Friday, August 7, 2026
Friday, August 7, 2026
Home Blog Page 132

VISL ಡಾ.ಅಂಬೇಡ್ಕರ್ ಮತ್ತು ವಿಶ್ವೇಶ್ವರಯ್ಯನವರ ಜೀವನದ ವಿಚಾರಗಳು ಮಕ್ಕಳಿಗೆ ಅಗತ್ಯ- ಬಿ.ವಿಶ್ವನಾಥ್

0

VISL ವಿಐಎಸ್‌ಎಲ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ದ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಹೆಚ್.ಆರ್) ಮತ್ತು ಪ್ರಭಾರಿ ಕಾರ್ಯಪಾಲಕ ನಿರ್ದೇಶಕರು, ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು ಪ್ರಭಾರಿ (ಸ್ಥಾವರ), ಶ್ರೀ ಎಂ. ಸುಬ್ಬರಾವ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ), ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು ಕಾರ್ಮಿಕರ ಸಮನ್ವಯಾಧಿಕಾರಿ, ಶ್ರೀ ನವೀನ್ ರಾಹುಲ್, ಸಹಾಯಕ ಮಹಾಪ್ರಬಂಧಕರು (ನಗರಾಡಳಿತ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಅಧ್ಯಕ್ಷರು, ಅಸೋಸಿಯೇಷನ್, ಶ್ರೀ ಪಿ. ಅಮೃತ್ ಕುಮಾರ್, ಅಧ್ಯಕ್ಷರು, ಕಾರ್ಮಿಕರ ಸಂಘ, ಶ್ರೀ ಅಜಯ್ ಡಿ. ಸೋಂಕುವಾರ್, ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಮರ್ಪಿಸಿದರು.

ಶ್ರೀ ಚಂದ್ರಕಾಂತ್, ಸಂವಿಧಾನದ ಪ್ರಸ್ತಾವನೆಯನ್ನು ಓದಿದರು ಹಾಗೂ ಶ್ರೀ ಎಮ್.ಎಲ್. ಯೋಗೀಶ್, ಸಹಾಯಕ ಪ್ರಬಂಧಕರು (ಮಾನವ ಸಂಪನ್ಮೂಲ) ನೆರೆದವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು ಮತ್ತು ವಂದನಾರ್ಪಣೆಗೈದರು.

ಶ್ರೀ ಬಿ. ವಿಶ್ವನಾಥ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಡಾ|| ಬಿ.ಆರ್. ಅಂಬೇಡ್ಕರ್ ಹಾಗೂ ಸರ್.ಎಂ.ವಿಶ್ವೇಶ್ವರಾಯ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು ಮತ್ತು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಕಲಿಸಲು ಕರೆಯಿತ್ತರು.

ಈ ಸಂದರ್ಭದಲ್ಲಿ ಶ್ರೀ ಟಿ. ರವಿಚಂದ್ರನ್, ಶ್ರೀ ನವೀನ್ ರಾಹುಲ್, ಶ್ರೀ ಪಿ. ಅಮೃತ್ ಕುಮಾರ್ ಮಾತನಾಡಿದರು.

VISL ಶ್ರೀ ಜಗದೀಶ್ ಬಡಿಗೇರ್, ಶ್ರೀ ಕೆ. ಲಕ್ಷ್ಮಣ, ಶ್ರೀ ಎಲ್. ಮಧುಕುಮಾರ್, ಶ್ರೀಮತಿ ಪ್ರೇಮಬಾಯಿ, ಶ್ರೀಮತಿ ರಮ್ಯ, ಶ್ರೀ ಬಿ.ಎಸ್. ವಸಂತ್, ಶ್ರೀಮತಿ ತ್ರಿವೇಣಿ, ಶ್ರೀಮತಿ ಹೇಮಾವತಿ ಮತ್ತು ಕು.ಜಾಹ್ನವಿ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

2025-26ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ಕಾರ್ಮಿಕರ ಮಕ್ಕಳಿಗೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಶ್ರೀಮತಿ ರಮ್ಯಾ, ಶ್ರೀಮತಿ ಶೈಲಶ್ರೀ ಮತ್ತು ಶ್ರೀಮತಿ ಪ್ರೇಮಬಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಿISಐ ಮಾನವಸಂಪನ್ಮೂಲ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಅಕ್ಷಯ ತೃತೀಯ: ಬಾಲ್ಯ ವಿವಾಹ ಮಾಡುವುದು ವಾಡಿಕೆ, ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ : ಜಿಲ್ಲಾ ರಕ್ಷಣಾಧಿಕಾರಿ ಸೂಕ್ತ ಕ್ರಮ

0

ಅಕ್ಷಯ ತೃತೀಯ ದಿನದಂದು ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಗಳಿರುವುದರಿಂದ, ಇದನ್ನು ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಡಳಿತ ಸನ್ನದ್ಧವಾಗಿದೆ. ಬಾಲ್ಯವಿವಾಹವು ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದು ಮಕ್ಕಳ ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಅಕ್ಷಯ ತೃತೀಯದಂತಹ ಶುಭ ಮುಹೂರ್ತದ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದಿನಾಂಕ 20-04-2026 ರಂದು ವಿಶೇಷ ನಿಗಾ: ಏಪ್ರಿಲ್ 20 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಈ ದಿನದಂದು ನಡೆಯುವ ವಿವಾಹಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಬಾಲ್ಯವಿವಾಹ ಮಾಡುವುದು ಅಥವಾ ಅದಕ್ಕೆ ಪ್ರೇರಣೆ ನೀಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದ್ದಾರೆ.
ಮಾಹಿತಿ ನೀಡಲು ಸಹಾಯವಾಣಿ:
ನಿಮ್ಮ ಸುತ್ತಮುತ್ತ ಎಲ್ಲಿಯಾದರೂ ಬಾಲ್ಯವಿವಾಹ ನಡೆಯುವ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸರ್ಕಾರ ನೇಮಿಸಲ್ಪಟ್ಟ ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಅಥವಾ ಮಕ್ಕಳ ಸಹಾಯವಾಣಿ: 1098
ಪೊಲೀಸ್ ಸಹಾಯವಾಣಿ: 112 ಕರೆ ಮಾಡಿ ಮಾಹಿತಿ‌ನೀಡಬೇಕು.
ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಬಾಲ್ಯವಿವಾಹಗಳನ್ನು ತಡೆಗಟ್ಟುವ ಮೂಲಕ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.

