Saturday, November 23, 2024
Saturday, November 23, 2024

World AIDS Day ಹೆಚ್ಐವಿ ಸೋಂಕಿನ ಜಾಗೃತಿ ಬಗ್ಗೆ ಶಿವಮೊಗ್ಗ ಆರೋಗ್ಯ ಇಲಾಖೆಯಿಂದ ಪೂರಕ ಮಾಹಿತಿ

Date:

World AIDS Day ಹೆಚ್‍ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದಿಂದ ಮರಣ ಹೊಂದಿದವರಿಗೆ ಸಂತಾಪ ಸೂಚಿಸುವ ಸಲುವಾಗಿ, ಡಿಸೆಂಬರ್ 1 ರಂದು ರಾಷ್ಟ್ರದಾದ್ಯಂತ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ಒಂದಾಗಿದೆ. ವಿಶ್ವ ಏಡ್ಸ್ ದಿನಾಚರಣೆಯನ್ನು ಮೊದಲು ಡಿಸೆಂಬರ್ 1988 ರಿಂದ ಪ್ರಾರಂಭಿಸಲಾಯಿತು.
ಸಮುದಾಯಗಳನ್ನು ಮುನ್ನಡೆಸುವ ಮೂಲಕ ಜಗತ್ತಿನಲ್ಲಿ ಏಡ್ಸ್ ನ್ನು ಕೊನೆಗಾಣಿಸಬಹುದು. ಹೆಚ್.ಐ.ವಿ ಯನ್ನು ಅಂತ್ಯಗೊಳಿಸುವಲ್ಲಿ ಸಮುದಾಯಗಳು ನಾಯಕತ್ವದ ಪಾತ್ರವನ್ನು ಹೆಚ್ಚಾಗಿ ಮಾಡಬೇಕಾಗಿದೆ.

ವಿಶ್ವ ಏಡ್ಸ್ ದಿನವು, ಇಲ್ಲಿಯವರೆಗಿನ ಪ್ರಗತಿಯನ್ನು ಪ್ರತಿಬಿಂಬಿಸಲು, 2030ರ ವೇಳೆಗೆ ಏಡ್ಸ್ ನ್ನು ಕೊನೆಗೊಳಿಸುವ ಗುರಿ ಸಾಧಿಸಲು, ಕಾರ್ಯಕ್ರಮದ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್.ಐ.ವಿ ಪ್ರತಿಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಒಂದು ಅವಕಾಶವಾಗಿದೆ.

ಈ ವರ್ಷದ ಘೋಷವಾಕ್ಯ “ಸಮುದಾಯಗಳು ಮುನ್ನಡೆಸಲಿ” (ಸಮುದಾಯಗಳು ಮುನ್ನಡೆಸುವ ಮೂಲಕ ಜಗತ್ತಿನ ಏಡ್ಸ್ ಕೊನೆಗಾಣಿಸಬಹುದು.) ಎಂಬುದಾಗಿದೆ. ಸೋಂಕಿತರಿಗೆ ಸಂಬಂಧಿಸಿದ ಮಾಹಿತಿ ತಿಳಿದವರು ಇತರರಿಗೆ ತಿಳಿಸುವ ಸದಾವಕಾಶದ ದಿನ ಇದು. ಹೆಚ್.ಐ.ವಿ ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ಹಾಗೂ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕುರಿತು ಸರ್ಕಾರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಸದಾವಕಾಶ ಹೊಂದಿರುವ ದಿನವಿದು.

ಹೆಚ್‍ಐವಿ ಯು ಅಸುರಕ್ಷಿತ ಲೈಂಗಿಕ ಸಂಪರ್ಕ. ಪರೀಕ್ಷೆ ಮಾಡದ/ಸೋಂಕಿತ ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆ. ಸಂಸ್ಕರಿಸದ ಚೂಪು ಸಾಧನಗಳು, ಸೂಜಿ, ಸಿರಿಂಜು, ಶಸ್ತ್ರಕ್ರಿಯಾ ಸಾಧನಗಳನ್ನು ಬಳಸುವುದರಿಂದ ಹಾಗೂ ಹೆಚ್‍ಐವಿ ಸೋಂಕಿರುವ ತಾಯಿಯಿಂದ ಮಗುವಿಗೆ ಈ ಮಾರ್ಗಗಳ ಮೂಲಕ ಹರಡಬಹುದು. ಹೆಚ್‍ಐವಿ ಸೋಂಕು ಈ ಮಾರ್ಗಗಳಲ್ಲದೆ ಬೇರೆ ಮಾರ್ಗಗಳಿಂದ ಹರಡುವುದಿಲ್ಲ. ಹೆಚ್‍ಐವಿ ಯನ್ನು ಲೈಂಗಿಕ ಸಂಪರ್ಕದಿಂದ, ರಕ್ತದ ಮೂಲಕ ಹಾಗೂ ಹೆತ್ತವರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ.

