Monday, August 3, 2026
Monday, August 3, 2026
Home Blog Page 13

ಕೃಷಿ ಡಿಪ್ಲೊಮಾ ಕೋರ್ಸ್: ಖಾಲಿ ಉಳಿದಿರುವ 31 ಸೀಟುಗಳ ಭರ್ತಿಗಾಗಿ ಅರ್ಜಿ ಆಹ್ವಾನ

0

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ 2 ವರ್ಷಗಳ ಡಿಪ್ಲೊಮಾ ಕೃಷಿ ಕೋರ್ಸ್ ನಲ್ಲಿ ಖಾಲಿ ಉಳಿದಿರುವ 31 ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೊಮಾ (ಕೃಷಿ) ಯನ್ನು ಕನ್ನಡ ಮಾಧ್ಯಮದಲ್ಲಿ ಸೆಮಿಸ್ಟರ್ (4 ಸೆಮಿಸ್ಟರ್) ಪದ್ಧತಿಯಲ್ಲಿ ಬೋಧಿಸಲಾಗುವುದು.
ಪ್ರವೇಶ ಅರ್ಹತೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಡಿಪ್ಲೊಮಾ (ಕೃಷಿ) ಕೋರ್ಸ್ ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಟ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಠ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು).ದಿನಾಂಕ: 06-08-2026 ರಂದು ಅಭ್ಯರ್ಥಿಗಳ ವಯಸ್ಸು 19 ವರ್ಷಗಳನ್ನು ಮೀರಿರಬಾರದು. ರೈತರ ಹಾಗೂ ಕೃಷಿಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ. ಅಧಿಸೂಚನೆ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವೆಬ್ಸೈಟ್: www.uahs.edu.in ನಲ್ಲಿ ದಿನಾಂಕ: 06-08-2026 ರೊಳಗೆ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿದ ಅರ್ಜಿಗಳನ್ನು ಮತ್ತು ಅರ್ಜಿಯ ನಿಗದಿತ ಶುಲ್ಕವನ್ನು ಡಿ.ಡಿ. ರೂಪದಲ್ಲಿ ಲಗತ್ತಿಸಿ, ದಿನಾಂಕ: 06-08-2026 ರೊಳಗೆ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ಕಳುಹಿಸಿಕೊಡಬೇಕು. ದಿನಾಂಕ: 06-08-2026 ರ ನಂತರ ಡಿ.ಡಿ. ಯನ್ನು ಪಡೆದು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ರೂ. 500/-, ಪ.ಜಾ./ಪ.ಪಂ./ಪ್ರವರ್ಗ-1ರವರಿಗೆ ರೂ. 250/- ಆಗಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳ (Nationalized Bank) ಡಿ.ಡಿ. ಯನ್ನು Comptroller, KSNUAHS, Shivamogga –577 412 ಇವರ ಹೆಸರಿನಲ್ಲಿ ಪಡೆದು ಎಲ್ಲಾ ಅಗತ್ಯ ಅಡಕಗಳೊಂದಿಗೆ ಭರ್ತಿಮಾಡಿದ ಅರ್ಜಿಗಳನ್ನು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಇರುವಕ್ಕಿ ಆವರಣ- 577 412 ಇಲ್ಲಿಗೆ ದಿನಾಂಕ: 06-08-2026 ರೊಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದು. ದಿನಾಂಕ: 06-08-2026 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರವೇಶ ಮತ್ತು ಆಯ್ಕೆ ವಿಧಾನ: ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳವಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪತ್ರ ಹಾಗೂ ವೆಬ್‌ಸೈಟ್ ಮುಖಾಂತರ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

