Thursday, March 19, 2026
Thursday, March 19, 2026
Home Blog Page 1485

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನ ಮಹತ್ವದ ಸಭೆ

0

ಮಹತ್ವದ ರಾಜ್ಯ ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಹುಬ್ಬಳ್ಳಿಯಲ್ಲಿ ರಾಹುಲ್‌ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿತು.

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ , ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾ ರೆಡ್ಡಿ, ಸತೀಶ್‌ ಜಾರಕಿಹೊಳಿ, ಈಶ್ವರ್‌ ಖಂಡ್ರೆ, ಧುೃವನಾರಾಯಣ ಪಾಲ್ಗೊಂಡಿದ್ದ ಸಭೆಯಲ್ಲಿ ಸಾಮೂಹಿಕ ನಾಯಕತ್ವದಡಿ ಎಲ್ಲರೂ ಒಗ್ಗೂಡಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ರಾಹುಲ್‌ ಗಾಂಧಿ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮುಂದಿನ ಮುಖ್ಯಮಂತ್ರಿ ವಿಚಾರ ಯಾರೂ ಮಾತನಾಡುವುದು ಬೇಡ. ಅದು ಬಿಜೆಪಿ ಹಾಗೂ ಜೆಡಿಎಸ್‌ಗೆ ನಾವೇ ಅಸ್ತ್ರ ಕೊಟ್ಟಂತೆ ಆಗುತ್ತದೆ. ಎಲ್ಲರೂ ಹೈಕಮಾಂಡ್‌ ವಹಿಸಿದ ಜವಾಬ್ದಾರಿ ನಿರ್ವಹಿಸಬೇಕು. ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಾಕೀತು ಮಾಡಲಾಯಿತು ಎಂದು ಹೇಳಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದವರು ಮುಂದಿನ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ತಮ್ಮದೇ ಆದ ಅಭಿಪ್ರಾಯ ಮತ್ತೆ ಸಲಹೆ ನೀಡಿದರು. ರಾಹುಲ್‌ ಗಾಂಧಿ ಎಲ್ಲರ ಅಭಿಪ್ರಾಯ ಸಹನೆಯಿಂದ ಅಲಿಸಿದರು ಎಂದು ತಿಳಿದು ಬಂದಿದೆ.

ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ-ಸಚಿವ ಡಾ.ಸುಧಾಕರ್

0

ಮಂಕಿಪಾಕ್ಸ್ ಬಗ್ಗೆ ರಾಜ್ಯದ ಜನರು ಆತಂಕ ಪಡಬೇಕಿಲ್ಲ. ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ತಾಂತ್ರಿಕ ಸಲಹಾ ಸಮಿತಿ ಜೊತೆ ವಿಶೇಷ ಸಭೆಯ ಬಳಿಕ ಮಾತನಾಡಿದ ಅವರು, ‘ವಿಶ್ವ ಆರೋಗ್ಯ ಸಂಸ್ಥೆ ಜುಲೈ 22ರಂದು ಮಂಕಿಪಾಕ್ಸ್‌ಅನ್ನು ‘ತುರ್ತು ಆರೋಗ್ಯ ಪರಿಸ್ಥಿತಿʼ ಎಂದು ಘೋಷಿಸಿದೆ. ಸುಮಾರು 80 ದೇಶಗಳ 20 ಸಾವಿರ ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ 6 ಪ್ರಕರಣಗಳು ಕಂಡುಬಂದಿವೆ. ಕೇರಳದಲ್ಲಿ 4 ಮತ್ತು ದೆಹಲಿಯಲ್ಲಿ ಇಬ್ಬರು ಸೋಂಕಿತರಿದ್ದಾರೆ. ಕರ್ನಾಟಕದಲ್ಲಿ 3 ವ್ಯಕ್ತಿಗಳ ಮೇಲೆ ಸಂಶಯದ ಆಧಾರದಲ್ಲಿ ಪರೀಕ್ಷೆ ನಡೆಸಿದ್ದೇವೆ. ಈ ಪೈಕಿ ಬೆಂಗಳೂರಿನ ಇಬ್ಬರ ವರದಿ ನೆಗಟಿವ್ ಬಂದಿದೆ. ಬೆಲ್ಜಿಯಂನಿಂದ ಬಂದಿರುವ ಉತ್ತರ ಕನ್ನಡದ ವ್ಯಕ್ತಿಯ ಪರೀಕ್ಷೆ ಫಲಿತಾಂಶ ಇನ್ನಷ್ಟೇ ಬರಬೇಕಿದೆ’ ಎಂದು ಹೇಳಿದರು.

