Thursday, March 26, 2026
Thursday, March 26, 2026
Home Blog Page 1381

ಮತದಾರರ ಪಟ್ಟಿ ಪರಿಷ್ಕರಣೆ ಅಧಿಕಾರಿಗಳೆಂದು ಹೇಳಿಕೊಂಡು ಅಕ್ರಮ- ಕುಮಾರಸ್ವಾಮಿ

0

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅಧಿಕಾರಿಗಳಿಂದಲೇ ಅಕ್ರಮ ನಡೆಯುತ್ತಿದ್ದು, ಸರ್ಕಾರಿ ಅಧಿಕಾರಿಗಳು ಎಂದು ಹೇಳಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸರ್ಕಾರದ ನಡವಳಿಕೆ ಸಂಶಯಪಡುವಂತಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಜನರು ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಈ ಬಾರಿ ಕುತಂತ್ರದಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಆಡಳಿತದಿಂದ ಜನರು ನೆಮ್ಮದಿಯಾಗಿ ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಇಂದಿನಿಂದ ಜೆಡಿಎಸ್ ಪಂಚರತ್ನ ಯಾತ್ರೆ ನಡೆಯಲಿದ್ದು, ಇಂದಿನಿಂದ 36 ದಿನಗಳ ಕಾಲ ಮೊದಲ ಹಂತದ ಪಂಚರತ್ನ ರಥಯಾತ್ರೆ ನಡೆಯಲಿದೆ. ಮಳೆಯಿಂದಾಗಿ ಪಂಚರತ್ನ ರಥಯಾತ್ರೆ ಮುಂದೂಡಲಾಗಿತ್ತು. ಇಂದಿನಿಂದ ಮತ್ತೆ ಪುನಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಮೋದಿಗೆ ಸೆಲ್ಯೂಟ್ ಭಂಗಿ ತೋರಿದ ಬೈಡನ್ ಫೋಟೊ ವೈರಲ್

0

ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಜಾಗತಿಕ ನಾಯಕರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಕಳೆದ ಮೂರ್ನಾಲ್ಕು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಜಿ20 ಶೃಂಗಸಭೆಯ ಆರಂಭದ ದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೈಕುಲುಕಿ, ತಬ್ಬಿಕೊಂಡ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಶೃಂಗಸಭೆ ಮುಗಿದಿದ್ದು, ಈ ವೇಳೆ ಅನೌಪಚಾರಿಕ ಭೇಟಿಯ ವೇಳೆ ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೆಲ್ಯೂಟ್ ಹೊಡೆದಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಜಿ20 ಶೃಂಗಸಭೆಯ ಆರಂಭಕ್ಕೂ ಮೊದಲು ತಮ್ಮ ಕುರ್ಚಿಗಳಲ್ಲಿ ಕುಳಿತುಕೊಳ್ಳುವಾಗ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಬಂದ ಜೋ ಬೈಡೆನ್
ಮೋದಿಯನ್ನು ತಬ್ಬಿಕೊಂಡು, ಹ್ಯಾಂಡ್ ಶೇಕ್ ಮಾಡಿದ್ದರು.

ಬಳಿಕ ಜೋ ಬೈಡೆನ್ ಜೊತೆ ತಮಾಷೆಯಾಗಿ ಮಾತನಾಡಿದ ಮೋದಿ ತಮ್ಮ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಅಮೆರಿಕದ ಅಧ್ಯಕ್ಷರಿಗೆ ಸೂಚಿಸಿದ್ದರು.

ಇದೀಗ ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ- ಅಮೆರಿಕಾದ ನಾಯಕರು ಭೇಟಿಯಾದಾಗ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಯೂಟ್ ಹೊಡೆದಿದ್ದಾರೆ.

ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜೋ ಬೈಡೆನ್ ಕಡೆಗೆ ಕೈ ಬೀಸಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಮುಂದಿನ ವರ್ಷದ ಜಿ20 ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲಾಯಿತು.

ಈ ವೇಳೆ ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾ ಅಂತ್ಯ ಹಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಮಂತ್ರಕ್ಕೆ ಜಿ20 ಶೃಂಗಸಭೆಯ ಸದಸ್ಯ ರಾಷ್ಟ್ರಗಳಿಂದ ಒಮ್ಮತದ ಬೆಂಬಲ ದೊರಕಿದೆ.

