Wednesday, July 1, 2026
Wednesday, July 1, 2026

Klive Special Article “ಸುಮ್ಮನೆ ಬ್ರಹ್ಮನಾಗುವನೆ?” ಜಿಜ್ಞಾಸೆ ನೀಡಿದ ಅವಧೂತ ಶಿವರಾಮ ಶಾಸ್ತ್ರಿಗಳು ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

Date:

Klive Special Article ನನ್ನ ಬರಹದ ಪಯಣ ಒಂದೊಂದು ಜಾಗಕ್ಕೆ ಒಬ್ಬೊಬ್ಬ ಅಧ್ಯಾತ್ಮ ಜೀವಿಯ ಕಡೆಗೆ ನಡೆದಾಗ ಅಲ್ಲಿನ ವಿಶೇಷತೆ ಹಾಗೂ ಆ ಸಂತರ ಚಮತ್ಕಾರಗಳು, ಅವರ ಕೌಟುಂಬಿಕ ಜೀವನ ಎಲ್ಲವನ್ನೂ ಗಮನಿಸಿದಾಗ ನಾವೇಕೆ ಹಾಗೆ ಆಗಲು ಸಾಧ್ಯವಿಲ್ಲ ಅಥವಾ ನಮ್ಮ ಮತ್ತು ಅವರ ಆಧ್ಯಾತ್ಮಿಕ ಜೀವನವು ಬೇರೆ ಬೇರೆಯೇ ? ಎಂಬ ಅನುಮಾನವೂ ಎಷ್ಟೋ ಬಾರಿ ಬಂದಿದೆ. ನಿಜಕ್ಕೂ ಭಗವಂತನಿಗೆ ಹತ್ತಿರವಾಗಬೇಕಾದರೆ ಎಷ್ಟು ಕಷ್ಟವಾಗುತ್ತದೆಯಲ್ಲವೇ ? ಇಷ್ಟು ಕಷ್ಟ ಪಟ್ಟು ಸಾಧನೆಯನ್ನೇಕೆ ಮಾಡಬೇಕು ? ಎಂಬ ಹಲವಾರು ಪ್ರಶ್ನೆಗಳು ಮನಸಿಗೆ ಬಂದಾಗ ಅರ್ಥವಾಗುತ್ತದೆ. ಬ್ರಹ್ಮಾನುಭವೆಂದರೆ ಸುಮ್ಮನೆಯೇನು ? ಹೀಗೇ ಯೋಚಿಸುತ್ತಾ ಕುಳಿತು ಮೊಬೈಲ್‌ ಸ್ಕ್ರಾಲ್‌ ಮಾಡುತ್ತಿರುವಾಗ “ಸುಮ್ಮನೆ ಬ್ರಹ್ಮವಾಗುವನೆ ? ಮೂಲ ಹಮ್ಮೆಲ್ಲ ಲಯವಾಗಿ ಉಳಿಯದೇ ತಾನೇ ! ಸುಮ್ಮನೆ ಬ್ರಹ್ಮವಾಗುವನೇ ?”ಎಂಬ ಪದ್ಯವನ್ನು ಹಾಕಿದ ನನ್ನ ಸ್ನೇಹಿತನ ವಾಟ್ಸಾಪ್‌ ಸ್ಟೇಟಸ್‌ ನೋಡಿದ ನಾನು ಅವನಿಗೆ ಮೆಸೇಜ್‌ ಮಾಡಿ ಈ ಪದ್ಯ ಯಾರು ಬರೆದರು ಏನು ? ಎಂಬುದಾಗಿ ವಿಚಾರಿಸಿದಾಗ ಅವನು ಇದನ್ನು ಬರೆದವರು ಶಂಕರಾಚಾರ್ಯರು ಎಂದು ತಿಳಿಸಿದ. ಆದರೆ ಶಂಕರಾಚಾರ್ಯರು ಮೂಲತಃ ಕೇರಳದವರು, ಅವರಿಗೆ ಸಂಸ್ಕೃತವೇ ಭಾಷೆಯಾಗಿ, ಅವರ ಎಲ್ಲಾ ರಚನೆಗಳು ಸಂಸ್ಕೃತದ್ದೇ ಆಗಿರುವಾಗ ಇದು ಹೇಗೆ ಸಾಧ್ಯ ಎಂದುಕೊಂಡೆ. ಸರಿ ಇರಬಹುದೇನೋ ಅಥವಾ ಅವರ ಯಾವುದೋ ಒಂದು ಸಂಸ್ಕೃತ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿರಬಹುದು ಎಂದುಕೊಂಡು, ಅಪ್ಪನ ಬಳಿಗೆ ಬಂದು ಈ ಪದ್ಯವನ್ನು ಹಾಕಿದಾಗ ಅವರು ʼಅರೇ ಇದು ವೇದಾಂತ ಶಿವರಾಮ ಶಾಸ್ತ್ರಿಗಳʼ ಪದ್ಯ ಎಂದರು. ಅವರ ಬಗ್ಗೆ ನಾನು ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ಅಚ್ಚರಿಗಳೂ ಸಹಾ ನನಗೆ ತಿಳಿದವು. ಶಿವರಾಮ ಶಾಸ್ತ್ರಿಗಳು ಯಾರು ? ಎಲ್ಲಿಯವರು ಅವರಿಗೆ ವೇದಾಂತ ಶಿವರಾಮ ಶಾಸ್ತ್ರಿ ಎಂಬ ಹೆಸರು ಹೇಗೆ ಬಂತು ಎಂಬುದಾಗಿ ನೋಡುತ್ತಿರುವಾಗ, ಅವರ ಬೇರೆ ಬೇರೆ ಪದ್ಯಗಳು ನನಗೆ ದೊರೆತವು ಕೆಲವು ಕಾಲಗಳು ಅವರ ಬಗ್ಗೆ ಯೋಚನೆ ಬಿಟ್ಟು ಅವರ ಪದ್ಯಗಳನ್ನೇ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. “ಆಹಾ ! ಎಂಥಾ ಅದ್ಭುತವಾದ ಪದ್ಯಗಳು, ವೇದಾಂತವನ್ನು ಕೇವಲ ಆಡುಮಾತಿನಿಂದ ಹೇಳುವುದೆಂದರೇನು, ಅದರ ಅನುಭವವನ್ನು ಕೇಳುಗರಿಗೆ ಸಿಗುವಂತೆ ಮಾಡುವುದು ಕಡಿಮೆ ಮಾತಲ್ಲ. ಹೀಗಾಗಿ ಅವರ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆದು ಇಂದಿನ ಈ ಅಂಕಣವನ್ನು ಅವರಿಗಾಗಿ ಮೀಸಲಿಟ್ಟಿದ್ದೇನೆ. ಅಂದು ನನಗೆ ಆ ಹಾಡು ಕೇಳದಿದ್ದರೆ ಇವರ ಬಗ್ಗೆ ತಿಳಿಯಲು ಸಾಧ್ಯವೇ ಆಗುತ್ತಿರಲಿಲ್ಲ ಎನಿಸುತ್ತದೆ.
Klive Special Article ಮೈಸೂರು ಶಿವರಾಮ ಶಾಸ್ತ್ರಿಗಳು ಅಥವಾ ವೇದಾಂತ ಶಿವರಾಮ ಶಾಸ್ತ್ರಿಗಳು ಮೂಲತಃ ಮೈಸೂರಿನವರು. ಆದರೆ ಇವರ ಪೂರ್ವಜರು ಕರ್ನೂಲು ಜಿಲ್ಲೆಯ ಕಡೆಯವರು. ಇವರ ತಾತನವರಾದ ರಾಜೇಶ್ವರ ಶಾಸ್ತ್ರಿಗಳು ಜೀವನ ನಿರ್ವಹಣೆಗಾಗಿ ಮೈಸೂರಿಗೆ ಬಂದರು. ಹೀಗಾಗಿ ಶಾಸ್ತ್ರಿಗಳು ಕರ್ನಾಟಕದವರಾದರು. ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾ ಸನ್ನಿಧಾನಂಗಳವರ ಸಮಕಾಲೀನರು. ಮಾತಿನಲ್ಲಿ ಹಾಗೂ ವೇದಾಂತದಲ್ಲಿ ನಿಷ್ಠುರವಾದಿಗಳಾದ ಇವರು ಅತ್ಯಂತ ಕೋಮಲ ಹೃದಯಿಗಳಾಗಿದ್ದರು. 