ಮಂಕಿಪಾಕ್ಸ್ ಬಗ್ಗೆ ರಾಜ್ಯದ ಜನರು ಆತಂಕಪಡಬೇಕಾದ ಅಗತ್ಯವಿಲ್ಲ. ಸೋಂಕಿತರಿಗಾಗಿ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ (ಇ.ಡಿ) ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅವರನ್ನು 21 ದಿನಗಳ ಕಾಲ ಐಸೋಲೇಟ್ ಮಾಡಬೇಕು. 21 ದಿನ ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಚರ್ಮದ ಮೇಲೆ ಆಗಿರುವ ಗಾಯ ಗುಣಮುಖ ಆಗುವವರೆಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

ಮಂಕಿಪಾಕ್ಸ್ ಆರಂಭದಲ್ಲಿ ಜ್ವರ ಹಾಗೂ ಚರ್ಮದ ಮೇಲೆ ತುರಿಕೆಗಳು ಕಂಡು ದೊಡ್ಡ ಗುಳ್ಳೆಗಳಾಗುತ್ತವೆ. ಈ ಲಕ್ಷಣ ಇದ್ದವರನ್ನು ತಪಾಸಣೆ ಮಾಡಲಾಗುವುದು. ಮುಖ್ಯಮಂತ್ರಿಗಳ ಸೂಚನೆಯಂತೆ ಏರ್ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅನುಮಾನ ಬಂದರೆ ತಪಾಸಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ವರದಿಗಳು ಹೇಳುವ ಪ್ರಕಾರ ಸೋಂಕಿತರ ಜೊತೆ ದೀರ್ಘ ಕಾಲದ ಸಂಪರ್ಕ ಹೊಂದಿರುವವರಿಗೆ ಮಾತ್ರ ಇದು ಹರಡಲು ಸಾಧ್ಯವಿದೆ. ಕೋವಿಡ್ ರೀತಿ ಹರಡುವ ಸಾಂಕ್ರಾಮಿಕ ರೋಗ ಇದಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ವಿಶೇಷವಾಗಿ ಕೇರಳ ಗಡಿ ಭಾಗದ ಜಿಲ್ಲಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಎಲ್ಲಾ ಭಾಗಗಳಲ್ಲೂ ಕಟ್ಟೆಚ್ಚರದಿಂದ ಇರಲು ಸೂಚಿಸಲಾಗಿದೆ. ಸದ್ಯ ರಾಜ್ಯದ ಜನರು ಆತಂಕಪಡುವ ಆಗತ್ಯವಿಲ್ಲ. ಮುನ್ನಚ್ಚೆರಿಕೆ ಮತ್ತು ಶುಚಿತ್ವ ಕಾಪಾಡಿಕೊಂಡರೆ ಸಾಕು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಭಾರತಕ್ಕೆ ವಲಸೆ ಬಂದಿರುವವರಿಗೆ ಪೌರತ್ವ ಕಾಯಿದೆ ತಿದ್ದುಪಡಿಗೆ ಚಿಂತನೆ

0

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಆಗಮಿಸಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಗೆ, ಹಾಲಿ ನಡೆಯುತ್ತಿರುವ ಕೊರೊನಾ ಬೂಸ್ಟರ್‌ ಡೋಸ್‌ ಅಭಿಯಾನ ಪೂರ್ಣಗೊಂಡ ನಂತರ ಚಾಲನೆ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ, ತಮ್ಮನ್ನು ಭೇಟಿ ಮಾಡಿದ ಪಶ್ಚಿಮ ಬಂಗಾಳ ವಿಧಾಸಭೆಯ ವಿಪಕ್ಷಗಳ ನಾಯಕ ಸುವೇಂದು ಅಧಿಕಾರಿ ಅವರ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾ, ಈ ವಿಚಾರ ತಿಳಿಸಿದರು.