ಜಿ20 ಶೃಂಗಸಭೆಯ ನಿರ್ಣಯದಲ್ಲಿ ರಷ್ಯಾ ಅಧಯಕ್ಷ ವ್ಲಾಡಿಮಿರ್ ಪುಟಿನ್​ಗೆ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸುವಂತೆ ಸಂದೇಶ ರವಾನಿಸಲಾಗಿದೆ.

ಡಾ.ಎನ್.ಬಿ.ಶ್ರೀಧರ್ ಅವರಿಗೆ ಫೆಲೋಶಿಪ್

0

ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ಸಂಘ ಇವರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ದಲ್ಲಿ ಮಾಡಿದ ಗಣನೀಯ ಸಾಧನೆಗಾಗಿ “ ಫೆಲೊಶಿಪ್” ಪ್ರಶಸ್ತಿ ನೀಡಿ ಇತ್ತೀಚಿಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ನಾಮಕ್ಕಲ್ ಇಲ್ಲಿ ನವೆಂಬರ್ 2-4 ರ ವರೆಗೆ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.

ಇವರು ಪಶುವೈದ್ಯಕೀಯ ರಂಗದಲ್ಲಿ ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿರುವುದನ್ನು ಮತ್ತು ರೈತರ ಮಾಹಿತಿಗಾಗಿ ಅನೇಕ ತಾಂತ್ರಿಕ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

ಮಕ್ಕಳು ತಮಗೆ ಸಿಗುವ ಹಕ್ಕಿನಿಂದ ವಂಚಿತರಾಗಬಾರದು

0

ಮಕ್ಕಳ ಕಾನೂನು ಹಕ್ಕುಗಳನ್ನು ಎಲ್ಲರೂ ಅನುಸರಿಸಬೇಕು. ಮಕ್ಕಳು ತಮಗೆ ಸಿಗುವ ಹಕ್ಕಿನಿಂದ ವಂಚಿತರಾಗಬಾರದು. ಮಕ್ಕಳು ಸಮಾಜದ ಆಸ್ತಿಯಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಗಮನ ವಹಿಸಬೇಕು ಎಂದು ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.

ರಾಜೇಂದ್ರ ನಗರದ ರೋಟರಿ ಪೂರ್ವ ಶಾಲೆ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಉತ್ತಮ ವ್ಯಕ್ತಿತ್ವ ಹೊಂದುವ ಜತೆಯಲ್ಲಿ ಸದೃಢ ಮನೋಭಾವ ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವ ಮಾರ್ಗದರ್ಶನ ನೀಡಬೇಕು. ಒಳ್ಳೆಯ ಸಂಸ್ಕಾರ ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು. ಇದು ಎಲ್ಲ ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು.

ಮಕ್ಕಳ ವೈದ್ಯ ಡಾ. ಹರ್ಷ ಶಾಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಾಹಿತಿ ನೀಡಿದರು. ಬಾಲ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಜಾಗೃತಿ ವಹಿಸಬೇಕು.. ಆರೋಗ್ಯ ಕಾಳಜಿ ವಹಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಟ್ರಸ್ಟ್ ಖಜಾಂಚಿ ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳ ಮನಸ್ಸಿಗೆ ಅರಿವು ಆಗುವಂತೆ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸಿ ಪಾಲಕರು, ಶಿಕ್ಷಕರು ಪ್ರತಿಕ್ರಿಯಿಸಬೇಕು. ಸರಿಯಾದ ರೀತಿ ತಿಳವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಅವರು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಿದರು.

