Wednesday, April 23, 2025
Wednesday, April 23, 2025

ಕಾಡುವ ಸಿನಿಮಾಗಳ ಸಾಲಿನಲ್ಲಿ ಕಾಂತಾರ

Date:

“ಕಾಂತಾರ- ಒಂದು ದಂತಕಥೆ” ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕನ್ನಡದ ಹೆಮ್ಮೆಯ ಹೊಂಬಾಳೆ
ಪ್ರೊಡಕ್ಷನ್‌ನಡಿಯಲ್ಲಿ ಶ್ರೀ ವಿಜಯ್ ಕಿರಂಗದೂರು ನಿರ್ಮಿಸಿರುವ ಸಿನಿಮಾವಿದು. ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಅಶ್ವಥ್,
ಪ್ರಮೋಧ್ ಶೆಟ್ಟಿ, ಕಿಶೋರ್ ಮುಂತಾದ ತಾರಾಬಳಗವಿದೆ.

ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ
ಒದಗಿಸಿದ್ದಾರೆ. ಇಂದು “ಕಾಂತಾರ” ಸಿನಿಮಾ ಕೇವಲ ಒಂದು ಚಿತ್ರವಾಗಿರದೇ ಕನ್ನಡಿಗರ ಹೆಮ್ಮೆಯಾಗಿ ನಿಂತಿದೆ.
ನಮ್ಮ ಹಳ್ಳಿಗಾಡಿನ ಸಂಸ್ಕೃತಿ- ಸಂಪ್ರದಾಯಗಳ ಎರಕ ಹೊಯ್ದಿರುವ ಕಥಾವಸ್ತುವುಳ್ಳ ಕಾಂತಾರ ಮನಸ್ಸಿಗೆ ಮುದ
ನೀಡುವ ಒಂದೊಳ್ಳೆಯ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು. ತಾವು ನಂಬಿರುವ ಆಚರಣೆಗಳು, ಕಟ್ಟುಪಾಡುಗಳು, ತಮ್ಮ
ಸಂಸ್ಕೃತಿಯ ಉಳಿವಿಗಾಗಿ ಸ್ವಾಭಿಮಾನಿ ಜನಗಳ ಹೋರಾಟದ ಕಥೆ ಈ ಕಾಂತಾರ. ಕಾಡಿನ ಒಂದು ಪುಟ್ಟ ಸಮುದಾಯದ
ಜನ ತಲಾತಲಾಂತರಗಳಿಂದ ನಡೆದು ಬರುತ್ತಿರುವ ಕಂಬಳ, ಭೂತಕೋಲದಂತಹ ಆಚರಣೆಗಳಿಂದ ಬದುಕು ಕಟ್ಟಿಕೊಂಡ
ಅವಿದ್ಯಾವಂತ ಮುಗ್ದಜನರ ಮುಗ್ದತೆಯನ್ನೆ ದಾಳವಾಗಿ ಬಳಸಿಕೊಳ್ಳುವ ಕೆಲವು ದುರಾಸೆಯ ಜನರ ಸ್ವಾರ್ಥ ಸಾಧನೆಯ
ಕುರಿತು ಈ ಕಥೆ ಸಾರುತ್ತದೆ.

