Wednesday, March 18, 2026
Wednesday, March 18, 2026
Home Blog Page 1495

ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಹಿಂತಿರುಗಿಸಿ! ಸರ್ಕಾರದ ವಾರ್ನಿಂಗ್

0

ನಾಲ್ಕು ಚಕ್ರಗಳ ವೈಯಕ್ತಿಕ ವಾಹನ ಹೊಂದಿದ್ದರೂ ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದರೆ, ಅಂತವರು ದಂಡ ಕಟ್ಟಬೇಕಾಗುತ್ತದೆ.

ಹೌದು, ಇಂಥವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ 12,584 ಪಡಿತರ ಚೀಟಿದಾರರಿಗೆ ದಂಡ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಲಾಗಿದೆ.

ಸರ್ಕಾರವು ಈ ಪಡಿತರ ಚೀಟಿ ಹಿಂದೊಪ್ಪಿಸಲು ಅನೇಕ ಅವಕಾಶ ನೀಡಿದ್ದರೂ ನಿರ್ಲಕ್ಷಿಸಿದ ಅನರ್ಹರ ಮಾಹಿತಿ ಸಂಗ್ರಹಿಸಿ ಅವರಿಂದ ಈ ತನಕ ಪಡೆದ ಆಹಾರ ಸಾಮಗ್ರಿಗೆ ದಂಡ ವಸೂಲಿ ಮಾಡಲಿದೆ.

4 ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದರೆ, ಅಂಥವರು ದಂಡ ರಹಿತವಾಗಿ 2019ರ ಸೆ.3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ವಾಪಸ್‌ ಕೊಟ್ಟು, ರದ್ದು ಮಾಡಿಸುವಂತೆ ಸರ್ಕಾರ ಸೂಚನೆ ನೀಡಿತ್ತು.ನಂತರ ಅವಧಿಯನ್ನು ಅ.15ರ ತನಕ ವಿಸ್ತರಿಸಿತು. ಹೀಗೆ ಒಟ್ಟು ಹಲವು ಬಾರಿ ಸರೆಂಡರ್‌ಗೆ ಅವಕಾಶ ನೀಡಲಾಗಿತ್ತು. ಆದರೂ ರದ್ದು ಮಾಡದೇ ಸೌಲಭ್ಯ ಪಡೆಯುತ್ತಿರುವ ಅನರ್ಹ ಪಡಿತರ ಚೀಟಿದಾರರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.

ವಿಶ್ವಸಂಸ್ಥೆ ಎನ್ ಜಿ ಓ ಸಮಿತಿಯ ಕರಡು ನಿರ್ಣಯದ ವಿರುದ್ಧ ಭಾರತ ಮತ ಚಲಾವಣೆ

0

ವಿಶ್ವಸಂಸ್ಥೆಯ (ಯುಎನ್) ಎನ್‌ಜಿಒ ಸಮಿತಿಯಲ್ಲಿ ವರ್ಷಗಳಿಂದ ನಿರ್ಬಂಧಿಸಿರುವ ಆರು ಮಾನವ ಹಕ್ಕುಗಳ ಗುಂಪುಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ವಿಶೇಷ ಸಮಾಲೋಚನಾ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿ, ಅಮೆರಿಕ ಮಂಡಿಸಿದ ಕರಡು ನಿರ್ಣಯದ ವಿರುದ್ಧ ಭಾರತ ಸೇರಿದಂತೆ ಏಳು ರಾಷ್ಟ್ರಗಳು ಮತ ಚಲಾಯಿಸಿವೆ.

ಯುಎನ್ ವೆಬ್‌ಸೈಟ್‌ ವರದಿ ಪ್ರಕಾರ, ಅಮೆರಿಕ ಪ್ರತಿನಿಧಿ ಪ್ರಸ್ತುತ ಪಡಿಸಿದ ಕೌನ್ಸಿಲ್‌ನೊಂದಿಗೆ ಸಮಾಲೋಚನಾ ಸ್ಥಾನಮಾನ ಪಡೆಯುವ ಸರ್ಕಾರೇತರ ಸಂಸ್ಥೆಗಳ ಪಟ್ಟಿಯ ಕರಡು ನಿರ್ಣಯ ‘ಸಣ್ಣ ಕೋಲಾಹಲ’ ಉಂಟು ಮಾಡಿತು.
ಒಟ್ಟು 36 ದೇಶಗಳ ಪ್ರಾಯೋಜಕತ್ವದ ಕರಡು ನಿರ್ಣಯವು ಸಮಿತಿ ಪ್ರಸ್ತಾಪಿಸಿದ ಪಟ್ಟಿಗೆ ಆರು ಹೆಚ್ಚುವರಿ ಸರ್ಕಾರೇತರ ಸಂಸ್ಥೆಗಳನ್ನು ಶಿಫಾರಸು ಮಾಡಿದೆ.

