತ ಕಡಿಮೆ ಮಕ್ಕಳಿದ್ದಾರೆ. ಹೀಗಾಗಿ ಶಾಲೆ ಮುಚ್ಚದೇ ಅವುಗಳನ್ನು ಮಾದರಿ ಶಾಲೆ ಮಾಡಲು ತೀರ್ಮಾನಿಸಲಾಗಿದೆ. 709 ಸಿಂಗಲ್ ವಿಲೇಜ್ ಗ್ರಾಮ ಪಂಚಾಯತಿಗಳು ಇವೆ. ಕಡಿಮೆ ಇರುವ ಮಕ್ಕಳ 2-3 ಶಾಲೆಗಳನ್ನು ಒಂದು ಮಾಡಿ ಮಾದರಿ ಶಾಲೆ ಮಾಡಲಾಗುತ್ತದೆ ಎಂದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ. ಈಗ ಒಂದೇ ಒಂದು ಮಗು ಇದ್ದರೂ ಶಾಲೆ ನಡೆಸುತ್ತಿಸುತ್ತಿದ್ದೇವೆ.

ಇದಲ್ಲದೆ, ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ಪ್ರಾರಂಭಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಈ ವರ್ಷದಲ್ಲೆ ನೈತಿಕ ಶಿಕ್ಷಣ ಜಾರಿ ಮಾಡುತ್ತೇವೆ ಎಂದು ವಿವರಿಸಿದ್ದಾರೆ.

14 ವಸ್ತುಗಳ ಮೇಲೆ ಜಿಎಸ್ ಟಿ ಇಲ್ಲ: ವಿತ್ತ ಸಚಿವೆ ಟ್ವೀಟ್ ಸಂದೇಶ

0

ಜನಾಕ್ರೋಶಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಅಕ್ಕಿ, ಗೋಧಿ ಸೇರಿದಂತೆ 14 ವಸ್ತುಗಳಿಗೆ ಜಿಎಸ್‍ಟಿ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್‍ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕಲವೊಂದು ಷರತ್‍ನ್ನು ವಿಧಿಸಲಾಗದೆ. ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್‍ಟಿ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು ಮುಂತಾದ ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದ್ದು, ಜೂನ್ 28ರಂದು ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಈ ವಿಷಯವನ್ನು ಮಂಡಿಸುವಾಗ ಎಲ್ಲಾ ರಾಜ್ಯಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.