Monday, August 3, 2026
Monday, August 3, 2026
Home Blog Page 14

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

0

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಮಯೂರ ಹೋಟೆಲ್‌ಗಳು ಹಾಗೂ ಇತರೆ ಆತಿಥ್ಯ ಕೇಂದ್ರಗಳನ್ನು ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ ಮತ್ತು ಅತ್ಯುತ್ತಮ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ಉನ್ನತೀಕರಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಕೆಎಸ್‌ಟಿಡಿಸಿಯಿಂದ ನಿರ್ಮಿಸಲಾದ ನೂತನ ‘ಮಯೂರ ಸನ್‌ರೈಸ್ ರೆಸ್ಟೋರೆಂಟ್’ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಅತ್ಯಂತ ಸುಂದರ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಎಸ್‌ಟಿಡಿಸಿ ಹಾಗೂ ಜಂಗಲ್ ಲಾಡ್ಜ್‌ಸ್ ಆ್ಯಂಡ್ ರೆಸಾರ್ಟ್ಸ್ ಆಸ್ತಿಗಳಿದ್ದರೂ, ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ. ಉತ್ತಮ ನಿರ್ವಹಣೆ, ಆಧುನಿಕ ಸೌಲಭ್ಯಗಳು, ವೃತ್ತಿಪರ ಆತಿಥ್ಯ ಸೇವೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಚರಣಾ ಪದ್ಧತಿಗಳನ್ನು ಅಳವಡಿಸುವ ಮೂಲಕ ಈ ಆಸ್ತಿಗಳಿಗೆ ಹೊಸ ಮೆರುಗು ನೀಡಲಾಗುವುದು ಎಂದು ಸಚಿವರು ಹೇಳಿದರು.

ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ತಾಜ್ ಸಂಸ್ಥೆಯ ಸಹಯೋಗದ ಅನುಭವವು ಸರ್ಕಾರಿ ಆತಿಥ್ಯ ಕ್ಷೇತ್ರದಲ್ಲಿ ವೃತ್ತಿಪರ ನಿರ್ವಹಣೆಯ ಮಹತ್ವವನ್ನು ತೋರಿಸಿದೆ. ಇದೇ ಅನುಭವದ ಆಧಾರದ ಮೇಲೆ ರಾಜ್ಯದ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಮಯೂರ ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಆಸ್ತಿಗಳಲ್ಲಿ ಖಾಸಗಿ ಆತಿಥ್ಯ ಕ್ಷೇತ್ರದ ಅತ್ಯುತ್ತಮ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

“ಪ್ರೀಮಿಯಂ ಆತಿಥ್ಯ ಸೇವೆಗಳು ಕೇವಲ ಐಷಾರಾಮಿ ಪ್ರವಾಸಿಗರಿಗೆ ಮಾತ್ರ ಸೀಮಿತವಾಗಬಾರದು. ಉತ್ತಮ ಗುಣಮಟ್ಟದ ವಸತಿ, ಆಹಾರ ಹಾಗೂ ಸೇವೆಗಳು ಮಧ್ಯಮ ವರ್ಗದ ಕುಟುಂಬಗಳಿಗೂ ಕೈಗೆಟಕುವ ದರದಲ್ಲಿ ದೊರೆಯಬೇಕು. ಪ್ರವಾಸೋದ್ಯಮವನ್ನು ಜನಸ್ನೇಹಿಯಾಗಿ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ರೂಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ,” ಎಂದು ಸಚಿವರು ಹೇಳಿದರು.

ಮಯೂರ ಹೋಟೆಲ್‌ಗಳ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹೋಟೆಲ್ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ಪರಿಣಿತರು ಹಾಗೂ ಪ್ರವಾಸೋದ್ಯಮ ತಜ್ಞರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದರು.

ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಯೂರ ಹೋಟೆಲ್‌ಗಳ ವಿನ್ಯಾಸ, ಕೊಠಡಿ ಸೌಲಭ್ಯಗಳು, ಆಹಾರ ಸೇವೆ, ಕಾರ್ಯಾಚರಣೆ, ಅತಿಥಿ ಸೇವೆ ಹಾಗೂ ನಿರ್ವಹಣಾ ಗುಣಮಟ್ಟವನ್ನು ಹಂತ ಹಂತವಾಗಿ ಉನ್ನತೀಕರಿಸಲಾಗುವುದು. ಹೋಟೆಲ್‌ಗಳ ಮಾಲೀಕತ್ವ ಸರ್ಕಾರದ ಬಳಿಯೇ ಮುಂದುವರಿಯಲಿದ್ದು, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿಯನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ನಂದಿಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕುರಿತು ಮಾತನಾಡಿದ ಸಚಿವರು, ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಬೆಟ್ಟದ ಮೇಲ್ಭಾಗಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಯಂತ್ರಿಸಿ, ಕೆಳಭಾಗದಲ್ಲಿಯೇ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.

ಅಲ್ಲಿಂದ ಪ್ರವಾಸಿಗರ ಸಂಚಾರಕ್ಕಾಗಿ ನಿಯೋಜಿತ ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ, ಬಹುನಿರೀಕ್ಷಿತ ನಂದಿಬೆಟ್ಟ ರೋಪ್‌ವೇ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ಹೇಳಿದರು.
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಗುಣಮಟ್ಟದ ಸೇವೆ ಹಾಗೂ ಪ್ರವಾಸಿಗರೊಂದಿಗೆ ಸೌಜನ್ಯದ ವರ್ತನೆಗೆ ಅತ್ಯುನ್ನತ ಆದ್ಯತೆ ನೀಡಬೇಕು. ‘ಅತಿಥಿ ದೇವೋ ಭವ’ ಎಂಬ ಭಾರತೀಯ ಆತಿಥ್ಯ ಸಂಸ್ಕೃತಿಯೇ ನಮ್ಮ ಸೇವೆಯ ಮೂಲಮಂತ್ರವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

K.J. George ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಸರ್ಕಾರಿ ಆತಿಥ್ಯ ಕ್ಷೇತ್ರದ ಗುರುತನ್ನು ಉಳಿಸಿಕೊಂಡೇ, ಖಾಸಗಿ ಆತಿಥ್ಯ ಕ್ಷೇತ್ರದ ಪರಿಣತಿ, ಸೇವಾ ಗುಣಮಟ್ಟ ಹಾಗೂ ನಿರ್ವಹಣಾ ಕಾರ್ಯಪದ್ಧತಿಗಳನ್ನು ಅಳವಡಿಸಿಕೊಂಡು ಮಯೂರ ಹೋಟೆಲ್‌ಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ತಿಳಿಸಿದರು.

