ಲೇ: ಪ್ರಭಾಕರ ಕಾರಂತ
Jagadguru Sri Vidhushekhara Bharati ವಿಶ್ವದ ಅದ್ವಿತೀಯ ಮಹಾ ಕುಂಬವು ಪ್ರಯಾಗರಾಜ್ ನಲ್ಲಿ ಸಂಪನ್ನಗೊಂಡಿದೆ. ಪ್ರಪಂಚ ಹಿಂದೆಂದೂ ಕಂಡಿರದ ಮಹಾ ಮೇಳ ಇದು.ಅರವತ್ತಾರು ಕೋಟಿ ಜನರನ್ನು ನಲವತ್ತೈದು ದಿನಗಳ ಕಾಲ ಒಂದು ನದಿತಟದಲ್ಲಿ ಬರುವಂತೆ ಮಾಡುವುದು ಸನಾತನ ಧರ್ಮದ ಶಕ್ತಿ.ಇಷ್ಟು ಜನ ಸೇರುವಲ್ಲಿ ಎಷ್ಟೇ ದೊಡ್ಡ ಏರ್ಪಟೂ ಅಸ್ತವ್ಯಸ್ತ ಆಗುತ್ತದೆ .ರಸ್ತೆಗಳು ಇಕ್ಕಟ್ಟಾಗುತ್ತವೆ.ಸಾವಿರ ಸಾವಿರ ರೈಲುಗಳು ತುಂಬಿ ತುಳುಕುತ್ತವೆ.ಉತ್ತರ ಪ್ರದೇಶದ ಸುತ್ತಲಿನ ನಾಲ್ಕು ರಾಜ್ಯಗಳಲ್ಲೂ ಒತ್ತಡದ ಪರಿಣಾಮ ಗೋಚರಿಸುತ್ತದೆ. ಹೀಗಿದ್ದೂ ಬಂದ ಭಕ್ತರು ಗಲಭೆ ಮಾಡಲಿಲ್ಲ.ಬಡಿದಾಟ ಇಲ್ಲ.ನಿನ್ನ ಜಾತಿಯವರು,ಧರ್ಮ ಯಾವುದು,ವೃತ್ತಿ ಏನು,ಸಂಪತ್ತೇನು, ಭಾಷೆ ಏನು ಯಾರೂ ಕೇಳಲಿಲ್ಲ. ಬದುಕಿನ ಮಹಾನ್ ಪುಣ್ಯ ಕಾರ್ಯಕ್ಕೆ ಕೋಟಿ ಕೋಟಿ ಜನ ಒಂದೇ ಆಗಿ ಸೇರಿದರು. ಪಾವನ ಗಂಗೆಲ್ಲಿ ಮುಳುಗು ಹಾಕಿದರು. ಪುಣ್ಯ ಹೊತ್ತು ತಮ್ಮ ತಮ್ಮ ಊರಿಗೆ ಹಿಂತಿರುಗಿದರು. ನಂಬಲೇ ಸಾಧ್ಯವಿಲ್ಲದೇ ಏಕಾತ್ಮತೆ ತನ್ನ ಪರಮ ವೈಭವವನ್ನು ಜಗತ್ತಿಗೆ ಸಾರಿತು.
ಇದಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ತಮ್ಮ ಇಡೀ ತಂಡದೊಂದಿಗೆ ವರ್ಷಗಳ ಕಾಲ ತ್ರಿಕರಣಪೂರ್ವಕ ಶ್ರಮ ಹಾಕಿ ಸಾರ್ಥಕ್ಯ ಕಂಡರು. ಜಗತ್ತಿನಲ್ಲಿ ಈ ವರೆಗೆ ಆಗಿಹೋದ ಮನುಷ್ಯರಲ್ಲಿ ಯೋಗಿ ಯಂತವರು ಜನ್ಮ ತಳೆದಿರಲಾರರು.
