Wednesday, March 18, 2026
Wednesday, March 18, 2026
Home Blog Page 1498

ರಾಮಚಂದ್ರಪ್ಪ ಸಮಿತಿಯ ಪಠ್ಯ ಪರಿಷ್ಕರಣೆ ಗುಣಮಟ್ಟ ಸರಿಯಿಲ್ಲ-NCERT ವರದಿ

0

ಪಠ್ಯ ಪುಸ್ತಕ ಪರಿಷ್ಕರಣೆ ಪರ-ವಿರೋಧಗಳು ನಡೆಯುತ್ತಿರುವ ಹೊತ್ತಿನಲ್ಲೇ ಈಗ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಸಿದ್ದರಾಮಯ್ಯ ಕಾಲದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ್ದ ಪರಿಷ್ಕೃತ ಪಠ್ಯ ಪುಸ್ತಕ ಗುಣಮಟ್ಟದ ಸರಿಯಿಲ್ಲ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(ಎನ್‍ಸಿಇಆರ್‌ಟಿ) ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

2005ರ ರಾಷ್ಟ್ರೀಯ ಶಿಕ್ಷಣ ನೀತಿ ಅಂಶಗಳು ಬರಗೂರು ಸಮಿತಿ ರಚನೆ ಮಾಡಿದ್ದ ಪರಿಷ್ಕರಣೆ ಪಠ್ಯದಲ್ಲಿ ಹೆಚ್ಚಾಗಿ ಇರಲಿಲ್ಲ. ಮೌಲ್ಯಗಳನ್ನು ಬೆಳೆಸಲು ಪೂರಕವಾದ ಪಠ್ಯಗಳು ಬರಗೂರು ರಾಮಚಂದ್ರಪ್ಪರ ಪರಿಷ್ಕರಣೆ ಪಠ್ಯ ಪುಸ್ತಕದಲ್ಲಿ ಇಲ್ಲ ಎಂಬ ಮಹತ್ವದ ಅಂಶವನ್ನು ತಿಳಿಸಿದೆ.

ಶೇ40 ಕಮೀಷನ್ ಪ್ರಕರಣ: ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ಕಾಂಗ್ರೆಸ್ ಟೀಕೆ

0

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ. ಆದರೂ ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ತನಿಖೆ ನಡೆಸಿರುವ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಈಶ್ವರಪ್ಪ ಕೇಸ್ ಕ್ಲೋಸ್ ಮಾಡಿದ್ದಾರೆ. ಇದೊಂದು ದುರ್ದೈವದ ಸಂಗತಿ. ಮಾಜಿ ಸಚಿವರ ವಿರುದ್ಧ ಸಂತೋಷ್ ಪಾಟೀಲ್‌ ನೇರ ಆರೋಪ ಮಾಡಿದ್ದರು. ಸಾವಿಗೆ ಕಾರಣ ಈಶ್ವರಪ್ಪ ಎಂದು ಹೇಳಿದ್ದರು. ಆದರೆ ಬಿ-ರಿಪೋರ್ಟ್ ಹಾಕಿ‌ ಕೇಸ್ ಕ್ಲೋಸ್ ಮಾಡಿದ್ದಾರೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಾ ಡಿಪಾರ್ಟ್ ಮೆಂಟ್ ಪೇಲ್ಯೂರ್ ಆಗಿದೆ ಎಂದರು.

ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಅವರ ಪತ್ನಿಗೆ ನ್ಯಾಯ ಸಿಗಲ್ಲ ಎಂದು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ಬಹುಶಃ ಈಶ್ವರಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಹೆದರಿಸಿರಬಹುದು. ಅದಕ್ಕೆ ಹೆದರಿ ಅಧಿಕಾರಿಗಳ ಮೂಲಕ ಕೇಸ್ ಮುಚ್ಚಿಸಿರಬಹುದು. ಅವರ ಕುಟುಂಬದ ದುಃಖ ಇನ್ನೂ‌ ಮರೆಯಾಗಿಲ್ಲ. ಅಷ್ಟರೊಳಗೆ ರಿಪೋರ್ಟ್ ಹಾಕಿದ್ದಾರೆ. ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಬೆಳಗಾವಿ ಮೂಲದ ಸಂತೋಷ್ ಪಾಟೀಲ್​ ಅವರು ಕಳೆದ ಏಪ್ರಿಲ್ 11ರಂದು ಉಡುಪಿಯ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಶ್ವರಪ್ಪ ವಿರುದ್ಧ 40 ಪರ್ಸೆಂಟ್​ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎಸ್​ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದರು.