ನಾನು ಕಂಡಂತೆ ಬೆಳಗೆರೆಯ ಬಿಳಿ ಉಡುಪಿನ ಬೆರಗು ಮನುಷ್ಯ

0

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

ಅಧ್ಯಾತ್ಮ  ರಶ್ಮಿ -3

“ಶ್ವೇತವಸ್ತ್ರದ ಸಂತ – ಬೆಳಗೆರೆ ಕೃಷ್ಣಶಾಸ್ತ್ರಿಗಳು”

    ಶಾಸ್ತ್ರಿಗಳು ಸ್ವಭಾವತಃ ಗಂಭೀರ ಮತ್ತು ಭಾವುಕರು. ಭಗವದ್ಗೀತೆ ಮನುಕುಲಕ್ಕೆ ಒಂದು ಆದರ್ಶದ ಗ್ರಂಥ ಎಂಬುದು ಅವರ ಅನುಭವವಾಗಿತ್ತು. ಅವರು ದೇವುಡು ನರಸಿಂಹ ಶಾಸ್ತ್ರಿಗಳಂತಹ ದೊಡ್ಡ ದೊಡ್ಡ ವಿದ್ವಾಂಸರ ಒಡನಾಟ ಹೊಂದಿದ್ದವರು. ಒಂದು ಕಾರ್ಯಕ್ರಮದಲ್ಲಿ ದೇವುಡುರವರು ʼಸ್ಥಿತಪ್ರಜ್ಞೆʼ ಬಗ್ಗೆ ಉಪನ್ಯಾಸ ನೀಡುವುದು ಅವರ ವಿಷಯವಾಗಿತ್ತು. ಮಾತನಾಡುತ್ತಾ ಮಾತನಾಡುತ್ತಾ ಅಲ್ಲಿಯ ಒಬ್ಬ ವ್ಯಕ್ತಿಯು ಒಂದು ಕಾಗದ ತಂದು ಕೊಡುತ್ತಾನೆ. ಅದನ್ನು ನೋಡಿ ಜೇಬಿನಲ್ಲಿ ಇರಿಸಿಕೊಂಡು, ಮತ್ತೆ ಅದೇ ವಿಷಯವನ್ನು ಒಂದೂವರೆ ಎರಡುಗಂಟೆಗಳ ಕಾಲ ಮುಂದುವರೆಸಿ. ನಂತರ ತ್ವರಿತವಾಗಿ ಹೊರಟು ಬಂದರು. ಅದೇ ಕಾರ್ಯಕ್ರಮದಲ್ಲಿ ಶಾಸ್ತ್ರಿಗಳೂ ಸಹಾ ಪಾಲ್ಗೊಂಡಿದ್ದರು. ಅವರನ್ನೂ ಕರೆದುಕೊಂಡು ಬಂದು ಬಿಟ್ಟರು. ರಾಮಯ್ಯ ಪಾರ್ಕಿನ ಕಡೆಗೆ ಬಂದಾಗ ಸಹಜವಾಗಿ ಶಾಸ್ತ್ರಿಗಳು “ಯಾಕೆ ಸರ್‌ ಹಾಗೇ ಅರ್ಧ ಕಾರ್ಯಕ್ರಮದಲ್ಲಿಯೇ ಹೊರಟುಬಿಟ್ಟಿರಲ್ಲ”ಎಂದರು. ಅದಕ್ಕೆ ಮಾತನಾಡದೇ ದೇವುಡುರವರು ತಮ್ಮ ಜೇಬಿನಲ್ಲಿದ್ದ ಕಾಗದ ಇವರ ಕೈಗಿತ್ತರು. ಅದನ್ನು ನೋಡಿ ಶಾಸ್ತ್ರಿಗಳು ಒಂದು ನಿಮಿಷ ಅಚ್ಚರಿ ತುಂಬಿದ ಮೌನಿಗಳಾದರು. ಯಾಕೆ ಹಾಗಾಯ್ತು ತಾತ ? ಎಂದು ನಾನು ಕೇಳಿದಾಗ ಹೇಳಿದರು. ಅದರಲ್ಲಿ ದೇವುಡು ಅವರ ಮಗ ಹಾರ್ಟ ಅಟ್ಯಾಕ್‌ನಿಂದ ತೀರಿಹೋಗಿದ್ದರು ಎಂದು ಬಂದ ಟೆಲಿಗ್ರಾಂ ಕಣೋ ಅದು ಎಂದರು. “ದುಃಖೇಶ್ವನುದ್ವಿಘ್ನಮನಾ ಸುಖೇಷು ವಿಗತಸ್ಪೃಹಃ ವೀತರಾಗಭಯಕ್ರೋಧಾನ್‌ ಸ್ಥಿತಧೀರ್ಮುನಿರುಜ್ಯತೆ” ಎಂಬ ಗೀತೆಯ ಶ್ಲೋಕವನ್ನು ಕೇವಲ ಹೇಳಿ-ಕೇಳುವುದಲ್ಲದೇ ಆಚರಣೆಗೆ ತಂದವರು ದೇವುಡು ಎಂದು ಹೇಳುವಾಗ ತಾತನ ಕಣ್ಣುಗಳಲ್ಲಿ ಒಂದು ವಿಲಕ್ಷಣ ಕಾಂತಿಯಿರುತ್ತಿತ್ತು.