ನಂದಿಬೆಟ್ಟ ರೋಪ್‌ವೇ ಯೋಜನೆ ಇಲಾಖೆಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಸಚಿವರ ನಿರ್ದೇಶನದಂತೆ ದೆಹಲಿಯಲ್ಲಿ ವಿಶೇಷ ಸಮನ್ವಯ ವ್ಯವಸ್ಥೆ ರೂಪಿಸಲಾಗಿದೆ. ಅಗತ್ಯ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯನ್ನು ಅನುಷ್ಠಾನದ ಹಂತಕ್ಕೆ ತರಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರವಾಸೋದ್ಯಮ ಇಲಾಖೆ ಆಯುಕ್ತ ಶಿವಪ್ರಸಾದ್ ಪಿ.ಆರ್. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿಲೀಂಧ್ರನಾಶಕ ಖರೀದಿಸಿದ ಅರ್ಹ ಕೃಷಿಕರು ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು

0

2026-27 ನೇ ಸಾಲಿನ ‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ ಯೋಜನೆಯಡಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕಾಗಿ ವಿವಿಧ ಶಿಲೀಂಧ್ರನಾಶಕ ಔಷಧಿಗಳನ್ನು ಖರೀದಿಸಿದ ಜಿಲ್ಲೆಯ ರೈತರಿಂದ ತೋಟಗಾರಿಕೆ ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಮಾರ್ಗಸೂಚಿಯನುಸಾರ, ರೈತರು 1 ಎಕರೆಗೆ ಕನಿಷ್ಠ ರೂ.2,000 ಮೌಲ್ಯದ ಶಿಲೀಂಧ್ರನಾಶಕವನ್ನು ಖರೀದಿಸಬಹುದಾಗಿದ್ದು, ಖರೀದಿ ವೆಚ್ಚಕ್ಕೆ ಶೇ. 30 ರಂತೆ ಪ್ರತಿ ಎಕರೆಗೆ ಗರಿಷ್ಠ ರೂ.600 ಸಹಾಯಧನ ಸಿಗಲಿದೆ. ಪ್ರತಿಯೊಬ್ಬ ಫಲಾನುಭವಿಯು ಗರಿಷ್ಠ 5 ಎಕರೆವರೆಗೆ (ಕನಿಷ್ಠ ರೂ.10,000 ಮೌಲ್ಯದ ಶಿಲೀಂಧ್ರನಾಶಕ ಖರೀದಿ) ಶೇ. 30 ರಷ್ಟು ಅಂದರೆ ಗರಿಷ್ಠ ರೂ.3,000 ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

ಈ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:

ಪಹಣಿ, ಆಧಾರ್ ಕಾರ್ಡ್, ಜಿಎಸ್ ಟಿ ಬಿಲ್ (ಖರೀದಿಸಿದ ಔಷಧಿಯ ಬಿಲ್), ಜಾತಿ ಪ್ರಮಾಣ ಪತ್ರ (ಎಸ್ ಸಿ/ ಎಸ್ ಟಿ ರೈತರಿಗೆ ಮಾತ್ರ).
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ -08182-279415/ 9980009438, ಭದ್ರಾವತಿ-08282-295029/9108252536, ಶಿಕಾರಿಪುರ-08187-223544/ 8310662972, ಸೊರಬ – 08184-295112 /9663634388, ಸಾಗರ-08183-295124/ 9900046121, ಹೊಸನಗರ – 08185-295364/ 9591695327, ತೀರ್ಥಹಳ್ಳಿ-08181-228151/ 9108280642 ಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

15 ಶುಶ್ರೂಷಾಧಿಕಾರಿಗಳ ಹುದ್ದೆಗೆ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ನೇಮಕಾತಿ ಪ್ರಕಟಣೆ

0

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 15 ಶುಶ್ರೂಷಾಧಿಕಾರಿ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆ/ಸಂಸ್ಥೆಗಳಲ್ಲಿ ನರ್ಸಿಂಗ್ ಶಿಕ್ಷಣ ಪೂರೈಸಿರಬೇಕು.
ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

ಈ ನೇಮಕಾತಿಯು ನಿಯಮಾನುಸಾರ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಿ.ಹೆಚ್. ರಸ್ತೆ, ಶಿವಮೊಗ್ಗವಿಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 30 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಭೇಟಿ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 08182-222382 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಸಾಹಿತ್ಯ ಕೇವಲ ಜೀವನದ ಪ್ರತಿಬಿಂಬವಲ್ಲ. ಸಮಾಜವನ್ನು ಪ್ರಶ್ನಿಸುವ ಸಾಮರ್ಥ್ಯ ಅನಾವರಣಗೊಳಿಸುವ ಶಕ್ತಿ- ಡಾ.ಟಿ.ಅವಿನಾಶ್