0

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ ಖಂಡಿತಾ ಅಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಶಾಂತಿ ಕದಡಲು ವಿದೇಶಿ ಹಣದ ಬಲದಿಂದ ಹೆಣೆಯಲಾದ ಭಾರತ ವಿರೋಧಿ, ‘ಟೂಲ್ ಕಿಟ್’ ಅಜೆಂಡಾ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರ ವಿರೋಧಿ ಶಕ್ತಿಗಳ ಈ ಕರಾಳ ಕುತಂತ್ರವನ್ನು ತೀವ್ರವಾಗಿ ಖಂಡಿಸಿರುವ ಶಾಸಕರು, ದೇಶದ ಭವಿಷ್ಯವಾಗಿರುವ ಸಾಮಾನ್ಯ ವಿದ್ಯಾರ್ಥಿಗಳ ಅಮಾಯಕತೆಯನ್ನು ತಮಗಾಗಿ ದಾಳವಾಗಿ ಬಳಸಿಕೊಂಡು, ಅವರ ಮರೆಯಲ್ಲಿ ನಿಂತು ದೇಶದಲ್ಲಿ ಕಿಚ್ಚು ಹಚ್ಚಲು ಈ ಮಾವೋವಾದಿ, ಕುಖ್ಯಾತ ‘ತುಕುಡೆ ಗ್ಯಾಂಗ್’, ಎಡಪಕ್ಷಗಳು ಹಾಗೂ ಎಡಪಂಥೀಯ ದೇಶದ್ರೋಹಿ ಶಕ್ತಿಗಳು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಅಭಿವೃದ್ಧಿ ಅಥವಾ ವಿದ್ಯಾರ್ಥಿ ಹಿತಾಸಕ್ತಿಗೂ, ಈ ರಾಷ್ಟ್ರದ್ರೋಹಿ ಗುಂಪುಗಳ ಹಿಂಸಾತ್ಮಕ ಗಲಭೆಗೂ ಯಾವುದೇ ಸಂಬಂಧವಿಲ್ಲ. ದೇಶದ ಒಳಗೆ ಅಶಾಂತಿ ಸೃಷ್ಟಿಸುವುದು ಮತ್ತು ಭಾರತ ವಿರೋಧಿ ನೀತಿಯನ್ನು ಹರಡುವುದೇ ಇವರ ಏಕೈಕ ಕರಾಳ ಸಿದ್ಧಾಂತವಾಗಿದೆ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ವಿದೇಶಿ ನಿಕಟಪೂರ್ವ ಏಜೆನ್ಸಿಗಳು ಹಾಗೂ ‘ಡೀಪ್ ಸ್ಟೇಟ್’ ಪ್ರಾಯೋಜಕತ್ವದ ಕುಖ್ಯಾತ ಜಾಲದ ಮೂಲಕ ಭಾರತದಲ್ಲಿ ಸತತವಾಗಿ ಗಲಭೆ, ಅರಾಜಕತೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸುವುದು ಇವರ ಮುಖ್ಯ ಅಜೆಂಡಾವಾಗಿದೆ. ಭಾರತದ ಜನತೆಯ ಬಹುಮತದೊಂದಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಬಲಿಷ್ಟ ಸರ್ಕಾರವನ್ನು ಹಾಗೂ ವಿಶ್ವಗುರು ಭಾರತದ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವವನ್ನು ಅಸ್ಥಿರಗೊಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ರೂಪಿಸಲಾಗಿರುವ ಬೃಹತ್ ಅಂತರರಾಷ್ಟ್ರೀಯ ಸಂಚು ಈಗ ದೇಶದ ಜನತೆಯ ಎದುರು ಸಂಪೂರ್ಣವಾಗಿ ಬಯಲಾಗಿದೆ.

ವಿದೇಶಿ ಕಪ್ಪು ಹಣದ ಬಲದಿಂದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅರಾಜಕತೆ ಸೃಷ್ಟಿಸಿ, ಸರ್ಕಾರವನ್ನು ಉರುಳಿಸಬಹುದು ಎಂದು ಭ್ರಮೆಯಲ್ಲಿರುವ ಇಂತಹ ರಾಷ್ಟ್ರವಿರೋಧಿ ಶಕ್ತಿಗಳಿಗೆ ಭಾರತದ ಸಾರ್ವಭೌಮತ್ವ ಮತ್ತು ಜಾಗೃತ ಸಮಾಜ ಎಂದಿಗೂ ತಕ್ಕ ಪಾಠ ಕಲಿಸಲಿದೆ. ದೇಶದ ಶಾಂತಿ, ನೆಮ್ಮದಿ ಮತ್ತು ಸಮಗ್ರತೆಗೆ ಭಂಗ ತರಲು ಸಜ್ಜಾಗಿರುವ ಇಂತಹ ವಿದ್ರೋಹಿ ನೆಟ್‌ವರ್ಕ್ ಅನ್ನು ರಾಜ್ಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ತಕ್ಷಣವೇ ಬೇರುಸಹಿತ ಕಿತ್ತೊಗೆಯಬೇಕು. ವಿದ್ಯಾರ್ಥಿಗಳ ಸೋಗಿನಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರತಿಯೊಂದು ಕರಾಳ ಹಸ್ತವನ್ನು ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಿ ಕಾನೂನಿನ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