ಮಕ್ಕಳ ತಜ್ಞ ಡಾ. ಹರ್ಷ ಅವರಿಗೆ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್, ಜಂಟಿ ಕಾರ್ಯದರ್ಶಿ ನಾಗವೇಣಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಪ್ರಾಚಾರ್ಯ ಆರ್.ಸೂರ್ಯನಾರಾಯಣ, ಎಸ್.ಜಯಶೀಲಬಾಯಿ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಪಾರ್ವತಿ, ಕಾರ್ಯದರ್ಶಿ ಅಜಯ್, ಶಿಕ್ಷರಾದ ಪಾರ್ವತಿ, ಸೌಂದರ್ಯ, ತೇಜಾಬಾಯಿ, ರುಕ್ಕಯ್ಯ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮ

0

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ನವೆಂಬರ್ 20ರಂದು ಸಂಜೆ 5.30ರಿಂದ ಕ್ಕೆ “ಬಾರಿಸು ಕನ್ನಡ ಡಿಂಡಿಮವ” ಕನ್ನಡ ಚಿತ್ರಗೀತೆಗಳ ವಿಶೇಷ ನೃತ್ಯ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕನ್ನಡ ನಾಡು ನುಡಿಗೆ ಸಂಬಂಧಿಸಿ ವಿಶೇಷ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ. ಸಮನ್ವಯ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿರುವ ಒಡ್ಡಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೌಶಲ್ಯ ಶಾಲೆ ವಿದ್ಯಾರ್ಥಿಗಳು ಹಾಗೂ ಸಮನ್ವಯ ಸೇವಕರು ನೃತ್ಯ ಗಾಯನ ನಡೆಸಿಕೊಡಲಿದ್ದಾರೆ.

ಶೌರ್ಯ ಪ್ರಶಸ್ತಿ ವಿಜೇತೆ ಪ್ರಾರ್ಥನಾ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ಉದ್ಘಾಟಿಸುವರು. ಕೆನರಾ ಬ್ಯಾಂಕ್ ಶಿವಮೊಗ್ಗ ಉಪ ಮಹಾಪ್ರಬಂಧಕ ಸಂದೀಪ್ ರಾವ್, ಅಮೃತ್ ನೋನಿ ಸಂಸ್ಥೆಯ ಡಾ. ಎಂ.ಕೆ.ಶ್ರೀನಿವಾಸಮೂರ್ತಿ, ಕೆ ಲೈವ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಕೀಳಂಬಿ, ಕೆ ಎಸ್ ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ಅಧಿಕಾರಿ ರಾಚಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಅಧ್ಯಕ್ಷತೆ ವಹಿಸುವರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರತಿ ವರ್ಷ ಸಮನ್ವಯ ಟ್ರಸ್ಟ್‌ ನಿಂದ “ಬಾರಿಸು ಕನ್ನಡ ಡಿಂಡಿಮವ” ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿ ವಿಶೇಷವಾಗಿ ಕಾರ್ಯಕ್ರಮ ರೂಪಿಸಲಾಗಿದೆ. 50ಕ್ಕೂ ಅಧಿಕ ವಿಶೇಷ ಗೀತೆಗಳ ಗಾಯನ ನಡೆಯಲಿದೆ.
ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳು, ಮಧುರ ಗೀತೆಗಳು, ಪುನೀತ್ ರಾಜ್ ಕುಮಾರ್ ಗೀತೆಗಳು, ಸ್ಫೂರ್ತಿದಾಯಕ ಗೀತೆಗಳು ಸೇರಿದಂತೆ ವಿಶೇಷ ರೀತಿಯ ಗೀತ ಗಾಯನ ಪ್ರಯತ್ನ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಹಾಗೂ ಕಾರ್ಯಕ್ರಮದ ಉಚಿತ ಪಾಸ್ ಗಳಿಗಾಗಿ 9380233123 ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಇರುತ್ತದೆ.

ಪ್ರತಿಮೆಗೆ ನಮ್ಮಲ್ಲಿ ಅವಕಾಶವೇ ಇಲ್ಲ- ಸಿ.ಎಂ.ಇಬ್ರಾಹಿಂ

0

ರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂಬ ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರ ಹೇಳಿಕೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೆಂಡಾಮಂಡಲರಾಗಿದ್ದಾರೆ.

ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು ಇರುತ್ತೆ ನಾಳೆ ಸಾಯುತ್ತದೆ. ನಮಗೆ ಧರ್ಮನೇ ಮುಖ್ಯ. ಟಿಪ್ಪು ಪ್ರತಿಮೆ ಸ್ಥಾಪನೆ ಪ್ರಶ್ನೆಯೇ ಇಲ್ಲ. ಪ್ರತಿಮೆಗೆ ನಮ್ಮಲ್ಲಿ ಅವಕಾಶವೇ ಇಲ್ಲ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದರು.