0

ಸಾಗರದ ಎಲ್. ಬಿ. ಮತ್ತು ಎಸ್. ಬಿ. ಎಸ್. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಾಹಿತ್ಯ ವೇದಿಕೆಯ (Literature club ) 2026-27 ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳಿಗೆ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯರಾದ ಡಾ. ಅವಿನಾಶ್ ಟಿ. ಸೋಮವಾರದಂದು ಜ್ಯೋತಿ ಬೆಳಗಿಸಿ ಚಾಲನೆಯನ್ನು ನೀಡಿದರು. “ಸಾಹಿತ್ಯ ಮತ್ತು ಸಮಾಜ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವಿನಾಶ್ ತಮ್ಮ ಉಪನ್ಯಾಸದಲ್ಲಿ ಸಾಹಿತ್ಯವು ಕೇವಲ ಜೀವನದ ಪ್ರತಿಬಿಂಬವಲ್ಲ, ಸಮಾಜವನ್ನು ಪ್ರಶ್ನಿಸುವ ಹಾಗೂ ಅದರ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿದೆ ಎಂದು ಹೇಳಿದರು. ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ದಲಿತ ಸಮಾಜ, ವಸಾಹತುಶಾಹಿ, ವಸಾಹತ್ತೋತ್ತರ ಸಮಾಜ ಸೇರಿದಂತೆ ವಿವಿಧ ಸಾಮಾಜಿಕ ಸನ್ನಿವೇಶಗಳಿವೆ. ವಿದೇಶಗಳಲ್ಲಿ ಶ್ವೇತ-ಕಪ್ಪು ಜನಾಂಗೀಯ ವಿಭಜನೆಗಳಂತಹ ಅನೇಕ ಸಾಮಾಜಿಕ ರಚನೆಗಳನ್ನು ಸಾಹಿತ್ಯವು ಸೂಕ್ಷ್ಮವಾಗಿ ದಾಖಲಿಸುತ್ತದೆ ಎಂದು ಹೇಳಿದನು. ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ಉದಾಹರಿಸಿ, ಒಂದು ಕೃತಿ ಕೇವಲ ಒಂದು ವಿಷಯವನ್ನಲ್ಲ, ಮಲೆನಾಡಿನ ಪ್ರಕೃತಿ, ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಮಾನವ ಸಂಬಂಧವನ್ನು ಸಮಗ್ರವಾಗಿ ಚಿತ್ರಿಸುತ್ತದೆ ಎಂದು ವಿವರಿಸಿದರು. ಫ್ರೆಂಚ್ ವಿಮರ್ಶಕ ರೊನಾಲ್ಟ್ ಬಾರ್ಥ್ ರವರ ಪ್ರಸಿದ್ಧ “Death of the Author” ಸಿದ್ಧಾಂತವನ್ನು ಉಲ್ಲೇಖಿಸಿ ಕೃತಿ ಪ್ರಕಟವಾದ ನಂತರ ಅದರ ಅರ್ಥವನ್ನು ಲೇಖಕನ ಉದ್ದೇಶದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ, ಓದುವರ ವ್ಯಾಖ್ಯಾನವು ಅಷ್ಟೇ ಮುಖ್ಯ ಎಂದು ತಿಳಿಸಿದರು. ದಲಿತ ಸಾಹಿತ್ಯದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಮರಾಠಿ ಆತ್ಮಕಥೆಗಳ ಕುರಿತು ಮಾತನಾಡಿ “I Am a Born Criminal” ಉದಾಹರಣೆಯ ಮೂಲಕ ಸಮಾಜದ ರೂಢಿಗಳು, ಜಾತಿ ವ್ಯವಸ್ಥೆ ಮತ್ತು ಅಸಮಾನತೆಗಳನ್ನು ಸಾಹಿತ್ಯ ಹೇಗೆ ಪ್ರಶ್ನಿಸುತ್ತದೆ ಎಂಬುದನ್ನು ವಿವರಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳ ಕುರಿತು ಮಾತನಾಡಿದ ಅವರು, ಓದುವರು ತಮ್ಮದೇ ದೃಷ್ಟಿಕೋನದಿಂದ ಕೃತಿಗಳನ್ನು ವಿಶ್ಲೇಷಿಸುತ್ತಾರೆ. ಕೆಲವರು ತೇಜಸ್ವಿಯವರ ಕಾದಂಬರಿಗಳಲ್ಲಿ ಜಾಗತೀಕರಣ (LPG) ದ ಪ್ರಭಾವವನ್ನು ಕಂಡರೂ, ಲೇಖಕರು ಅದನ್ನು ನಿರಾಕರಿಸಿರುವ ಉದಾಹರಣೆಯನ್ನು ನೀಡಿದರು. ಓದುಗನ ಅನುಭವದಿಂದ ಹೊಸ ಅರ್ಥಗಳು ಹುಟ್ಟಿಕೊಳ್ಳುವುದೇ ಸಾಹಿತ್ಯ ವಿಮರ್ಶೆಯ ಮೂಲತತ್ವ ಎಂದು ಹೇಳಿದರು. ವಿಲಿಯಂ ಶೇಕ್ಸಪಿಯರ್ ರವರ “The Merchant of Venice” ನಾಟಕವನ್ನು ಉಲ್ಲೇಖಿಸಿ, ಆಧುನಿಕ ವಿಮರ್ಶಕರು ಯಹೂದಿ – ಕ್ರೈಸ್ತ ಸಂಬಂಧಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾರೆ. ಸಾಹಿತ್ಯದ ಅರ್ಥವು ಕಾಲಾನುಗುಣವಾಗಿ ಹೊಸ ವ್ಯಾಖ್ಯಾನಗಳನ್ನು ಪಡೆಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯವನ್ನು ಪ್ರೀತಿಯಿಂದ ಅಧ್ಯಯನ ಮಾಡುವಂತೆ ಕರೆ ನೀಡಿದ ಅವರು, ಇಂಗ್ಲೀಷ್ ಭಾಷೆಯ ಜಾಗತಿಕ ಮಹತ್ವವನ್ನು ವಿವರಿಸಿದರು. ತಾವು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, “ಈ ಕಾಲೇಜು ನನಗೆ ಬದುಕು ಕೊಟ್ಟಿದೆ. ಈ ಸಂಸ್ಥೆಗೆ ಶ್ರೀಮಂತ ಪರಂಪರೆ ಇದೆ. ಆದ್ದರಿಂದ ಈ ಕಾಲೇಜಿನ ವಿದ್ಯಾರ್ಥಿಗಳಾಗಿರುವುದಕ್ಕೆ ಹೆಮ್ಮೆಪಡಬೇಕು” ಎಂದು ಹೇಳಿದರು. ನಂತರ ನಡೆದ ಸಂವಾದದಲ್ಲಿ “ಸಮಾಜವನ್ನು ಹೇಗೆ ಬದಲಾಯಿಸಬಹುದು?” ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು “ನಾವು ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಸಮಾಜ ಸಾಕಷ್ಟು ಬದಲಾಗಿದೆ. ಶಿಕ್ಷಣ ಮತ್ತು ಅವಕಾಶಗಳಲ್ಲಿ ಇಂದು ಬಹಳಷ್ಟು ಸಮಾನತೆ ಬಂದಿದೆ. ಸಕಾರಾತ್ಮಕ ಬದಲಾವಣೆಗಳನ್ನು ನಾವು ಸ್ವೀಕರಿಸಬೇಕು” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ. ಎಸ್. ರವರು ಆಂಗ್ಲ ಭಾಷಾ ಅಧ್ಯಯನದ ಉಪಯುಕ್ತತೆಯನ್ನು ವಿವರಿಸಿ, ಸಾಹಿತ್ಯದ ಅಧ್ಯಯನದಿಂದ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಲು ಸಾಧ್ಯವೆಂದು ನುಡಿದರು. ಬಿ.ಎ. ಪದವಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಐಚ್ಚಿಕ ವಿಷಯಗಳೆರಡನ್ನು ಹೊಂದಿರುವ ವಿಷಯ ಸಮೂಹದ ಮಹತ್ವವನ್ನು ಅವರು ತಿಳಿಸಿದರು.