S.N. Channabasappa ಇಷ್ಟೊಂದು ಬೃಹತ್ ಮಟ್ಟದ ಅಂತರರಾಷ್ಟ್ರೀಯ ಷಡ್ಯಂತ್ರ ಹಾಗೂ ಗಲಭೆಯ ಹುನ್ನಾರವನ್ನು ಅತ್ಯಂತ ಸಮ್ಮುಕವಾಗಿ, ಧೈರ್ಯದಿಂದ ಮತ್ತು ಸಮಯಪ್ರಜ್ಞೆಯಿಂದ ನಿಭಾಯಿಸಿ ದೇಶದ ರಾಜಧಾನಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿದ ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ ಉನ್ನತಾಧಿಕಾರಿಗಳಿಗೆ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಯಾವುದೇ ಮಾಧ್ಯಮ ಪ್ರೇರಿತ ‘ಟೂಲ್ ಕಿಟ್’ ಅಜೆಂಡಾಗಳು ಭಾರತದ ಅಭಿವೃದ್ಧಿಯ ಮುನ್ನಡೆಯನ್ನು ತಡೆಯಲು ಸಾಧ್ಯವಿಲ್ಲ. ದೇಶದ ಒಗ್ಗಟ್ಟು, ಅಭಿವೃದ್ಧಿ ಮತ್ತು ಸಮಗ್ರತೆಯನ್ನು ಕಾಯಲು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ಜಾಗೃತನಾಗಿ ನಿಲ್ಲಬೇಕಿದೆ ಎಂದು ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗ ಗುಡ್ ಸರ್ಕಲ್ ಬಸ್ ತಂಗುದಾಣ ಉದ್ಘಾಟನೆ

0

ಶಿವಮೊಗ್ಗ ನಗರದದ ಗೋಪಾಲಗೌಡ ಬಡಾವಣೆಯ ಸ್ವಾಮಿ ವಿವೇಕಾನಂದ ಸರ್ಕಲ್ (ಗುಡ್ ಲಕ್ ಸರ್ಕಲ್) ಬಳಿ ನವೀಕರಿಸಿರುವ ಬಸ್ ತಂಗುದಾಣವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಗುರುವಾರ ಉದ್ಘಾಟನೆ ಮಾಡಲಾಯಿತು.

ಈ ಬಸ್ ತಂಗುದಾಣವನ್ನು ಮಾರ್ಚ್ 2004 ರಂದು ರೋಟರಿ ಉತ್ತರ ಕ್ಲಬ್ ನ ವತಿಯಿಂದ ನಿರ್ಮಿಸಲಾಗಿತ್ತು. ಅದನ್ನು ಈಗ ಸಂಪೂರ್ಣವಾಗಿ ದುರಸ್ಥಿ ಮಾಡಿ ನವೀಕರಣಗೊಳಿಸಲಾಯಿತು.

ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉತ್ತರ ಕ್ಲಬ್ ನ ಅಧ್ಯಕ್ಷರಾದ ಡಾ. ಶಿವಕುಮಾರ್ ಕೆ. ರವರು, ರೋಟರಿ ಕ್ಲಬ್ ಗಳು ದೇಶದೆಲ್ಲೆಡೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನಮ್ಮ ಉತ್ತರ ಕ್ಲಬ್ ಕೂಡ ಇಂತಹ ಸಾರ್ವಜನಿಕರಿಗೆ ಉಪಯೋಗ ಆಗುವಂತ ಕಾರ್ಯಕ್ರಮಗಳನ್ನು ಮೊದಲಿನಿಂದಲೂ ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸ್ ತಂಗುದಾಣವನ್ನು ವಿನೂತನಗೊಳಿಸಲು ಸಹಕರಿಸಿದಂತ ನಾಗದೇವತೆ ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಮಲಿಂಗಪ್ಪ ಮತ್ತು ಮಜ್ಜಿಗೆ ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ರೋಟರಿ ಉತ್ತರದ ಅಧ್ಯಕ್ಷರಾದ ಡಾ. ಶಿವಕುಮಾರ್ ಕೆ., ಕಾರ್ಯದರ್ಶಿ ಶ್ರೀಧರ್ ಎನ್., ಖಜಾಂಚಿ ವೆಂಕಟೇಶ್, ನಿರ್ದೇಶಕ ಶರವಣ, ಹಿರಿಯ ರೋಟರಿಯನ್ ಗಳಾದ ಚಂದ್ರಶೇಖರ್, ಭಾರತಿ ಚಂದ್ರಶೇಖರ, ಹಾಲಪ್ಪ ಮಜ್ಜಿಗೆ, ನರಸಿಂಹ ಪ್ರಸಾದ್, ರವೀಂದ್ರನಾಥ್ ಐತಾಳ್, ಎಸ್.ಆರ್.ನಾಗರಾಜ್, ಶೇಷಾದ್ರಿ, ರಮೇಶ್, ಸುದರ್ಶನ್, ಉಷಾ, ದತ್ತಾತ್ರಿ, ನಾಗರಾಜ್ ಕೆ.ಬಿ., ರಾಘವೇಂದ್ರ ಇನ್ನಿತರ ಸಾರ್ವಜನಿಕರು ಹಾಜರಿದ್ದರು.

ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ

0

ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸ ಕೈಗೊಂಡು, ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್‌ ಈಶ್ವರ್, ಗೌರಿಬಿದನೂರು ಶಾಸಕರಾದ ಕೆ.ಹೆಚ್.ಪುಟ್ಟಸ್ವಾಮಿಗೌಡ ಅವರು, ಚಿಕ್ಕಾಬಳ್ಳಾಪುರ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಎನ್.ಮಂಜುಳಾ, ರಾಜ್ಯ ವಿಪತ್ತು ನಿರ್ವಹಣೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಸಿಇಒ ನವೀನ್ ಭಟ್ ಹಾಗೂ ಮುಂತಾದವರು ಇದ್ದರು.

ಕ್ರೀಡಾ ಇಲಾಖೆಯ ವಿವಿಧ ಯೋಜನೆಗಳಡಿ ಪ್ರಶಸ್ತಿ ಹಾಗೂ ಪ್ರೋತ್ಸಾಹ ಧನಕ್ಕೆ ಅರ್ಜಿ‌ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2025 ನೇ ಸಾಲಿಗೆ ರಾಜ್ಯದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ಹಾಗು ಆಯಾ ಗುಂಪು ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುನ್ನತ ಸಾಧನೆಗಳಿಗಾಗಿ ಏಕಲವ್ಯ ಪ್ರಶಸ್ತಿ, ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರೀಯ/ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯ/ರಾಷ್ಟ್ರಕ್ಕೆ ಕೀರ್ತಿ ತಂದ ಕ್ರೀಡಾಪಟುಗಳನ್ನು ರೂಪಿಸಿದ ಹಾಗು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ತರಬೇತುದಾರರನ್ನು ಗೌರವಿಸುವ ಜೀವಮಾನ ಸಾಧನೆ ಪ್ರಶಸ್ತಿ, ರಾಜ್ಯದಲ್ಲಿ ಗ್ರಾಮೀಣ ಕ್ರೀಡೆಯ ಅಭಿವೃದ್ಧಿಗಾಗಿ ಸ್ಥಳೀಯ ಮತ್ತು ಪಾರಂಪರಿಕ ಕ್ರೀಡೆಗಳಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳಿಗಾಗಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ರಾಜ್ಯದಲ್ಲಿ ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಕ್ರೀಡಾ ಪೋಷಕರಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ, ಭಾರತ ಸರ್ಕಾರದಿಂದ ಅಂಗೀಕೃತವಾಗಿರುವ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ/ಪದಕ ವಿಜೇತರಾಗಿದ್ದಲ್ಲಿ ನಗದು ಪುರಸ್ಕಾರ ಪ್ರಶಸ್ತಿ, ಕ್ರೀಡಾಪಟುಗಳು ಮಾಧ್ಯಮಿಕ/ಫ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾಜ್ಯ ಮಟ್ಟದ ಸ್ಫರ್ದೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಹಾಗೂ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು.