ಹಿಜಾಬ್ ಪ್ರಕರಣ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ರಚನೆ- ಸುಪ್ರೀಂ ಕೋರ್ಟ್

0

ಹಿಜಾಬ್‌ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಪೀಠ ರಚಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಾರ್ಚ್‌ನಲ್ಲೇ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಇನ್ನೂ ಅವುಗಳು ಲಿಸ್ಟಿಂಗ್‌ ಆಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ಅರಿಕೆ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾಯಮೂರ್ತಿಯೊಬ್ಬರು ಅನಾರೋಗ್ಯಕ್ಕೀಡಾಗಿರುವ ಕಾರಣ ವಿಳಂಬವಾಗುತ್ತಿದೆ. ಆದಷ್ಟು ಬೇಗ ಹೊಸ ಪೀಠವನ್ನು ರಚಿಸುತ್ತೇವೆ ಎಂದಿದೆ.

ಇದರೊಂದಿಗೆ, ಹಿಜಾಬ್‌ ಗೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂಬ ಮನವಿಯನ್ನು ಸಿಜೆಐ ಎನ್‌.ವಿ.ರಮಣ ನೇತೃತ್ವದ ಪೀಠ ತಿರಸ್ಕರಿಸಿದೆ.

ಕಾಮನ್ ವೆಲ್ತ್ ಕ್ರೀಡಾಕೂಟ 22 ಲಾನ್ ಬೌಲ್ಸ್ ಸ್ಪರ್ಧೆ ಮಹಿಳಾ ತಂಡಕ್ಕೆ ಚಿನ್ನ

0

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಲಾನ್ ಬೌಲ್ಸ್ ಸ್ಪರ್ಧೆಯ ಫೋರ್ಸ್‌ ವಿಭಾಗದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಧಾನಿ ಮೋದಿ ಅವರು, ʻಬರ್ಮಿಂಗ್ಹ್ಯಾಮ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ಎಂದು ಬರೆದಿದ್ದಾರೆ. ಲವ್ಲಿ ಚೌಬೆ, ಪಿಂಕಿ ಸಿಂಗ್, ನಯನ್ಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರು ತಮ್ಮ ಮೊದಲ ಲಾನ್ ಬೌಲ್‌ಗಳ ಮಹಿಳಾ ಫೋರ್ಸ್ ಫೈನಲ್‌ನಲ್ಲಿ ಎಲ್ಲಾ ಪ್ರಮುಖ ಚಿನ್ನದ ಪದಕವನ್ನು ಮನೆಗೆ ತಂದಿದ್ದಕ್ಕಾಗಿ ದೇಶವು ಹೆಮ್ಮೆಪಡುತ್ತದೆ ಎಂದಿದ್ದಾರೆ.

ಲವ್ಲಿ ಚೌಬೆ (ಲೀಡ್), ಪಿಂಕಿ ಸಿಂಗ್ (ಎರಡನೇ), ನಯನ್ಮೋನಿ ಸೈಕಿಯಾ (ತೃತೀಯ) ಮತ್ತು ರೂಪಾ ರಾಣಿ ಟಿರ್ಕಿ (ಸ್ಲಿಪ್) ಅವರ ಭಾರತದ ಕ್ವಾರ್ಟೆಟ್ ಮಹಿಳೆಯರ ಬೌಂಡರಿಗಳ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸಿತು.

ವಾಣಿಜ್ಯ ಬಳಕೆ ಸಿಲಿಂಡರ್ ₹ 36 ಇಳಿಕೆ

0

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕೃತ ದರ ಸದ್ಯದಲ್ಲೇ ಜಾರಿಯಾಗಲಿದೆ.

ಕಮರ್ಷಿಯಲ್ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ‌ ಸೋಮವಾರ ರೂ. 36 ಇಳಿಕೆ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್‌ ದರ ದೆಹಲಿಯಲ್ಲಿ 1,976 ರೂ.ಗೆ ಇಳಿಕೆಯಾಗಿದೆ. ಪ್ರಸ್ತುತ 2012.50 ರೂ. ದರವಿದೆ.