ರಾಜ್ಯದ 7 ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ ಸಮಿತಿ ರಚನೆ

0

ರಾಜ್ಯದಲ್ಲಿರುವ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 7 ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಆಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರೊ.ಶಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್ ನಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಬೆಂಗಳೂರಿನ ಎಸ್.ಕೆ.ಎಸ್.ಜೆ.ಐ.ಟಿ. ಕಾಲೇಜನ್ನು ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಡಗೋಪನ್ ಅವರು ಬೆಂಗಳೂರಿನ ಐಐಐಟಿಯ ಸ್ಥಾಪಕ ನಿರ್ದೇಶಕರು. ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ ಆಗಿ ಬೆಳೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ ಒಡಂಬಡಿಕೆಗಳನ್ನು ಈ ಕಾಲೇಜುಗಳು ಮಾಡಿಕೊಳ್ಳಲಿವೆ. ಈ ಮೂಲಕ ಇವುಗಳನ್ನು ಅಂತಾರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಈ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 95 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ 21 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾರ್ಯಪಡೆಯು ಈ ಕಾಲೇಜುಗಳ ಉನ್ನತೀಕರಣಕ್ಕೆ ಎರಡು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಈ ಕಾಲೇಜುಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಶೈಕ್ಷಣಿಕ ಚಟುವಟಿಕೆಗಳನ್ನು ಸೂಚಿಸಲಿದೆ ಎಂದು ಸಚಿವರು ನುಡಿದಿದ್ದಾರೆ.

ಪರಿಣತರಾದ ಪ್ರೊ.ಎಲ್ ಎಸ್ ಗಣೇಶ್, ಪ್ರೊ.ಸಿ ರಾಜೇಂದ್ರ, ಪ್ರೊ. ರಾಮಗೋಪಾಲ್ ರಾವ್, ಪ್ರೊ. ಚಕ್ರವರ್ತಿ, ಪ್ರೊ.ಮಣೀಂದ್ರ ಅಗರವಾಲ್ ಮತ್ತು ಪ್ರೊ. ವೈ ನರಹರಿ ಅವರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಮತ್ತೆ ಏರಿಕೆ ಕಂಡ ಕೋವಿಡ್ ಸೋಂಕು

0

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 21,566 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. 45 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,38,25,185ಕ್ಕೆ ಏರಿಕೆಯಾಗಿದೆ.

ಇದುವರೆಗೆ, 5,25,870 ಮಂದಿ ಸಾವನ್ನಪ್ಪಿದ್ದಾರೆ.
4,31,50,434 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 1,48,881 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ. 4.25 ರಷ್ಟಿದೆ.

ಪಶ್ಚಿಮ ಬಂಗಾಳದಲ್ಲಿ 28,399, ಕೇರಳದಲ್ಲಿ 22,318, ತಮಿಳುನಾಡಿನಲ್ಲಿ 16,702, ಮಹಾರಾಷ್ಟ್ರದಲ್ಲಿ 14,636, ಕರ್ನಾಟಕದಲ್ಲಿ 7,866 ಸಕ್ರಿಯ ಪ್ರಕರಣಗಳಿವೆ.

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆ ಮತ್ತು ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಬುಧವಾರ 32,363 ಪರೀಕ್ಷೆಗಳನ್ನು ನಡೆಸಲಾಗಿದೆ. 1,478 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 4.56ರಷ್ಟಿದೆ. 27 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 1,251 ಮಂದಿ ಕೊರೋನಾ ಪೀಡಿತರಾಗಿದ್ದಾರೆ.

ದೇಶದಾದ್ಯಂತ ಒಟ್ಟು 200.92 ಕೋಟಿ ಡೋಸ್ ಕೊರೋನಾ ಲಸಿಕೆ ನೀಡಲಾಗಿದೆ.