ಪೂಜೆ ಮಾಡುವುದು, ಕುಂಕುಮ ಹಚ್ಚುವುದು ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಇರುವುದು ಬಡವರಿಗೆ ಸಹಾಯ ಮಾಡುವುದು. ಇದೇ ನಮ್ಮಲ್ಲಿರುವ ಆಚರಣೆ. ಎಲ್ಲಿಯಾದರೂ ಮುಸ್ಲಿಮರ ಪ್ರತಿಮೆ ಇರುವುದನ್ನು ತೋರಿಸಿ. ಈ ತನ್ವೀರ್ ಸೇಠ್‌ಗೆ ಏನೂ ಗೊತ್ತಿಲ್ಲ. ಅವರ ತಂದೆ ಅಜೀಜ್ ಸೇಠ್ 50 ವರ್ಷ ಕೆಲಸ‌ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ ? ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದ ಅವರು, ಟಿಪ್ಪು ಜಯಂತಿ ‌ಮಾಡಿದ್ದೂ ತಪ್ಪು. ನಮ್ಮಲ್ಲಿ ಜಯಂತಿ ಅದು ಇದು ಇಲ್ಲ ಎಂದು ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಬದಲಾಗಿದೆ ಅಂತ ಧರ್ಮ ಬದಲಾಯಿಸಲು ಆಗುತ್ತಾ?

ಅಡ್ಡಂಡ ಕಾರ್ಯಪ್ಪ ಅವರು ರಚಿಸಿರುವ ಟಿಪ್ಪುವಿನ ನಿಜ ಕನಸುಗಳು ಕೃತಿಯ ವಿರುದ್ಧ ಒಂದೆರಡು ದಿನದಲ್ಲಿ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಲಾಗುವುದು ಎಂದು ಸಿ.ಎಂ. ಇಬ್ರಾಹಿಂ ಅವರು ಹೇಳಿದರು.

ನಾಟಕಕ್ಕೆ ತಡೆ ಕೋರಿ ಮೈಸೂರಿನಲ್ಲಿ ಈಗಾಗಲೇ ನ್ಯಾಯಾಲಯದ ಮೊರೆ ಹೋಗಲಾಗಿದೆ. ನಾಳೆ ಅಥವಾ ನಾಳಿದ್ದು ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೊಗಲಾಗುವುದು ಎಂದು ಅವರು ತಿಳಿಸಿದರು.

ಮೈಸೂರು ಸಾಂಸ್ಕೃತಿಕ ‌ನಗರಿ‌, ವಿದ್ಯಾನಗರಿ. ಸಂಸದ ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ಟಿಪ್ಪು ಪುಸ್ತಕ, ನಾಟಕ ಆಕ್ರೋಶಕ್ಕೆ ಕಾರಣವಾಗಿದೆ. ಗಲಾಟೆಗಳು ನಡೆಯಬಾರದು ಎಂದು ಸಭೆ ನಡೆಸಿದ್ದೇನೆ. ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ. ಶೃಂಗೇರಿ ಶಾರದ ಪೀಠವನ್ನು ಪುನರ್ ನಿರ್ಮಿಸಿರುವುದು ಟಿಪ್ಪು ಎಂದು ಗುರುಗಳೇ ಹೇಳಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದಂತೆ ಈ ರೀತಿ ಮಾಡುತ್ತಿದ್ದಾರೆ.

ನವೆಂಬರ್ 25 ರಂದು ಭದ್ರಾ ನಾಲೆ ನೀರು ನಿಲ್ಲಿಸಲಾಗುವುದು- ಪವಿತ್ರಾ ರಾಮಯ್ಯ

0

ಅಚ್ಚುಕಟ್ಟು ಪ್ರದೇಶದ ಅಡಿಕೆ- ತೆಂಗಿನ ತೋಟಗಳ ಹಿತದೃಷ್ಟಿಯಿಂದ ಈ ಬಾರಿ ಬೇಸಿಗೆ ಹಂಗಾಮಿನಲ್ಲಿ ವಾಡಿಕೆಗಿಂತ ಒಂದು ವಾರ ಮೊದಲೇ ನಾಲೆಗಳಿಗೆ ನೀರು ಹರಿಸಲು ಶಿವಮೊಗ್ಗದಲ್ಲಿ ಬುಧವಾರ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ 82ನೇ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತ ಮುಖಂಡರು, ಕಾಡಾ ನಿರ್ದೇಶಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಎಲ್ಲರ ಸಲಹೆ ಪಡೆದು ಈ ತೀರ್ಮಾನ ಕೈಗೊಳ್ಳಲಾಯಿತು.