ಮುಕ್ತಾಯದ ದಿನ ಯೋಗಿ ಕೃತಜ್ಞತಾ ಭಾಷಣ ಪ್ರಯಾಗರಾಜ್ ನಲ್ಲಿ ಮಾಡಿದರು. ಈ ಮಹಾಕುಂಭಕಕ್ಕೆ ಅದೆಷ್ಟು ಸಂತ ಶ್ರೇಷ್ಠರು ಬಂದರು ಎಂದು ಅವರು ಹೇಳಹೊರಟಾಗ ಅವರ ಬಾಯಿಂದ ಬಂದ ಮೊದಲ ಹೆಸರೇ ಶೃಂಗೇರಿಯ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿಯವರದ್ದು. ಅಲ್ಲಿ ಬಂದಿರಬಹುದಾದ ಲಕ್ಷ ಸಂತರಲ್ಲಿ ಯೋಗಿ ಬೇರಳೆಣಿಕೆಯ ಸಂತರ ಉಲ್ಲೇಖ ಮಾಡುವಾಗ ಮೊದಲ ಹೆಸರು ಶೃಂಗೇರಿಯ ಜಗದ್ಗುರುಗಳದ್ದು ಎಂದರೆ ಅದಕ್ಕೆ ಕಾರಣ ಇದೆ.ಸನ್ಯಾಸಿಗಳ ಅಖಾಡ ಸ್ಥಾಪನೆ ಶಂಕರ ಭಗವತ್ಪಾದರಿಂದ ಆಯಿತು. ಮುಂದೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರ ದಶಕಗಳ ಕಾಲ ಉತ್ತರ ಭಾರತದಲ್ಲೇ ನೆಲೆಸಿ ಧರ್ಮ ಮತ್ತು ದೇಶ ರಕ್ಷಣೆಗಾಗಿ ಸನ್ಯಾಸಿಗಳು ಶಸ್ತ್ರ ಎತ್ತಬೇಕೆಂದು ಉಪದೇಶಿಸಿದರು. ಸಹಸ್ರ ಸಹಸ್ರ ಸಂಖ್ಯೆಯ ಸನ್ಯಾಸಿಗಳು ಶಾಸ್ತ್ರದ ಜೊತೆ ಶಸ್ತ್ರ ಸಹ ಅಭ್ಯಾಸ ಮಾಡಿ ಸನ್ನದ್ದರಾದರು. ಈ ಅಖಾಡಗಳಲ್ಲಿ ಈಗಲೂ ಭಿಕ್ಷೆ ಸ್ವೀಕರಿಸುವ ಮೊದಲು ಶೃಂಗೇರಿ ಶಂಕರಾಚಾರ್ಯರ ಭಿಕ್ಷೆ ಎಂದು ಹೇಳಿ ಭಿಕ್ಷಾ ಸ್ವೀಕರಿಸುವ ಸಂಪ್ರದಾಯ ಉಳಿದು ಬಂದಿದೆ. ತಮ್ಮ ಗುರು ಶಂಕರರನ್ನಾಗಲೀ, ವಿದ್ಯಾರಣ್ಯರನ್ನಾಗಲೀ ಈ ಸನ್ಯಾಸಿಗಳು ಮರೆತು ಬಿಡಲಿಲ್ಲ. ಕೃತಘ್ನರಾಗಲಿಲ್ಲ.ಬದಲಿಗೆ ಶತ ಶತಮಾನಗಳಿಂದ ಅದೇ ಭಕ್ತಿ ಶ್ರದ್ಧೆ ಗೌರವ ಉಳಿಸಿಕೊಂಡು ಬಂದಿದ್ದಾರೆ. ವಿದ್ಯಾರಣ್ಯರು ಸ್ಥಾಪಿಸಿದ ಕೆಲ ಅದ್ವೈತ ಪೀಠಗಳೇ ಅವರನ್ನು ಮರೆತು ಕೃತಘ್ನತೆ ಮೆರೆದಿರುವ ಉಧಾಹರಣೆ ಇರುವಾಗ ಈ ಅಖಾಡಗಳ ಕೃತಜ್ಞತೆ ಮಹತ್ವ ಅರಿವಾಗದಿರದು. ಹೀಗೆಂದೇ ಶೃಂಗೇರಿಯ ಶಂಕರಾಚಾರ್ಯರೆಂದರೆ ಅಖಾಡಗಳ ಪಾಲಿಗೆ ಮಾರ್ಗದರ್ಶಕರು. ಗುರುಗಳು.