ನಿರ್ದಿಷ್ಟ ಆಹಾರೋತ್ಪನ್ನಗಳ ಜಿಎಸ್ ಟಿ ಹಿಂಪಡೆಯಿರಿ-ರಾಹುಲ್ ಆಗ್ರಹ

0

ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲೆ ಸರಕು ಹಾಗೂ ಸೇವಾ ತೆರಿಗೆ ವಿಧಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೆರಿಗೆ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಜಿಎಸ್‌ಟಿಯನ್ನು ಗೃಹಸ್ಥೀ ಸರ್ವನಾಶ್ ಟ್ಯಾಕ್ಸ್ ಎಂದು ರಾಹುಲ್ ಅವರು ವ್ಯಂಗ್ಯವಾಡಿದ್ದಾರೆ.

ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಗಬ್ಬರ್ ಪಾಕವಿಧಾನ ತೋರಿಸಲಾಗಿದೆ. ಕಡಿಮೆ ಮಾಡಿ, ಕಡಿಮೆ ತಿನ್ನಿ, ಸುಳ್ಳುಗಳ ಸರಮಾಲೆಯಿಂದ ಹಸಿವು ನೀಗಿಸಿಕೊಳ್ಳಿ ಎನ್ನಲಾಗುತ್ತಿದೆ.
ಮಿತ್ರರ ಮಾತುಗಳಿಗೆ ಕಿವಿಗೊಟ್ಟಿರುವ ಪ್ರಧಾನಿ ಈಗ ಸಾರ್ವಜನಿಕರ ಮಾತನ್ನೂ ಆಲಿಸಿ ಈ ಜಿಎಸ್‌ಟಿಯನ್ನು ಹಿಂಪಡೆಯಬೇಕಾಗಿದೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ಆಹಾರೋತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವುದಕ್ಕೆ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದಿರುವ ಪ್ರತಿಪಕ್ಷಗಳು, ಕಲಾಪಕ್ಕೆ ಅಡ್ಡಿಪಡಿಸಿವೆ. ಪರಿಣಾಮವಾಗಿ ಸೋಮವಾರದಿಂದ ಈವರೆಗೆ ಸಂಸತ್‌ನ ಉಭಯ ಸದನಗಳಲ್ಲಿ ಸುಗಮ ಕಲಾಪ ನಡೆದಿಲ್ಲ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿಫ್ಲೋರೈಡ್ ಅಂಶ ಆತಂಕ

0

ಇನ್ನು ಎರಡು ವರ್ಷದಲ್ಲಿ ದೇಶದ ಪ್ರತಿ ಮನೆಗೂ ಕೊಳಾಯಿ ಮುಖಾಂತರ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಪ್ರಗತಿಯಲ್ಲಿರುವ ನಡುವೆಯೇ ದೇಶದ 23 ರಾಜ್ಯಗಳ 370 ಜಿಲ್ಲೆಗಳ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಅಪಾಯದ ಮಟ್ಟ ಮೀರಿರುವ ವಿಚಾರ ಬಹಿರಂಗವಾಗಿದೆ.

ಬೆಂಗಳೂರು ಸೇರಿ ಕರ್ನಾಟಕದ 30 ಜಿಲ್ಲೆಗಳಲ್ಲಿ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಅಂಶವಿರುವುದು ದೃಢಪಟ್ಟಿದೆ. ಫ್ಲೋರೈಡ್ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಬಗ್ಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದುವರೆಗೆ ಫ್ಲೋರೈಡ್ ಮುಕ್ತ ನೀರು ಸೇವಿಸುವ ಭಾಗ್ಯ ಜನರಿಗೆ ಸಿಕ್ಕಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ.

ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಉದ್ದೇಶಕ್ಕಾಗಿ 2021-22 ವರ್ಷಕ್ಕೆ ಕೇಂದ್ರ ಸರ್ಕಾರ 5008 ಕೋಟಿ ರೂ. ಅನುದಾನ ಕೊಟ್ಟಿದೆ. 2022ರ ಮಾ.17ರವರೆಗೆ 1252 ಕೋಟಿ ರೂ. ಡ್ರಾ ಮಾಡಿಕೊಂಡಿದೆ. ಅದರಲ್ಲಿ 1208 ಕೋಟಿ ರೂ. ಖರ್ಚು ಮಾಡಿದೆ.

