Psychiatrist Dr. KR Sridhar ಕನ್ನಡ ವೈದ್ಯ ಬರಹಗಾರರ ನಾಲ್ಕನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಿರಿಯ ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಅವರನ್ನು ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಟಿವಿ ವತಿಯಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಕೆ.ಆರ್.ಶ್ರೀಧರ್, ತುಂಗೆಯ ತಟದಲ್ಲಿರುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕನ್ನಡ ವೈದ್ಯ ಸಾಹಿತ್ಯ ಬರಹಗಾರರ ನಾಲ್ಕನೇ ಸಮ್ಮೇಳನ ನಡೆಯುತ್ತಿದ್ದು, ನಿತ್ಯೋತ್ಸವದಲ್ಲಿ ಈಗ ವೈದ್ಯ ಸಾಹಿತ್ಯೋತ್ಸವದ ಸಂಭ್ರಮವೂ ಜೊತೆಗೂಡಿದೆ.
ಈ ಸಮ್ಮೇಳನಕ್ಕೆ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವನಾದ ನಾನು ಶಿವಮೊಗ್ಗೆಯಲ್ಲೇ ಐದೂವರೆ ದಶಕಗಳ ವೃತ್ತಿಜೀವನ ಕೈಗೊಂಡಿದ್ದೇನೆ. ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಯೋಗಾಯೋಗವೇ ಸರಿ ಎಂದು ತಿಳಿಸಿದರು.
ಈ ಸಮ್ಮೇಳನವೂ ವೈದ್ಯ ಸಾಹಿತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವುದರ ಜತೆ ನಾವೆಲ್ಲರೂ ಒಟ್ಟಾಗಿ ಮಾಡಬಹುದಾದ ಕಾರ್ಯಗಳಿಗೆ ಪ್ರೇರಣೆ ನೀಡಲಿದೆ. ಆರೋಗ್ಯ ಕುರಿತು ಜನಜಾಗೃತಿ ಮೂಡಿಸುವುದು ಬಹಳ ಮುಖ್ಯ. ಕಾಯಿಲೆ ಬಂದಾಗ ಅದನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು. ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಮಾರ್ಗದರ್ಶನ ಮಾಡಬೇಕು. ಕಾಯಿಲೆ ಬರದಂತೆ ಜೀವನ ಸೂತ್ರಗಳನ್ನು ಅನುಸರಿಸುವ ತಿಳಿವಳಿಕೆ ನೀಡಬೇಕು. ಇದಕ್ಕೆ ಅವಶ್ಯ ವಿರುವುದು ವೈದ್ಯ ಸಾಹಿತ್ಯ ಎಂದರು.
Psychiatrist Dr. KR Sridhar ಆರೋಗ್ಯ ಮತ್ತು ಅನಾರೋಗ್ಯದ ಕುರಿತು ಸರಿಯಾದ ಅರಿವು ಮೂಡಿಸಿ ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸಬಹುದು. ಸಮಾಜದಲ್ಲಿ ಬಲವಾಗಿ ಬೇರೂರಿರುವ ತಪ್ಪು ಕಲ್ಪನೆಗಳನ್ನು ಬದಲಾಯಿಸಲು ವೈದ್ಯ ಸಾಹಿತ್ಯ ಪ್ರಮುಖ ಸಾಧನ. ಹೀಗೆ ವೈದ್ಯಸಾಹಿತ್ಯವು ವೈಜ್ಞಾನಿಕ ಧೋರಣೆ ಬೆಳೆಸುವ, ಸಮಾಜದ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು.
ಐ.ಎಂ.ಎ. ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಲಕ್ಕೋಳ್, ಕರ್ನಾಟಕ ಐ.ಎಂ.ಎ. ಕನ್ನಡ ವೈದ್ಯ ಸಾಹಿತ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ. ಶಿವಾನಂದ ಕುಬಸದ್ ಹಾಗೂ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದು ತಿಳಿಸಿದರು. ನಿರೂಪಕ ಜಿ.ವಿಜಯ್‌ಕುಮಾರ್, ಶ್ರೀಕಾಂತ್, ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.