1861 ಮಾರ್ಚ್‌ 23ರಂದು ಮೈಸೂರಿನಲ್ಲಿ ಜನಿಸಿದ ಶ್ರೀ ಶಿವರಾಮ ಶಾಸ್ತ್ರಿಗಳಿಗೆ ತಂದೆ ಶೇಷಾದ್ರಿ ಶಾಸ್ತ್ರಿಗಳು ಮೊದಲ ಗುರು. ತಂದೆ ಪ್ರಖಾಂಡ ಪಂಡಿತರಾಗಿದ್ದರಿಂದ ಶಾಸ್ತ್ರಿಗಳು ಕೂಡಾ ತರ್ಕ ವ್ಯಾಕರಣಗಳಲ್ಲಿ ನಿಷ್ಣಾತರಾಗಿದ್ದರು. ನಿಷ್ಠುರವಾದಿಗಳು, ಹಾಗೂ ಅವಧೂತರ, ಸಂತರ ಬಗೆಗೆ ಒಲವಿದ್ದ ಶಿವರಾಮನನ್ನು ಸಹಜವಾಗಿ ವೇದಾಂತ ಲೋಕವು ಆಕರ್ಷಿಸಿತು. ಆಗ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವರು ದೇಶ ಸಂಚಾರಕ್ಕೆ ಹೊರಟುಬಿಡುತ್ತಾರೆ. ನಂತರ ಹಿಂತಿರುಗಿದಾಗ ಇಪ್ಪತ್ತು ವರ್ಷ ಪ್ರಾಯದವರಾಗಿದ್ದರು. ಹಿಂತಿರುಗಿ ಬಂದರಲ್ಲ ಎಂಬ ಸಂತೋಷ ತಂದೆ-ತಾಯಿಯರಿಗಿತ್ತು, ಹಾಗೂ ಇದೇ ಸಮಯದಲ್ಲಿ ಅವರಿಗೆ ಮದುವೆ ಮಾಡಿದರೆ ಇವನು ಸಾಧುವಾಗುವ ಅಥವಾ ಅಧ್ಯಾತ್ಮಿಕತೆಯಿಂದ ಹೊರಬರಬಹುದು ಎಂದು ತಿಳಿದು ಅಕ್ಕಯ್ಯಮ್ಮ ಎಂಬ ಹೆಣ್ಣಿನೊಡನೆ ಮದುವೆ ಮಾಡಿದರೆ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಅವರ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮವಿತ್ತು ಕಾಲವಾದರು. ಇದು ಶಿವರಾಮನಿಗೆ ಮತ್ತೆ ಹೊರಬೀಳಲು ಅನುಕೂಲವಾಯಿತು. ಆಗ ಅವರು ಉತ್ತರ ಭಾರತದ ಕಡೆಗೆ ಹೊರಟಾಗ ಅದೊಂದು ಕೇವಲ ಪ್ರಪಂಚ ಪರ್ಯಟನೆಯೆನಿಸದೇ ಆಧ್ಯಾತ್ಮಿಕ ಪರ್ಯಟನೆಯಾಗತೊಡಗಿತು. ಮೈಸೂರಿನಿಂದ ನೇಪಾಳದವರೆಗೆ ಶಾಸ್ತ್ರಿಗಳು ಅನೇಕ ಸಾಧುಗಳ ದರ್ಶನ ಪಡೆದು, ಅವರೊಂದಿಗೆ ಅಧ್ಯಾತ್ಮ, ವೇದಾಂತಗಳ ಚರ್ಚೆಯನ್ನು ಮಾಡುತ್ತಾ ನಡೆದಾಗ, ಅಲ್ಲಿ ನಿಜಾನಂದರೆಂಬ ಅವಧೂತರ ದರ್ಶನವಾಗುತ್ತದೆ. ಅದು ಶಿವರಾಮನ ಪಾಲಿಗೆ ಸುಯೋಗವಾಗಿತ್ತು. ಸದಾ ಅವರ ಸೇವೆಯಲ್ಲಿ ಮಗ್ನನಾದ ಈ ಯುವಕನ ಭಕ್ತಿಗೆ ಗುರುಗಳು ಮೆಚ್ಚಿ ಶಿವರಾಮನಿಗೆ ಮಹಾವಾಕ್ಯಗಳ ಉಪದೇಶ ಮಾಡುತ್ತಾರೆ. ಅಲ್ಲಿಂದ ಇವರ ಚರ್ಯೆಯೇ ಬದಲಾಯಿತು. ಅಧ್ಯಾತ್ಮದ ಸಂಪೂರ್ಣ ಅನುಭಾವಿಯಾದ ಇವರು ತಮ್ಮ ಗುರುಗಳಿಗೆ ತಮಗೆ ಸಂನ್ಯಾಸ ನೀಡಬೇಕೆಂದು ಕೇಳಿದರು. ಆಗ ತಂದೆ-ತಾಯಿಗಳ ಅಪ್ಪಣೆಯಿಲ್ಲದೆ ಶಿಷ್ಯನ ಕೋರಿಕೆಯನ್ನು ತಿರಸ್ಕರಿಸಿ, ಗೃಹಸ್ಥನಾಗಲು ಹೇಳಿದರು. “ಗೃಹಸ್ಥನಾಗು, ಗೃಹಸ್ಥನಾಗಿದ್ದುಕೊಂಡೇ ನೀನು ಆತ್ಮ ವಿಚಾರ ಮಾಡು ಹಾಗೂ ಆಚಾರ್ಯ ಶಂಕರರ ತತ್ತ್ವಗಳನ್ನು ತಿಳಿಸುತ್ತಾ ತನ್ಮೂಲಕ ಅವರ ಸೇವೆಯನ್ನು ಮಾಡು” ಎಂದು ತಿಳಿಸಲು ಗುರುವಾಕ್ಯ ಪಾಲನೆಗಾಗಿ ಮಂಡ್ಯದ ಬಳಿಯ ಕೀಲಾರದ ಸೀತಮ್ಮ ಮತ್ತು ಸುಬ್ಬಾಭಟ್ಟರ ಎರಡನೇ ಮಗಳು ಪಾರ್ವತಮ್ಮನವರನ್ನು ವಿವಾಹವಾದರು. ಇದೇ ಸಮಯದಲ್ಲಿ ತಂದೆ-ತಾಯಿಯರು ಕಾಲವಾದರು. ಶಾಸ್ತ್ರಿಗಳ ವೇದಾಂತ ಅಭ್ಯಾಸ ಮತ್ತಷ್ಟು ದ್ವಿಗುಣವಾಯಿತು. ಜಾತಿ-ಧರ್ಮ ಭೇದವಿಲ್ಲದೇ ವೇದಾಂತ ಬೋಧನೆಯನ್ನು ಪ್ರಾರಂಭಿಸಿದರು. ಮೈಮೇಲೆ ಜನಿವಾರವಿಲ್ಲ, ಅವಧೂತ ಚರ್ಯೆಯ ಈ ವ್ಯಕ್ತಿತ್ವ ಯಾರಿಗೆ ತಿಳಿಯಬೇಕು. ಸ್ವಜಾತಿಯಲ್ಲಿ ಅವರಿಗೆ ಅನೇಕರು ವಿರೋಧಿಗಳಾದರು. ಶಾಸ್ತ್ರಿಗಳು ಅವರು ಕೊಡುತತಿದ್ದ ಕೀಟಲೆಗಳನ್ನು ಸಾವಧಾನರಾಗಿ ಸಹಿಸಿಕೊಂಡರು. ಪ್ರತಿದಿನವೂ ಚಾಮುಂಡಿ ಬೆಟ್ಟಕ್ಕೆ ತಾಯಿಯ ದರ್ಶನಕ್ಕೆ ಹೋಗುವುದು ಶಾಸ್ತ್ರಿಗಳ ವಾಡಿಕೆಯಾಗಿತ್ತು. ಹೀಗೇ ಒಮ್ಮೆ ಅವರನ್ನು ಕೀಟಲೆ ಮಾಡುವ ಸಲುವಾಗಿ ಒಬ್ಬ ವ್ಯಕ್ತಿಯು “ಶಾಸ್ತ್ರಿಗಳೇ, ಸದಾ ಬ್ರಹ್ಮಾನುಸಂಧಾನ ಮಾಡುವ ತಾವು ಬ್ರಹ್ಮವನ್ನು ನಿರ್ಗುಣ ಎಂದು ತಿಳಿಸುವಿರಿ ಆದರೆ ಚಾಮುಂಡೇಶ್ವರಿಯ ಮೂರ್ತಿ ಪೂಜೆಯೇಕೆ ?”ಎಂದು ಕೇಳುತ್ತಾರೆ. ಅದಕ್ಕೆ “ಅನುಭಾವಿಗೆ ಎಲ್ಲಾ ವಸ್ತುಗಳೂ ಪರಬ್ರಹ್ಮರೂಪದಲ್ಲಿಯೇ ಗೋಚರಿಸುತ್ತವೆ”ಎಂದರು. ನಂತರ ಆ ವ್ಯಕ್ತಿಯು “ಹಾಗಾದರೆ ಕತ್ತೆಯನ್ನೇಕೆ ಪೂಜಿಸಬಾರದು ?”