‘ಶಿವ’ ಮೊದಲಾರ್ಧದಲ್ಲಿ ಎಲ್ಲಾ ಹಳ್ಳಿಯ ಗಲ್ಲಿಯಲ್ಲೂ ಕಾಣ ಸಿಗುವ ಪುಡಾರಿಯಂತೆ ತನ್ನ ಹವ್ಯಾಸವಾದ
ಶಿಕಾರಿಯನ್ನು ಮಾಡಿಕೊಂಡು ಊರು-ಕೇರಿ ತಿರುಗಿಕೊಂಡು ಬೆಳೆದವನಾಗಿ ಕಾಣ ಸಿಗುತ್ತದೆ. ಶಿವ ಕೋಪಿಷ್ಟನಾಗಿ ಕಂಡರೂ
ಹಳ್ಳಿಗಾಡಿನ ಮುಗ್ದ ಜನರ ಪ್ರತೀಕನಾಗಿ ನಿಲ್ಲುತ್ತಾನೆ. ಎಷ್ಟೇ ಮೊಂಡಾಟ ಮಾಡಿದರೂ, ತುಂಟಾಟ ಮಾಡಿದರೂ ಊರಿಗೆ
ಸಮಸ್ಯೆ ಬಂದಾಗ ಮೊಂಡು ಶಿವ ಜವಬ್ದಾರಿಯುತ ನಾಯಕನಾಗಿ ನಿಲ್ಲುತ್ತಾನೆ. ವನ್ಯ ಸಂಪತ್ತನ್ನು ಉಸಿರಿಗಿಂತ ಹೆಚ್ಚಾಗಿ
ಪ್ರೀತಿಸುವ ಜನರ ಬಿಡಾರ, ಒತ್ತುವರಿಯಾದ ಭೂಪ್ರದೇಶಗಳನ್ನು ಸರ್ಕಾರಕ್ಕೆ ಒಪ್ಪಿಸುವ ಜಿದ್ದಿಗೆ ಬಿದ್ದ ಅರಣ್ಯಾಧಿಕಾರಿಯ
ನಡುವಿನ ಜಟಾಪಟಿ, ಒಂದ್ಕಡೆ ತನ್ನೂರಿನ ರಕ್ಷಣೆಯ ಜವಬ್ದಾರಿ ಹೊತ್ತ ಶಿವ, ಮತ್ತೊಂದೆಡೆ ಕರ್ತವ್ಯದ ಜೊತೆಗೆ ವಯುಕ್ತಿಕ
ಜಿದ್ದಿಗೆ ಬಿದ್ದ ಅರಣ್ಯಾಧಿಕಾರಿ ಮುರುಳಿಧರ್ ಇವರಿಬ್ಬರ ಪೈಪೋಟಿಯಂತೆ ಕಥೆಯ ಪ್ರಥಮಾರ್ಧ ಸಾಗುತ್ತದೆ.
ಅಲ್ಲಲ್ಲಿ ಭಾವನಾತ್ಮಕ ಎಳೆಗಳು ಮನಸ್ಸಿಗೆ ಮುಟ್ಟುತ್ತದೆ. ಕಷ್ಟಪಟ್ಟು ಸೇರಿದ ಹುದ್ದೆಯಿಂದ ತನಗೆ ಬದುಕು ಕೊಟ್ಟ
ಊರನ್ನೇ ಒತ್ತುವರಿಯ ನೆಪದಲ್ಲಿ ಮುಟ್ಟುಗೋಲು ಹಾಕುವ ಅಸಾಹಯಕ ಸ್ಥಿತಿಯಲ್ಲಿ ಸಿಲುಕುವ ಲೀಲಾ, ಊರಿನ ರಕ್ಷಣೆಗೆ
ಟೊಂಕ ಕಟ್ಟಿ ನಿಲ್ಲುವ ಶಿವ, ಆತನಿಗೆ ಬೆಂಗಾವಲಾಗಿ ನಿಲ್ಲುವ ಊರ ಮಂಧಿ ಇವೆಲ್ಲಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಎಷ್ಟೋ ಸಂಪ್ರದಾಯ, ಆಚರಣೆ, ಪರಂಪರೆಗಳು ಆಧುನಿಕತೆಯ ಹೆಸರಿನಲ್ಲಿ ಇಂದು ಕಣ್ಮರೆಯಾಗುತ್ತಿರುವ ಈ ಸಂಧರ್ಭದಲ್ಲಿ
ಕಾಂತಾರ ಆ ಎಲ್ಲಾ ಆಚರಣೆಗಳ ನೆನಪನ್ನು ಮೂಡಿಸುತ್ತದೆ.

