Thursday, March 19, 2026
Thursday, March 19, 2026
Home Blog Page 1477

ವಿಪಕ್ಷಗಳ ಸದಸ್ಯರಿಗೆ ಮಾತಾಡಲು ಆಡಳಿತ ಪಕ್ಷ ಅವಕಾಶ ನೀಡಬೇಕು- ವೆಂಕಯ್ಯ ನಾಯ್ಡು

0

ನಿರ್ಗಮಿತ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸರ್ಕಾರಕ್ಕೆ ಮತ್ತು ವಿರೋಧ ಪಕ್ಷಕ್ಕೆ ಒಂದು ಸಲಹೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡುವ ತೀರ್ಪುಗಳನ್ನು ಸ್ವೀಕರಿಸುವ ಸಹಿಷ್ಣುತೆ ಬೇಕು. ಸಂಸತ್ತಿನಲ್ಲಿ ಆಡಳಿತ ಪಕ್ಷದಲ್ಲಿರುವ ಸದಸ್ಯರು ವಿರೋಧ ಪಕ್ಷಗಳ ಸದಸ್ಯರು ಮಾತನಾಡಲು, ತಮ್ಮ ಅಭಿಪ್ರಾಯ ಕೊಡಲು ಅವಕಾಶ ನೀಡಬೇಕು ಎಂದಿದ್ದಾರೆ.

ಸಂಸತ್ ಭವನದಲ್ಲಿ ಎಂ. ವೆಂಕಯ್ಯ ನಾಯ್ಡು ಅವರಿಗೆ ವಿದಾಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನುದೇಶಿಸಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ತಾಳ್ಮೆ ಬೇಕು, ಸರ್ಕಾರವನ್ನು, ಆಡಳಿತವನ್ನು, ದೇಶವನ್ನು ಆಳುವವರನ್ನು ಬದಲಾಯಿಸಬೇಕೆಂದು ಬಯಸುವವರು ಜನರ ಬಳಿಗೆ ಹೋಗಿ ಅದನ್ನು ಸಾಧಿಸಿಕೊಳ್ಳಬೇಕು.ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ನೀವು ರೋಗಿಗಳಾಗಿಬಿಡುತ್ತೀರಿ ಎಂದರು.

ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ ಅವರು, ನೀವು ಸದನದಲ್ಲಿ ಬಹುಮತ ಹೊಂದಿದ್ದರೂ ಕೂಡ ವಿರೋಧ ಪಕ್ಷಗಳಿಗೆ ಗೌರವ ಕೊಡಬೇಕು. ವಿರೋಧ ಪಕ್ಷಗಳು ಕೂಡ ಮಾತನಾಡಲಿ, ನಂತರ ಸರ್ಕಾರಕ್ಕೆ ಮಾತನಾಡಲು ಅವಕಾಶ ಸುಲಭವಾಗಿ ಸಿಗುತ್ತದೆ, ಏಕೆಂದರೆ ಅದಕ್ಕೆ ಬಹುಮತವಿದೆ, ಇದು ನನ್ನ ಸಲಹೆ ಎಂದರು.

ತಾವು ರೈತ ಕುಟುಂಬ ಹಿನ್ನೆಲೆಯಿಂದ ಬಂದವನಾಗಿದ್ದು ಶಾಲೆಗೆ ಹೋಗಲು ಕಿಲೋ ಮೀಟರ್ ಗಟ್ಟಲೆ ನಡೆಯಬೇಕಾಗಿತ್ತು ಎಂದು ತಮ್ಮ ಬಾಲ್ಯದ ಜೀವನವನ್ನು ಕೂಡ ನೆನಪು ಮಾಡಿಕೊಂಡರು.
ಇನ್ನು ತಮಗೆ ಜನರಿಂದ ಸಿಗುವ ಅಭಿಪ್ರಾಯ, ಸಲಹೆಗಳನ್ನು ಪ್ರಧಾನ ಮಂತ್ರಿಗಳಿಗೆ ವರ್ಗಾಯಿಸುವುದಾಗಿ ಹೇಳಿದ ವೆಂಕಯ್ಯ ನಾಯ್ಡು, ಶಿಷ್ಟಾಚಾರಗಳನ್ನು ಮುರಿಯಲು ಸಾಧ್ಯವಿಲ್ಲ. ಪ್ರಧಾನಿಯವರಿಗೆ ವಿಷಯ ತಲುಪಿಸುವುದು ತಮ್ಮ ಕೆಲಸವಷ್ಟೆ ಎಂದರು.