ಎಂದಾಗ ಶಾಸ್ತ್ರಿಗಳು “ಖಂಡಿತವಾಗಿ ಪೂಜಿಸಬಹುದು ಆದರೆ ಆಗ ಕತ್ತೆಗೆ ಕತ್ತೆಯೆಂಬ ಹೆಸರಿನಿಂದ ಕರೆಯಲು, ನೋಡಲೂ ಸಾಧ್ಯವಾಗುವುದಿಲ್ಲ. ಕತ್ತೆಯನ್ನೂ ಬ್ರಹ್ಮವಸ್ತುವೆಂದು ಪರಿಗಣಿಸಿದಾಗ ಮಾತ್ರ ಸಾಧ್ಯ”ಎಂದರು. ಮುಂದುವರೆದು ಅವರು ತಮ್ಮ ತತ್ತ್ವಪದಗಳ ಮೂಲಕ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಅಧ್ಯಾತ್ಮವನ್ನೇ ಜೀವನವನ್ನಾಗಿಸಿಕೊಂಡ ಶಾಸ್ತ್ರಿಗಳು ತಮ್ಮ ಪದ್ಯಗಳ ಮೂಲಕವೇ ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ರಚಿಸಿ ಹಾಡುತ್ತಿದ್ದರು. ಎಷ್ಟೋಜನರಿಗೆ ಇದೇ ಉಪದೇಶವಾಗುತ್ತಿತ್ತು. 1. ವೇದಾಂತ ಮುಕ್ತಿಮಾರ್ಗ ದೀಪಿಕಾ, 2. ಬ್ರಹ್ಮಾನಂದ ಬೋಧೇ 3. ಶ್ರೀ ರುದ್ರಟೀಕಾ 4. ಶಿವಾಧಿಕ್ಯಟೀಕಾ 5. ಶಂಕರಾಮೃತ ಬೋಧೆ 6. ಶಂಕರಾನಂದ ಕಂದ 7. ಶಂಕರಾನಂದ ತತ್ತ್ವ 8. ಶಂಕರಾನಂದ ಪದ್ದತಿ ಹೀಗೆ ಸುಮಾರು 30ಕ್ಕೂ ಅಧಿಕ ಕೃತಿಗಳು ಶಾಸ್ತ್ರಿಗಳಿಂದ ರಚಿಸಲ್ಪಟ್ಟಿವೆ. ಜಾತಿ-ಮತ ಭೇದವಿಲ್ಲದೇ, ಎಲ್ಲರಿಗೂ ಬ್ರಹ್ಮವಿಚಾರ ಮನದಟ್ಟು ಮಾಡುವುದು ಇವರ ಉದ್ದೇಶವಾಗಿತ್ತು. ಶಂಕರಾಚಾರ್ಯರೂ ಸಹಾ ಅದ್ವೈತವನ್ನು ಸಾರಿದ್ದು ಮಾನವ ಕಲ್ಯಾಣಕ್ಕಾಗಿಯೇ ಎಂಬುದು ಶಾಸ್ತ್ರಿಗಳು ಮನಗಂಡಿದ್ದರು. ಅದಕ್ಕಾಗಿ ಅನುಸಂಧಾನ ಹೇಗಿರಬೇಕು ಅದಕ್ಕೆ ಸಾಧಕನ ತೀವ್ರತೆಯೆಷ್ಟಿರಬೇಕು ಎಂಬುದನ್ನು ತಮ್ಮ ಹಾಡುಗಳಲ್ಲಿ ವಿವರಿಸಿದ್ದಾರೆ. ಒಮ್ಮೆ ಅವರ ಶಿಷ್ಯರೊಬ್ಬರು ಶಾಸ್ತ್ರಿಗಳನ್ನು ತಮ್ಮ ಮನೆಗೆ ಗುರುಪೂಜೆಗೆಂದು ಕರೆಯುತ್ತಾರೆ. ಹಾಗೇ ಶಿಷ್ಯನ ಕರೆಗೆ ಓಗೊಟ್ಟ ಶಾಸ್ತ್ರಿಗಳು ಅವರ ಮನೆಗೆ ಹೋಗಿದ್ದಾಗ ಆ ವ್ಯಕ್ತಿಯ ಹೆಂಡತಿಯು ತವರು ಮನೆಗೆ ಹೋಗಿ ಅಂದು ಬರಬೇಕಿರುತ್ತದೆ ಆದರೆ ಬಂದಿರುವುದಿಲ್ಲ ಅದೇ ಸಮಯಕ್ಕೆ ಒಂದು ಟೆಲಿಗ್ರಾಮ್‌ ಬಂದು ತಾವು ಇನ್ನೂ ನಾಲ್ಕುದಿನ ತಡವಾಗಿ ಬರುವುದಾಗಿ ತಿಳಿಸಿದಾಗ ಇವರು ಸಿಟ್ಟಿನಲ್ಲಿ ದೇವರ ಪೂಜೆ ಮಾಡಿ ಬಂದು ನೋಡಿದರೆ ಶಾಸ್ತ್ರಿಗಳಿರುವುದಿಲ್ಲ ಬದಲಾಗಿ ಅವರು “ಬಿಡು ಬಿಡು ರಾಜಸ ಪೂಜೆಯನು”ಎಂಬ ತತ್ತ್ವಪದವೊಂದನ್ನು ಬರೆದಿಟ್ಟು ಹೋಗಿರುತ್ತಾರೆ. ಈ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾರೆ.