ಇತಿಹಾಸದಲ್ಲೇ ಮೊದಲು: ‘ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಸುತ್ತಿದ್ದ ನೀರನ್ನು ನ. 20ಕ್ಕೆ ಬಂದ್ ಮಾಡಿ, ಬೇಸಿಗೆ ಬೆಳೆಗೆ ಜ. 1ರಿಂದ ನೀರು ಕೊಡಲಾಗುತ್ತಿತ್ತು. ಆದರೆ, ಈ ವರ್ಷ ಐದು ದಿನ ತಡವಾಗಿ (ನ. 25) ನೀರು ನಿಲ್ಲಿಸಲಾಗುತ್ತಿದೆ. ಡಿ. 25ಕ್ಕೆ ಮತ್ತೆ ನೀರು ಹರಿಸಲಾಗುತ್ತಿದೆ. ಈ ಮೊದಲು ಒಂದೂವರೆ ತಿಂಗಳು ಕಾಲುವೆಯಲ್ಲಿ ನೀರು ಇರುತ್ತಿರಲಿಲ್ಲ. ಅದನ್ನು ಈಗ ಒಂದು ತಿಂಗಳಿಗೆ ಇಳಿಸಲಾಗಿದೆ. ನಮ್ಮಲ್ಲಿ ನೀರಿನ ಸಂಗ್ರಹ ಇರುವುದರಿಂದ ಜಲಾಶಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೆಚ್ಚು ದಿನಗಳ ಕಾಲ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಪವಿತ್ರಾ ರಾಮಯ್ಯ ಹೇಳಿದರು.

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತ ಮುಖಂಡರು, ಕಾಡಾ ನಿರ್ದೇಶಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಎಲ್ಲರ ಸಲಹೆ ಪಡೆದು ಈ ತೀರ್ಮಾನ ಕೈಗೊಳ್ಳಲಾಯಿತು.

ಪ್ರತಿ ವರ್ಷ ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹರಿಸುತ್ತಿದ್ದ ನೀರನ್ನು ನ. 20ಕ್ಕೆ ಬಂದ್ ಮಾಡಿ, ಬೇಸಿಗೆ ಬೆಳೆಗೆ ಜ. 1ರಿಂದ ನೀರು ಕೊಡಲಾಗುತ್ತಿತ್ತು. ಆದರೆ, ಈ ವರ್ಷ ಐದು ದಿನ ತಡವಾಗಿ ನೀರು ನಿಲ್ಲಿಸಲಾಗುತ್ತಿದೆ. ಡಿ. 25ಕ್ಕೆ ಮತ್ತೆ ನೀರು ಹರಿಸಲಾಗುತ್ತಿದೆ. ಈ ಮೊದಲು ಒಂದೂವರೆ ತಿಂಗಳು ಕಾಲುವೆಯಲ್ಲಿ ನೀರು ಇರುತ್ತಿರಲಿಲ್ಲ. ಅದನ್ನು ಈಗ ಒಂದು ತಿಂಗಳಿಗೆ ಇಳಿಸಲಾಗಿದೆ. ನಮ್ಮಲ್ಲಿ ನೀರಿನ ಸಂಗ್ರಹ ಇರುವುದರಿಂದ ಜಲಾಶಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೆಚ್ಚು ದಿನಗಳ ಕಾಲ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಪವಿತ್ರಾ ರಾಮಯ್ಯ ಹೇಳಿದರು.

ಭದ್ರಾ ಜಲಾಶಯದಿಂದ ನೀರು ಹರಿಯುವ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳ ರೈತರು ಇದರ ಲಾಭ ಪಡೆಯಲಿದ್ದಾರೆ.