ದೇಶಾದ್ಯಂತ ಪ್ರಾದೇಶಿಕ ಮಟ್ಟದಲ್ಲಿ ವಿವಿಧ ವೈಜ್ಞಾನಿಕ ಅಧ್ಯಯನಗಳ ಮೂಲಕ ಕೇಂದ್ರ ಅಂತರ್ಜಲ ಮಂಡಳಿ ಅಂತರ್ಜಲ ಗುಣಮಟ್ಟದ ಮೇಲ್ವಿಚಾರಣೆ ವಹಿಸುತ್ತಿದೆ. ಅದರ ವರದಿ ಪ್ರಕಾರ 43 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಹೊಂದಿರುವ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಉತ್ತರ ಪ್ರದೇಶ 3ನೇ ಸ್ಥಾನದಲ್ಲಿ ರಾಜಸ್ಥಾನ ಮತ್ತು 30 ಜಿಲ್ಲೆಗಳಲ್ಲಿ ಪ್ಲೋರೈಡ್​ಯುುಕ್ತ ನೀರು ಪತ್ತೆಯಾಗುವುದರೊಂದಿಗೆ ಕರ್ನಾಟಕ 4ನೇ ಸ್ಥಾನದಲ್ಲಿ ಉಳಿದಿದೆ.

ಅಗ್ನಿಪಥ್ ಯೋಜನೆ ರಾಜ್ಯದ ಯುವಕರಿಂದ ಅರ್ಜಿ ಆಹ್ವಾನ

0

ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಯುವಜನರಿಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಆಗಿ ಕಾರ್ಯನಿರ್ವಹಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇನಾ ನೇಮಕಾತಿ ರ್ಯಾಲಿಯೂ 2022ರ ಆಗಸ್ಟ್ 10 ರಿಂದ 22 ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಗ್ನಿವೀರ್ ಗೆ 10ನೇ ತರಗತಿ ಅಥವಾ ಮೆಟ್ರಿಕ್ ಒಟ್ಟು 45% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.33 ಅಂಕಗಳನ್ನು ಪಡೆದಿರಬೇಕು. ಅಗ್ನಿವೀರ್ ಗೆ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟು ಶೇ. 50 ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕಗಳನ್ನು ಪಡೆದಿರಬೇಕು. ಅಥವಾ 10+2 ಅಥವಾ NIOS ಯಾವುದೇ ಮಾನ್ಯತೆ ಪಡೆದ ರಾಜ್ಯ ಶಿಕ್ಷಣ ಮಂಡಳಿ ಅಥವಾ ಕೇಂದ್ರ ಶಿಕ್ಷಣ ಮಂಡಳಿಯಿಂದ ಮಧ್ಯಂತರ ಪರೀಕ್ಷೆ ಪಾಸ್ ಮತ್ತು NSQF ಮಟ್ಟ ,4 ಅದಕ್ಕಿಂತ ಹೆಚ್ಚಿನ ಅಗತ್ಯವಿರುವ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಐಟಿಐ ಕೋರ್ಸ್ ಹೊಂದಿರಬೇಕು.

ಅಗ್ನಿವೀರ್ ಗೆ 10+2 ಅಥವಾ ಈ ವಿಭಾಗದಲ್ಲಿ ಒಟ್ಟು ಶೇ. 60 ಅಂಕಗಳೊಂದಿಗೆ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50 ನೊಂದಿಗೆ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 12ನೇ ತರಗತಿಯಲ್ಲಿ ಇಂಗ್ಲಿಷ್ ಮತ್ತು ಗಣಿತ ಅಥವಾ ಖಾತೆಗಳು ಅಥವಾ ಪುಸ್ತಕ ಕೀಪಿಂಗ್‌ನಲ್ಲಿ ಶೇ. 50 ಗಳಿಸುವುದು ಕಡ್ಡಾಯವಾಗಿದೆ. ಅಗ್ನಿವೀರ್ ಟ್ರೇಡ್ಸ್‌ಮೆನ್ 10ನೇ ಪಾಸ್‌ಗೆ 10ನೇ ತರಗತಿ ಸರಳ ಪಾಸ್, ಒಟ್ಟಾರೆ ಶೇಕಡಾವಾರು ನಿಬಂಧನೆಗಳಿಲ್ಲ, ಆದರೆ ಪ್ರತಿ ವಿಷಯದಲ್ಲಿ ಶೇ.33 ಅಂಕಗಳನ್ನು ಪಡೆದಿರಬೇಕು. ಅಗ್ನಿವೀರ್ ಟ್ರೇಡ್ಸ್‌ಮೆನ್ 8ನೇ ಪಾಸ್‌ಗೆ 8ನೇ ತರಗತಿ ಸರಳ ಪಾಸ್, ಒಟ್ಟಾರೆ ಶೇಕಡಾವಾರು ನಿಬಂಧನೆಗಳಿಲ್ಲ, ಆದರೆ ಪ್ರತಿ ವಿಷಯದಲ್ಲಿ ಶೇ.33 ಅಂಕಗಳನ್ನು ಪಡೆದಿರಬೇಕು ಹಾಗೂ 17.5 ರಿಂದ 21 ವರ್ಷ ವಯೋಮಿತಿಯೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು.

