Friday, March 27, 2026
Friday, March 27, 2026
Home Blog Page 1379

ಮತದರಾರ ಪಟ್ಟಿ ಪರಿಷ್ಕರಣೆ ಹಗರಣ ಇಕ್ಕಟ್ಟಿಗೆ ಸಿಕ್ಕ ಸರ್ಕಾರ

0

ಮತದಾರರ ಗುರುತಿನ ಚೀಟಿ ಪರಿಷ್ಕರಣೆ ನೆಪದಲ್ಲಿ ವೈಯಕ್ತಿಕ ವಿವರಗಳನ್ನು ಕಲೆ ಹಾಕಲಾಗಿದೆ ಎಂಬ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಚೆಕ್ ಮತ್ತು ಎನ್ವಲಪ್ ಕವರ್ ಪತ್ತೆಯಾಗಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಮಲ್ಲೇಶ್ವರಂನಲ್ಲಿರುವ ಚಿಲುಮೆ ಸಂಸ್ಥೆಯಲ್ಲಿ ಬೆಂಗಳೂರು ಪ್ರತಿನಿಧಿಸುವ ಪ್ರಭಾವಿ ಸಚಿವರಿಗೆ ಸೇರಿದ ಖಾಲಿ ಚೆಕ್‌ಗಳು, ಎನ್ವಲಪ್ ಕವರ್, ಕೆಲವು ಮತದಾರರ ಗುರುತಿನಚೀಟಿ, ಲೆಟರ್ ಹೆಡ್‌ಗಳು ಪತ್ತೆಯಾಗಿವೆ.

ಅಲ್ಲದೆ, ಕಚೇರಿಯಲ್ಲಿ ನೋಟುಗಳನ್ನು ಎಣಿಕೆ ಮೆಷಿನ್ ಕೂಡ ಪತ್ತೆಯಾಗಿರುವುದು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಸಂಸ್ಥೆಯಲ್ಲಿ ಚುನಾವಣಾ ಸಮನ್ವಯ ಅಧಿ ಕಾರಿ ಎಂದು ಕೆಲವರು ಕರ್ತವ್ಯ ನಿರ್ವಹಿಸು ತ್ತಿದ್ದು, 50 ಗುರುತಿನ ಚೀಟಿ, ಬಿಲ್‌ಗಳು, ಸಿಸಿಟಿವಿ, ಕಂಪ್ಯೂಟರ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್, ಪೆನ್‌ಡ್ರೈವ್, ಸಿಡಿ, ಡಿವಿಆರ್ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಲುಮೆ ಸಂಸ್ಥೆಯಲ್ಲಿ ಯಾವ ಕಾರಣಕ್ಕಾಗಿ ಇವೆಲ್ಲವನ್ನೂ ಇಟ್ಟುಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗಿದೆ.
ಚಿಲುಮೆ ಸಂಸ್ಥೆಯ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗೌಪ್ಯ ಮಾಹಿತಿಯನ್ನು ನೀಡುವುದಾಗಿ ರಾಜಕಾರಣಿ ಗಳಿಗೆ ಗಾಳ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಸಂಸ್ಥೆಯ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ ಮಾಡಿರುವುದು ಬಹಿರಂಗವಾಗಿದೆ. ಬೆಂಗಳೂರಿನ ‘ಚಿಲುಮೆ’ ಪ್ರಕರಣದ ಬಗ್ಗೆ ಉಚ್ಚ ನ್ಯಾಾಂಲಯದ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ, ‘ನಮ್ಮ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ. ಅವರಿಂದಲೇ ತನಿಖೆ ನಡೆಯಲಿದೆ ಎಂದರು.

ವನ್ಯಜೀವಿ ಮಂಡಳಿ ಸದಸ್ಯರಾಗಿ ನಟ ದರ್ಶನ್ ನೇಮಕ

0

ನಟ ದರ್ಶನ್ ಪ್ರಾಣಿ ಪ್ರೇಮಿ ಎಂಬುದನ್ನು ಅವರ ಅಭಿಮಾನಿಗಳಿಗೆ ವಿವರಿಸಿ ಹೇಳುವ ಅಗತ್ಯವಿಲ್ಲ. ಅವರ ಫಾರಂನಲ್ಲಿ ಸಾಕಿರುವ ಅನೇಕ ಪ್ರಾಣಿಗಳೇ ಅದಕ್ಕೆ ಸಾಕ್ಷಿ.

ಪ್ರಾಣಿಗಳ ಬಗ್ಗೆ ದರ್ಶನ್‌ಗೆ ವಿಶೇಷ ಕಾಳಜಿ ಮತ್ತು ಅಕ್ಕರೆಯಿದೆ.
ಇದೇ ಕಾರಣಕ್ಕೆ ಕುದುರೆ, ಹಸು, ಎತ್ತು ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿರುವ ದರ್ಶನ್, ವನ್ಯಜೀವಿಗಳ ಬಗ್ಗೆಯೂ ಅಷ್ಟೇ ಅಕ್ಕರೆ, ಮಮತೆ ಹೊಂದಿದ್ದಾರೆ.