ಭದ್ರಾ ಅಚ್ಚುಕಟ್ಟು ಪ್ರದೇಶ ಭಿನ್ನ ಹವಾಮಾನ ಮತ್ತು ಮಣ್ಣಿನ ಗುಣ ಹೊಂದಿದೆ. ಭದ್ರಾವತಿ ಸುತ್ತಲಿನ ಪ್ರದೇಶದಲ್ಲಿ ಕಲ್ಲುಭೂಮಿ, ಕೆಂಪುಮಿಶ್ರಿತ ಮಣ್ಣಿನಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಮಣ್ಣು 20ರಿಂದ 25 ದಿನಕ್ಕೆ ಮಾತ್ರ ನೀರನ್ನು ಹಿಡಿದಿಡುತ್ತದೆ. ದಾವಣಗೆರೆ, ಮಲೆಬೆನ್ನೂರು, ಹರಿಹರ ಭಾಗದಲ್ಲಿ ಎರೆಮಣ್ಣಿದ್ದು ಒಂದು ತಿಂಗಳವರೆಗೆ ನೀರನ್ನು ತಡೆದಿಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಆ ಭಾಗಕ್ಕೆ ಸ್ವಲ್ವ ತಡವಾಗಿ ನೀರು ಹರಿಸಬೇಕು ಎಂದು ರೈತರು ಸಭೆಯಲ್ಲಿ ಅಭಿಪ್ರಾಯ ಹಂಚಿಕೊಂಡರು.

ನೀರಾವರಿ ಸಲಹಾ ಸಮಿತಿಯ ಸದಸ್ಯರು, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ, ರೈತ ಮುಖಂಡರು ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರು ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ರೈತರು ಮತ್ತು ಭದ್ರಾ ಕಾಡಾ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಯಾಮರಣ ಅರ್ಜಿ ಸಲ್ಲಿಕೆ ದೂರಿನ ಬಗ್ಗೆ ಶಿವಮೊಗ್ಗ ಜಿಪಂ ಸಿಇಓ ಸ್ಪಷ್ಟೀಕರಣ

0

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದ ದಂಪತಿಗಳು ದಯಾ ಮರಣ ಕೋರಿ ಅರ್ಜಿ ಸಲ್ಲಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಎನ್.ಡಿ. ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

ಸಾಗರ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಗ್ವೆ ಗ್ರಾಮದ ಸರ್ವೆ ನಂಬರ್ 136/1 ರಲ್ಲಿ ತಮಗೆ ಸೇರಿದ ಭೂಪರಿವರ್ತನೆಯಾದ ಜಾಗದಲ್ಲಿ 61%ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡದೆ ಇರುವುದರಿಂದ ಶ್ರೀಕಾಂತ ನಾಯ್ಕ್‌ ಹಾಗೂ ಸುಜಾತಾ ನಾಯ್ಕ್‌ ಅವರು ದಯಾಮರಣ ಕೋರಿ ಸಾಗರ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಖಂಡಿಕಾ ಗ್ರಾಮ ಪಂಚಾಯಿತಿಯಿಂದ ಸಂಬಂಧಿಸಿದ ಕಡತ ಹಾಗೂ ದಾಖಲೆಗಳನ್ನು ಪಡೆದು ಕೂಲಂಕುಷವಾಗಿ ಪರಿಶೀಲಿಸಲಾಗಿರುತ್ತದೆ ಎಂದರು.

ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಕಾನೂನು ಸಲಹೆ ಪಡೆಯಲಾಗಿದೆ. ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂತಿಮ ಆದೇಶದವರೆಗೆ ಅಥವಾ ನಿವೇಶನಗಳ ಹಂಚಿಕೆ ಕರಾರು ಪತ್ರ ಸಲ್ಲಿಸುವವರೆಗೆ ನಿವೇಶನ ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಿರುವುದಿಲ್ಲವೆಂದು ವಕೀಲರು ಕಾನೂನು ಸಲಹೆಯನ್ನು ನೀಡಿರುತ್ತಾರೆ.

