Thursday, March 26, 2026
Thursday, March 26, 2026
Home Blog Page 1383

ಒಂದೇ ಕಾರಾಗೃಹದ ಪ್ರತ್ಯೇಕ ಸೆಲ್ ಗಳಲ್ಲಿ ಬಂದಿಗಳಾಗಿಸ್ವಾಮಿಗಳು ಮತ್ತು ಮಠದ ಮಾಜಿ ಆಡಳಿತಾಧಿಕಾರಿ

0

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹಾಗೂ ಅವರ ವಿರುದ್ದ ಪಿತೂರಿ ಮಾಡಿದ ಆರೋಪ ಹೊತ್ತಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಇಬ್ಬರಿಗೂ ನ್ಯಾಯಾಲಯ ಕ್ರಮವಾಗಿ ನ.21 ಮತ್ತು ನ.28ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆ ಎಸ್.ಕೆ.ಬಸವರಾಜನ್ ಅವರನ್ನು ದಾವಣಗೆರೆ ಜೈಲಿಗೆ ಕಳುಹಿಸಿ ಎಂದು ಅವರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಲಿಲ್ಲ. ಹೀಗಾಗಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿ ಕೊಡಲಾಯಿತು.
ಈ ನಡುವೆ, ಕಾರಾಗೃಹದ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸ್ವಾಮೀಜಿ-ಬಸವರಾಜನ್ ಪೈಕಿ ಯಾರಾದರೊಬ್ಬರನ್ನೂ ಬೇರೆ ಜೈಲಿಗೆ ಕಳುಹಿಸುವಂತೆ ಜೈಲು ಅಧಿಕಾರಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.

ಕೊನೆಗೆ ಬಸವರಾಜನ್ -ಸ್ವಾಮೀಜಿಯನ್ನು ಪ್ರತ್ಯೇಕ ಬ್ಲಾಕ್‌ಗಳ ಸೆಲ್‌ಗಳಿಗೆ ಕಳಿಸಲಾಗಿದೆ.
ನ್ಯಾಯಾಂಗ ಬಂಧನ ಅವಧಿ ಮುಗಿದ ಕಾರಣ ಮುರುಘಾ ಶರಣರು, ವಾರ್ಡನ್ ರಶ್ಮಿ ಹಾಗೂ ಪರಮಶಿವಯ್ಯ ಅವರನ್ನು ಕೋರ್ಟ್ ಎದುರು ಹಾಜರುಪಡಿಸಿದಾಗ ನ್ಯಾಯಾಧೀಶರು ಮೂವರಿಗೂ ನ.21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದರು. ಪಿತೂರಿ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಬಸವರಾಜೇಂದ್ರ ಅವರಿಗೆ ಕೋರ್ಟ್ ನ. 28ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು.

ಕೋರ್ಟ್‌ಗೆ ಹಾಜರುಪಡಿಸಿದ್ದ ವೇಳೆ ಶ್ರೀ ಶಿವಮೂರ್ತಿ ಮುರುಘಾ ಶರಣರು, ಮಾಧ್ಯಮಗಳು ತಮ್ಮ ತೇಜೋವಧೆ ಮಾಡುತ್ತಿವೆ ಎಂದು ನ್ಯಾಯಾಧೀಶರ ಎದುರು ಹೇಳಿಕೊಂಡರು. ಆಗ ನ್ಯಾಯಾಧೀಶರು ನಿಮ್ಮ ವಕೀಲರ ಜತೆ ಚರ್ಚಿಸಿ ಎಂದು ತಿಳಿಸಿದರು ಎಂದು ಸ್ವಾಮೀಜಿ ಪರ ವಕೀಲ ಉಮೇಶ್ ಮಾಹಿತಿ ನೀಡಿದರು.

ಜಾರ್ಜ್‌ಶೀಟ್‌ನಲ್ಲಿ 164ರ ಹೇಳಿಕೆ ಕೊಟ್ಟಿಲ್ಲ. ಅದನ್ನು ಕೊಡಿಸುವಂತೆ ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ ಎಂದು ಉಮೇಶ್ ಹೇಳಿದರು.