ಸಮಯ ಸಿಕ್ಕಾಗೆಲ್ಲ ಅರಣ್ಯಕ್ಕೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ತೊಡಗುತ್ತಾರೆ. ಅವರು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ. ಆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.

ದರ್ಶನ್‌ ಅವರ ಈ ವನ್ಯಜೀವಿ ಪ್ರೀತಿ ಗುರುತಿಸಿರುವ ರಾಜ್ಯ ಸರ್ಕಾರವು ಅವರನ್ನು ವನ್ಯಜೀವಿ ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದೆ.

ದರ್ಶನ್ ಅವರು ಈಗಾಗಲೇ ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಾಣಿಶಾಸ್ತ್ರ ಪ್ರಾಧಿಕಾರದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹಾಗಾಗಿ ಅವರನ್ನು ವನ್ಯಜೀವಿ ಮಂಡಳಿ ಸದಸ್ಯ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಇದರ ಜೊತೆಗೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರನ್ನೂ ಸಹ ಇದೇ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಈ ಇಬ್ಬರನ್ನೂ ಸದಸ್ಯರನ್ನಾಗಿ ನೇಮಕ ಮಾಡಿ ಅರಣ್ಯ ಇಲಾಖೆಯು ನವೆಂಬರ್ 19 ರಂದು ಆದೇಶ ಹೊರಡಿಸಿದ್ದು, ಈ ಇಬ್ಬರೂ ಮುಂದಿನ ವರ್ಷ ಅಕ್ಟೋಬರ್‌ ವರೆಗೆ ಅಥವಾ ಮುಂದಿನ ಆದೇಶ ಹೊರಬೀಳುವವರೆಗೆ ವನ್ಯಜೀವಿ ಮಂಡಳಿಯ ಸದಸ್ಯರಾಗಿರುತ್ತಾರೆ.

ವನ್ಯಜೀವಿ ಮಂಡಳಿ, ವನ್ಯಜೀವಿ ಛಾಯಾಗ್ರಾಹಕ ಹಾಗೂ ಪ್ರಾಣಿಶಾಸ್ತ್ರ ಪ್ರಾಧಿಕಾರ ಮಾತ್ರವೇ ಅಲ್ಲದೆ, ರಾಜ್ಯ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿ ಸಹ ಆಗಿದ್ದಾರೆ ನಟ ದರ್ಶನ್. ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಅವರ ಮನವಿಯಂತೆ ಕೃಷಿ ಇಲಾಖೆಯ ರಾಯಭಾರಿ ಸ್ಥಾನವನ್ನು ದರ್ಶನ್ ಅಲಂಕರಿಸಿದ್ದಾರೆ. ಬಿ.ಸಿ.ಪಾಟೀಲ್ ಅವರೊಟ್ಟಿಗೆ ಕೆಲವು ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿಯೂ ದರ್ಶನ್ ಭಾಗಿಯಾಗಿದ್ದರು.

ದೇಶೀಯ ಮೊದಲ ಖಾಸಗಿ ರಾಕೆಟ್ ವಿಕ್ರಮ್ S ಯಶಸ್ವಿ ಉಡಾವಣೆ

0

ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್‌ ‘ವಿಕ್ರಮ್‌-ಎಸ್‌’ ಮೂಲಕ ಮೂರು ಉಪಗ್ರಹಗಳನ್ನು ಶುಕ್ರವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಗೆ 2020ರಲ್ಲಿ ಅವಕಾಶ ನೀಡಿದ ನಂತರ, ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.

ಸ್ಕೈರೂಟ್‌ ಏರೋಸ್ಪೇಸ್‌ 2018ರಲ್ಲಿ ಸ್ಥಾಪನೆಯಾದ ನವೋದ್ಯಮ. ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಅಡಿಗಲ್ಲು ಹಾಕಿದ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ ಕಂಪನಿಯು ‘ವಿಕ್ರಮ್‌-ಎಸ್‌’ ಎಂದು ಹೆಸರಿಟ್ಟಿದೆ.

ದೇಶೀಯವಾಗಿ ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್‌ ಎಂಜಿನ್‌ ಮತ್ತು ಬೂಸ್ಟರ್‌ ರಾಕೆಟ್‌ಗಳನ್ನು ಹೊಂದಿರುವ ವಿಕ್ರಮ್‌-ಎಸ್‌, ಈ ಸರಣಿಯ ಮೊದಲ ರಾಕೆಟ್‌. ಇದು 490 ಕೆ.ಜಿ. ತೂಕದಷ್ಟು ಉಪಗ್ರಹಗಳನ್ನು ಗರಿಷ್ಠ 500 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ. 510 ಕೆ.ಜಿ. ಭಾರ ಹೊರುವ ಸಾಮರ್ಥ್ಯವಿರುವ ವಿಕ್ರಮ್‌-2 ಮತ್ತು 815 ಕೆ.ಜಿ. ಭಾರ ಹೊರುವ ಸಾಮರ್ಥ್ಯದ ವಿಕ್ರಮ್‌-3 ರಾಕೆಟ್‌ಗಳನ್ನು ಸಹ ಸ್ಕೈರೂಟ್‌ ಅಭಿವೃದ್ಧಿಪಡಿಸಿದೆ.