ಪ್ರಯಾಗರಾಜ್ ನಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸಂತ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದು ಈ ಭವ್ಯ ಪರಂಪರೆಯ ಹಿನ್ನೆಲೆಯಲ್ಲಿ. ಭರತವರ್ಷದ ಧರ್ಮ ಜಗತ್ತಿನ ಪ್ರಾತಿನಿಧಿಕ ಸ್ವರೂಪ ಆ ಸಭೆಗಿತ್ತು. ಮಹಾ ಮಂಡಲೇಶ್ವರ ಸ್ವಾಮಿ ಶ್ರೀ ಅವಿದೇಶಾನಂದರವರು ಅಖಾಡಗಳಲ್ಲೇ ಅತಿ ದೊಡ್ಡ ಸಮೂಹದ ಸನ್ಯಾಸಿಗಳನ್ನು ಹೊಂದಿರುವ ಅಖಾಡಾ ಮುಖ್ಯಸ್ಥರು. ಅವರ ನೇತೃತ್ವದಲ್ಲಿ ಹದಿನಾರು ಸಾವಿರ ಸನ್ಯಾಸಿಗಳಿದ್ದಾರೆ. ಶೃಂಗೇರಿಯ ಜಗದ್ಗುರುಗಳ ಅಧ್ಯಕ್ಷತೆಯ ಸಂತ ಸಮ್ಮೇಳನ ಈ ಹಿನ್ನೆಲೆಯಲ್ಲಿ ಇಡೀ ಸನಾತನ ಧರ್ಮ ಪ್ರತಿನಿಧಿಸುತ್ತಿತ್ತು.
ಯೋಗಿಯವರು ಸರ್ವಪ್ರಥಮವಾಗಿ ಶೃಂಗೇರಿಯ ಶಂಕರಾಚಾರ್ಯರನ್ನು ಜ್ಞಾಪಿಸಿಕೊಂಡಿದ್ದರ ಹಿಂದೂ ಈ ಪ್ರಾತಿನಿಧಿಕ ಸ್ವರೂಪದ ಹಿನ್ನೆಲೆ ಇದೆ.ಪ್ರಯಾಗ್ ರಾಜ್ ನಲ್ಲಿ ಶ್ರೀ ವಿಧುಶೇಖರ ಭಾರತಿಯವರನ್ನು ಯೋಗಿ ಬೇಟಿಯಾದಾಗ ಒಂದು ಮಾತು ಹೇಳಿದ್ದರು. ಶಾರದಾಪೀಠ ಧಕ್ಷಿಣಕ್ಕೇ ಸೀಮಿತವಾಗದೇ ಉತ್ತರ ಭಾರತದತ್ತಲೂ ಗಮನಕೊಡಬೇಕು ಎಂದು.ನಂತರ ದೇಶದ ಗೃಹ ಸಚಿವ ಅಮಿತ್ ಶಾ ಯೋಗೀಯವರೊಂದಿಗೇ ಶ್ರೀ ವಿಧುಶೇಖರ ಭಾರತಿಯವರ ದರ್ಶನಕ್ಕೆ ಬಂದರು. ಆಗಲೂ ಅವರು ಹಿಂದೆ ಯೋಗಿಯವರು ಆಡಿದ್ದ ಅದೇ ಮಾತನ್ನೇ ಆಡಿದರು. ಶಾರದಾಪೀಠ ಉತ್ತರದತ್ತ ಆಗಾಗ ಬರುತ್ತಲೇ ಇರಬೇಕು ಎಂದು.