ಹೆಚ್.ಐ.ವಿ/ಏಡ್ಸ್‍ನ ನಿರ್ದಿಷ್ಟ ಲಕ್ಷಣಗಳು:

ಒಂದು ತಿಂಗಳಲ್ಲಿ 10% ಗಿಂತ ಜಾಸ್ತಿ ತೂಕ ಕಡಿಮೆಯಾಗುವುದು. ಒಂದು ತಿಂಗಳವರೆಗೆ ನಿರಂತರವಾಗಿ ಭೇದಿಯಾಗುವುದು. ಒಂದು ತಿಂಗಳವರೆಗೆ ಸತತವಾಗಿ ಜ್ವರ ಬರುವುದು. ಕ್ಷಯದ ಸೋಂಕು ತಗುಲುವುದು. ಬಾಯಿ, ಗಂಟಲು ಮತ್ತು ಅನ್ನನಾಳಗಳಲ್ಲಿ ಬಿಳಿಪೊರೆ ಹುಣ್ಣುಗಳಾಗುವುದು. ನ್ಯೂಮೋನಿಯಾ ಸೋಂಕು ತಗುಲುವುದು. ಮೆದುಳಿಗೆ ಸೋಂಕಾಗುವುದು. ದೃಷ್ಟಿ ಕಡಿಮೆಯಾಗುವುದು. ಚರ್ಮಕ್ಕೆ ಇತರೇ ಸೋಂಕು ತಗುಲುವುದು.