ವಿಶ್ವಸಂಸ್ಥೆ ಪ್ರಕಾರ, ವಿಕಿಪೀಡಿಯಾ ನಡೆಸುವ ಪ್ರತಿಷ್ಠಾನ ಸೇರಿದಂತೆ ಇತರೆ ಆರು ಸರ್ಕಾರೇತರ ಸಂಸ್ಥೆಗಳನ್ನು ಅಮೆರಿಕ ಪ್ರಸ್ತಾಪಿಸಿದ ಕರಡು ಪಟ್ಟಿಗೆ ಸೇರಿಸಲಾಯಿತು. 54 ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ, ಸರ್ಕಾರೇತರ ಸಂಸ್ಥೆಗಳ ಸಮಿತಿಯು ವಿಶೇಷ ಸಲಹಾ ಸ್ಥಾನಮಾನಕ್ಕಾಗಿ 203 ಗುಂಪುಗಳನ್ನು ಶಿಫಾರಸು ಮಾಡಿದೆ.

ಚೀನಾ, ಭಾರತ, ಕಜಕಿಸ್ತಾನ್, ನಿಕರಾಗುವಾ, ನೈಜೀರಿಯಾ, ರಷ್ಯಾ ಮತ್ತು ಜಿಂಬಾಬ್ವೆ ವಿರುದ್ಧವಾಗಿ ಮತ ಚಲಾಯಿಸಿದರೆ, 23 ದೇಶಗಳು ಪರವಾಗಿ ಮತ ಹಾಕಿದವು. ಅಲ್ಲದೆ 18 ರಾಷ್ಟ್ರಗಳ ಸದಸ್ಯರು ಗೈರು ಹಾಜರಾಗಿದ್ದರು.

ಬೆಂಗಳೂರು- ಮಂಗಳೂರು ರೈಲ್ವೇ ಸಂಚಾರ ಬೇಡಿಕೆಗೆ ರೈಲ್ವೆ ಮಂಡಳಿ ಸ್ಪಂದನೆ

0

ಮಂಗಳೂರು ಸೆಂಟ್ರಲ್‌ -ಕೆಎಸ್‌ಆರ್‌ ಬೆಂಗಳೂರು ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್‌ 31ರ ತನಕ ವಾರದಲ್ಲಿ 3 ದಿನ ಹೆಚ್ಚುವರಿಯಾಗಿ ವಿಶೇಷ ರೈಲು ಸಂಚರಿಸಲಿದೆ.

ನಂ. 06547 ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿದ್ದು ಮಂಗಳೂರು ಸೆಂಟ್ರಲ್‌ಗೆ ಬೆಳಗ್ಗೆ 9.05ಕ್ಕೆ ತಲುಪಲಿದೆ. ಮಂಗಳವಾರ, ಗುರುವಾರ ಹಾಗೂ ರವಿವಾರ ಸಂಚರಿಸಲಿದೆ. ಕೆಂಗೇರಿಗೆ 8.49ಕ್ಕೆ, ರಾಮನಗರ 9.13ಕ್ಕೆ, ಚನ್ನರಾಯಪಟ್ಟಣ 9.24ಕ್ಕೆ, ಮಂಡ್ಯ 9.54ಕ್ಕೆ, ಮೈಸೂರು 11ಕ್ಕೆ, ಕೃಷ್ಣರಾಜನಗರ 11.49ಕ್ಕೆ, ಹೊಳೆನರಸಿಪುರ 12.43ಕ್ಕೆ, ಹಾಸನ 1.35ಕ್ಕೆ, ಸಕಲೇಶಪುರ ಬೆಳಗ್ಗೆ 3ಕ್ಕೆ, ಸುಬ್ರಹ್ಮಣ್ಯ ರೋಡ್‌ 6.10ಕ್ಕೆ, ಕಬಕಪುತ್ತೂರು 7ಕ್ಕೆ, ಬಂಟ್ವಾಳ 7.30ಕ್ಕೆ, ಮಂಗಳೂರು ಜಂಕ್ಷನ್‌ 8.13ಕ್ಕೆ, ಮಂಗಳೂರು ಸೆಂಟ್ರಲ್‌ 9.05ಕ್ಕೆ ಆಗಮಿಸಲಿದೆ.