ಎಂಡಿಎಫ್ ನ ಕಾರ್ಯದರ್ಶಿ ಡಾ. ಎಚ್. ಎಂ. ಶಿವಕುಮಾರ ರವರು ಮಾತನಾಡಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಉಪನ್ಯಾಸಕರಾದ ಡಾ. ಹರ್ಷ ವಿಮನ್, ಅಪರ್ಣ, ಶುಭಾ ಮತ್ತಿತರರು ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿ ಶಶಿಧರ್ ನಡೆಸಿಕೊಟ್ಟರು ಮತ್ತು ಕ್ಲಬ್ ನ ಅಧ್ಯಕ್ಷರಾದ ಮಹೇಶ ಕಾರ್ಯದರ್ಶಿ ಉಷಾ ಮತ್ತು ಖಜಾಂಚಿ ಸಂಜನಾ ವೇದಿಕೆಯಲ್ಲಿ ಹಾಜರಿದ್ದರು. ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಉತ್ತಮ ಸಂವಾದ ಮತ್ತು ಸ್ಪಂದನೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.

Department of Women and Child Development ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಅಂತಿಮ ಆಯ್ಕೆ ಪಟ್ಟಿ ಪ್ರಕಟ

0

Department of Women and Child Development ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಜಿಲ್ಲೆಯ ಶಿವಮೊಗ್ಗ –ಕಾರ್ಯಕರ್ತೆಯರು-14, ಸಹಾಯಕಿಯರು -77, ಸಾಗರ- ಕಾರ್ಯಕರ್ತೆಯರು-2, ಸಹಾಯಕಿಯರು -52, ಭದ್ರಾವತಿ- ಕಾರ್ಯಕರ್ತೆಯರು-18, ಸಹಾಯಕಿಯರು -56, ಸೊರಬ- ಕಾರ್ಯಕರ್ತೆಯರು-01, ಸಹಾಯಕಿಯರು -37, ಶಿಕಾರಿಪುರ- ಕಾರ್ಯಕರ್ತೆಯರು-01, ಸಹಾಯಕಿಯರು -22, ತೀರ್ಥಹಳ್ಳಿ- ಕಾರ್ಯಕರ್ತೆಯರು-11, ಸಹಾಯಕಿಯರು -50, ಹೊಸನಗರ- Department of Women and Child Development ಕಾರ್ಯಕರ್ತೆಯರು-06, ಸಹಾಯಕಿಯರು -114 ಸೇರಿದಂತೆ ಒಟ್ಟು 53 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 408 ಸಹಾಯಕಿಯರ ಹುದ್ದೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಆಯಾ ತಾಲೂಕು ಅಂಗನವಾಡಿಗಳಲ್ಲಿ ಪ್ರಕಟಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.

ಜಿಲ್ಲೆಯಲ್ಲಿನ ಸ್ವಯಂಸೇವಾ ಸಂಸ್ಥೆಗಳಿಗೆ ಕಡ್ಡಾಯ ನೋಂದಣಿ ಹಾಗೂ ನವೀಕರಣಕ್ಕೆ ಸೂಚನೆ

0

ಶಿವಮೊಗ್ಗ ಜಿಲ್ಲೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಸ್ವಯಂಸೇವಾ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಅವಧಿ ಮುಗಿದಿರುವ ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಅಂಗವಿಕಲರ ಅಧಿನಿಯಮ ೨೦೧೬ರ ಸೆಕ್ಷನ್ ೫೧, ೫೨ರಡಿ ಮತ್ತು ಪೋಷಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ೨೦೦೭ರ ಅಡಿಯಲ್ಲಿ ಸಂಸ್ಥೆಗಳು ನೋಂದಣಿಯಾಗುವುದು ಕಡ್ಡಾಯವಾಗಿದೆ.
ಅರ್ಹ ಸ್ವಯಂಸೇವಾ ಸಂಸ್ಥೆಗಳು ಸೇವಾಸಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ನೋಂದಣಿ ಪ್ರತಿಯನ್ನು ಸಲ್ಲಿಸಬೇಕು.
ಈಗಾಗಲೇ ನೋಂದಣಿಯಾಗಿದ್ದು ಅವಧಿ ಮುಕ್ತಾಯವಾಗಿದ್ದರೆ, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ ಅದರ ಪ್ರತಿಯೊಂದಿಗೆ ಕಛೇರಿಗೆ ಮಾಹಿತಿ ನೀಡತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ 08182-251676 / 9538905242, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಛೇರಿ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

