ಕಣ್ಣುಗಳನ್ನು ದಾನ ಮಾಡುವುದು ದೃಷ್ಟಿಹೀನರು ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡುವ ಅತ್ಯಂತ ದಯಾಪರ ಹಾಗೂ ಮಾನವೀಯ ಕಾರ್ಯವಾಗಿದೆ. ಪ್ರತಿಯೊಬ್ಬರೂ ಇಂದೇ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿ, ನಡೆದಾಡುವ ಜ್ಯೋತಿಗಳಾಗಿ ಇತರರ ಬಾಳಿಗೆ ಬೆಳಕು ನೀಡಬೇಕು ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಕರೆ ನೀಡಿದರು.
ಶಿವಮೊಗ್ಗ ನಗರದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಆಗಸ್ಟ್ 25 ರಿಂದ ಸೆಪ್ಟೆಂಬರ್ 8, 2026 ರವರೆಗೆ ನಡೆಯಲಿರುವ “ರಾಷ್ಟ್ರೀಯ ನೇತ್ರದಾನ ಪಕ್ಷಾಚರಣೆ ಹಾಗೂ ನೇತ್ರದಾನ ಉಯಿಲು ಪತ್ರ ಸಂಗ್ರಹ ಕೇಂದ್ರ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷರು, ಜನರಲ್ಲಿ ನೇತ್ರದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಅದರ ಮಹತ್ವವನ್ನು ತಿಳಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು. ದೇಶದಲ್ಲಿ ಲಕ್ಷಾಂತರ ಜನರು ಕಾರ್ನಿಯಾ ದೋಷದಿಂದ ದೃಷ್ಟಿಹೀನರಾಗಿದ್ದು, ನೇತ್ರದಾನದ ಮೂಲಕ ಅವರಿಗೆ ಹೊಸ ಬದುಕು ನೀಡಬಹುದು ಎಂದರು.
ವ್ಯಕ್ತಿ ಮೃತಪಟ್ಟ ಆರು ಗಂಟೆಗಳೊಳಗೆ ಕಣ್ಣುಗಳನ್ನು ಸಂಗ್ರಹಿಸಬಹುದಾಗಿದ್ದು, ವಯಸ್ಸು, ಲಿಂಗ ಅಥವಾ ಹಲವು ಕಾಯಿಲೆಗಳಿದ್ದರೂ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಬಹುದು. ನೇತ್ರದಾನದಿಂದ ಅಂತ್ಯಕ್ರಿಯೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಹಾಗೂ ದಾನಿಯ ಮುಖ ವಿರೂಪಗೊಳ್ಳುವುದಿಲ್ಲ ಎಂಬ ತಪ್ಪು ನಂಬಿಕೆಗಳನ್ನು ಜನರು ದೂರ ಮಾಡಬೇಕು ಎಂದು ಅವರು ತಿಳಿಸಿದರು.
ಮರಣ ಸಂಭವಿಸಿದ ತಕ್ಷಣ ಕುಟುಂಬಸ್ಥರು ಸಂಬಂಧಪಟ್ಟ ನೇತ್ರ ಭಂಡಾರಕ್ಕೆ ಮಾಹಿತಿ ನೀಡಬೇಕು. ತರಬೇತಿ ಪಡೆದ ತಜ್ಞರು ನೇತ್ರ ಸಂಗ್ರಹಣೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ನೇತ್ರದಾನ ಉಯಿಲು ಪತ್ರಗಳು ಫ್ರೆಂಡ್ಸ್ ಸೆಂಟರ್ ಸಂಗ್ರಹ ಕೇಂದ್ರದಲ್ಲಿ ಪ್ರತಿದಿನ ಲಭ್ಯವಿರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರ್, ನೇತ್ರದಾನವು ಸಾಮಾಜಿಕ ಕಳಕಳಿ ಮತ್ತು ಮಾನವೀಯತೆಯ ಪ್ರತೀಕವಾಗಿದೆ. ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಮನುಷ್ಯ ಸತ್ತ ನಂತರ ದೇಹದ ಜೊತೆಗೆ ಕಣ್ಣುಗಳೂ ಮಣ್ಣಿನಲ್ಲಿ ಮಣ್ಣಾಗುವ ಬದಲು, ಅವು ಮತ್ತೊಬ್ಬರ ಬಾಳಿಗೆ ಬೆಳಕಾಗಲಿ. ನಮ್ಮ ಕಣ್ಣುಗಳು ನಮ್ಮೊಂದಿಗೆ ಕೊನೆಗೊಳ್ಳದಂತೆ ನೇತ್ರದಾನದ ಮೂಲಕ ಇತರರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಪಿ. ನಂದೀಶ್ ನೇತ್ರದಾನ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು. ನೇತ್ರದಾನದ ಕುರಿತು ನೇತ್ರ ತಜ್ಞರಾದ ಡಾ. ಅಶೋಕ್ ಹಾಗೂ ಡಾ. ದೀಪಾ ಮೇಘರಾಜ್ ಮಾಹಿತಿ ನೀಡಿದರು.
ಲೋಕೇಶಪ್ಪ ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು. ಮಾಜಿ ಸಹಾಯಕ ಗವರ್ನರ್ ರೋ. ಜಿ.ವಿಜಯ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಧನರಾಜ್, ರವೀಂದ್ರನಾಥ ಐತಾಳ್, ಮಹಿಳಾ ಅಧ್ಯಕ್ಷೆ ಸುನಿತಾ ಚೇತನ್, ಎಂ.ಎನ್. ವೆಂಕಟೇಶ್, ಪಂಚಾಕ್ಷರಯ್ಯ ಹಿರೇಮಠ್, ಮನೋಹರ್, ರಾಜೇಶ್, ರವಿ, ನಾಗರಾಜ್, ದತ್ತಾತ್ರಿ ಎಸ್. ಮಹೇಶ್ವರಪ್ಪ, ಮೋಹನ್ ಡಿ.ಪಿ., ಸತ್ಯನಾರಾಯಣ ಜಿ ಸೇರಿದಂತೆ ಫ್ರೆಂಡ್ಸ್ ಸೆಂಟರ್ ಸದಸ್ಯರು ಉಪಸ್ಥಿತರಿದ್ದರು.