2022-23ನೇ ಸಾಲಿನ ವಯಸ್ಸಿನ ಮಿತಿಯನ್ನು 21 ವರ್ಷದಿಂದ 23 ವರ್ಷಗಳವರೆಗೆ ಸಡಿಲಿಸಲಾಗಿದೆ. ದಾಖಲಾತಿ, ಸೇವೆ, ಸಾಮಾನ್ಯ ಕೇಡರ್‌ಗೆ ದಾಖಲಾತಿಗಾಗಿ, ಗೌರವಗಳು ಮತ್ತು ಪ್ರಶಸ್ತಿಗಳು, ಪಾವತಿ ಮತ್ತು ಭತ್ಯೆಗಳು, ಸೇವಾನಿಧಿ ಪ್ಯಾಕೇಜುಗಳು, ಜೀವ ವಿಮಾ ಕವರ್, ಅಂಗವೈಕಲ್ಯಕ್ಕೆ ಪರಿಹಾರ, ಮರಣ ಪರಿಹಾರ, ನಾಲ್ಕು ವರ್ಷಗಳ ಸೇವೆಯಲ್ಲಿ ನಿರ್ಗಮಿಸುವ ಸಿಬ್ಬಂದಿಗೆ ಸಿಗುವ ಪ್ರಯೋಜನಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಸೇನೆಯ ವೆಬ್‌ಸೈಟ್: www.joinindianarmy.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ಮಾಹಿತಿ ನೀಡಿದೆ.

ಮಿಸ್ ಇಂಡಿಯಾ ವಿಜೇತೆ ಸಿನಿ ಶೆಟ್ಟಿ ದೇವಾಲಯ ಭೇಟಿ

0

ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಮಂಗಳವಾರ ರಾತ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಕಾಪು ಶ್ರೀ ಮಾರಿಯಮ್ಮ ದೇವಿಯ ಭಕ್ತೆಯಾಗಿರುವ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ನಂತರ ಮೊದಲ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ಸಿನಿ ಶೆಟ್ಟಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ದೇವಸ್ಥಾನದ ವತಿಯಿಂದ ಅರ್ಚಕ ಶ್ರೀಧರ ತಂತ್ರಿ ಅವರ ಮೂಲಕವಾಗಿ ಪ್ರಸಾದ ನೀಡಿ ಗೌರವಿಸಲಾಯಿತು.

ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ ಅವರು, ನಾನು ಮಾರಿಯಮ್ಮ ದೇವಿಯ ಭಕ್ತಿಯಾಗಿದ್ದು, ನಾನು ಚಿಕ್ಕವಯಸ್ಸಿನಿಂದಲೂ ನನ್ನ ತಂದೆ ತಾಯಿಯೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಈಗ ಮಿಸ್ ಇಂಡಿಯಾ ಆಗಿ ಬರುತ್ತಿರುವುದಕ್ಕೆ ಮಾರಿಯಮ್ಮ ದೇವಿಯ ಅನುಗ್ರಹವೇ ಮುಖ್ಯ ಕಾರಣ. ಮುಂದೆ ಅಮ್ಮನ ಇದೇ ರೀತಿಯಲ್ಲಿ ಜಗದಗಲಕ್ಕೆ ಹರಡಿರುವ ಮಾರಿಯಮ್ಮ ದೇವಿಯ ಭಕ್ತರೆಲ್ಲರೂ ಶಿಲಾ ಸೇವೆ ನೀಡುವ ಮುಖಾಂತರ ಮಾರಿಗುಡಿಯ ಜೀರ್ಣೋದ್ಧಾರದಲ್ಲಿ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕಾಪುಶ್ರೀ ಹೊಸ ಮಾರಿ ಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಪೋಲೀಸರು ಡಿಎಲ್ ಅಮಾನತುಗೊಳಿಸುವಂತಿಲ್ಲ- ಕೊಲ್ಕತಾ ಹೈಕೋರ್ಟ್

0

ಪೊಲೀಸರು ಚಾಲನಾ ಪರವಾನಗಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಅಮಾನತುಗೊಳಿಸಲು ಶಿಫಾರಸು ಮಾಡಬಹುದು.