ಜಿಲ್ಲೆಯಲ್ಲಿ “ಭಾರತ್ ಜೋಡೋ ” ಯುವಕ ಸಂಘಗಳ ಸ್ಥಾಪನೆಗೆ ಕ್ರಮ- ಪ್ರಭುಲಿಂಗ ಕವಳಿಕಟ್ಟಿ

0

ರಾಜ್ಯ ಸರ್ಕಾರವು ಯುವಜನರಲ್ಲಿ ಕ್ರೀಡೆ, ವೈಜ್ಞಾನಿಕ ಮನೋಭಾವ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಸಂವಿಧಾನದ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಸದುದ್ದೇಶದಿಂದ ರಾಜ್ಯಾದ್ಯಂತ ಹತ್ತು ಸಾವಿರ “ಭಾರತ್ ಜೋಡೋ ಯುವಕ ಸಂಘ” ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ “ಭಾರತ್ ಜೋಡೋ ಯುವಕ ಸಂಘ” ಗಳ ರಚನೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಘದ ಸದಸ್ಯರಾಗಲು ಕನಿಷ್ಠ 16 ರಿಂದ ಗರಿಷ್ಠ 35 ವರ್ಷದೊಳಗಿನ ಯುವಕ-ಯುವತಿಯರಿಗೆ ಅವಕಾಶವಿದ್ದು, ಪ್ರತಿ ಸಂಘದಲ್ಲಿ ಕನಿಷ್ಠ 100 ರಿಂದ 250 ಯುವ ಸದಸ್ಯರು ಇರಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಹಾಗೂ ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ (4,000 ದಿಂದ 10,000 ಜನರಿಗೆ ಒಂದು) ಸಂಘಗಳನ್ನು ರಚಿಸಬಹುದಾಗಿದೆ ಎಂದ ಅವರು, ಪ್ರತಿ ಸಂಘಕ್ಕೆ ಸರ್ಕಾರವು ವಾರ್ಷಿಕವಾಗಿ ₹10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ಸಂಘದ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲಿದೆ ಎಂದರು.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ. ಭಾರತ್‌ ಜೋಡೋ ಯುವ ಸಂಘಗಳ ಮೂಲಕ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಅವರನ್ನು ಸಬಲೀಕರಣಗೊಳಿಸಿ, ನಾಡಿನ ಸತ್ಪ್ರಜೆಗಳಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅನುದಾನದ ಹಣವನ್ನು ಸ್ಪೋರ್ಟ್ಸ್ ಮೆಟೀರಿಯಲ್ಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಗ್ರಂಥಾಲಯ ಅಥವಾ ಸಂಘದ ಆಫೀಸ್‌ಗೆ ಬೇಕಾದ ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಮಾಡಲು ಮಾತ್ರ ಬಳಸಬಹುದು. ತರಬೇತುದಾರರಿಗೆ ಗೌರವಧನವಿದೆ. ಪ್ರತಿ ಸಂಘದಲ್ಲಿ ಯುವಕರಿಗೆ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಸಂಘದಲ್ಲಿ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿ ರಚನೆಯಾಗಿರಲಿದೆ. ಈ ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರು ಇರಲಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಮೀಸಲಾತಿ ಕಡ್ಡಾಯ. ನಿಯಮಾನುಸಾರ ರಚನೆಗೊಂಡ ಸಮಿತಿಗೆ 2ವರ್ಷಗಳ ಅಧಿಕಾರಾವಧಿ ನಿಗಧಿಪಡಿಸಿದೆ. ಈ ಸದಸ್ಯರು ಮುಂದಿನ ಅವಧಿಗೆ ಮುಂದುವರೆಯುವಂತಿಲ್ಲ.
ಸಂಘವು ಅಳವಡಿಸಿಕೊಂಡಿರುವ ಪ್ರಮುಖ ಚಟುವಟಿಕೆಗಳನ್ನು ಮಾಡಬೇಕು. ವಿಶೇಷವಾಗಿ ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಸಾಂಪ್ರದಾಯಿಕ ಆಟಗಳ ಆಯೋಜನೆ. ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ, ಕಲ್ಯಾಣಿಗಳ ಸ್ವಚ್ಛತೆ, ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಸಸಿ ನೆಡುವುದು, ಹವಾಮಾನ ಬದಲಾವಣೆ ಜಾಗೃತಿ ನಡೆಸಬೇಕು. ರಕ್ತದಾನ ಶಿಬಿರಗಳು, ಮಾನಸಿಕ ಆರೋಗ್ಯ ಜಾಗೃತಿ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾವೈಕ್ಯತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಇದರ ಜೊತೆ ಸ್ಕಿಲ್‌ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ನೀಡಬೇಕು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಮಹಾತ್ಮರ ಜಯಂತಿಗಳ ಆಚರಣೆ ಹಾಗೂ ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸೈಬರ್ ಸುರಕ್ಷತೆ ಜಾಗೃತಿ, ಸಂಚಾರ ನಿಯಮಗಳ ಜಾಗೃತಿ, ಕೃಷಿ ನಾವೀನ್ಯತೆ ಹಾಗೂ ಮಾದಕ ವಸ್ತುಗಳ ವಿರೋಧಿ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುವುದು ಎಂದವರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌, ಕುವೆಂಪು ವಿವಿ. ಎನ್.ಎಸ್.ಎಸ್. ಸಂಯೋಜಕಿ ಶ್ರೀಮತಿ ಶುಭಾ ಮರವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭೀಕರ ಪರಿಣಾಮ ತರಲಿರುವ”ಎಲ್ ನಿನೋ”. ಮುನ್ನಚ್ಚರಿಕೆ ಮಾಹಿತಿ ಲೇ: ಡಾ.ಶಾಲಿನಿ ರಜನೀಶ್.ಸರ್ಕಾರದ ಮುಖ್ಯ ಕಾರ್ಯದರ್ಶಿ

0

ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ’ (El Niño) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ.

​ಏನಿದು ಎಲ್ ನಿನೋ? :

ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಕಾಯುವ ವಿದ್ಯಮಾನವನ್ನು ‘ಎಲ್ ನಿನೋ’ (ಸ್ಪ್ಯಾನಿಷ್ ಭಾಷೆಯಲ್ಲಿ ‘ಪುಟ್ಟ ಬಾಲಕ’ ಅಥವಾ ‘ಯೇಸು ಕ್ರಿಸ್ತ’) ಎನ್ನಲಾಗುತ್ತದೆ.

​ಈ ಘಟನೆಯು ಜಾಗತಿಕ ಗಾಳಿಯ ಮಾದರಿ ಹಾಗೂ ಮಳೆಯ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಕಳೆದ 150 ವರ್ಷಗಳಲ್ಲೇ ಅತ್ಯಂತ ಪ್ರಬಲ ಎಲ್ ನಿನೋ ಆವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದರ ಪರಿಣಾಮವಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕ್ಷೀಣಿಸಿ ಬರದ ಛಾಯೆ ಮೂಡುವ ಭೀತಿ ಎದುರಾಗಿದೆ.

