ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವುದಾಗಲಿ, ಕೆಳಗೆ ಬೀಳಿಸುವುದಾಗಲಿ, ಕಾಲ ಕೆಳಗೆ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಒಳ ಪಡಿಸಲಾಗುತ್ತದೆ
ಇಡೀ ಭಾರತ ಆಗಸ್ಟ್ 15, 2022 ರಂದು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವಾಗಿ 75 ವರ್ಷ ಕಳೆದಿದೆ. ಇದರ ಗೌರವಾರ್ಥವಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಯೋಜಿಸಿದೆ. ಈ ಬಾರಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಲಾಗಿದೆ.
ರಾಷ್ಟ್ರ ಧ್ವಜವನ್ನು ಕೇವಲ ಸ್ವತಂತ್ರ ದಿನ ಹಾಗೂ ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆದು ಗೌರವದಿಂದ ಧ್ವಜಾರೋಹಣ ಮಾಡಲಾಗುತ್ತದೆ. ರಾಷ್ಟ್ರ ಧ್ವಜ ರಾಷ್ಟ್ರದ ಗೌರವ ಮತ್ತು ಭಾರತೀಯರ ರಾಷ್ಟ್ರೀಯತೆ ಬಿಂಬಿಸುವ ಲಾಂಛನವಾಗಿದೆ.
ದೇಶದ ಪ್ರಮುಖ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಬಳಸಲಾಗುತ್ತದೆ. ಆದರೆ, ಈ ಬಾರಿ ಮನೆ ಮನೆಗಳಲ್ಲಿ ಧ್ವಜಾರೋಹಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲೇ ನಿರ್ಮಾಣವಾಗುತ್ತದೆ.