ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿಪಕ್ಷಗಳ ಬೆನ್ನಲ್ಲೇ ಬಿಜೆಪಿ ಕೂಡ ಅಧಿಕೃತವಾಗಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ ಬಿಜೆಪಿ ಅಥವಾ ಎನ್‌ಡಿಎ ಕೂಟದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬದಲು ಎಲ್ಲ ಪಕ್ಷಗಳಿಂದ ಒಮ್ಮತದ ಆಯ್ಕೆ ಮಾಡುವ ಇರಾದೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.
ಇದಕ್ಕೆಂದೇ ಆಡಳಿತ ಹಾಗೂ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರಿಗೆ ವಹಿಸಿದೆ.
ನಡ್ಡಾ ಹಾಗೂ ರಾಜನಾಥ್ ಅವರು ಎನ್‌ಡಿಎ, ಯುಪಿಎ ಅಂಗಪಕ್ಷಗಳು, ಇತರ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಸಂಸದರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ನಿನ್ನೆ ಭಾನುವಾರ ಸಂಜೆ ಬಿಜೆಪಿ ಪ್ರಕಟಣೆ ತಿಳಿಸಿದೆ.
2017ರಲ್ಲಿ ಮೊದಲು ರಾಮನಾಥ ಕೋವಿಂದ್ ಅವರನ್ನು ಅಧ್ಯಕ್ಷ ಹುದ್ದೆ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿತ್ತು ಹಾಗೂ ನಂತರ ವಿಪಕ್ಷಗಳಿಗೆ ಅವರನ್ನು ಬೆಂಬಲಿಸುವಂತೆ ಕೋರಿತ್ತು. ಆದರೆ ತಮ್ಮ ಜತೆ ಸಮಾಲೋಚಿಸದೇ ಕೋವಿಂದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಕೊನೇ ಕ್ಷಣದಲ್ಲಿ ಮಾತುಕತೆಗೆ ಕರೆದಿದ್ದಕ್ಕೆ ಬಿಜೆಪಿಯನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಹೀಗಾಗಿ ಈಗ ಆರಂಭಿಕ ಹಂತದಲ್ಲೇ ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿಸಲು ಬಿಜೆಪಿ ಯತ್ನ ಆರಂಭಿಸಿದೆ.
ಈಗಾಗಲೇ ವಿಪಕ್ಷಗಳ ನೇತಾರರಾದ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿ, ವಿಪಕ್ಷದ ಒಮ್ಮತದ ಅಭ್ಯರ್ಥಿ ಹೆಸರಿಸಲು ಪ್ರಕ್ರಿಯೆ ಆರಂಭಿಸಿದ್ದಾರೆ. ಸೋನಿಯಾ ದೂತರಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿವಿಧ ವಿಪಕ್ಷಗಳ ಜತೆ ಮಾತುಕತೆ ಆರಂಭಿಸಿದ್ದಾರೆ. ಮಮತಾ ಕೂಡ ಒಂದು ಸುತ್ತಿನಲ್ಲಿ ಸೋನಿಯಾ ಜೊತೆ ಮಾತನಾಡಿದ್ದಾರೆ. ಜೂ.15ರಂದು ದೆಹಲಿಯಲ್ಲಿ ವಿಪಕ್ಷಗಳ ಸಭೆ ಆಯೋಜಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ರಾಮನಾಥ ಕೋವಿಂದ್ ಅವರು ಯುಪಿಎ ಅಭ್ಯರ್ಥಿ ಮೀರಾಕುಮಾರ್‌ರನ್ನು ಸೋಲಿಸಿದ್ದರು.