ಇಲ್ಲಿನ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆದ ಉಡ್ಡಯನ ಕಾರ್ಯಾಚರಣೆಯಲ್ಲಿ ಇಸ್ರೊ ಅಧ್ಯಕ್ಷ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರದ (ಇನ್‌ಸ್ಪೇಸ್‌) ಅಧ್ಯಕ್ಷ ಪವನ್ ಗೋಯೆಂಕಾ ಇದ್ದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾತ್ರವೇ ಈವರೆಗೆ ಉಡ್ಡಯನ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ಖಾಸಗಿ ಕಂಪನಿಗಳು ಸಹ ತಮ್ಮ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೊ ರಾಕೆಟ್‌ಗಳನ್ನು ಬಳಸಿ
ಕೊಳ್ಳಬೇಕಿತ್ತು. ಈಗ ಸ್ಕೈರೂಟ್‌ನಂತಹ ಖಾಸಗಿ ಕಂಪನಿಗಳಿಗೆ ಅಂತಹ ಸೇವೆ ನೀಡಲು ಅವಕಾಶ ದೊರೆತಿದೆ.

‘ಭಾರತದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದು ಐತಿಹಾಸಿಕ ಕ್ಷಣ ಮತ್ತು ಮಹತ್ವದ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಕೇಂದ್ರದಿಂದ ಬಾಲಿಕಾ ಸಮೃದ್ಧಿ ಯೋಜನೆ

ನಿಮಗೆ ಮಗಳಿದ್ದರೆ, ಹೆಣ್ಣುಮಕ್ಕಳ ಉತ್ತಮ ಜೀವನ, ಪಾಲನೆ ಮತ್ತು ಅಭಿವೃದ್ಧಿಗಾಗಿ, ಭಾರತ ಸರ್ಕಾರವು ಆಗಾಗ್ಗೆ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಲು ಸಿದ್ಧವಾಗಿದೆ.

ಮಗಳ ಉತ್ತಮ ಜೀವನಕ್ಕಾಗಿ ಒಂದು ಯೋಜನೆಯೆಂದರೆ ಬಾಲಿಕಾ ಸಮೃದ್ಧಿ ಯೋಜನೆ
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಕಾರಾತ್ಮಕ ಬದಲಾವಣೆಯನ್ನು ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಕ್ಟೋಬರ್ 2, 1997 ರಂದು ಇದನ್ನು ಪ್ರಾರಂಭಿಸಿತು. ಈ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಭಾರತ ಸರ್ಕಾರದಿಂದ ಪ್ರಯೋಜನ ಪಡೆಯುತ್ತವೆ. ಅಲ್ಲದೆ, ಈ ಯೋಜನೆಯು ಆಗಸ್ಟ್ 15, 1997 ರ ನಂತರ ಮಗಳು ಜನಿಸಿದ ಮನೆಯಲ್ಲಿ ಜನಿಸಿದ ಕುಟುಂಬಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಯೋಜನೆಯಡಿ, ಗರಿಷ್ಠ ಒಂದು ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಮಾತ್ರ ಇದರ ಪ್ರಯೋಜನವನ್ನು ಪಡೆಯಬಹುದು.

ಬಾಲಿಕಾ ಸಮೃದ್ಧಿ ಯೋಜನೆಯ ಲಾಭವನ್ನು ಪಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳು ಯಾವುದೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಗಳ ಹೆಸರನ್ನು ಬರೆಯಬಹುದು. ಫಲಾನುಭವಿ ಕುಟುಂಬದ ಅರ್ಜಿಯನ್ನು ಅಂಗನವಾಡಿ ಕೇಂದ್ರದ ಮೂಲಕ ಪೂರ್ಣಗೊಳಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ನೀವು ಇದನ್ನು ಮಾಡಬಹುದು. ಅಲ್ಲದೆ, ಫಲಾನುಭವಿ ಕುಟುಂಬಗಳು ಸಹ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ಎಲ್ಲಾ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ…

ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ಗೆ ಭಾರತದಿಂದ ಮಾತಿನ ಚಾಟಿಯೇಟು

0

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅನಾವಶ್ಯಕವಾಗಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾವಿಸಿದ ಪಾಕಿಸ್ಥಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿತು.