ತಾಪಮಾನ ಏರಿಕೆ ಮತ್ತು ಬರದ ಮುನ್ನೆಚ್ಚರಿಕೆ :

​ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ನೀಡಿದ ಸೂಚನೆಯಂತೆ, ಈ ಹವಾಮಾನ ವೈಪರೀತ್ಯವು 2027ರ ಮೇ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ತಾಪಮಾನ ವೃದ್ಧಿ :

ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದ್ದು, ತೀವ್ರ ಕಾವು ಉಂಟಾಗಲಿದೆ.
​ಮುಂಗಾರು ವೈಫಲ್ಯ ಹಾಗೂ ಜಲಕ್ಷಾಮ, ಮಳೆಯ ಕೊರತೆಯಿಂದ ಜಲಾಶಯಗಳ ಮಟ್ಟ ಕುಸಿದು, ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ತಲೆದೋರಬಹುದು.

ಆರ್ಥಿಕ ನಷ್ಟ :

ಕೃಷಿ ಉತ್ಪಾದನೆ ಕುಸಿದು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಸರ್ಕಾರದ ಪ್ರಮುಖ ರಕ್ಷಣಾತ್ಮಕ ಕ್ರಮಗಳು ಹಾಗೂ ಕಾರ್ಯಕ್ರಮಗಳು:

ಬೋರ್‌ವೆಲ್ ಮರುಪೂರಣ (Recharge) ಮತ್ತು ಅಂತರ್ಜಲ ರಕ್ಷಣೆ, ​K-GIS ಡಿಜಿಟಲ್ ನೋಂದಣಿ, ರಾಜ್ಯದಲ್ಲಿರುವ ಸುಮಾರು 37 ಲಕ್ಷ ಬೋರ್‌ವೆಲ್‌ಗಳ ಸಮಗ್ರ ಮಾಹಿತಿಯನ್ನು KSRSACನ K-GIS ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ.

ತಾಂತ್ರಿಕ ತರಬೇತಿ ಹಾಗೂ ಪ್ರಗತಿ ಪರಿಶೀಲನೆ :

ಬೋರ್‌ವೆಲ್‌ಗಳ ತಾಂತ್ರಿಕ ಪರಿಶೀಲನೆ, ರಿಪೇರಿ ಮತ್ತು ಮರುಪೂರಣ ಕಾರ್ಯಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ.

ತೀವ್ರವಾಗಿ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ (ಅತಿ ಹೆಚ್ಚು ಬಳಕೆಯಾದ ವಲಯಗಳಲ್ಲಿ) ಹೊಸ ಬೋರ್‌ವೆಲ್ ಕೊರೆಯುವುದನ್ನು ನಿರ್ಬಂಧಿಸಲಾಗಿದೆ.

ಜಲ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ :

​VBGRAMG ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಣೆ, ವಿವಿಧ ಚೆಕ್ ಡ್ಯಾಮ್‌ಗಳ ನಿರ್ಮಾಣ (ಮಣ್ಣಿನ ತಡೆ, ಕಲ್ಲು ತುಂಬಿದ ತಂತಿ ಜಾಲದ ತಡೆ, ಕಲ್ಲಿನ ತಡೆ check-dams) ಹಾಗೂ ಸಾಂಪ್ರದಾಯಿಕ ನೀರಿನ ಮೂಲಗಳ ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗಿದೆ.

ಕಲುಷಿತ ನೀರು ಮರುಬಳಕೆ : ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ, ಉದ್ಯಾನವನ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗುತ್ತಿದೆ.

ವಾಟರ್ ಬಜೆಟಿಂಗ್ : ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೀರಿನ ಸರಿಯಾದ ನಿರ್ವಹಣೆಗಾಗಿ ‘ಜಲ ಆಯವ್ಯಯ’ (Water Budgeting) ಜಾರಿಗೆ ತರಲಾಗುತ್ತಿದೆ.

ರೈತರಿಗೆ ಆಸರೆ: ಬರನಿರೋಧಕ ಬೆಳೆಗಳ ಪ್ರೋತ್ಸಾಹ :

​ಮಳೆ ಅಭಾವದಿಂದ ಉಂಟಾಗುವ ನಷ್ಟ ತಪ್ಪಿಸಲು ರೈತರು ಕಡಿಮೆ ನೀರು ಬಳಸುವ ಮತ್ತು ತೀವ್ರ ಶಾಖವನ್ನು ತಡೆಯಬಲ್ಲ ಬೆಳೆಗಳನ್ನು ಬೆಳೆಯಲು ಸರ್ಕಾರ ಉತ್ತೇಜಿಸುತ್ತಿದೆ.

​ಸಿರಿಧಾನ್ಯಗಳು (Millets) : ಶೇಂಗಾ, ಜೋಳ, ರಾಗಿ ಇತ್ಯಾದಿ, ಕೇವಲ 250–400 ಮಿ.ಮೀ. ಮಳೆಯಲ್ಲೇ ಬೆಳೆಯಬಹುದು.

ದ್ವಿದಳ ಧಾನ್ಯಗಳು : ಕಡಲೆ, ತೊಗರಿ, ಅಲಸಂದಿ ಮುಂತಾದ ಬೆಳೆಗಳು. ಇವುಗಳ ಬೇರುಗಳು ಆಳಕ್ಕೆ ಇಳಿದು ತೇವಾಂಶ ಪಡೆಯುತ್ತವೆ ಹಾಗೂ ಮಣ್ಣಿನ ಸಾರ ಹೆಚ್ಚಿಸುತ್ತವೆ.

ಎಣ್ಣೆಕಾಳುಗಳು : ಸೂರ್ಯಕಾಂತಿ, ಎಳ್ಳು ಮತ್ತು ಹುಚ್ಚೆಳ್ಳು ಇತ್ಯಾದಿ. 400–750 ಮಿ.ಮೀ. ಮಳೆಯ ಅಗತ್ಯವಿದ್ದು, ಒಣ ಹವಾಮಾನ ತಡೆಯಬಲ್ಲವು.

​ಹವಾಮಾನ ವೈಪರೀತ್ಯದ ಈ ಕಠಿಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಪ್ರತಿಯೊಬ್ಬ ನಾಗರಿಕರೂ ಇಂಧನ ಬಳಕೆಯನ್ನು ಮಿತಿಗೊಳಿಸಬೇಕು, ಪುನರ್ಬಳಕೆ ಮಾಡಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು ಮತ್ತು ನೀರನ್ನು ಅತ್ಯಂತ ಮಿತವಾಗಿ ಬಳಸಿ ಸಂರಕ್ಷಿಸಬೇಕು.

ಸರ್ಕಾರದ ಈ ಬೃಹತ್ ಜಲ ಸಂರಕ್ಷಣಾ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕರೆ ನೀಡಿದ್ದಾರೆ.

ಸಮಯೋಚಿತವಾಗಿ ಅಲ್ಪ ಅವಧಿಯಲ್ಲಿ ಕಕ್ಷಿದಾರರಿಗೆ ಬೇಕಾದ ಪರಿಹಾರ ನೀಡುವಲ್ಲಿ ಮಧ್ಯಸ್ಥಿಕೆಯದ್ದು ಪ್ರಮುಖ ಪಾತ್ರ- ನ್ಯಾ. ಕೆ.ಪಿ.ಪ್ರೀತಿ

0

ಶಿವಮೊಗ್ಗ ಜಿಲ್ಲೆಯ 35 ಹಾಗೂ ಹಾವೇರಿ ಜಿಲ್ಲೆಯ 15 ನೂತನವಾಗಿ ಆಯ್ಕೆ ಮಾಡಲಾದ ಮಧ್ಯಸ್ಥಿಕೆದಾರರಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ರವರ ಸಹಯೋಗದಲ್ಲಿ ಆಯೋಜಿಸಲಾದ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿಯ ಕಾರ್ಯಗಾರವನ್ನು ಶಿವಮೊಗ್ಗದ ಡಿ.ಎ.ಆರ್. ಸಭಾಭವನದಲ್ಲಿ ಉದ್ಘಾಟಿಸಲಾಯಿತು. ತರಬೇತಿಯನ್ನು ಉದ್ಘಾಟಿಸಿದ ಶಿವಮೊಗ್ಗ ಜಿಲ್ಲೆಯ ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಎರಡನೆಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ. ಪಿ. ರವರು ಮಾತನಾಡಿ ಸಮಯೋಚಿತವಾಗಿ ಅಲ್ಪ ಅವಧಿಯಲ್ಲಿ ಪಕ್ಷಗಾರರಿಗೆ ಬೇಕಾದ ಪರಿಹಾರವನ್ನು ನೀಡುವಲ್ಲಿ ಮಧ್ಯಸ್ಥಿಕೆಯು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಸಹಕರಿಸುತ್ತಿರುವ ಎಲ್ಲಾ ನ್ಯಾಯವಾದಿಗಳು ಸಮಾಜದಲ್ಲಿ ಶಾಂತಿ ನೆಲೆಸಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಹರ್ಷದಾಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆಯು ಪೂರಕವಾದ ವಾತಾವರಣವನ್ನು ಉಭಯ ಪಕ್ಷಗಾರರಲ್ಲಿ ಉಂಟು ಮಾಡಿ ಪಕ್ಷಗಾರರು ತಮಗೆ ಬೇಕಾದ ನ್ಯಾಯವನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳುವಂತೆ ಹಾಗೂ ಅನುಕೂಲಕರ ವಾತಾವರಣದಲ್ಲಿ ತಮ್ಮ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಯು ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರಿಗೆ ನೀಡಲಾಗುತ್ತಿರುವ 40 ಗಂಟೆಯ ತರಬೇತಿಯು ತುಂಬಾ ಸಮಯೋಚಿತವಾಗಿದ್ದು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆದಾರರ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶ್ರೀಮತಿ ಶೈನಿ ಕೆ.ಎಂ. ರವರು ಮಾತನಾಡಿ ಮಧ್ಯಸ್ಥಿಕೆಯಲ್ಲಿ ನಡೆಯುವ ಮಾತಿನ ಬಗ್ಗೆ ಗೌಪ್ಯತೆ ಬಹಳ ಮುಖ್ಯವಾಗಿದ್ದು ಆ ಪ್ರಕ್ರಿಯೆಯಲ್ಲಿ ಒದಗಿ ಬರುವ ಸಂದರ್ಭಗಳ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ತರಹದ ಸಾಕ್ಷ್ಯವನ್ನು ನೀಡುವಂತಿಲ್ಲ ಎನ್ನುವ ನಿರ್ಬಂಧ ಇರುವ ಕಾರಣ ಉಭಯ ಪಕ್ಷಗಾರರು ಮನಪೂರ್ವಕವಾಗಿ ತಮ್ಮ ವಿವಾದವನ್ನು ಕೇಂದ್ರೀಕರಿಸಿ ಸೂಕ್ತ ಪರಿಹಾರವನ್ನು ಮುಕ್ತ ಮಾತುಕತೆಯ ಮೂಲಕ ಪಡೆದುಕೊಳ್ಳುವ ವೇದಿಕೆಯಾಗಿದೆ ಎಂದು ತಿಳಿಸಿದರು. ಕಳೆದ ವರ್ಷ ಜುಲೈ ತಿಂಗಳಿನಿಂದ ಈ ವರ್ಷದ ಜುಲೈವರೆಗೂ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಿಂದ 400ಕ್ಕೂ ಹೆಚ್ಚು ಪ್ರಕರಣಗಳು ಮಧ್ಯಸ್ಥಿಕೆಗೆ ವಹಿಸಿದ್ದು ಅವುಗಳಲ್ಲಿ 180 ದಂಪತಿಗಳು ತಮ್ಮ ವಿವಾದವನ್ನು ಪರಿಹರಿಸಿಕೊಂಡು ಸೂಕ್ತ ನ್ಯಾಯವನ್ನು ಅಲ್ಪ ಅವಧಿಯಲ್ಲಿ ಪಡೆದುಕೊಂಡು ಒಂದಾಗಿ ಮಧ್ಯಸ್ಥಿಕೆಯು ಯಶಸ್ವಿಯಾಗುವ ಮೂಲಕ ಪಕ್ಷಗಾರರಿಗೆ ಸಮಂಜಸ ಮತ್ತು ನ್ಯಾಯಯುತ ಎನಿಸಿರುವ ಪರಿಹಾರವನ್ನು ವಿತರಿಸುವಲ್ಲಿ ಮುಖ್ಯವಾದ ಪಾತ್ರವು ನಿರ್ವಹಿಸಿದೆ ಎಂದು ಉಲ್ಲೇಖಿಸಿ ಮಧ್ಯಸ್ಥಿಕೆ ಪ್ರಕ್ರಿಯೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಆಡಿದ ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ. ಎಸ್. ರವರು ಮಧ್ಯಸ್ಥಿಕೆಯಿಂದ ಪಕ್ಷಗಾರರು ತ್ವರಿತಗತಿಯಲ್ಲಿ ತಮಗೆ ಬೇಕಾದ ನ್ಯಾಯವನ್ನು ತಾವೇ ಆಯ್ದುಕೊಳ್ಳುವ ಅದ್ಭುತ ಪ್ರಕ್ರಿಯೆಯಾಗಿದೆ ಮತ್ತು ಪಕ್ಷಗಾರರು ತಮ್ಮ ವಿವಾದವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಹಾಗೂ ನ್ಯಾಯಾಲಯದಿಂದ ಬರಬಹುದಾದ ತೀರ್ಪಿನ ಬಗ್ಗೆ ಅವಲೋಕಿಸಿ ತಮಗೆ ಸೂಕ್ತವೆನಿಸುವ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳುವ ಅದ್ಭುತ ವಿಧಾನವಾಗಿದೆ ಎಂದು ತಿಳಿಸುತ್ತಾ ಇಂತಹ ಒಂದು ಅದ್ಭುತ ಪ್ರಕ್ರಿಯೆಗೆ ಹಿರಿಯ ಹಾಗೂ ನುರಿತ ವಕೀಲರು ಸ್ವಯಂ ಪ್ರೇರಿತವಾಗಿ ಶಿವಮೊಗ್ಗ ಜಿಲ್ಲೆಯಿಂದ ಹಾಗೂ ಹಾವೇರಿ ಜಿಲ್ಲೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿ ಐದು ದಿನಗಳ ಕಾಲ ನಡೆಯುತ್ತಿರುವ ತರಬೇತಿ ಕಾರ್ಯಗಾರಕ್ಕೆ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಂಡಿರುವುದು ಹರ್ಷದಾಯಕ ಸಂಗತಿ ಆಗಿದೆ ಮತ್ತು ಇಂತಹ ಉತ್ಸಾಹ ಹಾಗೂ ಕುತೂಹಲ ಎಲ್ಲಾ ಮಧ್ಯಸ್ಥಿಕೆದಾರರು ನಿರ್ವಹಿಸುತ್ತಿರುವ ತಮ್ಮ ಕರ್ತವ್ಯದಲ್ಲಿಯೂ ಕೂಡ ನಿರಂತರವಾಗಿ ವ್ಯಕ್ತಪಡಿಸಿ ಪ್ರಕರಣದ ಪಕ್ಷಗಾರರಿಬ್ಬರು ಗೆಲ್ಲುವ ಏಕೈಕ ಸಾಧನವಾಗಿರುವ ಮಧ್ಯಸ್ಥಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಮ್ಯಮತೆಯಿಂದ ಕಾರ್ಯನಿರ್ವಹಿಸಲು ಈ ತರಬೇತಿ ಕಾರ್ಯಗಾರವು ಅನುಕೂಲವಾಗುತ್ತದೆ ಎಂದು ತಿಳಿಸುತ್ತಾ ಬೆಂಗಳೂರಿನ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದಿಂದ ಆಗಮಿಸಿರುವ ಮಧ್ಯಸ್ಥಿಕೆ ತರಬೇತಿದಾರರಾದ ಶ್ರೀಕುಮಾರ್ ಹಾಗೂ ಶ್ರೀ ವಿಜಯಕುಮಾರ್ ರವರನ್ನು ಹಾಗೂ ಎಲ್ಲಾ ಗಣ್ಯರನ್ನು ಮತ್ತು ತರಬೇತಿಗೆ ಆಗಮಿಸಿದ ತರಬೇತುದಾರರನ್ನು ಸ್ವಾಗತಿಸಿದರು.

