ತಲತಲಾಂತರದಿಂದ ಸಾಗುವಳಿ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಅರಣ್ಯ ಇಲಾಖೆ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಶಿವಮೊಗ್ಗ ಸಿಸಿಎಫ್ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಮಲೆನಾಡು ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.
ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ತಹಶೀಲ್ದಾರ್ ರ ಮೂಲಕ ಸಮಿತಿ ಮನವಿ ಸಲ್ಲಿಸಿತು. ಪ್ರತಿ ಹಳ್ಳಿಯಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಆಲೂರು ಹೊಸಕೊಪ್ಪ, ಚಿಕ್ಕ ಮತ್ತೀಗ, ಮಾವಿನ ಗದ್ದೆ, ತೊರೆ ಬೈಲು, ಹುಲ್ಲತ್ತಿ, ಬಿಳಗಿ ಮನೆ ಮುಂತಾದ ಗ್ರಾಮದಲ್ಲಿ ರೈತರ ಸ್ವಾಧೀನಾನುಭವ ಸಾಗುವಳಿ ಜಾಗಕ್ಕೆ ಅರಣ್ಯ ಇಲಾಖೆ ಬಲವಂತವಾಗಿ ಗಡಿ ಕಾಲುವೆ ಮಾಡುತ್ತಿದ್ದು ಇದನ್ನು ತಡೆಯಬೇಕು ಎಂದು ಆಗ್ರಹಿಸಿದೆ.
ಅಡಿಕೆ ಸಸಿ, ಮರ, ಬೇಲಿಯನ್ನು ದ್ವಂಸ ಮಾಡುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅರಣ್ಯ ಇಲಾಖೆ ರೈತರಿಗೆ ನಷ್ಟದ ಹಣವನ್ನು ಪಾವತಿಸಬೇಕು. ಗೋಮಾಳ, ಸೊಪ್ಪಿನಬೆಟ್ಟ, ಕಾನು, ಗ್ರಾಮಠಾಣಾ, ಪೂರ್ವಜರಿಂದ ಬಳಕೆಯಲ್ಲಿರುವ ಅರಣ್ಯ ಪ್ರದೇಶದ ಮೇಲೆ ಅರಣ್ಯ ಇಲಾಖೆ ಹಕ್ಕು ಸ್ಥಾಪಿಸಲು ಮುಂದಾಗಿರುವುದು ಮಾನವ ಹಕ್ಕುಗಳ ಉಲ್ಲಂಘನೆ.
ಅರಣ್ಯ, ಕಂದಾಯ, ಇತರೆ ಪ್ರದೇಶಗಳ ಕುರಿತು ಜಂಟಿ ಸರ್ವೆ ನಡೆಯದ ಹಿಂದೆ ದೊಡ್ಡ ಹುನ್ನಾರ ನಡೆದಿದೆ. ಕಾನೂನು, ನಿಯಮಗಳಲ್ಲಿ ಗೊಂದಲವನ್ನೇ ಬಂಡವಾಳ ಮಾಡಿಕೊಂಡು ಮಲೆನಾಡ ಭೂಪ್ರದೇಶದ ಮೇಲೆ ಅಧಿಪತ್ಯ ಸಾಧಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಅರಣ್ಯ ಸಂರಕ್ಷಣೆ, ಸಸಿ ಬೆಳೆಸುವ ಯೋಜನೆಯಡಿ ಭಾರಿ ಹಗರಣ ನಡೆದಿದೆ. ಸರ್ಕಾರ ತಕ್ಷಣ ಅರಣ್ಯ ಇಲಾಖೆ ವಿರುದ್ಧ ತನಿಖೆ ನಡೆಸಬೇಕು. ಸರ್ಕಾರಕ್ಕೆ ರೈತರ ಪರ ಕಾಳಜಿ ಇದ್ದರೆ ಅರಣ್ಯ ಇಲಾಖೆ ವಿರುದ್ಧ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುಂದರೇಶ್, ಸಂಚಾಲಕ ನೆಂಪೆ ದೇವರಾಜ್, ಹಸಿರುಮನೆ ತಾಲೂಕು ಅಧ್ಯಕ್ಷ ಜಾದುಗಾರ್ ನಿಶ್ಚಲ್ ಶೆಟ್ಟಿ, ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಹೊಸಕೇರಿ ಈಶ್ವರಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.