ಅಂದರೆ ಅರ್ಜಿ ಆಹ್ವಾನಿಸುವ ಹಿಂದಿನ ವರ್ಷದ ಶೈಕ್ಷಣಿಕ ವರ್ಷ ಅಂದರೆ ಏಪ್ರಿಲ್ 01 ರಿಂದ ಮಾರ್ಚ್ 31ರ ಅವಧಿಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಸಾಧನೆಯನ್ನು ಮಾಡಿದವರಿಗೆ ಕ್ರೀಡಾ ವಿದ್ಯಾರ್ಥಿ ವೇತನ
ಹಾಗೂ
2026-27ನೇ ಸಾಲಿಗೆ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಸವತಿ ಮಾಡುವ ಮೂಲಕ ಪ್ರೋತ್ಸಾಹಧನ ನೀಡುವ ಶೈಕ್ಷಣಿಕ ಮರುಪಾವತಿ ಪ್ರೋತ್ಸಾಹಧನ, ಮಾನ್ಯತೆ ಪಡೆದ ಕ್ರೀಡಾಸಂಸ್ಥೆಗಳ ಲಿಖಿತ ಶಿಫಾರಸುಗಳ ಮೂಲಕ ಪ್ರತಿಭಾವಂತ ಹಾಗೂ 2028ರ ಬೇಸಿಗೆ ಒಲಂಪಿಕ್ಸ್/ ಪ್ಯಾರಲಿಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದು, ಪದಕ ಗೆಲ್ಲುವ ಸಂಭಾವ್ಯ ಕ್ರೀಡಾಪಟುಗಳನ್ನು ಗುರುತಿಸಿ, ಅವರಲ್ಲಿ 60 ಅತ್ಯಂತ ಅರ್ಹ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹಧನ ನೀಡುವ ಮೂಲಕ ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಲು ಗುರಿ ಒಲಂಪಿಕ್ ಪದಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕ್ರೀಡಾಪಟುಗಳು https://sevasindhu.karnataka.gov.in ಮೂಲಕ ಜು. 31 ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮ

0

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ.ಎಸ್. ಷಡಾಕ್ಷರಿಯವರ ಜನ್ಮದಿನದ ಅಂಗವಾಗಿ, ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ವತಿಯಿಂದ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವೃದ್ಧಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಉಪಹಾರ ಹಾಗೂ ತಾಜಾ ಹಣ್ಣುಗಳನ್ನು ವಿತರಿಸಿ, ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆಯಲಾಯಿತು. ಹಿರಿಯರ ಆರೋಗ್ಯ, ಗೌರವ ಮತ್ತು ಕ್ಷೇಮದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಈ ಸೇವಾ ಕಾರ್ಯವು ಮಾನವೀಯ ಮೌಲ್ಯಗಳನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಿ ನೆರವೇರಿತು.

ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು, ವೃದ್ಧಾಶ್ರಮದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

ಹೊಳೆಹೊನ್ನೂರು ಮಲ್ಲಾಪುರ ವಿತರಣಾ ಕೇಂದ್ರದಲ್ಲಿ ತುರ್ತು ರಿಪೇರಿ: ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

0

ಹೊಳೆಹೊನ್ನೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ-ವಿಭಾಗ ವ್ಯಾಪ್ತಿಯ ಘಟಕ-4 ಆನವೇರಿ ಶಾಖೆಗೆ ಸಂಬಂಧಿಸಿದ 66/11 ಕೆವಿ ಮಲ್ಲಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ: 23.07.2026 ರಿಂದ 25.07.2026 ರವರೆಗೆ ಮಲ್ಲಾಪುರ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಮೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಹೊಳೆಹೊನ್ನೂರಿ ಜಂಬರಘಟ್ಟ ಸಮೀಪ ಅಕ್ರಮ ಜೂಜು : ಡ್ರೋಣ್ ಮೂಲಕ ಪತ್ತೆ, ಆರು ಮಂದಿ ಬಂಧನ

0

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಘಟ್ಟ ಸಮೀಪ ಈ ಹೈಟೆಕ್ ಕಾರ್ಯಾಚರಣೆ ನಡೆದಿದೆ.

ತಿಮ್ಮಪ್ಪನಮಟ್ಟಿ ರಸ್ತೆಯ ದೇವಸ್ಥಾನದ ಬಳಿ ರಹಸ್ಯವಾಗಿ ಅಕ್ರಮ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮೊದಲು ಡ್ರೋಣ್ ಕ್ಯಾಮೆರಾವನ್ನು ಹಾರಿಸಿ ಸ್ಥಳದ ಮೇಲೆ ನಿಗಾ ವಹಿಸಿದರು.

ಜೂಜಾಟ ನಡೆಯುತ್ತಿರುವುದು ದೃಢಪಟ್ಟ ಬಳಿಕ, ಆಟದಲ್ಲಿ ತೊಡಗಿದ್ದವರು ಪರಾರಿಯಾಗದಂತೆ ಎಲ್ಲ ದಿಕ್ಕುಗಳಿಂದ ಸ್ಥಳವನ್ನು ಸುತ್ತುವರಿದು ದಾಳಿ ನಡೆಸಿದರು.