ಬಹುಪಕ್ಷೀಯ ವೇದಿಕೆಯ ಪಾವಿತ್ರ್ಯವನ್ನು ಹಾಳು ಮಾಡುವ ಅದರ ಕೆಟ್ಟ ಅಭ್ಯಾಸವು ಅಂತಾರಾಷ್ಟ್ರೀಯ ಸಮುದಾಯದ ಸಾಮೂಹಿಕ ತಿರಸ್ಕಾರಕ್ಕೆ ಅರ್ಹವಾಗಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗಳ ಕುರಿತ ಅತೀ ಮುಖ್ಯ ವಿಷಯದ ಬಗ್ಗೆ ಚರ್ಚಿಸಲು ಪ್ರಸ್ತುತ ಸಭೆ ನಡೆಯುತ್ತಿದೆ. ಆದರೆ ಇದರ ಮಹತ್ವವನ್ನು ಅರಿಯದ ಪಾಕ್‌ ಪ್ರತಿನಿಧಿಗಳು ಅನಾವಶ್ಯಕವಾಗಿ ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾವಿಸುತ್ತಿದ್ದಾರೆ,’ ಎಂದು ಬೇಸರ ವ್ಯಕ್ತಪಡಿಸಿದರು.

“ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಸುಳ್ಳುಗಳನ್ನು ಹರಡುವ ಪಾಕ್‌ ಚಟವು ತಿರಸ್ಕಾರಕ್ಕೆ ಯೋಗವಾದದ್ದು, ಮತ್ತು ಅದು ಸ್ವಲ್ಪ ಸಹಾನುಭೂತಿಯನ್ನು ಕೂಡ ಬಯಸುತ್ತದೆ ಎಂದು ಹೇಳಿದರು.

ಫೇಸ್ ಬುಕ್ ಪ್ರೊಫೈಲ್ ನಲ್ಲಿ ಡಿ 1 ರಿಂದ ಬದಲಾವಣೆ ಜಾರಿ

0

ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಇದೇ ಡಿಸೆಂಬರ್‌ 1 ರಿಂದ ಮಹತ್ವದ ಬದಲಾವಣೆ ಆಗಲಿದೆ. ಬಳಕೆದಾರರು ತಮ್ಮ ಫ್ರೊಫೈಲ್ ಬಯೋ‌ದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಮೆಟಾ ಸಂಸ್ಥೆ ಮುಂದಾಗಿದೆ.

ಪ್ರೊಫೈಲ್ ಮಾಹಿತಿಯನ್ನು ಯಾರು ನೋಡುತ್ತಾರೆ ಎಂಬುದನ್ನು ನಿರ್ಧರಿಸುವ ಬಳಕೆದಾರರ ಹಕ್ಕಿನ ಮೇಲೆ ಈ ಹೊಸ ಫೀಚರ್ಸ್‌ ಬದಲಾವಣೆ ಬೀರುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಡಿ. 1 ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಫೇಸ್‌ಬುಕ್ ತಿಳಿಸಿದ್ದು, ಈ ಬದಲಾವಣೆಯಿಂದ ಪ್ರೊಫೈಲ್ ಸ್ಕ್ರೋಲಿಂಗ್‌ನ ಉದ್ದವನ್ನು ಕಡಿಮೆ ಮಾಡಿದಂತಾಗುತ್ತದೆ.

ಫೇಸ್‌ಬುಕ್‌ ಆರಂಭಗೊಂಡಾಗ ಖಾಸಗಿತನ ರಕ್ಷಣೆ, ಮಾಹಿತಿ ಸೋರಿಕೆಯ ಅಂಕುಶವು ದೊಡ್ಡ ಸಮಸ್ಯೆಯಾಗಿ ಇರಲಿಲ್ಲ. ಆಗ ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಾಹಿತಿ ಸೋರಿಕೆ ಹಾಗೂ ಖಾಸಗಿತನವು ಗಂಭೀರ ವಿಚಾರವಾಗಿದೆ ಎಂದು ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ ತಿಳಿಸಿದೆ.

ಇದರ ಜೊತೆಗೆ ತೆಗೆ ವೈಯಕ್ತಿಕ ಮಾಹಿತಿಯ ದುರ್ಬಳಕೆಯೂ ಆಗುತ್ತಿದೆ. ಹೀಗಾಗಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಪ್ರೊಫೈಲ್‌ನಲ್ಲಿ ಸಂಗ್ರಹಿಸದಿರಲು ಸಂಸ್ಥೆಯು ನಿರ್ಧರಿಸಿದೆ. ಅದರಲ್ಲೂ ಇಂದು ಧರ್ಮ, ರಾಜಕೀಯ, ಲೈಂಗಿಕತೆ ಇವೆಲ್ಲವೂ ಕೆಟ್ಟ ರೀತಿಯಲ್ಲಿ ಬಳಕೆ ಆಗುತ್ತಿರುವುದನ್ನು ಕಾಣಬಹುದು. ಇವೆಲ್ಲವೂ ಜನರಿಗೆ ಬೇಕಾಗಿರುವ ಒಳ್ಳೆಯ ಸಂಗತಿಗಳೇ ಆದರೂ ಕೆಲವರು ಈ ವಿಷಯವನ್ನು ಬೇರೆಯದೇ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾರ್ಕ್‌ ಝುಕರ್‌ಬರ್ಗ್‌ ಒಡೆತನದ ಮೆಟಾ ತಿಳಿಸಿದೆ.