  ಹೀಗೆ ನಾನು ತಾತನ ಜೊತೆಯಲ್ಲಿದ್ದುದು ನನಗೆ ಅನಂತ ಪದ್ಮನಾಭನ ಆಭರಣಗಳ ತಿಜೋರಿಯ ಕೀಲಿಯನ್ನು ಹೊಂದಿದ ಧರ್ಮಾಧಿಕಾರಿಯಂತಾದ ಗರ್ವವಿತ್ತು. ಪ್ರತಿಬಾರಿಯ ಭೇಟಿಯಲ್ಲಿಯೂ ಹೊಸ ಹೊಸ ವಿಚಾರಗಳು ತಾತನಿಂದ ನನ್ನ ಮಸ್ತಕದ ಗ್ರಂಥಾಲಯಕ್ಕೆ ಕೊಡುಗೆಯಾಗಿ ಬರುತ್ತಿದ್ದವು, ತಾತ ನಿಜಕ್ಕೂ ಭಗವದ್ಗೀತೆ ಅಷ್ಟು ಚಂದ ಅಲ್ಲವೇ ? ಪ್ರಸಿದ್ಧ ಗಾಯಕರಾದ ಶ್ರೀ ಘಂಟಸಾಲ ಅವರು ಭಗವದ್ಗೀತೆಯ ಆಯ್ದ ಕೆಲವು ಭಾಗಗಳನ್ನು ಹಾಡಿ, ಅದರ ಅರ್ಥವನ್ನು ತೆಲುಗಿನಲ್ಲಿ ಅರ್ಥಸಿರುವುದು ನಾನು ಕೇಳಿದ್ದೆ. ಅವರೊಟ್ಟಿಗೆ ಮಾತನಾಡುವಾಗ ತಾತ ಎಷ್ಟು ಭಾವುಕರಾಗಿ ಹಾಡಿದಾರೆ ಅಲ್ವೇ ಘಂಟಸಾಲ ಅಂತ ಕೇಳಿದಾಗ ಅವರಿಗೆ ಸಿಟ್ಟು ಬರುತ್ತಿತ್ತು. ಆಗ ಹೇಳುತ್ತಿದ್ದರು “ಏನು ಭಾವುಕತೆಯೋ ಅದು. ಭಗವದ್ಗೀತೆ ಅನ್ನೋದು ನಿರ್ವೀರ್ಯನಿಗೆ (ಅಂದರೆ ಈಗಿನ ಮೆಡಿಕಲ್‌ನ ಡಿಪ್ರೆಷನ್)‌ ಅಥವಾ ಆತ್ಮ ಹತ್ಯೆಯ ಯೋಚನೆಯಿಲ್ಲದ್ದವನಿಗೂ ಬದುಕುವ ಉತ್ಸಾಹ ತುಂಬುವ ಗ್ರಂಥ, ಅದನ್ನು ಹಾಗೇ ಉತ್ಸಾದಲ್ಲಿ ಹೇಳಿದಾಗ ಮಾತ್ರ ಇನ್ನಷ್ಟು ಅರ್ಥಗರ್ಭಿತವಾಗುತ್ತೆ. ಮುಂಡೇದೆ ನಿನಗೆ ಸಂಗೀತ ಮಾತ್ರ ಗೊತ್ತು, ಅರ್ಥದ ಅನುಭವವಾಗೋದಿಕ್ಕೆ ಇನ್ನಷ್ಟು ಟೈಂ ಬೇಕು”ಅಂತ ಬೊಚ್ಚು ಬಾಯಿಯಿಂದ ನಕ್ಕ ತಾತನ ನಗು ನನಗೆ ಬೇಸರ ಮಾಡಲಿಲ್ಲ, ಸಿಟ್ಟು ತರಿಸಲಿಲ್ಲ. ಬದಲಾಗಿ ಅವರ ನಗುವಿನ ಹಿಂದಿದ್ದ ಮಾರ್ಮಿಕತೆ ಮತ್ತು ಆ ಮಗುವಿನ ನಗೆಯ ಅನುಭವ ನನಗಾಯ್ತು. ಪ್ರತಿಸಲವೂ ಅಚ್ಚರಿಗೊಳ್ಳುವ ವಿಷಯಗಳು ನನಗೆ ತಾತನ ವರಗಳಾದವು. ಕಳೆದದ್ದು ಸ್ವಲ್ಪ ಸಮಯವಾಗಿದ್ದರೂ ಅದರ ಅನುಭವ ಮತ್ತು ಜ್ಞಾನ ಅಗಾಧವಾಗಿರುತ್ತಿತ್ತು. ಹೀಗೇ ಒಮ್ಮೆ ಕೇಳಿದೆ ತಾತ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಏನು ಅದು ? ಅಂತ. ಒಮ್ಮೆ ನನ್ನ ಮುಖವನ್ನು ನೋಡಿದರು. ಈಗ ನಾನು ಮೊನ್ನೆ ಹೇಳಿದೆ ಅಲ್ವೇನಪ್ಪ ಏನು ಹೇಳಿದೆ ? ನಾನು “ಭಗವದ್ಗೀತೆ ನಿರ್ವೀರ್ಯನಿಗೂ ಜೀವನೋತ್ಸಾಹ ತುಂಬಿಸುತ್ತೆ”ಅಂತ ಹೇಳಿದ್ರಿ ಎಂದೆ. “ಹೌದಲ್ವಾ ? ಹಾಗಾದರೆ ಭೂತ ಅಂದ್ರೇನು ? ಹಿಂದೆ ಇದ್ದದ್ದು ಈಗ ಇಲ್ಲದೇ ಇರುವುದು. ಅಲ್ವೇ ? “ ಪಿಯುಸಿ ಓದುವ ನನಗೆ ಈ ಮಟ್ಟದ ಜ್ಞಾನ ಇರಲು ಸಾಧ್ಯವೇ ? ಹೌದು ಎಂಬಂತೆ ತಲೆಯಾಡಿಸಿದೆ. ಆಗ ಹೇಳಿದರು ಭಗವದ್ಗೀತೆ ಅನ್ನೋದು ನಮ್ಮ ಬದುಕಿನ ಹೆಜ್ಜೆಗಳನ್ನ ಹೇಗೆ ಇಡಬೇಕು ಮತ್ತೆ ಹೇಗೆ ನಾವು ಎಲ್ಲರೊಟ್ಟಿಗೆ ಬದುಕಬೇಕು ಅಂತ ಹೇಳುತ್ತೆ. ಅದನ್ನು ಸತ್ತ ಪ್ರೇತದ ಬಾಯಿಂದ ಕೇಳಿದ್ರೆ ಹೇಗೆ ಅನುಭವವಾಗುತ್ತೆ ? ಅದಕ್ಕೆ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರೆ. ಇನ್ನೂ ಒಂದೇ ಮಾತಲ್ಲಿ ಹೇಳೋದಾದರೆ ಅದು ನಡೆದು ತೋರಿಸೋದೇ ಹೊರತು ಹೇಳಿ ಅರ್ಥ ಮಾಡಿಸೋದಲ್ಲ. “ಯದ್ಯದಾಚರತಿಃ ಶ್ರೇಷ್ಠಃ ತತ್ರದೇವೇತರೋ ಜನಃ ಸಯತ್ಪ್ರಮಾಣಂ ಕುತೇ ಲೋಕಸ್ತದನುವರ್ತತೇ” ಅಂದ್ರೆ ನೀನು ನನ್ನ ತಾತ ಅಂತೀಯಲ್ಲ ನಾನು ಏನು ಹೇಳ್ತೀನಿ, ಏನು ಆಚರಣೆ ಮಾಡ್ತೀನಿ ಅದನ್ನು ನೋಡಿಯೇ ಅಲ್ವಾ ನೀನು ಅಳವಡಿಸಿಕೊಳ್ಳೋದು, ಅಥವ ನೀನು ಹಾಗಾಗಬೇಕು, ಹೀಗಾಗಬೇಕು ಅಂತ ಅಂದ್ಕೊಳೋದು ? ಅಂದಾಗ. ನನಗೆ ಮೊಟ್ಟ ಮೊದಲಿಗೆ ತಾತನ ಅಧ್ಯಾತ್ಮದ ಮುಖ ಕಾಣಿಸಿತ್ತು. ಏಕೆಂದರೆ ತಾತ ಮುಕುಂದೂರು ಸ್ವಾಮಿಗಳ ಶಿಷ್ಯರು. ಅವರ ಎಷ್ಟೋ ಕಠಿಣ ಪರಿಸ್ಥಿತಿಗಳಲ್ಲಿ, ಮುಕುಂದೂರು ಸ್ವಾಮಿಗಳು ಇವರ ಬೆನ್ನಿಗೆ ನಿಂತಿದ್ದ ಎಷ್ಟೋ ವಿಚಾರಗಳನ್ನು ತಾತ ಅಪ್ಪನೊಟ್ಟಿಗೆ ಮಾತನಾಡಿದುದು, ನಂತರ “ಯೇಗ್ದಾಗೆಲ್ಲ ಐತೆ” ಓದಿದಾಗ ಮತ್ತೆ ಮತ್ತೆ ತಲೆಕೆಡಿಸುತ್ತಿತ್ತು. ಏನಿದು ? ಎಲ್ಲರೂ ನೋಡುವ ತಾತ ನಾನು ನೋಡುತ್ತಿರುವ ತಾತ ಇಬ್ಬರೂ ಬೇರೆ ಬೇರೆಯೇ ಎನಿಸುತ್ತಿತ್ತು. ಅಪ್ಪನೊಟ್ಟಿಗೆ ಅದನ್ನು ಬಗೆಹರಿಸಿಕೊಳ್ಳಲು ಭಯ. ಏಕೆಂದರೆ ಅಧ್ಯಾತ್ಮದ ಅನುಭವವೇ ನನಗಿಲ್ಲ. ಇನ್ನು ಅವರನ್ನು ಪರಾಮರ್ಶೆ ಮಾಡಲು ನಾನು ಹೇಗೆ ಸಮರ್ಥನಾಗಲು ಸಾಧ್ಯ. ಆದರೆ ಈಗ ನನಗೊಂದು ಕೊರಗಿದೆ ನನ್ನ ಈ ವಯಸ್ಸಿನಲ್ಲಿ ತಾತನ ಒಡನಾಟವಾಗಿದ್ದರೆ ನಾನು ಇನ್ನಷ್ಟು ಅನುಭವಗಳನ್ನು ಪಡೆಯಬಹುದಾಗಿತ್ತು. ಅವರ ಜ್ಞಾನ ವಾರಿಧಿಯಲ್ಲಿ ಕೈಲಾಗುವಷ್ಟು ನಾನು ಖನಿಜಗಳ ಕೊಳ್ಳೆ ಹೊಡೆಯಬಹುದಿತ್ತು.