ತನ್ನ ಸ್ವಾರ್ಥ ಸಾಧನೆಗೆ ಶಿವನ ಮುಗ್ದತೆಯನ್ನೇ ದಾಳವಾಗಿ ಬಳಸಿಕೊಳ್ಳುವ ಊರ ಯಜಮಾನ ಇಂದಿನ
ಆಡಳಿತಶಾಹಿಗಳ ಪ್ರತಿನಿಧಿಯಂತೆ ಕಾಣುತ್ತಾನೆ. ಊರನ್ನು ರಕ್ಷಿಸಲು ಶಿವನ ಸಾಹಸಗಳ ಸುತ್ತಾ ಸುತ್ತುವ
ಕಥೆ ದ್ವಿತಿಯಾರ್ಧದಲ್ಲಿ ಮತ್ತಷ್ಟೂ ರೋಚಕವೆನಿಸುತ್ತಾ ಸಾಗುತ್ತದೆ. ಕರ್ತವ್ಯ ಹಾಗೂ ಸ್ವಾಭಿಮಾನದ ನಡುವಿನ
ಪೈಪೋಟಿಗಳಂತೆ ಬಿಂಬಿತಗೊಂಡ ಮೊದಲಾರ್ದ ಇಲ್ಲಿ ಸ್ವಾರ್ಥ ಹಾಗೂ ಸ್ವಾಭಿಮಾನಗಳ ನಡುವಿನ ಜೂಟಾಟದ ಹಾಗೆ
ಸಾಗುತ್ತದೆ. ಶಿವನ ಕನಸಲ್ಲಿ ಆಗಾಗ್ಗೆ ಕಾಡುವ ವರಾಹ ಸ್ವಾಮಿಯೇ ಈ ಚಿತ್ರದ ಹೈಲೈಟ್. ಕಾಂತಾರ ಒಂದು ರೀತಿಯಲ್ಲಿ
ನಂಬಿಕೆ ಹಾಗೂ ಅಪನಂಬಿಕೆಗಳ ನಡುವಿನ ಹೋರಾಟ ಎಂದರೆ ತಪ್ಪಾಗಲಾರದೇನೋ.

ಊರ ಯಜಮಾನನ ಸ್ವಾರ್ಥಕ್ಕೆ ಬಲಿಯಾದ ಶಿವನ ತಮ್ಮ ಕಥೆಯ ದುರಂತ ನಾಯಕನಂತಾಗುತ್ತಾನೆ.
ಪ್ರಥಮಾರ್ಧ ಪ್ರೇಕ್ಷಕರನ್ನು ನಗೆಯಗಡಲಲ್ಲಿ ತೇಲಿಸಿದರೆ ದ್ವಿತೀಯಾರ್ಧ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸುತ್ತದೆ. ಸ್ವಾಭಿಮಾನ,
ದುರಾಸೆ ಕರ್ತವ್ಯದ ಓಟದ ಸ್ಪರ್ದೆಯಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂಬುದೇ ಈ ಚಿತ್ರದ ಕಥಾವಸ್ತು. ಯಾರೂ
ಊಹಿಸಲಾರದ ಕ್ಲೈಮಾಕ್ಸ್ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.ಗ್ರಾಮೀಣ ಸಂಸ್ಕೃತಿ, ಸೊಗಡಿನ ನಿಜವಾದ
ಹೂರಣದಂತಿದೆ ಕಾಂತಾರ ಸಿನಿಮಾ.

ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಮುಖ್ಯ ಆಕರ್ಷಣೆ. ಪ್ರತಿಯೊಬ್ಬ ಕಲಾವಿದರ ನಟನೆ
ಅಧ್ಭುತವಾಗಿ ಮೂಡಿ ಬಂದಿದೆ. ಅರಣ್ಯಾಧಿಕಾರಿ ಮುರುಳೀದರ್ ಪಾತ್ರ ನಿರ್ವಹಿಸಿದ ಕಿಶೋರ್ ಅವರ ಅಭಿನಯ
ಮನಸ್ಸಿನಲ್ಲಿ ಉಳಿಯುತ್ತದೆ. ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ನಮ್ಮ ರಿಷಭ್ ಈಗ ನಾಯಕ ನಟನಾಗಿ ಕೂಡ
ಯಶಸ್ವಿಯಾಗಬಲ್ಲರು ಎಂಬುದಕ್ಕೆ “ಕಾಂತಾರ” ಒಂದು ಜ್ವಲಂತ ಉದಾಹರಣೆಯಾಗಿದೆ. ಅಲ್ಲಲ್ಲಿ ಪ್ರೇಕ್ಷಕರನ್ನು ಭಯ
ಬೀಳಿಸುತ್ತಾ ಒಂದಿಲ್ಲೊಂದು ಅಚ್ಚರಿಗಳನ್ನು ತೆರೆದಿಡುತ್ತಾ ಸಾಗುವ ಕಥೆ ಒಂದು ದಂತಕಥೆಯಾಗಿ ಮನಸ್ಸಿನಲ್ಲುಳಿಯುತ್ತದೆ.
ಕಾಂತಾರಾ ಚಿತ್ರ ಮಂದಿರದಿಂದ ಹೊರ ಬಂದರೂ ಸಹ ನಿಮ್ಮನ್ನು ಕಾಡುತ್ತದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಬರುತ್ತವೆ, ಹೋಗುತ್ತದೆ ಆದರೆ ಕೆಲವು ಮಾತ್ರ ಸದಾ ಮನಸ್ಸಿನಲ್ಲಿ
ಉಳಿಯುತ್ತದೆ. ಹೀಗೆ, ಸದಾ ಮನಸ್ಸಿನಲ್ಲುಳಿಯುವ ಸಿನಿಮಾಗಳ ಸಾಲಿನಲ್ಲಿ “ಕಾಂತಾರ” ಅಗ್ರಗಣ್ಯ ಸ್ಥಾನದಲ್ಲಿ
ನಿಲ್ಲುತ್ತದೆ.