ಈವರೆಗೂ ಇತರೆ ಸಾಮಾಜಿಕ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿಯ ವಿಷಯಗಳಿಗೆ ಆಸ್ಪದವಿಲ್ಲ. ಫೇಸ್‌ಬುಕ್‌ ಒಂದರಲ್ಲೇ ಈ ರೀತಿಯ ವಿಷಯಕ್ಕೆ ಅನುಮತಿಸಿತ್ತು. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್‌ಬುಕ್‌ ಹೊಸದೊಂದು ಹೆಜ್ಜೆ ಇರಿಸಿದೆ. ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್‌ಬುಕ್‌ ಮಹತ್ವದ ಹೆಜ್ಜೆ ಇರಿಸಿದೆ. ಅದರಲ್ಲೂ ಫೇಸ್‌ಬುಕ್‌ನಲ್ಲಿ ಕೆಲವು ಮಾಹಿತಿಯನ್ನು ಬೇಕಾದ ಹಾಗೆ ಬರೆದುಕೊಳ್ಳುತ್ತಿದ್ದರು. ಇದಕ್ಕೆ ಈಗ ನಾಂದಿ ಹಾಡಿದಂತಾಗುತ್ತದೆ.

ಎಲೆಚುಕ್ಕೆ ರೋಗ ಬಾಧಿತ ಅಡಿಕೆ ತೋಟಗಳಿಗೆ ಪರಿಣಿತರ ಭೇಟಿ

0

ಮಲೆನಾಡಿನ ಆರ್ಥಿಕತೆಗೆ ಬೆನ್ನೆಲುಬು ಆಗಿದ್ದಂತಹ ಅಡಿಕೆ ಬೆಳೆಗೆ ಈಗ ಹೊಸ ರೋಗ ಕಾಟದ ಕಾಟ ಹೆಚ್ಚಾಗಿದೆ.

ಹಳದಿ ಎಲೆ, ಕೊಳೆ, ಎಲೆಚುಕ್ಕಿ, ಹಿಡಿಮುಂಡಿಗೆ, ಹಿಂಗಾರ ಒಣಗುವ ರೋಗಗಳಿಂದ ಕಂಗಾಲಾಗಿರುವ ರೈತರಿಗೆ ಕಾಂಡ ಕೊರಕ ಹುಳು ಬಾಧೆ ಇನ್ನಷ್ಟು ಆತಂಕಕ್ಕೆ ಸಿಲುಕಿಸಿದೆ.

ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ತೋಟಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. 3ರಿಂದ 4 ವರ್ಷಗಳ ಗಿಡಗಳು ಹುಳುಗಳ ಬಾಧೆಗೆ
ಒಣಗಿ ಬುಡ
ಮೇಲಾಗುತ್ತಿವೆ. ರೋಗ ತಗುಲಿರುವ ಸಸಿಗಳಲ್ಲಿ ಅಂಟಿನ ಅಂಶಗಳ ಮೂಲಕ ಗಮ್‌ ರೀತಿ ಕಾಣಿಸಿಕೊಳ್ಳುತ್ತದೆ. ಅಂಟಿನ ಅಂಶದ ಕೆಳಗೆ ರಂಧ್ರಗಳು ನಿರ್ಮಾಣವಾಗಿರುವುದನ್ನು ರೈತರು ಗುರುತಿಸಬೇಕು.

ಸ್ಥಳಕ್ಕೆ ತೋಟಗಾರಿಕೆ
ಇಲಾಖೆ, ಕೃಷಿ ಮತ್ತು ಸೀಬಿನಕೆರೆ ತೋಟಗಾರಿಕಾ ಸಂಶೋಧನಾ
ಕೇಂದ್ರದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಇದು ರಂಧ್ರ ಕೊರೆಯುವ ಹುಳು ಎಂದು ಗುರುತಿಸಲಾಗಿದೆ. ಸದ್ಯ ನಿಯಂತ್ರಣಕ್ಕೆ ಕ್ಲೋರೊಫಿರಫಸ್‌ 20ಇಸಿ – 3ಮಿ.ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ
ಕಾಂಡಕ್ಕೆ ಉಪಚಾರ ಮಾಡುವ ಮೂಲಕ ನಿಯಂತ್ರಿಸಬಹುದು.
15 ದಿನಗಳ ನಂತರ ಇದೆ
ದ್ರಾವಣದಲ್ಲಿ ಬಟ್ಟೆಯನ್ನು ನೆನೆಸಿ ಕೀಟದಿಂದ ಭಾದೆಗೊಳಗಾದ ಅಡಿಕೆ ಕಾಂಡದ ಸುತ್ತಲು
ಕಟ್ಟಬೇಕು. ಅಥವಾ ಹನಿಯಾಗಿರುವ ಕಾಂಡಗಳಿಗೆ ಔಷಧಿಯನ್ನು ಬಳಿಯಬೇಕು ಎಂದು ಮಾಹಿತಿ ನೀಡಿದ್ದಾರೆ.