 ದಿನಗಳುರುಳಿದವು ಎರಡು ವರ್ಷಗಳು ಕಳೆದವು, ಈ ಮಧ್ಯೆ ತಾತನ ಆರೋಗ್ಯ ಪದೇ ಪದೇ ಕೆಡುತ್ತಿತ್ತು. ಈಗ ಅವರು ಬೆಳಗೆರೆಯ ಹೊಲದಲ್ಲಿರುತ್ತಿಲ್ಲ, ಬೆಂಗಳೂರಿನಲ್ಲಿ ರವಿ ಬೆಳಗೆರೆಯವರ ಮನೆಯಲ್ಲೇ ವರ್ಷದ ಬಹುತೇಕ ದಿನಗಳನ್ನು ಕಳೆಯುತ್ತಿದ್ದಾರೆ. ಇಲ್ಲಿ ನಾನು ಅವರ ಸಹವಾಸದಿಂದ ದೂರಾಗಿ, ನೀರಿಲ್ಲದ ತೆಂಗಿನ ಮರದ ಹಾಗೆ ಒಣಗುತ್ತಿದ್ದೇನೆ. ಎರಡು ಬಾರಿ ಹೃದಯಾಘಾತವಾದರೂ ಮುಖದಲ್ಲಿ ಸಣ್ಣ ಭಯವಿಲ್ಲ, ಚಟುವಟಿಕೆಗಳು ಯಾವುದೂ ನಿಂತಿಲ್ಲ, ಮನೆಯಿಂದ ಕಾಲೇಜಿಗೆ ನಡೆದು ಬರಲು ಅಸಾಧ್ಯವಾಗುತ್ತಿತ್ತು ಆದರೆ ಮನೆಯಲ್ಲಿ ಓಡಾಡಲು ಯಾವುದೇ ಸಮಸ್ಯೆಯಿರಲಿಲ್ಲ. “ದೇಹಿನೋಸ್ಮಿನ್‌ ಯಥಾ ದೇಹೇ ಕೌಮಾರೌ ಯೌವನಂ ಜರಾ ತಥಾ ದೇಹಾಂತರಃ ಪ್ರಾಪ್ತಿಃ ಧೀರಸ್ತತ್ರನಮುಹ್ಯತಿ” ದೇಹಕ್ಕೆ ಬಾಲ್ಯ, ಯೌವನ, ನುಪ್ಪು ಸಹಜವಾಗಿ ಒದಗುವ ಸ್ಥಿತಿಗಳು ಇದಕ್ಕೆ ಧೀರರಾದವರು ಹೆದರುವುದಿಲ್ಲ ಹಾಗೂ ತಾನು ಮಾಡಬೇಕಾದ ಕರ್ತವ್ಯಗಳನ್ನು ನಿಲ್ಲಿಸುವುದಿಲ್ಲ. ಎಂಬಂತೆ ತಾತನ ಕೃಷಿ ನಡೆದೇ ಇತ್ತು. ಮಂಕುತಿಮ್ಮನ ಕಗ್ಗ ತಾತನಿಗೆ ಬಹಳ ಪ್ರೀತಿ. ಈಗೀಗ ಕಗ್ಗವು ನನಗೂ ಪ್ರಿಯವೆನಿಸುತ್ತಿದೆ. ಕುಮಾರವ್ಯಾಸ ಭಾರತ, ಮಂಕುತಿಮ್ಮನ ಕಗ್ಗ, ಭಗವದ್ಗೀತೆ, ಉಪನಿಷತ್‌ಗಳು ಹೀಗೆ ಪ್ರತಿಯೋಂದೂ ಆದರ್ಶ ಪುರುಷ ಹೇಗಿರಬೇಕು ಎಂದು ಹೇಳುತ್ತವೆಯೋ ಹಾಗೆ ಎಲ್ಲರಿಗೂ ಆದರ್ಶ ಪುರುಷನಾಗಿ ತಾತ ಇದ್ದರು, ಜಾತಿ-ಮತ, ಧರ್ಮಗಳ ಹಂಗಿಗೆ ಒಳಪಡದೇ, “ಅನ್ನದಾನಂ ಪರಂದಾನಂ ವಿದ್ಯಾದಾನಮದಃ ಪರಃ | ಅನ್ನೇನ ಕ್ಷಣಿಕಃತೃಪ್ತಿಃ ಯಾವಜ್ಜೀವಂಚ ವಿದ್ಯಯಾ ”ಎಂಬಂತೆ ಅನ್ನದಾನವು ಉತ್ತಮ ಆದರೆ ವಿದ್ಯಾದಾನವು ಸ್ರವೋತ್ತಮ, ಏಕೆಂದರೆ ಅನ್ನವು ಕ್ಷಣಿಕವಾದ ಹಸಿವು ಹೋಗಲಾಡಿಸಿದರೆ ವಿದ್ಯೆಯು ಜೀವಮಾನದವರೆಗೆ ಎಲ್ಲರೀತಿಯ ಹಸಿವು ನೀಗಿಸುತ್ತದೆ. ಎನ್ನುವ ಹಾಗೆ, ಶಾಲೆ-ಕಾಲೇಜುಗಳನ್ನು ಮಾಡಿ, ಅಲ್ಲಿ ಉಚಿತ ಶಿಕ್ಷಣ, ಊಟ ವಸತಿಗಳನ್ನು ನೀಡಿ ಅದೆಷ್ಟೋ ಬಡ ಮಕ್ಕಳ ಏಳ್ಗೆಗೆ ಕಾರಣರಾದರು. ಅಲ್ಲಿಯ ಎಲ್ಲ ಕಟ್ಟಡಗಳೂ ಸಹಾ ಶ್ರಮದಾನದಿಂದ ಕಟ್ಟಿದಂಥವುಗಳು, ವಿದ್ಯಾರ್ಥಿ ನಿಲಯ, ಶಾಲೆ-ಕಾಲೇಜು ಕಟ್ಟಡಗಳು, ಶಾರದಾಮಂದಿರ, ಸುಮಾರು 500ಕ್ಕೂ ಅಧಿಕ ಜನ ಕುಳಿತು ಕಾರ್ಯಕ್ರಮ ನಡೆಸಬಹುದಾದ ಸಭಾ ಮಂಟಪ, 200ಕ್ಕೂ ಅಧಿಕ ಮಕ್ಕಳು ಒಮ್ಮೆಲೆ ಊಟ ಮಾಡಬಹುದಾದ ಊಟದ ಹಾಲ್‌, ಎಲ್ಲವೂ ಸಹಾ ಇಂದಿಗೂ ನಾವು ನೋಡಬಹುದು. ಅವರಿಂದ ಲೆಕ್ಕವಿಲ್ಲದಷ್ಟು ಮಂದಿ ಪ್ರಭಾವಿತರಾಗಿ ಜೀವನದಲ್ಲಿ ನೆಲೆಗೊಂಡಿದ್ದಾರೆ ಅಂಥವರಲ್ಲಿ ನಾನೂ ಒಬ್ಬ. ಅಧ್ಯಾತ್ಮವು ಹೇಳುವುದಲ್ಲ ನಡೆಯುವುದು ಎಂದು ತಮ್ಮ ಜೀವನದಲ್ಲಿ ತೋರಿಸಿದರು. ಇಂಥ ಮಹಾನ್‌  ಸಂತ ಚೇತನ ಮಾರ್ಚ್‌ 2013ರ ಬೆಳಗ್ಗೆ ಭೌತಿಕ ಸೂರ್ಯ ಉದಯಿಸುವ ವೇಳೆಗೆ ಬೆಳಗೆರೆಯ ಈ ಸಂತ ಅಸ್ತಂತನಾದರೆ ಹೇಗೆ ಸಹಿಸುವುದು.? ಬೆಂಗಳೂರಿನಿಂದ ಬೆಳಗೆರೆಯವರೆಗೆ ಅಧ್ಯಾತ್ಮದ ಹರಿಕಾರನಿಗೆ, ಸಾಹಿತ್ಯ ಶ್ರೇಷ್ಠನಿಗೆ ಕಂಬನಿ ಮಿಡಿಯದವರಿರಲಿಲ್ಲ. ನಾನೂ ಅಪ್ಪ ಇಬ್ಬರೂ ಮರುದಿನದ ಅಂತ್ಯ ಸಂಸ್ಕಾರದ ಸಮಯಕ್ಕೆ ಹೋದಾಗ ಸಭಾಂಗಣದಲ್ಲಿ ನನ್ನ ಭುಜದ ಮೇಲೆ ಕೈಇಟ್ಟು ಓಡಾಡಿದ, ಅವರ ಪಕ್ಕ ಕುಳಿತಾಗ ತಲೆ ಸವರಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ತಾತ ಇಂದು ಮಲಗಿದ್ದಾರೆ. ಮಾತಾನಾಡುತ್ತಿಲ್ಲ ಇನ್ನು ಮಾತನಾಡುವುದೂ ಇಲ್ಲ ಎನ್ನುವುದನ್ನು ಸಹಿಸಲೂ ಅಸಾಧ್ಯ. ಅವರು ಜೀವಂತವಿಲ್ಲ ಎಂದು ನನಗೆ ಭಾಸವಾಗುತ್ತಿಲ್ಲ. ಅದೇ ಬಿಳಿಯ ಜುಬ್ಬ, ಪಂಚೆ ತಲೆಗೆ ಸಾಯಿ ಬಾಬಾ ಅವರ ಹಾಗೆ ಒಂದು ಬಿಳಿಯ ಬಟ್ಟೆ ಕಟ್ಟಿಕೊಂಡು ಮಲಗಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಏಳುತ್ತಾರೆ ಎಂಬಂತಹ ಮುಖಲಕ್ಷಣ ಇದು ಅಧ್ಯಾತ್ಮಿಗಲ್ಲದೇ ನಮ್ಮಂಥ ಸಾಮಾನ್ಯರಿಗೆ ಸಾಧಿಸಲು ಸಾಧ್ಯವೆ ? ತಾತನವರ ದಹನವು ಅವರ ಹೊಲದಲ್ಲಿಯೇ ಆಯಿತು. ಅಲ್ಲಿ ಅವರ ಸ್ಮಾರಕ ಸಣ್ಣ ಕುಟೀರವೊಂದಿದೆ. ಇಂದಿಗೂ ಧ್ಯಾನ ಬೇಕು ಎನ್ನುವವರಿಗೆ ಅಲ್ಲಿ ಪರಿವೆಯಿಲ್ಲದೇ ಗಂಟೆಗಳ ಕಾಲ ಧ್ಯಾನಗೈಯಲು ಪ್ರಕೃತಿಯ ಸಹಕಾರವಿದೆ. ಎಲ್ಲರ ಮಧ್ಯೆ ತಾನು ಇದ್ದು ಎಲ್ಲರನ್ನೂ ಒಗ್ಗೂಡಿಸಿ ಜಗತ್ತಿಗೆ ಶ್ರೇಷ್ಠತೆಯನ್ನು ಸಾರಿದ ತತ್ತ್ವಜ್ಞಾನಿ ತಾತನನ್ನು ನಾನು ಮರೆಯಲಾದೀತೆ ? ಬೆಳಗೆರೆಯ ವಿದ್ಯಾರ್ಥಿಗಳೆಲ್ಲರೂ ನಿಜಕ್ಕೂ ಭಾಗ್ಯವಂತರು. ಏಕೆಂದರೆ ಸಾಹಿತ್ಯ ಲೋಕದ ನಕ್ಷತ್ರಗಳೆಲ್ಲವೂ ಬೆಳಗೆರೆಯ ಬಾನಿನಲ್ಲಿ ಮಿನುಗುತ್ತಿದ್ದವು,  ಹೀಗಿರುವಾಗ ತಾತನನ್ನು ಸಂತನೆನ್ನದೇ ಏನೆನ್ನಬೇಕು ? ಅತ್ಯುತ್ತಮವಾದ ಸಂಸ್ಥೆಯನ್ನು ಪ್ರಾರಂಭಿಸಿ, ತಮ್ಮ ನಂತರ ಏನಾಗುವುದೋ ಎಂದು ಯಾರಾದರೂ ಕಳವಳ ವ್ಯಕ್ತಪಡಿಸಿದಾಗ ನಕ್ಕು ಸುಮ್ಮನಾಗುತ್ತಿದ್ದ ತಾತ, ಮನಸು ಮಾಡಿದ್ದರೆ ತಮಗಿದ್ದ ಪ್ರಭಾವದಲ್ಲಿ ಬೇಕಾದಷ್ಟು ಆಸ್ತಿ, ಹಣ ಮಾಡಬಹುದಾಗಿತ್ತು, ಬೇಕಾದಷ್ಟು ಪ್ರಶಸ್ತಿ ಬಂದರೂ ಅಹಂನಿಂದ ಬೀಗದ, ಸಣ್ಣ ಮಗುವು ಕಂಡರೂ ಅದರ ಹತ್ತಿರ ಬಂದು ಕೆನ್ನೆ ಸವರಿ ಮಾತನಾಡಿಸುವ, ಎಲ್ಲ ಐಶ್ವರ್ಯವಿದ್ದರೂ ಫಕೀರನಂತೆ ಬಾಹ್ಯದಲ್ಲಿಇದ್ದು, ಆಂತರಿಕವಾಗಿ ಅದೆಷ್ಟೋ ಸಿದ್ಧಿಗಳು ಇವರಿಗೆ ಲಭಿಸಿದರೂ ತೋರಿಸದೇ ಜನರಲ್ಲಿ ಒಂದಾದ ಇವರು ಆಧ್ಯಾತ್ಮಿಕ ಸೂರ್ಯನಲ್ಲವೇ ?