ಅಂತೂ ತುಂಬಿದೆ ಜಲಾಶಯ ಸಾಕು ನಿಲ್ಲೋ ಮಳೆರಾಯ

0

ರಾಜ್ಯದೆಲ್ಲೆಡೆ ಮಳೆ ಅಬ್ಬರ ಜೋರಾಗಿದೆ. ಹಳ್ಳ, ಕೆರೆ, ಜಲಪಾತಗಳೆಲ್ಲಾ ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ ಬಾಗಿಣ ಸಹ ಅರ್ಪಿಸಲಾಗುತ್ತಿದೆ. ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ.

ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದೆ. ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಮತ್ತು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದೆ. ಅನೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರಿದ್ದು ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿವೆ.

ಕಾಂಗ್ರೆಸ್ ಕಾರ್ಯಕರ್ತರಿಂದ300 ಅಡಿ ಉದ್ದದ ರಾಷ್ಟ್ರಧ್ವಜ ಮೆರವಣಿಗೆ

0

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಸರ್ಕಲ್ 75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ನಡಿಗೆ ಜಾಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 300ಅಡಿ ಉದ್ದದ ತ್ರಿರ್ವಣ ಧ್ವಜಾ ಹೊತ್ತು ಭವ್ಯ ಮೆರವಣಿಗೆ ನಡೆಸಿದರು.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು,ಮಾಜಿ ಮಹಾಪೌರರಾದ ಶ್ರೀಮತಿ ಜಿ.ಪದ್ಮಾವತಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಶ್ರೀಮತಿ ಮಂಜುಳ ವಿಜಯಕುಮಾರ್, ಮೋಹನ್ ಕುಮಾರ್, ವಿಜಯಕುಮಾರ್ ಮತ್ತು ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಧಕೃಷ್ಣ,ಶ್ರೀ ರಾಮಮಂದಿರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ರವರು,ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಅಪಲ್ ನಾಗರಾಜ್,ಯುವ ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್,ಸಂದೀಪ್,ಸುನೀಲ್ ರವರು ಸ್ವಾತಂತ್ಯ್ರ ನಡಿಗೆ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಾವಿರಾರು ಕಾರ್ಯಕರ್ತರು 300ಅಡಿ ಉದ್ದದ ತ್ರಿರ್ವಣ ಧ್ವಜಾ ಹೊತ್ತು ಭವ್ಯ ಮೆರವಣಿಗೆಯಲ್ಲಿ ಹಾವನೂರು ಸರ್ಕಲ್,ಬಸವೇಶ್ವನಗರ,ಶಾರದಾ ಕಾಲೋನಿ,ಕಾಮಾಕ್ಷಿಪಾಳ್ಯ ಪ್ರಮುಖ ರಸ್ತೆಗಳಲ್ಲಿ ನಡಿಗೆ ಜಾಥ ಮಾಡಿದರು.

ಚಿಕ್ಕಮಗಳೂರಿನಲ್ಲಿ ಗೋಹತ್ಯೆ ತಡೆಯಲು ಯೋಗಿ ಮಾದರಿ ಕ್ರಮಕ್ಕೆ ಪ್ರಯತ್ನ

0

ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇದೀಗ ನಗರದಲ್ಲಿ ಉತ್ತರ ಪ್ರದೇಶದ ಯೋಗಿ ಮಾದರಿ ಅಳವಡಿಸಿಕೊಂಡು ಗೋ ಹತ್ಯೆ ತಡೆಯುವ ಪ್ರಯತ್ನ ಮಾಡುತ್ತಿದೆ.

ಚಿಕ್ಕಮಗಳೂರು ನಗರಸಭೆಯಿಂದ ನಿರಂತರವಾಗಿ ಗೋಮಾಂಸ ಅಡ್ಡೆಗಳ ಮೇಲೆ‌ ದಾಳಿಯಾಗುತ್ತಿದ್ದು, ಹಲವೆಡೆ ಗೋಮಾಂಸ ವಶಕ್ಕೆ ಪಡೆದಿದ್ದರು. ಇದೀಗ ಅವರ ಮನೆಯ ದಾಖಲೆಗಳನ್ನು ರದ್ದು ಮಾಡಿ, ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಸಿದ್ದತೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಗೋ ಹತ್ಯೆ, ಗೋ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ‌ ನಗರಸಭೆ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯ ವಿದ್ಯುತ್, ನೀರಿನ ಸಂಪರ್ಕ ಬಂದ್ ಮಾಡಿದ್ದಾರೆ.

ಹರ್ ಘರ್ ತಿರಂಗ ಅಭಿಯಾನ ದೇಶಾಭಿಮಾನದಿಂದ ಮಾಡಿ- ಬೊಮ್ಮಾಯಿ

0

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್‌ ಘರ್‌ ತಿರಂಗಾ’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಸಹಿತ ವಿವಿಧ ಅಧಿಕಾರಿ ಗಳಿಗೆ ಸೂಚಿಸಿದರು.

ಈ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡದೆ ದೇಶದ ಮೇಲಿನ ಅಭಿಮಾನ, ಪ್ರೀತಿಯಿಂದ ಆಯೋಜಿಸಬೇಕು. ಅರ್ಥಪೂರ್ಣವಾಗಿ ಆಚರಿಸ ಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸ ಬೇಕು ಎಂದು ಸೋಮವಾರ ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಅವರು, ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮನೆ ಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಧ್ವಜ ವಿತರಣೆ ನಡೆಯುತ್ತಿದೆ. ಆ. 13ರಂದೇ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕು ಎಂದು ಸೂಚಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನ ಬೆಳಗ್ಗೆ ಧ್ವಜಾ ರೋಹಣ ಮಾಡಿ, ಸಂಜೆ ಇಳಿಸಬೇಕು. ಮನೆಗಳಲ್ಲಿ ಆ. 13ರಂದು ಧ್ವಜಾರೋಹಣ ಮಾಡಿ, 15ರ ವರೆಗೆ ಇರಿಸಬಹುದಾಗಿದೆ ಎಂದು ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ನಿಗದಿತ ಗುರಿ ಸಾಧಿಸಲು ಮಾರ್ಗದರ್ಶನ ನೀಡುವಂತೆ ಸೂಚಿಸಿದರು.

ಇದರೊಂದಿಗೆ ಕ್ವಿಟ್‌ ಇಂಡಿಯಾ ಚಳವಳಿಯ ಸ್ಮರಣಾರ್ಥ ಆ. 9ರಿಂದ 14ರ ನಡುವೆ ಆಯಾ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಸಮ್ಮಾನಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇದರಲ್ಲಿ ಭಾಗಿಯಾಗುವಂತೆ ಸೂಚಿಸಿದರು.

ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆಅರ್ಜಿ ಆಹ್ವಾನ

0

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ ವಸತಿ ರಹಿತ ಹಾಗೂ ಖಾಲಿ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳಿಗೆ 2021-22 ನೇ ಸಾಲಿನ ವಾಜಪೇಯಿ ನಗರ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಹಾಗೂ ಡಾ.ಅಂಬೇಡ್ಕರ್ ನಗರ ವಸತಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ವಂತ ಮನೆಯನ್ನು ನಿರ್ಮಿಸಲು ಪ್ರಕಟಿಸಿದೆ. ಅರ್ಜಿ ಆಹ್ವಾನಿಸಲಾಗಿದೆ.

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ವಾಸವಿದ್ದು, ಖಾಲಿ ನಿವೇಶನ ಅಥವಾ ಹಳೆಯ ಕಚ್ಚಾ ಮನೆಯನ್ನು ಹೊಂದಿರುವಂತಹವರು ಆದಾಯ ಮತ್ತು ಜಾತಿ ದೃಢೀಕರಣ ಪತ್ರ, ಆಸ್ತಿಯ ಮಾಲೀಕತ್ವದ ಪ್ರಸಕ್ತ ಸಾಲಿನ ಈ ಆಸ್ತಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಭಾವಚಿತ್ರ ಹಾಗೂ ಇನ್ನಿತರೆ ಅಗತ್ಯ ದಾಖಲೆ ಪತ್ರಗಳೊಂದಿಗೆ ಅರ್ಹ ಫಲಾನುಭವಿಗಳು ಆಗಸ್ಟ್, 25 ರೊಳಗೆ ನಗರಸಭೆಗೆ ಅರ್ಜಿ ಸಲ್ಲಿಸಲು ಕೋರಿದೆ.

ಹೆಚ್ಚಿನ ವಿವರಗಳಿಗೆ ಕಚೇರಿಯ ಕೆಲಸದ ವೇಳೆಯಲ್ಲಿ ವಸತಿ ಶಾಖೆಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ವಿಜಯ ಅವರು ತಿಳಿಸಿದ್ದಾರೆ.

ಹೇಳಿದಂತೆ ಚಿನ್ನ ಗೆದ್ದ ಸಿಂಧು

0

ಬರ್ಮಿಂಗ್‌ಹ್ಯಾಮ್‌ನ ಎನ್‌ಇಸಿ ಅರೆನಾದಲ್ಲಿ ಸೋಮವಾರ ಭಾರತದ ಬ್ಯಾಡ್ಮಿಂಟನ್‌ ಕ್ರೀಡೆಯ ಶಕ್ತಿ ಅನಾವರಣಗೊಂಡಿತು. ಮೂರು ಚಿನ್ನದ ಪದಕ ಬಗಲಿಗೆ ಹಾಕಿಕೊಂಡ ಭಾರತದ ಸ್ಪರ್ಧಿಗಳು ಇತಿಹಾಸ ರಚಿಸಿದರು.

ಪಿ.ವಿ.ಸಿಂಧು ಮತ್ತು ಲಕ್ಷ್ಯಸೇನ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರೆ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹಾಗೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಅವರಿಗೆ ಕಾಮನ್‌ವೆಲ್ತ್‌ ಕೂಟದ ಚಿನ್ನ ಮರೀಚಿಕೆಯಾಗಿಯೇ ಉಳಿದಿತ್ತು. ಅವರ ಕಾಯುವಿಕೆಗೆ ಈ ಬಾರಿ ತೆರೆಬಿದ್ದಿದೆ. ಸಿಂಧು 2018 ಮತ್ತು 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ 21-15, 21-13 ರಲ್ಲಿ ಕೆನಡಾದ ಮಿಷೆಲ್ ಲಿ ಅವರನ್ನು ಪರಾಭವಗೊಳಿಸಿದರು. ಲಕ್ಷ್ಯ ಸೇನ್‌ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 19-21, 21-9, 21-16 ರಲ್ಲಿ ಮಲೇಷ್ಯಾದ ಎಂಗ್ ತ್ಸೆ ಯೊಂಗ್‌ ಅವರನ್ನು ಮಣಿಸಿದರು.

‍ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ರಿಂದ ಚಿರಾಗ್‌ 21-15, 21-13 ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌- ಸೀನ್‌ ವೆಂಡಿ ಅವರ ಸವಾಲನ್ನು ಮೆಟ್ಟಿನಿಂತರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ಸಿಂಧು ಅವರು 13ನೇ ರ‍್ಯಾಂಕ್‌ನ ಆಟಗಾರ್ತಿ ಎದುರು ಎರಡೂ ಗೇಮ್‌ಗಳಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದರು. ಮಿಷೆಲ್‌ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಕೊನೆಯದಾಗಿ ಸಿಂಧು ಅವರನ್ನು ಮಣಿಸಿದ್ದರು.

ಮೊದಲ ಗೇಮ್‌ನಲ್ಲಿ ಮಿಷೆಲ್‌ ನೆಟ್ ಬಳಿಯೇ ಆಡಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರೆ, ಸಿಂಧು ಆಕ್ರಮಣಕಾರಿ ಆಟದ ಮೊರೆಹೋದರು. 7-5 ರಲ್ಲಿ ಮೇಲುಗೈ ಪಡೆದ ಅವರು ಮೊದಲ ವಿರಾಮದ ಅವಧಿಯ ಬಳಿಕ ಸತತ ಮೂರು ಪಾಯಿಂಟ್‌ ಗಿಟ್ಟಿಸಿ ಮುನ್ನಡೆಯನ್ನು 14-8ಕ್ಕೆ ಹೆಚ್ಚಿಸಿಕೊಂಡರು.

ಸತತ ಎರಡು ಬ್ಯಾಕ್‌ಹ್ಯಾಂಡ್‌ ವಿನ್ನರ್‌ಗಳ ಮೂಲಕ ಮಿಷೆಲ್‌ ಹಿನ್ನಡೆಯನ್ನು 14-17ಕ್ಕೆ ತಗ್ಗಿಸಿದರು. ನಂತರ ಎದುರಾಳಿಗೆ ಒಂದು ಪಾಯಿಂಟ್‌ ಬಿಟ್ಟುಕೊಟ್ಟ ಸಿಂಧು ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ 4-2ರ ಮೇಲುಗೈ ಪಡೆದ ಸಿಂಧು, ವಿರಾಮದ ವೇಳೆಗೆ 11-6ರ ಮುನ್ನಡೆಯಲ್ಲಿದ್ದರು. ಆ ಬಳಿಕವೂ ಶಿಸ್ತಿನ ಆಟ ಮುಂದುವರಿಸಿ ಕ್ರಾಸ್‌ ಕೋರ್ಟ್‌ ವಿನ್ನರ್‌ ಮೂಲಕ ಗೇಮ್‌ ಹಾಗೂ ಪಂದ್ಯವನ್ನು ಗೆದ್ದುಕೊಂಡು ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಟ್ಟರು.

20 ವರ್ಷದ ಲಕ್ಷ್ಯ ಅವರು ಮೊದಲ ಗೇಮ್‌ನಲ್ಲಿ ಸೋತರೂ, ಅಮೋಘ ರೀತಿಯಲ್ಲಿ ತಿರುಗೇಟು ನೀಡಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ತಜ್ಞರ ಪ್ರಕಾರ ಕೋವಿಡ್ ನಾಲ್ಕನೇ ಅಲೆ ಸಾಧ್ಯವಿಲ್ಲ

0

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ನಾಲ್ಕನೇ ಅಲೆ ಬರಬಹುದೆಂಬ ಭೀತಿ ಕಾಡುತ್ತಿದ್ದು, ಇದರ ಜೊತೆಗೆ ಮಂಕಿ ಪಾಕ್ಸ್ ಆತಂಕವೂ ಎದುರಾಗಿದೆ.

ಇದರ ಮಧ್ಯೆ ತಜ್ಞರು ಕೊರೊನಾ ನಾಲ್ಕನೇ ಅಲೆ ಆತಂಕದ ಕುರಿತು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದರೂ ಸಹ ಹೊಸ ತಳಿ ಪತ್ತೆಯಾಗಿಲ್ಲ.

ಆದ್ದರಿಂದ ನಾಲ್ಕನೇ ಅಲೆ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಈಗ ವರದಿಯಾಗುತ್ತಿರುವ ಪ್ರಕರಣಗಳು ಓಮಿಕ್ರಾನ್ ಹಾಗೂ ಅದರ ಉಪ ತಳಿಗಳ ಮೂಲಕ ಬಂದಿದೆ. ಇದು ಗಂಟಲು ಬೇನೆ ಹಾಗೂ ಸಾಮಾನ್ಯ ಶೀತ ಜ್ವರದ ರೀತಿಯಲ್ಲಿ ಇರುತ್ತದೆ. ಆಸ್ಪತ್ರೆ ದಾಖಲಾಗುವ ಸಂಭವವೂ ಕಡಿಮೆ ಎಂದಿದ್ದಾರೆ.

ವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಕೊರೋನಾ ಸೋಂಕಿನಿಂದ ಮೃತಪಟ್ಟಿದೆ. ಹೀಗಿದ್ದರೂ ಸಹ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಸುಖೀ ಸಮಾಜ ನಿರ್ಮಾಣದ ಕನಸು ಹೊತ್ತಿರುವ ಪರಿಹಾರ್ ಸಂಸ್ಥೆ

0

ಪರಿಹಾರ್ ಸಂಸ್ಥೆಯು ಸಮಾಜದ ಕಾಯಿದೆಯಡಿಯಲ್ಲಿ ಲಾಭರಹಿತ ಸಂಸ್ಥೆಯಾಗಿದೆ. ವಿಧವೆಯರ ಅಭಿವೃದ್ಧಿಗಾಗಿ ಹಾಗೂ ಸಮಾಜದಿಂದ ದುಃಖವನ್ನು ತೊಡೆದುಹಾಕಲು ಶ್ರಮಿಸುತ್ತಿದೆ. ಈ ಸಂಸ್ಥೆಯು ವಿಧವೆಯರಲ್ಲದೆ, ವಿಚ್ಛೇದಿತ ಮಹಿಳೆಯರಿಗೂ ತನ್ನ ಸೇವೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ.

ಕಾಮನ್‌ವೆಲ್ತ್ ವೃತ್ತಿಪರ ವಿಶ್ವವಿದ್ಯಾಲಯದಿಂದ ಗುರುತಿಸಲ್ಪಟ್ಟಿರುವ ಡಾ.ಎನ್.ಬಿ. ಜೈಪ್ರಕಾಶ್ ಇವರು ಸಾಮಾಜಿಕ ಉದ್ಯಮಿ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದು, ವಿಧವೆಯರ ಅಭಿವೃದ್ಧಿಗಾಗಿ ಸಹಾಯ ಮಾಡುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಪರಿಹಾರ್ ಸಂಸ್ಥೆಯು ವಿಧವೆ ಮತ್ತು ವಿಚ್ಛೇದಿತ ಮಹಿಳೆಯರು, ಹಿರಿಯ ನಾಗರಿಕರ ಸಾಮಾಜಿಕ ಸ್ಥಾನಮಾನವನ್ನು ಮರುಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
ಪರಿಹಾರ್ ಸಂಸ್ಥೆಯು ಸಹಿಷ್ಣುತೆ, ವಾಸ್ತವಿಕತೆ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಕೆಲಸ ಮಾಡುತ್ತಿದೆ.

ವಿಧವೆ ಮತ್ತು ವಿಚ್ಛೇದಿತ ಮಹಿಳೆಯರ ಆರ್ಥಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ, ವೈದ್ಯಕೀಯ ಮತ್ತು ದೈಹಿಕ ಸಮಸ್ಯೆಗಳನ್ನು ಪರಿಹರಿಸಲು ಬಹು ಆಯಾಮದ ವಿಧಾನವನ್ನು ಒದಗಿಸುವುದು.
ಹಿರಿಯ ನಾಗರಿಕರಿಗೆ ಸಾಮಾಜಿಕ ಬೆಂಬಲ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಧ್ಯೇಯವಾಗಿದೆ.

ವೆಸ್ಟ್ ಇಂಡಿಸ್ ವಿರುದ್ಧ ಕ್ರಿಕೆಟ್ ಟಿ 20 ಸರಣಿ ಗೆದ್ದ ಭಾರತ

0

ಫ್ಲೋರಿಡಾದ ಲಾಡರ್ ಹಿಲ್ ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 88 ರನ್ ಗಳ ಅಂತರದಿಂದ ಗೆದ್ದ ಭಾರತ, 4-1 ಅಂತರದಿಂದ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.

ವೆಸ್ಟ್ ಇಂಡೀಸ್ ಪರ ಒಡಿಯನ್ ಸ್ಮಿತ್ 3 ವಿಕೆಟ್ ಪಡೆದರೆ, ಜಾಸನ್ ಹೊಲ್ಡರ್, ಡಾಮಿನಿಕ್ ಡ್ರಾಕ್ಸ್ ,ಹೇಡನ್ ವಾಲ್ಸ್ ತಲಾ ಒಂದೊಂದು ವಿಕೆಟ್ ಪಡೆದರು. ಭಾರತ ತಂಡ ನೀಡಿದ 188 ರನ್ ಗಳ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ 15.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 100 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಪರ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್ 11 ರನ್ ಗಳಿಗೆ ಪೂರನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಎರಡು ಸಿಕ್ಸರ್ , 8 ಬೌಂಡರಿಗಳೊಂದಿಗೆ 64 ರನ್ ಬಾರಿಸಿದರು. ಇವರಿಗೆ ಜೊತೆಯಾದ ದೀಪಕ್ ಹೂಡಾ 38, ಸಂಜು ಸ್ಯಾಮ್ಸನ್ 15, ನಾಯಕ ಹಾರ್ದಿಕ್ ಪಾಂಡ್ಯ 28, ದಿನೇಶ್ ಕಾರ್ತಿಕ್ 12 ಹಾಗೂ ಅಕ್ಸರ್ ಪಟೇಲ್ 9 ರನ್ ಗಳಿಸಿದರು.

ಶಿಮ್ರಾನ್ ಹೆಟ್ಮಿಯರ್ ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲಲಿಲ್ಲ. ಹೆಟ್ಮಿಯರ್ 56 ರನ್ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ 5 ಪಂದ್ಯಗಳಲ್ಲಿ ಸರಣಿಯಲ್ಲಿ 4-1 ರಲ್ಲಿ ಗೆದ್ದು ಬೀಗುವುದರೊಂದಿಗೆ ಸರಣಿ ವಶಕ್ಕೆ ಪಡೆದುಕೊಂಡಿತು. ಅಕ್ಸರ್ ಪಟೇಲ್ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಅರ್ಷದೀಪ್ ಸಿಂಗ್ ಪ್ಲೇಯರ್ ಆಫ್ ದಿ ಸಿರೀಸ್ ಖ್ಯಾತಿಗೆ ಭಾಜನರಾದರು.