ಇ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗದಿದ್ದರೆ ವ್ಯತಿರಿಕ್ತ ಪರಿಣಾಮ- ಡಾ.ಸರ್ಜಿ

0

ಇ- ತ್ಯಾಜ್ಯದ ಸಮರ್ಪಕ ವಿಲೇವಾರಿ ಮಾಡದಿದ್ದರೆ ಭೂಮಿಯ ಜೊತೆಗೆ ನಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಎಚ್ಚರಿಸಿದರು.

ನಗರದ ಹೊರ ವಲಯದ ಪೋದಾರ್‌ ಇಂಟರ್ ನ್ಯಾಷನಲ್‌ ಸ್ಕೂಲ್‌ನಲ್ಲಿ ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಉತ್ನನ್ನವಾಗುತ್ತಿರುವ ಇ- ವೇಸ್ಟ್ ನಲ್ಲಿ ಕೇವಲ ಶೇ. 18 ರಷ್ಟು ಮಾತ್ರ ಮರು ಬಳಕೆ ಆಗುತ್ತಿದೆ. ಉಳಿದೆಲ್ಲವೂ ಭೂಮಿಗೆ ಸೇರುತ್ತಿದೆ. ಟಿವಿ, ಮೊಬೈಲ್‌ಫೋನ್‌, ಚಾರ್ಜರ್‌,ಲ್ಯಾಪ್‌ಟಾಪ್‌, ಐರನ್‌ ಬಾಕ್ಸ್ ಸೇರಿದಂತೆ ಹಾಳಾದ ಎಲೆಕ್ಟ್ರಾನಿಕ್‌ ವಸ್ತುಗಳ ಮರು ಬಳಕೆ ಆಗಬೇಕು. ರೀ ಸೈಕ್ಲಿಂಗ್‌ ಮೂಲಕ ಮರು ಉತ್ಪನ್ನಗಳನ್ನು ತಯಾರಿಸಬೇಕು. ದಿನೇ ದಿನೇ – ತ್ಯಾಜ್ಯ ಹೆಚ್ಚುತ್ತಿದೆ. ಇದರ ಅಸಮರ್ಪಕ ನಿರ್ವಹಣೆಯಿಂದ ಭೂಮಿಯ ಫಲವತ್ತೆ ಕ್ಷೀಣಿಸುತ್ತಿದೆ. ರಾಸಾಯನಿಕಗಳು ಹಾಗೂ ಇ-ತ್ಯಾಜ್ಯ ಭೂಮಿ ಸೇರುವುದರಿಂದ ಆಹಾರೋತ್ಪನ್ನಗಳ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗೆ ನಾವು ಸೇವಿಸುವ ಆಹಾರ, ನೀರು ಹಾಗೂ ಗಾಳಿ ಕೂಡ ಮಲಿನವಾಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ನಿರ್ವಹಣೆ ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಜಿ ಫೌಂಡೇಶನ್‌ ಹಮ್ಮಿಕೊಂಡು ಬರುತ್ತಿದೆ. ಪೋಷಕರು ಹಾಗೂ ಮಕ್ಕಳು ಈ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ನೆನಪಿ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ಟಿಪ್ಸ್

ಇದೇ ಸಂದರ್ಭ ಡಾ.ಧನಂಜಯ ಸರ್ಜಿ ಅವರು ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಿ ಕೊಳ್ಳಲು ಒಂದಷ್ಟು ಟಿಪ್ಸ್ ನೀಡಿದರು.

