ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕೇತವಾಗಿದ್ದು, ಸಮಾಜದಲ್ಲಿ ಏಕತೆ ಹಾಗೂ ಸಹೋದರತ್ವದ ಭಾವನೆಯನ್ನು ಬೆಳೆಸುವ “ರಕ್ಷಣೆಯ ಗಂಟು” ಎಂದು ಚುನಾಯಿತ ರೋಟರಿ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ಶಿವಮೊಗ್ಗ ನಗರದ ರಾಜೇಂದ್ರನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ರಕ್ಷಾ ಬಂಧನ” ಎಂದರೆ “ರಕ್ಷಣೆಯ ಗಂಟು” ಎಂಬ ಅರ್ಥವನ್ನು ಹೊಂದಿದೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಗೌರವಿಸುವ ಈ ಹಬ್ಬವನ್ನು ಸಾಮಾನ್ಯವಾಗಿ “ರಾಖಿ” ಎಂದು ಕರೆಯಲಾಗುತ್ತದೆ. ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಎಲ್ಲರನ್ನು ಒಂದಾಗಿಸುವ ವಿಶಿಷ್ಟ ಹಬ್ಬ ಇದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಡಿ.ಕೆ. ಶೇಷಗಿರಿ, ರಕ್ಷಾ ಬಂಧನವು ಭಾರತೀಯ ಸಂಸ್ಕೃತಿಯ ಮಹತ್ವದ ಆಚರಣೆಯಾಗಿದ್ದು, ಸಹೋದರಿ ತನ್ನ ಸಹೋದರನ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಬಾಂಧವ್ಯವನ್ನು ವ್ಯಕ್ತಪಡಿಸುತ್ತಾಳೆ ಎಂದರು.
ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯ್ ಕುಮಾರ್ ಮಾತನಾಡಿ, ರಕ್ಷಾ ಬಂಧನವು ಕೇವಲ ಕುಟುಂಬದ ಆಚರಣೆಯಲ್ಲ, ಇದು ಆತ್ಮೀಯತೆ, ಕಾಳಜಿ ಮತ್ತು ಪರಸ್ಪರ ಗೌರವದ ಸಂಕೇತವಾಗಿದೆ. ಈ ಹಬ್ಬವು ಸಹೋದರ-ಸಹೋದರಿಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಸ್ನೇಹಿತರು ಮತ್ತು ಬಂಧುಗಳ ನಡುವೆಯೂ ಪ್ರೀತಿಯ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು.
ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್ ಮಾತನಾಡಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವು ಪದಗಳಲ್ಲಿ ವರ್ಣಿಸಲಾಗದಷ್ಟು ಅಮೂಲ್ಯವಾಗಿದೆ. ಒಡಹುಟ್ಟಿದವರ ಪ್ರೀತಿಯನ್ನು ಸ್ಮರಿಸುವ ರಕ್ಷಾ ಬಂಧನ ಹಬ್ಬವು ಕುಟುಂಬ ಸಂಬಂಧಗಳಿಗೆ ಮತ್ತಷ್ಟು ಮೌಲ್ಯವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ನ ರೊಟೇರಿಯನ್ಸ್ಗಳಾದ ವಸಂತ್ ಹೋಬಳಿದಾರ್, ಡಿ.ಕೆ. ಶೇಷಗಿರಿ, ಮಹೇಶ್ ಆಲೇಮನೆ, ಜಿ. ವಿಜಯ್ ಕುಮಾರ್, ಆರ್. ಮನೋಹರ ಹಾಗೂ ಡಾ. ರವಿಕಿರಣ್ ಎಚ್.ಕೆ. ಅವರಿಗೆ ಮಹಿಳಾ ಸದಸ್ಯರುಗಳು ಸಾಂಕೇತಿಕವಾಗಿ ರಾಖಿ ಕಟ್ಟಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ಕ್ಲಬ್ ಕಾರ್ಯದರ್ಶಿ ಆರ್. ಮನೋಹರ, ಮಾಜಿ ಅಧ್ಯಕ್ಷರುಗಳಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಕೃಷ್ಣಮೂರ್ತಿ, ಬಿ. ಸತೀಶ್ ಚಂದ್ರ, ನಿಕಟ ಪೂರ್ವ ಅಧ್ಯಕ್ಷ ಡಿ. ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್. ಧನಂಜಯ್, ರಘುರಾಜ್ ಎಚ್.ಕೆ., ಡಾ. ರವಿಕಿರಣ್ ಎಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಕಾಸಲ ವಿ. ಸುರೇಂದ್ರ, ಸಂತೋಷಕುಮಾರ್ ಬಿ.ಎನ್., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಜಗದೀಶ್, ಗುರುಮೂರ್ತಿ ಸೇರಿದಂತೆ ಅನೇಕ ಪದಾಧಿಕಾರಿಗಳು, ರೊಟೇರಿಯನ್ಸ್, ರೊಟರಿ ಆನ್ಸ್, ಇನ್ನರ್ ವೀಲ್ ಸದಸ್ಯರು ಹಾಗೂ ವೀಣಾ ಕಿಶೋರ್ ಉಪಸ್ಥಿತರಿದ್ದರು.