ಬೆಂಗಳೂರಿಗೆ ತೆರಳುವ ಮಾರ್ಗದ ಘಾಟಿ ಪ್ರದೇಶಗಳಲ್ಲಿ ಭೂಕುಸಿತದ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆಗೆ ರೈಲ್ವೇ ಮಂಡಳಿ ತ್ವರಿತವಾಗಿ ಸ್ಪಂದಿಸಿದೆ.

ನಂ. 06548 ಮಂಗಳೂರಿನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಸಂಚರಿಸಲಿದೆ. ಸಂಜೆ 6.35ಕ್ಕೆ ಹೊರಡುವ ರೈಲು ಮಂಗಳೂರು ಜಂಕ್ಷನ್‌ಗೆ 6.48ಕ್ಕೆ, ಬಂಟ್ವಾಳ 7.20ಕ್ಕೆ, ಕಬಕಪುತ್ತೂರು 7.48, ಸುಬ್ರಹ್ಮಣ್ಯ ರೋಡ್‌ ರಾತ್ರಿ 8.40ಕ್ಕೆ, ಸಕಲೇಶಪುರ 11.20ಕ್ಕೆ, ಹಾಸನ 12.25ಕ್ಕೆ, ಹೊಳೆನರಸಿಪುರ 1.13ಕ್ಕೆ, ಕೃಷ್ಣರಾಜನಗರ 2.08ಕ್ಕೆ, ಮೈಸೂರು ಬೆಳಗ್ಗೆ 3ಕ್ಕೆ, ಮಂಡ್ಯ 3.54ಕ್ಕೆ, ಚನ್ನರಾಯಪಟ್ಟಣ 4.30ಕ್ಕೆ, ರಾಮನಗರ 4.42ಕ್ಕೆ, ಕೆಂಗೇರಿ 5.11ಕ್ಕೆ, ಬೆಂಗಳೂರು ಕೆಎಸ್‌ಆರ್‌ ನಿಲ್ದಾಣಕ್ಕೆ ಬೆಳಗ್ಗೆ 6.15ಕ್ಕೆ ತಲುಪಲಿದೆ.
ರೈಲು 2 ಟೈಯರ್‌ಎಸಿ 2, ಎಸಿ 3 ಟೈಯರ್‌ 2, 9 ಸೆಕೆಂಡ್‌ ಕ್ಲಾಸ್‌ ಸ್ಲೀಪರ್ , ಎರಡು ಜನರಲ್‌ ಸೆಕೆಂಡ್‌ ಕ್ಲಾಸ್‌ ಬೋಗಿ ಸೇರಿದಂತೆ ಒಟ್ಟು 14 ಬೋಗಿಗಳನ್ನು ಒಳಗೊಂಡಿದೆ.

ವಿಶ್ವ ಅಥ್ಲೆಟಿಕ್ಸ್ ಕೂಟ: ನೀರಜ್ ಚೋಪ್ರಾ ರಜತ ಪದಕ

0

ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್‌ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಅವರು ರಜತ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ನೀರಜ್ ಗೆ ಪ್ರಬಲ ಸ್ಪರ್ಧೆ ನೀಡಿದ ಅಯಂಡರ್ಸ ಪೀಟರ್ 3 ಬಾರಿ 90 ಮೀಟರ್ ಗಿಂತ ಹೆಚ್ಚು ಎಸೆದು ಬಂಗಾರದ ಪದಕ ಪಡೆದು ಕೊಂಡಿದ್ದಾರೆ.

ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಪದಕ ಗೆದ್ದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. ಅಂಜು ಬಾಬಿ ಜಾರ್ಜ್ ಮೊದಲನೇಯವರು.

ಇಂದಿನ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು ಮೊದಲ ಎಸೆತ ಫೌಲ್, ಎರಡನೇ ಎಸೆತ 82.39, ಮೂರನೇ ಎಸೆತವನ್ನು 86.37, ನಾಲ್ಕನೇ ಎಸೆತ 88.13 ಹಾಗೂ ಐದನೇ ಎಸೆತ ಫೌಲ್ ಆಯಿತು.