ಇನ್ನು ರಾಜ್ಯಗಳಲ್ಲಿ ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ಬೆಲೆಯಲ್ಲಿ ಇಳಿಕೆಯಾಗಲಿದೆ. ಈ‌ ನಡುವೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.

ಚಹಾ ತಯಾರಿಸಿದ ಕೈ ಈಗ ಭಾರ ಎತ್ತಿಬೆಳ್ಳಿ ಪದಕ ಬಾಚಿದೆ

0

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದೆ.

ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇಂದು ದೇಶವೇ ಹೆಮ್ಮೆ ಪಡುವ ಮಟ್ಟದಲ್ಲಿ ಅವರು ಸಾಧನೆ ಮಾಡಿದ್ದಾರೆ.

ಜೀವನೋಪಾಯಕ್ಕಾಗಿ ಪಾನ್ ಬೀಡಾ, ಚಹಾ ಮಾರಿಕೊಂಡಿದ್ದ ಸಂಕೇತ್ ಇಂದು ದೇಶವೇ ಕೊಂಡಾಡುವ ಕ್ರೀಡಾಪಟುವಾಗಿದ್ದಾರೆ.

ಕಂದಾಯ ಜಾಗದಲ್ಲಿ ಮನೆ: ಅಕ್ರಮ ಸಕ್ರಮ ಶೀಘ್ರ ಜಾರಿಗೆ

0

ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲಿಯೇ ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 12 ಲಕ್ಷ ಮಂದಿ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ಇದನ್ನು ಸಕ್ರಮ ಮಾಡುವ ಕುರಿತಂತೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವಾಗುವ ಸಾಧ್ಯತೆ ಇದೆ. ತೆರವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಸಕ್ರಮಗೊಳಿಸುವ ಕೆಲಸ ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.

ಹತ್ಯೆಗೊಳಗಾದ ಮಸೂದ್ ಮತ್ತು ಫಾಜಿಲ್ ಕುಟುಂಬಸ್ಥರ ಭೇಟಿ- ಬೊಮ್ಮಾಯಿ

0

ಮುಂಬರುವ ದಿನಗಳಲ್ಲಿ ಕರಾವಳಿಯಲ್ಲಿ ಕೊಲೆಯಾಗಿರುವ ಮಸೂದ್ ಹಾಗೂ ಫಾಜಿಲ್ ಮನೆಗೂ ಭೇಟಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯತೆಯೇ ನಮ್ಮ ನಿಲುವಾಗಿದ್ದು, ಯಾರಿಗೂ ಭೇದ-ಭಾವ ಮಾಡುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ಕರಾವಳಿಯಲ್ಲಿ ಕೊಲೆಯಾಗಿರುವ ಮಸೂದ್ ಹಾಗೂ ಫಾಜಿಲ್ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆಗಳು ಕಡಿಮೆಯಾಗಿದ್ದು, ನಾವು ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವುದರಿಂದ ಎಲ್ಲರಿಗೂ ಕೂಡ ವಿಶ್ವಾಸ ಬಂದಿದೆ ಎಂದಿದ್ದಾರೆ.

ಹಿಮಾಚಲ ಪ್ರದೇಶ ಲಾಹೌಲ್- ಸ್ಪಿತಿ ಜಿಲ್ಲೆಗಳಲ್ಲಿ ಮಹಾಪೂರ

0

ಕಳೆದ 24 ಗಂಟೆಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, 150 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಲಾಹೌಲ್-ಸ್ಪಿತಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಪಡೆದ ಮಾಹಿತಿಯಂತೆ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸಲು ಆಡಳಿತ, ಪೊಲೀಸ್ ಮತ್ತು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿದೆ ಎನ್ನಲಾಗುತ್ತಿದೆ.

ಮುಂದಿನ 48 ಗಂಟೆಗಳಲ್ಲಿ ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್‌ನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಸಂಭವಿಸಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.