ಆದರೆ, ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಸ್ವಂತವಾಗಿ ಪರವಾನಗಿಗಳನ್ನ ಅಮಾನತುಗೊಳಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ಮೇ 19ರಂದು ಲೇಕ್ ಗಾರ್ಡನ್ಸ್-ಸದರ್ನ್ ಅವೆನ್ಯೂ ಕ್ರಾಸಿಂಗ್‌ನಲ್ಲಿ ಗಂಟೆಗೆ 61.1 ಕಿ.ಮೀ/ಗಂ ವೇಗದಲ್ಲಿ ವಾಹನ ಚಲಾಯಿಸಿದ ಆರೋಪದ ಮೇಲೆ ಹೊಸ ಅಲಿಪೋರ್ ನಿವಾಸಿಯ ಡ್ರೈವಿಂಗ್‌ ಲೈಸನ್ಸ್‌ ಅಮಾನತುಗೊಳಿಸಲಾಗಿತ್ತು.

ಸಧ್ಯ ಅಮಾನತುಗೊಂಡ ಪರವಾನಗಿಯನ್ನ ಹಿಂದಿರುಗಿಸುವಂತೆ ಸಹಾಯಕ ಪೊಲೀಸ್ ಆಯುಕ್ತರಿಗೆ ಸೂಚಿಸಿದ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವ್ರು ತಮ್ಮ ಏಳು ಪುಟಗಳ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ನಿಯಮಗಳು ಪೊಲೀಸ್ ಅಧಿಕಾರಿಯ ಪಾತ್ರವನ್ನ ‘ಚಾಲನಾ ಪರವಾನಗಿಯನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನ ಅನರ್ಹತೆ ಅಥವಾ ಹಿಂತೆಗೆದುಕೊಳ್ಳಲು ಪರವಾನಗಿ ಪ್ರಾಧಿಕಾರಕ್ಕೆ ಕಳುಹಿಸಲು ಮಾತ್ರ ಸೀಮಿತಗೊಳಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ.

1988 ರ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳು ಪರವಾನಗಿ ಪ್ರಾಧಿಕಾರ (ಈ ಸಂದರ್ಭದಲ್ಲಿ ರಾಜ್ಯ ಸಾರಿಗೆ ಇಲಾಖೆ) ಮಾತ್ರ ಪರವಾನಗಿ ಹೊಂದಿರುವವರಿಗೆ ವಿಚಾರಣೆ ನೀಡಿದ ನಂತರ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ವಿಶ್ವದ ಪ್ರಬಲ ಸುಗಮ ಪಟ್ಟಿಯಲ್ಲಿ ಭಾರತದ ಪಾಸ್ ಪೋರ್ಟ್ ಗೆ 87 ನೇ ಸ್ಥಾನ

0

ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಪಾಸ್‌ಪೋರ್ಟ್‌ಗಳು ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋರ್ಟ್‌ಗಳಾಗಿವೆ ಎಂದು ಬ್ರಿಟನ್ ಮೂಲದ ಹೆನ್ಲೆ ಆಯಂಡ್ ಪಾರ್ಟ್ನಸ್‌ನ ಪಾಸ್‌ಪೋರ್ಟ್ ಸೂಚ್ಯಂಕ ವರದಿ ಮಾಡಿದೆ.