ಯೋಗಿಯವರು ತಾನು ಸನ್ನಿಧಾನಂಗಳ ಜೊತೆ ಏಕಾಂತ ಮಾತುಕತೆ ಬಯಸಿದ್ದರು. ಅದಕ್ಕೆ ಉಭಯತರಿಗೂ ಸಮಯ ಕೂಡಿ ಬಂದಿದ್ದು ಉತ್ತರ ಭಾರತದ ಧರ್ಮ ವಿಜಯ ಯಾತ್ರೆಯ ಕಟ್ಟ ಕಡೆಯ ದಿನ.ಅಂದು ಈ ಉಭಯ ಸಂತರು ಎಪ್ಪತ್ತೈದು ನಿಮಿಷ ಏಕಾಂತದಲ್ಲಿ ಮಾತುಕತೆ ನಡೆಸಿದರು. ಅದೇನಿದ್ದೀತು ಊಹೆಗೆ ಬಿಟ್ಟಿದ್ದು. ಆದರೆ ಅದರ ಒಂದು ಜಲಕ್ ಮುಂದೆ ಪ್ರಕಟವಾಗದೇ ಇರಲಿಲ್ಲ. ಸನ್ನಿಧಾನಂಗಳು ಶೃಂಗೇರಿಗೆ ಮರಳಿದ ಮರುದಿನ ಮಠದ ಕಡೆಯಿಂದ ಯೋಗಿ ಆದಿತ್ಯನಾಥರ ಮುಖ್ಯ ಮಂತ್ರಿ ಕಛೇರಿಯ ಪ್ರಮುಖ ರೋರ್ವರಿಗೆ ಅತ್ಯುತ್ತಮ ಏರ್ಪಾಟಿನಿಂದ ಗುರುಗಳು ಪ್ರಸನ್ನರಾಗಿದ್ದಾರೆ ಎಂಬ ಸಂದೇಶ ಹೋಯಿತು. ಮುಖ್ಯ ಮಂತ್ರಿಗಳಿಗೂ ಶಾರದಾಪೀಠದ ಪರವಾಗಿ ಇದನ್ನು ಗಮನಕ್ಕೆ ತರುವಂತೆ ಸೂಚಿಸಲಾಗಿತ್ತು. ಅಧಿಕಾರಿ ಮುಖ್ಯ ಮಂತ್ರಿಯವರು ಬಂದೊಡನೇ ಶೃಂಗೇರಿಯ ಸಂದೇಶ ಅವರಿಗೆ ತಿಳಿಸಿದರು. ಆಗ ಯೋಗೀಜಿ ಪ್ರತಿಕ್ರಿಯೆ ” ನಾವು ಅವರಿಗೆ ಅನುಕೂಲ ಮಾಡಿಕೊಡದೇ ಮತ್ಯಾರಿಗೆ ಮಾಡುವುದು?.ನಮ್ಮ ಕಾಲದ ಶ್ರೇಷ್ಠ ಸಂತರವರು.ನಾನು ಬದುಕಿನಲ್ಲಿ ಕಂಡ ಶ್ರೇಷ್ಠ ಸಂತ.ನಮ್ಮ ಮೇಲಿನ ಅನುಗ್ರಹದಿಂದಲೇ ಅಂತಹ ಪುಣ್ಯಪುರುಷರ ಪಾದಸ್ಪರ್ಶ ಇಲ್ಲಿಗೆ ಆಗಿದೆ.ನಮ್ಮ ಏರ್ಪಾಟುಗಳೆಲ್ಲಾ ಅವರ ಭವ್ಯತೆಗೆ ಸಾಟಿ ಆಗಲಾರದು ” .ಈ ಮಾತು ಆ ಅಧಿಕಾರಿ ಪುನಃ ಶಾರದಾಪೀಠವನ್ನು ಸಂಪರ್ಕಿಸಿ ಹೇಳಿದ್ದಾರೆ.
ಭಗವತ್ಪಾದರು ತಮ್ಮಿಂದ ಸ್ಥಾಪಿಸಲ್ಪಟ್ಟ ಚತುರಾಮ್ನಾಯ ಪೀಠಾದೀಶ್ವರರು ಹೇಗಿರಬೇಕು ಎಂದು ಉಲ್ಲೇಖಿಸಿದ್ದಾರೆ. ರಾಗದ್ವೇಷ ರಹಿತರು,ದೃಢಚಿತ್ತರು, ಸದಾಚಾರ ಸಂಪನ್ನರು,ಸದ್ವಂಶಸ್ಥರು, ವೇದವೇದಾಂಗ ವಿದ್ವತ್ ಪೂರ್ಣರು,ಯೋಗಪರಿಣಿತರು,ಮೀಮಾಂಸ, ಧರ್ಮ ಶಾಸ್ತ್ರ ಸಂಪನ್ನರು,ಜಿತೇಂದ್ರಿಯರು, ಸಕಲಜೀವಿಗಳಲ್ಲಿ ಕಾರುಣ್ಯ ಉಳ್ಳ ಸಾತ್ವಿಕ ಗುಣಸಂಪನ್ನರು, ಸಮಾಹಿತ ರೂಡರು ಈ ಪೀಠದಲ್ಲಿ ಆರೂಡರಾಗಿ ತಮ್ಮನ್ನೇ ಪ್ರತಿನಿಧಿಸುತ್ತಾರೆ. ಶೃಂಗೇರಿಯ ಗುರುಪರಂಪರೆಯ ಸರ್ವರೂ ಈ ಭಗವತ್ಪಾದರ ಉಲ್ಲೇಖಕ್ಕೆ ಯಥಾ ರೂಪವಾಗೇ ಇದ್ದಾರೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಭರತವರ್ಷದ ಹಿಂದೂ ಹೃದಯ ಸಾಮ್ರಾಟರಿಗೆ ಯೋಗಿಗೆ ಹೀಗೇ ಗೋಚರಿಸಿದ್ದಾರೆ. ಅವರೊಂದಿಗೆ ಏಕಾಂತ ಸಂವಾದದ ಭಯಕೆಗಾದರೂ ಅದೇ ಕಾರಣ. ಸನಾತನ ಧರ್ಮದ ಉನ್ನತಿಗೆ ನಾವು ಇನ್ನೂ ಏನೇನು ಮಾಡಬೇಕು,ಧರ್ಮ ದೇಶದ ಉಳಿವಿಗೆ ಯಾವರೀತಿ ಮುಂದುವರೆಯಬೇಕು ಎನ್ನುವುದರ ಜೊತೆ ಸನ್ಯಾಸ ಬದುಕಿನ ಅಂತಿಮಗುರಿ ಆತ್ಮೋನ್ನತಿಯ ಮಾರ್ಗದ ಕುರಿತೇ ಯೋಗಿ ಮಾರ್ಗದರ್ಶನ ಪಡೆದಿರಬೇಕು. ಈ ಉಭಯ ಸಂತಶ್ರೇಷ್ಠರ ಸಮಾಗಮದ ತರುವಾಯ ಯೋಗಿಯವರು ಜಗದ್ಗುರುಗಳನ್ನು ಬೀಳ್ಕೊಡಲು ಅವರ ಜೊತೆ ಹೆಜ್ಜೆಹಾಕುವಾಗಲೂ ಈ ಸಂವಾದದ ಗುಂಗಲ್ಲೇ ಇದ್ದಂತಿತ್ತು. ಅವರು ಸಚಿವಾಲಯದಲ್ಲಿ ಶೃಂಗೇರಿಯ ಜಗದ್ಗುರುಗಳ ಕುರಿತು ಮಾತನಾಡುವಾಗಲೂ ತಮ್ಮ ಸಂವಾದ ಸ್ಮರಣೆಗೆ ಬಂದಿರಲೇ ಬೇಕು.
Jagadguru Sri Vidhushekhara Bharati ಶಂಕರ ಭಾಷ್ಯದಲ್ಲಿ ಜೀವನ್ಮುಕ್ತ ಸ್ಥಿತಿ ವ್ಯಕ್ತಿ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದರ ಪ್ರತ್ಯಕ್ಷ ರೂಪವಾಗಿ ನಮ್ಮ ಕಾಲದಲ್ಲೇ ಶ್ರೀ ಭಾರತೀತೀರ್ಥರನ್ನು ಕಾಣುವಂತಾಗಿದೆ.ಜೊತೆಗೆ ಭರತವರ್ಷದ ಸನಾತನ ಧರ್ಮದ ಸಹಸ್ರ ಸಹಸ್ರ ವರ್ಷಗಳ ತಪಸ್ಸಿನ ಫಲವಾಗಿ ಭೂಮಿಯಲ್ಲಿ ಅವತಾರವೆತ್ತಿದ ಶಂಕರ ಭಗವತ್ಪಾದರು ಸಾವಿರದಿನ್ನೂರು ವರ್ಷಗಳ ಹಿಂದೆ ಯಾವ ವೇಗದಲ್ಲಿ ತಮ್ಮ ಕಾರ್ಯ ನಡೆಸಿರಬಹುದು, ಅವರ ಅಘಾದ ಪ್ರಭಾವ ಭರತವರ್ಷದ ಮೇಲೆ ಅದು ಹೇಗೆ ಆಗಿದ್ದಿರಬಹುದು ಎಂಬುದನ್ನು ಈಗ ಅರ್ಥೈಸಲು ಶ್ರೀ ವಿಧುಶೇಖರ ಭಾರತಿಯವರ ಪ್ರತ್ಯಕ್ಷ ದರ್ಶನ ಭಾಗ್ಯವೂ ನಮ್ಮದಾಗಿದೆ.ನಮ್ಮ ಪಾಲಿಗೆ ಇದೂ ಒಂದು ಸಂಗಮ.