2ನೇ ಪ್ರಕರಣದಲ್ಲಿ ಸ್ವಾಮೀಜಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕ ಎಚ್.ಆರ್.ಜಗದೀಶ್ ಆಕ್ಷೇಪ ಸಲ್ಲಿಸಿದರು. ಸಂತ್ರಸ್ಥೆಯರ ಆಕ್ಷೇಪಕ್ಕೂ ಅವಕಾಶ ನೀಡಿದ ನ್ಯಾಯಾಲಯ, ಜಾಮೀನು ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು. ಬಸವರಾಜನ್‌ಗೆ ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ವಕೀಲರಾದ ಜಯಣ್ಣ, ನರಹರಿ ತಿಳಿಸಿದರು.

ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರಿಗೆ ಶುಭ ಸುದ್ದಿ

ರಾಜ್ಯದ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿಹಿಸುದ್ದಿ ನೀಡಿದ್ದು, ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು 6 ರಿಂದ 8 ನೇ ತರಗತಿಗೆ ನಿಯುಕ್ತಿಗೊಳಿಸಲು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಪ್ರಸ್ತುತ ಪ್ರಗತಿಯಲ್ಲಿರುವ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು 6-8 ನೇ ತರಗತಿಗೆ ನಿಯುಕ್ತಿಗೊಳಿಸಲು ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ.

6 ರಿಂದ 8 ನೇ ತರಗತಿಗಳಲ್ಲಿ ಖಾಲಿ ಇರುವ ಪದವೀಧರ ಶಿಕ್ಷಕ ಹುದ್ದೆಗಳ ಪೈಕಿ ಶೇ. 40 ರಷ್ಟು ಸ್ಥಾನಗಳಿಗೆ ಹಾಲಿ ಪ್ರಾಥಮಿಕ ಶಾಲೆಗಳಲ್ಲಿ (1 ರಿಂದ 5) ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಸೇವಾ ಜೇಷ್ಠತೆ ಆಧಾರದಲ್ಲಿ ಪರಿಶೀಲಿಸಿ ಬಡ್ತಿ ನೀಡುವ ಸಂಬಂಧ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ.

ಶಾಲಾಮಕ್ಕಳ ಶೈಕ್ಷಣಿಕ ಪ್ರವಾಸ ಸೌಲಭ್ಯಕ್ಕೆ ಮತ್ತೆ ಅನುಮತಿ

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೋವಿಡ್ ಕಾರಣದಿಂದಾಗಿ ಯಾವುದೇ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಬಾರದೆಂದು ಸೂಚಿಸಲಾಗಿತ್ತು.

ಈಗ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ಪ್ರವಾಸಕ್ಕೆ ಅನುಮತಿಸಲಾಗಿದೆ ಎಂದಿದ್ದಾರೆ.

ಅಂದಹಾಗೇ ಪ್ರತಿ ವರ್ಷ ಡಿಸೆಂಬರ್ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಬೇಕು ಎಂದಿದ್ದಾರೆ.

ಇನ್ನೂ ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವುದು. ಈ ಪ್ರವಾಸಕ್ಕೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು. ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಬೇಕು ಎಂದು ಸೂಚಿಸಿದ್ದಾರೆ.

ಪ್ರವಾಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲಾ ಮುಖ್ಯಸ್ಥರೇ ನೇರ ಹೊಣೆಯಾಗಿರುತ್ತಾರೆ. ಇದಕ್ಕೆ ಇಲಾಖೆ ಜವಾಬ್ದಾರಿಯಲ್ಲ. ಕಡ್ಡಾಯವಾಗಿ ಶೈಕ್ಷಣಣಿಕ ಪ್ರವಾಸವನ್ನು ಕೆಎಸ್‌ಆರ್ ಟಿಸಿ, ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕರೆದೊಯ್ಯುವುದು ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲದ ಸಂರಕ್ಷಣೆ ಎಲ್ಲರ ಕರ್ತವ್ಯ-ಈಶ್ವರಪ್ಪ

0

ಜಲ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಿದ್ದು, ಸ್ಥಳೀಯ ಪ್ರದೇಶಗಳಲ್ಲಿ ನೀರಿನ ಮೂಲಗಳನ್ನು ರಕ್ಷಿಸಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಜಲಯಾತ್ರಾ” ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀರಿನ ಮೂಲಗಳು ಬತ್ತಿಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ. ಆದ್ದರಿಂದ ಕೆರೆಕಟ್ಟೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಿದೆ. ರಾಜ್ಯ ಸರ್ಕಾರ ಕೂಡ ಪ್ರತಿ ಜಿಲ್ಲೆಗಳಲ್ಲೂ ಕೆರೆಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ದೇಶದ ಪ್ರತಿ ಹಳ್ಳಿಗಳ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಕುಡಿಯುವ ನೀರು, ನೀರಿನ ಮೂಲಗಳ ಸಂರಕ್ಷಣೆ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಹೀಗೆ ಎಲ್ಲ ವಿಷಯಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಚಂದ್ರು ಜೆ.ಪಿ. ಮಾತನಾಡಿ, ಮಕ್ಕಳಿಗೆ ನೀರಿನ ಸಂರಕ್ಷಣೆ ಮಹತ್ವದ ಅರಿವು ಮೂಡಿಸುವ ದೃಷ್ಠಿಯಿಂದ ರೋಟರಿ ಸಂಸ್ಥೆಯು ಜಲಯಾತ್ರಾ ಎನ್ನುವ ವಿಶೇಷ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಮುಂದಿನ ಪೀಳಿಗೆಗೆ ನೀರಿನ ಸಂಪನ್ಮೂಲ ಉಳಿಸಬೇಕಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಜಲಯಾತ್ರಾ ವಲಯ ಸಂಯೋಜಕ ರಮೇಶ್ ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆಸುತ್ತಿದೆ. ನೀರಿನ ಬಗ್ಗೆ ಜಾಗೃತಿ ಮೂಡಿಸುವ ಆಶಯದಿಂದ ಜಲಯಾತ್ರಾ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲೆ 3182ರ ಜಲಯಾತ್ರಾ ಚೇರ‍್ಮನ್ ಪ್ರೊ. ಕೆ.ನಾರಾಯಣ ಶೆಣೈ ಅವರು ನೀರಿನ ಸಂರಕ್ಷಣೆ ಹಾಗೂ ನೀರಿನ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಲಸಂರಕ್ಷಣೆ ಕುರಿತ ಗೀತೆಗಳನ್ನು ಮಕ್ಕಳಿಗೆ ಹಾಡಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿವಮೊಗ್ಗ ನಗರದ ಶಾಲೆಯ ವಿದ್ಯಾರ್ಥಿಗಳಿಗೆ ಜಲಯಾತ್ರಾ ವಿಶೇಷ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಶಿವಮೊಗ್ಗ ನಗರದ ವಿವಿಧ ಶಾಲೆಯ ಐನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಸಿ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ವಲಯ ಸಹಾಯಕ ಗವರ್ನರ್ ಸುನೀತಾ ಶ್ರೀಧರ್, ವಲಯ ಲೆಫ್ಟಿನೆಂಟ್ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಸವರಾಜ್ ಬಿ., ಜಿ.ವಿಜಯ್‌ಕುಮಾರ್, ಮಾಜಿ ಜಿಲ್ಲಾ ಗವರ್ನರ್ ಜಿ ಎನ್ ಪ್ರಕಾಶ್, ರೋಟರಿ ಕ್ಲಬ್ ಕೋಣಂದೂರು ಅಧ್ಯಕ್ಷ ಪುಟ್ಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಎಂ.ವಿ.ಭಟ್, ಗಣೇಶ್ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಹೊನ್ನಾಳಿ ಚಂದ್ರು ಸಾವಿನ ಪ್ರಕರಣ‌ ಇನ್ನಷ್ಟು ಮಾಹಿತಿ

0

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವು ಪ್ರಕರಣದಲ್ಲಿ, ಮೃತನ ದೇಹದ ಮೇಲೆ ಯಾವುದೇ ಹಲ್ಲೆಯ ಗುರುತುಗಳಿಲ್ಲ ಎಂಬುದು ತಿಳಿದುಬಂದಿದೆ.

