ಶಾಲೆಗೆ ಸೇರಿದ ಮರುದಿನವೇ ನಾಲ್ಕೂವರೆ ವರ್ಷದ ಎಲ್ಕೆಜಿ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ. ಶಾಲೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದ ನಿವಾಸಿ ನಸ್ರುಲ್ಲಾ ಅವರ ಪುತ್ರ, ನಾಲ್ಕೂವರೆ ವರ್ಷದ ಮೊಹಮ್ಮದ್ ಮುನಾವರ್ ತೈಫ್ ಮೃತಪಟ್ಟ ದುರ್ದೈವಿ ಬಾಲಕ. ಸೋಮವಾರವಷ್ಟೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಕೆಜಿ ತರಗತಿಗೆ ಸೇರಿಸಲಾಗಿದ್ದ ಮುನಾವರ್ ತೈಫ್, ಶಾಲೆಗೆ ಸೇರಿದ ಎರಡನೇ ದಿನವೇ ಅಪಘಾತಕ್ಕೆ ಬಲಿಯಾಗಿದ್ದಾನೆ.
ಮಂಗಳವಾರ ಶಾಲೆಯ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮುನಾವರ್ ತೈಫ್ ಕೊನೆಯುಸಿರೆಳೆದಿದ್ದಾನೆ.
ಘಟನೆಯಿಂದ ದೊಣಬಘಟ್ಟ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