ಹೀಗೆ ಶಿವರಾಮ ಶಾಸ್ತ್ರಿಗಳು ತಮ್ಮ ಜೀವನವನ್ನು ವೇದಾಂತದ ಅಭ್ಯಾಸ, ಚರ್ಚೆ, ಬೋಧನೆಯಲ್ಲಿಯೇ ತೊಡಗಿಸಿಕೊಂಡಿದ್ದಕ್ಕಾಗಿ ವೇದಾಂತ ಶಿವರಾಮ ಶಾಸ್ತ್ರಿಗಳಾಗುತ್ತಾರೆ. ವೇದಾಂತ ಗುರುಸೇವೆ, ಗುರುವಾಕ್ಯ ಪಾಲನೆ, ಸತ್ಸಂಗ, ಬ್ರಹ್ಮಾನುಸಂಧಾನ, ಹೀಗೆ ಅದ್ವೈತ ಸಿದ್ಧಾಂತವು ಕೇವಲ ಹೇಳುವುದಲ್ಲ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹುದಿರುತ್ತದೆ ಎಂದು ತೋರಿಸಿಕೊಟ್ಟವರು. ಇಂದಿಗೂ ಅವರ ಶಿಷ್ಯ ವೃಂದ ಪ್ರತಿತಿಂಗಳೂ ಭಜನೆ ಸತ್ಸಂಗ ಮಾಡುತ್ತಾ ಅವರ ತತ್ತ್ವಪದಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮೊಮ್ಮಗನಾದ ಶ್ರೀ ಶೇಷಾದ್ರಿ ಸ್ವಾಮಿಗಳು ಒಂದು ಶಾಲೆಯಲ್ಲಿ ಯೋಗಶಿಕ್ಷಕರಾಗಿದ್ದು ಶಾಸ್ತ್ರಿಗಳ ಕೈಂಕರ್ಯದಲ್ಲಿ ಖುಷಿಪಡುತ್ತಾರೆ. ಮೂರು-ನಾಲ್ಕು ವರ್ಷಗಳ ಹಿಂದೆ ನಮ್ಮ ವಿನಂತಿಯ ಮೇರೆಗೆ ನಮ್ಮ ಮನೆಗೆ ದತ್ತ ಜಯಂತಿಯ ಸಂದರ್ಭದಲ್ಲಿ ಬಂದಿದ್ದು, ಅತ್ಯಂತ ಸರಳ ವ್ಯಕ್ತಿತ್ವದ ಇವರು ನಮ್ಮೊಡನೆ ಅತ್ಯಂತ ಪ್ರೀತಿಯಿಂದ ಇರುತ್ತಾ ಹಳ್ಳಿಯ ಮನೆಯೆನ್ನದೇ, ಹಾಸಲು ಹೊದೆಯಲು ಸೌಕರ್ಯವಿಲ್ಲ ಎಂದು ತಿಳಿಯದೇ ನಮ್ಮಲ್ಲಿ ನಮ್ಮಂತೆಯೇ ಇರುವ ಈ ವ್ಯಕ್ತಿತ್ವ ತಾತನವರ ಆಸ್ತಿಯೆನ್ನದೇ ಮತ್ತೇನೆನ್ನಲು ಸಾಧ್ಯ. ?. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ಇ-ಬುಕ್‌ನಲ್ಲಿ ಇವರ ಅನೇಕ ಪದ್ಯಗಳನ್ನು ಪ್ರಕಟಿಸಿದೆ. ಶೃಂಗೇರಿ ಸಹೋದರಿಯರು ಇವರ ತತ್ತ್ವ ಪದಗಳನ್ನು ಅತ್ಯುತ್ತಮವಾಗಿ ಹಾಡಿರುವುದೂ ಸಹಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ವೇದಾಂತಾಭ್ಯಾಸಿಗಳಿಗೆ ಹಾಗೂ ತತ್ತ್ವ ಸಾಧಕರಿಗೆ ಇವರ ಜೀವನ ಹಾಗೂ ಪದ್ಯಗಳು ಅವರ ಸಂದೇಹ ನಿವಾರಿಸುವ ಮ್ಯಾಪ್‌ಗಳಾಗಿ, ಆಯಾಸ ನೀಗುವ ಬೋಧೀವೃಕ್ಷಗಳಾಗಿ, ಹಾಗೂ ಆಧ್ಯಾತ್ಮಿಕ ಹಸಿವು ನೀಗಿಸುವ ಸವಿಫಲಗಳಾಗಿವೆ. “ನೀನಾರು ನೋಡು ನೋಡೆಲೊ ಜೀವ ನೀನಾಗ ದೇವ” ಎಂದು ಜೀವ ಮತ್ತು ಪರಬ್ರಹ್ಮ ಬೇರೆಯಲ್ಲ ಎಂದು ಸುಲಭವಾಗಿ ಅರ್ಥ ಮಾಡಿಸುತ್ತಾರೆ. ಆದರೆ ಇವುಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಅರ್ಹತೆ ಮತ್ತು ಯೋಗ್ಯತೆ ಎಷ್ಟು ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಇವರ ಸ್ಮರಣೆಮಾಡುವುದಷ್ಟೇ ಈ ಜನ್ಮಕ್ಕೆ ನಮಗೆ ಸಿಕ್ಕಿರು ಭಾಗ್ಯವೆನ್ನಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ದೇಶಪ್ರೇಮಿಯಾಗಿ ಎಸ್ಐಆರ್ ಪ್ರಕ್ರಿಯೆಗೆ ಸಹಕರಿಸಿ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ರಾಜ್ಯ ಹಾಗೂ ದೇಶದ ಸಾರ್ವಜನಿಕ ಭದ್ರತೆ ಕಾಪಾಡುವ ನಿಟ್ಟಿನಲ್ಲಿ...

S.N. Channabasappa ನಗರದ ಜಲಮೂಲವಾಗಿರುವ ಚಾನಲ್ ಗಳನ್ನು ಸ್ವಚ್ಛವಾಗಿಡುವುದು ಇಲಾಖೆಯ ಹೊಣೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ...

International Anti-Drug Day ಕಳೆದ ಆರು ತಿಂಗಳಲ್ಲಿ ಸು.₹ 25 ಲಕ್ಷ ಮೌಲ್ಯದ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ- ಬಿ.ನಿಖಿಲ್

International Anti-Drug Day ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ...

B.Y. Raghavendra ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಇಂದಿನ ಮತ್ತು ಮುಂದಿನ ಪೀಳಿಗೆಗೆ ಸದಾ ಆದರ್ಶಪ್ರಾಯ- ಬಿ.ವೈ.ರಾಘವೇಂದ್ರ

B.Y. Raghavendra ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ...