ಸುಳ್ಯ ತಾಲೂಕಿನಲ್ಲಿ ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ಅನಾಹುತಗಳಿಗೆ ಕಾರಣ ಪತ್ತೆಗೆ ಭೂಗರ್ಭಶಾಸ್ತ್ರಜ್ಞರಿಂದ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರಕಾರವನ್ನು ಕೋರಲಾಗುವುದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಯದ ಕಲ್ಮಕಾರು, ಸಂಪಾಜೆ ಮತ್ತಿತರ ಪ್ರದೇಶಗಳಲ್ಲಿ ನಡೆದ ಪ್ರಾಕೃತಿಕ ಅನಾಹುತದಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರಕರಣ, ಭಾಗಶಃ ಮನೆ ಹಾನಿ ಹಾಗೂ ಪೂರ್ಣ ಮನೆ ಹಾನಿ ಪ್ರಕರಣಗಳಿಗೆ ನಿಗದಿತ ಪರಿಹಾರ ನೀಡಲಾಗುತ್ತಿದೆ. ಬಾಳಗೋಡು, ಹರಿಹರ ಮತ್ತು ಕಲ್ಮಕಾರುಗಳಲ್ಲಿ 6 ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಮಾರು 100 ಮಂದಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕಲ್ಮಕಾರಿನಲ್ಲಿ 150ಕ್ಕೂ ಅಧಿಕ ಕುಟುಂಬ ರಸ್ತೆ ಮಾರ್ಗದ ಸಂಪರ್ಕ ಕಡಿದುಕೊಂಡಿದೆ. ಅಲ್ಲಿಗೆ ತಾತ್ಕಾಲಿಕವಾಗಿ ಮರು ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.