ಶುಕ್ರವಾರ ನಡೆದಿದ್ದ ಮೊದಲ ಸುತ್ತಿನ ನೀರಜ್‌ ಮೊದಲ ಎಸೆತದಲ್ಲೇ 88.39 ಮೀ. ದೂರವನ್ನು ದಾಖಲಿಸಿ ಪದಕ ಸುತ್ತಿಗೆ ನೆಗೆದದ್ದು ವಿಶೇಷವಾಗಿತ್ತು. ಇವರೊಂದಿಗೆ ಭಾರತದ ಮತ್ತೋರ್ವ ಜಾವೆಲಿನ್‌ ಎಸೆತಗಾರ ರೋಹಿತ್‌ ಯಾದವ್‌ ಕೂಡ ಫೈನಲ್‌ ಪ್ರವೇಶಿಸಿದ್ದರು.

ರೋಹಿತ್ ಯಾದವ್ ಅವರು ಫೈನಲ್ ಪಂದ್ಯಗಳು 78.72 ಮೀ ಶ್ರೇಷ್ಠ ಎಸೆತದ ಮೂಲಕ ಕೂಟದಲ್ಲಿ 10ನೇ ಸ್ಥಾನಿಯಾದರು.

ರಾಜ್ಯದಲ್ಲಿ ಜುಲೈ 28 ರಿಂದ ಪುಣ್ಯಕೋಟಿ ಯೋಜನೆಗೆ ಚಾಲನೆ

0

ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಹಾಗೂ ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆಗೆ ಜುಲೈ 28 ಚಾಲನೆ ನೀಡಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಭು ಚವ್ಹಾಣ್, ಸಿಎಂ ಬಸವರಾಜ ಬೊಮ್ಮಾಯಿ ಅವರು ಜುಲೈ 28 ಕ್ಕೆ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ. ಈ ಪೋರ್ಟಲ್ ನಲ್ಲಿ ನೋಂದಣಿಯಾಗಿರುವ ಸರ್ಕಾರಿ ಅಥವಾ ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ವಾರ್ಷಿಕ ತಲಾ11 ಸಾವಿರ ರೂ. ದೇಣಿಗೆ ನೀಡುವ ಮೂಲಕ ಸಾರ್ವಜನಿಕರು ದತ್ತು ಪಡೆಯಬಹುದು.

ಜಾನುವಾರುಗಳಿಗಾಗಿ ಆಹಾರ ಯೋಜನೆಯಡಿ ಒಂದು ದಿನಕ್ಕೆ ಒಂದು ಗೋವಿಗೆ 70 ರೂ. ಗಳಂತೆ ಪಾವತಿಸಿ ತಮಗೆ ಇಷ್ಟವಾದ ಗೋವಿಗೆ ಆಹಾರಕ್ಕೆ ದೇಣಿಗೆ ನೀಡಬಹುದು.

ಗೋಶಾಲೆಗಳಿಗೆ ದತ್ತು ನೀಡಲು ಇಷ್ಟೇ ಹಣ ನೀಡಬೇಕು ಎಂದೇನೂ ಇಲ್ಲ. ಕನಿಷ್ಟ 10 ರೂ.ಗಳಿಂದಲೂ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.

ಜುಲೈ25 ರಂದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ

0

ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರ ಅಧಿಕಾರ ಸ್ವೀಕಾರ ಸಮಾರಂಭ ಜುಲೈ 25 ಸೋಮವಾರದಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ.

ಗೃಹ ಸಚಿವಾಲಯದ ಪ್ರಕಾರ, ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜುಲೈ 25 ರಂದು ನಡೆಯುವ ಸಮಾರಂಭದಲ್ಲಿ ಮಂತ್ರಿಗಳ ಪರಿಷತ್ತಿನ ಸದಸ್ಯರು, ರಾಜ್ಯ ಗವರ್ನರ್‌ಗಳು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳ ಮುಖ್ಯಸ್ಥರು, ಸಂಸತ್ತಿನ ಸದಸ್ಯರು ಹಾಗೂ ಭಾರತ ಸರ್ಕಾರದ ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಕೂಡ ಸೆಂಟ್ರಲ್ ಹಾಲ್‌ನಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರು ವಿಧ್ಯುಕ್ತ ಮೆರವಣಿಗೆಯಲ್ಲಿ ಸೆಂಟ್ರಲ್ ಹಾಲ್‌ಗೆ ಆಗಮಿಸಲಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಬಳಿಕ ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಸಮಾರಂಭದ ಮುಕ್ತಾಯದ ಬಳಿಕ, ರಾಷ್ಟ್ರಪತಿಗಳು ರಾಷ್ಟ್ರಪತಿ ಭವನಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮುಂಚೂಣಿಯಲ್ಲಿ ಇಂಟರ್ಸರ್ವಿಸ್ ಗಾರ್ಡ್ ಆಫ್ ಆನರ್ ನೀಡಲಾಗುತ್ತದೆ. ನಿರ್ಗಮಿಸುವ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.

ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸಂಪುಟದ ತೀವ್ರ ವಿರೋಧ-ಮಾಧುಸ್ವಾಮಿ

0

ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ತೀವ್ರವಾಗಿ ವಿರೋಧಿಸಿದೆ.

ಸಚಿವ ಸಂಪುಟ ಸಭೆ ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.
ಸಿ. ಮಾಧುಸ್ವಾಮಿ, ವರದಿ ಅನುಷ್ಠಾನಕ್ಕೆ ಮೊದಲಿನಿಂದಲೂ ರಾಜ್ಯ ವಿರೋಧ ವ್ಯಕ್ತಪಡಿಸುತ್ತಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 6 ರಂದು ಐದನೇ ಅಧಿಸೂಚನೆಯನ್ನು ಹೊರಡಿಸಿತು, ಅದು ಈ ಹಿಂದೆ ಹೊರಡಿಸಿದ ಇತರ ನಾಲ್ಕು ಪ್ರಕಟಣೆಗಳಿಗೆ ಹೋಲುತ್ತದೆ. ವರದಿ ಜಾರಿಯಾದರೆ 1,553 ಗ್ರಾಮಗಳ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೂಕ್ತ ಸಮೀಕ್ಷೆ ನಡೆಸದೆ ವರದಿ ಸಿದ್ಧಪಡಿಸಲಾಗಿದ್ದು, ರಾಜ್ಯದಿಂದ ವ್ಯಕ್ತವಾದ 1,000 ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಪರಿಗಣಿಸಲಾಗಿಲ್ಲ ಎಂದು ಅವರು ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದೆ. ಈ ವಿಚಾರದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಹೇಳಿದ್ದೇವು. ನಮ್ಮ ನಿಲುವನ್ನು ಈಗಾಗಲೇ ಎರಡು ಬಾರಿ ಹೇಳಿದ್ದೇವೆ. ಸಂಪುಟದ ಅನುಮೋದನೆಯಿಂದ ಮೂರನೇ ಬಾರಿಗೆ ಹೀಗೆ ಹೇಳುತ್ತಿರುವುದಾಗಿ ಅವರು ತಿಳಿಸಿದರು.

ರಾಜ್ಯ ಸರ್ಕಾರ ವರದಿ ಒಪ್ಪಿಕೊಂಡು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಗಳಿಂದ ಜನರನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಮತ್ತು ಚರ್ಚೆಯ ನಂತರ ಮನವಿಯೊಂದನ್ನು ನೀಡುತ್ತೇವೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯದ ನಿರ್ಧಾರವನ್ನು ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಿಂದ ನಿಯೋಗ ದೆಹಲಿಗೆ ಹೋಗಲಿದೆ. ಅದಕ್ಕೂ ಮೊದಲು ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಬಯಸಿದ್ದೇವೆ. ಇಲ್ಲದಿದ್ದರೆ, ಕೇಂದ್ರದಿಂದ ಅಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸುವ ಅವಕಾಶವಿದೆ ಎಂದು ಅವರು ಹೇಳಿದರು.

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ

0

ಭಾರತದಲ್ಲಿ ಚಿನ್ನದ ಬೆಲೆ ಇಂದು ಕೂಡ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂ. ಇದ್ದುದು 46,900 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,620 ರೂ. ಇದ್ದುದು 51,160 ರೂ. ಆಗಿದೆ.

ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

ಚೆನ್ನೈ- 46,960 ರೂ. ಮುಂಬೈ- 46,900 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,900 ರೂ, ಬೆಂಗಳೂರು- 46,950 ರೂ, ಹೈದರಾಬಾದ್- 46,900 ರೂ, ಕೇರಳ- 46,900 ರೂ, ಪುಣೆ- 46,930 ರೂ, ಮಂಗಳೂರು- 46,950 ರೂ, ಮೈಸೂರು- 46,950 ರೂ. ಇದೆ.