ಹೆಚ್.ಐ.ವಿ/ಏಡ್ಸ್‍ಗೆ ಚಿಕಿತ್ಸೆ :
ಹೆಚ್.ಐ.ವಿ/ಏಡ್ಸ್‍ಗೆ ಚಿಕಿತ್ಸೆ ಇದೆ, ಆದರೆ ಸಂಪೂರ್ಣ ಗುಣ ಸಾಧ್ಯವಿಲ್ಲ. ಎ.ಆರ್.ಟಿ ಚಿಕಿತ್ಸೆ ಜೀವಿತಾವಧಿ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ. ಎ.ಆರ್.ಟಿ ಚಿಕಿತ್ಸೆ ಜೀವನ ಪೂರ್ತಿ ಮುಂದುವರೆಸಬೇಕು. ಹೆಚ್‍ಐವಿ ವಿರುದ್ಧ ಈವರೆಗೆ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ನಕಲಿ ಚಿಕಿತ್ಸಕರು, ಹೆಚ್‍ಐವಿಯನ್ನು ಗುಣಪಡಿಸುತ್ತೇವೆಂದು ಸುಳ್ಳು ಭರವಸೆ ನೀಡುವವರನ್ನು ದೂರವಿಡಿ. ತಪ್ಪದೆ ಎ.ಆರ್.ಟಿ ಚಿಕಿತ್ಸೆಯನ್ನು ಪಡೆದು ಅತ್ಯುತ್ತಮ ಜೀವನವನ್ನು ಅಳವಡಿಸಿಕೊಂಡರೆ ಆರೋಗ್ಯಕರ ಜೀವನವನ್ನು ನಡೆಸಬಹುದು.
ಹೆಚ್.ಐ.ವಿ/ಏಡ್ಸ್ ಕಾಯ್ದೆಯು 2018 ರ ಸೆಪ್ಟೆಂಬರ್ 10 ರಂದು ಜಾರಿಗೆ ಬಂದಿತು. ಸೋಂಕಿನ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಈ ಕಾಯ್ದೆಯ ಮುಖ್ಯ ಉದ್ದೇಶ. ಹೆಚ್‍ಐವಿ ಸೋಂಕು ಹಾಗೂ ಸೋಂಕಿತರಿಗೆ ಯಾವುದೇ ಕ್ಷೇತ್ರಗಳಲ್ಲಿ ಸೇವೆಗಳನ್ನು ನೀಡುವಲ್ಲಿ ನಿರಾಕರಣೆ, ಕಳಂಕ ತಾರತಮ್ಯ ಮಾಡುವಂತಿಲ್ಲ. ಹೆಚ್‍ಐವಿ ಸೋಂಕಿತರಿಗೆ ಸಂವಿಧಾನಾತ್ಮಕವಾದ ಎಲ್ಲಾ ಹಕ್ಕುಗಳೂ ಇದೆ. ಹೆಚ್‍ಐವಿ ಸೋಂಕಿತರ ವಿರುದ್ಧ ತಾರತಮ್ಯಕ್ಕೆ ದಂಡ ವಿಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಹೆಚ್‍ಐವಿ ಸ್ಥಿತಿಗತಿಯ ಕುರಿತು ಲಿಖಿತವಾಗಿ ಬರವಣಿಗೆ ಸಂವಹನ ಚಿಹ್ನೆ ಮುಖಾಂತರ ಪ್ರಕಟಣೆ, ಪ್ರಚಾರ ಮಾಡಬಾರದು. ಮಾಡಿದಲ್ಲಿ ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ. ಹೆಚ್‍ಐವಿ ಸೋಂಕಿನ ಸ್ಥಿತಿಯ ಕುರಿತು ವ್ಯಕ್ತಿಯ ಅನುಮತಿಯಿಲ್ಲದೆ ಇತರರಿಗೆ ತಿಳಿಸುವಂತಿಲ್ಲ. ಕಾನೂನಿನ ಉಲ್ಲಂಘನೆಯಾದಲ್ಲಿ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷಕ್ಕೂ ಮೀರಿದ ಜುಲ್ಮಾನೆ ವಿಧಿಸಲಾಗುವುದು.
ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶದ ಪ್ರಕಾರ ಪ್ರಪಂಚದಲ್ಲಿ ಒಟ್ಟು ಸುಮಾರು 39.0 ಮಿಲಿಯನ್ ಹೆಚ್‍ಐವಿ ಸೋಂಕಿತರು ಇದ್ದಾರೆ. 1.8 ಮಿಲಿಯನ್ ಜನರು ಹೊಸದಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. 2002 ರಿಂದ 2016 ರ ಮಧ್ಯದ ಹೊಸ ಹೆಚ್‍ಐವಿ ಸೋಂಕಿತರಲ್ಲಿ 39% ಇಳಿಕೆ ಕಂಡು ಬಂದಿದೆ. 20.9 ಮಿಲಿಯನ್ ಜನರು ಹೆಚ್‍ಐವಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಭಾರತದಲ್ಲಿ ಒಟ್ಟು ಸುಮಾರು 23.49 ಲಕ್ಷ ಜನರು (0.22%) ಹೆಚ್‍ಐವಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಸುಮಾರು 69.22 ಸಾವಿರ ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ. ಕರ್ನಾಟಕದಲ್ಲಿ 2.69 ಲಕ್ಷ ಸೋಂಕಿತರು ಇದ್ದಾರೆ. ಅತಿ ಹೆಚ್ಚು ಹೆಚ್‍ಐವಿ ಸೋಂಕಿತರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 3304 ಐಸಿಟಿಸಿ ಕೇಂದ್ರಗಳಿದ್ದು 2022-23 ರಲ್ಲಿ 33,16,442 ಸಾಮಾನ್ಯ ಜನರನ್ನು ಹೆಚ್‍ಇಐವಿ ಪರೀಕ್ಷೆಗೊಳಪಡಿಸಿದ್ದು ಒಟ್ಟು 12802 (0.39%) ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳಿದ್ದು 2022-23 ರಲ್ಲಿ 1,27,654 ಸಾಮಾನ್ಯ ಜನರನ್ನು ಹೆಚ್‍ಐವಿ ಪರೀಕ್ಷೆಗೊಳಪಡಿಸಿ 252 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. 2023-24 ರ ಈವರೆಗೆ 130 ಸೋಂಕಿತರಿದ್ದಾರೆ. 2022-23ನೇ ಸಾಲಿನಲ್ಲಿ ಪಿ.ಪಿ.ಟಿ.ಸಿ.ಟಿ ಕಾರ್ಯಕ್ರಮದಲ್ಲಿ ಒಟ್ಟು 36,571 ಗರ್ಭಿಣಿ ಸ್ತ್ರೀಯರನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 13 ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 2008 ರ ಜೂನ್‍ಲ್ಲಿ ಎ.ಆರ್.ಟಿ ಕೇಂದ್ರವು ಪ್ರಾರಂಭವಾಗಿ ಇದುವರೆಗೆ 6639 ಹೆಚ್‍ಐವಿ ಸೋಂಕಿತರು ನೊಂದಾಯಿಸಲ್ಪಟ್ಟಿದ್ದಾರೆ ಹಾಗೂ 3301 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 12 ಇ.ಐ.ಡಿ ಪರೀಕ್ಷಾ ಕೇಂದ್ರಗಳಿದ್ದು, ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಶಿಶುವಿನ ಶೀಘ್ರ ತಪಾಸಣೆ ಕೇಂದ್ರಗಳಲ್ಲಿ 2010 ರಿಂದ ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ 6 ವಾರದಿಂದ 18 ತಿಂಗಳ ಒಳಗಿನ 418 ಮಕ್ಕಳಿಗೆ ಡಿಎನ್‍ಎ/ಪಿಸಿಆರ್ ಪರೀಕ್ಷೆಯನ್ನು ನಡೆಸಿದ್ದು ಅವರಲ್ಲಿ 13 ಮಕ್ಕಳಿಗೆ ಹೆಚ್‍ಐವಿ ಸೋಂಕು ತಗುಲಿರುವುದು ಕಂಡು ಬಂದಿರುತ್ತದೆ.
ಹೆಚ್.ಐ.ವಿ/ಏಡ್ಸ್ ಕುರಿತು ಅರಿವು ಕಾರ್ಯಕ್ರಮದಲ್ಲಿ, ಹೆಚ್‍ಐವಿ ನಿಯಂತ್ರಣ, ಸೇವಾ ಸೌಲಭ್ಯ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸಾಮಾಜಿಕ ಸೌಲಭ್ಯಗಳು ಸೋಂಕಿತ ಸಮುದಾಯಕ್ಕೆ ಲಭ್ಯವಾಗುವಂತೆ ಸಮಾಲೋಚನೆ ಮಾಡಿ ಸರ್ಕಾರದ ಸೇವೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಪ್ರೇರೇಪಿಸುವುದು. ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮುಖ್ಯವಾಹಿನಿ ಕಾರ್ಯಕ್ರಮದಡಿಯಲ್ಲಿ ಭಿತ್ತಿ ಪತ್ರಗಳು, ಪೋಸ್ಟರ್‍ಗಳು, ಹೋರ್ಡಿಂಗ್‍ಗಳು, ಜಾನಪದ ಕಲಾ ತಂಡಗಳು ಮತ್ತು ಗೋಟೆ ಬರಹಗಳ ಮೂಲಕ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿದೆ.