ಪ್ರಸಾದ್‌ ಶ್ರೀವತ್ಸ

ಶತಮಾನಗಳ ಕಾಲ ಮೌನವಾಗಿದ್ದದನಿಗಳಿಗೆ ಸಿಕ್ಕ‌ ಮಹಾಶಕ್ತಿ,ಡಾ.ಅಂಬೇಡ್ಕರ್- ಎಂ.ಗುರುಮೂರ್ತಿ

0

ಡಾ.ಬಿ ಆರ್ ಅಂಬೇಡ್ಕರ್ ಎಂಬ ಹೆಸರು ಕೇವಲ ಒಂದು ಅಕ್ಷರವಲ್ಲ. ಅದು ಶತಮಾನಗಳ ಕಾಲ ಮೌನವಾಗಿದ್ದ ದನಿಗಳಿಗೆ ಸಿಕ್ಕ ಮಹಾನ್ ಶಕ್ತಿ ಎಂದು ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗರವರು ಹೇಳಿದರು. ಶಿವಮೊಗ್ಗ ಬಿ ಹೆಚ್ಏ ರಸ್ತೆಯಲ್ಲಿರುವ ಡಿ.ಎಸ್. ಎಸ್ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ರವರು ಅಕ್ಷರವನ್ನೇ ಆಯುಧವನ್ನಾಗಿ ಮಾಡಿಕೊಂಡು ಅಸಮಾನತೆಯ ಕತ್ತಲೆಯನ್ನು ಸರಿಸಿದ ಹಾದಿ ಕೇವಲ ಒಂದು ಇತಿಹಾಸವಲ್ಲ. ಅದು ನಮ್ಮೆಲ್ಲರಿಗೂ ಎಂದೆಂದಿಗೂ ದಾರಿದೀಪವಾಗಿದೆ ಎಂದು ಎಂ. ಗುರುಮೂರ್ತಿ ಶಿವಮೊಗ್ಗ ರವರು ಹೇಳಿದರು.

ಕಾರ್ಯಕ್ರಮದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ಪ್ರಗತಿಪರ ಚಿಂತಕರಾದ ಪ್ರೊ. ಚಂದ್ರಪ್ಪ ಜೋಗಿ, ಡಿ ಎಸ್ ಎಸ್ ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ಶಿವಮೊಗ್ಗ ಉಪ ವಿಭಾಗದ ಅಟ್ರಾಸಿಟಿ ಕಮಿಟಿ ಸದಸ್ಯರಾದ ಯಡವಾಲ ಹನುಮಂತಪ್ಪ, ಶಿವಮೊಗ್ಗ ಡಿ ಎಸ್ ಎಸ್ ತಾಲೂಕ್ ಸಂಚಾಲಕರಾದ ಎಂ ರಮೇಶ್ ಚಿಕ್ಕ ಮರಡಿ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಸಂಚಾಲಕರಾದ ಮನ್ಸೂರ್ ಲಕ್ಕವಳ್ಳಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಸೂರ್ಯ,ಮುಖಂಡರುಗಳಾದ ಗಾಜನೂರು ಹರೀಶ್, ಪುರ್ಲೆ ಸಂತೋಷ್,ಮೈದೊಳಲು ಜಯಣ್ಣ, ಬೆಳಲಕಟ್ಟೆ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

ತಮ್ಮ ವಿಶ್ವಾಸಿ
ಸ್ಥಳ: ಶಿವಮೊಗ್ಗ
(ರಮೇಶ್ ಚಿಕ್ಕಮರಡಿ)
ತಾಲೂಕ್ ಸಂಚಾಲಕರು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)

JCI Sports and Cultural Club ಬಾಕ್ಸ್ ಕ್ರಿಕೆಟ್ ಟೂರ್ನಿ: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ಸ್

0

JCI Sports and Cultural Club ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಜೆಸಿಐ ವಲಯ 24ರ ಜೆಎಸಿ ಹಾಗೂ ಜೆಕಾಮ್ ಸಹಯೋಗದಲ್ಲಿ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ 2.0 ಕ್ರೀಡಾಕೂಟದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಗಾಡಿಕೊಪ್ಪದ ಸ್ಪೋರ್ಟ್ಸ್ ಜೋನ್‌ನಲ್ಲಿ ಆಯೋಜಿಸಿದ್ದ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಈ ಬಾರಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯು ಈ ಸಲ ಕಪ್ ನಮ್ದೆ ಎನ್ನುವ ಘೋಷವಾಕ್ಯದೊಂದಿಗೆ ಕಣಕ್ಕಿಳಿದು ಎರಡನೇ ಬಾರಿಯೂ ಕೂಡ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜೆಸಿಐ ಸಂಸ್ಥೆಯಲ್ಲಿ ಇತಿಹಾಸ ಸೃಷ್ಟಿಸಿದೆ.

ಸಹ್ಯಾದ್ರಿ ಸ್ಮ್ಯಾಶರ್ಸ್ ತಂಡದ ನಾಯಕ ಸಂತೋಷ ಕುಮಾರ್ ಉತ್ತಮವಾದ ಪ್ರದರ್ಶನ ನೀಡಿ ಒಟ್ಟು 16 ವಿಕೆಟ್ ಮತ್ತು ಒಟ್ಟು 86 ರನ್ ಹೋಡಿಯುವುದರ ಮೂಲಕ ಹೈಯೆಸ್ಟ್ ವಿಕೆಟ್ ಟೇಕರ್ ಎಂಬ ಪ್ರಶಸ್ತಿ ತಮ್ಮ ಪಾಲಿಗೆ ಪಡೆದುಕೊಂಡಿದ್ದಾರೆ.