ಭಾರತದ ಪಾಸ್‌ಪೋರ್ಟ್ 87ನೇ ಸ್ಥಾನ ಪಡೆದಿದೆ.
ರಷ್ಯಾದ ಪಾಸ್‌ಪೋರ್ಟ್‌ನಿಂದ 119 ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದಾಗಿದ್ದು 50ನೇ ಸ್ಥಾನ , ಚೀನಾದ ಪಾಸ್‌ಪೋರ್ಟ್‌ನಿಂದ 80 ದೇಶಗಳಿಗೆ ಸುಲಭ ಪ್ರಯಾಣ ಸಾಧ್ಯವಿದ್ದು 69ನೇ ಸ್ಥಾನ , ಭಾರತ 87ನೇ ಸ್ಥಾನ , ಕೇವಲ 27 ದೇಶಗಳಿಗೆ ಸುಲಭ ಪ್ರಯಾಣ ಸಾಧ್ಯವಾಗಿಸುವ ಅಫ್ಘಾನ್‌ನ ಪಾಸ್‌ಪೋರ್ಟ್ ಅಂತಿಮ ಸ್ಥಾನದಲ್ಲಿದೆ.

ಕೊರೋನ ಸಾಂಕ್ರಾಮಿಕಕ್ಕೂ ಮೊದಲಿನ ಅವಧಿಯಲ್ಲಿ ಯುರೋಪಿಯನ್ ಯೂನಿಯನ್‌ನ ಪಾಸ್‌ಪೋರ್ಟ್‌ಗಳು ಅಗ್ರಸ್ಥಾನದಲ್ಲಿದ್ದರೆ ಇದೀಗ ಪೂರ್ವಏಶ್ಯಾದ ದೇಶಗಳು ಈ ಸ್ಥಾನಕ್ಕೆ ಜಿಗಿದಿವೆ.

187 ದೇಶಗಳಿಗೆ ಪ್ರಯಾಣ ಸುಗಮವಾಗಿಸುವ ಬ್ರಿಟನ್‌ನ ಪಾಸ್‌ಪೋರ್ಟ್ 6ನೇ ಸ್ಥಾನ, 186 ದೇಶಗಳಿಗೆ ಪ್ರಯಾಣ ಸುಗಮವಾಗಿಸುವ ಅಮೆರಿಕದ ಪಾಸ್‌ಪೋರ್ಟ್ 7ನೇ ಸ್ಥಾನ ಪಡೆದಿದೆ.

ಜಪಾನ್‌ನ ಪಾಸ್‌ಪೋರ್ಟ್ 193 ದೇಶಗಳಿಗೆ ತೊಂದರೆ- ಮಕ್ತ ಪ್ರವೇಶದ ಅವಕಾಶವನ್ನು ಒದಗಿಸುತ್ತದೆ. ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ದೇಶಗಳ ಪಾಸ್‌ಪೋರ್ಟ್ ಬಳಸಿ 192 ದೇಶಗಳಿಗೆ ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಸಬಹುದು.

ಕೊರೋನ ಸಾಂಕ್ರಾಮಿಕದ ಹೊಡೆತದಿಂದ ನಮ್ಮ ಪ್ರಯಾಣ ಸ್ವಾತಂತ್ರ್ಯಗಳ ಚೇತರಿಕೆ ಮತ್ತು ಪುನಃಸ್ಥಾಪನೆಗೆ ಮತ್ತು ಸರಿಪಡಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೆನ್ಲೆ ಆಯಂಡ್ ಪಾರ್ಟ್ನಸ್‌ನ ಅಧ್ಯಕ್ಷ ಕ್ರಿಶ್ಚಿಯನ್ ಕಯಿಲಿನ್ ಹೇಳಿದ್ದಾರೆ. 2017ರವರೆಗೂ ವಿಶ್ವದ ಅಗ್ರ 10 ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಏಶ್ಯಾದ ದೇಶಗಳು ಕೊರೋನೋತ್ತರ ಅವಧಿಯಲ್ಲಿ ಗಮನಾರ್ಹ ಸುಧಾರಣೆ ದಾಖಲಿಸಿವೆ.

ಯುರೋಪ್‌ನ ಪ್ರಾಬಲ್ಯ ಕ್ರಮೇಣ ಕ್ಷೀಣಿಸುತ್ತಿದೆ. ಅತೀ ಹೆಚ್ಚಿನ ವೀಸಾ ಮುಕ್ತ ಪ್ರವೇಶಾವಕಾಶ ಅಥವಾ ವೀಸಾ- ಆನ್ ಅರೈವಲ್ ವ್ಯವಸ್ಥೆ ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ಪ್ರಬಲ ಪಾಸ್‌ಪೋರ್ಟ್ ಎಂದು ಪರಿಗಣಿಸಲಾಗಿದೆ.