ಇದೇ ತಿಂಗಳ ಜೂ.15ರಂದು ಬೀದರ್ ಜಿಲ್ಲೆಗೆ ನಾಗರಿಕ ವಿಮಾನಯಾನ ಸೇವೆ ಒದಗಿಸುತ್ತಿರುವ ಸ್ಟಾರ್‌ಏರ್ ವಿಮಾನ ಸೇವೆ ಆರಂಭದ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದ್ದಾರೆ.
ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಟಾರ್‌ಏರ್ ನಾಗರಿಕ ವಿಮಾನಯಾನ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿನ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಟಾರ್ ಏರ್ ವಿಮಾನ ಸೇವೆಯು ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಒದಗಿಸುತ್ತದೆ.
ಈ ಕಾರ್ಯಕ್ರಮ ಉದ್ಘಾಟನೆಯನ್ನು ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೀದರ್ ವಿಮಾನ ನಿಲ್ದಾಣದ ನಿರ್ದೇಶಕರಾದ ಅಮಿತ್ ಮಿಶ್ರಾ ಅವರು ಮಾತನಾಡಿ, ಜೂ. 15ರಂದು ಸ್ಟಾರ್‌ಏರ್ ಸೇವೆ ಬೀದರ್ ಜಿಲ್ಲೆಯಲ್ಲಿ ಆರಂಭಿಸುತ್ತಿದೆ. ಮಧ್ಯಾಹ್ನ 2.55ಕ್ಕೆ ಬೆಂಗಳೂರಿನಿಂದ ವಿಮಾನ ಹೊರಟು ಬೀದರ್‌ಗೆ 4.5ಕ್ಕೆ ಬಂದು ತಲುಪಲಿರುವ ಈ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್, ಲೈಟಿಂಗ್ ಲ್ಯಾಂಪ್, ರಿಬ್ಬನ್ ಕತ್ತರಿಸುವ ಮೂಲಕ ಸ್ವಾಗತಿಸಲಾಗುತ್ತದೆ.
ವಿಮಾನದಿಂದ ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವುದರ ಜೊತೆಗೆ ಇತರೆ ಎಲ್ಲ ಪ್ರಯಾಣಿಕರಿಗೆ ಕಾಣಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಟಾರ್ ಏರ್‌ನ ಸೀನಿಯರ್ ಮ್ಯಾನೇಜರ್ ಕಿರಣ ಅವರು ಮಾತನಾಡಿ, ಸ್ಟಾರ್‌ಏರ್ ವಿಮಾನವು ಗೋದಾವತ್ ಎಂಟರ್ ಪ್ರೈಸೆಸ್‌ನ ಸಂಜಯ ಗೋದಾವತ್ ಮಾಲೀಕತ್ವದ ವಿಮಾನ ಸೇವೆಯಾಗಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಲ್ಲಿ ಬೀದರ್ ಜಿಲ್ಲೆಗೆ ಸೇವೆ ಒದಗಿಸಲಿದೆ. ಸ್ಟಾರ್ ಏರ್ ವಿಮಾನವು ಜಟ್ ಎಂಜಿನ ಮೇಲೆ ಕೆಲಸ ನಿರ್ವಹಿಸುವುದರಿಂದ ಅತೀ ವೇಗದಲ್ಲಿ ಜನರಿಗೆ ಸೇವೆ ಒದಗಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.