ತಂಡದ ಎಲ್ಲ ಆಟಗಾರರಾದ ಈಶ್ವರ್, ನಿತೀನ್, ಸಂತೂ, ಅಭಿಷೇಕ, ಅನುಷ್ ಗೌಡ, ಉಮಾಮಣಿ, ಸಿಂಚನ, ಸಿ.ಕೆ.ವಿಜಯ್ ಕುಮಾರ್, ದಿಗಂತ್ ಮಂಜುನಾಥ್ ಮತ್ತಿತ್ತರು ಉತ್ತಮವಾದ ಪ್ರದರ್ಶನ ನೀಡುವುದರ ಮೂಲಕ ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಗಿದೆ. ಸಹ್ಯಾದ್ರಿ ಸ್ಮ್ಯಾಶರ್ಸ್ ತಂಡದ ಮಾಲೀಕ ಸುರೇಂದ್ರ ಕೋಟ್ಯಾನ್ ತಂಡದ ಸಂಪೂರ್ಣ ಜವಾರ್ಬ್ದಾರಿ ಪಡೆದು ಉತ್ತಮವಾದ ಓನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಲಯ 24ರ ಸಹಾಕಾರದೊಂದಿಗೆ ಕ್ರೀಡಾಕೂಟ ಉತ್ತಮ ಯಶಸ್ವಿಯಾಗಿ ಮೂಡಿಬಂದಿದೆ.

JCI Sports and Cultural Club ಡಿಸಿಎಂ ಕೆ.ಎಸ್.ಈಶ್ವರಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜೆಸಿಐ ವಲಯ ನಿರ್ದೇಶಕ ಜಿ.ಗಣೇಶ್ ಮತ್ತಿತರರ ಗಣ್ಯರು ಪಾಲ್ಗೊಂಡಿದ್ದರು.

B.Y. Raghavendra ಭಾರತದಲ್ಲಿ ಮಹಿಳಾ ಮೀಸಲಾತಿಯನ್ನ ಐತಿಹಾಸಿಕವಾಗಿ ಜಾರಿಗೆ ತರಲಾಗುತ್ತಿದೆ- ಬಿ.ವೈ.ರಾಘವೇಂದ್ರ

0

B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಜಾರಿಗೆ ತರಲಾಗುತ್ತಿದೆ.ಮೂಲ ಕಾನೂನಿಗೆ ತಿದ್ದುಪಡಿ ತಂದು ಕ್ಷೇತ್ರ ಮರು ವಿಂಗಡಣೆ ಮಾಡಿ ಮಹಿಳೆಯರಿಗೆ ಸ್ಥಾನ ನೀಡುವ ಕೆಲಸ ಆಗಿದೆ. 33% ಸ್ಥಾನವನ್ನು ಮಹಿಳೆಯರಿಗೆ ಮೀಸಲು ಇಡುವ ಈ ಕಾಯ್ದೆಯಿಂದ ಆಗಲಿದೆ. ಈ ಅದಿಸೂಚನೆ ಕೇವಲ ಕಾಯ್ದೆ ಅಲ್ಲ ದೇಶದ ಮಹಿಳೆಯರಿಗೆ ಕೊಡುತ್ತಿರು ಗೌರವ. ನಾರಿ ಶಕ್ತಿಯು 2026 ಚುನಾವಣೆಯಲ್ಲಿ ಈ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ೫೪೩ ರಿಂದ ೮೫೦ ಕ್ಕೆ ಸ್ಥಾನಗಳಿಗೆ ಏರಿಕೆ ಆಗಲಿದೆ. 270 ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರಿಗೆ ಸಿಗಲಿದೆ.ಅಡುಗೆ ಮನೆಯಿಂದ ಅಂತರಿಕ್ಷ ಹೋದ ಮಹಿಳೆಯರಿಗೆ ಈ ಸ್ಥಾನ ಸಿಗಲಿವೆ. ಆರ್ಟಿಕಲ್ ೩೭೦ ಕಿತ್ತು ಒಗೆಯುವ ಸಂದರ್ಭದಿದಂದ ಹಿಡಿದು ಈ ನಾರಿ ಶಕ್ತಿ ಮೀಸಲಾತಿ ನೀಡುವ ವರೆಗೂ ನಾನೂ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನ. ಇದು ನನ್ನ ಕ್ಷೇತ್ರದ ತಾಯಿಯೆಂದಿರು ನೀಡಿರು ಶಕ್ತಿ. ಅವರಿಗೆ ನಾನೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಇಷ್ಟು ವರ್ಷ ಮಹಿಳೆಯರನ್ನ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಪ್ರಧಾನಿ ಮೋದಿಯವರು ಈ ಕಾಯ್ದೆವತರುವಾಗ ಗಿಮಿಕ್ ಎಂದು ವಿರೋಧ ಪಕ್ಷದವರು ಹೇಳಿದ್ರು. ಈ ಐತಿಹಾಸಿಕ ಪರಿವರ್ತನೆ ಮಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಶಿವಮೊಗ್ಗ ಜನತೆ ಪರವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

B.Y. Raghavendra ದಕ್ಷಿಣ ಭಾರತಕ್ಕೆ ಸ್ಥಾನ ಹಂಚಿಕೆ ವಿಚಾರದಲ್ಲಿ ಅನ್ಯಾಯ ವಾಗದಂತೆ ನೋಡಿಕೊಳ್ಳಬೇಕು. ಜನಸಂಖ್ಯೆ ಆಧಾರದಮೇಲೆ ವಿಂಗಡಣೆ ಮಾಡಿದರೆ ದಕ್ಷಿಣಕ್ಕೆ ಅನ್ಯಾಯವಾಗುತ್ತದೆ. ಅದನ್ನು ನಾವು ಸದನದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ಅವರ ಕಾಲದಲ್ಲಿ ಈ ಕಾಯ್ದೆ ತರಲು ಮುಂದಾಗಿರಲ್ಲಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರವೇ ಮಹಿಳಾ ಮೀಸಲಾತಿ ಗೆ ಸಿಕ್ಕರೂ ನನಗೆ ಸಂತೋಷ ಎಂದಿದ್ದಾರೆ.

ಶಿವಮೊಗ್ಗ ರವಿಂದ್ರ ನಗರದ ರೈಲ್ವೆ ಹಳಿ ಸನಿಹ ಯುವತಿಯ ಶವ ಪತ್ತೆ

0

ಶಿವಮೊಗ್ಗ ನಗರದ ರವೀಂದ್ರನಗರ ರೈಲ್ವೆ ಟ್ರ್ಯಾಕ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.