ಕಾರ್ಯಾಚರಣೆಯಲ್ಲಿ ರಮೇಶ್, ರಂಗೇಶ್, ಸುದೀಪ್, ನಯಾಜ್, ಅಬೀದ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜೂಜಾಟದ ಸ್ಥಳದಲ್ಲಿದ್ದ ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಚಟುವಟಿಕೆಗಳ ವಿರುದ್ಧ ಇಂತಹ ಹೈಟೆಕ್ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಜುಲೈ 19. ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ

0

ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಹಾಗೂ ಶಿವಮೊಗ್ಗ ಬಿ. ಎಚ್. ರಸ್ತೆಯ ಬಿದಿರೆ ಕ್ರಾಸ್ ನಲ್ಲಿರುವ ಶಿವಮೊಗ್ಗದ ಶ್ರೀ ಶಿರಡಿ ಸಾಯಿಬಾಬಾ ಮಂದಿರಾ ಟ್ರಸ್ಟ್ ವತಿಯಿಂದ ಬಿದಿರೆಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರ (ದೇಗುಲ) ದಲ್ಲಿ ಬರುವ ಜುಲೈ 29ರ ಬುಧವಾರ ವೈಭವದ “ಗುರು ಪೂರ್ಣಿಮೆ” ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ.
ಶಿರಡಿ ಸಾಯಿಬಾಬಾ ದೇಗುಲದಂತೆಯೇ ನಿರ್ಮಾಣವಾಗಿರುವ ಸಾಯಿಬಾಬಾ ಮಂದಿರದಲ್ಲಿ ಈ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಎಂದಿನಂತೆ ಈ ವರ್ಷವೂ ಆಚರಿಸಲು ಹಾಗೂ ಅದಕ್ಕೂ ಪೂರ್ವದಲ್ಲಿ ಮೂರು ದಿನಗಳ ಕಾಲ ವೈಭವದ ಶ್ರದ್ದೆ ಭಕ್ತಿಯ ಪೂಜಾರಾಧನೆ ಸಮಾರಂಭ ನಡೆಸಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಈ ಗುರುಪೂರ್ಣಿಮೆಗೆ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸಾಯಿಬಾಬಾ ಗುರುಗಳ ಕೃಪಾಶೀರ್ವಾದ ಪಡೆಯಲು ಕೋರಲಾಗಿದೆ.
ವೈಭವದ ಹಾಗೂ ಶ್ರದ್ಧೆ ಭಕ್ತಿಯ ಗುರುಪೂರ್ಣಿಮೆ ಆಚರಣೆಯಲ್ಲಿ ಪಾಲ್ಗೊಳ್ಳಲು ಮತ್ತು ವಿಶೇಷ ಪೂಜಾ ಆರಾಧನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 9845732240, 9448767067 ಗೆ ಸಂಪರ್ಕಿಸಲು ಕೋರಲಾಗಿದೆ.
✒️

ಭದ್ರಾವತಿಯಲ್ಲಿ ಎಸ್ಐಆರ್ ಕರ್ತವ್ಯನಿರತ ಅಧಿಕಾರಿ ಮೇಲೆ ಬೀದಿ ನಾಯಿ ದಾಳಿ

0

ಭದ್ರಾವತಿ ಹಳೇನಗರದ ಕೋಟೆ ಏರಿಯಾದಲ್ಲಿ ಮನೆ-ಮನೆಗೆ ತೆರಳಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಫಾರ್ಮ್‌ಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಕರ್ತವ್ಯನಿರತ ಬಿಎಲ್‌ಒ ರಹಮತುಲ್ಲಾ (50) ಅವರ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರ ಕಾಲಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಗಾಯಾಳು ರಹಮತುಲ್ಲಾ ಅವರನ್ನು ಉಪ ತಹಶೀಲ್ದಾರ್ ಮಂಜನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಎಸ್‌ಐಆರ್ ಕರ್ತವ್ಯದ ವೇಳೆ ಬಿಎಲ್‌ಒ ಮೇಲೆ ನಾಯಿ ದಾಳಿ ನಡೆದಿರುವುದು ಇದು ಎರಡನೇ ಘಟನೆ. ಎರಡು ವಾರಗಳ ಹಿಂದೆ ಸಾಗರದಲ್ಲಿಯೂ ಬಿಎಲ್‌ಒ ಲಕ್ಷ್ಮೀ ಸಿಂಗ್ ಅವರ ಮೇಲೆ ಇದೇ ರೀತಿಯ ನಾಯಿ ದಾಳಿ ನಡೆದಿತ್ತು.

ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮನೆ-ಮನೆಗೆ ತೆರಳುವ ಸಿಬ್ಬಂದಿಗೆ ಅಗತ್ಯ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.