ಭೂತಕೋಲಾ, ಕಂಬಳ, ದೈವಾರಾಧನೆ ಇಂತಹ ಸಂಪ್ರದಾಯಗಳು ನೆಲೆ ಕಳೆದುಕೊಳ್ಳುತ್ತಿರುವಂತಹ
ಈ ದಿನಮಾನಸಗಳಲ್ಲಿ ಕಾಂತಾರ ಸಿನಿಮಾ ಮತ್ತೇ ಈ ಎಲ್ಲಾ ಆಚರಣೆಗಳಿಗೆ ಜೀವ ತುಂಬುತ್ತದೆ. ಕಾಂತಾರ ಹೆಚ್ಚು
ಆಪ್ತವಾಗಲು ಕಾರಣ ಈ ಕಥೆಯನ್ನು ಹೆಣೆದಿರುವ ಶೈಲಿ. ಅಲ್ಲಲ್ಲಿ ಈ ಕಥೆ ನಮ್ಮ ಪೂರ್ಣಚಂದ್ರ ತೇಜಸ್ವಿಯವರ
ಕಥೆಗಳನ್ನೂ ಸಹ ನೆನಪಿಗೆ ಬರುವಂತೆ ಮಾಡುತ್ತದೆ.
ಇಲ್ಲಿ ಶಿವ ಹಾಗೂ ಊರಿನ ಜನರು ನಮ್ಮ ಸಮಾಜದ ಶೋಷಿತ ವರ್ಗದವರ ಪ್ರತಿನಿಧಿಗಳಂತೆ ಕಾಣುತ್ತಾರೆ. ಶಿವ
ಹಾಗೂ ಅರಣ್ಯಾಧಿಕಾರಿಗಳ ನಡುವಿನ ತಿಕ್ಕಾಟ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದ ರೀತಿಯಲ್ಲಿ ಕಾಣುತ್ತದೆ.
ಜೊತೆಗೆ ಒಗ್ಗಟ್ಟಿನಲ್ಲೇ ಬಲವಿದೆ ಎಂಬ ನೀತಿಯನ್ನು ಕೂಡ ಸಾರುತ್ತದೆ. ನಮ್ಮ ವನ್ಯ ಸಂಪತ್ತು, ನಾಡು, ನುಡಿಗಳನ್ನು
ನಮಗಾಗಿಯಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗಾಗಿಯಾದರೂ ಸಹ ಉಳಿಸಿ ಬೆಳೆಸಬೇಕೆಂಬ ಜವಬ್ದಾರಿಯನ್ನು ಕೂಡಾ
ಈ ಸಿನಿಮಾ ನಮ್ಮಲ್ಲಿ ಹುಟ್ಟಿಸುತ್ತದೆ. ನನ್ನ ಪ್ರಕಾರ ಕಾಂತಾರ ಎಂಬುದು ರಿಷಬ್ ಶೆಟ್ಟಿ ಎಂಬ ಕಲಾಬ್ರಹ್ಮನ ಕಲ್ಪನೆಯಲ್ಲಿ
ಅರಳಿದ ಸುಂದರ ಸೌಗಂಧಿಕ ಪುಷ್ಪ.

ಲೇ: ಆಕಾಶ್.ಕೆ.ಎಂ
ತೀರ್ಥಹಳ್ಳಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....