ಮನುಷ್ಯನಿಗೆ ಮರೆವು ಕಾಯಿಲೆ ಎನ್ನುವುದಕ್ಕಿಂತ ದೇವರು ಕೊಟ್ಟ ವರ. ಜೀವನದಲ್ಲಿ ನಡೆಯುವ ಘಟನೆಗಳು,ಆತಂಕದ ಪ್ರಸಂಗಗಳು ನೆನಪಿನಲ್ಲಿದ್ದು ಬಿಟ್ಟರೆ ನಾವು ಖಂಡಿತಾ ಡಿಪ್ರೆಶನ್‌ಗೆ ಹೋಗಬೇಕಾಗುತ್ತದೆ. ಹಾಗಾಗಿ ಒಳ್ಳೆಯ ವಿಷಯ ಜ್ಞಾಪಕದಲ್ಲಿರಲಿ, ಕೆಟ್ಟ ವಿಷಯವನ್ನಂತೂ ಮರೆಯುವುದೇ ಲೇಸು.ಮನುಷ್ಯನಲ್ಲಿ ಒಟ್ಟು ಮೂರು ತರಹದ ಜ್ಞಾಪಕ ಶಕ್ತಿಗಳಿವೆ. ಮೊದಲನೆಯದು ವಿಶುಯಲ್‌ ಮೆಮೋರಿ ( ನೋಡಿ ಕಲಿ) ಎರಡನೆಯದು ಆಡಿಟರಿ ಮೆಮೋರಿ (ಕೇಳಿ ಕಲಿ), ಮೂರನೆಯದು ಕೈನೆಸ್ಥೆಟಿಕ್ ಮೆಮೋರಿ (ಬರೆದು ಕಲಿ). ಮೊದಲನೇಯದು ವಿಶುಯಲ್‌ ಮೆಮೋರಿ. ಈ ನೆನಪಿನ ಶಕ್ತಿ ಉತ್ತಮವಾಗಿದ್ದವರಿಗೆ ಯಾವುದೇ ಸುಂದರ ವಸ್ತುಗಳಿರಲಿ, ನಯನ ಮನೋಹರ ತಾಣಗಳಿರಲಿ, ಪ್ರಕೃತಿ ಸೊಬಗಿರಲಿ, ಕಣ್ಣಿಗೆ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.ಎರಡನೇಯದು ಆಡಿಟರಿ ಮೆಮೊರಿ. ಈ ಜ್ಞಾಪಕ ಶಕ್ತಿ ಚೆನ್ನಾಗಿದ್ದವರಲ್ಲಿ ಶಾಲೆಗಳಲ್ಲಿರಬಹುದು, ಹೊರಾಂಗಣದಲ್ಲಿರಬಹುದು, ಕೇಳಿ ಕಲಿಯುವಂತಹ ಮನಸ್ಥಿತಿ ಮತ್ತು ಸ್ವಭಾವವೇ ಹೆಚ್ಚು. ಇನ್ನು ಮೂರನೆಯದು, ಕೈನೆಸ್ಥೆಟಿಕ್ ಮೆಮೊರಿ. ಇವರು ಬರೆದು ಕಲಿಯುವಂತವರು. ಹಾಗೆಯೇ ಮೆಮೋರಿ ಹೆಚ್ಚಿಸಲು ಶಾರ್ಟ್‌ ಟರ್ಮ್‌ ಮತ್ತು ಲಾಂಗ್‌ ಟರ್ಮ್‌ ಮೆಮೋರಿ ಟೆಕ್ನಿಕ್‌ಗಳನ್ನು ಪ್ರಯೋಗಿಸಬೇಕಷ್ಟೇ.

ಶಾರ್ಟ್‌ಟರ್ಮ್‌ ಮೆಮೋರಿಯೆಂದರೆ ಒಂದು ವಾರದಿಂದ ತಿಂಗಳ ತನಕ ನೆನೆಪಿಟ್ಟುಕೊಳ್ಳುವಂತಹ ಕಲೆ. ಒಮ್ಮೆ ಓದಿದ್ದನ್ನು ಮತ್ತೆ 20 ನಿಮಿಷ ಬಿಟ್ಟು ಮನನ ಮಾಡಿಕೊಳ್ಳಬೇಕು. ನಂತರ 8 ರಿಂದ 12 ಗಂಟೆ ಒಳಗೆ ಮತ್ತೊಂದು ಬಾರಿ ಓದಬೇಕು, ಹಾಗೆಯೇ 24 ತಾಸುಗಳ ನಂತರ ಮತ್ತೊಮ್ಮೆ ಓದಿ ಪುನರ್‌ ಮನನ ಮಾಡಿಕೊಳ್ಳಬೇಕು. ಇನ್ನು ಲಾಂಗ್‌ ಟರ್ಮ್‌ ಮೆಮೋರಿ. ಇವಾಗ ಓದಿದ್ದು ನೆನಪಲ್ಲುಳಿಯಬೇಕೆಂದರೆ ಓದಿದ ನಂತರ 20 ನಿಮಿಷ ಮತ್ತು 24 ತಾಸು ಬಿಟ್ಟು ಮತ್ತೆ ಮನನ ಮಾಡಿಕೊಳ್ಳಬೇಕು. ಮೂರು ವಾರಗಳ ನಂತರ ಮತ್ತೆ ಓದಿದರೆ ಜ್ಞಾನಪಕ ಶಕ್ತಿ ಹೆಚ್ಚಾಗುತ್ತದೆ. ಈ ಕ್ರಮದಲ್ಲಿ ಮೆಲುಕು ಹಾಕಿದಾಗ ಮೂರು ತಿಂಗಳಿಂದ ಆರು ತಿಂಗಳ ತನಕ ಜ್ಞಾಪಕದಲ್ಲುಳಿಯುತ್ತದೆ ಎಂದು ಸಲಹೆ ನೀಡಿದರು.
ಅದೇ ರೀತಿ ಮೂರನೆಯದು ಕೈನೆಸ್ಥೆಟಿಕ್ ಮೆಮೊರಿ. ಓದುವಾಗ ಪ್ರಮುಖವಾದ ಪಾಯಿಂಟ್‌ಗಳನ್ನು ಬರೆದಿಟ್ಟುಕೊಳ್ಳಬೇಕು. ಹೀಗೆ ಬರೆದು ಅಭ್ಯಾಸ ಮಾಡುವುದರಿಂದ ಮಕ್ಕಳಿಗೆ ಸದಾ ನನೆಪಲ್ಲಿರುತ್ತದೆ. ಈ ರೀತಿ ಅಭ್ಯಾಸ ಮಾಡಿದರೆ ಸಾಮಾನ್ಯವಾಗಿ ತೆಗೆಯುವ ಅಂಕಕ್ಕಿಂತ ಶೇ. 10 ರಿಂದ 20 ರಷ್ಟು ಹೆಚ್ಚು ತೆಗೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಸುಕೇಶ್‌ ಶೇರಿಗಾರ, ಉಪ ಪ್ರಾಂಶುಪಾಲರಾದ ನೇತ್ರಾವತಿ ಹಾಗೂ ಸಿಬ್ಬಂದಿ ವರ್ಗದವರು , ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಿಜಿಟಲ್ ಜೀವನ ಪ್ರಮಾಣಪತ್ರವನ್ನ ಮನೆಯಿಂದಲೇ ನೀಡಬಹುದು

ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಪಿಂಚಣಿದಾರರು ಐರಿಸ್ ಸ್ಕ್ಯಾನರ್ ಮೂಲಕ ಫಿಂಗರ್ ಪ್ರಿಂಟ್ ಸ್ಕ್ಯಾನರ್‍ನಂತಹ ಆಧಾರ್ ಆಧಾರಿತ ಬಯೋಮೆಟ್ರಿಕ್ ಸಾಧನಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಕ್ಷೇತ್ರೀಯ ಭವಿಷ್ಯನಿಧಿಯ ಆಯುಕ್ತರಾದ ಕೆ.ವೆಂಕಟಸುಬ್ಬಯ್ಯ ಅವರು ತಿಳಿಸಿದ್ದಾರೆ.

ವೃದ್ಧಾಪ್ಯ ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಕೆಲವು ಪಿಂಚಣಿದಾರರು ತಮ್ಮ ಬಯೋಮೆಟ್ರಿಕ್ಸ್ ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಜೀವಂತ ಪ್ರಮಾಣ ಪತ್ರವನ್ನು ನವೀಕರಿಸಲು ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆ, ಸಾಮಾನ್ಯ ಸೇವಾಕೇಂದ್ರ, ಪೋಸ್ಟ್ ಆಫೀಸ್ ಇತ್ಯಾದಿಗಳಂತಹ ಯಾವುದೇ ಏಜೆನ್ಸಿಗಳನ್ನು ಭೌತಿಕವಾಗಿ ಭೇಟಿ ನೀಡಬೇಕು.

ಪಿಂಚಣಿದಾರರಿಗೆ ಅನುಕೂಲವಾಗುವಂತೆ, ಯುಐಡಿಅಐ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ಫೇಸ್ ದೃಢೀಕರಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ವೃದ್ಧ್ಯಾಪ ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಪಿಂಚಣಿದಾರರು ತಮ್ಮ ಬಯೋಮೆಟ್ರಿಕ್ ಸೆರೆಹಿಡಿಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಮುಖದ ದೃಢೀಕರಣ ತಂತ್ರಜ್ಞಾನದ ಬಳಕೆಯು ವಿಶೇಷವಾಗಿ ಸಹಾಯಕವಾಗಬಹುದು. ಪಿಂಚಣಿದಾರರು ತಮ್ಮ ಡಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು ಸಲ್ಲಿಸಬಹುದು.

ಮೊಬೈಲ್‍ನಲ್ಲಿ ಜೀವನ್ ಪ್ರಮಾಣ ಪತ್ರ ಫೇಸ್ ಅಪ್ಲಿಕೇಷನ್‍ಗಾಗಿ www.jeevanpramaan.gov.in/pachage/download ಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.

ಕೋಣಂದೂರು ಆಸ್ಪತ್ರೆ ಉನ್ನತೀಕರಿಸಿದ ಸೀಎಂಗೆ ಜ್ಞಾನೇಂದ್ರ ಕೃತಜ್ಞತೆ

0

ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ
ರಾಜ್ಯ ಸಚಿವ ಸಂಪುಟದಲ್ಲಿ, ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀ ಕರಿಸಲು ಅಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ಉಪಸ್ಥಿತರಿದ್ದ ಸಂಪುಟದ ಸಭೆ ಈ ನಿರ್ಧಾರ ಕೈಗೊಂಡಿದ್ದು ಬಹಳ ದಿನಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ.

2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ಹೆಚ್ಚಿನ ಕಾರ್ಯ ಒತ್ತಡವಿರುವ ಒಟ್ಟು 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 1000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉನ್ನತೀಕರಿಸುವ ಯೋಜನೆಯನ್ನು ಘೋಷಿಸಿದ್ದರು.

ಈ ಯೋಜನೆಯ ಲಾಭ ತಾಲೂಕಿನ ಜನತೆಗೆ ಪಡೆದುಕೊಳ್ಳಲು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ವಿಶೇಷ ಮುತುವರ್ಜಿ ವಹಿಸಿದ್ದರು.

ತಾಲೂಕಿನ ಜನತೆಯ ಬಹಳ ದಿನಗಳ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ಕೃತಜ್ಞತೆ ಸಲ್ಲಿಸಿದ್ದಾರೆ.