ಚಂದ್ರಶೇಖರ್ ದೇಹದ ಮೇಲೆ ಯಾವುದೇ ಹಲ್ಲೆಯ ಕಲೆಗಳಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಮಾಹಿತಿ ಮಾಧ್ಯಮ ಯೊಂದಕ್ಕೆ ಮಾಹಿತಿ ಲಭಿಸಿದೆ.

ರೇಣುಕಾಚಾರ್ಯ ಅವರ ಕುಟುಂಬದವರು, ಚಂದ್ರುಗೆ ಸಾವಿನ ಮುನ್ನ ಹಲ್ಲೆಯಾಗಿತ್ತು ಎಂದು ಆರೋಪಿಸಿದ್ದರು. ಆದರೆ, ಚಂದ್ರಶೇಖರ್ ಕೈಗೆ ಹಗ್ಗ ಕಟ್ಟಿರಲಿಲ್ಲ, ತಲೆಯ ಹಿಂಭಾಗಕ್ಕೂ ಹಲ್ಲೆ ಮಾಡಿರಲಿಲ್ಲ, ಚಂದ್ರು ದೇಹದ ಮೇಲೆ ಯಾವುದೇ ಆಯುಧಗಳ ಕಲೆಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಅನೇಕ ಆಯಾಮಗಳಲ್ಲಿ ತನಿಖೆ ನಡೆದಿದೆ. ಆತ್ಮಹತ್ಯೆ ಅಥವಾ ಕೊಲೆ 3 ಸಾಧ್ಯತೆಗಳನ್ನು ತನಿಖೆ ಮಾಡಲಾಗುತ್ತಿದೆ. ಚಂದ್ರು ದೇಹದ ಮೇಲೆ‌ ಆಯುಧಗಳಿಂದ ಹಲ್ಲೆ ಮಾಡಿಲ್ಲವಾದರೂ, ಏನಾದರೂ ಇಂಜೆಕ್ಟ್ ಮಾಡಿದ್ದಾರಾ ಅನ್ನೋ ಬಗ್ಗೆಯೂ ಪರೀಕ್ಷೆ ನಡೆದಿದೆ. ಪ್ರಾಥಮಿಕ ವರದಿಯಲ್ಲಿ ಹತ್ಯೆಯ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನೊಂದು ವಾರದಲ್ಲಿ ಈ ಕುರಿತು ಪೊಲೀಸ್ ಇಲಾಖೆ ಮಾಹಿತಿ ಹೊರ ಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸಾರ ಭಾರತಿ ಸಿಇಓ ಆಗಿ ಗೌರವ್ ದ್ವಿವೇದಿ ನೇಮಕ

0

ಹಿರಿಯ ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಮತ್ತು ಮಾಜಿ ಮುಖ್ಯಸ್ಥ ಗೌರವ್ ದ್ವಿವೇದಿ ಅವರನ್ನು ಸೋಮವಾರ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.

ಛತ್ತೀಸ್‌ಗಢ ಕೇಡರ್‌ನ 1995-ಬ್ಯಾಚ್ ಅಧಿಕಾರಿ ದ್ವಿವೇದಿ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಪ್ರಸ್ತುತ, ಅವರು ಛತ್ತೀಸ್‌ಗಢ ಸರ್ಕಾರದಲ್ಲಿ ವಾಣಿಜ್ಯ ತೆರಿಗೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಆಯ್ಕೆ ಸಮಿತಿಯ ಶಿಫಾರಸಿನ ನಂತರ ಭಾರತದ ರಾಷ್ಟ್ರಪತಿಗಳು ಇಂದು ಶ್ರೀ ಗೌರವ್ ದ್ವಿವೇದಿ ಅವರನ್ನು ಪ್ರಸಾರ ಭಾರತಿಯಲ್ಲಿ ಕಾರ್ಯಕಾರಿ ಸದಸ್ಯರಾಗಿ 5 ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆಯಲ್ಲಿ ಮಾಹಿತಿ ತಿಳಿಸಿದೆ.