ಇಂದು ಉದ್ಘಾಟನೆಗೊಂಡ ತರಬೇತಿ ಕಾರ್ಯಗಾರವು ಇಂದಿನಿಂದ ಐದು ದಿನಗಳ ಕಾಲ ಅಂದರೆ ದಿನಾಂಕ 26.07.2026ರ ಸಂಜೆವರೆಗೂ ಶಿವಮೊಗ್ಗದ ಡಿ.ಎ.ಆರ್. ಪೊಲೀಸ್ ಸಭಾಭವನದಲ್ಲಿ ನಿರಂತರವಾಗಿ ನಡೆಯುತ್ತಿದ್ದು ನಾಮ ನಿರ್ದೇಶಿತರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ತರಬೇತಿಯನ್ನು ಪಡೆಯಲು ಇಚ್ಛೆ ವ್ಯಕ್ತಪಡಿಸಿರುವ ವಕೀಲರು ಮುಂದಿನ ದಿನಗಳಲ್ಲಿ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಮಾಹಿತಿ ನೀಡುತ್ತಾರೆ.

ಉಚಿತ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ

0

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಗ್ರಾಮೀಣ ಭಾಗದ ಆಸಕ್ತ ಅಭ್ಯರ್ಥಿಗಳಿಗಾಗಿ 31 ದಿನಗಳ ಉಚಿತ “ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ” ತರಬೇತಿಯನ್ನು ಆಯೋಜಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮವು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದ್ದು
18 ರಿಂದ 50 ವರ್ಷ ವಯೋಮಿತಿಯ ಗ್ರಾಮೀಣ ಭಾಗದ ಆಸಕ್ತ ಅಭ್ಯರ್ಥಿಗಳು (ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು).
ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ತರಬೇತಿಯ ನಂತರ ಅಭ್ಯರ್ಥಿಗಳು ಸ್ವಂತ ಉದ್ಯೋಗ ಪ್ರಾರಂಭಿಸಲು ಸಹಕಾರಿಯಾಗಲಿದೆ.
ಆಸಕ್ತ ಅಭ್ಯರ್ಥಿಗಳು ಒಂದು ಬಿಳಿ ಹಾಳೆಯ ಮೇಲೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು, ಅದನ್ನು ಫೋಟೋ ತೆಗೆದು ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಮೂಲಕ ಅಥವಾ ಕರೆ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
ಮೊದಲು ಅರ್ಜಿ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ, ಉದ್ಯೋಗ ವಿದ್ಯಾನಗರ, ಹಳಿಯಾಳ – 581329 (ಉತ್ತರ ಕನ್ನಡ ಜಿಲ್ಲೆ) 9483485489 / 8970145354 ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.