ಇದರೊಂದಿಗೆ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,230 ರೂ, ಮುಂಬೈ- 51,160 ರೂ, ದೆಹಲಿ- 51,160 ರೂ, ಕೊಲ್ಕತ್ತಾ- 51,160 ರೂ, ಬೆಂಗಳೂರು- 51,210 ರೂ, ಹೈದರಾಬಾದ್- 51,160 ರೂ, ಕೇರಳ- 51,160 ರೂ, ಪುಣೆ- 51,190 ರೂ, ಮಂಗಳೂರು- 51,210 ರೂ, ಮೈಸೂರು- 51,210 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಕೂಡ ಕೊಂಚ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಯ ದರ 55,400 ರೂ. ಇದ್ದುದು ಇಂದು 55,100 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,200 ರೂ, ಮೈಸೂರು- 61,200 ರೂ., ಮಂಗಳೂರು- 61,200 ರೂ., ಮುಂಬೈ- 55,100 ರೂ, ಚೆನ್ನೈ- 61,200 ರೂ, ದೆಹಲಿ- 55,100 ರೂ, ಹೈದರಾಬಾದ್- 61,200 ರೂ, ಕೊಲ್ಕತ್ತಾ- 55,100 ರೂ. ಆಗಿದೆ.

ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ-ರಾಮನಾಥ್ ಕೋವಿಂದ್

0

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರಾವಧಿ ಭಾನುವಾರ ಮುಕ್ತಾಯವಾಗಲಿದೆ.ನಿನ್ನೆ ಶನಿವಾರ ಸಂಸತ್‌ ಭವನದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೋವಿಂದ್‌ ಅವರು, ಸಂಸತ್ತನ್ನು ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆದಿದ್ದಾರೆ.

ದೇಶದ ಹಿತಾಸಕ್ತಿಯ ದೃಷ್ಟಿಯಿಂದಾಗಿ ಎಲ್ಲ ಪಕ್ಷಗಳು ಪಕ್ಷಪಾತ ರಾಜಕಾರಣವನ್ನು ಬಿಡಬೇಕು. ದೇಶದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆ ನಡೆಸುವಾಗ ಪ್ರತಿಯೊಬ್ಬ ಸಂಸದರು ಗಾಂಧಿ ತತ್ವವನ್ನು ಪಾಲಿಸಬೇಕು. ಶಾಂತಿಯುತವಾಗಿ ಚರ್ಚೆಗಳು ನಡೆಯಬೇಕು ಎಂದು ಅವರು ಸಂಸದರಿಗೆ ಕಿವಿ ಮಾತನ್ನು ಹೇಳಿದ್ದಾರೆ.

ಕೋವಿಂದ್‌ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಉಪಸ್ಥಿತರಿದ್ದರು.

ಪಿಯು ಕಾಲೇಜು ಕಟ್ಟಡ ಕಾಮಗಾರಿಗೆ ಅನುದಾನ ಅನುಮೋದನೆ

0

ರಾಜ್ಯದ 6,601 ಸರ್ಕಾರಿ ಶಾಲೆ ಮತ್ತು 1,500 ಪದವಿ ಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣ ಕಾಮಗಾರಿಗೆ 992.16 ಕೋಟಿ ರೂ. ಅನುದಾನಕ್ಕೆ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

2022-23 ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ 6,601 ಸರ್ಕಾರಿ ಶಾಲೆ ಹಾಗೂ 1,500 ಪದವಿ ಪೂರ್ವ ಕಾಲೇಜುಗಳ ಕೊಠಡಿ ನಿರ್ಮಾಣದ ಅವಶ್ಯಕತೆ ಇದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ 992.16 ಕೋಟಿ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ಕಾಮಗಾರಿ ಸಮಯದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಮಗಾರಿ ಪ್ರಾರಂಭಕ್ಕೂ ಮುನ್ನ, ಅನೇಕ ಹಂತದ ಫೋಟೋಗಳನ್ನು ಇಲಾಖೆಯ ಸ್ಯಾಟ್ಸ್ ತಂತ್ರಂಶದಲ್ಲಿ ಹಂತ ಹಂತವಾಗಿ ಅಪ್ ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.