ಜಿಲ್ಲೆಯ 242 ಪ್ರೌಢಶಾಲೆ ಮತ್ತು 27 ಪದವಿಪೂರ್ವ ಕಾಲೇಜುಗಳಲ್ಲಿ ಹದಿಹರೆಯದ ವಿದ್ಯಾರ್ಥಿಗಳಿಗೆ ಆರೋಗ್ಯಕರ ನಡವಳಿಕೆ ಮತ್ತು ಹೆಚ್‍ಐವಿ ಏಡ್ಸ್ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಾದ್ಯಂತ 42 ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‍ಗಳನ್ನು ಸ್ಥಾಪಿಸಿ ಹೆಚ್‍ಐವಿ ಏಡ್ಸ್ ಅರಿವು, ರಕದಾನ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ಟ್ವಿಟರ್, ಯೂಟ್ಯೂಬ್‍ಗಳ ಮುಖಾಂತರ ಅರಿವು ಮೂಡಿಸಲಾಗುವುದು.

ಹೆಚ್.ಐ.ವಿ ಸಮುದಾಯದವರಿಗೆ ಓವಿಸಿ, ಧನಶ್ರೀ, ಮೈತ್ರಿ, ಸ್ವ ಉದ್ಯೋಗ ಸಾಲ, ಚೇತನ, ಉದ್ಯೋಗಿನಿ, ಸಮೃದ್ಧಿ ಯೋಜನೆಗಳು ದೊರೆಯುತ್ತಿವೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಹಾಗೂ ಇತರೆ ಸಾಮಾಜಿಕ ಸವಲತ್ತುಗಳನ್ನು ಒದಗಿಸಲಾಗುತ್ತಿದೆ.

ಹೆಚ್.ಐ.ವಿ/ಎಡ್ಸ್ ಕಾರ್ಯಕ್ರಮದ ಮುಖ್ಯ ಗುರಿ 95:95:95. ಅಂದರೆ 2026ರ ವೇಳೆಗೆ ಹೆಚ್.ಐ.ವಿ ಯೊಂದಿಗೆ ವಾಸಿಸುವ 95% ಜನರು ತಮ್ಮ ಹೆಚ್‍ಐವಿ ಸ್ಥಿತಿಯನ್ನು ತಿಳಿದಿರಬೇಕು. ಪತ್ತೆಯಾದ ಹೆಚ್‍ಐವಿ ಸೋಂಕಿತರಲ್ಲಿ 95% ಏ.ಆರ್.ಟಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಹಾಗೂ ಏ.ಆರ್.ಟಿ ಚಿಕಿತ್ಸೆಯನ್ನು ಪಡೆಯುತ್ತಿರುವವರಲ್ಲಿ, 95% ವೈರಲ್ ಲೋಡ್ ಕಡಿಮೆಯಾಗಬೇಕು.

World AIDS Day ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿ ಹಲವು ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...