ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಇಂದು ಭಾನುವಾರ ಒಂದು ದಿನದ ವಿರಾಮವನ್ನು ಪಡೆದುಕೊಂಡಿದೆ. ಸೋಮವಾರ ಹಿಂಗೋಲಿ ಜಿಲ್ಲೆಯ ಕಳಮ್ನೂರಿನಿಂದ ವಾಶಿಮ್ಗೆ ತೆರಳಲಿದೆ.
ಮಹಾರಾಷ್ಟ್ರದಲ್ಲಿ ಯಾತ್ರೆಯ ಆರನೇ ದಿನವಾದ ಶನಿವಾರ ರಾತ್ರಿ ಕಳಂನೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ ಮತ್ತು ದ್ವೇಷವನ್ನು ಹರಡಲು ಬಿಡುವುದಿಲ್ಲ ಎಂಬುದು ತಮ್ಮ ನೇತೃತ್ವದ ಪಾದಯಾತ್ರೆಯ ಸಂದೇಶವಾಗಿದೆ’ ಎಂದರು. ವೇದಾಂತ-ಫಾಕ್ಸ್ಕಾನ್ ಮತ್ತು ಟಾಟಾ ಏರ್ಬಸ್ನಂತಹ ಬೃಹತ್ ಯೋಜನೆಗಳನ್ನು ಮಹಾರಾಷ್ಟ್ರದಿಂದ ಚುನಾವಣೆ ಸಲುವಾಗಿ ಗುಜರಾತ್ ಗೆ ಸ್ಥಳಾಂತರಿಸುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಗುರಿಯಾಗಿಸಿ ಕಿಡಿಕಾರಿದರು. ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಶನಿವಾರ 66ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ ಆರು ರಾಜ್ಯಗಳ 28 ಜಿಲ್ಲೆಗಳಲ್ಲಿ ಸಂಚರಿಸಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಶನಿವಾರ ರಾತ್ರಿ ಟ್ವೀಟ್ ಮಾಡಿದ್ದು, ‘ಭಾರತ್ ಜೋಡೋ ಯಾತ್ರೆಯ 66 ನೇ ದಿನ ಹಿಂಗೋಲಿ ಜಿಲ್ಲೆಯಲ್ಲಿ ಮುಕ್ತಾಯವಾಗಿದೆ.
ದಿನವಿಡೀ ಜನರ ಉತ್ಸಾಹ ತುಂಬಾ ಹೃದಯಸ್ಪರ್ಶಿಯಾಗಿತ್ತು. ದುರಂತವೆಂದರೆ, ಕಳೆದ ಜೂನ್ನಲ್ಲಿ (2021 ರಲ್ಲಿ) ಕೋವಿಡ್ಗೆ ಲೋಕಸಭೆಯಲ್ಲಿ ಹಿಂಗೋಲಿಯನ್ನು ಪ್ರತಿನಿಧಿಸಿದ್ದ ನಮ್ಮ ಸಹೋದ್ಯೋಗಿ ರಾಜೀವ್ ಸತವ್ ಅವರನ್ನು ಕಳೆದುಕೊಂಡಿದ್ದೇವೆ. ಅವರು ನಮ್ಮ ಆಲೋಚನೆಯಲ್ಲಿದ್ದರು. ಭಾನುವಾರ ವಿಶ್ರಾಂತಿಯ ದಿನ’ ಎಂದಿದ್ದಾರೆ.