ಶ್ರೀಕಾಂತನಾಯ್ಕ ಹಾಗೂ ಮ್ಯಾನೇಜಿಂಗ್ ಪಾರ್ಟ್‍ನರ್ ಎಸ್.ಚಂದ್ರಶೇಖರ್ ನಡುವೆ ಅನೇಕ ನ್ಯಾಯಾಲಯಗಳಲ್ಲಿ ವಿವಿಧ ವ್ಯಾಜ್ಯಗಳು ಬಾಕಿ ಇದೆ. ಈ ಹಂತದಲ್ಲಿ ನಿವೇಶನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ ಎಂದು ಎನ್.ಡಿ. ಪ್ರಕಾಶ್ ತಿಳಿಸಿದ್ದಾರೆ.

ವಾಸ್ತವಾಂಶಗಳನ್ನು ಮರೆಮಾಚಿ ಮಾಲೀಕರಾದ ಶ್ರೀಕಾಂತ ನಾಯ್ಕ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಸಾಗರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಮೇಲೆ ಅನಗತ್ಯ ಒತ್ತಡ ಹೇರುವ ಸಲುವಾಗಿ ಸುಳ್ಳು ಲಂಚದ ಆರೋಪ ಮಾಡಿರುತ್ತಾರೆ. ಇದು ಸತ್ಯಕ್ಕೆ ದೂರವಾಗಿರುತ್ತದೆ. ಆದ್ದರಿಂದ ಈ ಸುದ್ದಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಅವರು ಸ್ಪಷ್ಟೀಕರಣ ನೀಡಿರುತ್ತಾರೆ.

ವಿಜ್ಞಾನ ಹಾಗು ತಂತ್ರಜ್ಞಾನ ಐಟಿ ಕ್ಷೇತ್ರದ ಸಾಧನೆ ಮಹತ್ವದ್ದು- ಬೊಮ್ಮಾಯಿ

0

ಬೆಂಗಳೂರು ಕೇವಲ ಭಾರತದ ಸಿಲಿಕಾನ್ ವ್ಯಾಲಿ ಅಲ್ಲ, ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿಹಬ್ಬದ ಅಂಗವಾಗಿ ಕರ್ನಾಟಕ ರಾಜ್ಯದ ಐಟಿ, ಬಿಟಿ ವಲಯಕ್ಕೆ ಮಹತ್ತರ ಕೊಡುಗೆ ನೀಡಿದ ವಿವಿಧ ಕಂಪೆನಿಗಳ ಮುಖ್ಯಸ್ಥರನ್ನು ಅವರು ಸನ್ಮಾನಿಸಿ ಮಾತನಾಡಿದರು.

ಬೆಳ್ಳಿ ಹಬ್ಬ ಆಚರಣೆ ಬಹುತೇಕ ಸಿನೆಮಾ ಓಡಿದಾಗ ಆಚರಿಸುತ್ತಾರೆ. ವಿಜ್ಞಾನ ಹಾಗೂ ತಂತ್ರಜ್ಞಾನ ಐಟಿ ಇಪ್ಪತ್ತೈದು ವರ್ಷ ಸಾಧನೆ ಮಹತ್ವದ್ದು, ಐಟಿ ಉದ್ಯಮ ಇಷ್ಟೊಂದು ಬೆಳೆದರೂ ಉದ್ಯಮಿಗಳಲ್ಲಿ ಇನ್ನೂ ಸಾಕಷ್ಟು ಉತ್ಸಾಹ ಇದೆ‌ ಎಂದರು.