ರೈಲಿಗೆ ಸಿಲುಕಿ ಸತ್ತಿರುವುದಾ? ಅಥವಾ ಬೇರೆ ರೀತಿ ಸಾವಾಗಿದೇಯಾ ಎಂದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಯುವತಿಯ ಶವದ ಬಳಿ ಮೊಬೈಲ್ ಫೋನ್ ಪತ್ತೆಯಾಗಿದ್ದು , ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ

“ಹಳಗೋಡು” ಮಕ್ಕಳ ಬೇಸಿಗೆ ಶಿಬಿರ, ಒಂದು ವಿನೂತನ ಅನುಭವ- ಮಂಜುಳ ರಾಜು

0

ನಮ್ಮ ಸಮಾಜ ದಲ್ಲಿ ಅನೇಕರು ತಮ್ಮದೇ ರೀತಿಯಲ್ಲಿ
“ಸಮಾಜ ಮುಖಿ” ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿದ್ದಾರೆ. ಅಂತಹವರು ಸರ್ಕಾರದ ಅಥವಾ ಇನ್ನಿತರರ ಯಾವುದೇ ಸಹಾಯ ಬಯಸದೇ ತಮ್ಮಷ್ಟಕ್ಕೆತಾವೇ ಏನಾದರೊಂದು ಕೆಲಸ ಮಾಡುತ್ತಾ ಅದರಲ್ಲಿ ತಮ್ಮ ಸಾರ್ಥಕತೆಯನ್ನು ಪಡೆಯುತ್ತಾರೆ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ.ಸಾಗರದ ಸಮೀಪದ “ಹಳಗೋಡಿ”ನಲ್ಲಿ ನೆಲೆಸಿರುವ ಕೃಷಿಕದಂಪತಿಗಳಾದ ಸುರೇಂದ್ರ ಹಾಗೂ ವಿಜಯಶ್ರೀ, ಮೂಲತಹ ರಂಗಭೂಮಿ ಕಲಾವಿದರಾದ ವಿಜಯಶ್ರೀ ಅವರು ತಮ್ಮ ವೃತ್ತಿ ಕೃಷಿಯೊಂದಿಗೆ,ಹತ್ತಿರದ ಸರಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಬರವಣಿಗೆ,ನೃತ್ಯ ಹಾಡು, ರಂಗ ತರಬೇತಿ ನೀಡುತ್ತಾರೆ. ಮತ್ತು ಪ್ರತಿ ವರ್ಷ ಏಪ್ರಿಲ್ ನಲ್ಲಿ ಸುತ್ತಮುತ್ತಲಿನ ಮಕ್ಕಳಿಗೆ ಉಚಿತವಾದ ಬೇಸಿಗೆ ಶಿಬಿರ “ಪಚ್ಚೆಹಬ್ಬ” ನಡೆಸುತ್ತಾರೆ.
ಸಂಪನ್ಮೂಲ ವ್ಯತ್ತಿಗಾಗಿ ಅವರ ಸ್ನೇಹಿತರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತರಾದವರು ಅವರಿಗೆ ಬೆಂಬಲನೀಡುತ್ತಾರೆ. ರಂಗನಟ ಬರ್ಟಿ ಪ್ರತಿವರ್ಷ ಅವರೊಂದಿಗಿರುತ್ತಾರೆ. ಕಲಾವಿದರು, ಸಂಗೀತಗಾರರು ನೃತ್ಯಪಟುಗಳು ಮಕ್ಕಳನ್ನು ಹತ್ತುದಿನ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಿನ್ನೆ ಹೋಗಿದ್ದೆವು. ಮಕ್ಕಳಿಗೆ ಕಥೆಗಳನ್ನು ಹೇಳಿ, ಆಟ ಆಡಿಸಿ ಕೆಲವು ಹೊಲಿಗೆ. ಕಸೂತಿ ತರಬೇತಿ ನೀಡಿದೆವು ಹಳ್ಳಿಯ ಮುಗ್ಧ ಮಕ್ಕಳೊಂದಿಗೆ ಕಳೆದ ದಿನ ಚೇತೋಹಾರಿಯಾಗಿತ್ತು.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೊರಜಗತ್ತಿನ ಪರಿಚಯ ಈ ಮೂಲಕ ಆಗುತ್ತಿರುವುದು, ಇದಕ್ಕೆ ಅನುವುಮಾಡಿಕೊಟ್ಟ ವಿಜಯಶ್ರೀ ಸುರೇಂದ್ರ ದಂಪತಿಗಳ ಪರಿಶ್ರಮವನ್ನು ಮೆಚ್ಚಲೇ ಬೇಕು.

ಬಾಳೆಬರೆ ಘಾಟ್ :ಬಸ್ಸುಗಳ ಪ್ರಯಾಣಿಕರನ್ನ ಇಳಿಸಿ ಬೇರೆ ಬಸ್ಸಿಗೆ ಹತ್ತಿಸುವ ಪ್ರಕ್ರಿಯೆ ಬಗ್ಗೆಸರ್ಕಾರದ ಮಾರ್ಗಸೂಚಿ

0

ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲು-ಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದ್ದಾರೆ.

ಸಂಚಾರ ನಿಯಮಗಳು ಮತ್ತು ಷರತ್ತುಗಳು :

  • ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ.
  • ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಈ ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.
  • ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ.
  • ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ.

ಮಾರ್ಗ ಬದಲಾವಣೆ ವಿವರ

  • ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿ ಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್-ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊಂಡಿರುವ ರಸ್ತೆಯ ಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆ ಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬಂದಿದ್ದು, ವಾಹನಗಳನ್ನು ಸೂಕ್ಷ್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.
  • ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳು ಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಈ ಆದೇಶವು ಏಪ್ರಿಲ್ 14 ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Yadav School of Chess Institute ಚೆಸ್ ಆನ್ ಲೈನ್ ತರಬೇತಿ: ಪ್ರತೀ ತಂಡದಲ್ಲಿ ಆರ್ಥಿಕ ಹಿಂದುಳಿದ ಐದು‌ ಮಂದಿಗೆ ಉಚಿತ ಕಲಿಕೆ

0

Yadav School of Chess Institute ಶಿವಮೊಗ್ಗದ ರವೀಂದ್ರನಗರ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಆಸಕ್ತ ಶಾಲಾ ಮಕ್ಕಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ನಲ್ಲಿ ಏ. 18ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10:30 ರಿಂದ 11:30 ರವರೆಗೆ ಹಾಗೂ ಸಂಜೆ 4:30 ರಿಂದ 5:30 ರವರೆಗೆ ಮತ್ತು ರಾತ್ರಿ 07ರಿಂದ 08ರವರೆಗೆ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ತರಬೇತಿಯನ್ನು ಆನ್‌ಲೈನ್ ವಿವಿಧ ವಿಭಾಗಗಳಲ್ಲಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದಿರುವ 05 ಬಡ ಹೆಣ್ಣುಮಕ್ಕಳಿಗೆ ಪ್ರತಿ ತಂಡದಲ್ಲಿ ಉಚಿತವಾಗಿ ತರಬೇತಿಗೆ ಸೇರಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಪ್ರಾಣೇಶ ಯಾದವ್ ಮೊ. 9242401702, 9743819678ರಲ್ಲಿ ಸಂಪರ್ಕಿಸಬಹುದು.