ಹೊಯ್ಸಳ, ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಸೇರಿ ಐದು ಮಕ್ಕಳಿಗೆ ಪುರಸ್ಕಾರ

ಅಪ್ರತಿಮ ಸಾಹಸ ತೋರಿದ ಐವರು ಮಕ್ಕಳಿಗೆ 2022-23ನೇ ಸಾಲಿನ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು. ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿಯು .10 ಸಾವಿರ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಸಂವಿಧಾನಾತ್ಮಕವಾಗಿ ಕೊಡಲಾಗಿರುವ ಮೂಲಭೂತ ಹಕ್ಕುಗಳು ದೇಶದ ಪ್ರತಿಯೊಂದು ಮಗುವಿಗೂ ಸಿಗುವಂತಾಗಬೇಕು. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ ಒದಗಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣದ ಗುರಿ ಹೊಂದಲಾಗಿದೆ. ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಿಂದ ಮಕ್ಕಳು ಹಾಗೂ ಮಹಿಳೆಯರಿಗೆ ಸಹಾಯಕವಾಗಿದೆ. ಹೆಣ್ಣು ಮಗುವಿನ ಉಳಿವು ಮತ್ತು ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ ದಿನಗಳಲ್ಲಿ 4,266 ಅಂಗನವಾಡಿಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ಸಂಸದ ಲೆಹರ್‌ ಸಿಂಗ್‌ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ ಎನ್‌.ಮಂಜುಳಾ, ನಿರ್ದೇಶಕಿ ಡಾ ಕೆ.ಎನ್‌.ಅನುರಾಧಾ ಉಪಸ್ಥಿತರಿದ್ದರು.

ಅದೇ ರೀತಿ ಈ ಬಾರಿಯ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ತನ್ನ ಅಪ್ಪನ ಪ್ರಾಣ ಉಳಿಸಿದ ಸಿದ್ದಾಪುರ ತಾಲೂಕಿನ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಎಂಬ ಬಾಲಕಿಗೆ ಸಮಾಜ ಕಲ್ಯಾಣ ಇಲಾಖೆ ಘೋಷಿಸಿದೆ.

ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತನ್ನ ತಂದೆಯನ್ನು ಬದುಕಿಸಲು ಕೌಸಲ್ಯ ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿದ್ದಾಳೆ. ಜನರನ್ನು ಘಟನಾ ಸ್ಥಳಕ್ಕೆ ಕರೆತಂದು ತಂದೆಯ ಪ್ರಾಣ ಉಳಿಸಿದ್ದಾಳೆ. ಬಾಲಕಿಯ ಸಮಯ ಪ್ರಜ್ಞೆಯನ್ನು ಇದೀಗ ಸರ್ಕಾರ ಗುರುತಿಸಿದೆ. ಪ್ರತಿ ವರ್ಷ ನವೆಂಬರ್ 14ರಂದು ಸಾಹಸಮಯ ಪ್ರದರ್ಶನ ತೋರಿಸಿರುವ ಮಕ್ಕಳಿಗೆ ನೀಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಈ ಬಾರಿ ಬಾಲಕಿ ಕೌಸಲ್ಯಗೆ ನೀಡಲಾಗಿದೆ.

ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಸಣ್ಣ ವಯಸ್ಸಿನಲ್ಲಿಯೇ ವಿಶೇಷ ಸಾಹಸ ಮನೋಭಾವ ಪ್ರದರ್ಶಿಸಿ ಶೌರ್ಯ ಪ್ರಶಸ್ತಿ ಪಡೆದುಕೊಂಡ ಬಾಲಕಿಯ ಸಾಧನೆಗೆ ಕಾನಸೂರಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.

ಹೆಚ್ಚಾಗುತ್ತಿರುವ ಕಾಂತಾರ ಸಿನಿಮಾ ವೀಕ್ಷಣೆ

ಸಿನಿಮಾ ಬಿಡುಗಡೆಯಾದ ಒಂದು ವಾರ ಹೌಸ್‌ಫ‌ುಲ್‌ ಕಂಡರೆ ಸಾಕು ಎನ್ನುವ ಈ ಸಂದರ್ಭದಲ್ಲಿ ರಿಷಭ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫ‌ುಲ್‌ ಶೋನೊಂದಿಗೆ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ.

ಚಿತ್ರ ಬಿಡುಗಡೆಯಾಗಿ ಇಂದಿಗೆ 47ನೇ ದಿನ. ನ.18ಕ್ಕೆ ಚಿತ್ರ 50 ದಿನಗಳನ್ನು ಪೂರೈಸಲಿದೆ.

ವಿಶೇಷವೆಂದರೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ 50 ದಿನ ಪೂರೈಸುತ್ತಿದೆ. ಜೊತೆಗೆ ಇದರಲ್ಲಿ ಬಹುತೇಕ ಚಿತ್ರಮಂದಿರಗಳು ಹೌಸ್‌ಫ‌ುಲ್‌ ಶೋನೊಂದಿಗೆ ಇವತ್ತಿಗೂ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೆಯೇ ಸರಿ.

ಒಂದೆರಡು ವಾರ ಸಿನಿಮಾ ಓಡೋದೇ ಕಷ್ಟ ಎಂಬಂತಿರುವ ಇವತ್ತಿನ ಪರಿಸ್ಥಿತಿಯಲ್ಲಿ “ಕಾಂತಾರ’ ಹಲವು ಅಚ್ಚರಿಗಳೊಂದಿಗೆ ಮುನ್ನುಗ್ಗುತ್ತಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದ ಮೊದಲ ವಾರದಿಂದಲೇ ಚಿತ್ರಮಂದಿರಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಾ ಬರುತ್ತದೆ. ಆದರೆ,ಕಾಂತಾರ ಮಾತ್ರ ಅದಕ್ಕೆ ಉಲ್ಟಾ. ವಾರದಿಂದ ವಾರಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುವ ಮೂಲಕ ಸಿನಿಮಾದಕ್ರೇಜ್‌ ಕೂಡಾ ಹೆಚ್ಚಾಯಿತು.

ಮಾಧ್ಯಮ ಅಕಾಡೆಮಿ ಜೊತೆ ಪತ್ರಿಕೋದ್ಯಮ ಕೋರ್ಸ್ ಆರಂಭ- ಅಶ್ವತ್ಥನಾರಾಯಣ

0

‘ಕೌಶಲಾಭಿವೃದ್ಧಿ ಇಲಾಖೆಯು ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಪತ್ರಿಕೋದ್ಯಮ ಸರ್ಟಿಫಿಕೇಟ್ ಕೋರ್ಸ್‌ ಆರಂಭಿಸಲಿದೆ’ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಪ್ರಸಾರ ಭಾರತಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಜಂಟಿಯಾಗಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ‘ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಿಕೋದ್ಯಮ ಕ್ಷೇತ್ರದ ಈಗಿನ ಬೇಡಿಕೆಗೆ ಅನುಗುಣವಾಗಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಸೇರಿದಂತೆ ಸಮಗ್ರ ಕಲಿಕೆಯ ಕೋರ್ಸ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪತ್ರಕರ್ತರ ಜ್ಞಾನ ಮತ್ತು ಕೌಶಲ ಅಭಿವೃದ್ಧಿಗೆ ಪೂರಕವಾಗಿ ಹೊಸ ಕೋರ್ಸ್ ಆರಂಭಿಸುವಂತೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮನವಿ ಮಾಡಿದರು. ವೇದಿಕೆಯಲ್ಲೇ ಸ೦ದಿಸಿದ ಸಚಿವರು, ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವ ತೀರ್ಮಾನ ಪ್ರಕಟಿಸಿದರು.

ನಟಿ ಪ್ರಿಯಾಂಕಾ ಉಪೇಂದ್ರ, ‘ಚಂದನದಲ್ಲಿ ಬಳಸುವ ಭಾಷೆಯ ಅತ್ಯುತ್ತಮವಾಗಿರುತ್ತದೆ. ಇದರಿಂದ ಕನ್ನಡ ಕಲಿಕೆಯಾಗುತ್ತದೆ’ ಎಂದರು.

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಮಾಹಿತಿ

0

ಭಾರತ್‌ ಗೌರವ ಕಾಶಿ ಯಾತ್ರೆಯನ್ನು ನೀವು ಕೈಗೊಳ್ಳಬಹುದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ “ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ್‌’ ರೈಲನ್ನು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಚಾಲನೆ ನೀಡಿದ್ದಾರೆ.
ಈ ಪ್ಯಾಕೇಜ್‌ 20 ಸಾವಿರ ರೂ. ಆಗಿದ್ದು,5 ಸಾವಿರ ರೂ.ಗಳನ್ನು ರಾಜ್ಯ ಸರಕಾರ ಸಹಾಯ ಧನ ನೀಡಲಿದೆ.3 ಟಯರ್‌ ಎಸಿ ವ್ಯವಸ್ಥೆ ಹೊಂದಿದ್ದು, ಇರುವ 14 ಬೋಗಿಗಳ ಮೇಲೂ ರಾಜ್ಯದ 28 ದೇಗುಲಗಳ ಛಾಯಾಚಿತ್ರ ಬಿಡಿಸಲಾಗಿದೆ.

ಎಲ್ಲಿಂದ ಎಲ್ಲಿಗೆ ಸಂಚಾರ?
ಬೆಂಗಳೂರಿನಿಂದ ರೈಲು ಹೊರಡಲಿದೆ. ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಇದೆ. ಬೀರೂರು, ಹಾವೇರಿ, ಬೆಳಗಾವಿ, ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗ್‌ರಾಜ್‌ಗೆ ಸಂಚರಿಸಲಿದೆ.

ಕೆಎಸ್‌ಟಿಡಿಸಿ, ಐಆರ್‌ಸಿಟಿಸಿ ಬುಕ್ಕಿಂಗ್‌ ಹೇಗೆ?
8 ದಿನಗಳ ದರ್ಶನದ ಪ್ಯಾಕೇಜ್‌ ಇದಾಗಿದೆ. ಈ ಪ್ಯಾಕೇಜ್‌ ದರ 20 ಸಾವಿರ ರೂ. ಇದ್ದು, ಸರಕಾರದಿಂದ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ https://bharatgauravtrains.indianrailways.gov.in. ಅಥವಾ ಸೌಥ್‌ ವೆಸ್ಟರ್ನ್ ರೈಲ್ವೇ ಅಧಿಕಾರಿ ಅರವಿಂದ್‌ ಕುಮಾರ್‌ ರಜಾಕ್‌ ಮೊ.ಸಂ. 9731665951 ಅನ್ನು ಸಂಪರ್ಕಿಸಬಹುದು.

ಊಟ, ವಸತಿ ಹೇಗೆ?
ಪ್ರಯಾಣ ದರ, ಪ್ರವಾಸಿ ತಾಣಗಳಲ್ಲಿನ ಹೊಟೇಲ್‌ಗ‌ಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ, ಊಟದ ವ್ಯವಸ್ಥೆ, ತುರ್ತು ವೈದ್ಯಕೀಯ ಸೇವೆ ಸೇರಿದಂತೆ ವಿಮೆಯನ್ನು ಒಳಗೊಂಡಿದೆ.

ನವೆಂಬರ್‌ 11 ರಂದು ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನ.23 ರಂದು ಎರಡನೇ ಬಾರಿಗೆ ರೈಲು ಪ್ರಯಾಣಿಸ ಲಿದ್ದು, ಈಗಾಗಲೇ ಟಿಕೆಟ್‌ ಸೋಲ್ಡ್ ಔಟ್‌ ಆಗಿದೆ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ಘೋಷಿಸಲಾಗುವುದು.

ಏನೇನು ನೋಡಬಹುದು?
ವಾರಾಣಸಿ- ತುಳಸಿ, ಮಾನಸ ದೇಗುಲ, ಸಂಕಷ್ಟ ಮೋಚನ್‌ ಹನುಮಾನ್‌ ದೇಗುಲ, ಕಾಶಿ ವಿಶ್ವನಾಥ ಹಾಗೂ ಗಂಗಾರತಿ. ಅಯೋಧ್ಯ- ರಾಮಜನ್ಮಭೂಮಿ ದೇಗುಲ, ಹನುಮಾನ್‌ ಗರ್ಹಿ ಸರಯೂ ಘಾಟ್ ಪ್ರಯಾಗ್‌-ಗಂಗಾ ಯಮುನ ಸಂಗಮ, ಹನುಮಾನ್‌ ದೇಗುಲ