ಪರಿಸರದಲ್ಲಿ ಮನುಷ್ಯ ಅತಿ ಹೆಚ್ಚು ವರ್ಷ ಬದುಕುವ ಜೀವಿ. ಮನುಷ್ಯ ಸಹರಾ ಮರಭೂಮಿಯಲ್ಲಿ, ಚಳಿ ಪ್ರದೇಶ ಅರಣ್ಯ ಎಲ್ಲ ಪ್ರದೇಶದಲ್ಲಿಯೂ ಬದುಕುತ್ತಾನೆ‌. ಮೂಲ ವಿಜ್ಞಾನವನ್ನು ಏಕ ವ್ಯಕ್ತಿಗಳು ಸಂಶೋಧನೆ ಮಾಡುತ್ತಾರೆ‌. ಐಟಿ ಬಿಟಿಯಲ್ಲಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಐಟಿ ಉದ್ಯಮದಲ್ಲಿ ಗಣಿತದ ಪಾತ್ರ ಮುಖ್ಯವಾಗಿರುತ್ತದೆ‌. ಭಾರತೀಯರು ಗಣಿತದಲ್ಲಿ ಪರಿಣಿತರು. ಐಟಿ ಕ್ಷೇತ್ರದಲ್ಲಿ ಚರ್ಚೆ ನಡೆದಷ್ಟು ಉತ್ತಮ ಫಲಿತಾಂಶ ಹೊರ ಬರುತ್ತದೆ. ನಮ್ಮ ಜೀವನದಲ್ಲಿ ನೆಟ್ವರ್ಕಿಂಗ್ ಅತ್ಯಂತ ಮುಖ್ಯ‌. ಐಟಿಯಲ್ಲಿಯೂ ಅದೇ ಮುಖ್ಯ. ಕೆಲವರು ನಮ್ಮನ್ನು ಅನುಕರಣೆ ಮಾಡಬಹುದು‌. ಆದರೆ, ನಮ್ಮನ್ನು ಓವರ್ ಟೇಕ್ ಮಾಡಲು ಆಗುವುದಿಲ್ಲ ಎಂದರು.

ವಿಮಾನ ಯಾನದಲ್ಲಿ ಮಾಸ್ಕ್ ಕಡ್ಡಾಯವಲ್ಲ ಆದರೂ ಮುಂಜಾಗ್ರತೆಯಿರಬೇಕು

0

ಇನ್ನು ಮುಂದೆ ಕೋವಿಡ್ ನಿಂದ ಉಂಟಾಗುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಪ್ರಯಾಣಿಕರು ಮಾಸ್ಕ್/ಫೇಸ್ ಕವರ್‌ಗಳನ್ನು ಬಳಸಬೇಕು ಎಂದು ಸಂವಹನದಲ್ಲಿ ಹೇಳಿದೆ.

ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್‌ ಬಳಕೆ ಕಡ್ಡಾಯವಲ್ಲ.
ಆದರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಪ್ರಯಾಣಿಕರು ಅವುಗಳನ್ನು ಬಳಸುವುದು ಉತ್ತಮ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಇಲ್ಲಿಯವರೆಗೆ, ವಿಮಾನಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಬಳಸುವುದು ಕಡ್ಡಾಯವಾಗಿತ್ತು. ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ನೀಡಿದ ಸಂವಹನದಲ್ಲಿ, ಕೋವಿಡ್-19 ನಿರ್ವಹಣೆಯ ಪ್ರತಿಕ್ರಿಯೆಗೆ ಶ್ರೇಣೀಕೃತ ವಿಧಾನದ ಸರ್ಕಾರದ ನೀತಿಗೆ ಅನುಗುಣವಾಗಿ ಇತ್ತೀಚಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನು ಮುಂದೆ ಕೋವಿಡ್ ನಿಂದ ಉಂಟಾಗುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಪ್ರಯಾಣಿಕರು ಮಾಸ್ಕ್/ಫೇಸ್ ಕವರ್‌ಗಳನ್ನು ಬಳಸಬೇಕು ಎಂದು ಸಂವಹನದಲ್ಲಿ ಹೇಳಿದೆ. ವಿಮಾನದಲ್ಲಿನ ಪ್ರಕಟಣೆಗಳ ಭಾಗವಾಗಿ ದಂಡ/ದಂಡದ ಕ್ರಮದ ಯಾವುದೇ ನಿರ್ದಿಷ್ಟ ಉಲ್ಲೇಖವನ್ನು ಘೋಷಿಸಬೇಕಾಗಿಲ್ಲ ಎಂದು ಅದು ಹೇಳಿದೆ.

ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯು ಒಟ್ಟು ಸೋಂಕುಗಳ ಶೇಕಡಾ 0.02 ರಷ್ಟು ಮಾತ್ರ. ಚೇತರಿಕೆಯ ಪ್ರಮಾಣವು ಶೇಕಡಾ 98.79 ಕ್ಕೆ ಏರಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,28,580 ಕ್ಕೆ ಏರಿದೆ ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ.